ಉದಯನಿಧಿ ಎಂಬ ಉದಯಸೂರ್ಯ!

Date:

Advertisements

ಹತ್ತು ವರ್ಷಗಳ ಹಿಂದೆ ಉದಯನಿಧಿ ಸ್ಟಾಲಿನ್ ‘ಒರು ಕಲ್, ಒರು ಕನ್ನಡಿ’ ಎನ್ನುವ ಮೊದಲ ಸಿನಿಮಾದಲ್ಲಿ ನಟಿಸಿದಾಗ ಸರಿಯಾಗಿ ಕುಣಿಯಲು ಬರುತ್ತಿರಲಿಲ್ಲ, ಕ್ಯಾಮೆರಾ ಮುಂದೆ ಒಂದೇ ಟೇಕ್ ನಲ್ಲಿ ಡೈಲಾಗ್ ಮುಗಿಸಲು ಆಗುತ್ತಿರಲಿಲ್ಲ. ಅದಕ್ಕೆಂದೇ ನಿರ್ದೇಶಕರು ಸಣ್ಣ ವಾಕ್ಯಗಳ ಡೈಲಾಗ್ ಗಳನ್ನೇ ಕೊಟ್ಟಿದ್ದರಂತೆ.

ಮೊದಲ ಸಿನಿಮಾ ಮಾಡಿದಾಗ ಉದಯನಿಧಿ ರಾಜಕೀಯ ಪ್ರವೇಶಿಸುವ ಯಾವ ಸುಳಿವೂ ಇರಲಿಲ್ಲ. ಆತ ರಾಜಕೀಯ ಪ್ರವೇಶಿಸಿದ್ದು ಐದು ವರ್ಷಗಳ ಬಳಿಕ.

ಡಿಎಂಕೆ ಪಕ್ಷದ ಯುವ ಘಟಕದ ಅಧ್ಯಕ್ಷನಾದಾಗ ಮುಂದೆ ಶಾಸಕನಾಗುತ್ತಾನೆಂಬ ಸುಳಿವೂ ಇರಲಿಲ್ಲ. ಆದರೆ ಚುನಾವಣೆಯಲ್ಲಿ ಗೆದ್ದು ಚಿಪಾಕ್ ಕ್ಷೇತ್ರದ ಶಾಸಕನೂ ಆದ.

Advertisements

ತಮಿಳಿನ ಸೃಜನಶೀಲ ನಿರ್ದೇಶಕ ಮಾರಿ ಸೆಲ್ವರಾಜ್, “ಮಾಮಣ್ಣನ್” ಎಂಬ ಚಿತ್ರಕತೆಯನ್ನು ಹಿಡಿದುಕೊಂಡು ಉದಯನಿಧಿ ಬಳಿ ಬಂದಾಗ, ಹೀರೊ ಮತ್ತು ವಿಲ್ಲನ್ ಎಂಬ ಎರಡು ಪ್ರಭಾವಶಾಲಿ ಪಾತ್ರದ ಬಳಿಕದ ಮೂರನೆ ಪಾತ್ರಕ್ಕೆ ಉದಯನಿಧಿ ಒಪ್ಪಲಿಕ್ಕಿಲ್ಲ ಎಂಬ ನಿರೀಕ್ಷೆಯೇ ಇತ್ತು! ಆದರೆ ಉದಯನಿಧಿ ಯೆಸ್ ಎಂದದ್ದು ಮಾರಿ ಸೆಲ್ವರಾಜ್ ಗೇ Shock ಉಂಟು ಮಾಡಿತ್ತು.

