ಅಕ್ಟೋಬರ್ 10, ಶಿವರಾಮ ಕಾರಂತರ ಜನ್ಮದಿನ. ಕಾರಂತರಿಗೆ ಆತ್ಮೀಯರಾಗಿದ್ದ ನಿ. ಮುರಾರಿ ಬಲ್ಲಾಳ ಅವರು ಕಾರಂತರೊಂದಿಗೆ ಕೂತು ಆಡಿದ ಮಾತು-ಕತೆಯಲ್ಲಿ, ಅವರ ವೈವಿಧ್ಯಮಯ ಕ್ಷೇತ್ರಗಳು, ಆಸಕ್ತಿಗಳು, ಮುಖಗಳು ಅನಾವರಣಗೊಂಡಿವೆ. ಈದಿನ ಓದುಗರಿಗಾಗಿ ಈ ಅಪರೂಪದ ಸಂದರ್ಶನ…
ಭಾರತದಲ್ಲಿ ನೊಬೆಲ್ ಪ್ರಶಸ್ತಿ ಪಡೆಯಲು ನಿರ್ವಿವಾದವಾಗಿ ಅರ್ಹನಾದ ಒಬ್ಬ ವ್ಯಕ್ತಿಯೆಂದರೆ- ಡಾ. ಕೋಟ ಶಿವರಾಮ ಕಾರಂತರು. ತಾನು ಬದುಕಿರುವಾಗಲೇ ಈ ಶತಮಾನದ ‘ಲೆಜೆಂಡ್’ ಅಂತ ಕರೆಸಿಕೊಂಡ ಕಾರಂತರು ಸುಮಾರು 450ಕ್ಕೂ ಮಿಕ್ಕಿ ಕೃತಿಗಳನ್ನು ರಚಿಸಿದವರು. 50ಕ್ಕೂ ಮಿಕ್ಕಿ ಕಾದಂಬರಿಗಳು, 30 ನಾಟಕಗಳು, 5 ಬೃಹತ್ ಸಂಪುಟಗಳ ವಿಜ್ಞಾನ ಪ್ರಪಂಚ, ಅಂತೆಯೇ ಬಾಲಪ್ರಪಂಚ ಕಲಾಪ್ರಪಂಚ, 12 ಪ್ರವಾಸ ಕಥನಗಳು, ಸಂಪುಟಗಳ ತನ್ನದೇ ಆತ್ಮಚರಿತ್ರೆ -ಹೀಗೆ ಹತ್ತುಹಲವು ವಿಭಿನ್ನ ಶೈಲಿಯ ಬರವಣಿಗೆಯಲ್ಲಿ ಕೈಯಾಡಿಸಿದವರು. ಸಾಹಿತ್ಯ, ಸಂಸ್ಕೃತಿ, ಮಕ್ಕಳ ಶಿಕ್ಷಣ, ಸಾಮಾಜಿಕ ಚಳವಳಿ, ವಿಜ್ಞಾನ, ಕಲೆ, ಸಂಗೀತ, ನಾಟಕ, ಜಾನಪದ, ಪರಿಸರ, ಪತ್ರಿಕೋದ್ಯಮ ಮುಂತಾದ ಹಲವು ವೈವಿಧ್ಯಮಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡವರು. ಒಬ್ಬ ಮನುಷ್ಯ ತನ್ನ ಹತ್ತು ಬದುಕಲ್ಲಿ ಸಾಧಿಸಲಾಗದ್ದನ್ನು, ಒಂದು ವಿಶ್ವವಿದ್ಯಾಲಯವು ಪ್ರತ್ಯೇಕ ಅಕಾಡೆಮಿ ಸ್ಥಾಪಿಸಿ ಹತ್ತಾರು ಜನ ವಿದ್ವಾಂಸರ ಮೂಲಕ ಮಾಡಬಹುದಾದ್ದನ್ನು ಕಾರಂತರು ಏಕಾಂಗಿಯಾಗಿ ಸಾಧಿಸಿದರು.
ತನ್ನ ಸ್ವಂತ ಅನುಭವಕ್ಕೆ ಮಾತ್ರ ಬದ್ಧರಾಗಿದ್ದು ಸ್ವಯಂ ಶಕ್ತಿಯಿಂದಲೇ ಎಲ್ಲವನ್ನೂ ಸಾಧಿಸಿದ ಕಾರಂತರನ್ನು ಯಾವುದೇ ನಿರ್ದಿಷ್ಟ ಚೌಕಟ್ಟಿನಲ್ಲಿ ಹಿಡಿದಿಟ್ಟು ಗುರುತಿಸುವುದು ಕಪ್ಪ. ‘ಮೂಕಜ್ಜಿಯ ಕನಸುಗಳು ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರಂತರನ್ನು ಸಾಹಿತಿಯೆನ್ನೋಣವೇ? ಅನೇಕ ನಾಟಕಗಳನ್ನು ಬರೆದ ಕಾರಂತರನ್ನು ನಾಟಕಕಾರ ಎನ್ನೋಣವೇ? ದಕ್ಷಿಣ ಕನ್ನಡ ನೆಲದ ಜಾನಪದ-ಯಕ್ಷಗಾನದ ಒಳಹೊಕ್ಕು ಸಂಶೋಧನೆ ನಡೆಸಿ ತಾನೇ ಹಾಡುತ್ತ, ಗೆಜ್ಜೆ ಕಟ್ಟಿ ಕುಣಿಯುತ್ತ ಅದಕ್ಕೊಂದು ಹೊಸ ದೇಶಾತೀತ ಆಯಾಮ ಕೊಟ್ಟು ಅಂತಾರಾಷ್ಟ್ರೀಯ ಮನ್ನಣೆ ಒದಗಿಸಿಕೊಟ್ಟ ಕಾರಂತರನ್ನು ಕಲಾಕಾರ ಎನ್ನೋಣವೇ? ವಿಜ್ಞಾನ ಪ್ರಪಂಚ, ಎಳೆಯರಿಗಾಗಿ ಬಾಲಪ್ರಪಂಚ ಬರೆಯುವ ಸಾಹಸಮಾಡಿದ ಅವರನ್ನು ವಿಜ್ಞಾನಿ ಎಂದು ಕರೆಯಬಹುದೇ? ಅಥವಾ ಮಕ್ಕಳ ಶಿಕ್ಷಣತಜ್ಞ ಎಂದು ಗುರುತಿಸಬಹುದೇ? ಈ ವಯಸ್ಸಲ್ಲೂ ಕೂಡ ದೇಶದ ಯಾವುದೇ ಮೂಲೆಯಲ್ಲಿ ನಡೆಯುವ ಪರಿಸರ ಚಳವಳಿಯ ಮುಂಚೂಣಿಯಲ್ಲಿ ನಿಲ್ಲುವ ಉತ್ಸಾಹಿ ಕಾರಂತರನ್ನು ಪರಿಸರವಾದಿ ಎಂದು ಕರೆಯಬೇಕೇ? ಅಥವಾ ಈ ನೆಲಕ್ಕೇ ಶುದ್ಧಾಂಗವಾಗಿ ಸಲ್ಲುವ ಕಾರಂತರನ್ನು ಒಬ್ಬ ಅವಧೂತ-ಚಿಂತಕ ಒಂದು ಸಂಬೋಧಿಸುವುದು ಉಚಿತವೇ? ಖಚಿತವಾಗಿಯೂ ಕಾರಂತರು ಏನು?
ಸ್ವಾತಂತ್ರ್ಯ ಮತ್ತು ನಿರ್ಭೀತಿಯನ್ನು ಪ್ರೀತಿಸುವ ಕಾರಂತರು ತುರ್ತು ಪರಿಸ್ಥಿತಿಯಲ್ಲಿ ವ್ಯಕ್ತಿ ಸ್ವಾತಂತ್ರ್ಯಕ್ಕೆ ಕುತ್ತು ಬಂದಾಗ, ಭಾರತ ಘನಸರಕಾರ ತನಗಿತ್ತ ‘ಪದ್ಮವಿಭೂಷಣ’ ಪ್ರಶಸ್ತಿಯನ್ನು ಹಿಂತಿರುಗಿಸಿದವರು. ತುರ್ತುಪರಿಸ್ಥಿತಿಯ ಅನಂತರ ಒದಗಿಬಂದ ಚುನಾವಣೆಯಲ್ಲಿ ಪ್ರಜಾಪ್ರಭುತ್ವ ರಕ್ಷಣೆಗಾಗಿ ಪ್ರಚಾರ ಭಾಷಣಗಳನ್ನು ಮಾಡಿದವರು; ಮುಂದೆ ಕೈಗಾ ಅಣುಸ್ಥಾವರ ಸ್ಥಾಪನೆಯ ವಿರುದ್ಧ ಸಾಂಕೇತಿಕವಾಗಿ ತಾನೇ ಚುನಾವಣೆಯಲ್ಲಿ ಸ್ಪರ್ಧಿಸಿದವರು.
