ನೆನಪು | ಅಗಲಿದ ದಣಿವರಿಯದ ಹೋರಾಟಗಾರ ಭೀಮಶಿ ಕಲಾದಗಿ

Date:

Advertisements

ಅಸಂಘಟಿಕ ಕಾರ್ಮಿಕರಲ್ಲಿ ಸಂಘಟನೆಯ ಮನೋಭಾವವನ್ನು ಬೆಳೆಸುವಲ್ಲಿ ಭೀಮಶಿ ಕಾಳಜಿ ಎದ್ದು ಕಾಣುತ್ತದೆ. 1992ರಲ್ಲಿ ಲಾರಿ ಹಮಾಲರ ಸಂಘವನ್ನು ಸ್ಥಾಪಿಸಿದ್ದರು. ಬೀಡಿ ಕಾರ್ಮಿಕರ ಸಂಘಟನೆ, ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆ, ಬಿಸಿಯೂಟ ಅಡುಗೆಯವರ ಸಂಘಟನೆ, ಕುಸುಬಿ ಕೇರುವ ಮಹಿಳೆಯರ ಸಂಘ, ಪೌರಕಾರ್ಮಿಕರ ದಿನಗೂಲಿ ನೌಕರರ ಸಂಘ – ಹೀಗೆ ಹಲವು ಅಸಂಘಟಿಕ ವಲಯಗಳಲ್ಲಿ ಸಂಘಟನೆ ಕಟ್ಟಿ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಡಿದ್ದಾರೆ.

ವಿಜಯಪುರದ ಹಿರಿಯ ಕಮುನಿಸ್ಟ್‌ ಹೋರಾಟಗಾರ ಭೀಮಶಿ ಕಲಾದಗಿ ಸುಧೀರ್ಘ 82 ವರ್ಷದ ಹೋರಾಟದ ಜೀವನ ನಡೆಸಿ ಇದೀಗ ನಮ್ಮನ್ನು ಅಗಲಿದ್ದಾರೆ. ನಮ್ಮ ಕಾಲಕ್ಕೆ ಮಾದರಿಯಾಗಬಹುದಾದ ನೈತಿಕ ಬದ್ಧತೆಯ ಬದುಕು ಮತ್ತು ಹೋರಾಟವನ್ನು ಜತೆಜತೆಯಾಗಿ ತೂಗಿಸಿದ ಭೀಮಶಿ ಕರ್ನಾಟಕದ ಹೋರಾಟದ ಚರಿತ್ರೆಯಲ್ಲಿ ಬಹುಕಾಲ ನೆನಪುಳಿಯಬಲ್ಲರು. ಭೀಮಶಿ ಅವರನ್ನು ಸಂದರ್ಶಿಸಿ ಬಹಳ ಹಿಂದೆಯೇ ಬರೆದಿದ್ದ ಈ ಬರಹ ಅವರ ಬದುಕು ಮತ್ತು ಹೋರಾಟದ ಹಲವು ಆಯಾಮಗಳನ್ನು ಕಾಣಲು ಪ್ರಯತ್ನಿಸಿದೆ.

