ಕನ್ನಡಿಗ ತನ್ನಲ್ಲಿಇರುವ ಅಷ್ಟೂ ಶಕ್ತಿ ಮತ್ತು ಸಂಪತ್ತನ್ನು ಇಂಗ್ಲಿಷ್ ಅನ್ನು ವಶಪಡಿಸಿಕೊಳ್ಳಲು ಚೆಲ್ಲುತ್ತಿದ್ದಾನೆ. ಹೀಗಾಗಿಯೇ ಇಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಪ್ರವೇಶಾತಿ ಇಲ್ಲದೇ ಕಣ್ಣುಮುಚ್ಚುತ್ತಿವೆ. ಉಸಿರು ಹುಯ್ಯುತ್ತಿರುವ ಸರ್ಕಾರಿ ಶಾಲೆಗಳನ್ನು ಕೊಲ್ಲಲು ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನೂ ಆರಂಭಿಸಿದೆ.
“ಕನ್ನಡ ಮಾತನಾಡುವವರು ಯಾವಾಗಲೂ ಇರುತ್ತಾರೆ. ಅದನ್ನು ಕೇಳಿಸಿಕೊಳ್ಳುವವರು ಇರುವುದಿಲ್ಲ. ಮುದುಕರ ಭಾಷೆಯಾಗಷ್ಟೇ ಉಳಿಯುವ ಅಪಾಯವಿದೆ”. ಇತ್ತೀಚೆಗೆ ಬುಕ್‌ಬ್ರಹ್ಮ ಸಾಹಿತ್ಯ ಉತ್ಸವದ ‘ದಕ್ಷಿಣ ಭಾರತದ ಭಾಷೆಗಳ ಉಳಿವಿನ ಪ್ರಶ್ನೆ’ ಗೋಷ್ಠಿಯಲ್ಲಿ ಕವಯತ್ರಿ ಪ್ರತಿಭಾ ನಂದಕುಮಾರ್, ಡಿಜಿಟಲ್ ಜಗತ್ತಿಗೆ ಪ್ರವೇಶ ಪಡೆದ ಯಾವ ಭಾಷೆಗೂ ಅಳಿವಿನ ಭಯವಿಲ್ಲ, ಕನ್ನಡಕ್ಕೂ ಇಲ್ಲ ಎಂದಾಗ ವಿದ್ವಾಂಸ, ಪ್ರಸಿದ್ಧ ಅನುವಾದಕ ಪ್ರೊ ಓ ಎಲ್ ನಾಗಭೂಷಣಸ್ವಾಮಿ ಅವರು ಪ್ರತಿಕ್ರಿಯಿಸಿದ ಬಗೆ ಇದು.
“ಮೇಲು ವರ್ಗಗಳು, ಪ್ರಬಲ ಜಾತಿಗಳು ಮತ್ತು ಮಧ್ಯಮ ವರ್ಗವು ಇಂಗ್ಲಿಷ್ ಅನ್ನು ಅಧಿಕಾರದ ಭಾಷೆ ಎಂದು ಬಿಂಬಿಸಿವೆ. ಕನ್ನಡ ಮಾತನಾಡಿದರೆ ದಂಡ ಹಾಕುವ ಶಾಲೆಗಳಿವೆ. ನನ್ನ ಮೊಮ್ಮಗನಿಗೆ ಗುರುವಾರ ಮತ್ತು ಹದಿನೇಳು ಎಂದರೆ ಅರ್ಥವಾಗುವುದಿಲ್ಲ. ಅವನಿಗೆ ಥರ್ಸ್‌ಡೇ ಮತ್ತು ಸವೆಂಟೀನ್ ಎಂದೇ ಹೇಳಬೇಕು. ಹೀಗೆ ಹೊಸ ತಲೆಮಾರನ್ನು ಕನ್ನಡದಿಂದ ದೂರ ಮಾಡುತ್ತಿದ್ದೇವೆ. ನಮ್ಮೆದುರು ಇರುವ ಅಪಾಯವಿದು’ಎಂದು ಅವರು ಕಳವಳ ವ್ಯಕ್ತಪಡಿಸುತ್ತಾರೆ.
ಇದನ್ನು ಓದಿದಾಗ ನನಗೆ ಕುವೆಂಪು ಅವರು1935ರಲ್ಲೆ ಕನ್ನಡಿಗರ ಅಭಿಮಾನ ಶೂನ್ಯತೆಯನ್ನು ಕಂಡು ಕನಲಿ ಬರೆದ ಪದ್ಯ ನೆನಪಾಯಿತು. ‘ಸಾಯುತಿದೆ ನಿಮ್ಮನುಡಿ, ಓ ಕನ್ನಡದ ಕಂದರಿರ!’ ಎಂಬ ಶೀರ್ಷಿಕೆಯ ಈ ಕವಿತೆಯ ಮೊದಲ ಭಾಗವೇ ನಮ್ಮ ಪರಿಸ್ಥಿತಿ ಯನ್ನು ಸಮಗ್ರವಾಗಿ ಹಿಡಿದಿಟ್ಟು ನಮ್ಮ ಮುಖಕ್ಕೆ ಹಿಡಿಯುತ್ತದೆ
“ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ,
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ರಾಜನುಡಿಯೆಂದೊಂದು, ರಾಷ್ಟ್ರನುಡಿಯೆಂದೊಂದು,
ದೇವನುಡಿಯೊಂದೊಂದು ಹತ್ತಿ ಜಗ್ಗಿ
ನಿರಿನಿಟಿಲು ನಿಟಿಲೆಂದು ಮುದಿಮೂಳೆ ಮುರಿಯುತಿದೆ,
ಕನ್ನಡಮ್ಮನ ಬೆನ್ನು ಬಳುಕಿ ಬಗ್ಗಿ!
ಕೂಗಲು ಕೂಡ ಬಲವಿಲ್ಲ: ಮಕ್ಕಳೇ
ಬಾಯ್ಮುಚ್ಚಿ ಹಿಡಿದಿಹರು ಕೆಲವರು ನುಗ್ಗಿ!”
ಕುವೆಂಪು, ಈ ಕವಿತೆ ಬರೆದು ತೊಂಬತ್ತು ವರ್ಷವಾಗುತ್ತಿದೆ. ಈ ತೊಂಬತ್ತು ವರ್ಷಗಳಲ್ಲಿ ಕನ್ನಡದ ಪರಿಸ್ಥಿತಿ ಎಷ್ಟು ಕೆಟ್ಟಿದೆ, ಪರಿಸ್ಥಿತಿ ಎಷ್ಟು ಚಿಂತಾಜನಕವಾಗಿದೆಯೆಂದರೆ, ಕನ್ನಡಿಗ ಇದರ ಅರಿವಿರದ ಕಲ್ಲಿನಂತಾಗಿಬಿಟ್ಟಿದ್ದಾನೆ. ಒಬ್ಬ ಸರಾಸರಿ ಕನ್ನಡಿಗನಿಗೆ ತನಗೇನಾಗಿದೆ ಎನ್ನುವುದೆ ಗೊತ್ತಾಗದಷ್ಟು ಕನ್ನಡಿಗನ ಮಾನಸಿಕ ಪರಿಸ್ಥಿತಿ ರೋಗಗ್ರಸ್ತವಾಗಿದೆ. ಇದು ಕನ್ನಡಿಗರೊಳಗಿನ ಕನ್ನಡ ವಿರೋಧಿ ರೋಗ ಸೀರಿಯಸ್ ಹಂತ ತಲುಪಿರುವ ಲಕ್ಷಣ. ಪ್ರೊ ಓ ಎಲ್ ನಾಗಭೂಷಣ ಸ್ವಾಮಿ ಅವರಂತಹ ಕೆಲವೇ ಕೆಲವು ಸೂಕ್ಷ್ಮಜ್ಞ ಸಂವೇದನಾಶೀಲ ಕನ್ನಡಾಭಿಮಾನಿ ಬುದ್ಧಿಜೀವಿಗಳಿಗೆ ಮಾತ್ರ ಕನ್ನಡ ನಾಶದ ಅಂದಾಜು ಹತ್ತುತ್ತದೆ ಎಂದು ಕಾಣುತ್ತದೆ.

