- ಭಾರತದಲ್ಲಿ ಉದ್ಯೋಗಗಳು ದೊರೆಯುತ್ತಿಲ್ಲ.
- ಟ್ರಂಪ್ ಹೇಳಿದ್ದಕ್ಕೆಲ್ಲ ಮೋದಿ ಒಪ್ಪಿಗೆ ಸೂಚಿಸುತ್ತಿದ್ದಾರೆ.
- ಭಾರತೀಯರ ಮಾನವ ಘನತೆಗೆ ಅಪಮಾನವಾಗುತ್ತಿದೆ.
ಕೈಕೊಳ ತೊಡಿಸಿ, ಸರಪಳಿಗಳಲ್ಲಿ ಬಂಧಿಸಿ ಅಮೆರಿಕದಿಂದ ಹೊರಹಾಕಲ್ಪಟ್ಟ ದಾಖಲೆರಹಿತ ಭಾರತೀಯ ವಲಸಿಗರು ಭಾರತಕ್ಕೆ ಬಂದಿಳಿದಿದ್ದಾರೆ. ದೌರ್ಜನ್ಯ, ಹಸಿವನ್ನು ಸಹಿಸಿಕೊಂಡು ಅಮೆರಿಕದಿಂದ ಬಂದಿದ್ದಾರೆ. ಭಾರತದ ಮೌನ ಸಮ್ಮತಿಯ ನಡುವೆ ಅಮೆರಿಕದ ಅಮಾನವೀಯ ಧೋರಣೆಯನ್ನು ಎದುರಿಸಿ ಬಂದವರು ಭಾರತ ಸರ್ಕಾರದ ಬಗ್ಗೆ ಏನು ಹೇಳಬಹುದು? ಸರ್ಕಾರವನ್ನು ಹೇಗೆ ನೋಡಬಹುದು?
ಭಾರತಕ್ಕೆ ಮರಳಿರುವವರಲ್ಲಿ ಕೆಲವರು ಸಿಖ್ ಸಮುದಾಯದವರಿದ್ದಾರೆ. ಅವರಿಗೆ ತಮ್ಮ ಪೇಟಗಳನ್ನು ತೆಗೆಯುವಂತೆ ಅಮೆರಿಕದ ಅಧಿಕಾರಿಗಳು ಒತ್ತಾಯಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಅಂದಹಾಗೆ, ವಲಸಿಗರನ್ನು ಹೊತ್ತು ಭಾರತಕ್ಕೆ ಬಂದಿಳಿದ ಅಮೆರಿಕ ಮಿಲಿಟರಿ ವಿಮಾನವೊಂದು, ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಂಪ್ ಅವರನ್ನು ಭೇಟಿ ಮಾಡಿ, ತಮ್ಮ ಸ್ವಂತ ವಿಮಾನದಿಂದ ಭಾರತಕ್ಕೆ ಹೊರಡುವ ಕೆಲ ಸಮಯದ ಮುನ್ನ ಹೊರಟಿತ್ತು. ಆ ವಿಮಾನದಲ್ಲಿ ಬಂದವರನ್ನೂ ಕೈಕೊಳ ತೊಡಿಸಿಯೇ ಕರೆತರಲಾಗಿದೆ.
