ಹಸುವಿನ ಹರಿದ ಕೆಚ್ಚಲಿನಿಂದ ದ್ವೇಷದ ವಿಷ ಹಿಂಡಲು ಹೊರಟವರು…

Date:

Advertisements

ಗೋವನ್ನು ತಮ್ಮ ತೆವಲಿನ ರಾಜಕಾರಣಕ್ಕೆ ಬಳಸುತ್ತಾ ಬಂದಿರುವ ಬಿಜೆಪಿಯವರಿಗೆ ಭಾನುವಾರ ಇಡೀ ದಿನ ಗೋವಿನ ಕೊಟ್ಟಿಗೆಯೇ ರಾಜಕೀಯ ಚಟುವಟಿಕೆಯ ತಾಣವಾಗಿತ್ತು. ಹಿಂದೂ ಪರ ಸಂಘಟನೆಯ ಮುಖಂಡರು, ಬಿಜೆಪಿ ನಾಯಕರಾದ ಆರ್ ಅಶೋಕ್, ಪಿ ಸಿ ಮೋಹನ್, ರವಿಕುಮಾರ್, ಅಶ್ವತ್ಥನಾರಾಯಣ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಎಂದಿನ ಶೈಲಿಯಲ್ಲಿ ಕೋಮುದ್ವೇಷ ಕಾರಲು ಶುರು ಮಾಡಿದ್ದರು. ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ಪ್ರಮೋದ್‌ ಮುತಾಲಿಕ್‌, ಸಿ ಟಿ ರವಿ ಹೀಗೆ ಹಲವು ಬೆಂಕಿ ಭಾಷಣಕಾರರ ಹೇಳಿಕೆಗಳನ್ನು ಶರವೇಗದಲ್ಲಿ ಮಾಧ್ಯಮಗಳು ಪಡೆದುವು.

ಬೆಂಗಳೂರಿನ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರ ಭಾನುವಾರ (ಜನವರಿ 12) ಮನ ಕಲಕುವ ಘಟನೆಯೊಂದಕ್ಕೆ ಸಾಕ್ಷಿಯಾಗಿತ್ತು. ಮೂಕ ಪ್ರಾಣಿಗಳ ಮೇಲೆ ಮನುಷ್ಯನ ಕ್ರೌರ್ಯದ ವಿಕೃತ ರೂಪದ ದರ್ಶನವಾಗಿತ್ತು. ಕಟ್ಟಿ ಹಾಕಿದ್ದ ಹಸುಗಳ ಕೆಚ್ಚಲನ್ನು ವಿಕೃತನೊಬ್ಬ ಕೊಯ್ದು ಹಾಕಿದ್ದ, ಬೆಳಗಾಗುವಾಗ ಕೆಚ್ಚಲಿನಿಂದ ರಕ್ತ ಬಸಿದು ಹೋಗಿತ್ತು. ಮುಂಜಾನೆ ನಾಲ್ಕರ ಸುಮಾರಿಗೆ ಹಸುಗಳ ಮಾಲೀಕ ಕರ್ಣ ಅವರಿಗೆ ತಮ್ಮ ಹಸುಗಳ ಕೆಚ್ಚಲಿಗೆ ಯಾರೋ ಗಾಯ ಮಾಡಿರುವುದು ತಿಳಿಯುತ್ತದೆ. ಅವರೇ ಹೇಳುವ ಪ್ರಕಾರ ಮೊಲೆ ತೊಟ್ಟುಗಳು ತುಂಡಾಗಿದ್ದವು. ಈ ಬಗ್ಗೆ ಅವರು ಕಾಟನ್​ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ​ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಪಕ್ಕದಲ್ಲೇ ಇದ್ದ ಪಶು ಆಸ್ಪತ್ರೆಯಲ್ಲಿ ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗಿತ್ತು.

ಈ ಸುದ್ದಿ ಎಂತಹ ಕಲ್ಲು ಹೃದಯಗಳನ್ನೂ ಕಲಕುವ ಸುದ್ದಿ. ಇಂತಹ ಘಟನೆಗಳನ್ನು ಮೊದಲ ಬಾರಿಗೆ ಕೇಳಿಸಿಕೊಂಡವರೇ ಹೆಚ್ಚು. ಹಸುಗಳು ಬೆಳೆ ತಿಂದವು ಎಂದು ಹೊಡೆಯುವುದು, ಕಟ್ಟಿ ಹಾಕಿ ಹಿಂಸೆ ಕೊಟ್ಟಿರುವುದು, ಕಾಲ್ಮುರಿಯುವಂತೆ ಹಲ್ಲೆ ಮಾಡಿರುವುದು, ವಿಷ ಹಾಕಿ ಕೊಂದಿರುವುದನ್ನು ಕೇಳಿರುತ್ತೇವೆ ನೋಡಿಯೂ ಇರುತ್ತೇವೆ. ಆದರೆ, ಹಾಲು ಕೊಡುವ ಹಸುವಿನ ಕೆಚ್ಚಲನ್ನು ಕೊಯ್ದು ಹಾಕಿದ ಘಟನೆ ಹಿಂದೆಂದೂ ನಡೆದಿರಲ್ಲ. ಮೂಕ ಪ್ರಾಣಿಯ ಮೇಲೆ ಇಷ್ಟೊಂದು ಕ್ರೌರ್ಯ, ಮಾನಸಿಕ ಸ್ಥಿತಿ ಸರಿಯಿರುವ ವ್ಯಕ್ತಿಗಳು ಮಾಡಲು ಸಾಧ್ಯವೇ ಇಲ್ಲ. ಆದರೆ ಅಲ್ಲೂ ಆರೋಪಿಯ ಧರ್ಮ ಹುಡುಕುವ ಕೆಲಸ, ದ್ವೇಷದ ಕಾರಣ ಹುಡುಕುವ ಯತ್ನ ನಡೆದಿದ್ದು ಮಾತ್ರ ವಿಪರ್ಯಾಸ.