ಆಗ ಚಿತ್ರದ ಹೀರೊ ಯಾರು ಎನ್ನುವುದು ಉದಯನಿಧಿಗೆ ಗೊತ್ತಿರಲಿಲ್ಲ. ಕೆಲವು ದಿನಗಳ ಬಳಿಕ ಮಾರಿ ಸೆಲ್ವರಾಜ್, ತಮಿಳಿನ ಖ್ಯಾತ ಹಾಸ್ಯನಟ ವಡಿವೇಲು ಈ ಚಿತ್ರದ ಹೀರೊ ಎಂದಾಗ Shock ಆಗುವ ಸರದಿ ಉದಯನಿಧಿಯದ್ದು ಆಗಿತ್ತು.‌

“ಮಾಮಣ್ಣನ್” ತಮಿಳು ಚಿತ್ರರಂಗದಲ್ಲಿ ಮಾತ್ರವಲ್ಲ, ತಮಿಳುನಾಡಿನ ರಾಜಕೀಯ ರಂಗದಲ್ಲೂ ತೀವ್ರ ಸಂಚಲನ ಉಂಟು ಮಾಡಿದ ಸಿನಿಮಾ. ಈ ಸಿನಿಮಾದಲ್ಲಿ ನಾಯಿಗಳ (ಮೇಲ್ಜಾತಿ) ಮತ್ತು ಹಂದಿಗಳ (ಕೆಳಜಾತಿ) ಮುಖಾಮುಖಿ ದಾಳಿಗಳನ್ನು ತೋರಿಸುವ ಮೂಲಕ ಮಾರಿ ಸೆಲ್ವರಾಜ್ ಹೇಳಹೊರಟದ್ದು ಯಾವ ಡ್ರಾವಿಡ ರಾಜಕೀಯ ಫಿಲಾಸಫಿ ಎನ್ನುವುದು ಎಲ್ಲರಿಗೂ ಗೊತ್ತು.

ಈವರೆಗೆ ಸಂಪೂರ್ಣ ಹಾಸ್ಯನಟನಾಗಿದ್ದ ವಡಿವೇಲು, ಈ ಚಿತ್ರದ ಮೂಲಕ ಅತ್ಯುತ್ತಮ ಹೀರೊ ಮತ್ತು ಪ್ರಭಾವಶಾಲಿ ಗಂಭೀರ ನಟನೆಂಬ ಕೀರ್ತಿಯೂ ಎಲ್ಲೆಡೆ ಹರಡಿತು. ನಿರ್ದೇಶಕನೊಬ್ಬ ನಟನೊಬ್ಬನನ್ನು ಯಾವ ಎತ್ತರಕ್ಕೂ ಏರಿಸಬಲ್ಲ ಎನ್ನುವುದು ಮತ್ತೆ ಸಾಬೀತಾಯಿತು.

ವಡಿವೇಲು ಮತ್ತು ಫಹಾದ್ ಫಾಸಿಲ್ ಎಂಬ ಇಬ್ಬರು ದೈತ್ಯ ನಟರ ಮಧ್ಯೆ ಹೆಚ್ಚು ಡೈಲಾಗ್ ಗಳೇ ಇಲ್ಲದ, ಕಣ್ಣುಗಳು ಮತ್ತು ಮುಖಭಾವದಲ್ಲೇ ಎಲ್ಲವನ್ನೂ ಮಾತನಾಡಬೇಕಿದ್ದ ಪಾತ್ರ ಸಿಕ್ಕಿದ್ದು ಉದಯನಿಧಿಗೆ. ಸಿಕ್ಕಿದ ಈ ಅವಕಾಶವನ್ನು ಉದಯನಿಧಿ ಅದ್ಭುತವಾಗಿ ಬಳಸಿಕೊಂಡಿದ್ದಾನೆ ಎಂಬುದು ಮತ್ತು ಅದಕ್ಕೊಂದು ರಾಜಕೀಯ ಆಯಾಮವೂ ಇದೆ ಎನ್ನುವುದು, ಈಗ “ಸನಾತನ ಧರ್ಮ ವಿನಾಶ”ದ ವಿವಾದ ಭುಗಿಲೆದ್ದ ಬಳಿಕ ಇಡೀ ದೇಶಕ್ಕೇ ಗೊತ್ತಾಗಿದೆ!