ಅಂದರೆ, ಮೋದಿ ಅವರು ಟ್ರಂಪ್ ಜೊತೆ ಚರ್ಚಿಸಿದ್ದೇನು? ಗಮನಾರ್ಹ ಸಂಗತಿ ಎಂದರೆ, ಕೊಲಂಬಿಯಾ ತನ್ನ ಪ್ರಜೆಗಳನ್ನು ಅಮೆರಿಕ ಮಿಲಿಟರಿ ವಿಮಾನದಲ್ಲಿ ಕಳಿಸುವುದನ್ನು ವಿರೋಧಿಸಿತು. ಅಲ್ಲಿನ ರಾಷ್ಟ್ರಪತಿ ಗಸ್ತಾವೊ ಪೆಟ್ರೋ ಅವರು ತಮ್ಮ ಪ್ರಜೆಗಳನ್ನು ಕರೆತರಲು ರಾಷ್ಟ್ರಪತಿಗಳ ವಿಮಾನವನ್ನೇ ಕಳಿಸಿದರು. ತಮ್ಮ ದೇಶದ ಪ್ರಜೆಗಳನ್ನು ಗೌರವದಿಂದ ಕರೆಸಿಕೊಂಡರು. ಆದರೆ, ಮೋದಿ ಅವರು ತಾವು ಖುದ್ದು ಅಮೆರಿಕದಲ್ಲಿದ್ದರೂ, ಭಾರತೀಯರನ್ನು ಕೈಕೋಳ ತೊಡಿಸಿ ಕಳುಹಿಸಿದ್ದರ ಗೊತ್ತಿದ್ದರೂ, ವಿರೋಧಿಸಲಿಲ್ಲ. ಕೊನೆಪಕ್ಷ ಗೌರವಯುತವಾಗಿ ನಡೆಸಿಕೊಳ್ಳಿ ಎಂದು ಕೂಡ ಹೇಳಲಿಲ್ಲ. ಬದಲಾಗಿ, ಭಾರತೀಯ ಅಕ್ರಮ ವಲಸಿಗರನ್ನು ಭಾರತ ಸ್ವೀಕರಿಸುತ್ತದೆ ಎಂದು ಟ್ರಂಪ್ ಎದುರು ಒಪ್ಪಿಕೊಂಡು ಬಂದರು. ಇದು ಏನನ್ನು ಸೂಚಿಸುತ್ತದೆ. ಜಗತ್ತಿನಲ್ಲಿ ಭಾರತದ ನಾಯಕತ್ವದ ಬಗ್ಗೆ ಏನು ಹೇಳುತ್ತದೆ?
ಕಳೆದ ಕೆಲವು ವರ್ಷಗಳಲ್ಲಿ, ಯಾವುದೇ ಬೆಲೆ ತೆತ್ತಾದರೂ, ಏನು ಮಾಡಿಯಾದರೂ ಅಮೆರಿಕಕ್ಕೆ ತೆರಳಲು ಬಯಸುವ ಭಾರತೀಯರ ಸಂಖ್ಯೆ ಹೆಚ್ಚಾಗಿದೆ. ಟ್ರಂಪ್ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿದ್ದಾಗ 2020ರಲ್ಲಿ 2,300 ಭಾರತೀಯರನ್ನು ಗಡಿಪಾರು ಮಾಡಿದ್ದರು. ಆದಾಗ್ಯೂ, ‘ಪ್ಯೂ ಅಂಡ್ ನ್ಯೂಯಾರ್ಕ್’ನ ವಲಸೆ ಅಧ್ಯಯನ ಕೇಂದ್ರವು, 2022ರವರೆಗೆ ಅಮೆರಿಕದಲ್ಲಿ ಪತ್ತೆಯಾದ ದಾಖಲೆರಹಿತ ಭಾರತೀಯರ ಸಂಖ್ಯೆ 7,00,000 ಎಂದು ಹೇಳುತ್ತದೆ.
2023 ಮತ್ತು 2024ರ ನಡುವೆ ದಾಖಲೆರಹಿತ ಭಾರತೀಯ ವಲಸಿಗರ ಸಂಖ್ಯೆ ತುಂಬಾ ಹೆಚ್ಚಾಗಿದೆ. 2023ರಲ್ಲಿಯೇ ದಾಖಲೆರಹಿತ 67,391 ಭಾರತೀಯರನ್ನು ಅಮೆರಿಕದಲ್ಲಿ ಗುರುತಿಸಲಾಗಿದೆ. ಅವರಲ್ಲಿ, ಬರೋಬ್ಬರಿ 41,330 ಮಂದಿ ಮೋದಿ ಅವರ ತವರು ರಾಜ್ಯ ಗುಜರಾತ್ನವರು.
