ಸ್ಪರ್ಧಾತ್ಮಕ ಪರೀಕ್ಷೆಯ ವ್ಯವಸ್ಥೆಯು ಬಹು ಸಂಕೀರ್ಣವಾಗಿದ್ದು, ಇದರ ʼಸ್ಪರ್ಧಾ ಸಂಸ್ಕೃತಿʼಯು ಇಡೀ ದೇಶವನ್ನೇ ಆವರಿಸಿಕೊಂಡಿದೆ. ಈ ಪರೀಕ್ಷೆಗಳು ಪ್ರೆಶರ್ ಕುಕ್ಕರಿನಂತೆ ವಿದ್ಯಾರ್ಥಿ ಮತ್ತು ಕುಟುಂಬದ ಮೇಲೆ ವಿಪರೀತ ಒತ್ತಡ ಹೇರುತ್ತಿವೆ.
ಬೆಳಗಾವಿ ಜಿಲ್ಲೆಯ ಒಂದು ದೊಡ್ಡ ಗ್ರಾಮ. ಇಲ್ಲಿನ ಮೂರು ಮಧ್ಯಮ ವರ್ಗದ ಕೃಷಿ ಕುಟುಂಬಗಳಿಗೆ ತಮ್ಮ ಮಕ್ಕಳನ್ನು ವೈದ್ಯರನ್ನಾಗಿಸುವ ಹಂಬಲ. ಇದರಲ್ಲಿ ಎರಡು ಮಕ್ಕಳು 12ನೇ ತರಗತಿಯಲ್ಲಿ ಉತ್ತಮ ಅಂಕದೊಂದಿಗೆ 22-23 ರಲ್ಲಿ ಪಾಸಾಗುತ್ತಾರೆ. ಯಾವುದೇ ಕೊಚಿಂಗ್ ತರಗತಿಗೆ ಹೋಗದೆ ನೀಟ್ (NEET)ಪರೀಕ್ಷೆ ಬರೆಯುತ್ತಾರೆ. ಆದರೆ ಯಶಸ್ಸು ಕಾಣುವುದಿಲ್ಲ. ಇನ್ನೊಂದು ಸಂಬಂಧಿ ಕುಟುಂಬದವರ ಮಗಳೂ ಸಹ 23-24ರಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗುತ್ತಾಳೆ. ಅಷ್ಟೇನೂ ಸಿರಿವಂತರಲ್ಲದ ಈ ಕುಟುಂಬಗಳು ಏನಾದರಾಗಲಿ ಎಂದು ತಮ್ಮ ಮೂವರು ಮಕ್ಕಳನ್ನು ನೀಟ್ ಕೋಂಚಿಂಗ್ ಸೆಂಟರ್ –ಧಾರವಾಡಕ್ಕೆ ಸೇರಿಸುತ್ತಾರೆ. ಹಾಸ್ಟೆಲ್ ಖರ್ಚು, ಫೀಸು ಎಲ್ಲಾ ಸೇರಿ ಮೂವರಿಗೂ ಸುಮಾರು 3.5 ಲಕ್ಷ ರೂ. ಹಣ ಖರ್ಚಾಗಿ, ಕುಟುಂಬಗಳ ಬಹುದಿನದ ಉಳಿತಾಯದ ಗಂಟು ಕರಗುತ್ತದೆ. ಆದರೆ ಈ ಮೂವರ ರ‍್ಯಾಂಕ್ ಕಡಿಮೆ ಬಂದ ಕಾರಣ ಯಾವ ವೈದ್ಯಕೀಯ ಕಾಲೇಜಿನಲ್ಲೂ ಸೀಟು ಸಿಗುವುದಿಲ್ಲ! ಈಗ ಈ ಕುಟುಂಬಗಳು ಖಿನ್ನತೆಯಲ್ಲಿ ಮುಳುಗಿವೆ!!