ಇನ್ನೂ ಹರೆಯದ ಉಲ್ಲಾಸವನ್ನು ಕಳಕೊಳ್ಳದ 90ರ ಕಾರಂತರು ತನ್ನ ಸುತ್ತಮುತ್ತಲಿನ ಆಗುಹೋಗುಗಳಿಗೆ ತೀವ್ರವಾಗಿ ಸ್ಪಂದಿಸುತ್ತಾರೆ; ಸಂಶೋಧಕನ ಕುತೂಹಲದ ಚಿಲುಮೆಯಾಗಿಯೇ ಇಂದಿಗೂ ಅನೇಕ ಹಿರಿಯ ಲೇಖಕರಿಗಿಂತ ಹೆಚ್ಚು ವರ್ತಮಾನಕ್ಕೆ ಸಲ್ಲುತ್ತ ಬದುಕುತ್ತಿದ್ದಾರೆ. ನಿಸರ್ಗದ ನಿಗೂಢಗಳನ್ನು ಬಗೆಯುವ ಅದಮ್ಯ ಉತ್ಸಾಹವನ್ನು ತನ್ನ ಜೀವನದ ಮುಸ್ಸಂಜೆಯಲ್ಲೂ ಕಳಕೊಳ್ಳದ ಕಾರಂತರಿಗೆ ತನ್ನ ಶೋಧನೆಗಳಲ್ಲಿ ಒದಗುವ ಸಫಲತೆ ವಿಫಲತೆಗಳ ಬಗ್ಗೆ ಕಾಳಜಿಯೇ ಇಲ್ಲ. ನಮಗೆ ಇರುವ ಒಂದೇ ಭೂಮಿಯ ಬಸಿರನ್ನು ಜೀವಂತವಾಗಿಡಲು ತಾನು ಯಾವ ರೀತಿಯ ಪ್ರತಿಭಟನೆಗೂ ಸಿದ್ಧವೇ. ಸಾಮಾನ್ಯ ದೈನಿಕ ಪತ್ರಿಕೆಗಳ ಓದುಗರ ಅಂಕಣದಲ್ಲಿ ಪತ್ರಮೂಲಕ ಪ್ರತಿಕ್ರಿಯಿಸುವುದನ್ನು ಇಂದಿಗೂ ತನ್ನ ಘನತೆಗೆ ಕಡಿಮೆ ಎಂದು ತಿಳಿಯದ ವಿನಯಶೀಲ ಕಾರಂತರು, ಆವಶ್ಯಕತೆ ಬಂದಾಗ ಭಾರತದ ಸರ್ವೋಚ್ಚ ನ್ಯಾಯಾಲಯದವರೆಗೂ ಹೋರಾಡಲೂ ಸಿದ್ಧ.
ಸುಮಾರು ವರುಷಕ್ಕೊಂದರಂತೆ ಬರೆಯುತ್ತಿದ್ದ ಕಾರಂತರ ಕಾದಂಬರಿಗಳಲ್ಲಿ ‘ಚೋಮನ ದುಡಿ’, ‘ಬೆಟ್ಟದ ಜೀವ’, ‘ಮರಳಿ ಮಣ್ಣಿಗೆ’, ‘ಅಳಿದ ಮೇಲೆ’, ‘ಸರಸಮ್ಮನ ಸಮಾಧಿ’, ‘ಕುಡಿಯರ ಕೂಸು’, ‘ಮೂಕಜ್ಜಿಯ ಕನಸುಗಳು’ -ಬಹಳ ಪ್ರಸಿದ್ಧವಾದವುಗಳು. ಬಹಳ ಹಿಂದೆಯೇ ಬರೆದ ‘ಬಾಳ್ವೆಯೇ ಬೆಳಕು’ ಎಂಬ ಕಿರು ಹೊತ್ತಗೆ ಅವರ ಒಟ್ಟು ಜೀವನದರ್ಶನವನ್ನು ಪ್ರತಿಬಿಂಬಿಸುವ ಬಹಳ ಮಹತ್ವದ ಕೃತಿ ಎಂದು ನನ್ನ ಅನ್ನಿಸಿಕೆ. ಕಾರಂತರನ್ನು ಕಂಡಾಗ ಒಬ್ಬ ಧೀರನನ್ನು ಕಂಡ ಅನುಭವ, ಅವರ ಮಾತಿನ ಗುಡುಗಿನ ಮೋಡಿಯ ಕೆಲವೊಂದು ಹೊಳಹುಗಳು ಇಲ್ಲಿವೆ.

ಪ್ರಶ್ನೆ: ಸಂಗೀತ, ಸಾಹಿತ್ಯ, ವಿಜ್ಞಾನ, ಚಿತ್ರಕಲೆ, ರಾಜಕೀಯ, ಸಮಾಜಶಾಸ್ತ್ರ, ಯಕ್ಷಗಾನ, ಮಕ್ಕಳ ಶಿಕ್ಷಣ -ಹೀಗೆ ನಿಮ್ಮ ಆಸಕ್ತಿಯನ್ನು ಕೆರಳಿಸಿದ ಯಾವುದೇ ಕ್ಷೇತ್ರವಿರಲಿ, ಅವುಗಳಲ್ಲೆಲ್ಲಾ ತೀವ್ರವಾಗಿ ತೊಡಗಿಸಿಕೊಂಡ ನೀವು ಈ ವಯಸ್ಸಿನಲ್ಲೂ ಕೂಡ ನಿಮ್ಮ ಸುತ್ತಮುತ್ತಲಿನ ಬದುಕಿಗೆ ಸಹಜವಾಗಿ ಸ್ಪಂದಿಸುತ್ತಾ ಜೀವಂತ ಮನುಷ್ಯನಾಗಿ ಉಳಿದುಕೊಂಡಿದ್ದೀರಿ. ನಿಮ್ಮ ಈ ಜೀವನೋಲ್ಲಾಸಕ್ಕೆ ಕಾರಣವೇನು? ಅಂತರ್ಗತವಾದ ಮೂಲದ್ರವ್ಯ ಯಾವುದು?
ಕಾರಂತ: ನನ್ನ 80-90 ವರ್ಷದ ಬದುಕಲ್ಲಿ ಯಾವ ಯಾವಾಗ ಯಾವ ಯಾವುದನ್ನು ಕಲಿತೆ, ಯಾವ ಆಸಕ್ತಿ ಯಾವಾಗ ಮೂಡಿತು ಎಂಬುದನ್ನು ಇವತ್ತು ಹೇಳಲಿಕ್ಕೆ ಬಂದೀತೇ? ಉದಾಹರಣೆಗೆ ಸಂಗೀತದ ನನ್ನ ಆಸಕ್ತಿ- ಇದು ಯಾವಾಗ ಹುಟ್ಟಿತು, ಯಾಕೆ ಹುಟ್ಟಿತು ಎಂಬ ಪ್ರಶ್ನೆ. ಸುಮಾರು 20ನೇ ಇಸವಿಯಲ್ಲಿ ಇರಬಹುದು, ನಾಟಕ ಕಂಪೆನಿ ಹಾಡು ಕೇಳಿದೆ. ಅದು ಖುಷಿ ಕೊಟ್ಟಿತು. ಆದರೆ ಯಾವುದೋ ಒಂದು ಕಾಲದಲ್ಲಿದ್ದ ಆಸಕ್ತಿ ಮುಂದೆ ಉಳಿಯಬಹುದು, ಉಳಿಯದಿರಬಹುದು. ಯಾಕೆಂದ್ರೆ ಸಂಗೀತದಲ್ಲಿ ಆಸಕ್ತಿ ಬೇರೆ, ಸಂಗೀತಶಾಸ್ತ್ರ ಕಲಿಯೋದು ಬೇರೆ. ಸಂಗೀತ ಉಪಯೋಗ ಮಾಡಲು ಕಲಿತ ಮೇಲೆ ಅದು ನನ್ನಲ್ಲಿ ಹೆಚ್ಚು ಉಳೀತೂಂತ ಹೇಳಬಹುದು.
