ಜನತೆಯ ದುಡಿಮೆಯ ಫಲ ಈ ಸೆಂಗೋಲು; ಇಂದು ಪಾಳೇಗಾರಿಕೆ, ಮಠಮಾನ್ಯಗಳ ಮೇಲಾಟದ ಗುರುತು

Date:

Advertisements
ಸೆಂಗೋಲ್ ಅಥವಾ ರಾಜದಂಡದ ಬಗ್ಗೆ ತಮಿಳಿನಲ್ಲಿ ಬಂದ ಸಂಪಾದಕೀಯವೊಂದನ್ನು ವಿ. ಗೀತಾ ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅದನ್ನು ರಘುನಂದನ ಅವರು ಕನ್ನಡಕ್ಕೆ ಅನುವಾದಿಸಿ, ಬರೆದಿದ್ದಾರೆ. 

ಸಿ. ಎನ್ ಅಣ್ಣಾದುರೈ ಅವರು ಡಿಎಂಕೆ ಪಕ್ಷದ ಸಂಸ್ಥಾಪಕರು. ಬಹಳ ದೊಡ್ಡ ವಾಗ್ಮಿ; ಪತ್ರಕರ್ತರಾಗಿ ಹೆಸರು ಮಾಡಿದವರು; ಕಾದಂಬರಿ, ಸಣ್ಣಕತೆ, ನಾಟಕಗಳನ್ನು ಬರೆದವರು; ಚಲನಚಿತ್ರಗಳ ಕತೆ ಮತ್ತು ಸಂಭಾಷಣೆ ಬರೆದು, ತಮಿಳು ಸಿನೆಮಾ ಕ್ಷೇತ್ರದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದವರು. 1969ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಆದವರು, ಆ ಜವಾಬ್ದಾರಿಯನ್ನು ವಹಿಸಿಕೊಂಡಾದಮೇಲಿನ ಮೂರೇ ವಾರಗಳಲ್ಲಿ ತೀರಿಕೊಂಡರು. ತಮಿಳುನಾಡಿನ ಜನತೆಯ ಪ್ರೀತಿಯ ’ಅಣ್ಣ’ ಅವರು. ನಾವೆಲ್ಲರೂ ಹಾಗೆಂದೇ ನೆನೆಯಬೇಕಾದವರು. 

ಅಣ್ಣಾದುರೈ ಅವರು ನಲವತ್ತರ ದಶಕದ ಆರಂಭದಲ್ಲಿ ‘ದ್ರಾವಿಡ ನಾಡು’ ಪತ್ರಿಕೆಯನ್ನು ಶುರುಮಾಡಿದರು. ಅದರ ಸಂಪಾದಕರೂ ಅವರೇ ಆಗಿದ್ದರು. 1947ರ ಆಗಸ್ಟ್ 14ರಂದು ಜವಾಹರ್‍ಲಾಲ್ ನೆಹರೂ ಅವರು ತಮಿಳುನಾಡಿನ ಆಧೀನಮ್ ಮಠಾಧೀಶರು ನೀಡಿದ ಸೆಂಗೋಲ್ ಅಥವಾ ರಾಜದಂಡ ಎನ್ನಲಾಗುವ ಚಿನ್ನದ ಕೋಲನ್ನು ಕೈಯೊಡ್ಡಿ ತೆಗೆದುಕೊಂಡದ್ದನ್ನು ಟೀಕಿಸಿ ಅಣ್ಣಾದುರೈ ಅವರು ಅದೇ ತಿಂಗಳ 24ರಂದು ತಮ್ಮ ಪತ್ರಿಕೆಯಲ್ಲಿ ಒಂದು ಸಂಪಾದಕೀಯ ಲೇಖನ ಬರೆದರು. ಆ ಬರಹವನ್ನು ವಿ. ಗೀತಾ ಅವರು ಇಂಗ್ಲಿಶಿಗೆ ಅನುವಾದಿಸಿದ್ದಾರೆ: https://thewire.in/politics/annadurai-on-sengol ಅ ಅನುವಾದದ ಕನ್ನಡ ಭಾವಾನುವಾದ ಈಕೆಳಗಿದೆ. ಕನ್ನಡಿಸಿದವರು: ಕವಿ, ರಂಗನಿರ್ದೇಶಕ ರಘುನಂದನ.