ಬೆಂಗಳೂರಿನ ಗೆಳೆಯರೊಬ್ಬರು ಓ ಎಲ್ ನಾಗಭೂಷಣ ಸ್ವಾಮಿಯವರ ಮಾತಿಗೆ ಪ್ರತಿಕ್ರಿಯಿಸುತ್ತ “ನಾನು ಅಚ್ಚುಕಟ್ಟಾಗಿ ಕನ್ನಡ ಮಾತಾಡ್ತೀನಿ, ಕನ್ನಡಕ್ಕೇನಾಗಿದೆ? ಎಂದು ಕಟುವಾಗಿ ಟೀಕಿಸುತ್ತ, ಕನ್ನಡ ಸಾಯುತ್ತಿದೆ ಎನ್ನುವ ಸಾಹಿತಿಗಳನ್ನು”ಮೂರು ಕಾಸಿನ ಸಾಹಿತಿಗಳು” ಎಂದು ಜರಿದರು.
ಕನ್ನಡ ನಾಡಿನಲ್ಲಿ ಕನ್ನಡತ್ವದ, ಕನ್ನಡ ಪ್ರಜ್ಞೆಯ ಬೀಜಗಳನ್ನು ಬಿತ್ತಿದ ಕುವೆಂಪು ಅವರಂತಹ ಮೇರು ಸಾಂಸ್ಕೃತಿಕ ಚೇತನವನ್ನೂ ಎಗ್ಗಿಲ್ಲದೆ ಟೀಕಿಸುವ ಕನ್ನಡಿಗ ಜನ್ಮತಳೆದಿರುವ ಕೆಟ್ಟ ಕಾಲ ಇದು. ಕನ್ನಡಿಗ ತನಗಾಗಿರುವ ಹಾನಿಯನ್ನೂ ಕಂಡುಕೊಳ್ಳದಷ್ಟು ಮಾನಸಿಕವಾಗಿ ವಿಕಲನಾಗಿರುವ, ಕನ್ನಡದ ಸಾಂಸ್ಕೃತಿಕ ನಾಯಕ ಚೇತನಗಳ ಬೆಲೆಯರಿಯದೇ ನಿಂದಿಸುವ ಬೌದ್ಧಿಕ, ಭಾವನಾತ್ಮಕ ವಿಕಲಾಂಗನಾಗಿಬಿಟ್ಟಿದ್ದಾನೆ.
”ಇರುವಲ್ಪ ದ್ರವ್ಯವನು ಇರುವಲ್ಪ ಶಕ್ತಿಯನು ಪರ ಬಾಷೆ ಮೋಹಕ್ಕೆ ಚೆಲ್ಲಬೇಡಿ” ಎಂಬುದು ಈ ಕವಿತೆಯಲ್ಲಿ ಬರುವ ಮತ್ತೊಂದು ಮಾರ್ಮಿಕವಾದ ಸಾಲು. ಹತ್ತಿರ ಹತ್ತಿರ ಶತಮಾನದಷ್ಟು ದೀರ್ಘಾವಧಿಯ ನಂತರವೂ ಈ ಸಾಲುಗಳ ಕಿಮ್ಮತ್ತು ಕಮ್ಮಿಯಾಗಿಲ್ಲ. ಅಥವಾ ಈ ಬುದ್ಧಿವಾದ ಅಪ್ರಸ್ತುತವೆನ್ನುವಷ್ಟರ ಮಟ್ಟಿಗೆ ಕನ್ನಡಿಗ ಕನ್ನಡವನ್ನು ತನ್ನ ಸಮಸ್ತ ಲೌಕಿಕ ಪಾರಲೌಕಿಕ ಏಳ್ಗೆಗೆ ಬಳಸಿಕೊಂಡಿದ್ದಾನೆ ಎನ್ನುವ ಪರಿಸ್ಥಿತಿ ಇಲ್ಲಿ ಸಾಧ್ಯವಾಗಿಲ್ಲ.
ಇವತ್ತೂ ಕನ್ನಡಿಗ ತನ್ನಲ್ಲಿಇರುವಷ್ಟೂ ಶಕ್ತಿ ಮತ್ತು ಸಂಪತ್ತನ್ನು ಇಂಗ್ಲಿಷ್ ಅನ್ನು ವಶಪಡಿಸಿಕೊಳ್ಳಲು ಚೆಲ್ಲುತ್ತಿದ್ದಾನೆ. ಹೀಗಾಗಿಯೇ ಇಲ್ಲಿ ಸರ್ಕಾರಿ ಕನ್ನಡ ಶಾಲೆಗಳು ಪ್ರವೇಶಾತಿ ಇಲ್ಲದೇ ಕಣ್ಣುಮುಚ್ಚುತ್ತಿವೆ. ಇನ್ನೂ ಉಸಿರು ಹುಯ್ಯುತ್ತಿರುವ ಸರ್ಕಾರಿ ಶಾಲೆಗಳನ್ನು ಕೊಲ್ಲಲು ಸರ್ಕಾರವೇ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ತರಗತಿಗಳನ್ನೂ ಆರಂಭಿಸಿದೆ. ಜೊತೆಗೆ ಕರ್ನಾಟಕ ಪಬ್ಲಿಕ್ ಶಾಲೆಗಳೆಂಬ ಇಂಗ್ಲಿಷ್ ಮಾಧ್ಯಮದ ಕಾಂಪ್ಲೆಕ್ಸ್‌ಗಳನ್ನು ನೂರಾರು ಸಂಖ್ಯೆಯಲ್ಲಿ ತೆರೆಯುತ್ತಿದೆ.
ಕುವೆಂಪು ಈ ಕವಿತೆಯಲ್ಲಿ ಕನ್ನಡವೆಂದರೇನೆಂದು ತಿಳಿ ಹೇಳುತ್ತಾರೆ. ಹಿಂದಿ, ಸಂಸ್ಕೃತ, ಇಂಗ್ಲಿಷ್ ಗಳು ಹೇಗೆ ಕನ್ನಡವನ್ನೇ ಬುಡಮೇಲು ಮಾಡಿಬಿಡುತ್ತವೆ ಎಂಬುದನ್ನು ಕಣ್ಣು ಕಾಣದ ಅಥವಾ ಕಾಣದವರಂತೆ ನಟಿಸುವ ಕನ್ನಡಿಗರೆದುರು ದೃಷ್ಟಾರರಂತೆ ಮಾರ್ಮಿಕವಾಗಿ ಬರೆಯುತ್ತಾರೆ. ಕನ್ನಡಿಗನೆದುರು ಪ್ರಾರ್ಥಿಸುತ್ತಾರೆ. ಕನ್ನಡತ್ವಕ್ಕೂ ವೀರತ್ವಕ್ಕೂ ಇರುವ ಸಂಬಂಧವನ್ನು ನೆನಪುಮಾಡಿ ನಮ್ಮೊಳಗೆ ಕನ್ನಡಾಭಿಮಾನವನ್ನು ಉದ್ದೀಪಿಸಲು ಹೆಣಗುತ್ತಾರೆ.
”ಮೊಲೆವಾಲಿನೊಡಗೂಡಿ ಬಂದ ನುಡಿ ತಾಯಿನುಡಿ;
ಕೊಲೆಗೈದರಮ್ಮನನೆ ಕೊಲಿಸಿದಂತೆ!