ಸಂಗೀತ ಖುಷಿಕೊಟ್ಟ ಕಾಲದಲ್ಲಿ ಅದು ಏನು ಮಾಡುತ್ತೆ, ಏನು ಮಾಡಬಹುದೂಂತ ಬಂದಾಗ ಅದನ್ನು ಕಲಿಬೇಕೂಂತ ಅನ್ನಿಸಿತು. ಆದರೆ ಆಸಕ್ತಿಯಿಂದ ನಾನು ಶಾಸ್ತ್ರ ಕಲಿತದ್ದು ಕಡಿಮೆ. ಉಪಯೋಗಕ್ಕಾಗಿ ಕಲಿತೆ. ಗುರುಗಳಿಲ್ಲದೆ, ಹಾಡುವುದನ್ನು ಕೇಳಿ ಕಲಿತೆ. ರಾಗ, ತಾಳ ಹಾಕಿ ಕೂತುಕೊಳ್ಳುವ ಗವಾಯಿಗಳ ಸಂಗೀತ ಕೇಳಿದೆ. ಒಂದೆರಡು ಗಂಟೆ ಅವರು ಕೂತು ಒಂದೇ ರಾಗ ಎಳೆಯುವಾಗ ಬೇಜಾರುಬಂದದ್ದೂ ಉಂಟು. ಆದರೆ ರಂಗಸ್ಥಳದಲ್ಲಿ ಕೂತು ಸಂಗೀತ ತೆಕ್ಕೊಂಡು ಹಾಡಿದಾಗ ಆಕರ್ಷಕವಾಗಿ respond ಮಾಡಿದ್ದೂ ಉಂಟು. ಅವ ಏನು ರಾಗ ಹಾಕಿದ? ಗೊತ್ತಿಲ್ಲ. ರಾಗ ಗೊತ್ತಿಲ್ಲದಾಗ್ಯೂ ಸಂತೋಷ ಆದದ್ದುಂಟು. ಅವರ ಹಾಗೆ ಹಾಡಬೇಕಾದ್ರೆ ರಾಗ ಗೊತ್ತೇ ಇರಬೇಕೆಂಬ ನಿಯಮವಿಲ್ಲ ಅಂತ ಬಂದಾಗ, ಕೂತುಕೊಂಡು ರಾಗಾಭ್ಯಾಸಕ್ಕಿಂತ ಹೆಚ್ಚು, ಊರೂರು ತಿರುಗುತ್ತಾ ಜಾನಪದಕ್ಕೆ ಸಂಬಂಧಪಟ್ಟ ವ್ಯಕ್ತಿಗಳಿಂದ ಜನಪದ ಹಾಡು ಬರ್ಕೊಳ್ಳಿಕ್ಕೆ ಶುರುಮಾಡಿದೆ, ಕೇಳಿದೆ, ಸುಲಭವಾಗಿ ಅನೇಕ ತರದ ಹಾಡಿನ ದಾಟಿ ಕಲಿತೆ. ಸ್ವತಃ ಹಾಡು ಬರೆದೆ. ಅರ್ಥ ಬರೆದೆ. ಅರ್ಥ ಬರೆದ ಕಾಲದಲ್ಲೂ ರಾಗದ ಹೆಸರು ಗೊತ್ತಿರಲಿಲ್ಲ. ಹಾಗೆ ನೋಡಿದ್ರೆ ಎಷ್ಟೋ ಜಾನಪದ ಹಾಡಿಗೆ ರಾಗದ ಹೆಸರು ಯಾರಿಗೂ ಗೊತ್ತಿಲ್ಲ. ಮದುವೆಹಾಡು ಹೇಳುವವರಿಗೆ ಕೆಲವು ಸಲ ಇದು ಯಾವ ರಾಗ, ಯಾವ ತಾಳ ಅಂತ ಗೊತ್ತಿರುವುದಿಲ್ಲ. ತಾಳ ಗೊತ್ತಿಲ್ಲದೆಯೇ ಒನಕೆ ಪೆಟ್ಟು ಹಾಕ್ತಾ ಹಾಡ್ತಾ ಸರಿಯಾದ ತಾಳ ಹಾಕ್ತಾರೆ. ಹಾಗೆ ನಾನೂ ಹಾಡಿದಾಗ, ಆ ಹಾಡಿನ ಲಯಕ್ಕೂ ಅರ್ಥಕ್ಕೂ ನಿಕಟಸಂಬಂಧವಿದೆ ಅಂತ ಗೊತ್ತಾಯ್ತು. ಒಂದೇ ತರದ monotony ಆ ರಾಗದಲ್ಲಿದ್ದರೂ ಕೂಡ, ಅದರ Pattern, ಸಾಗತಕ್ಕಂಥ ಗತಿ, ಹಾಡಿನ ರೂಪ, ಅದಕ್ಕೂ ವಸ್ತುವಿಗೂ ಇರುವ ಸಂಬಂಧ ಯಾವಾಗ ಗೊತ್ತಾಯ್ತೋ ಆಗ, ಸಂಗೀತದಲ್ಲಿ ಅನುಭವವನ್ನು ಹೇಳಲಿಕ್ಕೆ ಉಪಯೋಗ ಆಗುತ್ತೋ? ಆಗ ಅದು ಯಾವ ರೂಪ ತಾಳುತ್ತೆ, ಯಾವ ರೂಪ ತಾಳಿದರೆ ಒಳ್ಳೆಯದು, creative ಅಂತ ಹೇಳುವ ವಿಷಯದಲ್ಲಿ ಏನು ಬರುತ್ತೆ, ಹೇಳುವ urge ಗೂ ಅದರ ಉಪಯೋಗಕ್ಕೂ ಏನಾದರೂ ಸಂಬಂಧ ಇದೆಯೋ ಎಂದು ಯೋಚಿಸಲು ಆರಂಭಿಸಿ ಕೆಲಸ ಮಾಡಿದೆ.
ಸಂಗೀತದ ರೂಪಕ್ಕೂ ಅನುಭವಕ್ಕೂ ಏನಾದ್ರೂ ಹೊಂದಿಕೆ ಬೇಕಾಗ್ತದೆ. ವರದಾಚಾರ್‍ರ ನಾಟಕದಲ್ಲಿ ”ಸಖಿಯೆ ನೋಡು ಕೊಳದಿ ಕುಸುಮ ಸುಕೃತವಾಂತುದೈ…’’ ಅಂತ ಬರುವಾಗ ನೀರಿನಲ್ಲಿ ಹುಟ್ಟಿದ ಈ ಹೂವು ಏನು ಪುಣ್ಯ ಮಾಡಿದೇಂತ ಹೇಳುವ ಈ ಯೋಚನೆಯೇ ಒಂದು ಕೃತಕವಾದ ಯೋಚನೆ ಅಲ್ವೇ? ಕೊಳ ನೋಡಿ ಆ ಕುಸುಮ ಹ್ಯಾಗೆ ಹುಟ್ಟಿತು, ಯಾಕೆ ಹುಟ್ಟಿತೂಂತ ಯೋಚನೆ ಮಾಡಿದ್ದೇವೆಯೇ? ಇಲ್ಲಿ ಸಂಗೀತವನ್ನು ಉಪಯೋಗಿಸಿದ್ದಕ್ಕೂ ಆ ವಸ್ತುವಿಗೂ ಏನು ಸಂಬಂಧ ಇದೆ? ಏನೂ ಇಲ್ಲ. ಹ್ಯಾಗೆ ಚಂದ್ರ ಮೂಡಿದಾಂತ, ”ಚಂದ್ರನು ಮೂಡುವನಿದೋ ಆನಂದದೀ’’ ಎಂಬ ವರ್ಣನೆ ಒಂದು ಹಿಂದೂಸ್ತಾನಿ ಹಾಡಿನಲ್ಲಿ ”ಕೈಸೀ ನಿಕಲೀ ಚಾಂದನಿ’’ ಎಂಬ ಆಶ್ಚರ್ಯದ ಧ್ವನಿ ಎಷ್ಟು ಚೆನ್ನಾಗಿದೆ. ಆದರೆ ಏನು ಹೇಳಿದ ಹಾಗಾಯಿತು? ಸಂಗೀತದ ಶಾಸ್ತ್ರ ಎಷ್ಟೇ ಇರಲಿ ಆ ಶಾಸ್ತ್ರ ಮಾಡುವ ಕೆಲಸ ಏನು ಅಂತ ಯೋಚನೆ ಮಾಡಬೇಕಾಗ್ತದೆ. ಅದೇ ರೀತಿ ಗದ್ಯ ಬರೀತೇನೆ. “ಭಗವಾನ್ ಭಾಸ್ಕರನು ನಭೋ ಮ೦ಡಲದಲ್ಲಿ ಅಸ್ತಂಗತನಾದನು’’. ಭಾರಿ ಪ್ರೌಢ ಅಂತ ಕಾಣುತ್ತೆ. “ಹೊತ್ತು ಕಂತಿತು” ಅಂತ ಹೇಳಿದ್ದಕ್ಕಿಂತ ಹೆಚ್ಚಾಗಿ ಏನಾದ್ರೂ ಇದೆಯಾ ಅದರಲ್ಲಿ? ಆವಾಗ ಯಾಕೆ ಶಬ್ದದ ಈ ದುಂದುಗಾರಿಕೆ ಬೇಕು? “ಹೋಗು ನಡೆಯಯ್ಯ, ನಿಂತರೆ ತಪರಾಕಿ ಬಿದ್ದೀತು” ಎಂದು ಹೇಳಬೇಕಾದ್ದಕ್ಕೆ ಪ್ರೌಢ ಭಾಷೆ ತಕ್ಕೊಂಡ್ರೆ ”ಅವ ಹರಿಕತೆ ಮಾಡ್ತಾನೆ” ಅಂತ ತಿಳೀತಾರೆ ಜನ. ಹೀಗೆ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ಸಮಯದಲ್ಲಿ ನಾನು ಯಾವುದೇ ಒಂದು ವಿಷಯ ತೆಕ್ಕೊಂಡಾಗಲೂ ಅದರ ಬಗ್ಗೆ ತೀವ್ರ ಗಮನಹರಿಸುವಂಥ ಪ್ರಯತ್ನ ಮಾಡ್ತಾ ಬಂದಿದ್ದೇನೆ. ಹಿಂದೆ ಯಾವಾಗ ಸಂಗೀತ ಕಲಿತೆ, ಯಾವಾಗ ನಾಟಕ ಬರೆದೆ ಅಂತ ಹುಡುಕಿಕೊಂಡು ಹೋಗಲಿಕ್ಕೆ ಡೈರಿಯಲ್ಲಿ ಬರೆದಿಡಲಿಲ್ಲ. ಆವಾಗಾವಾಗ ಬರೆದ ಕೃತಿಗಳನ್ನು ನೋಡಿದರೆ ತಿಳೀಬಹುದು.