Advertisements

ಗೋವನ್ನು ತಮ್ಮ ತೆವಲಿನ ರಾಜಕಾರಣಕ್ಕೆ ಬಳಸುತ್ತಾ ಬಂದಿರುವ ಬಿಜೆಪಿಯವರಿಗೆ ಭಾನುವಾರ ಚಾಮರಾಜಪೇಟೆಯ ಗೋವಿನ ಕೊಟ್ಟಿಗೆಯೇ ರಾಜಕೀಯ ಚಟುವಟಿಕೆಯ ತಾಣವಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಹಿಂದುತ್ವ ಸಂಘಟನೆ ಮುಖಂಡರು, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿ ಸಿ ಮೋಹನ್, ಎಂಎಲ್​ಸಿ ರವಿಕುಮಾರ್, ಅಶ್ವತ್ಥನಾರಾಯಣ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಎಂದಿನ ಶೈಲಿಯಲ್ಲಿ ಕೋಮುದ್ವೇಷ ಕಾರಲು ಶುರು ಮಾಡಿದ್ದರು. ಕೋಮುವಾದಿ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ, ಪ್ರಮೋದ್‌ ಮುತಾಲಿಕ್‌, ಸಿ ಟಿ ರವಿ ಹೀಗೆ ಹತ್ತು ಹಲವು ಬೆಂಕಿ ಭಾಷಣಕಾರರ ಹೇಳಿಕೆಗಳನ್ನು ಶರವೇಗದಲ್ಲಿ ಮಾಧ್ಯಮಗಳು ಪಡೆದುವು. ಬೊಮ್ಮಾಯಿ, ಜಗದೀಶ್‌ ಶೆಟ್ಟರ್‌ ತರಹದ ಮಾಜಿ ಮುಖ್ಯಮಂತ್ರಿಗಳು, ಮಾಜಿ ಗೃಹ ಸಚಿವರು “ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿರುವ ಸಂಕೇತ” ಎಂದರು. ಮಾಧ್ಯಮಗಳು ಇಂತಹ ವಿಚಾರಗಳಲ್ಲಿ ಎಂದೂ ಸೂಕ್ಷ್ಮ ಸಂವೇದನೆಯಿಂದ ವರ್ತಿಸಿಲ್ಲ. ಅದೇ ಪ್ರಕಾರ ಚಾಮರಾಜಪೇಟೆಯಲ್ಲೂ ವರ್ತಿಸಿದವು.

Caw 1
ಸಂಸದ ಪಿ ಸಿ ಮೋಹನ್

ವಿಪಕ್ಷ ನಾಯಕ ಆರ್‌ ಅಶೋಕ್‌ ಸ್ಥಳಕ್ಕೆ ಹೋಗಿ, “ಕಾಂಗ್ರೆಸ್ ಸರ್ಕಾರ ಹೊಸ ವರ್ಷಕ್ಕೆ ಬೆಲೆ ಏರಿಕೆಯ ಕೊಡುಗೆ ನೀಡಿದೆ.‌ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಹಸುವಿನ ಕೆಚ್ಚಲು ಕೊಯ್ದು ಹಾಕುವ ಕೊಡುಗೆಯನ್ನು ನೀಡಿದೆ. ಇದು ಜಿಹಾದಿ ಮನಸ್ಥಿತಿಯವರ ಕೆಲಸ” ಎಂದು ನೇರವಾಗಿ ಮುಸ್ಲಿಂ ದ್ವೇಷ ಕಾರಿಕೊಂಡರು. ಅಷ್ಟೇ ಅಲ್ಲ ಈ ಕೃತ್ಯಕ್ಕೆ ವಕ್ಫ್‌ ವಿಚಾರವನ್ನೂ ಲಿಂಕ್‌ ಮಾಡಿದರು. “ನೂರಾರು ವರ್ಷಗಳಿಂದ ಚಾಮರಾಜಪೇಟೆಯಲ್ಲಿ ಪಶು ಆಸ್ಪತ್ರೆ ಇದೆ. ಈ ಭೂಮಿಯನ್ನು ವಕ್ಫ್ ಮಂಡಳಿಗೆ ಸೇರಿಸಲು ಪ್ರಯತ್ನ ನಡೆದಿತ್ತು. ಆಗ ಸರ್ಕಾರದ ವಿರುದ್ಧ ಪ್ರತಿಭಟಿಸುವುದರ ಜತೆಗೆ, ನ್ಯಾಯಾಲಯದ ಮೊರೆ ಹೋಗಲಾಯಿತು. ಪ್ರತಿಭಟನೆಯ ಸಮಯದಲ್ಲಿ ಇವೇ ಹಸುಗಳನ್ನು ತೋರಿಸಲಾಗಿತ್ತು. ಅದಕ್ಕಾಗಿಯೇ ಮಚ್ಚು, ಡ್ರಾಗರ್ ಬಳಸಿ ಹಸುಗಳ ಕೆಚ್ಚಲು ಕೊಯ್ದು, ಕಾಲು ಕತ್ತರಿಸಲಾಗಿದೆ” ಎಂದು ಓತಪ್ರೋತವಾಗಿ ಸುಳ್ಳು ಸುಳ್ಳೇ ಹರಿಬಿಟ್ಟರು. ಕಾಲು ಕತ್ತರಿಸಿದ ಹಸುವನ್ನು ಯಾವ ಮಾಧ್ಯಮಗಳೂ ತೋರಿಸಿಲ್ಲ.