ತಾಯ್ ಮುತ್ತು ಕೊಡುವಂದು ನಿಮ್ಮ ಕೆನ್ನೆಯ ಮೇಲೆ
ಮೆರೆಯಿತು ಪೊಣಿಸಿದ ಮುತ್ತಿನಂತೆ:
ನಿಮ್ಮ ನಲ್ಲೆಯರೊಡನೆ ನಲ್ನುಡಿಯ ನುಡಿವಂದು
ಕನ್ನಡವೇ ಕಲಿಸುವುದು ತುಟಿಗೆ ಬಂದು:
ನಡುವಂದು ನಿಮ್ಮ ಮುದ್ದಿನ ಹಸುಳೆಗಳನೆತ್ತಿ
ಕನ್ನಡವೆ ನಿಮಗೀವುದೊಲವ ತಂದು.”
ಕನ್ನಡಕ್ಕೂ ಕನ್ನಡಿಗನಿಗೂ ಇರುವ ಮತ್ತು ಇರಬೇಕಾದ ಸಂಬಂಧವು, ದೇಹಾತ್ಮ ಸಂಬಂಧದಂತೆ ಅನನ್ಯವೆನ್ನುವಂತಹ ಬಗೆಯಲ್ಲಿ ವರ್ಣಿತವಾಗಿರುವ ಈ ಸಾಲುಗಳ ಅರ್ಥವನ್ನು ಬಿಡಿಸಿಹೇಳಬೇಕಾಗಿಲ್ಲ.
“ನಿಮ್ಮ ನುಡಿ ನಿಮ್ಮ ಗಂಡಸುತನಕೆ ಹಿರಿಸಾಕ್ಷಿ;
ಗೆಲವಿದ್ದರದಕೆ ನಿಮಗಿಹುದು ಶಕ್ತಿ.
ನುಡಿ ಮಡಿದರೆಲ್ಲರೂ ಮೂಕ ಜಂತುಗಳಂತೆ;
ಬಾಲವಲ್ಲಾಡಿಪುದೆ ಪರಮ ಭಕ್ತಿ!”
ಎಂದು ನಮ್ಮ ಹೇಡಿತನವನ್ನು ಇರಿದು ಎಚ್ಚರಿಸುವ ಈ ಕವಿತೆ ಕನ್ನಡಿಗನೊಳಗಿನ ಸ್ವಾಭಿಮಾನ ಶೂನ್ಯತೆ, ಸ್ವದ್ವೇಷ, ಮುಖೇಡಿತನ, ಹೇಡಿತನ ಎಲ್ಲವುಗಳನ್ನೂ ಎತ್ತಿ ತೋರುತ್ತ ಗುರುತು ಮಾಡುತ್ತ ಎರಗುತ್ತದೆ.
ಮತ್ತೊಂದು ಜನಾಂದೋಲನ ಇಲ್ಲಿ ಸಾಧ್ಯವಾಗುವ ಮಾತೇ ?
ಇದೇ ಸಂದರ್ಭದಲ್ಲಿ ಪ್ರೊ ಓ ಎಲ್ ನಾಗಭೂಷಣ ಸ್ವಾಮಿಯವರ ಮಾತುಗಳಿಗೆ ಸಹಮತದಿಂದ ಪ್ರತಿಕ್ರಿಯಿಸುತ್ತ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷರಾದ ಪ್ರೊ ಪುರುಷೋತ್ತಮ ಬಿಳಿಮಲೆಯವರು ಜನಾಂದೋಲನವನ್ನು ಪರಿಹಾರಾತ್ಮಕ ಅಗತ್ಯವಾಗಿ ಮನಗಾಣಿಸಲು ಯತ್ನಿಸುತ್ತಾರೆ.

ದುರದೃಷ್ಟವಶಾತ್, ಜನಾಂದೋಲನಕ್ಕೂ ಮುನ್ನ ಆಗಬೇಕಾದ್ದು ಕನ್ನಡಿಗರ ಒಳಗೆ ಕನ್ನಡದ ಬಗ್ಗೆ ಪ್ರೀತಿ ಬದ್ದತೆ ಅಭಿಮಾನ ಇವೆಲ್ಲ ಹುಟ್ಟಬೇಕಾಗುತ್ತದೆ. ಅತ್ಯಂತ ಮೂಲಭೂತ ಗುಣಗಳಾದ ಇವೇ ನಾಸ್ತಿಯಾಗಿರುವ ಸಂದರ್ಭದಲ್ಲಿ ಜನಾಂದೋಲನ ವನ್ನು ಕಲ್ಪಿಸಲೂ ಸಾಧ್ಯವಿಲ್ಲ ಅನ್ನಿಸುತ್ತದೆ
ಕನ್ನಡಿಗರು ಒಳಗೊಳಗೇ ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್‌ಗಳ ಅರಾದಕರಾಗಿದ್ದಾರೆ. ಅರ್ಥಾತ್ ಕನ್ನಡವನ್ನು ಪಕ್ಕಕ್ಕೆ ದೂಡಿ ಈ ಅನ್ಯ ಭಾಷೆಗಳು ತರಬಹುದಾದ ಆರ್ಥಿಕಾವಕಾಶಗಳಿಗೆ ಕೈಯೊಡ್ಡಿ ನಿಲ್ಲುವ ಜನರಾಗಿದ್ದಾರೆ. ಅರ್ಥಾತ್ ಅವಕಾಶವಾದಿಗಳೂ ಮಾನ ಮರ್ಯಾದೆ ಹರಾಜಿಗಿಟ್ಟಾದರೂ ”ಹೊಟ್ಟೆ- ಬಟ್ಟೆ ಪಾಡು ಕಣ್ರಪ್ಪ” ಎಂದು ಗೋಗರೆಯುವ ಕರುಣಾಜನಕ ಜನರಾಗಿದ್ದಾರೆ
ಇವರ ನಡುವೆ ಕಳಶಪ್ರಾಯರಂತೆ ಸಾಮಾಜಿಕ ನ್ಯಾಯ ‘ಮಾದರಿ’ ಯ ಬುದ್ದಿಜೀವಿಗಳೂ ಇಲ್ಲಿದ್ದಾರೆ. ‘ಇಂಗ್ಲಿಷ್ ದೇವಿ’ ಎನ್ನುವ ನುಡಿಗಟ್ಟನ್ನು ಠಂಕಿಸಿದ ಕುಖ್ಯಾತಿ ಅವರದ್ದು. ಇಂಗ್ಲಿಷ್ ದೇವಿಗೆ ಗುಡಿಕಟ್ಟಬೇಕು ಅಂತ ಹೊರಟವರು ಈ ಮಂದಿ. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಅನ್ನು ಒಂದು ಭಾಷೆಯಾಗಿ ಪ್ರಾಥಮಿಕ ಒಂದನೇ ತರಗತಿಯಿಂದಲೇ ಕಲಿಸಲು ಆಗ್ರಹಿಸಿ ಸಫಲಗೊಂಡ ಇವರು ಈಗ ಧೈರ್ಯವಾಗೇ ಇಂಗ್ಲಿಷ್ ಮೀಡಿಯಂ ವಾದಿಗಳಾಗಿದ್ದಾರೆ. ಈ ಬಗ್ಗೆ ಸಾರ್ವಜನಿಕವಾಗಿ ಮಾತಾಡುವಷ್ಟು ಭಂಡ ಧೈರ್ಯ ಅವರದು. ಜೊತೆ ಜೊತೆಗೆ ಇವರಿಗೆ ಗಾಂಧಿ, ಅಂಬೇಡ್ಕರ್, ಲೋಹಿಯಾ ಕೂಡಾ ನೆಂಚಿಕೊಳ್ಳಲು ಬೇಕು.