ಪ್ರಶ್ನೆ: ನಾನು ಯಾಕೆ ಈ ಪ್ರಶ್ನೆ ಕೇಳಿದೇಂದ್ರೆ ನಿಮ್ಮಂತೆ ಇಷ್ಟು ದೊಡ್ಡ ಕ್ಯಾನ್ವಾಸ್ ತೆಕ್ಕೊಂಡು ಕುತೂಹಲದಿಂದ ಕೆಲಸ ಮಾಡಿದವರು ಕಡಿಮೆ…
ಕಾರಂತ: ಇದ್ದುಕೊಳ್ಳಬಹುದು. ಬಾಕಿಯವರು ಎಲ್ಲಾ ಶಾಲೆಗೆ ಹೋದ್ರು. ಜೀವನ ಆಗಬೇಕು. ಒಂದು ಉದ್ಯೋಗ ಸಂಪಾದನೆ ಮಾಡಿಕೊಂಡು ಪ್ರೊಫೆಶನ್ ಸೇರಿಕೊಂಡ್ರು, ಬೆಳೆದ್ರು. ವಿದ್ಯೆ ಕಲೀಬೇಕಾದ್ರೆ ಕಾರಣ ಬೇಕಾಗ್ತದೆ. ಬಿಎ, ಎಂಎ ಕಲಿತರೆ ಕೆಲಸ ಸಿಗ್ತದೆ ಹೌದು. ಆದರೆ ನನಗೆ ಅದು ಮುಖ್ಯ ಅಂತ ಅನ್ನಿಸಲಿಲ್ಲ. ನಾನು ಶಾಲೆ ಯಾವಾಗಲೋ ಬಿಟ್ಟು ದೇಶಸೇವೆಗೆ ಹೋದೆ. ಅಲ್ಲಿಯೂ ಕೆಲವರು ಜೈಲಿಗೆ ಹೋದರು. ಹತ್ತು ಇಪ್ಪತ್ತು ವರುಷ ಏನೂ ಮಾಡಲಿಕ್ಕೆ ಬರಲಿಲ್ಲ ಅವರಿಗೆ. ಆದರೆ ನಂಗೆ ಹಾಗಾಗಲಿಲ್ಲ. ಬೇಕೆನ್ನುವಷ್ಟು ಪುರುಸೊತ್ತು ಇತ್ತು. ಬಹಳ ಸ್ವಾತಂತ್ರ್ಯ ಇತ್ತು. ನನಗೆ ಖುಷಿ ಬಂದ ಹಾಗೆ ತಿರುಗಾಡಿದ್ದೇನೆ. ಆವಾಗ ನಾನು ಯಾವುದಕ್ಕೆಲ್ಲ expose ಆಗಿದ್ದೇನೋ ಅದನ್ನು ಮಾಡಲಿಕ್ಕೆ ಹೋಗಿದ್ದೇನೆ. ಒಂದು ಚೆಂದ ಕಂಡಿತು, ಅದನ್ನು ಮಾಡಲಿಕ್ಕೆ ಹೋಗಿದ್ದೇನೆ. ಇನ್ನೊಂದು ಸಮಯದಲ್ಲಿ ಇನ್ನೊಂದು ಚೆಂದ ಕಂಡಿತು ಅದನ್ನು ಮಾಡಲಿಕ್ಕೆ ಹೋಗಿದ್ದೇನೆ. ಬಿಡುವು ಮತ್ತು ಸಮಯ ನನ್ನದೇ ಆದ್ರಿಂದ, ನಾನು ಹೋದಂಥ ಸ್ಥಳ, ಕಂಡಂಥ ವಸ್ತು ಎಲ್ಲವೂ ವಿಧವಿಧವಾದ್ದರಿಂದ ನನ್ನಿಂದ ಏನು ಮಾಡಲಿಕ್ಕೆ ಆಗುತ್ತೆ ಅಂಥ ನೋಡುವ ಪ್ರಯತ್ನ ಮಾಡಿದ್ದೇನೆ. ಬೇರೆಯವರು ಮಾಡಿದ್ದನ್ನೂ ಕಂಡಿದ್ದೇನೆ. ಅವರಿಂದ ಆಗುತ್ತದಾದರೆ ನನ್ನಿಂದ ಯಾಕಾಗುವುದಿಲ್ಲ ಎಂಬ ಪ್ರಶ್ನೆಯನ್ನೂ ಕೇಳಿಕೊಂಡಿದ್ದೇನೆ. ಅದಕ್ಕೆ ಬೇಕಾಗಿ ಎಲ್ಲೆಲ್ಲಿಗೋ ಹೋಗಿದ್ದೇನೆ, ಸುತ್ತಿದ್ದೇನೆ.
ವಿಜ್ಞಾನ ಪ್ರಪಂಚ ಯಾಕೆ ಮಾಡಿದೆ? ಬಾಲಪ್ರಪಂಚ ಯಾಕೆ ಮಾಡಿದೆ? ಪ್ರಶ್ನೆ ಬರ್ತದೆ. ಶಾಲೆ ಪಠ್ಯಪುಸ್ತಕ ನೋಡುತ್ತಿದ್ದೆ. ಮಾಸ್ಟರುಗಳ ಜತೆ ಓಡಾಡ್ತಾ ಇದ್ದೆ. ಪಾಠ ಹೇಳುವ ಮಾಷ್ಟ್ರಿಗೆ ಟೆಕ್ಟ್‌ಸ್ ಪುಸ್ತಕ ಬಿಟ್ಟು ಓದಲಿಕ್ಕೆ ಎರಡನೇ ಪುಸ್ತಕ ಇಲ್ಲ. ಮಕ್ಕಳಿಗೆ ಕುತೂಹಲ ಹುಟ್ಟಿಸುವಂಥದ್ದನ್ನು ಅವ ಎಲ್ಲಿಂದ ಹೇಳಬೇಕು? ನಾಕು ಒಕ್ಕಣೆ ಹೇಳಬೇಕಾದ್ರೆ ಅವನಿಗೆ ಓದಲಿಕ್ಕೆ ಪುಸ್ತಕವೇ ಇಲ್ಲ. ಒಂದಷ್ಟು ಕತೆಪುಸ್ತಕ ಇರಬಹುದು. ಪಾಶ್ಚಾತ್ಯ ರಾಷ್ಟ್ರಗಳಲ್ಲಾದರೆ encyclopaediaಗಳಿವೆ. ಇನ್ನೊಂದಿದೆ. ಆಯಾಯಾ ಪ್ರಾಯದಲ್ಲಿ ಓದಿಕೊಂಡು ಜ್ಞಾನ ಬೆಳೆಸಿಕೊಳ್ಳಲಿಕ್ಕೆ ಬೇಕಾದ್ದು ಎಲ್ಲವೂ ಇದೆ. ನಮ್ಮಲ್ಲಿ ಏನೂ ಇಲ್ಲ. ಆಗ ಸ್ವಾಭಾವಿಕವಾಗಿ ನಾವು ಮಾಡಬಾರದೇ ಎನ್ನುವುದು ಬರ್‍ತದೆ. ನಾವು ಮಾಡಬಾರದೇ ಎಂದ್ರೆ ಯಾರು ಮಾಡಬೇಕು? ಗೊತ್ತಿದ್ದವ ಮಾಡಬೇಕು. ಇಲ್ಲಾ, ನಿನಗೆ ಗೊತ್ತಾಗುವ ಹಾಗೆ ಕಲಿತು ಮಾಡಬೇಕು. ನನಗೆ ಮಾಡಬೇಕೂಂತ ಅನ್ನಿಸಿತು. ಆಗ ನಾನು ಓದಬೇಕಾಯ್ತು, ಬರೀಬೇಕಾಯ್ತು, ಬರೀಬೇಕಾದ್ರೆ ಯಾರಿಗೆ, ಯಾವ ಪ್ರಾಯದವರಿಗೆ ಹೇಳಿದ್ದೇನೆ, ಇತರರು ಹ್ಯಾಗೆ ಹೇಳಿದ್ದಾರೆ, ದೊಡ್ಡವರು ಮಕ್ಕಳಿಗೆ ಹ್ಯಾಗೆ ಹೇಳಿದ್ದಾರೆ ವಿಜ್ಞಾನದ ಪಾಠ? ಮನಸ್ಸು ಕೊರೆಯುವ ಹಾಗೆ ಲ್ಯಾಬರೇಟರಿ ಪಾಠ ಹೇಳ್ತಾರಾ ಅಥವಾ ಇನ್ನು ಯಾವುದಾದರೂ ರೀತೀಲಿ ಹೇಳ್ತಿದ್ದಾರಾ ಎಂಬುದು ಮುಖ್ಯ ಆದಾಗ, ಮಾಡಿದವರನ್ನ ಕಂಡು ನಾನು ಕನ್ನಡದಲ್ಲಿ ಅದನ್ನು ಮಾಡಲಿಕ್ಕೆ ಪ್ರಯತ್ನಿಸಿದ್ದೇನೆ. ಹೀಗೆ ಒಂದು ವಿಷಯದಿಂದ ಇನ್ನೊಂದು ವಿಷಯಕ್ಕೆ ಹೋಗಲು ಅನೇಕ ಕಾರಣಗಳು ಒದಗಿದುವು. ಆದ್ರಿಂದ ಯಾಕೆ ಮಾಡಿದ್ರಿ ಅಂತ ಕೇಳಿದ್ರೆ, ನನಗೆ ಅನೇಕ ವಿಷಯ ಬದುಕಿನ ಅಂಗವಾಗಿ ಬಂದದ್ರಿಂತ ಯಾವುದು ಕುತೂಹಲ ಹುಟ್ಟಿಸಿದೆಯೋ ಅದು ಮಾಡಿದೆ. ಅದೇ ರೀತಿ ಇನ್ನೊಬ್ಬರ ಜೀವನ ಆಗಬೇಕಾಗಿಲ್ಲ.