ಈ ಸುದ್ದಿ ಓದಿದ್ದೀರಾ? ಹೀಗೊಂದು ಪಂಜಿನ ಮೆರವಣಿಗೆ : ಕಲಾವಿದ ಪಂಜು ಗಂಗೊಳ್ಳಿ ಕುರಿತು ಬಿ.ಎಂ ಹನೀಫ್ ಬರೆಹ

“ಮಾಮಣ್ಣನ್” ಚಿತ್ರದ ಬಳಿಕ ಕಮಲ ಹಾಸನ್ ನಿರ್ಮಾಣದ ಹೊಸ ಸಿನಿಮಾದಲ್ಲಿ ಉದಯನಿಧಿ ನಟಿಸಬೇಕಿತ್ತು.‌ ಇನ್ನೇನು ಶೂಟಿಂಗ್ ಶುರುವಾಗುವುದಕ್ಕೆ ಹತ್ತು ದಿನಗಳಿವೆ ಎನ್ನುವಾಗ ಉದಯನಿಧಿ ಸ್ಟಾಲಿನ್ ನನ್ನು ಅಪ್ಪ, ಮುಖ್ಯಮಂತ್ರಿ ಸ್ಟಾಲಿನ್ ರಾಜ್ಯ ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿದ ಸುದ್ದಿ ಸ್ಫೋಟವಾಯಿತು!

ನೇರ ಕಮಲಹಾಸನ್ ಬಳಿಗೆ ತೆರಳಿದ ಉದಯನಿಧಿ ಹೊಸ ಚಿತ್ರದಲ್ಲಿ ನಟಿಸಲಾರೆ ಎಂದು ಕ್ಷಮೆ ಕೋರಿದ. ಬೆನ್ನಲ್ಲೇ ” ಮಾಮಣ್ಣನ್ ನನ್ನ ಜೀವನದ ಕಟ್ಟಕಡೆಯ ಸಿನಿಮಾ” ಎಂದು ಘೋಷಿಸಿದ.

udayanidhi stalin

ಮೊದಲು ಚಿತ್ರನಟ, ಬಳಿಕ ರಾಜ್ಯ ಯುವ ಡಿಎಂಕೆ ಅಧ್ಯಕ್ಷ, ಅದರ ಬಳಿಕ ಶಾಸಕ, ಬಳಿಕ ರಾಜ್ಯದ ಕ್ರೀಡಾ ಮತ್ತು ಯುವಜನ ಸಚಿವ! ಉದಯನಿಧಿ ಯಾವ ಸದ್ದು ಗದ್ದಲವೂ ಇಲ್ಲದೆ ಗದ್ದುಗೆ ಏರಿದ್ದು ಒಂದು ಸಿನಿಮಾದ ಚಿತ್ರಕತೆಯಂತೆಯೇ ಇದೆ.

ಆದರೆ ಉದಯನಿಧಿಗೆ ರಾಜಕೀಯದಲ್ಲಿ ಜಾಕ್ ಪಾಟ್ ಹೊಡೆದದ್ದು “ಸನಾತನ ಧರ್ಮ ನಿರ್ಮೂಲ”ದ ಕುರಿತು ಆತ ನೀಡಿದ ಹೇಳಿಕೆಯ ಬಳಿಕ. ಸನಾತನ ಧರ್ಮದ ಕುರಿತ ಹೇಳಿಕೆಯನ್ನು ಸವಾಲಾಗಿ ಸ್ವೀಕರಿಸಿದ ಬಿಜೆಪಿ ನಾಯಕರು ಕೋಲಾಹಲ ಸೃಷ್ಟಿಸಿದರು. ಖುದ್ದು ಪ್ರಧಾನಿ ನರೇಂದ್ರ ಮೋದಿಯವರೇ ರಂಗಕ್ಕಿಳಿದು, ಪ್ರತಿಪಕ್ಷದ ಒಕ್ಕೂಟ “ಇಂಡಿಯಾ” ದ ವಿರುದ್ಧ ರಣಕಹಳೆ ಮೊಳಗಿಸಿದರು. ಸನಾತನ ಧರ್ಮದ ನಿರ್ಮೂಲನ ಎನ್ನುವ ವಿಷಯ ರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ Hot Discussion ಆಗಿ, ಇಡೀ ದೇಶಕ್ಕೇ ಗೊತ್ತಾಯಿತು.