ಇವರೊಂದು ಕಡೆಯಾದರೆ, ಕರುನಾಡಿನಾದ್ಯಂತ ವ್ಯಾಪಿಸಿರುವ ಶಿಕ್ಷಣದ ಮಾರಾಟಗಾರರು ಬಹು ದೊಡ್ಡ ಕನ್ನಡ ದಮನವಾದಿ ಮಾಫಿಯಾ. ಅದು ಖಾಸಗಿ. ಕಾರ್ಪೊರೇಟ್ ಸ್ವರೂಪ ಪಡೆದು, ಶಿಕ್ಷಣ ಹಕ್ಕು ಕಾಯ್ದೆ (RTE)ಯಿಂದ ಕರ್ನಾಟಕದ ಕನ್ನಡಗರ ತೆರಿಗೆ ದುಡ್ಡು ತಿಂದು ಕೊಬ್ಬಿ ಸರ್ಕಾರಿ ಶಾಲೆಗಳು ತರಗೆಲೆಗಳಂತೆ ತೂರಿಹೋಗಲು ಕಾರಣವಾಗಿರುವ ಒಂದು ಕನ್ನಡ ಘಾತುಕ ಶಕ್ತಿ; ಗೋಕಾಕ್ ಚಳವಳಿಯ ಸಫಲತೆಯ ನಂತರ, ಪ್ರೌಢ ಶಾಲೆಗಳಲ್ಲಿ ಕನ್ನಡವು ಪ್ರಥಮ ಭಾಷೆಯಾಗಿ ನಿಲ್ಲದಂತೆ ನೋಡಿಕೊಂಡ ಸಂಸ್ಕೃತ ವಾದಿ ವೈದಿಕರ ಭೂಗತ ಶಕ್ತಿ ; ಪ್ರಾಥಮಿಕ ಶಿಕ್ಷಣವಾದರೂ ಕರ್ನಾಟಕದಾದ್ಯಂತ ಕನ್ನಡ ಮಾಧ್ಯಮದಲ್ಲಿರಲಿ ಎಂಬ ಕಾಯ್ದೆಗೆ ಮುಂದಾದ ಸರ್ಕಾರದ ನಿರ್ಧಾರ ಎರಡು ದಶಕಗಳ ಕಾಲ ಹೋರಾಡಿ ಹಿಮ್ಮೆಟ್ಟಸಿದ ಭಾಷಾ ಅಲ್ಪ ಸಂಖ್ಯಾತರ ಸುಸಂಘಟಿತ ಕನ್ನಡ ವಿರೋಧಿ ಶಕ್ತಿ. ಹೀಗೆ ಕರ್ನಾಟಕದ ಒಳಗೇ ಕನ್ನಡ ಕೊರಕ ಶಕ್ತಿಗಳು ಮನೆ ಮಾಡಿ ಕೂತು ಕನ್ನಡವನ್ನು ನಿರ್ನಾಮ ಮಾಡಲು ನಿರಂತರವಾಗಿ ಸಂಚು ಹೂಡಿವೆ.
ಇಂತಹ ಭೂಗತ, ಬಲಿಷ್ಠ ಪ್ರತಿರೋಧಿ ಶಕ್ತಿಗಳ ಕಾರ್ಯಾಚರಣೆಯ ಅಂದ ಆಯವರಿಯದೆ ತಾನೂ ಈ ಶಕ್ತಿಗಳ ಬಲಿಯಾಗುತ್ತ ತಮ್ಮ ನುಡಿಯನ್ನೂ ಬಲಿಹೊಡೆಯುತ್ತ ತಮ್ಮ ಅಸ್ತಿತ್ವವನ್ನೂ ಬಲಿಗೊಡುತ್ತ ಕಾಲಯಾಪನೆ ಮಾಡುವ ಕನ್ನಡಿಗರು ಬಹುದೊಡ್ಡ ಕನಿಕರಯೋಗ್ಯ ಸಮುದಾಯ.
ಇದರ ಜೊತೆಗೆ ತಮ್ಮ ನೀತಿಗಳು ಮತ್ತು ಕಾರ್ಯಕ್ರಮಗಳ ಮೂಲಕ ಈ ಕನ್ನಡ ಬಲಿಯ ಅಗ್ನಿಕಾರ್ಯಕ್ಕೆ ಎಣ್ಣೆ ಸುರಿಯುವ, ಕನ್ನಡಘಾತುಕವಾದ ದರಿದ್ರ ಸರ್ಕಾರಗಳದ್ದು ಮತ್ತೊಂದು ವಿನಾಶಕ ಅಧ್ಯಾಯ.
ಕರ್ನಾಟಕದ ಕನ್ನಡಾಭಿಮಾನಿಗಳು ಸಾಕ್ಷಿಯಾದಂತೆ, ‘ಕನ್ನಡ ರಾಮಯ್ಯ’ ಎಂದೇ ಖ್ಯಾತಿ ಪಡೆದ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಬರೋಬ್ಬರಿ ಒಂದು ವರ್ಷದ ತನಕ ವಿವಿಧ ಪ್ರಾಧಿಕಾರಗಳು ಅಕಾಡೆಮಿಗಳು ಮುಂತಾಗಿ ಕನ್ನಡ ಸಾಂಸ್ಕೃತಿಕ ಸಂಸ್ಥೆಗಳನ್ನು ನಿಷ್ಕ್ರಿಯವಾಗಿಸಿ ಇಟ್ಟಿತು. ಇನ್ನು, ಇವರು ಆರಂಭಿಸ ಹೊರಟಿರುವ ಇಂಗ್ಲಿಷ್ ಮಾಧ್ಯಮದ ಶಾಲೆಗಳು; ದ್ವಿಮಾಧ್ಯಮ ಶಾಲೆಗಳು. ನೂರಾರು ಸಂಖ್ಯೆಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಗಳು, ಇವೆಲ್ಲವೂ ಸಿದ್ಧರಾಮಯ್ಯನವರು ಕನ್ನಡ ರಾಮಯ್ಯನಲ್ಲ ಕನ್ನಡ ‘ವಿರಾಮಯ್ಯ’ ಎಂಬುದನ್ನು ಎತ್ತಿತೋರುತ್ತಿವೆ. ಪರಿಸ್ಥಿತಿ ಹೀಗಿರುವಾಗ ಇಲ್ಲಿ ಜನಾಂದೋಲನ ಹೇಗೆ ಸಾಧ್ಯ? ನಾವು ಗಂಭೀರವಾಗಿ ಚಿಂತಿಸಬೇಕಾಗಿದೆ.
ಮುಚ್ಚುತ್ತಿರುವ ಶಾಲೆಗಳು; ಕಾರಣ ಹಲವು
ಇತ್ತೀಚೆಗೆ ಸರ್ಕಾರಿ ಶಾಲೆಗಳಲ್ಲಿ ಹಾಜರಾತಿ ಕುಸಿದಿರುವ ಆಘಾತಕಾರಿ ಅಂಕಿ ಅಂಶಗಳನ್ನು ವಿಜಯ ಕರ್ನಾಟಕ ಪತ್ರಿಕೆ ಪ್ರಕಟಿಸಿದೆ. ಆ ವರದಿಯ ಪ್ರಕಾರ ರಾಜ್ಯದಲ್ಲಿರುವ 46ಸಾವಿರ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಸುಮಾರು 18ಸಾವಿರ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ 30 ಶಾಲೆಗಳಲ್ಲಿ 10ಕ್ಕೂ ಕಡಿಮೆ ಮಕ್ಕಳಿದ್ದಾರೆ.