ಮೂಲ, ತಮಿಳು ಲೇಖನ 1947ರ ಆಗಸ್ಟ್ 24ರಂದು ದ್ರಾವಿಡ ನಾಡು ಪತ್ರಿಕೆಯಲ್ಲಿ ಪ್ರಕಟವಾಯಿತು.

Advertisements

ಅಣ್ಣಾದುರೈ ಅವರ ಬರಹ ದ್ರಾವಿಡನಾಡು ಪತ್ರಿಕೆಯಲ್ಲಿ ಮರುಮುದ್ರಣ ಕಂಡಿದೆ

ತಿರುವಾಡುತುರೈ ಆಧೀನಮ್ ಅವರು ಭಾರತದ ಹೊಸ ಸರಕಾರದ ಪ್ರಧಾನ ಮಂತ್ರಿ ಪಂಡಿತ್ ನೆಹರೂ ಅವರಿಗೆ ಸೆಂಗೋಲನ್ನು ನೀಡಿದ್ದಾರೆ… ಯಾಕೆ ನೀಡಿದ್ದಾರೆ? ಅದೇನು ಉಡುಗೊರೆಯೋ ಅಥವಾ ಮಾಡಿದ ಒಂದು ದಾನವೋ. ಅಥವಾ ತಮಗೆ ಬೇಕಾದ ಪರ್ಮಿಟ್ಟನ್ನು ಪಡೆಯಲು ಅವರಿಗೆ ಸಲ್ಲಿಸಿದ ಸುಂಕವೋ?

ನಾವು ನಿರೀಕ್ಷಿಸಿಯೇ ಇರದ ಬೆಳವಣಿಗೆ ಇದು. ಅನಗತ್ಯವಾದದ್ದು ಕೂಡ. ಇದೆಲ್ಲ ಬರೀ ಅನಗತ್ಯವಾದದ್ದು ಅಷ್ಟೇ ಆಗಿದಿದ್ದರೆ ದೊಡ್ಡ ವಿಷಯವಾಗುತ್ತಿರಲಿಲ್ಲ. ಆದರೆ, ಈ ಕಲಾಪದಿಂದ ಆಳವಾದೊಂದು ಅರ್ಥ ಹೊರಡುತ್ತಿದೆಯಲ್ಲ, ಅಪಾಯ-ಅನಾಹುತಗಳ ಶಕುನವಾಗಿದೆಯಲ್ಲ ಇದು, ಅನ್ನುವುದೀಗ ಆತಂಕದ ಸಂಗತಿ.

ಪಂಡಿತ್ ನೆಹರೂ ಅವರಿಗೆ ಇದರಿಂದೆಲ್ಲ ಏನನ್ನಿಸಿತೋ ನಮಗೆ ಗೊತ್ತಿಲ್ಲ. ಈ ಕೋಲಿನ ಜೊತೆ ತಿರುವಾಡುತುರೈ ಆಧೀನಮ್ ಅವರು ಒಂದು ಪತ್ರವನ್ನೂ ಕಳಿಸಿದರೋ ಇಲ್ಲವೋ, ಗೊತ್ತಿಲ್ಲ. ಆದರೆ, ಇದೀಗ ಪಂಡಿತ್ ನೆಹರೂ ಅವರಿಗೆ ಕೆಲವು ವಿಷಯ ಹೇಳಬೇಕಿದೆ:

ದೇಶದೇಶಗಳ ಇತಿಹಾಸ ಚೆನ್ನಾಗಿ ಬಲ್ಲವರು ನೀವು. ಪಟ್ಟವೇರಿದ ರಾಜನೊಬ್ಬ ತನಗೆ ಗೆಳೆಯರಾದ ಸಿರಿವಂತರು ಮತ್ತು ಬಲಿಷ್ಠರ ಚಾಕರಿಗೆ ತನ್ನ ಪ್ರಜೆಗಳನ್ನು ದೂಡುತ್ತಾನೆ, ದುಡಿಸಿಕೊಳ್ಳುತ್ತಾನೆ. ಅವನ ಆ ಗೆಳೆಯರ ಸುಖಸಂಪತ್ತೆಲ್ಲ ಬರುವುದು, ಆಗುವುದು ಆ ಪ್ರಜೆಗಳ ದುಡಿಮೆಯಿಂದಾಗಿ. ರಾಜನ ಕೋಟೆಯೋ ಬಂಗಾರದ್ದು. ಅದರಲ್ಲಿ ಕೆಲವರಿರುತ್ತಾರೆ: ಆ ಕೋಟೆಯ ಒಳಗೆ ತಮಗೆ ಬೇಕಾದಲ್ಲಿ ಹೋಗಲು, ಬೇಕಾದ್ದನ್ನು ಮಾಡಲು ಅವರಿಗೆ ಅನುಮತಿ ಇರುತ್ತದೆ: ದೈವತಾಮತಧರ್ಮ ಹಾಗೂ ವರ್ಣ ಮತ್ತು ಜಾತಿಗಳ ಬಂಡವಾಳದ ಬಲವಿರುವವರು ಅವರು. ಆದರೆ, ಪ್ರಜಾಸತ್ತೆ-ಪ್ರಜಾರಾಜ್ಯವನ್ನು ಉಳಿಸಿ, ಬೆಳೆಸಬೇಕಾದರೆ, ಆ ಥರದ ಜನರಿಗಿರುವ ಎಲ್ಲ ಅಧಿಕಾರ, ಸ್ಥಾನಮಾನ, ಸವಲತ್ತುಗಳನ್ನು ನಾವು ಕಿತ್ತೊಗೆಯಬೇಕೆಂದು ಹೇಳಬೇಕಾದ್ದೇ ಇಲ್ಲ: ಐತಿಹಾಸಿಕ ಸತ್ಯ ಅದು, ಇತಿಹಾಸದಿಂದ ನಾವು ಕಲಿತ ಪಾಠ. ನಿಮಗೆ ಗೊತ್ತಿಲ್ಲದ ವಿಷಯವಲ್ಲ ಅದು.

WhatsApp Image 2023 05 29 at 7.42.30 PM
ಅಣ್ಣಾದುರೈ

ಹಾಗಾಗಿಯೇ ಆಧೀನಮ್ ಮಠಾಧೀಶರ ಮನಸ್ಸಿನಲ್ಲಿ ಆತಂಕವೊಂದು ಮುಳ್ಳಾಡುತ್ತಿರುತ್ತದೆ. ಅವರಿಗೆ ಹೆದರಿಕೆಯೋ ಹೆದರಿಕೆ, ಆ ಐತಿಹಾಸಿಕ ಸತ್ಯ, ಆ ಪಾಠದಿಂದಾಗಿ ನಿಮ್ಮ ಸರಕಾರವು ತಮ್ಮ ವಿರುದ್ಧ ತಿರುಗಿಬಿಟ್ಟರೆ ಅಂತ! ಅದಕ್ಕೋಸ್ಕರವೇ ಅವರು ಒಂದು ರಾಜದಂಡ, ಬರೀ ಚಿನ್ನದ ರಾಜದಂಡವನ್ನಲ್ಲ, ನವರತ್ನಗಳನ್ನು ಕೂರಿಸಿದ ರಾಜದಂಡವನ್ನು ಹುಟ್ಟುಹಾಕಿ ನಿಮ್ಮ ಕೈಗಿಟ್ಟಿದ್ದಾರೆ. ಅದರ ಹಿಂದೆ ಇರುವುದು ಸ್ವಾರ್ಥಸಾಧನೆಯ ಹುನ್ನಾರ, ಅಷ್ಟೆ, ಮತ್ತೇನೂ ಅಲ್ಲ.