ಉನ್ನತ ಶಿಕ್ಷಣ ಪಡೆಯಲು ಅಥವಾ ಕೆಲಸಕ್ಕಾಗಿ ಪರೀಕ್ಷೆ ಎದುರಿಸಲಿರುವ ಯುವಕ ಯುವತಿಯರ ಸಾವಿರಾರು ಕುಟುಂಬಗಳ ಪರಿಸ್ಥಿತಿಯೂ ಹೆಚ್ಚು ಕಡಿಮೆ ಇದೇ ಆಗಿದೆ. ಸ್ಪರ್ಧಾತ್ಮಕ ಪರೀಕ್ಷೆಯ ವ್ಯವಸ್ಥೆಯು ಬಹು ಸಂಕೀರ್ಣವಾಗಿದ್ದು, ಇದರ ಸ್ಪರ್ಧಾ ಸಂಸ್ಕೃತಿಯು ಇಡೀ ದೇಶವನ್ನೇ ಆವರಿಸಿಕೊಂಡಿದೆ. ಈ ಪರೀಕ್ಷೆಗಳು ಪ್ರೆಶರ್ ಕುಕ್ಕರಿನಂತೆ ವಿದ್ಯಾರ್ಥಿ ಮತ್ತು ಕುಟುಂಬದ ಮೇಲೆ ವಿಪರೀತ ಒತ್ತಡ ಹೇರುತ್ತಿವೆ.
ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ದೇಶದಲ್ಲಿ ನಡೆಸಲಾಗುತ್ತಿದೆ. 12ರ ನಂತರ ಪದವಿ ಶಿಕ್ಷಣ ಪಡೆಯಲು ಸುಮಾರು 100ಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳಿವೆಯಂತೆ. ಅದರಲ್ಲಿ ಮುಖ್ಯವಾಗಿ ಕೇಳಿಬರುವ JEE, GATE, AIEEE, NEET, CET ಇವುಗಳು ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಪದವಿಗಳಿಗೆ ಪ್ರವೇಶ ಪಡೆಯಲು ತೇರ್ಗಡೆ ಆಗಬೇಕಿರುವ ಪರೀಕ್ಷೆಗಳು. ಉನ್ನತ ಶಿಕ್ಷಣ ಪಡೆಯಲು MAT, GATE, JIPMER, DU LLB ಇತ್ಯಾದಿಗಳಾದರೆ, ಉದ್ಯೋಗ ಹೊಂದಲು ಅನೇಕ ಪರೀಕ್ಷೆಗಳನ್ನು (UPSC, SSE, JEE ರೈಲ್ವೆ ಮತ್ತು ಬ್ಯಾಂಕಿಂಗ್ ಪರೀಕ್ಷೆ ಇತ್ಯಾದಿ) ತೆಗೆದುಕೊಳ್ಳಬೇಕಾಗುತ್ತದೆ. ಉನ್ನತ ಶಿಕ್ಷಣ ಪಡೆಯಲು ಅಥವಾ ಉದ್ಯೋಗ ಹೊಂದಲು ಬಯಸುವ ಯುವ ಜನಾಂಗವನ್ನು ಪರೀಕ್ಷೆಗಳಿಗೆ ತಯಾರಿಗೊಳಿಸಲು ದೇಶದುದ್ದಕ್ಕೂ ಕೋಚಿಂಗ್ ಕೇಂದ್ರಗಳು ಅಣಬೆಗಳಂತೆ ಹುಟ್ಟಿಕೊಂಡಿದ್ದು ಲಕ್ಷಾಂತರ ಜನರನ್ನು ತರಬೇತಿಗೊಳಿಸುತ್ತಿವೆ. ಈ ಎಲ್ಲಾ ಪರೀಕ್ಷೆಗಳನ್ನು ನಿರ್ವಹಿಸಲು ಮತ್ತು ನಡೆಸಲು ಸರ್ಕಾರವು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಯನ್ನು ಪ್ರಾರಂಭಿಸಿದೆ.