ಅಷ್ಟು ಸಾಲದೆಂಬಂತೆ ಕಾಂಗ್ರೆಸ್‌ ನಾಯಕರ ಮೇಲೂ ಕಾರಿಕೊಂಡರು. “ಕಾಂಗ್ರೆಸ್ ನಾಯಕರು ಮತಕ್ಕಾಗಿ ದೇವಸ್ಥಾನಕ್ಕೆ ಹೋಗುತ್ತಾರೆ‌. ಆದರೆ ಯಾರಿಗೂ ಹಿಂದೂ ಧರ್ಮದ ಬಗ್ಗೆ ಶ್ರದ್ಧೆ ಇಲ್ಲ. ಹಿಂದೂಗಳಲ್ಲಿ ಭೀತಿ ಹುಟ್ಟಿಸಲು ಜಿಹಾದಿಗಳು ಹೀಗೆ ಮಾಡಿದ್ದರೂ ಕಾಂಗ್ರೆಸ್ ನಾಯಕರು ಇದನ್ನು ಖಂಡಿಸುವುದಿಲ್ಲ. ಈಗ ಯಾವ ಮುಖ ಇಟ್ಟುಕೊಂಡು ಸಂಕ್ರಾಂತಿ ಆಚರಣೆ ಮಾಡುತ್ತಾರೆ? ಸರ್ಕಾರ ಕ್ರಮ ಕೈಗೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಿಸುತ್ತೇವೆ” ಎಂದು ಎಚ್ಚರಿಕೆ ನೀಡಿದರು. ವಿಪಕ್ಷ ನಾಯಕನ ಈ ಮಾತಿನಲ್ಲಿ ಅವರ ಅಜೆಂಡಾ ಸ್ಪಷ್ಪವಾಗಿದೆ. ಅವರಿಗೆ ಈ ವಿಚಾರವನ್ನು ಒಂದು ಹೀನ ಕೃತ್ಯ ಎಂದಷ್ಟೇ ನೋಡುವ ಮನಸ್ಥಿತಿ ಇರಲಿಲ್ಲ. ಅಲ್ಲಿ ಕಾಂಗ್ರೆಸ್‌ನವರು ಇಂತಹ ಕ್ರಿಮಿನಲ್‌ಗಳ ಪೋಷಕರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ, ಗೋಮಾತೆಯ ಕೆಚ್ಚಲನ್ನು ಕತ್ತರಿಸಿ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂಬ ಸಂದೇಶವನ್ನು ತಲುಪಿಸುವುದು ಮಾತ್ರ ಮುಖ್ಯವಾಗಿತ್ತು. ಪಕ್ಕಾ ರಾಜಕೀಯ ಹೇಳಿಕೆ ಬಿಟ್ಟು ಬೇರೇನೂ ಇರಲಿಲ್ಲ. ಈ ಪ್ರಕರಣದಲ್ಲಿ ಕಾಂಗ್ರೆಸ್‌ ಪಕ್ಷ ಅಥವಾ ಸರ್ಕಾರ ಹೇಗೆ ಆರೋಪಿಯಾಗುತ್ತದೆ? ಹಸುಗಳ ಮಾಲೀಕ ಕರ್ಣ ಸಹ ಬಿಜೆಪಿಯವರ ಹೇಳಿಕೆಗೆ ಪೂರಕವಾಗಿ ಸಚಿವ ಜಮೀರ್‌ ಮೇಲೆ ಆರೋಪ ಮಾಡಿದ್ರು. ಈ ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಚಿವ ಇರುವುದೂ ಬಿಜೆಪಿಗೆ ಸಹಿಸಲಾಗುತ್ತಿಲ್ಲ ಎಂಬುದು ಕೂಡ ಇಲ್ಲಿ ಮುಖ್ಯ.

ಹಗಲಿಡೀ ಬಿಜೆಪಿ ನಾಯಕರು ಬಾಯಿಗೆ ಬಂದಂತೆ ಹೇಳಿಕೆ ಕೊಡುತ್ತಾ ಹೋದರೆ, ರಾತ್ರಿಯಾಗುತ್ತಿದ್ದಂತೆ ಹಸುಗಳ ಕೆಚ್ಚಲು ಕೊಯ್ದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ಬಿಹಾರ ಮೂಲದ ಶೇಖ್ ನಸ್ರೂ ಬಂಧಿತ ಆರೋಪಿ. ಮದ್ಯದ ನಶೆಯಲ್ಲಿ ಕೃತ್ಯ ನಡೆಸಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಕೃತ್ಯ ನಡೆದ ಸ್ಥಳದಿಂದ ಸುಮಾರು 50 ಮೀಟರ್‌ ದೂರ ಇರುವ ಪ್ಲಾಸ್ಟಿಕ್ ಹಾಗೂ ಬ್ಯಾಗ್‌ ಹೊಲಿಗೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಆರೋಪಿ ನಸ್ರೂ ಒಬ್ಬನೇ ಕೃತ್ಯ ಎಸಗಿದ್ದಾನೆ. ಬೇರೆ ಯಾರೂ ಭಾಗಿ ಆಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಘಟನೆ ನಡೆದಿದ್ದು, ಪಶು ಆಸ್ಪತ್ರೆಯಲ್ಲಿ ಹಸುಗಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಮೂರು ಹಸುಗಳೂ ಪ್ರಾಣಾಪಾಯದಿಂದ ಪಾರಾಗಿವ. ಆರೋಪಿಯ ವಿರುದ್ಧ ಬಿಎನ್ಎಸ್ ಸೆಕ್ಷನ್ 325 ಅಡಿ ಪ್ರಕರಣ ದಾಖಲಿಸಲಾಗಿದ್ದು, ಜನವರಿ 24ರ ತನಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಮಧ್ಯೆ ಬಳ್ಳಾರಿ ಪ್ರವಾಸದಲ್ಲಿದ್ದ ಸಚಿವ ಜಮೀರ್‌ ಅಹಮದ್‌ ಖಾನ್‌ ನೇರವಾಗಿ ಹಸುವಿನ ಮಾಲೀಕರ ಮನೆಗೆ ಭೇಟಿ ಕೊಟ್ಟು ತಕ್ಷಣವೇ ಮೂರು ಹಸುಗಳನ್ನು ಕೊಡಿಸಿದ್ದಾರೆ. ಅಲ್ಲಿಗೆ ಬಿಜೆಪಿ ನಾಯಕರ ಷಡ್ಯಂತ್ರವೊಂದು ತಣ್ಣಗಾಯಿತು. ವಿಪಕ್ಷ ನಾಯಕ ಅಶೋಕ್‌ಗೆ ಈಗ ಆರೋಪಿಯ ಹಿಂದೆ ಇರುವ ವ್ಯಕ್ತಿಗಳು ಬೇಕಂತೆ! ಇಲ್ಲದ ವ್ಯಕ್ತಿಗಳನ್ನು ಪೊಲೀಸರು ಎಲ್ಲಿಂದ ಹುಡುಕಿ ತರೋದು?