ವಿಜಯಪುರದ ಕೆಎಸ್‍ಆರ್‌ಟಿಸಿ ಬಸ್‍ಸ್ಟಾಂಡಿನ ಬುಕ್‍ಸ್ಟಾಲ್ ಒಂದರಲ್ಲಿ ಕುತೂಹಲಕ್ಕೆ ಅಲ್ಲಿ ಪ್ರದರ್ಶನಕ್ಕಿಟ್ಟ ಪುಸ್ತಕಗಳನ್ನು ನೋಡುತ್ತಿದ್ದೆ. ಸ್ಥಳೀಯ ಎನ್ನುವ ಚಹರೆಯ ಪುಸ್ತಕಗಳು ಅಷ್ಟಾಗಿ ಕಾಣಲಿಲ್ಲ. ಇದರ ಮಧ್ಯೆ ದೂಳು ಮೆತ್ತಿಕೊಂಡ ಪುಸ್ತಕವೊಂದು ಗಮನ ಸೆಳೆಯಿತು. ಆ ಪುಸ್ತಕವನ್ನು ಎತ್ತಿಕೊಂಡೆ. ಅದು ಅಣ್ಣಾರಾಯ ಈಳಗೇರ ಸಂಪಾದಿಸಿದ ಜನಮುಖಿ ಭೀಮಶಿ ಕಲಾದಗಿ’ ಎನ್ನುವ ಪುಸ್ತಕವಾಗಿತ್ತು. ಪುಸ್ತಕದಂಗಡಿಯವರಿಗೆ ಈ ಪುಸ್ತಕದ ಪ್ರತಿಯನ್ನು ಕೇಳಿದಾಗ ಆತ ಅಂಗಡಿ ಒಳಗಿದ್ದ ಹೊಸ ಪ್ರತಿಯನ್ನು ನೀಡಿದರು. ನಂತರ ಕುತೂಹಲದಿಂದ ಈ ಕೃತಿಯನ್ನು ಓದಿದಾಗ ಭೀಮಶಿ ಕಲಾದಗಿಯವರ ಹೋರಾಟ ಕಥನದ ಹತ್ತಾರು ಸಂಗತಿಗಳು ತಿಳಿದವು. ಈ ನೆಪದಲ್ಲಿ ಬಿಜಾಪುರ, ಬಾಗಲಕೋಟೆ ಒಳಗೊಂಡ ಉತ್ತರ ಕರ್ನಾಟಕದ ಸಮಸ್ಯೆಗಳ ಬಹುರೂಪಿ ಸ್ವರೂಪವನ್ನು ಅರಿಯುವಂತಾಯಿತು. ಅಂತೆಯೇ ಈ ಭಾಗದಲ್ಲಿ ಹೋರಾಟದ ಚರಿತ್ರೆಯೂ ಗಮನಕ್ಕೆ ಬಂತು. ನಗರದ ಕೆಲವು ಹಿರಿಯರನ್ನು ಮಾತನಾಡಿಸಿದಾಗ, ‘ಈಗಲೂ ಈ ಭಾಗದ ರಾಜಕಾರಣಿಗಳು ಅಧಿಕಾರಿಗಳು ಅವರೊಬ್ಬರಿಗೆ ನೋಡ್ರಿ ಭಯ ಪಡೋದು. ನೈತಿಕವಂತ್ರು ಬ್ಹಾಳ್ ದೊಡ್ಡ ಹೋರಾಟಗಾರ್ರಿ’ ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