ಇದನ್ನು ಓದಿದ್ದೀರಾ?: ನೂರರ ನೆನಪು | ದೇವಾನಂದ್ ಎಂಬ ಸಾಹಸಿಗ, ಚಿರಯೌವನಿಗ
ಪ್ರಶ್ನೆ: ಹಲವು ಶಿಸ್ತುಗಳಲ್ಲಿ ತೊಡಗಿಸಿಕೊಂಡ ನೀವು…
ಕಾರಂತ: ಅಲ್ಲಿ ಶಿಸ್ತು ಎಂಬ ಮಾತು ತೆಗೆದುಬಿಡಿ. ಡಿಸಿಪ್ಲೀನ್ ಎಂಬ ಇಂಗ್ಲಿಷ್ ಶಬ್ದ ಶಿಸ್ತು ಅಲ್ಲ. ಜ್ಞಾನಕ್ಷೇತ್ರ ಇದು. ನನ್ನ ಬದುಕಲ್ಲಿ ಯಾವುಯಾವುದು ಟಚ್ ಆಗಿದೆಯೋ ಅದನ್ನು ಇಣಿಕಿ ನೋಡಿದ್ದೇನೆ.
ಖಾದಿ ತಯಾರಿಸುವ ಹುಚ್ಚಲ್ಲಿ ಮೊದಲು ಬೋಳುಬಟ್ಟೆ ತಯಾರಿಸಿದೆ. ತೆಕ್ಕೊಳ್ಳಿಕ್ಕೆ ಗಿರಾಕಿ ಇಲ್ಲ. ಅದಕ್ಕೆ ಬಣ್ಣಹಾಕಬೇಕಾಯಿತು. ಬಣ್ಣ ಹಾಕುವುದು ಹ್ಯಾಗೆ? ಒಂದು ಕಂಪೆನಿಗೆ ಬರೆದು dyeing ಕಲಿತೆ. ದುಡ್ಡು ಕೊಟ್ಟು ಬೇರೆಯವರಿಂದ ಮಾಡಿಸಬಹುದಾದ್ದನ್ನೂ ನಾನೇ ಮಾಡಬೇಕಾಗಿ ಬಂತು. ಯಾಕಂದ್ರೆ, ದುಡ್ಡಿರಲಿಲ್ಲ ನನ್ನ ಹತ್ತಿರ. ನನ್ನ ಪುಸ್ತಕಕ್ಕೆ ನಾನೇ ಚಿತ್ರ ಬರೀಬೇಕಾಯ್ತು, ಯಾಕೆಂದ್ರೆ ಇನ್ನೊಬ್ಬನಿಗೆ ದುಡ್ಡು ಕೊಟ್ಟು ಮಾಡಿಸಲಿಕ್ಕೆ ಸಾಧ್ಯವಿರಲಿಲ್ಲ. ಎರಡನೆಯದಾಗಿ ಅನೇಕ ಬಾರಿ ಅವರು ಮಾಡಿದ ಚಿತ್ರ ನನಗೆ ಖುಷಿ ಕಾಣುತ್ತಿರಲಿಲ್ಲ. ನನಗೆ ಖುಷಿ ಕಾಣದಿದ್ರೆ ಏನು ಮಾಡಬೇಕು. ಕ್ಯಾಮರಾ ತಕ್ಕೊಂಡು ನಾನೇ ಫೋಟೋ ತೆಗೀಬೇಕು. ಅಥವಾ ಆ ಚಿತ್ರ ಕಾಪಿ ಮಾಡಬೇಕು. ಕಾಪಿ ಮಾಡದಿದ್ರೆ ದುಡ್ಡುಕೊಟ್ಟು ನನ್ನ ಪುಸ್ತಕ ಮುಟ್ಟಲಿಕ್ಕೇ ಸಾಧ್ಯವಾಗ್ತಿರಲಿಲ್ಲ, ದುಬಾರಿಯಾಗಿ. ಹಾಗಾಗಿ ಬಾಲಪ್ರಪಂಚ-ವಿಜ್ಞಾನಪ್ರಪಂಚ ಬರಿಯುವಾಗ ಅನೇಕರಿಂದ ಚಿತ್ರ ತರಿಸಿದ್ದುಂಟು. ಯಾವುದು ತರಿಸಲಿಕ್ಕೆ ಸಾಧ್ಯವಿಲ್ಲವೋ, ಯಾವುದು ದುಡ್ಡಿಗೆ ಸಿಗುತ್ತಿರಲಿಲ್ಲವೋ ಅಂಥ ಚಿತ್ರವನ್ನು ನಕಲು ಮಾಡಬೇಕಾಗಿ ಬಂತು. ಆಗ ಚಂದದ ಪ್ರಶ್ನೆ ಇಲ್ಲ. ಚಿತ್ರ ಹಾಕಬೇಕಾದರೆ ನನ್ನಿಂದಾದಷ್ಟು ನಾನು ಮಾಡಬೇಕು. ಇಲ್ಲದಿದ್ರೆ ಬಿಟ್ಟುಬಿಡಬೇಕು. ಒಟ್ಟು ವಿಷಯದ ಮೋಹದಿಂದ ಈ ಪ್ರವೃತ್ತಿ ಬೆಳ್ಕೊಂಡು ಬಂತು.
ಪ್ರಶ್ನೆ: ನನ್ನ ಪ್ರಶ್ನೆ ಏನೂಂದ್ರೆ, ಹತ್ತುಹಲವು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡ ನಿಮ್ಮನ್ನು ಸಾಹಿತಿ ಅಂತ ಮಾತ್ರ ಗುರುತಿಸುವುದನ್ನು ನೀವು ಇಷ್ಟಪಡ್ತೀರಾ?