ಶಿಕ್ಷಣವು ಅತಿ ಕ್ರೂರವಾಗಿ ಸ್ಪರ್ಧಾತ್ಮಕವಾಗಿದೆ ಮತ್ತು ಕಠಿಣವಾಗಿದೆ ಎಂದು ಅನುಭವಿ ಅಭ್ಯರ್ಥಿಗಳು ಮತ್ತು ಶಿಕ್ಷಣ ತಜ್ಞರು ಹೇಳುತ್ತಾರೆ. ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IITs) 50 ಅರ್ಜಿದಾರರಲ್ಲಿ ಕೇವಲ ಒಬ್ಬರನ್ನು ಆಯ್ಕೆ ಮಾಡುತ್ತದೆ. ಅಂತೆಯೇ 2024 ರ ನೀಟ್ ಪರೀಕ್ಷೆಗೆ ಹಾಜರಾದ 23,33,297 ಅಭ್ಯರ್ಥಿಗಳಲ್ಲಿ 13,16,268 ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ. ಆದರೆ ಲಭ್ಯವಿರುವ ವೈದ್ಯಕೀಯ ಸೀಟುಗಳು ಕೇವಲ 108915 ಮಾತ್ರ. JEE 2024ರಲ್ಲಿ ಎರಡೂ ಸೆಷನ್ಸ್ ಸೇರಿ 14,15,110 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿರುತ್ತಾರೆ. ಪ್ರತಿ ವರ್ಷವೂ ಈ ಸಂಖ್ಯೆಗಳು ಹೆಚ್ಚುತ್ತಿದ್ದು, ಕೋಚಿಂಗ್ ಸೆಂಟರ್‌ಗಳ ಆದಾಯವೂ ಹೆಚ್ಚುತ್ತಿದೆ. ಈ ಸ್ಪರ್ಧಾ ಸಂಸ್ಕೃತಿಯ ಮೇಲೆ ತನ್ನ ಹಿಡಿತ ಸಾಧಿಸಲು ಹೆಣಗುತ್ತಿರುವ ಪೋಷಕ ಸಮುದಾಯದ ಹಂಬಲವನ್ನು ಕೋಚಿಂಗ್ ಅಥವಾ ಪರೀಕ್ಷಾ-ತಯಾರಿ ಉದ್ಯಮವು ತನ್ನ ಅನುಕೂಲಕ್ಕೆ ಚೆನ್ನಾಗಿಯೇ ಬಳಸಿಕೊಳ್ಳುತ್ತಿದೆ. ಭಾರತದಲ್ಲಿ ಖಾಸಗಿ ಕೋಚಿಂಗ್ ಸೆಂಟರ್ ಉದ್ಯಮದ ವಾರ್ಷಿಕ ಮಾರುಕಟ್ಟೆ ಆದಾಯವು 58,088 ಕೋಟಿ ಇದ್ದು, ಇದು 2028 ರ ವೇಳೆಗೆ 1,33,995 ಕೋಟಿಗೆ ಏರುವುದಾಗಿ ಅಂದಾಜಿಸಲಾಗಿದೆ ಎಂದು 19ನೇ ಡಿಸೆಂಬರ್ 2022ರ ದಿ ಪ್ರಿಂಟ್ ಪತ್ರಿಕೆಯು ಪ್ರಕಟಿಸಿದೆ.
“ಇಡೀ ಪರೀಕ್ಷಾ ಪರಿಸರ ವ್ಯವಸ್ಥೆಯು ಅಂಕಗಳ ಕಡೆಗೆ ವಿನ್ಯಾಸಿಸಲ್ಪಟ್ಟಿದ್ದು, ಅಲ್ಲಿ ಮೌಖಿಕ ಕಲಿಕೆಯ ರೋಗವಿದೆ” ಎನ್ನುತ್ತಾರೆ ಉನ್ನತ ಶಿಕ್ಷಣದ ಎಜುಕೇಷನಲ್ ಇನಿಶಿಯೇಟಿವ್ಸ್ ಕಾರ್ಯಕ್ರಮದ ಉಪಾಧ್ಯಕ್ಷರಾದ ಪ್ರಣವ್ ಕೊಠಾರಿಯವರು.
ಈ ಪರೀಕ್ಷೆಗಳಲ್ಲಿ ಸುಧಾರಣೆ ಬೇಕೆಂದು ಎಲ್ಲಾ ತಜ್ಞರು ಒಪ್ಪುತ್ತಾರಾದರೂ, “ಇದರ ಸುಧಾರಣೆಯ ಮೂಗುದಾರವು ಗಣ್ಯರು ಮತ್ತು ಖಾಸಗಿ ಸಂಸ್ಥೆಗಳ ಹಿಡಿತದಲ್ಲಿ ಇರುವುದರಿಂದ ಅದನ್ನು ಕಾರ್ಯರೂಪಕ್ಕೆ ತರಲಾಗುತ್ತಿಲ್ಲ” ಎನ್ನುತ್ತಾರೆ ಲೆವೆಲ್‍ಫೀಲ್ಡ್ ಶಾಲೆಯ ಸಂಸ್ಥಾಪಕರಾದ ಅರ್ಘ್ಯ ಬ್ಯಾನರ್ಜಿಯವರು.