ಕನ್ನಡವು ಮುದುಕರ ಭಾಷೆಯಾಗಿ ಉಳಿಯುವುದಕ್ಕೂ ನಮ್ಮ ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ಕ್ಷೀಣಿಸಿ ಸರ್ಕಾರಿ ಶಾಲೆಗಳು ನೊಣ ಹೊಡೆಯುವ ಹಂತ ತಲುಪಿರುವುದಕ್ಕೂ ನೇರಾ ನೇರ ಸಂಬಂಧವಿದೆ.
ಸರ್ಕಾರಿ ಶಾಲೆಗಳು ಕಣ್ಮುಚ್ಚಲಾರಂಭಿಸಿದ ವಿದ್ಯಮಾನಕ್ಕೆ ನಲವತ್ತೈದು ವರ್ಷಗಳ ಇತಿಹಾಸವೇ ಇದೆ. ಕನ್ನಡ ನಾಡಿನ ಅನ್ನ ತಿನ್ನುತ್ತಲೇ ಕನ್ನಡಿಗರ ಒಳಗೇ ಹುದುಗಿರುವ ಬಹು ಬಗೆಯ ಕನ್ನಡಘಾತುಕ ಶಕ್ತಿಗಳು ಅವ್ಯಾವುವೆಂಬುದನ್ನು ಈಗಾಗಲೇ ನಾನು ಪ್ರಸ್ತಾಪಿಸಿದ್ದೇನೆ.
1981-82ರ ಗೋಕಾಕ್ ಚಳವಳಿಯ ಹೋರಾಟದ ಫಲ ಕನ್ನಡಿಗರ ಕೈಹತ್ತದಂತೆ ನೋಡಿಕೊಂಡ ಶಕ್ತಿಗಳು ಅವು; 1994ರಲ್ಲಿ ಜಾರಿಯಾದ ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಮಾಧ್ಯಮವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟಿನ ತನಕ ಹೋರಾಡಿ ಕನ್ನಡದ ವಿರುದ್ದ ಗೆಲುವಿನ ಅಟ್ಟಹಾಸ ಮೆರೆದ ವಿಚ್ಚಿದ್ರಕಾರಿ ಶಕ್ತಿಗಳು ಅವು. ಉದ್ದಕ್ಕೂ ಕನ್ನಡವನ್ನು ಹಣಿದ ಈ ಶಕ್ತಿಗಳೇ ಕರ್ನಾಟಕದಲ್ಲಿ ಕಳೆದ ನಾಲ್ಕು ದಶಕಗಳುದ್ದಕ್ಕೂ ಸರ್ಕಾರಿ ಶಾಲೆಗಳು ಕ್ರಮಕ್ರಮೇಣ. ಪ್ರವೇಶಾತಿ ಕುಸಿದು ಮುಚ್ಚುವ ಹಂತ ಮುಟ್ಟಲು ಕಾರಣವಾಗಿದ್ದು. 2014ರಲ್ಲಿ ಬಂದ ಸುಪ್ರೀಂ ಕೋರ್ಟ್ ಸಂವಿಧಾನ ಪೀಠದ ತೀರ್ಪು ಕನ್ನಡದ ಶವ ಪೆಟ್ಟಿಗೆಗೆ ಹೊಡೆದ ಕೊನೆಯ ಮೊಳೆಯಾಯಿತು. ಅಂದಿನಿಂದ ಇವತ್ತಿನವರೆಗೆ ಕನ್ನಡ ಶಾಲೆಗಳು ಮತ್ತು ಕನ್ನಡ ಮಾಧ್ಯಮ ಶಿಕ್ಷಣ ಹಾಗೂ ಅಂತಿಮವಾಗಿ ಕನ್ನಡ ಭಾಷೆಯನ್ನೇ ನಿರ್ಣಾಯಕವಾಗಿ ನಾಶಮಾಡುವ ಮಟ್ಟಿಗೆ ಸಾವಿರಾರು ಸಂಖ್ಯೆಯ ಇಂಗ್ಲಿಷ್ ಮಾಧ್ಯಮ ಶಾಲೆಗಳು ಕರ್ನಾಟಕದಾದ್ಯಂತ ನಾಯಿಕೊಡೆಗಳಂತೆ ಎದ್ದು ನಿಲ್ಲುತ್ತ ಕನ್ನಡ ಶಾಲೆಗಳನ್ನು ಬಲಿ ಹೊಡೆಯುತ್ತಿವೆ.
2012ರಲ್ಲಿ ಕರ್ನಾಟಕದಲ್ಲಿ ಕಾಯ್ದೆಯಾಗಿ ಅನುಷ್ಠಾನಕ್ಕೆ ಶಿಕ್ಷಣ ಹಕ್ಕು ಕಾಯ್ದೆಯಂತೂ ಈ ಮಾರಣಹೋಮಕ್ಕೆ ತುಪ್ಪ ಸುರಿಯುತ್ತಿದೆ. ಪ್ರತಿ ವರ್ಷ ಈ ಕಾಯ್ದೆ ಐದನೇ ಒಂದರಷ್ಟು, ಹತ್ತಿರ ಹತ್ತಿರ 1.25 ಲಕ್ಷ ಸಂಖ್ಯೆಯ ಮಕ್ಕಳನ್ನು ಸರ್ಕಾರಿ ಶಾಲೆಗಳಿಂದ ಹೊತ್ತೊಯ್ದು ಸರ್ಕಾರಿ ಶಾಲೆಗಳ ಅಸ್ತಿತ್ವವನ್ನೇ ಅಲ್ಲಾಡಿಸಿತು.
ಈ ನಡುವೆ ಎರಡು ಬಾರಿ ರಾಜಕೀಯ ದುರಭಿಸಂದಿಯಿಂದ ಮುಖ್ಯಮಂತ್ರಿಯಾದ ಕುಮಾರಸ್ವಾಮಿಯವರು ಪ್ರಾಥಮಿಕ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಒಂದು ವಿಷಯವಾಗಿ ಕಲಿಸುವ ನಿರ್ಣಯವನ್ನು ಒಪ್ಪಿ ಜಾರಿಗೆ ತರುವ ಮೂಲಕ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮೀಡಿಯಂ ಶಿಕ್ಷಣ ಪದಾರ್ಪಣ ಮಾಡಲು ಕಾರಣರಾದರು.

ಮತ್ತೆ ಎರಡನೆಯ ಅವಧಿಗೆ ಅವರು ಮುಖ್ಯಮಂತ್ರಿಯಾದಾಗ ಪ್ರಾಯೋಗಿಕವಾಗಿ ಎಂದು ಒಂದು ಸಾವಿರ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮವನ್ನು ತುರುಕಿ, ಸರ್ಕಾರಿ ಶಾಲೆಗಳ ಮೇಲೆ ಬುಲ್ಡೋಜರ್ ಹೊಡೆದರು. ಈ ರೂಕ್ಷ, ಅನಾಗರಿಕ ಕ್ರಮದ ಮೂಲಕ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳನ್ನು ನಿರಂತರ ಹೋರಾಟದ ಮೂಲಕ ಕಟ್ಟಿನಿಲ್ಲಿಸಿದ ಕನ್ನಡದ ಸಾಂಸ್ಕೃತಿಕ ನಾಯಕರ ಹಂಬಲ ಮತ್ತು ಸ್ಫೂರ್ತಿಗಳ ಇತಿಹಾಸವನ್ನು ಕಲ್ಪನೆ ಕೂಡಾ ಮಾಡದೇ ನೆಲಸಮ ಮಾಡಿದರು.
ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ತುರುಕಲು ಇವರು ರಾಜ್ಯಾದ್ಯಂತ ತೆರೆದ ಕರ್ನಾಟಕ ಪಬ್ಲಿಕ್ ಶಾಲೆಗಳೂ ಸಹ ಸರ್ಕಾರಿ ಶಾಲೆಗಳಲ್ಲಿ ಜಾತಿ ಪದ್ದತಿಯಂತಹ ಮೇಲುಕೀಳಿನ ವ್ಯವಸ್ಥೆಯನ್ನು ತಂದು ಮಕ್ಕಳ ಮನಸ್ಸಿನಲ್ಲಿ ತಾರತಮ್ಯದ ನರಕವನ್ನು ಸೃಷ್ಟಿಸಿತು. ಹೀಗಾಗಿ ಸರ್ಕಾರಿ ಶಾಲೆಗಳು ಕ್ರಮೇಣ ಕಣ್ಣು ಮುಚ್ಚುತ್ತ ಕನ್ನಡವೂ ಕಣ್ಣುಮುಚ್ಚುತ್ತ ಸಾಗಿದವು. ಕನ್ನಡವು ಕೇವಲ ‘ಮುದುಕರ ಭಾಷೆ’ಯಾಗಲು ಇವೆಲ್ಲ ವಿದ್ಯಮಾನಗಳೂ ಕಾರಣವಾದವು.
ಕನ್ನಡದ ವಿದ್ಯಾರ್ಥಿಗಳನ್ನು ಉನ್ನತ ಶಿಕ್ಷಣದಿಂದ ನಿವಾರಿಸುವ ಬರ್ಬರ ನೀತಿ
ಇದೆಲ್ಲವನ್ನೂ ಬರೆಯುವಾಗ, ಗ್ರಾಮೀಣ ಪ್ರದೇಶದಿಂದ ಬಂದ ನಾನು, ದಿನವೂ ಹತ್ತಾರು ಮೈಲಿ ದೂರವನ್ನು ಕಾಲುನಡಿಗೆಯಲ್ಲಿ ನಡೆದು, ಅರೆಹೊಟ್ಟೆಯಲ್ಲಿ ಓದಿ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಹತ್ತನೆ ತರಗತಿಯನ್ನು ಫಸ್ಟ್ ಕ್ಲಾಸ್‌ನಲ್ಲಿ (65.6%) ಪಾಸಾದ ಸಂಭ್ರಮದ ದಿನಗಳು ನೆನಪಾಗುತ್ತವೆ. ದೊಡ್ಡ ಶಾಲೆಗೆ ಅತಿಹೆಚ್ಚು ಅಂಕ ತೆಗೆದ ನಾಲ್ವರಲ್ಲಿ ನಾನೊಬ್ಬನಾಗಿದ್ದಿದ್ದು ನೆನಪಾಗುತ್ತವೆ. ಬಹುಪಾಲು ಎಲ್ಲ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಸಾಮಾಜಿಕ ಹಿನ್ನೆಲೆ ಇದಕ್ಕಿಂತ ಭಿನ್ನವಾಗಿರುವುದಿಲ್ಲ.
ಕನ್ನಡ ಮಾಧ್ಯಮ ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ; ಸರ್ಕಾರಿ ಶಾಲೆಗಳಲ್ಲಿ ಹಾಗೂ ಖಾಸಗಿ ಕಾರ್ಪೊರೇಟ್ ಶಾಲೆಗಳಲ್ಲಿ ;ರಾಜ್ಯ, ಸಿಬಿಎಸ್‌ಇ, ಐಸಿಎಸ್ ಇ, ಸಿಜಿಎಸ್ಇ, ಮಾಂಟೆಸರಿ ತರಾವರಿ ಸಿಲಬಸ್ಸುಗಳು ಹೀಗೆ ನಮ್ಮ ಜಾತಿಗಳಂತೆ ಶ್ರೇಣಿ ವ್ಯವಸ್ಥೆಯಲ್ಲಿ ಹಂಚಿ ಹೋಗಿರುವ ನಮ್ಮ ಹುಡುಗರು ಸಹಜವಾಗಿಯೇ ತಾರತಮ್ಯವನ್ನು ತಮ್ಮ ರಕ್ತದಲ್ಲೇ ಪಡೆಯುತ್ತ ದೊಡ್ಡವರಾಗುತ್ತಾರೆ.
ಮಕ್ಕಳ ಫಲಿತಾಂಶ ಬಂದಾಗಲೂ ಅಷ್ಟೆ, ನಾವೆಲ್ಲ ಚಿಕ್ಕವರಾಗಿದ್ದಾಗಿನಿಂದ ಇಷ್ಟು ವರ್ಷ ಗಮನಿಸಿದಂತೆ ಶೇಕಡಾ 65ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಹತ್ತನೆ ತರಗತಿಯ ತನಕ ಓದುತ್ತಾರೆ. ಆದರೆ ಫಲಿತಾಂಶ ಘೋಷಣೆಯಾದಾಗ ಕನ್ನಡ ಮಾಧ್ಯಮದ ಹಾಗೂ ಇಂಗ್ಲಿಷ್ ಮಾಧ್ಯಮದ ಫಲಿತಾಂಶವನ್ನು ಪ್ರತ್ಯೇಕವಾಗಿ ಪ್ರಕಟಿಸುವುದೇ ಇಲ್ಲ.
“ವಿದ್ಯಾರ್ಥಿನಿಯರೇ ಮೇಲುಗೈ” “ಗ್ರಾಮಾಂತರ ಶಾಲೆಗಳ ಫಲಿತಾಂಶ ಇಳಿಮುಖ”… ಹೀಗೆ ಫಲಿತಾಂಶದ ದಿನದ ಪತ್ರಿಕಾ ವರದಿಗಳು ಇರುತ್ತವೆ. ಆದರೆ ಶೇಕಡಾ 65ರಷ್ಟಿರುವ ಬೃಹತ್ ಸಂಖ್ಯೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ಅಸ್ತಿತ್ವವನ್ನೇ ಮರೆಮಾಡುವ ವ್ಯವಸ್ಥಿತ ಹುನ್ನಾರ ಕಳೆದ ಅರ್ಧ ಶತಮಾನದುದ್ದಕ್ಕೂ ನಡೆಯುತ್ತಲೇ ಬಂದಿದೆ. ಅಷ್ಟೇ ಅಲ್ಲ, ನಂತರವೂ ಸಹ ಕನ್ನಡ ಮಾಧ್ಯಮದ ಶಿಕ್ಷಣವನ್ನು ಕೊನೆಗೊಳಿಸುವ ಸರ್ಕಾರಗಳು ಈ ಮಕ್ಕಳನ್ನು ಶಿಕ್ಷಣದ ಅವಕಾಶದಿಂದಲೇ ಶಾಶ್ವತವಾಗಿ ನಿವಾರಿಸಿ ಬಿಟ್ಟಿವೆ.