ಕಾರಂತ: ಇಷ್ಟಪಡ್ತೀರಾ ಎಂಬ ಪ್ರಶ್ನೆ ಬೇರೆ. ಆದರೆ ಸಾಹಿತಿ ಅಂತ ನನ್ನನ್ನು ಯಾಕೆ ಕರೀಬೇಕೂಂತ್ಲೆ ನಾನು ಕೇಳ್ತೇನೆ. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾಲಯ ಕಾರಂತಪೀಠ ಸ್ಥಾಪಿಸಿ ಅದಕ್ಕೆ ಒಬ್ಬ ‘ಚಾಯರ್ ಮ್ಯಾನ್’ ಆಗಿ ಒಬ್ಬ ಸಾಹಿತಿಯನ್ನು ನೇಮಿಸಲಿಕ್ಕೆ ಹೊರಟಾಗ, ಮಂಗಳೂರು ವಿಶ್ವವಿದ್ಯಾಲಯಕ್ಕೇ ಈ ಬಗ್ಗೆ ಹೇಳಿದ್ದೆ. ಸಾಹಿತ್ಯ ಕೇವಲ ಒಂದು ಕ್ಷೇತ್ರ ನನ್ನದು. ನಾನು ನೂರು ವಿಷಯಗಳಲ್ಲಿ ಕೈಹಾಕಿದ್ದೇನೆ. ಕನ್ನಡ ಪಂಡಿತರಿಂದ ಮಾತ್ರ ಆಗುವ ಕೆಲಸ ಅಲ್ಲ ಇದು. ನನ್ನ ಬಗ್ಗೆ ನೀವು ‘ಚಯರ್’ ಸ್ಥಾಪಿಸುವುದಾದ್ರೆ ಬೇರೆ ಬೇರೆ ವಿಷಯಗಳಲ್ಲಿ ಅಧ್ಯಯನ ಮಾಡಿದಂಥ ವ್ಯಕ್ತಿ ಬೇಕಾಗ್ತದೆ. ‘ಕಾರಂತರು ಸಾಹಿತಿಗಳಲ್ಲವೇ?’ ಅಂತ ಕೇಳಿದ್ರೆ- ಇರಬಹುದು, ಕೆಲವು ಕಾದಂಬರಿ, ಕೆಲವು ನಾಟಕ ಬರೆದಿದ್ದೇನೆ. ಅಲ್ಲಿಗೆ ಬಿಟ್ಟುಬಿಡಿ ಅದನ್ನು. ಆದರೆ ನನ್ನ ಬರವಣಿಗೆ ನೋಡಿದ್ದಾದರೆ ನೀವು, ಅನೇಕ ಬಗೆಯಲ್ಲಿ ಅದು ಬದಲಾಗಿದೆ.
ಒಂದು ಪತ್ರಿಕೆ ನಡೆಸಿದ್ದೇನೆ ನಾನು. ಒಂದು ಪತ್ರಿಕೆ ನಡೆಸುವವ ತನಗೆ ಖುಷಿ ಕಂಡ ಕತೆ, ಕಾದಂಬರಿ ಮಾತ್ರ ಪ್ರಕಟಿಸಿದರೆ ಮೂರನೆಯವರು ಆ ಪತ್ರಿಕೆ ಓದಲಿಕ್ಕೇ ಇಲ್ಲ. ಕತೆಯ ಜತೆ ಹತ್ತು ಜನರಿಗೆ ಬೇಕಾದಂಥ ಬೇರೆ ಬೇರೆ ವಿಷಯಗಳನ್ನು ತೆಕ್ಕೊಳ್ಳಬೇಕಾಗ್ತದೆ. ಹಾಗಾಗಿ, ನಾನು ಪತ್ರಿಕೆ ನಡೆಸುವಾಗ ಹತ್ತಾರು ಒಳ್ಳೆಯ ಪತ್ರಿಕೆಗಳು ಯಾವ ವಿಷಯಗಳನ್ನು ಆರಿಸುತ್ತಿದ್ದವೋ ತೆಗೆದುಕೊಳ್ಳುತ್ತಿದ್ದವೋ ಅವೆಲ್ಲವನ್ನು ಓದಿಕೊಂಡು ಬರೀತಿದ್ದೆ. ಆದ್ದರಿಂದ ನನ್ನ ಅಧ್ಯಯನಕ್ಷೇತ್ರ 1920-24ನೇ ಇಸವಿಯ ಕಾಲದಲ್ಲೇ ವೈವಿಧ್ಯದ ಕಡೆ ಹೋಗಿತ್ತು. ಆವಾಗ ನೀವು ನನ್ನನ್ನು ಏನಂತ ಕರೀತೀರಿ, ಹೇಳಿ. ನಿಮಗೆ ಬೇರೆಯಾದ ವಿಷಯದ ಅಭಿರುಚಿಯೂ ಇಲ್ಲದಿದ್ರೆ, ನನ್ನ ಕತೆ ಪುಸ್ತಕ ಮಾತ್ರ ಓದಿದವರಾದರೆ ಕಾರಂತರು ಸಾಹಿತಿಗಳಂತ ಹೇಳಬಹುದು. ಆದರೆ ನಾನು ಚರಿತ್ರೆ ಬರೆದಿದ್ದೇನೆ, ವಿಜ್ಞಾನ ಬರೆದಿದ್ದೇನೆ. ಹಾಗಾಗಿ ನನ್ನನ್ನು ಸಾಹಿತಿ ಅಂತ ಕರೆದರೆ ‘protest’ ಮಾಡ್ತವೆ. ನನ್ನನ್ನು ಸಾಹಿತ್ಯಕ್ಕೆ ಮಾತ್ರ ಸೀಮಿತ ಮಾಡಬೇಡಿ ಅಂತ ಕೂಡ ಯೂನಿವರ್ಸಿಟಿಗೆ ಸ್ಪಷ್ಟವಾಗಿ ಬರೆದಿದ್ದೇನೆ.
ಇವತ್ತು ನಾವು ರಾಜಕಾರಣಿಗಳಿಗೆ ಹ್ಯಾಗೆ ಬೆಲೆ ಕೊಡುತ್ತಿದ್ದೇವೋ ಹಾಗೆಯೇ ಕತೆ-ಕಾದಂಬರಿ ಬರೆದವನಿಗೆ ಕೂಡ ಬೇರೆ ಏನೂ ಆತನಿಗೆ ಗೊತ್ತಿಲ್ಲದಿದ್ರೂ ಬೆಲೆ ಕೊಡಲಿಕ್ಕೆ ಕಲ್ತಿದ್ದೇವೆ. ನಮ್ಮ ಮಾರ್ಕೆಟ್ ಬದಲಾಗಿದೆ. ಕತೆ-ಕಾದಂಬರಿ ಬರೆದ. ಭಾಷಾಪ್ರವೀಣ ಆದ. ತೂಕ ಹೆಚ್ಚಾಯಿತು. ಆತನ ತೂಕ ಹೆಚ್ಚಾಗಬಹುದು, ಆದರೆ ಇತರ ಕ್ಷೇತ್ರದಲ್ಲಿ ಆತನ ಬುದ್ಧಿ ವಿಕಾಸಗೊಂಡಿದೆಯೋ ಎಂದು ನಾವು ಕೇಳಿಕೊಳ್ಳಬೇಕಾಗುತ್ತದೆ. ಅದು ಕೇಳಿಕೊಳ್ಳದಿದ್ರೆ ಯಾವ ಕೆಲಸದಿಂದ ನಾನು ‘ಪಾಪ್ಯುಲರ್’ ಆಗ್ತೇನೋ, ಆ ಕೆಲಸ ಮಾಡ್ತೇನೆ. ಸಾಹಿತಿ ನಿಮಗೆ ಹೆಚ್ಚಾಗಬಹುದು. ಆದರೆ ನನಗೆ ಸಾಹಿತಿ ಅಂತ ಅನ್ನಿಸಿದ ಕೂಡಲೇ ಆತ ದೊಡ್ಡವ ಅಂತ ಅನ್ನಿಸುವುದಿಲ್ಲ. ಸಾಹಿತ್ಯದ ಮೂಲಕ ಅವ ಏನು ಮಾಡಿದ್ದಾನೆ ಅಂತ ತೋರಿಸಬೇಕಾಗ್ತದೆ. ಆತನ ಬರವಣಿಗೆಯಲ್ಲಿ creative literatureನ ಲಕ್ಷಣ ಕಂಡ್ರೆ ಆ ಮಟ್ಟಿಗೆ ಆತ ದೊಡ್ಡವ. ಇಲ್ಲದಿದ್ದರೆ ಅವನಲ್ಲಿ ಭಾಷಾಜ್ಞಾನ ಇದ್ದೂ ಅವ ಇನ್ನೂ ಓದಿಕೊಂಡಿಲ್ಲ, ಅವನ ಜೀವನ ಬರಡಾಗಿದೆ ಅಂತ ತಿಳೀತದೆ. ನಮಗೆ ತಪ್ಪು ತಿಳಿವಳಿಕೆ ಎಲ್ಲಿಯವರೆಗೆ ಇದೇಂದ್ರೆ ಇವತ್ತು ರಾಜಕೀಯ ಪುಢಾರಿಗೆ ಸಿಗುವ ಪುರಸ್ಕಾರ ಇನ್ಯಾರಿಗೂ ಸಿಗುವುದಿಲ್ಲ. ಯಾಕೇಂತ ಕೇಳಿದ್ರೆ, ಅವನ ಹಿಂದೆ ತಿರುಗಾಡಿದ್ರೆ ನಿಮಗೆ ಏನಾದ್ರೂ ಸಿಗುತ್ತೆ. ನಿಮ್ಮ ಜುಟ್ಟು ಹಿಡಿಯುವಂಥ ಅಧಿಕಾರಕ್ಕೆ ಅವ ಹೋಗಿದ್ದಾನೆ. ಯೋಗ್ಯತೆಯ ಮೇಲಿಂದ ಹೋದದ್ದಲ್ಲ. ಜನರನ್ನು ಮಂಕುಬೂದಿ ಮಾಡಿಯೋ, ದುಡ್ಡಿನ ಬಲದಿಂದಲೋ, ಬ್ಯಾಲೆಟ್ ಪೇಪರ್ ಕದ್ದೋ –ಹ್ಯಾಗೋ ಮೇಲೆ ಹೋಗಿದ್ದಾನೆ. ಮೇಲೆ ಹೋದದ್ದರಿಂದ ಆಗ ಗ್ರೇಟ್. ಎಲ್ಲರಿಗೂ ಮೇಲೆ ಹೋಗುವ ಅಪೇಕ್ಷೆ ಇದೆ, ಯೋಗ್ಯತೆ ಬೇಕೆಂಬ ಪ್ರಶ್ನೆಯೇ ಬರುವುದಿಲ್ಲ. ಇಲ್ಲಿ ಸಮಾಜ ಬೆಳೆದು ಬಂದ ರೀತಿ ಹಾಗಿದೆ. ವಿದೇಶಗಳಲ್ಲಿ ರಾಜಕಾರಣಿಗೆ ಪಾರ್ಲಿಮೆಂಟಿನ ಒಳಗೆ ಮಾತ್ರ ಮರ್ಯಾದೆ. ಅಲ್ಲಿ ಮಂತ್ರಿಯ ಹಿಂದೆ ಹೋಗುವವರು ಯಾರೂ ಇಲ್ಲ. ನಮ್ಮಲ್ಲಿ ಯಾವುದೇ ಕ್ಷೇತ್ರವಿರಲಿ, ಅಳತೆ-ಉಪಯೋಗ ಇಲ್ಲದೆ ಹಿಂಬಾಲಕರಾಗ್ತಾರಂತಂದ್ರೆ, ಜನಗಳು ಯಾವ ಗೊತ್ತುಗುರಿಯೂ ಇಲ್ಲದ ಕುರಿಗಳೂಂತ್ಲೆ ಅರ್ಥ ಆಗ್ತದೆ.