“ಈ ಪರೀಕ್ಷಾ ವ್ಯವಸ್ಥೆಯು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸುತ್ತಿದೆಯೇ ಎಂಬುದು ಇನ್ನೂ ಹೆಚ್ಚು ಶೋಧನೆಗೆ ಒಳಪಡಬೇಕಾಗಿದೆ. ಗ್ರಾಮೀಣ ಪ್ರದೇಶದಿಂದ ಎಷ್ಟು ವಿದ್ಯಾರ್ಥಿಗಳು ಇಂತಹ ಸ್ಪರ್ಧಾ ಪರೀಕ್ಷೆಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂಬ ದತ್ತಾಂಶದ ಕೊರತೆ ಇದ್ದರೂ ಹೆಚ್ಚು ವಿದ್ಯಾರ್ಥಿಗಳು ನಗರ ಪ್ರದೇಶಗಳಿಂದ ನೋಂದಣಿಯಾಗುತ್ತಾರೆ ಎಂಬುದು ವಾಸ್ತವ. ಸುಮಾರು 10% ರಿಂದ 15% ಮಾತ್ರ ಗ್ರಾಮೀಣ ವಿದ್ಯಾರ್ಥಿಗಳು ಇಂತಹ ಪರೀಕ್ಷೆಗಳಲ್ಲಿ ಪಾಲ್ಗೊಳ್ಳಬಹುದು ಮತ್ತು ಅದರಲ್ಲಿ 2-3% ಮಕ್ಕಳಿಗೆ ಮಾತ್ರ ಸರ್ಕಾರಿ ಕಾಲೇಜಿಗೆ ಪ್ರವೇಶ ಸಿಗಬಹುದು” ಎನ್ನುತ್ತಾರೆ ಗ್ರಾಮೀಣ ಪ್ರದೇಶದ ಪೂರ್ವ ಪದವಿ ಕಾಲೇಜಿನ ಉಪನ್ಯಾಸಕರೊಬ್ಬರು.
ಇವರಲ್ಲಿಯೂ ಸಹ ಹೆಚ್ಚಿನವರು ಆರ್ಥಿಕವಾಗಿ ಸ್ವಲ್ಪ ಸ್ಥಿತಿವಂತರಿರಬಹುದು ಅಥವಾ ಮೀಸಲಾತಿಯೊಳಗೆ ಇರುವವರಾಗಿದ್ದಾರೆಂದು ಮತ್ತು ಕೂಲಿ ಮಾಡುವ ಅಥವಾ ಸಣ್ಣ ಹಾಗೂ ಅತಿ ಸಣ್ಣ ಹಿಡುವಳಿದಾರರ ಕುಟುಂಬಗಳ ಬೆರಳೆಣಿಕೆಯಷ್ಟು ಮಕ್ಕಳು ಮಾತ್ರ ಶಿಕ್ಷಕರ ಅಥವಾ ಯಾವುದೋ ಸ್ವಯಂ ಸೇವಾ ಸಂಸ್ಥೆಗಳ ವಿಶೇಷ ಬೆಂಬಲದಿಂದ ಈ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ ಎನ್ನುತ್ತಾರೆ ಇದೇ ಉಪನ್ಯಾಸಕರು.