ಈ ಅಂಕಿಅಂಶಗಳು ಯುವಜನರು ಭಾರತವನ್ನು ತೊರೆದು ವಿವಿಧ ದೇಶಗಳಿಗೆ ಏಕೆ ಹೋಗುತ್ತಿದ್ದಾರೆ? ಇಷ್ಟೊಂದು ಪ್ರಮಾಣದ ವಲಸೆಗೆ ಕಾರಣವೇನು ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತರುತ್ತವೆ. ಈ ಪ್ರಶ್ನೆಗಳಿಗೆ ಈಗ ಮೂರು ಮಿಲಿಟರಿ ವಿಮಾನಗಳಲ್ಲಿ ಅಮೆರಿಕದಿಂದ ಭಾರತಕ್ಕೆ ಮರಳಿರುವ ದಾಖಲೆರಹಿತ ವಲಸಿಗರೇ ಉತ್ತರವಾಗಿದ್ದಾರೆ. ಅವರು ಉತ್ತರಗಳನ್ನು ನೀಡುತ್ತಿದ್ದಾರೆ. ಆ ಉತ್ತರಗಳಲ್ಲಿ ಪ್ರಮುಖ ಮೂರು ಅಂಶಗಳಿವು:
ಭಾರತದ ಆರ್ಥಿಕತೆ ಕುಸಿಯುತ್ತಿದೆ
ಭಾರತದಲ್ಲಿ ಉದ್ಯೋಗಗಳು ದೊರೆಯುತ್ತಿಲ್ಲ. ಉದ್ಯೋಗ ಸೃಷ್ಟಿ ಇಲ್ಲ. ಗ್ರಾಮೀಣ ಭಾಗದಲ್ಲಿ ವೇತನಗಳು ಕುಸಿಯುತ್ತಿವೆ. ಜೊತೆಗೆ, ಏರಿಕೆಯಾಗುತ್ತಿರುವ ತೆರಿಗೆ ಹೊರೆಯು ಆರ್ಥಿಕತೆಯ ಒಟ್ಟಾರೆ ಶೋಚನೀಯ ಸ್ಥಿತಿಯನ್ನು ಎತ್ತಿತೋರಿಸುತ್ತದೆ. ಅಗತ್ಯತೆಗಳ ಪೂರೈಕೆ ಮತ್ತು ಬಳಕೆಯ ಮಟ್ಟಗಳೂ ಕುಸಿಯುತ್ತಿವೆ ಎಂದು ಸೂಚ್ಯಂಕಗಳು ಒತ್ತಿ ಹೇಳುತ್ತಿವೆ.
ಆರ್ಬಿಐನ ಗ್ರಾಹಕ ವಿಶ್ವಾಸ ಸಮೀಕ್ಷೆಯು ಬೆಲೆ ಏರಿಕೆ, ಖರ್ಚು ಮಾದರಿಗಳು ಮತ್ತು ಉದ್ಯೋಗ ನಿರೀಕ್ಷೆಗಳ ವಿಚಾರದಲ್ಲಿ ವಿಶ್ವಾಸ ಕುಸಿಯುತ್ತಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಬೆಲೆ ಏರಿಕೆಯ ವಿರುದ್ಧ ಜನರು ಅಸಮಾಧಾನಗೊಂಡಿದ್ದಾರೆ.
ಇತ್ತೀಚೆಗೆ, ಸಿ-ವೋಟರ್ ಸಂಸ್ಥೆಯು ನಡೆಸಿದ್ದ ರಾಷ್ಟ್ರೀಯ ಸಮೀಕ್ಷೆಯ ಪ್ರಕಾರ, 57%ರಷ್ಟು ಜನರು ಮುಂದಿನ ಆರು ತಿಂಗಳಲ್ಲಿ ದೇಶದ ಆರ್ಥಿಕತೆ ಹದಗೆಡಲಿದೆ ಎಂದು ಹೇಳಿದ್ದಾರೆ. ಅಲ್ಲದೆ, ಸಮೀಕ್ಷೆಗೆ ಒಳಪಟ್ಟವರಲ್ಲಿ ನಾಲ್ಕನೇ ಮೂರು ಭಾಗದಷ್ಟು ಜನರು (64%) ತಮ್ಮ ದೈನಂದಿನ ಖರ್ಚುಗಳನ್ನು ನಿರ್ವಹಿಸುವುದು ಕಷ್ಟವಾಗಿದೆ ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಗ್ರಾಹಕರ ಬೇಡಿಕೆ ಪ್ರಮಾಣವು ಕಡಿಮೆಯಾಗಿದೆ ಎಂಬುದನ್ನು ಸಮೀಕ್ಷೆ ಗಮನಿಸಿದೆ.