Cow attacker
ಆರೋಪಿ ಶೇಖ್ ನಸ್ರೂ

ಟಾರ್ಗೆಟ್‌ ಜಮೀರ್‌

ಚಾಮರಾಜಪೇಟೆಗೆ ಭೇಟಿ ಕೊಟ್ಟಾಗ ವಿಪಕ್ಷ ನಾಯಕ ಆರ್‌ ಅಶೋಕ್‌ ಜೊತೆ ಗೋ ರಕ್ಷಣೆಯ ಹೆಸರಿನಲ್ಲಿ ಸದಾ ಪುಂಡಾಟ ಮೆರೆಯುವ ಹತ್ತಾರು ಪ್ರಕರಣಗಳ ಆರೋಪಿ, ಸಾತನೂರಿನ ಇದ್ರಿಸ್‌ ಪಾಷಾ ಕೊಲೆ ಆರೋಪದಲ್ಲಿ ಜಾಮೀನಿನ ಮೇಲೆ ಹೊರಗಿರುವ ಪುನೀತ್‌ ಕೆರೆಹಳ್ಳಿ ಇದ್ದದ್ದು ಇಡೀ ಪ್ರಕರಣವನ್ನು ಬಿಜೆಪಿ ಮತ್ತು ಹಿಂದುತ್ವ ಕಾರ್ಯಕರ್ತರು ಯಾವ ದಿಕ್ಕಿಗೆ ಕೊಂಡೊಯ್ಯಲು ಹೊಂಚು ಹಾಕಿದ್ರು ಎಂಬುದನ್ನು ತೋರಿಸುತ್ತಿತ್ತು. ಆದರೆ ಅದಕ್ಕೆ ಹೆಚ್ಚು ಆಯಸ್ಸು ಇರಲಿಲ್ಲ. ಅದು ಈ ನಾಡಿನ ಪುಣ್ಯ. ಅಷ್ಟೇ ಅಲ್ಲ ಆರೋಪಿ ಸ್ಥಳೀಯ ವ್ಯಕ್ತಿಯಾಗಿದ್ರೂ ಇಂದು ಚಾಮರಾಜಪೇಟೆ ಕೊತ ಕೊತ ಕುದಿಯುವಂತೆ ಬಿಜೆಪಿ ನೋಡಿಕೊಳ್ಳುತ್ತಿತ್ತು.

ನಿವೃತ್ತ ಐಪಿಎಸ್‌ ಅಧಿಕಾರಿ ಬಿಜೆಪಿ ಮುಖಂಡ ಭಾಸ್ಕರ ರಾವ್‌ ಅವರು ಪ್ರೆಸ್‌ಮೀಟ್‌ ಮಾಡಿ, “ಚಾಮರಾಜಪೇಟೆಯಿಂದ ಹಿಂದೂಗಳನ್ನು ಓಡಿಸಲು ಷಡ್ಯಂತ್ರ ನಡೆಸಲಾಗಿದೆ” ಎಂದು ಬೇಜವಾಬ್ದಾರಿಯ ಹೇಳಿಕೆ ಕೊಟ್ಟಿದ್ದರು. ಈ ಪ್ರಕರಣಕ್ಕೆ ಜಮೀರ್‌ ಅಹಮದ್‌ ಕಾರಣ ಎಂಬ ಆರೋಪ ಮಾಡಿದ್ದರು. ಕೆ ಎಸ್‌ ಈಶ್ವರಪ್ಪನವರು “ಹಿಂದೂಗಳ ತಾಳ್ಮೆ ಪರೀಕ್ಷೆ ಮಾಡಬೇಡಿ” ಎಂಬ ಎಚ್ಚರಿಕೆ ನೀಡಿದ್ದರು. ಒಟ್ಟಿನಲ್ಲಿ ಟಾರ್ಗೆಟ್‌ ಜಮೀರ್‌ ಎಂಬುದು ಸ್ಪಷ್ಟವಾಗಿತ್ತು.

