ಒಂದು ದೇಶದ ದುರಾಡಳಿತ ಮತ್ತು ಧರ್ಮ ರಾಜಕೀಯವನ್ನ ಖಂಡಿಸಲು ಹೆಚ್ಚೇನು ಸಾಹಸ ಮಾಡಬೇಕಿಲ್ಲ. ನಮ್ಮೊಳಗಿನ ಸ್ವಾಭಿಮಾನವೊಂದಿದ್ದರೆ ಸಾಕು ಎನ್ನುವ ಮೂಲಕ ತನ್ನೊಳಗಿನ ಪ್ರತಿರೋಧದ ಗಟ್ಟಿ ದನಿಯನ್ನ ‘ಸ್ವಾಭಿಮಾನದ ಗತ್ತಿನ್ಯಾಗ’ ಎಂಬ ಕವನ ಸಂಕಲನದ ಮೂಲಕ ಹೊರ ಹಾಕಿದ್ದಾರೆ ಯುವ ಕವಯತ್ರಿ ಪ್ರಿಯಾಂಕ ಮಾನವಿನಕರ್.
ಪ್ರಸ್ತುತ ದಿನಗಳಲ್ಲಿ ನಡೆಯುತ್ತಿರುವ ಅತ್ಯಾಚಾರ, ಗೂಂಡಾಗಿರಿ, ರಾಜಕೀಯ ಪುಂಡರ ಧರ್ಮದಾಟ ಹಾಗೂ ಕೊರೋನ ಕಾಲದಲ್ಲಿ ನೊಂದ ಜನರ ಬದುಕಿಗೆ ಕಣ್ಣೀರು ಹಾಕುತ್ತ ತನ್ನೊಡಲ ಸಂಕಟವನ್ನು ರಾಜಕೀಯ ವ್ಯವಸ್ಥೆಯ ವಿರುದ್ಧ ಹರಿಬಿಟ್ಟಿದ್ದಾರೆ. ಕವನಗಳಿಗೆ ಯಾವ ಸೋಗಿನ ಸ್ವರಗಳ ಅಗತ್ಯವಿಲ್ಲ ಎನ್ನುತ್ತ ತನ್ನೊಳಗಿನ ಆಕ್ರೋಶವನ್ನು ಎಷ್ಟು ಮುಕ್ತವಾಗಿ ಹೇಳಿಕೊಳ್ಳಬೇಕೋ ಅಷ್ಟೇ ಬಯಲು ಬಯಲಾಗಿ ಕವನ ಕಟ್ಟಿದ್ದಾರೆ. ಹೀಗಾಗಿ ಸದಾ ಅವುಗಳು ಕಾಡುತ್ತವೆ.
ಯಾವುದೂ ಸ್ಥಿರವಲ್ಲ ಎಂಬ ವಚನ ಸಾಲಿನಂತೆ ನೋವಿಗೆ ಪ್ರೀತಿಯ ಮುಲಾಮು ಹುಡುಕುತ್ತ, ಬುದ್ಧನ ಬಳಿ ಪ್ರಶ್ನೆಗಳ ಚೆಲ್ಲುತ್ತ ಒಂಟಿಯಾಗುತ್ತಾರೆ. ಸಮಾಧಿ ಕಟ್ಟೋಣ ಎಂದು ಯುದ್ಧದ ನೋವಿನ ಚಿತ್ರಣವನ್ನು ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ಈಗ ಯಾವುದು ಅಗತ್ಯವಿದೆ ನಮಗೆ ಎಂಬ ಎಚ್ಚರಿಕೆಯೂ ಓದುಗರಿಗೆ ತಾಕುತ್ತವೆ. ನೆತ್ತರು, ಬಂದೂಕು ಮತ್ತು ಬಡತನಗಳ ಬಗ್ಗೆ ಎದೆ ಮೇಲೆ ಗುಂಡು ಹೊಡೆದಂತೆ ಕವನಗಳು ನಮ್ಮ ಮುಂದೆ ನಿಲ್ಲುತ್ತವೆ. ನಾನು ಈ ದೇಶದ ಚೌಕೀದಾರ ಎಂದು ಹೇಳಿಕೊಳ್ಳುವ ಪ್ರಧಾನಿಯನ್ನ ‘ಅರೆ ವೋ ಚೌಕಿದಾರ್’ ಎಂದು ಈ ದೇಶದ ಸಂಸ್ಕೃತಿ ಪರದೆ ಸರಿಸಿ ಹಿಂದಿನ ಹಿಂಸೆಯ ದೃಶ್ಯಗಳ ಮುಂದಿಡುತ್ತ ಚೌಕಿದಾರನ ಕೈಯಾಳುಗಳ ಮೇಲೆ ಹಲ್ಲು ಕಟೆಯುವ ಕೋಪ ಕಾಣಿಸತ್ತದೆ. ಈ ಮೂಲಕ ಹೊಸ ತಲೆಮಾರಿನ ಬರಹಗಾರರು ಮಾಡಬೇಕಾದ ಕೆಲಸದ ಸ್ಪಷ್ಟತೆ ಅರಿವಿಗೆ ಬರುತ್ತದೆ.