ಮೂಲ ಸೌಲಭ್ಯಗಳು, ಕಂಪ್ಯೂಟರ್, ಇಂಟರ್ನೆಟ್ ಹಾಗೂ ವ್ಯವಸ್ಥಿತ ಪ್ರಯೋಗಾಲಯ ಮತ್ತು ಅವಶ್ಯಕ ಸಂಖ್ಯೆಯ ಶಿಕ್ಷಕರ ಕೊರತೆಯ ಶಿಕ್ಷಣ ವ್ಯವಸ್ಥೆಯಲ್ಲಿ ಸಾಧಾರಣ ಶಿಕ್ಷಣ ಪಡೆಯುವ ನಮ್ಮ ಗ್ರಾಮೀಣ ವಿದ್ಯಾರ್ಥಿಗಳನ್ನು ಈ ಪರೀಕ್ಷೆಗಳಿಗೆ ಒಡ್ಡುವುದು ಆಯುಧವಿಲ್ಲದೆ ಯುದ್ಧಕ್ಕೆ ಕಳಿಸಿದಂತಾಗಿದೆ. ಅಂಕಗಳೇ ಮುಖ್ಯವಾಗುವ ಈ ಸ್ಪರ್ಧಾ ಪರೀಕ್ಷೆಗಳಲ್ಲಿ ಕಿತ್ತಳೆ ಮತ್ತು ಸೇಬನ್ನು ತಕ್ಕಡಿಯ ಎರಡೂ ಕಡೆ ಇರಿಸಿ, ಎರಡೂ ಒಂದೇ ಪ್ರಮಾಣ ತೂಗಬೇಕೆಂಬ ಸರ್ಕಾರದ ಆಶಯವು ಬೇವನ್ನು ಬಿತ್ತಿ ಮಾವನ್ನು ಎದುರು ನೋಡಿದಂತಿದೆ. ಖಾಸಗಿ ಶಿಕ್ಷಣಕ್ಕೆ ಎಲ್ಲಾ ಸರ್ಕಾರಗಳು ತಮ್ಮ ಬೆಂಬಲ ನೀಡುತ್ತಲೇ ಬಂದಿದ್ದು, ಅದರಿಂದ ಸಾರ್ವಜನಿಕ ಶಿಕ್ಷಣ ಕ್ಷೇತ್ರದಲ್ಲಿ ಉಂಟಾಗಿರುವ ಅಸಮತೋಲನವನ್ನು ಸರಿಪಡಿಸಲು ಸಾಧ್ಯವೇ ಇಲ್ಲದಂತಾಗಿದೆ.
ಈ ಪರೀಕ್ಷೆಗಳನ್ನು ತಾರತಮ್ಯವಿಲ್ಲದಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನವಾಗಿ ನಡೆಸುವುದು ಸರಿ ಇರಬಹುದು. ಆದರೆ, ಗುಣಮಟ್ಟದ ಶಿಕ್ಷಣದ ಅವಕಾಶ ಮತ್ತು ಸಂಪನ್ಮೂಲಗಳಲ್ಲಿ ಇರುವ ವ್ಯವಸ್ಥಿತ ಅಸಮಾನತೆಗಳು ಅಂತರ್ಗತ ಪಕ್ಷಪಾತವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಹೊರಿಸಿದೆ. ಗ್ರಾಮೀಣ ಮತ್ತು ನಗರದ ವಿದ್ಯಾರ್ಥಿಗಳ ನಡುವಿನ ಪರೀಕ್ಷಾ ತಯಾರಿ ಅವಕಾಶಗಳ ಅಸಮಾನತೆಯ ಅಂತರವು ಅತಿ ಹೆಚ್ಚಿದೆ. ಈ ಅಂತರವನ್ನು ‘ಗ್ರಾಮೀಣ’ ಎಂಬುದಕ್ಕೆ ನೀಡುವ ಕೆಲವು ಗ್ರೆಸ್ ಅಂಕಗಳಿಂದ ತುಂಬಲಾಗುವುದಿಲ್ಲ.
ಭಾರತದಲ್ಲಿ ಶಿಕ್ಷಣವು ಮೂಲಭೂತ ಹಕ್ಕಾಗಿದ್ದು, 6-18 ವಯಸ್ಸಿನ ಪ್ರತಿ ಮಕ್ಕಳು ಉಚಿತ ಮತ್ತು ಕಡ್ಡಾಯ ಪ್ರಾಥಮಿಕ ಶಿಕ್ಷಣ ಪಡೆಯುವ ಹಕ್ಕನ್ನು ಹೊಂದಿದ್ದಾರೆ. ಎಲ್ಲಾ ಮಕ್ಕಳಿಗೂ ಶಿಕ್ಷಣವನ್ನು ಮೂಲಭೂತ ಹಕ್ಕು ಎಂದು ವಿಧಿ 21ಎ (Article 21A)ರಲ್ಲಿ ಸಂವಿಧಾನವು ಖಾತ್ರಿಗೊಳಿಸಿದೆ. ಆದ್ದರಿಂದ ಉಚಿತ ಹಾಗೂ ಗುಣಮಟ್ಟದ ಶಿಕ್ಷಣವನ್ನು ಎಲ್ಲಾ ಮಕ್ಕಳಿಗೂ ಸಮಾನವಾಗಿ ನೀಡುವ ಜವಾಬ್ದಾರಿ ಸರ್ಕಾರದ್ದಾಗಿದೆ.