ಇಷ್ಟೆಲ್ಲ ಮೇಲು ಕೀಳು ಮತ್ತು ತಾರತಮ್ಯಪೂರ್ಣ ಇಕ್ಕಟ್ಟಿನ ಪರಿಸರದಲ್ಲಿ ಕನ್ನಡದ ಮಕ್ಕಳು ತಮ್ಮ ಶೈಕ್ಷಣಿಕ ಸಾಧನೆಯನ್ನು ತೋರಬೇಕಾಗಿದೆ. ಹತ್ತನೆ ತರಗತಿಯ ನಂತರ ನಿಜವಾದ ಸವಾಲಿನ ಶೈಕ್ಷಣಿಕ ಬದುಕು ಮಕ್ಕಳಿಗಾಗಿ ಕಾದಿರುತ್ತದೆ. ಅದು ಆಯ್ಕೆಗಳು ಎದುರಾಗುವ ಕಾಲ ವಿಜ್ಞಾನ, ವಾಣಿಜ್ಯ, ಕಲೆ, ವೃತ್ತಿ ತರಬೇತಿ ಹೀಗೆ ಆಯ್ಕೆಗಳು ಹಲವಾದರೆ ಶಿಕ್ಷಣ ಮಾಧ್ಯಮ ಮಾತ್ರ ಒಂದೇ, ಅದು ಇಂಗ್ಲಿಷ್ ಇದುವರೆಗೆ ಕನ್ನಡ ಮಾಧ್ಯಮದಲ್ಲಿ ಕಲಿತ ಬಡ ವಿದ್ಯಾರ್ಥಿ ಸಮುಚ್ಚಯ. (ಈ ಸಂಖ್ಯೆ 5ಲಕ್ಷದಷ್ಟಿದ್ದು ಶೇಕಡವಾರು ಪ್ರಮಾಣ 65ರಷ್ಟಿದೆ)
ಈ ಅನ್ಯಾಯದ ವಿರಾಟ್ ವ್ಯವಸ್ಥೆಯನ್ನು ಹೀಗೆ ಸಂಗ್ರಹಿಸಬಹುದು
- ಪ್ರಾಥಮಿಕ, ಮಾಧ್ಯಮಿಕ ಮತ್ತು ಪ್ರೌಢ ಹಂತಗಳಲ್ಲಿ ನಮ್ಮಲ್ಲಿ ಸರ್ಕಾರಿ ಶಾಲಾ ಶಿಕ್ಷಣ ಮತ್ತು ಖಾಸಗಿ ಹಾಗೂ ಕಾರ್ಪೊರೇಟ್ ಶಿಕ್ಷಣಗಳಿವೆ. ಸಹಜವಾಗಿಯೇ ಈ ಶ್ರೇಣಿ ವ್ಯವಸ್ತೆಯಲ್ಲಿ ಕನ್ನಡ ಸಮುದಾಯ ವಂಚಿತ ಸಾಮಾಜಿಕ ಸಮುದಾಯವಾಗಿದ್ದು ಅದನ್ನು ಕೀಳರಿಮೆಗೆ ತಳ್ಳಲಾಗಿದೆ. ಕನ್ನಡ ಎಂದರೆ ಕೀಳು ಎಂಬ ಅಘೋಷಿತವಾದ ಆದರೆ ಸಾಮಾಜಿಕವಾಗಿ ಸ್ವೀಕೃತವಾದ ಪೂರ್ವಾಭಿಪ್ರಾಯವೊಂದು ಇಲ್ಲಿ ಭದ್ರವಾಗಿ ತಳವೂರಿದೆ. ಕನ್ನಡ ಮಾಧ್ಯಮ ಮತ್ತು ಇಂಗ್ಳಿಷ್ ಮಾಧ್ಯಮದ ಶಿಕ್ಷಣ ಅಸ್ತಿತ್ವದಲ್ಲಿ ಇದೆ ಮತ್ತು ಕನ್ನಡ ಮಾಧ್ಯಮದ ಶಿಕ್ಷಣವನ್ನು ದ್ವಿತೀಯ ದರ್ಜೆಯ. ಶಿಕ್ಷಣ ವನ್ನಾಗಿ ಬಿಂಬಿಸಲಾಗಿದೆ.
ಪಠ್ಯಕ್ರಮದಲ್ಲಿ ರಾಜ್ಯ ಪಠ್ಯಕ್ರಮ, ಸಿಬಿಎಸ್, ಐಸಿಎಸ್, ಮಾಂಟೆಸರಿ, ಅಮೆರಿಕನ್ ಪಠ್ಯಗಳಿವೆ. ರಾಜ್ಯ ಪಠ್ಯದಲ್ಲಿ ಬಿಟ್ಟರೆ ಮಿಕ್ಕೆಲ್ಲ ಪಠ್ಯಕ್ರಮಗಳೂ ಸಹ ಇಂಗ್ಲಿಷ್ ಮಾಧ್ಯಮದವಾಗಿದ್ದು, ಕುಲೀನ ವರ್ಗಕ್ಕೆ ಸೀಮಿತವಾಗಿವೆ. ಕನ್ನಡ ಇಲ್ಲಿ ದೂಷಿತ ಸರಕಾಗಿದೆ.
4. sslc ನಂತರ ಕನ್ನಡ ಮಾಧ್ಯಮದ ಹುಡುಗರು ಓದದಂತೆ ಟೈಟಾನಿಕ್ ದುರಂತದ ಸಂದರ್ಭದಲ್ಲಿ ಕೆಳಗಿನ ಡೆಕ್ ಗಳಲ್ಲಿರುವ ಬಡವರು ಮೇಲೆ ಬರದಂತೆ ಬಂದ್ ಮಾಡಿದಂತೆ ಉನ್ನತ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ನೀಡದೇ ಅವರಿಗೆ ಶಿಕ್ಷಣವನ್ನು ಬಂದ್ ಮಾಡಲಾಗಿದೆ. ಕಳೆದ ಐದು ದಶಕಗಳಿಂದಲೂ ಪ್ರತಿ ವರ್ಷ ಐದು ಲಕ್ಷ ಮಕ್ಕಳನ್ನು sslc ನಂತರ ಕನ್ನಡ. ಮಾಧ್ಯಮದಲ್ಲಿ ಉನ್ನತ ಶಿಕ್ಷಣವನ್ನು ನಿಡದೇ ಶಿಕ್ಷಣದಿಂದಲೇ ನಿವಾರಿಸಲಾಗುತ್ತಿದೆ. ಜೊತೆಗೆ ತಿನ್ನುವುದಕ್ಕೆ ಗತಿಯಿಲ್ಲದವರ, ನೆಲೆಯಿಲ್ಲದವರ ನಡುವೆ ಶಿಕ್ಷಣವನ್ನು ಬಿಕರಿಗಿಡಲಾಗಿದೆ.
ನಮ್ಮ ಸಾಮಾಜಿಕ ವಾಸ್ತವವಾದ ಜಾತಿ ವ್ಯವಸ್ಥೆಯಂತೆಯೇ ಶೈಕ್ಷಣಿಕ ಪರಿಸ್ಥಿತಿ ಹೀಗೆ ತಾರತಮ್ಯಪೂರ್ಣ ಒಡಕಿನಿಂದ ಕೂಡಿರುವಾಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಯಾವ ರೀತಿಯಲ್ಲಿ ಮೇಲ್ಜಾತಿಗಳೆ ಹೊಡೆದುಕೊಂಡುಹೋಗುವ ವ್ಯವಸ್ಥೆಯನ್ನು ವ್ಯವಸ್ತಿತವಾಗಿ ಕಟ್ಟಿಕೊಂಡಿರುವಾಗ ನಾವು ಮಕ್ಕಳ ಮೇಲಿನ ಈ ಎಲ್ಲ ಹೊರೆಗಳನ್ನು ಇಳಿಸದೆ, ನಮ್ಮ ಮಕ್ಕಳ ಕಲಿಕೆಯ ಲೋಕಕ್ಕೆ ನಾವು ತಂದಿರುವ ತಾರತಮ್ಯವು ಕನ್ನಡವನ್ನು ಭವಿಷ್ಯದ ಪೀಳಿಗೆಗಳಿಂದ ಖಚಿತವಾಗಿ ಕಿತ್ತುಹಾಕಿದೆ.
ಕನ್ನಡದ ಉಳಿವಿನ ಮತ್ತು ಏಳ್ಗೆಯ ಹಾದಿ
ಮತ್ತೆ, ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ ದ್ರಾವಿಡ ಭಾಷಾಭಿವೃದ್ದಿಯ ವಿಚಾರ ಗೋಷ್ಠಿಯ ವಿಚಾರಗಳಿಗೆ ಹಿಂತಿರುಗುವುದಾದರೆ, ಇಲ್ಲಿ ಕನ್ನಡವನ್ನೂ ಒಳಗೊಂಡು ನಾಲ್ವರು ದ್ರಾವಿಡ ಭಾಷೆಗಳ ಚಿಂತಕರು ಆಡಿದ ಮಾತುಗಳನ್ನು ನಮ್ಮ ಸಮಕಾಲೀನ ಬಿಕ್ಕಟ್ಟನ್ನು ಅರ್ಥಮಾಡಿಕೊಳ್ಳಲು ಬಳಸಬಹುದಾಗಿದೆ ಅನ್ನಿಸುತ್ತದೆ.