ಹದಗೆಟ್ಟಿದ್ದು ಬಿಜೆಪಿ ಮನಸ್ಥಿತಿ

ಬಿಜೆಪಿ ನಾಯಕರಿಗೆ ತಮ್ಮ ಕೋಮು ದ್ವೇಷದ ರಾಜಕಾರಣಕ್ಕೆ ಕರ್ನಾಟಕ ಹೆಚ್ಚಿನ ಫಸಲು ನೀಡಲ್ಲ ಎಂಬ ಅರಿವು ಇದ್ದಂತಿಲ್ಲ. ಅವರದ್ದು ಅಧಿಕಾರ ಇದ್ದಾಗಲೂ, ಇಲ್ಲದಿದ್ದಾಗಲೂ ಒಂದೇ ಶೈಲಿಯ ರಾಜಕಾರಣ. ಯಾವುದೇ ಅಪರಾಧ ನಡೆದರೂ, ಹಲ್ಲೆ- ಕೊಲೆ ನಡೆದರೆ ಅಲ್ಲಿ ತಮ್ಮ ಬೇಳೆ ಹೇಗೆ ಬೇಯಿಸಿಕೊಳ್ಳುವುದು ಹೇಗೆ ಎಂಬ ಲೆಕ್ಕಾಚಾರಕ್ಕೆ ಬಿಜೆಪಿ ನಾಯಕರು ಯಾವುದೇ ಮುಜುಗರ ಇಲ್ಲದೇ ಅಣಿಯಾಗುತ್ತಾರೆ. ಸಂತ್ರಸ್ತರು ಹಿಂದೂ ಆಗಿದ್ದರೆ ಸಾಕು ಅಪರಾಧಿ ಮುಸ್ಲಿಂ ಆಗಿರುತ್ತಾನೆ ಎಂಬ ನಿರ್ಧಾರಕ್ಕೆ ಬರುತ್ತಾರೆ. ಇದು ಅಪಾಯಕಾರಿ. ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಹಿಂದೂ ಕಾರ್ಯಕರ್ತರನ್ನು ಮುಸ್ಲಿಂ ಯುವಕರು ಹತ್ಯೆ ಮಾಡಿದಾಗ ಕಾಂಗ್ರೆಸ್‌ ಬೆಂಬಲದಿಂದ ಅವರು ಹಿಂದೂ ಕಾಯಕರ್ತರ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಮಾಡಿದ್ದರು. ಕಾಂಗ್ರೆಸ್‌ ಅಧಿಕಾರದಲ್ಲಿರುವಾಗಲೂ ಅದೇ ಆರೋಪ. ಈಗ ಪ್ರತಿಯೊಂದು ಚಿಕ್ಕಪುಟ್ಟ ಅಪರಾಧ ನಡೆದಾಗಲೂ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಅಂತಾರೆ. ಹಾಗಿದ್ದರೆ ತಮ್ಮ ಕೈಯಲ್ಲಿ ಅಧಿಕಾರ ಇದ್ದಾಗ ಆಗಿದ್ದೇನು?

ಹಸುವಿನ ಕೆಚ್ಚಲು ಕೊಯ್ಯುವಂತಹ ಪಾಪ ಕೃತ್ಯ ಮಾಡಿದವನಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸುವುದು ನಾಗರಿಕ ಸಮಾಜದ ಕರ್ತವ್ಯ. ಆದರೆ ಅಲ್ಲಿ ರಾಜಕೀಯ ಕೆಸರೆರಚಾಟ ಮಾಡುವವರನ್ನು ಒದ್ದು ಓಡಿಸುವ ಧೈರ್ಯ ಕೂಡಾ ನಾಗರಿಕ ಸಮಾಜ ಮಾಡಬೇಕಿದೆ. ಮಾಧ್ಯಮಗಳು ರಾಜ್ಯದ ಮೂಲೆ ಮೂಲೆಯಿಂದ ಕೋಮು ಪ್ರಚೋದಕರ ಹೇಳಿಕೆಗಳನ್ನು ಪಡೆದ ಉದ್ದೇಶವೇನು? ಇಲ್ಲಿ ಒಂದು ಕ್ರೈಂ ನಡೆದಿದೆ. ಪೊಲೀಸರು ಅವರ ಕೆಲಸ ಮಾಡುತ್ತಾರೆ. ಈ ಮಧ್ಯೆ ಬಿಜೆಪಿಯ ಅಜೆಂಡಾಗಳಿಗೆ ಟ್ರೆಂಡ್‌ ಸೆಟ್‌ ಮಾಡುವುದು ಮಾಧ್ಯಮಗಳ ಕೆಲಸವೇ?

ಜಮೀರ್‌ ಖಾನ್‌ ೧
ಹಸುವಿನ ಮಾಲೀಕರನ್ನು ಭೇಟಿಯಾದ ಸಚಿವ ಜಮೀರ್‌ ಅಹಮದ್‌ ಖಾನ್

ಆರ್‌ ಅಶೋಕ್‌ ಹೇಳಿದ್ದೇನು, ನಿಜವೇನು?

