ಧಾರ್ಮಿಕ ಬಹುತ್ವಕ್ಕೆ ವಿರುದ್ಧವಾದ ರಾಜ್ಯ ಸರ್ಕಾರದ ‘ರಾಮಪೂಜೆ’ ಆದೇಶ!

Date:

Advertisements

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಜನವರಿ 22ರಂದು ರಾಜ್ಯದ ಎಲ್ಲಾ ಮುಜರಾಯಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲು ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ಆದೇಶ ನೀಡಿದೆ. ರಾಜ್ಯ ಕಾಂಗ್ರೆಸ್ ಸರ್ಕಾರದ ಈ ಆದೇಶ ರಾಜ್ಯದ ಧಾರ್ಮಿಕ ಬಹುತ್ವಕ್ಕೆ ಅಡ್ಡಿಯಾಗಿದೆ.

“ಅಯೋಧ್ಯೆಯ ರಾಮನ ಪ್ರತಿಷ್ಠಾಪನೆ ಸಮಯದಲ್ಲಿ ರಾಜ್ಯದ ಎಲ್ಲ ಮುಜರಾಯಿ ದೇವಸ್ಥಾನಗಳಲ್ಲಿ ಏಕಕಾಲದಲ್ಲಿ ಮಹಾಮಂಗಳಾರತಿ ನಡೆಯಲಿದೆ” ಎಂದು ಮುಜರಾಯಿ ಇಲಾಖೆ ಹೇಳಿದೆ. ಇದು ಕಾಂಗ್ರೆಸ್ ನ ಚುನಾವಣಾ ಘೋಷಣೆಯಾದ “ಸರ್ವ ಜನಾಂಗದ ಶಾಂತಿಯ ತೋಟ” ಪರಿಕಲ್ಪನೆಗೆ ವಿರುದ್ಧವಾಗಿದೆ. ನೂರಾರು ಜನಾಂಗಗಳ ನೂರಾರು ಆರಾಧನಾ ಪದ್ಧತಿಗಳು ಇರುವಾಗ ಒಬ್ಬ ದೇವನಿಗೆ ಏಕಕಾಲದಲ್ಲಿ ಎಲ್ಲಾ ಮುಜರಾಯಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಬೇಕು ಎಂದು ಹೇಳುವುದು ಎಷ್ಟು ಸರಿ?

order 1
ಜ.6ರಂದು ಮುಜರಾಯಿ ಇಲಾಖೆ ಹೊರಡಿಸಿರುವ ಆದೇಶ ಪ್ರತಿ

ರಾಮನ ಆರಾಧನೆ ಎನ್ನುವುದು ವೈಷ್ಣವ ಆರಾಧನಾ ಪದ್ಧತಿಯಾಗಿದೆ. ಮುಜರಾಯಿ ಇಲಾಖೆಗೆ ಒಳಪಟ್ಟ ಶೈವ ದೇವಸ್ಥಾನಗಳಲ್ಲಿ ರಾಮ ಪ್ರತಿಷ್ಟಾಪನೆಗಾಗಿ ಯಾಕೆ ವಿಶೇಷ ಪೂಜೆ ಮಾಡಬೇಕು ಎಂಬ ಪ್ರಶ್ನೆ ಎದ್ದಿದೆ. ರಾಜ್ಯದ ಹಲವು ಮುಜರಾಯಿ ದೇವಸ್ಥಾನಗಳಲ್ಲಿ ವೈಷ್ಣವ ಪೂಜಾ ಪದ್ದತಿಯನ್ನು ಅನುಸರಿಸಬೇಕೋ? ಶೈವ ಪೂಜಾ ಪದ್ದತಿಯನ್ನು ಅನುಸರಿಸಬೇಕೋ ಎಂಬ ವಿವಾದವೇ ಇದೆ. ಹಾಗಿರುವಾಗ ವೈಷ್ಣವ ದೇವತಾರಾಧನೆಯಾಗಿರುವ ಶ್ರೀರಾಮನ ನಿಮಿತ್ತ ಶೈವ ಮತ್ತು ಶೂದ್ರ ದೇವಸ್ಥಾನ/ದೈವಸ್ಥಾನಗಳಲ್ಲಿ ಪೂಜೆ ಮಾಡಲೇಬೇಕು ಎಂದು ಆದೇಶಿಸಿರುವುದು ಹಲವು ದೇವಸ್ಥಾನಗಳ ಸಂಪ್ರದಾಯಕ್ಕೆ ವಿರುದ್ದವಾಗಿದೆ.