20-21 ಸಾಲಿನ ವರದಿಯಲ್ಲಿ ಶಿಕ್ಷಣ ಮಂತ್ರಾಲಯವು ಮಕ್ಕಳ ಶಾಲಾ ನೋಂದಣಿಯಲ್ಲಿ ಪ್ರಗತಿಯನ್ನು ಹಾಗೂ ಮತ್ತಿತರ ಅಭಿವೃದ್ಧಿ ಕುರಿತು ಹೇಳುತ್ತದೆಯಾದರೂ, ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳ ಸೌಕರ್ಯಗಳು ಮತ್ತು ಶಿಕ್ಷಣದ ಗುಣಮಟ್ಟದಲ್ಲಿ ಕೊರತೆ ಬಹಳವಿದೆ ಎಂಬುದರಲ್ಲಿ ಅನುಮಾನವಿಲ್ಲ.
ಅನೇಕ ಶಾಲೆಗಳು ಕೇವಲ ಒಂದು ಅಥವಾ ಎರಡು ತರಗತಿ ಕೊಠಡಿಗಳನ್ನು ಹೊಂದಿದ್ದು ಹೆಚ್ಚಿನವುಗಳಿಗೆ ಕುಡಿಯುವ ನೀರು, ಶೌಚಾಲಯ, ಕಲಿಕಾ ಸಾಮಾಗ್ರಿಗಳು ಮತ್ತು ಶಿಕ್ಷಕರ ಕೊರತೆ ಇರುವುದು ಕಲಿಕೆಗೆ ಪೂರಕವಾಗಿಲ್ಲ. ಇದಕ್ಕೂ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತಿರುವ ಕಲಿಕೆಯ ಗುಣಮಟ್ಟದ ಸ್ಥಿತಿ ನಿಜಕ್ಕೂ ಚಿಂತಾಜನಕವಾಗಿದೆ. ಮಕ್ಕಳು ನಾಲ್ಕನೆ ತರಗತಿ ಮುಗಿಸುವ ಮೊದಲೇ ಶಾಲೆ ಬಿಡುತ್ತಿರುವ ಲಕ್ಷಣಗಳು ಉತ್ತಮ ಸೂಚಕವಲ್ಲವೆಂದು ವರದಿಗಳು ಹೇಳಿವೆ.
ಕರ್ನಾಟಕದಲ್ಲಿ 3ನೇ ಮತ್ತು 5ನೇ ತರಗತಿ ಮಕ್ಕಳ ಕಲಿಕೆಯಲ್ಲಿ ಇಳಿತ ಕಂಡಿರುವುದನ್ನು ವಾರ್ಷಿಕ ಶಿಕ್ಷಣ ಸ್ಥಿತಿಗತಿ ವರದಿ 2022 ಹೇಳಿದ್ದು, ಕೋವಿಡ್ ಕಾರಣವೆಂದು ಹೇಳಲಾಗಿದೆ. ಆದರೆ ಅದಕ್ಕೂ ಮೊದಲು ಬಂದ ಅನೇಕ ವರದಿಗಳೂ ಸಹ ಇಂತಹ ಸ್ಥಿತಿ ಇರುವುದನ್ನೇ ತಿಳಿಸಿವೆ. 5ನೇ ತರಗತಿ ಮಕ್ಕಳು 3ನೇ ತರಗತಿ ಪಾಠಗಳನ್ನು ಓದಲು ಸಮರ್ಥರಲ್ಲ ಎಂಬ ಕಳವಳಕಾರಿ ಸಂಗತಿಗಳು ಹೊರಬಂದಿವೆ. ಶಾಲೆಗಳ ಆಡಳಿತ ನಿರ್ವಹಣೆ ಮುಂಚೂಣಿಯಲ್ಲಿದ್ದು, ಗುಣಮಟ್ಟದ ಶಿಕ್ಷಣವು ಅನಾದರಣೆಗೆ ಒಳಗಾಗಿದೆ. ಒಟ್ಟಾರೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣವು ಬೆಟ್ಟದ ಹೂವಾಗಿದೆ.