ಮುಖ್ಯಮಂತ್ರಿ ಸ್ಟಾಲಿನ್ ಅವರ ರೊಟ್ಟಿ ಜಾರಿ ತುಪ್ಪದಲ್ಲಿ ಬಿದ್ದದ್ದು ಮಾತ್ರ ಯಾರಿಗೂ ಗೊತ್ತೇ ಆಗಲಿಲ್ಲ! ಈಗ ತಮಿಳುನಾಡಿನಲ್ಲಿ ಜನಸಾಮಾನ್ಯರ ಚರ್ಚೆಯ ವಿಷಯ- ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಉತ್ತರಾಧಿಕಾರಿ ಉದಯನಿಧಿ ಎನ್ನುವುದು!

ತಮಿಳುನಾಡಿನಲ್ಲಿ ಯಾರಿಗೆ ಯಾರೂ ಅಷ್ಟು ಸುಲಭವಾಗಿ ಉತ್ತರಾಧಿಕಾರಿ ಆಗುವುದಿಲ್ಲ. ಅಣ್ಣಾದೊರೈ ಅವರ ಉತ್ತರಾಧಿಕಾರಿ ಪಟ್ಟಕ್ಕೆ ದೊಡ್ಡ ಕೋಲಾಹಲವೇ ನಡೆಯಿತು. ಎಂಜಿಆರ್ ಉತ್ತರಾಧಿಕಾರಿ ಆಗಲು ಮಹಿಳೆಯರಿಬ್ಬರ ಮಧ್ಯೆ ಘನಘೋರ ಕದನವೇ ನಡೆಯಿತು.

ಮುಖ್ಯಮಂತ್ರಿ ಕರುಣಾನಿಧಿಯವರ ಉತ್ತರಾಧಿಕಾರಿ ಆಗಲು ಸ್ವತಃ ಸ್ಟಾಲಿನ್ ತಮ್ಮ ಕುಟುಂಬದೊಳಗೇ ಆಕಾಶ ಭೂಮಿ ಒಂದು ಮಾಡಬೇಕಾಯಿತು!

ಆದರೆ ಉದಯನಿಧಿ ಸ್ಟಾಲಿನ್ ಸನಾತನ ಧರ್ಮ ಎಂಬ ಕನ್ನಡಿಯ ಮೇಲೆ ಬಲವಾಗಿ ಬೀಸಿದ ಒಂದೇ ಒಂದು ಕಲ್ಲು ಆತನನ್ನು ಮುಖ್ಯಮಂತ್ರಿ ಹುದ್ದೆಯ ಉತ್ತರಾಧಿಕಾರತ್ವದ ಸನಿಹ ತಂದು ನಿಲ್ಲಿಸಿದೆ. ಹೌದು… ಒರು ಕಲ್, ಒರು ಕನ್ನಡಿ!

ಮೋದಿ ಮತ್ತು ಬಳಗ ಉದಯನಿಧಿ ಬೀಸಿದ ಅದೇ ಕಲ್ಲನ್ನು ಹೆಕ್ಕಿ INDIA ಒಕ್ಕೂಟದ ಕಡೆಗೆ ಬೀಸುತ್ತಿದೆ. ಉತ್ತರ ಭಾರತದ ಕೆಲವೆಡೆಯಾದರೂ ಇದರ ಲಾಭ ಸಿಗಬಹುದು ಎನ್ನುವುದು ಬಿಜೆಪಿ ಲೆಕ್ಕಾಚಾರ. ಆದರೆ ಸದ್ಯಕ್ಕಂತೂ ನಿರೀಕ್ಷಿತ ರಾಜಕೀಯ ಫಲಿತಾಂಶ ಕಾಣುತ್ತಿಲ್ಲ. “ನಮಗೂ ಈ ಹೇಳಿಕೆಗೂ ಸಂಬಂಧ ಇಲ್ಲ. ಅದು ಉದಯನಿಧಿಯ ವೈಯಕ್ತಿಕ ಅಭಿಪ್ರಾಯ” ಎಂದು ಕಾಂಗ್ರೆಸ್ ಸಹಿತ INDIA ಒಕ್ಕೂಟದ ಹಲವು ಪಕ್ಷಗಳು ಕೈ ತೊಳೆದುಕೊಂಡಿವೆ.