Advertisements

ರಾಜ್ಯದ ಅತೀ ದೊಡ್ಡ ಮುಜರಾಯಿ ದೇವಸ್ಥಾನ ಕುಕ್ಕೆ ಸುಬ್ರಹ್ಮಣ್ಯ! ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ಶೈವಾಂಶ (ಶಿವಪರಂಪರೆ) ದೇಗುಲವಾಗಿದ್ದರೂ ಅರ್ಚಕರು ಅಂತರ್ಯಾಮಿ ಪೂಜೆ ಮೂಲಕ ವಿಷ್ಣುವನ್ನ ಆರಾಧನೆ ಮಾಡುತ್ತಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಿತರಕ್ಷಣಾ ವೇದಿಕೆ 2021 ಮಾರ್ಚ್ 21 ರಂದು ಬಹಿರಂಗವಾಗಿ ಪತ್ರಿಕಾಗೋಷ್ಡಿ ನಡೆಸಿ ಆರೋಪಿಸಿತ್ತು. ಈ ರೀತಿಯ ವಿವಾದ ಈಗಲೂ ಜಾರಿಯಲ್ಲಿರುವಾಗ ವೈಷ್ಣವ ರಾಮನ ಪ್ರತಿಷ್ಠಾಪನೆ ನಿಮಿತ್ತ ಕುಕ್ಕೆಯಲ್ಲಿ ಪೂಜೆ ಮಾಡಿ ಎಂದು ಹೇಳುವುದು ಸರಿಯಲ್ಲ.

ಈಗಾಗಲೇ ಶಿವನ ದೇವಸ್ಥಾನದಲ್ಲಿ ವಿಷ್ಣು ಆರಾಧಕರು ಸೇರಿಕೊಂಡಿದ್ದಾರೆ ಎಂಬ ವಿವಾದ ಜೀವಂತವಾಗಿದೆ. ಉದಾಹರಣೆಗೆ 1969ರಲ್ಲಿ ಸಂಶೋಧಕ ಡಾ ಮ ಸು ಅಚ್ಯುತ ಶರ್ಮರು ಬರೆದಿರುವ ಉಡುಪಿ ಕ್ಷೇತ್ರದ ಚಾರಿತ್ರಿಕ ಹಿನ್ನಲೆ ಪುಸ್ತಕದ ಮದನಂತೇಶ್ವರ ಅಧ್ಯಾಯದಲ್ಲಿ ಹೀಗೆ ಬರೆಯುತ್ತಾರೆ…

“ಉಡುಪಿಗೆ ಮಾಧ್ವಬ್ರಾಹ್ಮಣರು ಪ್ರವೇಶಿಸುವ ಮುಂಚೆ ಅನಂತೇಶ್ವರ ದೇಗುಲವು ಸ್ಥಾನಿಕ ಶಿವಬ್ರಾಹ್ಮಣರ ವಶದಲ್ಲಿತ್ತು. ಮಾಧ್ವ ಬ್ರಾಹ್ಮಣರು ಸ್ಥಳೀಯ ಬಂಟರ ಸಹಾಯ ಪಡೆದು ಸ್ಥಾನಿಕ ಶಿವ ಬ್ರಾಹ್ಮಣರನ್ನು ಓಡಿಸಿ ಅನಂತೇಶ್ವರ ದೇಗುಲವನ್ನು ವಶಪಡಿಸಿಕೊಂಡು ಅನಂತಾಸನ ದೇಗುಲ ಎಂದು ಕರೆದರು. ಆ ಬಳಿಕ ಬೇಕೆಂದೇ ಅನಂತೇಶ್ವರ ಶಿವಲಿಂಗಕ್ಕೆ ಹಾನಿ ಮಾಡಿ ಅದು ಕಾಣದಂತೆ ತಾಮ್ರದ ತಗಡೊಂದನ್ನು ಸುತ್ತವರೆಸಿ ಮುಚ್ಚಿಟ್ಟಿದ್ದಾರೆ. ಈ ಶಿವನ ಆಲಯದಲ್ಲಿ ಈಗ ಈಶ್ವರನಿಗೆ  ಪ್ರಿಯವಾದ ಬಿಲ್ವಪತ್ರೆ ಮತ್ತು ವಿಭೂತಿಯ ಉಪಯೋಗವೂ ಮಾಡದೇ ವಿಷ್ಣು ಆರಾಧನಾ ಕ್ರಮವಾದ ತುಳಸೀ ಗಂಧವನ್ನು ಕೊಡುತ್ತಿದ್ದಾರೆ” ಎಂದು ಬರೆದಿದ್ದಾರೆ.

ಇದು ಕೇವಲ ಉಡುಪಿಗೆ ಸೀಮಿತವಲ್ಲ‌. ಈಗಲೂ ಹಲವೆಡೆ ಮಾಧ್ವ ಬ್ರಾಹ್ಮಣರು ಪೂಜಿಸುವ ಶಿವ ದೇವಸ್ಥಾನದಲ್ಲಿ ವಿಭೂತಿ ಕೊಡದೇ ಗಂಧ ಕೊಡುವ ಬಗ್ಗೆ ಆಕ್ಷೇಪ ಇದೆ. ಹಾಗಿರುವಾಗ ಶಿವನ ದೇವಸ್ಥಾನದಲ್ಲಿ ರಾಮನಿಗಾಗಿ ಪೂಜೆ ಮಾಡುವುದು ಎಷ್ಟು ಸರಿ ?

ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಹತ್ತಾರು ಭೂತಾರಾಧನಾ ದೈವಸ್ಥಾನಗಳಿವೆ.‌ ಭೂತಾರಾಧನೆಗೆ ಅದರದ್ದೇ ಆದ ದಲಿತ/ಶೂದ್ರ ಆರಾಧನಾ ಪದ್ದತಿಯಿದೆ. ವೈದಿಕ ಆರಾಧನಾ ಪದ್ದತಿಗಳನ್ನು ಭೂತಾರಾಧನೆಯಲ್ಲಿ ಅಳವಡಿಸಿಕೊಳ್ಳುವಂತಿಲ್ಲ. ಮಹಾಮಂಗಳಾರತಿ ಎಂಬ ಪೂಜಾ ಪದ್ದತಿಯೇ ದೈವಾರಾಧನೆಯಲ್ಲಿ ಇಲ್ಲ. ಹಾಗಾಗಿ ಮುಜರಾಯಿ ವ್ಯಾಪ್ತಿಗೆ ಒಳಪಟ್ಟ ಭೂತಾರಾಧನಾ ಕೇಂದ್ರಗಳಲ್ಲಿ ಯಾವ ಕಾರಣಕ್ಕೂ ಮುಜರಾಯಿ ಇಲಾಖೆಯ ಈ ಆದೇಶ ಪಾಲಿಸಲು ಸಾಧ್ಯವಿಲ್ಲ.

ಇದನ್ನು ಓದಿದ್ದೀರಾ? ಜ. 22ರಂದು ರಾಜ್ಯದ ದೇವಾಲಯಗಳಲ್ಲಿ ವಿಶೇಷ ಪೂಜೆ: ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ

ಉತ್ತರ ಕರ್ನಾಟಕ ಭಾಗದಲ್ಲಿ ಮುಜರಾಯಿ ವ್ಯಾಪ್ತಿಗೆ ಬರುವ ಚೌಡೇಶ್ವರಿ ದೇವಸ್ಥಾನಗಳು, ಬೆಂಗಳೂರು ಸುತ್ತಮುತ್ತ ಅಣ್ಣಮ್ಮ ದೇವಸ್ಥಾನಗಳು ಇವೆ. ಶ್ರೀರಾಮನ ದೇಗುಲ ಉದ್ಘಾಟನೆಗೂ ಅಣ್ಣಮ್ಮ, ಚೌಡೇಶ್ವರಿಗೂ ಏನು ಸಂಬಂಧ?

ಹಾಗೆ ನೋಡಿದರೆ ಇಡೀ ಕರ್ನಾಟಕದಲ್ಲಿರುವುದು ಮಾರಮ್ಮ, ಅಣ್ಣಮ್ಮ, ಭೂತಾರಾಧನೆ, ಮುನಿ ಪೂಜೆಯಂತಹ ದೇವರ ಆರಾಧನೆಗಳು ಮಾತ್ರ. ಇವನ್ನು ಹೊರತುಪಡಿಸಿದರೆ ಕಿರುಸಂಸ್ಕೃತಿಗೆ ಹತ್ತಿರವಾಗಿರುವ ಶಿವನ ಆರಾಧನೆ ನಮ್ಮಲ್ಲಿದೆ. ಆದರೆ ಶಿವಾಲಯಗಳು ಮತ್ತು ಶೂದ್ರ/ದಲಿತರ ಆರಾಧನಾ ಕೇಂದ್ರಗಳಲ್ಲಿ ವೈಷ್ಣವರ ರಾಮನಿಗಾಗಿ ಆರಾಧನೆ, ಪೂಜಾದಿಗಳು ನಡೆಯಬೇಕು ಎನ್ನುವುದು ‘ಧಾರ್ಮಿಕ ಹೇರಿಕೆ’ಯಲ್ಲದೇ ಇನ್ನೇನು ಅಲ್ಲ.

ಸೂರಿಂಜೆ 1
ನವೀನ್‌ ಸೂರಿಂಜೆ
+ posts

ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ನವೀನ್‌ ಸೂರಿಂಜೆ
ನವೀನ್‌ ಸೂರಿಂಜೆ
ಪತ್ರಕರ್ತ, ಲೇಖಕ

1 COMMENT

  1. ಎಲ್ಲೋ ರಾಮಮಂದಿರ ಆಗುತ್ತಿದೆ. ಇಲ್ಲೇಕೆ ಗಂಟೆ ಅಳ್ಳಾಡಿಸಬೇಕು. ಅಲ್ಲಿ ಅಳ್ಳಾಡಿಸಿ ಉದ್ದಾರ ಮಾಡಿದ್ದೇ ಸಾಕು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X