ಆ ಸೆಂಗೋಲು. ಅದು ಒಬ್ಬ ಭಕ್ತ ದೇವರನ್ನು ಕುರಿತು ಶ್ರದ್ದಾಭಕ್ತಿಗಳಿಂದ ಹಾಡಿಹಾಡಿ ಪಡೆದ ವರವಲ್ಲ, ಅದು. ಆಧೀನಮ್‍ ಅವರು ನಿಮಗೆ ಕೊಟ್ಟ ಆ ಉಡುಗೊರೆಯಿದೆಯಲ್ಲ, ಅದು ರೂಪುಗೊಂಡದ್ದು ಸಾಧಾರಣ ಜನರ ದುಡಿಮೆಯಿಂದಾಗಿ. ಹಗಲುರಾತ್ರಿ ಹಸಿದುಕೊಂಡಿರಬೇಕಾದ ಬಡವರ ಬವಣೆಯ ಬಗ್ಗೆ ಯಾವ ಕಾಳಜಿಯೂ ಇಲ್ಲದವರು ಆ ಕೋಲಿನಲ್ಲಿರುವ ಚಿನ್ನದ ವೆಚ್ಚವನ್ನು ಭರಿಸಿದ್ದಾರೆ. ಅದಕ್ಕಾಗಿ ಅವರು ಆ ಬಡವರ ದುಡಿಮೆಯಿಂದ ತಮಗೆ ದಕ್ಕಿದ ದೌಲತ್ತಿನ ದುರುಪಯೋಗ ಮಾಡಿದ್ದಾರೆ; ಬಡರೈತರ ಹೊಟ್ಟೆ ಮೇಲೆ ಹೊಡೆದಿದ್ದಾರೆ; ಕೂಲಿಕಾರ್ಮಿಕರಿಗೆ ಆದಷ್ಟು ಕಮ್ಮಿ ಕೂಲಿ ಹಣ ಕೊಟ್ಟಿದ್ದಾರೆ; ಪಡೆದದ್ದರ ಋಣ, ಮಾಡಿದ ಸಾಲ ತೀರಿಸದೆ, ತಮ್ಮ ಲಾಭವನ್ನು ಗುಣಿಗುಣಿಸಿ ಹೆಚ್ಚು ಮಾಡಿಕೊಂಡಿದ್ದಾರೆ ಅವರು. ತಮ್ಮ ಕೆಟ್ಟ ಕೆಲಸವನ್ನು, ತಾವು ಮಾಡಿದ ಪಾಪವನ್ನು ಮರೆಮಾಚಿ, ದೇವರಿಗೆ ಮೋಸಮಾಡುವುದಕ್ಕಾಗಿ, ಬಂಗಾರದ ಈ ಕೊಡುಗೆಯ ‘ಸೇವೆ’ ಸಲ್ಲಿಸಿದ್ದಾರೆ.

ಮುಂಬರುವ ದಿನಗಳಲ್ಲಿ ಆಡಳಿತ ನಡೆಸುವವರು ತಾವೂ ಇದೇ ರೀತಿ ಮೈಮನಸ್ಸುಗಳನ್ನು ಶೋಷಣೆ ಮಾಡುವ ಜನರಿಂದ ಈ ರಾಜದಂಡವನ್ನು ಪಡೆದುಕೊಂಡರೆ, ಅದು ಸಲ್ಲಹೊಲ್ಲದ ಕೆಲಸವಾಗುತ್ತದೆ, ಮಾಡಬಾರದ ಕೆಲಸವಾಗುತ್ತದೆ, ಅಷ್ಟೇ. ಅನುಮಾನವಿಲ್ಲ.