ಉದಯನಿಧಿ ತನ್ನ ಹೇಳಿಕೆಗೇ ಗಟ್ಟಿಯಾಗಿ ಅಂಟಿಕೊಂಡಿದ್ದಾರೆ. “ಸರಕಾರದ ಬಗ್ಗೆ ನನಗೆ ಚಿಂತೆ ಇಲ್ಲ. ಪಕ್ಷದ ಸಿದ್ದಾಂತ ಮುಖ್ಯ. ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ” ಎಂದು ಇವತ್ತೂ ಉದಯನಿಧಿ ಹೇಳಿಕೆ ಬಂದಿದೆ.

ಸನಾತನ ಧರ್ಮ ವಿನಾಶದ ಹೇಳಿಕೆಯನ್ನು ಡಿಎಂಕೆ ಯ ವಿರುದ್ಧ ಅಸ್ತ್ರವಾಗಿ ಬಳಸಿದರೆ ಅದರಿಂದ ಡಿಎಂಕೆ ಗೇ ಹೆಚ್ಚು ಲಾಭ ಎನ್ನುವುದು ತಮಿಳುನಾಡಿನ ಬಿಜೆಪಿ ಗೆ ಗೊತ್ತಾದ ಹಾಗಿಲ್ಲ. ಅಲ್ಲಾಗಲೇ ಸಿನಿಮಾದ ಮೂಲಕ ಡ್ರಾವಿಡ ಆಸ್ಮಿತೆಯನ್ನು ಎತ್ತಿ ಹಿಡಿಯುವ ನಿರ್ದೇಶಕರ ದೊಡ್ಡ ದಂಡೇ ಇದೆ. ಪಾ.ರಂಜಿತ್, ಮಾರಿ ಸೆಲ್ವರಾಜ್, ವೆಟ್ರಿಮಾರನ್ ಮತ್ತಿತರರು ಸಿನಿಮಾ ಹೀರೋಗಳಷ್ಟೇ ಜನಪ್ರಿಯ ನಿರ್ದೇಶಕರಾಗಿ ಬೆಳೆದಿದ್ದಾರೆ.

ತಮಿಳುನಾಡಿನ ರಾಜಕೀಯಕ್ಕೂ ಸಿನಿಮಾಕ್ಕೂ ಬಿಡಿಸಲಾಗದ ಅನುಬಂಧ. ಇಡೀ ರಾಜ್ಯಕ್ಕೆ ಟೆಂಟ್ ಸಿನಿಮಾಗಳು ಹಬ್ಬಿದಾಗ ಅಲ್ಲಿ ಬೆಳ್ಳಿತೆರೆಯಲ್ಲಿ ರಾರಾಜಿಸಿದವರು ಎಂಜಿಅರ್. ಸಿನಿಮಾಗಳೇ ಎಂಜಿಆರ್ ಗೆ ರಾಜಕೀಯ ಮೆಟ್ಟಿಲಾಗಿ ಮುಖ್ಯಮಂತ್ರಿ ಪಟ್ಟದಲ್ಲಿ ಅವರು ದಶಕಗಳ ಕಾಲ ವಿರಾಜಮಾನರಾಗಲು ಕಾರಣವಾಯಿತು.