Advertisements

ನಂತರ ಈ ಕೃತಿಗೆ ಮುನ್ನುಡಿ ಬರೆದ ಎಸ್.ವೈ ಗುರುಶಾಂತ ಅವರ ಮೂಲಕ ಸಂಪರ್ಕ ಪಡೆದು ಭೀಮಶಿ ಅವರನ್ನು ಭೇಟಿಯಾಗಲು ಅಣಿಯಾದೆ. ಅಂದು ವಿಜಯಪುರದಲ್ಲಿ ಅವರ ಮನೆ ಹುಡುಕಲು ಹೊರಟಾಗ ಜಿಟಿಜಿಟಿ ಮಳೆಯಿತ್ತು. ಭೀಮಶಿ ಮನೆಗೆ ಹೋಗುವ ದಾರಿ ಮಳೆಯಿಂದಾಗಿ ಕೆಸರು ತುಂಬಿ ಕಾಲಿಡದಂತಿತ್ತು. ಊರಿನ ಸಮಸ್ಯೆಗಳ ಬಗ್ಗೆ ಹೋರಾಡುವ ಇವರು ತಾನು ವಾಸಿಸುವ ಓಣಿಯ ಬಗ್ಗೆಯೇ ಅಷ್ಟೇನೂ ತಲೆಕೆಡಿಸಿಕೊಂಡಿಲ್ಲ ಅನ್ನಿಸಿತು. ಹೊಸ ತಲೆಮಾರಿನ ಒಂದಿಬ್ಬರನ್ನು ಕೇಳಿದಾಗ, ‘ಭೀಮಶಿ ಯಾರು ಗೊತ್ತಿಲ್ಲಾರೀ’ ಎಂದರು. ಮನೆಯೊಳಗಿನ ಹಿರಿಯರೊಬ್ಬರನ್ನು ವಿಚಾರಿಸಿದಾಗ, ‘ಓಹ್ ಭೀಮಶಿ ಅವರ. ಅದ ನೋಡ್ರಿ ಕೊನೇ ತಿರುವು’ ಎಂದು ಮನೆಯ ಗುರುತನ್ನು ತೋರಿಸಿದರು. ಮುನ್ನಡೆದಾಗ ನಾಲ್ಕು ಮನೆಗಳು ಹೊಂದಿಕೊಂಡಂತಹ ಒಂದು ಸಾಮಾನ್ಯ ವಠಾರದ ಮುಂದೆ ನಿಂತಿದ್ದ ಭೀಮಶಿ ಅವರೇ ನಮ್ಮನ್ನು ಬರಮಾಡಿಕೊಂಡರು. ನಂತರ ಪರಿಚಯ ಮಾಡಿಕೊಂಡು ಅವರ ಹೋರಾಟದ ದಾಖಲೆಯ ಪುಸ್ತಕವನ್ನು ಓದಿದ್ದಾಗಿಯೂ, ನಿಮ್ಮ ಬಗೆಗೆ ಗೌರವ ಹೆಚ್ಚಿ ಮಾತನಾಡಿಸಲು ಬಂದದ್ದಾಗಿಯೂ ಹೇಳಿಕೊಂಡೆ.

ಭೀಮಶಿ ಅವರ ಜೊತೆ ಅರುಣ್ ಜೋಳದಕೂಡ್ಲಿಗಿ
ಭೀಮಶಿ ಅವರ ಜೊತೆ ಅರುಣ್ ಜೋಳದಕೂಡ್ಲಿಗಿ

ಹೋರಾಟದ ಹಾದಿಯತ್ತ ಭೀಮಶಿ
ತಲೆಗೊಂದು ಗಾಂಧಿ ಟೋಪಿ, ಮಾಂಝರಪಾಟ ದೋತರ, ಅಂಗಿ ತೊಟ್ಟ ಸರಳ ಉಡುಪಿನ ಭೀಮಶಿ 75 ವರ್ಷದ ಇಳಿ ಹರೆಯದಲ್ಲೂ ಕಟ್ಟುಮಸ್ತಾಗಿ ಕಂಡರು. ಧ್ವನಿಯೂ ಗಡುಸಾಗಿತ್ತು. ಕುತೂಹಲಕ್ಕೆ ಗಾಂಧಿ ಟೊಪ್ಪಿ ಬಗ್ಗೆ ಕೇಳಿದರೆ ‘ಗಾಂಧಿ ಟೊಪ್ಪಿ ಮೊದ್ಲಿಂದಾನೂ ಇರೋದಾ ರೀ, ಯಾರನ್ನ ನೋಡಿ ಹಾಕಂಗಿಲ್ಲ, ಯಾರೋ ಹೇಳಿದ್ರಂತ ತೆಗ್ಯಂಗಿಲ್ಲ. ಒಮ್ಮ ಬಂಗಾಳಕ್ಕ ಕಮ್ಯುನಿಸ್ಟ್‌ ಸಮಾವೇಶಕ್ಕ ಹೋಗಿದ್ದೆ. ಲಕ್ಷಾಂತರ ಜನರಲ್ಲಿ ನಾ ಒಬ್ಬ ಗಾಂಧಿಟೋಪಿಯಾಗ ಎದ್ದು ಕಾಣತಿದೆ. ನಮ್ ಕಮ್ಯುನಿಸ್ಟರು ಗಾಂಧಿ ಟೋಪಿ ಹಾಕಲ್ರಿ, ಆದ್ರ ಅದು ನಂಗ ಆಗಬರಲ್ಲ. ನಮ್ ಬಿಳಿ ಡ್ರೆಸ್ಸೂ ಕೆಂಪಾಗಿಲ್ಲ ನೋಡ್ರಿ’ ಎಂದು ನಗುತ್ತಲೇ ತಮ್ಮ ಸ್ವಂತಿಕೆಯ ಗುರುತನ್ನು ವಿವರಿಸಿದರು. ಹೀಗೆ ಕನಿಷ್ಠ ಒಂದೆರಡು ಗಂಟೆಗಳ ಕಾಲ ಅವರ ಜತೆ ಮಾತುಕತೆಯ ಚರ್ಚೆ ನಡೆಯಿತು. ಹೋರಾಟದ ಹಲವು ಮಜಲುಗಳನ್ನು, ಈ ಹೊತ್ತಿನ ರಾಜಕಾರಣದ ನಡೆಗಳನ್ನೂ ಚರ್ಚಿಸಿದರು. ಅಂತೆಯೇ ಈಗಲೂ ಬಿಡುವಿಲ್ಲದ ತಿರುಗಾಟದ ಬಗ್ಗೆ ವಿವರಿಸಿದರು.