sengol
ಸೆಂಗೋಲ್ ಒರು ವೆಂದುಗೋಲ್ (ಸೆಂಗೋಲ್: ಒಂದು ಬಿನ್ನಹ) ಎಂಬ ತಲೆಬರಹದೊಂದಿಗೆ ಪ್ರಕಟವಾದ ಲೇಖನದ ನೋಟ. ಚಿತ್ರ: ವಿ. ಗೀತಾ

ಆಧೀನಮ್ ಅವರು ಹೊಸ ಸರಕಾರಕ್ಕೆ ಈ ರಾಜದಂಡವನ್ನು ದಯಪಾಲಿಸಿ ತಮ್ಮ ಕೃಪೆ ತೋರಿಸಿದಂತಾಯಿತಲ್ಲ, ಈ ಸರಕಾರಕ್ಕೆ ತನ್ನ ಕೆಲಸ ಶುರುಮಾಡಲು ಈ ಆಧೀನಮ್ ಮಠಗಳವರ ಅನುಮತಿ ಬೇಕಾಗಿದೆ ಅಂತಾಯಿಲ್ಲ ಅಂತ ಜನ ಆಡಿಕೊಳ್ಳುತ್ತಾರೆ – ಈಗಲೂ, ಮತ್ತು ಇನ್ನು ಮುಂದೆ ಕೂಡ.

ಇದನ್ನು ಓದಿ ಸಂಸತ್ ಭವನ ಉದ್ಘಾಟನೆ ಪಟ್ಟಾಭಿಷೇಕ ಅಲ್ಲ; ರಾಹುಲ್ ಗಾಂಧಿ ಸೇರಿ ಪ್ರತಿಪಕ್ಷಗಳ ಟೀಕೆ

ಆ ಸೆಂಗೋಲನ್ನು ನೋಡಿ. ಚೆಲುವಾದದ್ದು ಅದು, ಹೌದು. ಆದರೆ ಆ ಕೋಲಿನ ತಲೆಭಾಗದಲ್ಲಿರುವ ಆ ಬಸವದೇವರನ್ನಷ್ಟೆ ಕಾಣಬೇಡಿ… ಸಾವಿರಾರು ಎಕರೆ ಹೊಲಗದ್ದೆ ಕಾಣಿ… ಅಲ್ಲಿ ದುಡಿದು, ದುಡಿದು ಬೆಳೆ ತೆಗೆಯುವ ರೈತಾಪಿ ಜನವನ್ನು ಕಾಣಿ… ಅಷ್ಟು ದುಡಿದೂ ದುಖಃದುಮ್ಮಾನ ತಪ್ಪದ ಆ ಜನದ ಬದುಕನ್ನು ಕಾಣಿ… ಅವರ ಹಟ್ಟಿಗಳನ್ನು ಕಾಣಿ, ಅವರ ಬಡತನ ಕಾಣಿ… ಅದರ ಮೇಲೆ ಮೆರೆದಾಡೋ ಆ ರಾಜದಂಡವನ್ನು ಕಾಣಿ… ಹಾಗೇ, ಜಮೀನುದಾರರನ್ನೂ ಕಾಣಿ, ಅವರ ಬಂಗಲೆಗಳನ್ನು ಕಾಣಿ…, ಚಿನ್ನದ ಅವರ ಊಟದ ತಟ್ಟೆಗಳನ್ನು ಕಾಣಿ… ಮತ್ತು, ಮಠಮಾನ್ಯಗಳನ್ನು ಕಾಣಿ… ಮಠಾಧೀಶರ ಮಂಡೆಯ ಜಡೆ ಕಾಣಿ.. ಅವರ ಕೊರಳಿನ ಸರ ಮಾಲೆಗಳನ್ನು ಕಾಣಿ… ಅವರ ಕಿವಿಯ ಚಿನ್ನದೋಲೆ ಕಾಣಿ… ಅವರ ಬಂಗಾರದ ಮೆಟ್ಟು ಕಾಣಿ.