ಹೀಗೆ ಬುನಾದಿಯಿಂದಲೇ ಗುಣಮಟ್ಟದ ಕಲಿಕೆ ಇಲ್ಲದ ಗ್ರಾಮೀಣ ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಓದಿದ ಮಕ್ಕಳು ಹೇಗೊ 12ನೇ ತರಗತಿ ಮುಗಿಸಿದ ನಂತರ ಉನ್ನತ ಶಿಕ್ಷಣ ಅಥವಾ ಪದವಿ ನಂತರ ಉದ್ಯೋಗ ಪಡೆಯಲು ಅನೇಕ ಸ್ಪರ್ಧಾ ಪರೀಕ್ಷೆಗಳನ್ನು ಎದುರಿಸಬೇಕು. ಈ ಪರೀಕ್ಷೆಗಳ ತಯಾರಿಗೆ ತಾಲ್ಲೂಕು ಮತ್ತು ಜಿಲ್ಲಾ ಸ್ಥಳಗಳಿಗೆ ಬರಬೇಕಾಗುತ್ತದೆ. ಅಲ್ಲಿ ವಸತಿ ಮತ್ತು ಕೋಚಿಂಗ್ ಖರ್ಚು ಕನಿಷ್ಠ ಒಂದು ಲಕ್ಷವಾದರೂ ಆಗುತ್ತದೆ. ಕೆಲವೊಮ್ಮೆ ಮನೆಯವರೊಬ್ಬರು ಅವರೊಂದಿಗೆ ಸಹಾಯಕ್ಕೆ ಹೋಗಬೇಕಾಗುತ್ತದೆ. ಒಂದು ಬಾರಿ ಯಶಸ್ಸು ಕಾಣದಿದ್ದಲ್ಲಿ ಮತ್ತೆ ಮತ್ತೆ ಪ್ರಯತ್ನಿಸುತ್ತಾರೆ. ಈ ಪರಿಸ್ಥಿತಿಗಳಿಂದ ವಿದ್ಯಾರ್ಥಿ ಮತ್ತು ಕುಟುಂಬದವರು ಮಾನಸಿಕವಾಗಿ ಬಸವಳಿಯುತ್ತಾರೆ. ಅತಿ ಬಡವರಂತೂ ಈ ಪರೀಕ್ಷೆಗಳ ಬಗ್ಗೆ ಯೋಚಿಸುವುದೇ ಇಲ್ಲ. ಅವರು ತಮ್ಮ ಶಿಕ್ಷಣ ನಿಲ್ಲಿಸಿ ಯಾವುದಾದರು ಸಣ್ಣ ಪುಟ್ಟ ಕೆಲಸಗಳನ್ನು ಹುಡುಕಿ ಹೊರಡುತ್ತಾರೆ.
ಇಷ್ಟೆಲ್ಲಾ ಕೆಟ್ಟ ಪರಿಸ್ಥಿತಿಯಲ್ಲಿಯೂ ಕೆಲವು ಮಕ್ಕಳಾದರೂ ಇಂತಹ ಪರೀಕ್ಷೆಗಳಲ್ಲಿ ಭಾಗವಹಿಸಿ ಉತ್ತಮ ಶ್ರೇಣಿ ಪಡೆಯುತ್ತಿದ್ದಾರೆ ಎನ್ನುವುದೇ ಸೋಜಿಗ ಮತ್ತು ವಿಶೇಷವಾಗಿದ್ದು, ಅದೇ ಹೆಚ್ಚು ಪ್ರಚಾರಕ್ಕೆ ಬಂದಿರುತ್ತದೆ – ಅದು ಒಳ್ಳೆಯದು ಕೂಡ. ಆದರೆ, ಈ ಪರೀಕ್ಷೆಗಳಿಂದ ವಿಮುಖರಾಗುವ 90% ಕ್ಕೂ ಹೆಚ್ಚು ಗ್ರಾಮೀಣ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಚರ್ಚೆಯಾಗಬೇಕಾಗಿದೆ.