ಅವರದೇ ಮಾತಿನಲ್ಲಿ ‘ಈ ವಯಸಾಗ ಸಮತೋಲನ ಕಾದ್ಕೊಂಡೋಗೋದು ಕಷ್ಟ ಅದ.. ಒಮ್ಮಮ್ಮ ಬಿಪಿ ಅಕ್ಕಾತಿ ನಮಗ. ಸಮಸ್ಯೆಗಳು ಬಂದಾಗ ಹಳ್ಳಿಗಳಿಗೆ ಹೋಗಾಕ್ ಹೈರಾಣಾಗ್ತದ, ಒಮ್ಮೊಮ್ಮೆ ಮಾನಸಿಕ ಆಗ್ತಾದ.. ಆದ್ರೂ ಮಾಡೋದು ಹೋರಾಟ ಮಾಡೋದರಾ.. ಯಾರಾದ್ರೂ ಬಂದ್ರ ಕೈರೊಕ್ಕ ಹಾಕಿ ಕರಕೊಂಡ್ ಹೊಕ್ಕಾರ, ಬರಲಿಕ್ಕಂದ್ರ ನಮ್ ಕೈರೊಕ್ಕ ಹಾಕ್ಕೊಂಡ್ ಹೋಗತೇವಿ. ಕೋರ್ಟ್‌, ಪೋಲಿಸ್ ಸ್ಟೇಷನ್ ಎಲ್ಲೂ ನ್ಯಾಯ ಸಿಗಲಾರದವು ನಮ್ ಕಡೀಗೆ ಬರ್ತಾವ, ನಾವ್ ಕೈಲಾದಷ್ಟು ಸಹಾಯ ಮಾಡಿ ನ್ಯಾಯ ಕೊಡಸತೇವಿ’ ಎನ್ನುತ್ತಾರೆ.