ಸಮೀಕ್ಷೆಗೆ ಉತ್ತರಿಸಿದವರಲ್ಲಿ ಅರ್ಧಕ್ಕಿಂತ ಹೆಚ್ಚು (51%) ಜನರು 2014ರ ನಂತರ, ಸರ್ಕಾರದ ನೀತಿಗಳಿಂದಾಗಿ ಬೃಹತ್ ಉದ್ದಿಮೆಗಳು ಹೆಚ್ಚಿನ ಲಾಭ ಪಡೆದಿವೆ. ಹಿಂದುಳಿದ ಮತ್ತು ತಳ ಸಮುದಾಯಗಳ ಪರಿಸ್ಥಿತಿ ಮತ್ತಷ್ಟು ಕುಗ್ಗಿದೆ ಎಂದಿದ್ದಾರೆ. ಆರ್ಥಿಕ ನೀತಿಗಳು ಮತ್ತು ಆರ್ಥಿಕ ಒಪ್ಪಂದಗಳು ನ್ಯಾಯಯುತ ಅಥವಾ ಜನಪರವಾಗಿಲ್ಲ. ಅಮೆರಿಕ ನ್ಯಾಯಾಲಯದಲ್ಲಿ ಅದಾನಿ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ಅದಾನಿಯನ್ನು ಮೋದಿ ಬೆಂಬಲಿಸುತ್ತಿದ್ದಾರೆ ಎಂದು 49% ಮಂದಿ ಹೇಳಿದ್ದಾರೆ. ದೊಡ್ಡ ಉದ್ದಿಮೆದಾರರ ಮೇಲಿನ ತೆರಿಗೆಗಳು ಕಡಿತಗೊಂಡು, ಸಾಮಾನ್ಯರ ಮೇಲಿನ ತೆರಿಗೆಗಳು ಹೆಚ್ಚುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅಬ್ ಕಿ ಬಾರ್ ಟ್ರಂಪ್ ಸರ್ಕಾರ್’
ಅಮೆರಿಕದಲ್ಲಿ ದಾಖಲೆರಹಿತ ಭಾರತೀಯರನ್ನು ಥಳಿಸಿ ದಿನಗಟ್ಟಲೆ ಹಸಿವಿನಿಂದ ಕೂಡಿಹಾಕಲಾಗಿರುವ ಚಿತ್ರಗಳು ವೈರಲ್ ಆಗುತ್ತಿವೆ. ಆ ಚಿತ್ರಗಳು ಟ್ರಂಪಿಯನ್ ಜಗತ್ತಿನಲ್ಲಿ ಭಾರತ ಯಾವ ಸ್ಥಾನದಲ್ಲಿದೆ ಎಂಬುದನ್ನು ತೋರಿಸುತ್ತದೆ. ಟ್ರಂಪ್ ಹೇಳುವ ಎಲ್ಲವನ್ನೂ ಒಪ್ಪಿಕೊಳ್ಳಲು ಮೋದಿ ಸಿದ್ಧರಿರುವುದು ಜಾಗತಿಕವಾಗಿ ಭಾರತಕ್ಕೆ ಇರುವ ಸ್ಥಾನಮಾನವನ್ನು ತೋರುತ್ತಿದೆ. ಅದು ತೀವ್ರ ಕುಸಿತವನ್ನು ಸೂಚಿಸುತ್ತಿದೆ.