ವಿಪಕ್ಷ ನಾಯಕ ಆರ್ ಅಶೋಕ್‌ ಮಾಧ್ಯಮಗಳ ಮುಂದೆ ಮಾತನಾಡುತ್ತಾ, ಹಸುಗಳ ಮಾಲೀಕ ಕರ್ಣ ಆರೆಸ್ಸೆಸ್‌ ಕಾರ್ಯಕರ್ತ, ಹಿಂದೂಪರ ಹೋರಾಟಗಾರ. ಇಲ್ಲಿನ ಪಶು ಆಸ್ಪತ್ರೆ ಉಳಿಸುವ ಹೋರಾಟದಲ್ಲಿ ಆತ ಮತ್ತು ಇದೇ ಹಸುಗಳು ಭಾಗಿಯಾಗಿದ್ದವು. ಆ ಕಾರಣಕ್ಕಾಗಿ ಹಸುವಿನ ಕೆಚ್ಚಲನ್ನು ಕೊಯ್ದು ಹಿಂಸೆ ನೀಡಲಾಗಿದೆ ಎಂದು ಹೇಳಿದ್ದರು. ಅಂದ್ರೆ ಆರೆಸ್ಸೆಸ್‌ ಕಾರ್ಯಕರ್ತ, ಹಿಂದೂಪರ ಹೋರಾಟಗಾರ ಎಂಬುದು ತಾವು ಧಾವಿಸಿ ಬರಲು ಕಾರಣವೇ? ಈ ಪ್ರಕರಣದಲ್ಲಿ ವಕ್ಫ್‌ ವಿಚಾರ ಎಳೆದು ತಂದ ಬಿಜೆಪಿ ನಾಯಕರು ಆಕಾಶದತ್ತ ಉಗುಳಿದಂತಾಯ್ತು.

ಈಗ ಸಿಕ್ಕಿ ಬಿದ್ದ ಆರೋಪಿಗೆ ಅಂತಹ ಯಾವುದೇ ಉದ್ದೇಶ ಇರಲಿಕ್ಕಿಲ್ಲ. ಬಿಹಾರದಿಂದ ಬಂದು ಇಲ್ಲಿ ಕೂಲಿ ಮಾಡುತ್ತಿರುವ ವ್ಯಕ್ತಿ ಒಬ್ಬನೇ ಈ ಕೃತ್ಯ ಮಾಡಿದ್ದಾನೆ. ಅಷ್ಟೇ ಅಲ್ಲ ಕುಡಿದ ಮತ್ತಿನಲ್ಲಿ ಈ ಕೃತ್ಯ ಮಾಡಿರುವುದಾಗಿ ಪೊಲೀಸರ ಮುಂದೆ ಹೇಳಿದ್ದಾನೆ. ಆತ ಬಳಸಿದ್ದು ಬ್ಲೇಡು ಎಂದೂ ಗೊತ್ತಾಗಿದೆ. ಅಶೋಕ್‌ ಹೇಳುವಂತೆ ಕೆಚ್ಚಲು ಕೊಯ್ಯಲು ಡ್ರ್ಯಾಗರ್‌, ಮಚ್ಚು ಬಳಸುವ ಅಗತ್ಯ ಇಲ್ಲ. ಅಷ್ಟೇ ಅಲ್ಲ ಆ ಗಾಯ ನೋಡಿದ ಕೂಡಲೇ ಪಶು ವೈದ್ಯರೇ ಯಾವ ಆಯುಧದಿಂದ ಗಾಯ ಆಗಿದೆ ಎಂದು ಹೇಳಿ ಬಿಡುತ್ತಾರೆ. ಅಲ್ಲಿಗೆ ಒಬ್ಬ ವಿಪಕ್ಷ ನಾಯಕ ರಾಜ್ಯದ ಜನರ ಮುಂದೆ ಹೇಳಿದ್ದು ಹಸಿ ಹಸಿ ಸುಳ್ಳು ಎಂಬುದು ಬಯಲಾಗಲು ಹೆಚ್ಚು ಸಮಯ ಬೇಕಿರಲಿಲ್ಲ. ಘಟನೆ ಖಂಡಿಸುವುದು, ಕಾನೂನು ಕ್ರಮಕ್ಕೆ ಒತ್ತಾಯಿಸುವುದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಪ್ರತಿ ಘಟನೆಗೂ ಕೋಮು ಬಣ್ಣ ಬಳಿಯುವುದು ಮಾತ್ರ ಬಿಜೆಪಿಯವರ ಲಕ್ಷಣ.

ಗೋ ರಾಜಕಾರಣ

ಗೋವಿನ ವಿಚಾರದಲ್ಲಿ ಇಡೀ ದೇಶದಲ್ಲಿ ಮುಸ್ಲಿಮರನ್ನು ಬಲಿಪಶು ಮಾಡಲಾಗುತ್ತಿದೆ. ಗೋಮಾತೆ ಎಂದು ಕರೆದು ರಾಜಕೀಯ ಲಾಭಕ್ಕಾಗಿ ಮುಸ್ಲಿಮರು ಗೋ ಹಂತಕರು ಎಂಬ ನರೇಟಿವ್‌ ಕಟ್ಟಲಾಗುತ್ತಿದೆ. ಆದರೆ ಈ ದೇಶದಲ್ಲಿ ಹಿಂದೂಗಳೂ ಗೋಮಾಂಸ ಸೇವಿಸುತ್ತಾರೆ. ಗೋಮಾಂಸ ರಫ್ತು ಮಾಡುವ ಕಂಪನಿ ಮಾಲೀಕರಲ್ಲಿ ಹಿಂದೂ, ಮುಸ್ಲಿಂ ಮಾತ್ರವಲ್ಲ ಜೈನರೂ ಇದ್ದಾರೆ. ಅಷ್ಟೇ ಏಕೆ ಬಿಜೆಪಿ ಮತ್ತು ಸಂಘಪರಿವಾರ ಹೆಚ್ಚು ಪ್ರಭಾವಶಾಲಿಯಾಗಿರುವ ಬಿಜೆಪಿಯೇ ದಶಕಗಳಿಂದ ಅಧಿಕಾರ ನಡೆಸುತ್ತಿರುವ ಗುಜರಾತ್‌, ಉತ್ತರಪ್ರದೇಶಗಳಿಂದ ಅತಿ ಹೆಚ್ಚು ಬೀಫ್‌ ರಫ್ತಾಗುತ್ತಿದೆ. ಮೋದಿ ಅಧಿಕಾರಕ್ಕೆ ಬರುವ ಮುನ್ನ ಗೋಮಾಂಸ ರಫ್ತು ಮಾಡೋದ್ರಲ್ಲಿ ಭಾರತ ನಂಬರ್‌ ವನ್‌ ಆಗುತ್ತಿದೆ ಎಂದು ಯುಪಿಎ ಸರ್ಕಾರವನ್ನು ಗೇಲಿ ಮಾಡಿದ್ರು. ಆದರೆ ಮೋದಿ ಅಧಿಕಾರಾವಧಿಯಲ್ಲಿ ಗೋಮಾಂಸ ರಫ್ತಿನಲ್ಲಿ ಭಾರತ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿದೆ. ಇದು ನೀಡುವ ಸಂದೇಶವೇನೆಂದರೆ ಬಿಜೆಪಿ ಮತ್ತು ಹಿಂದುತ್ವದ ರಾಜಕಾರಣ ಮಾಡುವವರಿಗೆ ಗೋಮಾಂಸ, ಗೋರಕ್ಷಣೆ ಎಂಬುದೆಲ್ಲ ಕೇವಲ ಮುಸ್ಲಿಮರನ್ನು ಅಪರಾಧಿಗಳು, ದೇಶದ್ರೋಹಿಗಳು, ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತರುವವರು ಎಂದು ಬಿಂಬಿಸಿ ಹಿಂದೂಗಳ ಮತವನ್ನು ಭದ್ರಪಡಿಸುವ ಉದ್ದೇಶ ಮಾತ್ರ ಹೊಂದಿದೆ.