ಹೀಗೆ ಭೀಮಶಿ ಅವರ ಹೋರಾಟದ ಬದುಕಿನ ಮಗ್ಗಲುಗಳನ್ನು ನೋಡುತ್ತಾ ಹೋದರೆ ಕುತೂಹಲಕಾರಿ ತಿರುವುಗಳು ಕಾಣುತ್ತವೆ. ದೇಶವ್ಯಾಪಿಯಾಗಿದ್ದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಎನ್ನುವ ‘ಚಲೇ ಜಾವ್’ ಚಳವಳಿಯ ಕಾಲದಲ್ಲಿ ಬಿಜಾಪುರದ ಕುರುಬ ಸಮುದಾಯದ ಹಣಮಂತಪ್ಪ ಮತ್ತು ಹಣಮವ್ವ ಅವರ ಮಗನಾಗಿ ಭೀಮಶಿ ಡಿಸೆಂಬರ್ 27, 1942ರಲ್ಲಿ ಹುಟ್ಟಿದರು. ತಂದೆ ಜೀವನ ನಿರ್ವಹಣೆಗಾಗಿ ಸ್ವಂತ ಜಟಕಾ ಬಂಡಿ ಓಡಿಸುತ್ತಿದ್ದರು. ತಾಯಿ ಹೈನುಗಾರಿಕೆ ಮಾಡುತ್ತಾ ಕುಟುಂಬ ನಿರ್ವಹಣೆಗೆ ನೆರವಾಗಿದ್ದರು. ಮೂವರು ಸಹೋದರಿಯರು, ಐದು ಜನ ಸಹೋದರರನ್ನು ಒಳಗೊಂಡಂತೆ 10 ಜನರ ತುಂಬು ಕುಟುಂಬ ತುಂಬಾ ಕಷ್ಟದ ಜೀವನ ನಡೆಸುತ್ತಿತ್ತು.

ಭೀಮಶಿ 6ನೇ ತರಗತಿ ಓದಿ, ಮುಂದುವರಿಸಲಾಗದೆ ಬಿಜಾಪುರದ ನ್ಯೂಮಾರ್ಕೆಟ್ ಬಳಿ ಬೀಡಂಗಡಿ ತೆರೆದು ದುಡಿಮೆಗೆ ತೊಡಗಿಕೊಂಡರು. 1962ರಲ್ಲಿ ಗಂಗವ್ವಳೊಂದಿಗೆ ವಿವಾಹವಾದರು. ಮುಂದೆ ಇಬ್ಬರು ಗಂಡು, ಮೂವರು ಹೆಣ್ಣುಮಕ್ಕಳ ತಂದೆಯಾದರು. ಭೀಮಶಿ ತನ್ನ ಬದುಕಿನೊಂದಿಗೆ ತನ್ನ ಸುತ್ತಣ ಸಮಾಜವನ್ನು ಸೂಕ್ಷ್ಮವಾಗಿ ಗಮನಿಸತೊಡಗಿದರು. ಇದರ ಪರಿಣಾಮ ತನ್ನ ಕುಟುಂಬಕ್ಕಷ್ಟೇ ಸೀಮಿತವಾಗದೆ ಸಮಾಜಮುಖಿ ಕಾಳಜಿ ಹೆಚ್ಚತೊಡಗಿತು. ಸಮಾಜದಲ್ಲಿ ಎಷ್ಟೋ ಜನರಿಗೆ ಓಡಾಡಲು ಚಪ್ಪಲಿಯೇ ಇಲ್ಲ ಎಂದು ಒಮ್ಮೆ ಗಾಢವಾಗಿ ಅನ್ನಿಸಿ ತಾನು ಚಪ್ಪಲಿ ಹಾಕುವುದನ್ನು ತ್ಯಜಿಸಿದರು. ತೀರಾ ಸರಳವಾದ ಉಡುಪಿಗೆ ಸೀಮಿತವಾದರು. ಹೀಗೆ ಮೊದಲಿಗೆ ತನ್ನನ್ನು ತಾನು ಸರಳಗೊಳಿಸಿಕೊಂಡು, ಸಮಾಜದ ಸಮಸ್ಯೆಗಳಿಗೆ ಸ್ಪಂದಿಸತೊಡಗಿದರು.