ಕೊಲಂಬಿಯಾದಂತಹ ಸಣ್ಣ ರಾಷ್ಟ್ರಗಳು ತಮ್ಮ ಪ್ರಜೆಗಳ ಪರವಾಗಿ ಬಲವಾಗಿ ನಿಂತಿವೆ. ತಮ್ಮ ಪ್ರಜೆಗಳಿಗಾಗಿ ಕೊಲಂಬಿಯಾ ರಾಷ್ಟ್ರಪತಿ ತಮ್ಮ ಪ್ರಜೆಗಳನ್ನು ಮಿಲಿಟರಿ ವಿಮಾನದಲ್ಲಿ ಕಳಿಸುವುದನ್ನು ವಿರೋಧಿಸಿ, ಆ ವಿಮಾನಗಳಿಗೆ ಪ್ರವೇಶ ನಿರಾಕರಿಸಿದರು. ಪರಿಣಾಮ, ಕೊಲಂಬಿಯಾದ ಉತ್ಪನ್ನಗಳ ಮೇಲೆ ಟ್ರಂಪ್ ಆಮದು ಶುಲ್ಕವನ್ನು 25% ವಿಧಿಸುವುದಾಗಿ ಬೆದರಿಕೆ ಹಾಕಿದರು. ಆದರೂ, ಕೊಲಂಬಿಯಾ ಹೆದರಲಿಲ್ಲ. ಕೊಲಂಬಿಯಾ ಪ್ರಜೆಗಳಿಗಾಗಿ ತಮ್ಮ ವಿಮಾನವನ್ನೇ ಕಳಿಸಿದರು. ಟ್ರಂಪ್ ಹೇಳಿಕೆ ಕೊಡುವುದನ್ನು ನಿಲ್ಲಿಸಿದರು.
ಆದರೆ, ಭಾರತವು ಕೊಲಂಬಿಯಾದ ದಿಟ್ಟ ನಿರ್ಧಾರಕ್ಕೆ ತದ್ವಿರುದ್ಧದ ಧೋರಣೆಯಿಂದ ನಡೆದುಕೊಳ್ಳುತ್ತಿದೆ. ಮಿಲಿಟರಿ ವಿಮಾನದಲ್ಲೇ ಕಳಿಸಲು ಅನುಮತಿಸಿದೆ. ಮಾತ್ರವಲ್ಲ, ಆರ್ಥಿಕ ದ್ವಿಪಕ್ಷೀಯ ಒಪ್ಪಂದಗಳೊಂದಿಗೆ ‘ಮಿಗ’, ‘ಮಗ’ ಹಾಗೂ ‘ಮೆಗ’ ಎಂದೆಲ್ಲ ಮೋದಿ ಅವರು ಟ್ರಂಪ್ಗೆ ಬಹುಪರಾಕ್ ಹಾಕಿ ಬಂದಿದ್ದಾರೆ. ಅಮೆರಿಕದ ಉತ್ಪನ್ನಗಳ ಆಮದು ಶುಲ್ಕವನ್ನು ಕಡಿತಗೊಳಿಸುವುದಾಗಿ ಭರವಸೆ ನೀಡಿದ್ದಾರೆ. ಇದು, ಮೋದಿ ಭಾರತದ ಅಸಮರ್ಥತೆಯನ್ನು ಪ್ರತಿಬಿಂಬಿಸುತ್ತದೆ. ಗಡಿಪಾರು ಮಾಡಿದಾಗ ಜನರನ್ನು ಸರಪಳಿಯಲ್ಲಿ ಬಂಧಿಸುವ ಅಮೆರಿಕದ ನೀತಿಯನ್ನು ಮೋದಿ ಸರ್ಕಾರ ನಾಚಿಕೆಗೇಡಿನಿಂದ ಸಮರ್ಥಿಸಿಕೊಂಡಿದೆ.
ಇನ್ನು, ಪ್ಯಾಲೆಸ್ಟೀನ್ ಭೂಮಿಯಿಂದ ಪ್ಯಾಲೆಸ್ತೀನಿಯರನ್ನೇ ಹೊರಗಟ್ಟಿ, ಗಾಜಾವನ್ನು ಅಮೆರಿಕನ್ ಪ್ರವಾಸೋದ್ಯಮವನ್ನಾಗಿ ಪರಿವರ್ತಿಸಲು ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಹೆಣೆದಿರುವ ಹುನ್ನಾರವನ್ನು ಇಡೀ ಜಗತ್ತು ಖಂಡಿಸುತ್ತಿದೆ. ಆದರೆ, ಭಾರತವು ಆಘಾತಕಾರಿ ಮೌನ ತಾಳಿದೆ. ಈ ಮೌನಕ್ಕೂ ಅಮೆರಿಕದಿಂದ ಯಾವುದೇ ಪ್ರಯೋಜನ ಭಾರತಕ್ಕೆ ದೊರೆತಿಲ್ಲ. ಬದಲಾಗಿ, ಭಾರತದ ಮೇಲೆಯೇ ಮತ್ತಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಜೊತೆಗೆ, ಅಮೆರಿಕಗೆ ಹೆಚ್ಚಿನ ರಿಯಾಯತಿಗಳನ್ನು ಭಾರತವೇ ಒದಗಿಸುತ್ತಿದೆ.