ಪ್ರಶ್ನೆ : 20-30ರ ದಶಕಗಳಲ್ಲಿ ಗಾಂಧೀಜಿಯ ಪ್ರಭಾವದಿಂದ ನೀವು ಸಮಾಜ ಸುಧಾರಣೆ, ಸ್ವಾತಂತ್ರ್ಯ ಹೋರಾಟ, ಬ್ರಹ್ಮಚರ್ಯ ಪಾಲನೆ -ಮುಂತಾದ ಆದರ್ಶಗಳ ಬೆನ್ನು ಹಿಡಿದಿದ್ದಿರಿ, ಆದರೆ ಮುಂದೆ ಆ ಆದರ್ಶಗಳಿಗೆ ಬೆನ್ನು ತಿರುಗಿಸಿ critical ಆಗಲು ಕಾರಣವೇನು?
ಕಾರಂತ: ಮೊದಲು ನೀವು ಎಲ್ಲಿ ನಾನು ಬೆನ್ನು ತಿರುಗಿಸಿದ್ದೂಂತ ಮಾತಾಡಬೇಕಾಗ್ತದೆ. ಯಾವ ವಿಷಯಕ್ಕೆ ಬೆನ್ನು ತಿರುಗಿಸಿದ್ದೂಂತ ಹೇಳಿ. ನಿಮ್ಮ ಬೆನ್ನು ತಿರುಗಿಸಿದೆ ಎಂಬ ಮಾತಿಗೆ ಅರ್ಥ ಇಲ್ಲ. ಮದುವೆ ಆಗುವುದಿಲ್ಲಾಂತಿದ್ದೆ. ಬೇಕೆನ್ನುವಷ್ಟು ಅಧ್ಯಯನ ಮಾಡಿದ ಮೇಲೆ ಇದು unnatural ಆದರ್ಶ ಅಂತ ಬಿಟ್ಟೆ. ಮದ್ವೆ ಮಾಡ್ಕೊಂಡೆ. ಬೆನ್ನು ತಿರುಗಿಸಿದ್ದಲ್ಲ. ನನ್ನ ಅನುಭವ ಏನು ಹೇಳ್ತದೋ ಹಾಗೆ ನಡಕೊಂಡೆ.
ಇನ್ನು ಸಮಾಜೋದ್ಧಾರ ಅಂತ ನಾನು ಹೋದೆ. ಇನ್ನೊಬ್ಬರ ಉದ್ಧಾರ ಮಾಡಬೇಕಾದ್ರೆ ಅವನ ಬಗ್ಗೆ ಕನಿಕರ ಹುಟ್ಟಬೇಕಾಗ್ತದೆ. ಯಾವ ವಿಷಯದಲ್ಲಿ ಕನಿಕರ? ರಾಟೆ ಎಳೆದು ಎಂಟಾಣೆ ಸಂಪಾದಿಸಲೂ ಆಗ್ತದೆ ಅಂತ ಅನೇಕರಿಗೆ ಹೇಳಿಕೊಟ್ಟಿದ್ದೇನೆ. ಇದು ಸಮಾಜ ಉದ್ಧಾರವೇ? ನನ್ನ ಜೀವನದಲ್ಲಿ ಯಾರು ಎದುರು ಬಂದರೋ, ಯಾರ ಬಗ್ಗೆ ಕರುಣೆ ಮೂಡಿತೋ ಆಗ ಅವರಿಗಾಗಿ ಕೆಲಸಮಾಡಿದೆ.
ನನ್ನ ಗುರುತು ಇದ್ದವರ ಪೈಕಿಯೇ ಒಂದು ವೇಶೈಯ ಮನೆಯಲ್ಲಿ ಹುಡುಗಿಯರು ಬಟ್ವಾಡೆ ಆಗ್ತಾ ಇದ್ರು. ಅದು ನನ್ನ ಸ್ನೇಹಿತರ ಮನೆಯಲ್ಲೇ ಆಗುವ ಕಾಲ ಬಂದಾಗ, ಮರುಕ ತೆಕ್ಕೊಂಡು, “ನಿನಗೆ ನಾನು ಮದುವೆ ಮಾಡಲಿಕ್ಕೆ ಪ್ರಯತ್ನ ಮಾಡ್ತೇನೇಂತ’’ ಹೇಳಿ ಪ್ರಯತ್ನ ಮಾಡಿದೆ. ಗಾಂಧೀಜಿ ಹತ್ರ ಹೇಳಿದೆ. ಆಗ ಅವರು, “ಆಕೆ ಯಾವಜ್ಜೀವನ ಬ್ರಹ್ಮಚಾರಿಣಿ ಆಗಿರಬೇಕೂಂತ’’ ಅಂದ್ರು. ನಿಮ್ಮ ಬ್ರಹ್ಮಚರ್ಯವೋ ಇನ್ನೊಂದೋ ಬೋಧನೆ ಮಾಡಬೇಕಾದ್ರೆ, ಸಮಾಜದಲ್ಲಿ ಈ ಸರಕು ಎಷ್ಟು ಚಲಾವಣೆಯಲ್ಲಿದೆ, ಆಕೆ ಎಲ್ಲಿ ಯಾರ ನಡುವೆ ಬದುಕಬೇಕಾಗ್ತದೆ ಎಂಬ ಪ್ರಶ್ನೆ ತಿಳ್ಕೋಳ್ಬೇಕಾಗ್ತದೆ. ಗಾಂಧೀಜಿ ಹೇಳಬಹುದು, ಮಾಡಬಹುದು. ಆದರೆ ನನಗೆ ಈ ಪ್ರಶ್ನೆ ಕಷ್ಟ ಆಗಿ ಕಾಣುತ್ತೆ. ಹಾಗಾಗಿ ನಾನು ಅವಳಿಗೆ ಮದುವೆ ಆಗಲಿಕ್ಕೆ ಏನು ಪ್ರಯತ್ನ ಮಾಡಬೇಕೋ ಮಾಡಿದೆ. ಮದುವೆ ಮಾಡಿಸಿದೆ. ಮುಂದೆ ನನಗೇ ಮದುವೆ ಮಾಡಿಕೊಳ್ಳಬೇಕೂಂತ ಅನ್ನಿಸಿತು. ಮದುವೆ ಆದೆ. ಜಾತಿಗಟ್ಟಿನ ಬಗ್ಗೆ ನಂಬಿಕೆ ನಾನು ಮೊದಲೇ ಬಿಟ್ಟವನಾದ್ದರಿಂದ ನನಗೆ ಖುಷಿ ಕಂಡವಳನ್ನು ಮದುವೆ ಆದೆ. ಇಲ್ಲಿಯೂ ಕೂಡ ನನಗೆ ಖುಷಿ ಕಂಡವರನ್ನ ಮದುವೆ ಆದೆ ಅಂದ್ರೆ, ನನಗೆ ಖುಷಿ ಕಂಡಕೂಡಲೇ ಆ ಹುಡುಗಿಗೆ ಖುಷಿ ಆಗಬೇಕಾಗಿಲ್ಲ. ಇಬ್ಬರೂ ಖುಷಿಯಿಂದ ಒಪ್ಪಬೇಕು. ಒಪ್ಪಿದೆವು, ಮದುವೆ ಆದೆವು.