ಪಂಡಿತ್ ನೆಹರೂ ಅವರ ಕೈಸೇರಿರುವ ಈ ಸೆಂಗೋಲು ಒಂದು ಉಡುಗೊರೆಯಲ್ಲ. ಅಥವಾ, ಪ್ರೀತಿಪ್ರೇಮದ ಗುರುತಲ್ಲ. ಅಥವಾ, ದೇಶಪ್ರೇಮದ ಸಂಕೇತವೂ ಅಲ್ಲ. ಇದು ಇನ್ನು ಮುಂದೆ ಭಾರತದಲ್ಲಿ ಸರಕಾರ ನಡೆಸಲಿರುವ ನಾಯಕರುಗಳಲ್ಲಿ ಆಧೀನಮ್ ಮಠಮಾನ್ಯಗಳವರು ಸಲ್ಲಿಸಿದ ಕೋರಿಕೆ, ಅವರಿಗೆ ಬಿತ್ತರಿಸಿದ ಒಂದು ಸಂದೇಶ: ಆಧೀನಮ್ ಮಠಮಾನ್ಯಗಳ ಸಂಪತ್ತು, ದೌಲತ್ತುಗಳಿಗೆ ಸಂಚಕಾರ ತರಬೇಡಿ. ಇಗೋ, ನಾವು ನಿಮ್ಮ ಗೆಳೆಯರು… ನೀವು ನಮಗಿದ್ದರೆ, ನಾವು ನಿಮಗೆ ಎಂಬಂತೆ.

ಇದನ್ನು ಓದಿ ದೆಹಲಿ ವಿವಿಯಲ್ಲಿ ಗಾಂಧಿ ಚಿಂತನೆ ಬದಲಿಗೆ ಸಾವರ್ಕರ್ ಚಿಂತನೆ ಓದಿಗೆ ಒತ್ತು; ಅಧ್ಯಾಪಕರ ವಿರೋಧ

ಈ ಕೋಲು, ಇದು ಸಂನ್ಯಾಸತ್ವದ ಪೋಷಾಕಿನಲ್ಲಿರುವ ಈ ಮಠಾಧೀಶರು ಬಿಗಿಹಿಡಿದು ಕೂತಿರುವ ಚಿನ್ನದಿಂದ ಆದದ್ದು. ಆದರೆ ಇದು ಅವರ ಹತ್ತಿರ ಇರುವ ಹೊನ್ನು, ಹಣದ ಒಂದು ಸಣ್ಣ ಕಣಕ್ಕೆ ಸಮ, ಅಷ್ಟೇ. ಒಂದು ವೇಳೆ, ಮಠಮಾನ್ಯಗಳಲ್ಲಿ ಅಡಕವಾಗಿರುವ ಆ ಎಲ್ಲ ಚಿನ್ನವನ್ನು ಸರಕಾರವು ಕೈವಶಮಾಡಿಕೊಂಡು, ದೇಶದ ಜನರ ಹಿತಕ್ಕಾಗಿ ಬಳಸಿದರೆ, ಆಗ ಈ ಕೋಲು ಕೇವಲ ಒಂದು ಆಲಂಕಾರಿಕ ಸಂಕೇತವಾಗಿ ಉಳಿಯುವುದಿಲ್ಲ. ಆಗ, ಆಗ ಮಾತ್ರ ಇದರ ಸದುಪಯೋಗ ಆದಂತಾಗುತ್ತದೆ.

ಮೂಲ: ಸಿ ಎನ್‌ ಅಣ್ಣಾದುರೈ

ಕನ್ನಡಕ್ಕೆ: ರಘುನಂದನ

WhatsApp Image 2023 05 29 at 7.32.13 PM
ರಘುನಂದನ
+ posts

ಕವಿ, ನಾಟಕಕಾರ, ರಂಗನಿರ್ದೇಶಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ರಘುನಂದನ
ರಘುನಂದನ
ಕವಿ, ನಾಟಕಕಾರ, ರಂಗನಿರ್ದೇಶಕ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X