ಈ ವರದಿ ಓದಿದ್ದೀರಾ?; ವಿದ್ಯುತ್ ಯೋಜನೆಯಿಂದ ಹೊರಬಿದ್ದ ಅದಾನಿ ಕಂಪನಿ: ಯೋಜನೆಗಳನ್ನು ಸ್ಥಗಿತಗೊಳಿಸಿದ ನಾಲ್ಕನೇ ದೇಶ
ಟ್ರಂಪ್ಗೆ ಕಿರಿಕಿರಿ ಉಂಟಾಗಬಹುದು ಎಂಬ ಭಯದಿಂದ, ಈ ಹಿಂದೆ ಬ್ರಿಕ್ಸ್ನ ಭಾಗವಾಗಿ ಪ್ರತಿಪಾದಿಸಲಾದ ಡಾಲರ್ರಹಿತೀಕರಣದ ಕಲ್ಪನೆಯನ್ನು ಭಾರತ ಕೈಬಿಟ್ಟಿದೆ. ಹೊಸ ಇ-ಕಾಮರ್ಸ್ ನೀತಿಯ ಯೋಜನೆಗಳನ್ನು ತಡೆಹಿಡಿದಿದೆ. ಮಾತ್ರವಲ್ಲ, ತೈಲ ಅಥವಾ ಬಿಗ್ ಟೆಕ್ಅನ್ನು ಅಮೆರಿಕದಿಂದ ಪಡೆಯುವುದೂ ಸೇರಿದಂತೆ ಟ್ರಂಪ್ ಹೇಳಿರುವ ಎಲ್ಲವನ್ನೂ ಒಪ್ಪಿಕೊಳ್ಳುವ ಹಂತಕ್ಕೆ ಭಾರತವನ್ನು ಮೋದಿ ತಂದು ನಿಲ್ಲಿಸಿದ್ದಾರೆ. ಇದಕ್ಕೆ, ಕೈಕೋಳ ಹಾಕಿಕೊಂಡು ದೇಶಕ್ಕೆ ಮರಳುತ್ತಿರುವ ಭಾರತೀಯರೇ ಸಾಕ್ಷಿ.
ಮಾನವ ಘನತೆಗೆ ಅಪಮಾನ
ಮೋದಿ ಮತ್ತು ಬಿಜೆಪಿಯ ಆಡಳಿತವು ಮುಸ್ಲಿಮರ ಘನತೆಯನ್ನು ಕಸಿದುಕೊಳ್ಳಲು ಏನೆಲ್ಲ ಮಾಡಿದೆ ಎಂಬುದರ ಬಗ್ಗೆ ಆಗಾಗ್ಗೆ ಮೌಲ್ಯಮಾಪನ ವರದಿಗಳು ಬಂದಿವೆ. ಕ್ಯಾಬಿನೆಟ್ ಮಂತ್ರಿಗಳು, ಮುಖ್ಯಮಂತ್ರಿಗಳು, ಅಧಿಕಾರಿಗಳು ಸಾಮಾಜಿಕವಾಗಿ ಎಲ್ಲ ವಿಚಾರಗಳಲ್ಲೂ ‘ಜಿಹಾದ್’ ಎಂಬ ಹಣೆಪಟ್ಟಿ ಕಟ್ಟಿ, ಮುಸ್ಲಿಮರನ್ನು ಖಳನಾಯಕರಾಗಿ ಬಿಂಬಿಸಿದ್ದಾರೆ. ಮುಜ್ರಾ, ಹಸುಗಳ ಕಳ್ಳತನ, ಮಂಗಳಸೂತ್ರ ಕಸಿದುಕೊಳ್ಳುವಿಕೆಯಂತಹ ಹೇಳಿಕೆಗಳೊಂದಿಗೆ ಕೋಮುದ್ವೇಷವನ್ನು ಪ್ರಚೋದಿಸಿದ್ದಾರೆ. ಇದಕ್ಕೆ, ಪ್ರಧಾನಿ ಮೋದಿಯೂ ಹೊರತಾಗಿಲ್ಲ. ಲೋಕಸಭಾ ಚುನಾವಣೆಯಲ್ಲಿ ಕೋಮುದ್ವೇಷ ಭಾಷಣಕ್ಕೆ ನಾಂದಿ ಹಾಡಿದ್ದೇ ಈ ಮೋದಿಯವರು.