ನೆಲಕ್ಕೆ ನೆತ್ತರು ತುಂಬುತ್ತಿರುವಾಗ ಯಾವ ಸೋಗಿನ ಕವನಗಳು ಬರೆದು ಯಾರನ್ನು ಮೆಚ್ಚುಸಬೇಕಿದೆ ಎಂಬ ವಾಸ್ತವ ನೆಲೆಯಲ್ಲಿ ನಿಂತು ಯೋಚಿಸುವಂತೆ ಇಲ್ಲಿನ ಕವನಗಳು ನಮ್ಮನ್ನು ತಾಕುತ್ತವೆ. ಬೇಲಿ ಹಾಕಿಕೊಂಡು ನಾಜೂಕಾಗಿ ಬರೆಯುವ ಬರಹಗಾರರ ನಡುವೆ ಬೇಲಿಗೆ ಬೆಂಕಿಯಾಗಿ ಕಾಣುತ್ತಾರೆ ಪ್ರಿಯಾಂಕ ಮಾವಿನಕರ್. ಇಂತಹ ಅದೆಷ್ಟೋ ಬರಹಗಾರರಿಗೆ ಸ್ಫೂರ್ತಿಯಾದ, ನಾಝಿ ದುರಾಡಳಿತದ ವಿರುದ್ಧ ತನ್ನ ಬರಹಗಳ ಮೂಲಕ ಎಚ್ಚರಿಕೆ ಮತ್ತು ಪ್ರತಿರೋಧ ತೋರಿದ್ದ ಜರ್ಮನಿಯ ನಾಟಕಕಾರ, ಕವಿ ಬರ್ಟೋಲ್ಟ್ ಬ್ರೆಕ್ಟ್ ಅವರು ಪ್ರಿಯಾಂಕ ಅವರ ಕವನಗಳ ಮಧ್ಯ ಸಹಜವಾಗಿ ನೆನಪಾಗುತ್ತಾರೆ.
‘ನಾವು ಲೇಖಕರಲ್ಲಿ ಹಲವರು ಫ್ಯಾಸಿಸಂನ ದಬ್ಬಾಳಿಕೆ, ಕ್ರೌರ್ಯಗಳನ್ನು ಅನುಭವಿಸಿದ್ದೇವೆ, ಎದುರಿಸುತ್ತಿದ್ದೇವೆ ಮತ್ತು ಅದರಿಂದ ಅಸಮಾಧಾನಗೊಂಡಿದ್ದೇವೆ. ಅದರೆ ಇನ್ನೂ ಸಿದ್ಧಾಂತವನ್ನು ಅರ್ಥಮಾಡಿಕೊಂಡಿಲ್ಲ; ತಮಗೆ ಆಕ್ರೋಶ ತರುವ ಅದರ ಕ್ರೌರ್ಯದ ಬೇರುಗಳನ್ನು ಇನ್ನೂ ಕಂಡುಹಿಡಿದಿಲ್ಲ. ಸದಾ ಪ್ರತಿರೋಧ ಒಡ್ಡದಿದ್ದರೆ ಇಲ್ಲಿ ರಕ್ತಪಾತ, ಹೆಣಗಳ ಮೇಲೆ ನಾವು ನಿಲ್ಲಬೇಕಾಗುತ್ತದೆ ಎಂದು ಬ್ರೆಕ್ಟ್ ವಿವರಿಸಿದಂತೆಯೇ ಇಲ್ಲಿನ ಕವಿತೆಗಳು ಇವೆಯೇನೋ ಎನ್ನಿಸುತ್ತದೆ. ಸಮಾಜವನ್ನು ಪ್ರಶ್ನಿಸುವುದರ ಜೊತೆಗೆ ಕಟ್ಟುವಿಕೆಗೆ ಪೂರಕವಾಗಿ ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಮತ್ತು ಮಾಂಟೋ ಅವರನ್ನು ನಮ್ಮ ಮುಂದೆ ತಂದಿರುವ ರೀತಿಯೂ ಕವಯತ್ರಿಯ ತಲ್ಲಣಗಳನ್ನು ಬಿಚ್ಚಿಡುತ್ತವೆ.
ಸ್ವಾಭಿಮಾನದ ಕೂಗು ನಮ್ಮೊಳಗೂ ಗುನುಗಲು ಶುರುವಾಗುವಂತೆ ಮಾಡುವ ಕವನಗಳಿಗೆ ನಿಜಕ್ಕೂ ಅದರದ್ದೇ ಗತ್ತು ಇದೆ. ಹೀಗಾಗಿ ಈ ಸಂಕಲನಕ್ಕೆ ಸ್ವಾಭಿಮಾನದ ಗತ್ತಿನ್ಯಾಗ ಎಂಬ ಶೀರ್ಷಿಕೆಯೂ ಸೂಕ್ತವಾಗಿದೆ.
-ಸಂಜೀವ್ ಜಗ್ಲಿ
ಲೇಖಕಿ : ಪ್ರಿಯಾಂಕ ಮಾವಿನಕರ್
ಪ್ರಕಾಶನ : ಕೌದಿ ಪ್ರಕಾಶನ