ಪ್ರಶ್ನೆ: ಆದರ್ಶಗಳ ಕಾಲವಾದ ನವೋದಯದ ಹೆಚ್ಚಿನ ಲೇಖಕರಲ್ಲಿ…
ಕಾರಂತ: ಇಲ್ಲಿ, ನಿಮ್ಮ ಆ ಕಾಲದ ವರ್ಣನೆಯೇ ತಪ್ಪು. ‘ಹೆಚ್ಚಿನವರು ಆದರ್ಶವಾದಿಗಳು’ ಅಂತಂದ್ರೆ ಯಾರು ಆದರ್ಶವಾದಿಗಳೂಂತ ಮೊದಲು ನೀವು ನನಗೆ ಹೇಳಬೇಕಾಗ್ತದೆ. ಯಾಕೆಂದ್ರೆ ನೀವು ಹೇಳುವ ಆದರ್ಶ ಯಾವುದು? ಬದುಕಬೇಕೆಂಬುದು ಒಂದು ಆದರ್ಶ, ಸಮಾಜದ ಜಾತಿ-ನೀತಿ ಒಂದು ಆದರ್ಶ. ಉಪಕಾರ ಮಾಡಬೇಕೆಂಬುದು ಒಂದು ಆದರ್ಶ, ಚೆನ್ನಾಗಿರಬೇಕೆಂಬುದು ಒಂದು ಆದರ್ಶ. ಆದ್ರಿಂದ ಆದರ್ಶ ಯಾವುದೂಂತ ಮೊದಲು ಹೇಳಿ, ಅದಕ್ಕೆ ಸಂಬಂಧಪಟ್ಟ ಪ್ರಶ್ನೆ, ತೆಕ್ಕೊಳ್ಳಬೇಕಾಗುತ್ತೆ. ನೀವು ಹೇಳುವ ಹಾಗೆ ಯಾರ್‍ಯಾರು ಹಿಂದಿನವರ ಆದರ್ಶದ ಬಗ್ಗೆ ನಿಮಗೆ ಗೊತ್ತಿದೆ? ಏನೂ ಗೊತ್ತಿಲ್ಲ ನಿಮಗೆ. ಮಾಸ್ತಿಯವರ ಆದರ್ಶ ಏನು? ಬೇಂದ್ರೆಯವರದ್ದು ಏನು? ಶ್ರೀಕಂಠಯ್ಯನವರದ್ದು ಏನು? ಅವರನ್ನೇ ಕೇಳಬೇಕು. ಅಥವಾ ಅವರವರ ಸಮಕಾಲೀನರನ್ನು ಕೇಳಬೇಕು. ಅವರೆಲ್ಲರನ್ನೂ ಒಂದೇ ಬುಟ್ಟಿಯಲ್ಲಿ ಹಾಕುವ ನಿಮ್ಮ ‘ಆದರ್ಶ’ದ ಕಲ್ಪನೆಯೇ ತಪ್ಪು.
ಪ್ರಶ್ನೆ: ಅದಕ್ಕೇ ನಿಮ್ಮ ಹತ್ರ ಕೇಳಿದ್ದು, ಬೇಂದ್ರೆ, ಪುಟ್ಟಪ್ಪ, ಮಾಸ್ತಿ, ಕಾರಂತ, ಶ್ರೀರಂಗ -ಈ ಐದು ಆ ಕಾಲದ ಮಹಾ ಲೇಖಕರ ಬಗ್ಗೆ.
ಕಾರಂತ: ಮಹಾ ಎನ್ನುವುದೇ ಬೇರೆ. ಅವರ ಆದರ್ಶ ತಿಳೀಲಿಕ್ಕೆ ಅವರ ಜೀವನದ ಬಗ್ಗೆ ನಿಮಗೆ ಇನ್ನೂ ಹೆಚ್ಚಿಗೆ ಗೊತ್ತಿರ್ಬೇಕಾಗ್ತದೆ. ಬರೇ ಅವರ ಬರಹ ಸಾಕಾಗೋಲ್ಲ. ಅವರ ಆದರ್ಶವನ್ನು ಅವರ ಬರವಣಿಗೆಯಿಂದ ತೀರ್ಮಾನ ಮಾಡ್ತೀರೋ, ಅವರ scholarshipನಿಂದ ತೀರ್ಮಾನ ಮಾಡ್ತೀರೋ, ಅವರ ಸ್ಥಾನಮಾನದಿಂದ ತೀರ್ಮಾನ ಮಾಡ್ತೀರೋ? ಪುಟ್ಟಪ್ಪನೇ ಇರಲಿ, ಬೇಂದ್ರೆನೇ ಇರಲಿ, ಇನ್ಯಾರೇ ಇರಲಿ ಅವರವರು ನಂಬಿದಂಥ ವಿಷಯವನ್ನು ಆದರ್ಶ ಅನ್ನೋದಕ್ಕಿಂತ sentiment ಅಂತ ಹೇಳಬಹುದು. Sentiment ಸರಿಯೋ ತಪ್ಪೋ, ಆ ಪ್ರಶ್ನೆ ಬೇರೆ. ಅವರಿಗೆ ಹಿಡಿಸುವ sentiment ಆದರ್ಶ ಅಲ್ಲ. ಪರಮಾತ್ಮನ ಹತ್ತಿರ ಹೋಗೋದು, ಮೋಕ್ಷಗಮನ ಬಯಸೋದು ದೊಡ್ಡ ಆದರ್ಶ ಕೆಲವರಿಗೆ. ಬದುಕಿನ ಉದ್ದೇಶ ಹೀಗೀಗೆ ಇರಬೇಕೆಂಬುದು ಒಂದು sentiment.
ಅವರವರು ಬೆಳೆದಂಥ ಸಮಾಜದಲ್ಲಿ ಯಾವ ವಸ್ತುವನ್ನು ಹೆಚ್ಚು ಮೆಚ್ಚುತ್ತಾರೆಯೋ ಹಾಗೇ ಇರಬೇಕೂಂತ ಅನ್ನಿಸ್ತದೆ. ಇದನ್ನು ಅವರು ಪ್ರೀಚ್ ಮಾಡ್ತಾರೇಂತ. ಅದನ್ನೇ ಬರೀತಾರೆ. ಅದು ತಾವು ನೋಡಿದ್ದಲ್ಲ. ಕಂಡದ್ದಲ್ಲ. ಹೀಗೆ ಆಗಬೇಕೆಂಬ ಕಲ್ಪನೆ- ಅನೇಕರು ನಾಟಕದಲ್ಲಿ ಬರೆದಿದ್ದಾರೆ. ನಾಟಕದಲ್ಲಿ ಬರುವ ಅಂಥ ಅಪ್ಪಟ ಸಂಭಾವಿತರು, ಅಪ್ಪಟ ಪಂಡಿತರು, ಅಂಥ ಕುಡುಕರು ಇದ್ದಾರೆಯೇ? ಎಲ್ಲೋ ಬೆರಕೆ ಬೆರಕೆ ಇರಬಹುದು. ನೀವು ಕಲ್ಪಿಸಿಕೊಂಡಂಥ ಕೃತಕ ರೂಪ ಎಲ್ಲೂ ಇಲ್ಲ. ಯಾಕೆಂದ್ರೆ, ಮನುಷ್ಯ ಸಮಾಜದಲ್ಲಿ ಏರು-ತಗ್ಗು, ಒಳ್ಳೆಯದು-ಕೆಟ್ಟದು ಎಲ್ಲವೂ ಅದು impractical ಇರಬಹುದು. ಅದನ್ನು ನಾನು sentiment ಅಂತ ಹೇಳ್ತೇನೆ. Sentimental ಬಹಳ ಮೊದಲಿನಿಂದ ರೂಢಿ. ಸಮಾಜ ಒಳ್ಳೆಯದಾಗಿರಬೇಕಾದ್ರೆ ಹೀಗೀಗೇ ಇರಬೇಕೂಂತ ತೀರ್ಮಾನ. ನಿಮ್ಮ ಕತೆ-ಕಾದಂಬರಿಗಳಲ್ಲಿ ಹಾಗಿದ್ದ ಜನ ಹುಟ್ತಾರೆ. ನೀವು ನೋಡಿದ್ದೀರೋ? ಅದು ಯಾಕೆ ಹಾಗಿಲ್ಲ ಅನ್ನೋದನ್ನ ಯೋಚಿಸಿದಾಗ ಮಾತ್ರ realistic touch ಬರ್‍ತದೆ, ಅಲ್ಲಿಯವರೆಗೆ ಬರೋದಿಲ್ಲ.
(ನಿ. ಮುರಾರಿ ಬಲ್ಲಾಳ ಅವರು ಲಂಕೇಶ್ ಪತ್ರಿಕೆಗಾಗಿ ಮಾಡಿದ ವಿಶೇಷ ಸಂದರ್ಶನದ ಆಯ್ದ ಭಾಗ, ಎಪ್ರಿಲ್ 19, 1995)