ಆದರೆ, ಅಮೆರಿಕದಲ್ಲಿ ಬಂಧನಕ್ಕೊಳಗಾಗಿರುವ ಭಾರತೀಯರು ಹಿಂತಿರುಗುತ್ತಿರುವುದು ಸೂಚಿಸುವುದೇನೆಂದರೆ, ಗಡಿಪಾರಾದವರಲ್ಲಿ ಹಲವರು ಹಿಂದುಗಳು. ಅವರಿಗೂ ಮೋದಿ ಸರ್ಕಾರದಲ್ಲಿ ಗೌರವವಿಲ್ಲ. ಅವರ ಮಾನವ ಘನತೆಯ ಮೂಲಭೂತ ಹಕ್ಕನ್ನು ನಿರಾಕರಿಸಲಾಗಿದೆ. ಅಂದರೆ, ಮೋದಿ ಸರ್ಕಾರವು ಮುಸ್ಲಿಮರಿಗೆ ಮಾತ್ರವೇ ಅಪಮಾನ ಮಾಡುವುದಿಲ್ಲ. ಮುಸ್ಲಿಮರಿಗೆ ಬಹಿರಂಗವಾಗಿ ಅಪಮಾನಿಸಿದರೆ, ಹಿಂದುಗಳಿಗೆ ಮೌನವಾಗಿ, ಪರೋಕ್ಷವಾಗಿ ಅವಮಾನ ಮಾಡುತ್ತದೆ. ಅವರ ಘನತೆಯನ್ನು ಕಸಿದುಕೊಳ್ಳುತ್ತದೆ.
ಇತ್ತೀಚೆಗೆ, ನವದೆಹಲಿ ರೈಲು ನಿಲ್ದಾಣದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತದಲ್ಲಿ ಕೊಲ್ಲಲ್ಪಟ್ಟ ಭಾರತೀಯರು ಅಥವಾ ಅತ್ಯಂತ ಶೋಚನೀಯ ಪರಿಸ್ಥಿತಿಗಳಲ್ಲಿ ಅಮೆರಿಕದಿಂದ ಮರಳಿ ಬಂದ ಭಾರತೀಯರು– ಈ ಇಬ್ಬರೂ ಮೋದಿ ಸರ್ಕಾರವು ಮೂಲಭೂತ ಮಾನವ ಹಕ್ಕುಗಳ ಬಗ್ಗೆ ಮತ್ತು ಎಲ್ಲ ಭಾರತೀಯರ ಘನತೆಯನ್ನು ಕಾಪಾಡುವ ಅಗತ್ಯತೆಯ ಬಗ್ಗೆ ಕಾಳಜಿ ಇಲ್ಲದ ಸರ್ಕಾರವೆಂದು ಸೂಚಿಸುತ್ತಾರೆ.
ಮಾಹಿತಿ ಮೂಲ: ದಿ ವೈರ್
People from North India specially from Punjab & Haryana prefer foreign job even illegally entering for money. They do not mind cleaning Washrooms in foreign country but want Govt job in India. There is no dearth for jobs in India. Even in India six figure salary has become common. Illegal entry should be condemned by all. Even we should send back all Rohingyas & Bangladesis in the interest of Security & economy of our country. Have these illegal immigrants asked PM Modi or Govt of India before illegally leaving the country? They should be punished.
Illegal immigrants spent nearly 35 to 40 lakhs on way to US could have invested the same money in india to start buisness or new start ups and can give jobs to others too. But these immigrants just want to be the citizens of US as craze. Moreover these immigrants misuse laws of land by temporary marrying the US girls by contract through brokers to get US citizenship. These are unacceptable at any costs.