ಅಖ್ಲಾಕ್
ಗೋ ರಕ್ಷಕರಿಂದ ಹತರಾದ ಮೊಹಮ್ಮದ್ ಅಖ್ಲಾಕ್

ಈಶಾನ್ಯ ಭಾರತದ ರಾಜ್ಯಗಳಲ್ಲಿ ಗೋಮಾಂಸ ಪ್ರಮುಖ ಆಹಾರ. ಅಷ್ಟೇ ಎಲ್ಲ ದಲಿತರು, ಅದಿವಾಸಿಗಳು ಸೇರಿದಂತೆ ಬಹುತೇಕ ಸಮುದಾಯಗಳು ಗೋಮಾಂಸ ಸೇವಿಸುತ್ತಾರೆ. ನಮ್ಮ ಪಕ್ಕದ ಕೇರಳಕ್ಕೆ ಹೋದರೆ ಬೀಫ್‌ ಎಲ್ಲಾ ಮಾಂಸಾಹಾರಿಗಳ ಮುಖ್ಯ ಆಹಾರ. ಹೋಟೆಲುಗಳ ಮುಂದೆ ಮೆನು ಬೋರ್ಡ್‌ನಲ್ಲಿ ಬೀಫ್‌ಗೆ ಮೊದಲ ಸ್ಥಾನ. ಇಷ್ಟೆಲ್ಲ ಗೊತ್ತಿದ್ದರೂ ಬಿಜೆಪಿಯವರು ಗೋಮಾಂಸ ತಿನ್ನೋರು, ಗೋ ವ್ಯಾಪಾರ ಮಾಡೋರು ಮುಸ್ಲಿಮರು ಮಾತ್ರ ಎಂಬ ಸುಳ್ಳನ್ನು ವ್ಯವಸ್ಥಿತವಾಗಿ ಬಿತ್ತುತ್ತಿದ್ದಾರೆ.

ಸೆಪ್ಟೆಂಬರ್ 22, 2015ರಂದು, ಉತ್ತರಪ್ರದೇಶದಲ್ಲಿ ಹಿಂದೂಗಳ ಗುಂಪೊಂದು ಮೊಹಮ್ಮದ್ ಅಖ್ಲಾಕ್ ಅವರನ್ನು ಮನೆಯಿಂದ ಎಳೆದೊಯ್ದುಹೊಡೆದು ಸಾಯಿಸಿತ್ತು. ಅಖ್ಲಾಕ್ ಅವರ ನೆರೆಹೊರೆಯವರು ಅವರ ಮೇಲೆ ಗೋ ಕಳ್ಳತನದ ಆರೋಪ ಹೊರಿಸಿದ್ದರು. ಅವರ ಮನೆಯ ಒಲೆಯ ಮೇಲೆ ಬೇಯುತ್ತಿದ್ದ ಮಾಂಸ ಗೋಮಾಂಸ ಎಂದು ಆರೋಪಿಗಳು ಹೊಡೆದು ಸಾಯಿಸಿದ್ದರು. ಅಲ್ಲಿಂದ ನಂತರ ದೇಶದಲ್ಲಿ ಇಂತಹ ಹಲವು ಪ್ರಕರಣಗಳು ನಡೆದಿವೆ. ರಾಜ್ಯದಲ್ಲೂ ಆಗಾಗ ನಡೆಯುತ್ತಿದೆ. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಇಂತಹ ಗಿಮಿಕ್‌ಗಳಿಗೆ ಮತದಾರರು ಮತ ಹಾಕಿಲ್ಲ. ಆದರೆ ಅವರು ಅದೇ ಹಳೆಯ ಚಾಳಿಯಲ್ಲಿ ಮುಂದುವರಿಯುತ್ತಿದ್ದಾರೆ.