ಗ್ರಾಮೀಣ ಪ್ರದೇಶದ ಇಂತಹ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ನಗರಗಳಲ್ಲಿ ಅತಿ ಉತ್ತಮ ಗುಣಮಟ್ಟದ ಶಿಕ್ಷಣ ಪಡೆದ ಮಕ್ಕಳ ಜೊತೆ ಈ ಪರೀಕ್ಷೆಗಳನ್ನು ಸಮನಾಗಿ ಎದುರಿಸಲು ಹೇಗೆ ಸಾಧ್ಯ? ಬರೀ ಸರ್ಕಾರಿ ಶಾಲೆಗಳಷ್ಟೆ ಅಲ್ಲ, ಹಳ್ಳಿಗಳ ಹೆಚ್ಚಿನಂಶ ಖಾಸಗಿ ಇಂಗ್ಲಿಷ್ ಶಾಲೆಗಳಲ್ಲಿಯೂ ಗುಣಮಟ್ಟದ ಕಲಿಕೆ ಇಲ್ಲವಾಗಿದೆ. ಇಲ್ಲಿ ಕಲಿತ ಮಕ್ಕಳು ಅತ್ತ ಇಂಗ್ಲಿಷನ್ನೂ ಕಲಿಯದೆ, ಇತ್ತ ಕನ್ನಡವೂ ಬಾರದೆ ಎಡೆಬಿಡಂಗಿಗಳಾಗುವ ಸಂದರ್ಭಗಳೇ ಹೆಚ್ಚಿವೆ.
ಸರ್ಕಾರವು ದ್ವಿಭಾಷೆ (ಇಂಗ್ಲಿಷ್ ಮತ್ತು ಕನ್ನಡ) ಮಾಧ್ಯಮವನ್ನು ಪ್ರಾಥಮಿಕ ಹಂತದಿಂದ ಶುರು ಮಾಡ ಹೊರಟಿರುವುದು ಸ್ವಾಗತಾರ್ಹ. ಆದರೆ, ಕೇವಲ ಕೊಠಡಿಯನ್ನು ಬಣ್ಣಗಳಿಂದ ಚಿತ್ರಿಸಿ, ಶಾಲೆಗೊಂದು ಆಕರ್ಷಕ ಹೆಸರಿಟ್ಟರೆ ಸಾಕಾಗುವುದಿಲ್ಲ. ಅನೇಕ ಖಾಸಗಿ ಇಂಗ್ಲಿಷ್ ಶಾಲೆಗಳೂ ಇದೇ ನಾಟಕವನ್ನು ಮಾಡುತ್ತಿರುವುದು. ಪ್ರಾಥಮಿಕ ಹಂತದಿಂದಲೇ ಕಲಿಕಾ ಗುಣಮಟ್ಟ ಹೆಚ್ಚಿಸುವ ಕ್ರಮಗಳು ನಮ್ಮ ಸರ್ಕಾರಿ ಶಾಲೆಗಳಲ್ಲಿ ನಡೆದರೆ, ಅವರು ಖಾಸಗಿ ಶಾಲೆಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಮತ್ತು ಈ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪಾಲ್ಗೊಳ್ಳುವ ಸಮರ್ಥತೆ ಹಾಗೂ ಅವಕಾಶ ಪಡೆಯಲು ಸಾಧ್ಯವಿದೆ.
ಇದನ್ನೂ ಓದಿ ಸರ್ಕಾರದ ನೀತಿ, ಧೋರಣೆಯನ್ನು ವಿರೋಧಿಸಿದವರು ಭಯೋತ್ಪಾದಕರಾ! UAPA ಕಾಯ್ದೆ ಏನು ಹೇಳುತ್ತದೆ?
ಇತ್ತೀಚೆಗೆ, ಕರ್ನಾಟಕ ಸರ್ಕಾರವು ಶಾಲೆ ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳ ಸ್ಥಿತಿಯನ್ನು ಅಧ್ಯಯನ ಮಾಡಲು ಆಯೋಗ ರಚಿಸಿರುವುದು ಒಳ್ಳೆಯ ಸಂಗತಿ. ಈ ಆಯೋಗವು ನಮ್ಮ ರಾಜ್ಯದ ಶಾಲಾ ಮತ್ತು ಉನ್ನತ ಶಿಕ್ಷಣದ ವಾಸ್ತವ ಸ್ಥಿತಿಗತಿಗಳ ಬಗ್ಗೆ ಬೆಳಕು ಚೆಲ್ಲುತ್ತದೆಂದು ಹಾಗೂ ಅದನ್ನು ಉತ್ತಮಪಡಿಸಲು ಸರ್ಕಾರ ಬದ್ಧವಾಗಿರುತ್ತದೆಂದು ಆಶಿಸೋಣ.

ಲತಾಮಾಲ
ಗ್ರಾಮೀಣಾಭಿವೃದ್ಧಿ ತಜ್ಞರು ಮತ್ತು ಲೇಖಕರು