ಈ ವಿಚಾರಗೋಷ್ಠಿಯಲ್ಲಿ, ತಮಿಳು ಕತೆಗಾರ ಪೆರುಮಾಳ್ ಮುರುಗನ್, ‘ನಾನು ಎಸ್‌ಬಿಐ ಗ್ರಾಹಕ. ಬ್ಯಾಂಕ್ ಸಂದೇಶಗಳೆಲ್ಲವೂ ಹಿಂದಿಯಲ್ಲಿ ಬರುತ್ತವೆ. ನಮ್ಮ ಬ್ಯಾಂಕ್‌ಗಳಲ್ಲಿ, ರೈಲು ನಿಲ್ದಾಣಗಳಲ್ಲಿ ಹಿಂದಿ ಮಂದಿ ಬಂದು ಕೂತಿದ್ದಾರೆ. ಹಿಂದಿಯನ್ನು ಹೇರುವ ಕೆಲಸ ವ್ಯವಸ್ಥಿತವಾಗಿ ಆಗುತ್ತಿದೆ’ ಎಂದು ಹೇಳಿದರೆ, “ಮಲಯಾಳಿಗಳ ಮೇಲೆ ಹಿಂದೆ ಹೇರಿಕೆ ಸಾಧ್ಯವೇ ಇಲ್ಲ. ರಾಜಕೀಯ, ಧರ್ಮ ಮತ್ತು ಮಾಧ್ಯಮದ ಭಾಷೆಯಾಗಿದ್ದರಷ್ಟೇ ಒಂದು ಭಾಷೆ ಪ್ರಬಲವಾಗುತ್ತದೆ. ಮಲಯಾಳಿಗಳಿಗೆ ಇವೆಲ್ಲವೂ ಮಲಯಾಳದಲ್ಲೇ ಇರಬೇಕು. ಹಿಂದಿ, ಇಂಗ್ಲಿಷ್ ಮತ್ತು ಸಂಸ್ಕೃತದಲ್ಲಿ ಇವನ್ನು ಮಾರಾಟ ಮಾಡಿದರೆ ಅದು ನಡೆಯುವುದಿಲ್ಲ. ದ್ರಾವಿಡ ಭಾಷೆಗಳೂ ಇದೇ ಹಾದಿಯಲ್ಲಿ ಸಾಗಿದರೆ ಅವುಗಳ ಉಳಿವಿದೆ’ಎಂದು ಮಲಯಾಳ ಕತೆಗಾರ ಪಾಲ್ ಜಕಾರಿಯಾ ಹೇಳುತ್ತಾರೆ.

“ತೆಲುಗು ಎಲ್ಲವನ್ನೂ ಒಳಗೊಳ್ಳುತ್ತದೆ. ಅದು ದ್ರಾವಿಡ ಭಾಷೆಗಳಿರಲಿ, ಹಿಂದಿಯಿರಲಿ, ಇಂಗ್ಲಿಷ್ ಇರಲಿ ತೆಲುಗು ಮಂದಿ ಅವೆಲ್ಲವನ್ನೂ ತಮ್ಮದಾಗಿಸಿಕೊಂಡುಬಿಡುತ್ತಾರೆ. ಹೀಗೆ ಭಾಷೆ ಬೆಳೆಯುತ್ತಾ ಹೋಗುವುದರಿಂದ ಅದಕ್ಕೆ ಅಳಿವಿನ ಭಯವಿಲ್ಲ. ನಾವಿಲ್ಲಿ ದ್ರಾವಿಡ ಸಾಹಿತ್ಯವನ್ನಷ್ಟೇ ಚರ್ಚಿಸುತ್ತಿದ್ದೇವೆ. ನಿಜಕ್ಕೂ ಆಗಬೇಕಿರುವ ಕೆಲಸ, ದ್ರಾವಿಡ ಭಾಷೆಗಳನ್ನು ವಿಜ್ಞಾನ ಮತ್ತು ತಂತ್ರಜ್ಞಾನದ ಭಾಷೆಯನ್ನಾಗಿಸುವುದು’ಎಂಬುದು ತೆಲುಗು ಕವಿ ವಡ್ರೇವು ಚಿನ್ನಭದ್ರುಡು ಪ್ರತಿಪಾದನೆ.
ಇದನ್ನೂ ಓದಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ | ಗೋಕಾಕ್ ಮಾದರಿ ಚಳವಳಿಗೆ ಸಜ್ಜಾಗುವ ಕಾಲ ಬಂದಿದೆ
ದಕ್ಷಿಣ ಭಾರತೀಯ ದ್ರಾವಿಡ ಭಾಷೆಗಳ ಈ ಲೇಖಕರು ಮತ್ತು ಚಿಂತಕರು ವ್ಯಕ್ತಪಡಿಸಿದ ಅಭಿಪ್ರಾಯಗಳ ಆಧಾರದಲ್ಲಿ ನಾವು ಕನ್ನಡದ ಏಳ್ಗೆ ಮತ್ತು ಉಳಿವಿನ ಕನಸುಗಳನ್ನು ಮತ್ತು ಸಾಧ್ಯತೆಗಳನ್ನು ಕಂಡುಕೊಳ್ಳಬೇಕಾಗಿದೆ. ಕನ್ನಡವನ್ನು ಪ್ರತಿನಿಧಿಸಿದ ಪ್ರೊ ಓ ಎಲ್ ನಾಗಭೂಷಣ ಸ್ವಾಮಿಯವರ ಮಾತುಗಳು ಹೊರಹಾಕುವಂತೆ ದುರದೃಷ್ಟವಶಾತ್ ಕನ್ನಡದ ಪರಿಸ್ಥಿತಿ ದಯನೀಯವಾಗಿದೆ. ಅವರ ಮಾತುಗಳ ದುಗುಡದ ಬೆನ್ನು ಹಿಡಿದು ಹೋದರೆ, ಮಲೆಯಾಳಿ, ತೆಲುಗು, ತಮಿಳು ಲೇಖಕರ ಮಾತುಗಳಲ್ಲಿರುವ ಧೀಮಂತಿಕೆಯಾಗಲಿ, ಕನಸುಣಿತನವಾಗಲಿ, ಪ್ರತಿರೋಧವಾಗಲಿ. ಸಾಧ್ಯತೆಗಳ ಮುನ್ನೋಟಗಳಾಗಲಿ ಕಾಣದೆ ಏಕಮುಖ ದುಗುಡ ಮನೆ ಮಾಡಿರುವುದು ನಮ್ಮ ಅನುಭವಕ್ಜೆ ಬರುತ್ತದೆ.
ಸಾರಾಂಶವೆಂದರೆ ಕನ್ನಡ ಹೋರಾಟಕ್ಕೆ ನಮ್ಮ ಸೋದರ ದ್ರಾವಿಡ ಭಾಷೆಗಳ ಲೇಖಕರ ಮಾತುಗಳಲ್ಲಿರುವ ಸ್ವಾಭಿಮಾನ, ಕನಸುಣಿತನ, ಆಗ್ರಹಾತ್ಮಕ ಕಸುವು ಬರಬೇಕಾಗಿದೆ.

ಕೆ ಪಿ ನಟರಾಜ್
ಲೇಖಕ