ವಿಕೃತರಿಗೆ ಧರ್ಮವಿಲ್ಲ; ಒಬ್ಬ ಕೆಚ್ಚಲು ಕೊಯ್ದ, ಮತ್ತೊಬ್ಬ ಅತ್ಯಾಚಾರ ಎಸಗಿದ

ಹಿಂದುತ್ವ, ಬಿಜೆಪಿಯ ಭದ್ರ ನೆಲ ದಕ್ಷಿಣ ಕನ್ನಡದಲ್ಲಿ ಗೋ ಕಳ್ಳ ಸಾಗಣೆ ಮಾಡಿ ಸಿಕ್ಕಿ ಬಿದ್ದವರಲ್ಲಿ ಉಗ್ರ ಹಿಂದುತ್ವವಾದಿಗಳು ಮತ್ತು ಗೋರಕ್ಷಕರೂ ಇದ್ದಾರೆ ಎಂಬುದು ಇವರ ಮುಖವಾಡ ಬಯಲು ಮಾಡುತ್ತದೆ. ಕಳೆದ ವರ್ಷ ಚಿಕ್ಕಬಳ್ಳಾಪುರದಲ್ಲಿ ಕೋಲ್ಕತ್ತಾ ಮೂಲದ ರಾಹುಲ್ ಎಂಬಾತ ಹಲವು ಬಾರಿ ಹಸುಗಳ ಮೇಲೆ ಅತ್ಯಾಚಾರ ಎಸಗಿದ್ದ. ಹಸುಗಳ ಮಾಲೀಕ ಮನೆ ಕಟ್ಟುತ್ತಿದ್ದು ಬೇರೆಡೆ ವಾಸವಾಗಿರುತ್ತಾನೆ. ಮನೆ ಕಟ್ಟುತ್ತಿರುವ ಪಕ್ಕದಲ್ಲೇ ತನ್ನ ಹಸುಗಳನ್ನು ಕಟ್ಟಿ ಹಾಕಲು ಜಾಗ ಮಾಡಿಕೊಂಡಿರುತ್ತಾರೆ. ಪ್ರತಿ ದಿನ ಮಧ್ಯರಾತ್ರಿ ಈ ವಿಕೃತ ಕಾಮಿ ಹಸುಗಳನ್ನು ಕಟ್ಟಿ ಹಾಕುತ್ತಿದ್ದ ಸ್ಥಳಕ್ಕೆ ಹೋಗಿ ಅವುಗಳ ಮೇಲೆ ಅತ್ಯಾಚಾರವೆಸಗಿ ಹೋಗುತ್ತಿದ್ದ. ಹಸುಗಳ್ಳರ ಕಾಟ ಇದ್ದುದರಿಂದ ಮನೆಯ ಬಳಿ ಸಿ ಸಿ ಟಿವಿ ಅಳವಡಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. 2022ರಲ್ಲಿ ಕೋಲ್ಕತ್ತಾದಲ್ಲಿ ಪ್ರದ್ಯುತ್ ಭುಯಾ ಎಂಬ ಯುವಕ ಗರ್ಭ ಧರಿಸಿದ್ದ ಹಸುವಿನ ಮೇಲೆ ಅತ್ಯಾಚಾರ ಎಸಗಿರುವ ಘಟನೆ ವರದಿಯಾಗಿತ್ತು. ಅತ್ಯಾಚಾರಕ್ಕೊಳಗಾದ ನಂತರ ಅತಿಯಾದ ರಕ್ತಸ್ರಾವದಿಂದ ಹಸು ಮೃತಪಟ್ಟಿತ್ತು. ಇಂತಹದ್ದೇ ಪ್ರಕರಣ 2020ರಲ್ಲಿ ಕೇರಳದಿಂದ ಕೋಯಿಕ್ಕೋಡ್‌ನಿಂದ ವರದಿಯಾಗಿತ್ತು. ಮುರಳೀಧರನ್‌ ಎಂಬಾತ ಹಸುವಿನ ಜೊತೆ ಅಸಹಜ ಲೈಂಗಿಕ ಕ್ರಿಯೆ ನಡೆಸಿ ಸಿಕ್ಕಿಬಿದ್ದಿದ್ದ.

ಹಿಂದೂ ಸಂಘಟನೆಗಳು, ಬಿಜೆಪಿಯವರ ಪ್ರಕಾರ ಹಿಂದೂಗಳ ಪಾಲಿಗೆ ಹಸುವೆಂದರೆ ಮಾತೆ, ತಾಯಿ. ಅಂದ್ರೆ ಇವರೆಲ್ಲ ತಮ್ಮ ತಾಯಿಯ ಮೇಲೇ ಅತ್ಯಾಚಾರ ಎಸಗಿದ್ದರು! ಒಬ್ಬ ಕೆಚ್ಚಲು ಕೊಯ್ದ, ಮತ್ತೊಬ್ಬ ಅತ್ಯಾಚಾರ ಎಸಗಿದ. ಇಬ್ಬರೂ ಮನುಷ್ಯರಾಗಲು ಯೋಗ್ಯರಲ್ಲ. ಅದರಾಚೆಗೆ ಆರೋಪಿಗಳ ಧರ್ಮ ಹುಡುಕುವವರು ಕೆಚ್ಚಲು ಕೊಯ್ದ ಆರೋಪಿಯಷ್ಟೇ ಅಪಾಯಕಾರಿ.

ಶರಣಾದ ನಕ್ಸಲರು | ಜೀವಂತ ನೋಡುವ ಭರವಸೆ ಕಳೆದುಕೊಂಡಿದ್ದ ಕುಟುಂಬಗಳು ಹೇಳಿದ್ದೇನು?
‘ಕರ್ನಾಟಕ-50’ ಸಂಚಿಕೆ | ‘ಮುಸ್ಲಿಮರೊಂದಿಗೆ ಮುಖಾಮುಖಿ’- ಮುಜಾಫರ್ ಅಸ್ಸಾದಿ ಅವರ ಕೊನೆಯ ಬರಹ

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

1 COMMENT

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X