ಹಳೆಯ ಕಪ್ಪು ಬಿಳುಪು ಸಿನಿಮಾಗಳೇ ಮುಂದೆ ಈಸ್ಟ್ ಮನ್ ಕಲರ್ ರಾಜಕೀಯವಾಯಿತು. ಜಯಲಲಿತಾ ಕಾಲದಲ್ಲಿ ರಾಜಕೀಯ ಸಿನಿಮಾಸ್ಕೋಪ್ ಗೆ ಹಿಗ್ಗಿತು. ಈಗ ಮಲ್ಟಿಫ್ಲೆಕ್ಸ್ ಕಾಲದ ಜೊತೆಗೆ ನೆಟ್ ಫ್ಲಿಕ್ಸ್, ಅಮೆಜಾನ್ ಗಳ ಮೂಲಕ ಸಿನಿಮಾ ರಾಜಕೀಯ ಜಗದಗಲ ವಿಸ್ತರಿಸಿದೆ. ಸಿನಿಮಾ ಮತ್ತು ರಾಜಕೀಯ ಎರಡೂ ಒಂದು ದೇಹದ ಎರಡು ಕಣ್ಣುಗಳಂತಿವೆ. ತಲೈವನ್ ಎಂದುಕೊಂಡಿರುವ ರಜನಿಯೇ ಡ್ರಾವಿಡ ಆಸ್ಮಿತೆಯ ಕಲ್ಲೇಟಿಗೆ ಸಿಕ್ಕು ಗಾಯಗೊಂಡು ರಾಜಕೀಯದಿಂದ ನಿವೃತ್ತರಾಗಿದ್ದಾರೆ.‌

ತಮಿಳುನಾಡಿನ ರಾಜಕೀಯ ದಿಗಂತದಲ್ಲಿ ಈಗ ಉದಯನಿಧಿ ಎಂಬ ಉದಯಸೂರ್ಯ ಮೇಲೆದ್ದಿದ್ದಾನೆ. ಕುಟುಂಬ ರಾಜಕೀಯ ಎನ್ನುವುದೆಲ್ಲ ಅಡಿಕೆಭಟ್ಟರ ಬಾಯೊಳಗಿನ ಕವಳದಂತೆ ಜಗಿದು ಉಗಿಯುವ ಸರಕು ಮಾತ್ರವಾಗಿ ಉಳಿದಿದೆ.

b m hanif
ಬಿ ಎಂ ‌ ಹನೀಫ್
+ posts

ಹಿರಿಯ ಪತ್ರಕರ್ತ, ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಿ ಎಂ ‌ ಹನೀಫ್
ಬಿ ಎಂ ‌ ಹನೀಫ್
ಹಿರಿಯ ಪತ್ರಕರ್ತ, ಲೇಖಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

ಸಾರ್ವಜನಿಕ ಸಭೆಯಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಮೇಲೆ ಹಲ್ಲೆ; ಆಸ್ಪತ್ರೆಗೆ ದಾಖಲು

ಬುಧವಾರ(ಆಗಸ್ಟ್ 20) ಬೆಳಿಗ್ಗೆ ತಮ್ಮ ನಿವಾಸದಲ್ಲಿ ನಡೆದ ಸಾರ್ವಜನಿಕ ವಿಚಾರಣೆಯ ಸಂದರ್ಭದಲ್ಲಿ...

ಅರಸು ಪತ್ರಕರ್ತರನ್ನು ಹಚ್ಚಿಕೊಳ್ಳಲೂ ಇಲ್ಲ, ಓಲೈಸಲೂ ಇಲ್ಲ: ಕಲ್ಲೆ ಶಿವೋತ್ತಮರಾವ್

2025-26ನೇ ಸಾಲಿನ ಡಿ.ದೇವರಾಜ ಅರಸು ಪ್ರಶಸ್ತಿಗೆ ಹಿರಿಯ ಪತ್ರಕರ್ತ ಕಲ್ಲೆ ಶಿವೋತ್ತಮರಾವ್...

ದಾವಣಗೆರೆ | ಕೆ.ಎನ್‌. ರಾಜಣ್ಣ, ನಾಗೇಂದ್ರರ ಮರಳಿ ಸಂಪುಟ ಸೇರ್ಪಡೆಗೆ ವಾಲ್ಮೀಕಿ ಸಮಾಜ ಆಗ್ರಹ

"ಇತ್ತೀಚೆಗೆ ಚುನಾವಣೆ ಆಯೋಗದ ವಿರುದ್ಧ ಕಾಂಗ್ರೆಸ್ ಆರೋಪಕ್ಕೆ ವ್ಯತಿರಿಕ್ತ ಹೇಳಿಕೆ ನೀಡಿ...

Download Eedina App Android / iOS

X