ಸಮಾಜದ ಕೆಡುಕುಗಳಿಗೆ ನೊಂದು, ಬಿಜಾಪುರ ತೊರೆದು 1968ರಲ್ಲಿ ಅಕ್ಕನ ಮನೆಯಿದ್ದ ಹಿರೇ ಆಸಂಗಿಯಲ್ಲಿ ನೆಲೆನಿಂತು ಕೃಷಿಯಲ್ಲಿ ತೊಡಗಿಕೊಂಡರು. 1969-70ರ ಸಮಯದಲ್ಲಿ ಭೀಕರ ಬರಗಾಲ ಬಂದಾಗ ಐದು ದಿನ ಅನ್ನ-ನೀರು ಬಿಟ್ಟು ಮಳೆಗಾಗಿ ಪ್ರಾರ್ಥಿಸಿದರು. ನಿರಶನದ 5ನೇ ದಿನ ರಭಸವಾಗಿ ಮಳೆ ಬಂದ ಕಾರಣ ರೈತರು ಭೀಮಶಿಯನ್ನು ಉಪವಾಸ ಮುರಿಸಿ ಭಜನೆ ಮೆರವಣಿಗೆಯೊಂದಿಗೆ ಮನೆಗೆ ಕರೆತಂದರು.

WhatsApp Image 2024 08 06 at 10.52.09 AM

ಇಲ್ಲಿಂದ ಭೀಮಶಿ ಮನಸ್ಸಲ್ಲಿ ತಾಕಲಾಟಗಳು ಶುರುವಾಯಿತು. ಒಂದು ಬಗೆಯ ವೈರಾಗ್ಯ ತಾಳಿ ಸಮಾಜದ ಒಳಿತಿಗಾಗಿ ತಪ್ಪಸ್ಸು ಮಾಡಬೇಕೆಂಬ ನಿಲುವಿಗೆ ಬಂದರು. ಪರಿಣಾಮ ಮನೆ ತೊರೆದು ಪಯಣ ಬೆಳೆಸಿ ಗುಲ್ಬರ್ಗಾಕ್ಕೆ ಹೋದರು. ಅಲ್ಲಿ ಶರಣಬಸವ ಮತ್ತು ಬಂದೇನವಾಜ ದರ್ಗಾದಲ್ಲಿ ಒಂದೆರಡು ದಿನ ಕಳೆದು ತಪಸ್ಸಿಗೆ ಬಸವಕಲ್ಯಾಣಕ್ಕೆ ಹೊರಟರು. ಅಲ್ಲಿಯೂ ಮನಸ್ಸು ಹೊಂದಿಕೆಯಾಗದೆ, ಮುಂಬೈನತ್ತ ಪ್ರಯಾಣ ಬೆಳಸಿದರು. ಮುಂಬೈನ ಹಾಜಿಮಲಂಗ ಗುಡ್ಡದ ಮೇಲೆ ಧ್ಯಾನಕ್ಕೆ ಕೂತರು. ಇದನ್ನು ನೋಡಿದ ಯುವಕನೊಬ್ಬ ಈ ಸ್ಥಳ ಒಳ್ಳೆಯದಲ್ಲ ಎಂದು ಮನವೊಲಿಸಿ ಮುಂಬೈಗೆ ಕರೆತಂದನು.

ಸಮುದ್ರ ದಡದಲ್ಲಿ ಅಲೆಗಳ ಅಪ್ಪಳಿಸುವಿಕೆಯನ್ನು ಆಲಿಸುತ್ತಲೇ ಧ್ಯಾನದ ನಿರರ್ಥಕತೆಯ ಬಗ್ಗೆ ಯೋಚಿಸಿ ವಾಸ್ತವದಲ್ಲಿ ಚಿಂತಿಸಿದರು. ಉಪವಾಸದಿಂದ ಸಾಯುವುದಕ್ಕಿಂತ, ಸಾಯುವವವರೆಗೂ ಜನರ ಸಮಸ್ಯೆಗಳ ಪರವಾಗಿ ಹೋರಾಡಬೇಕು ಎನ್ನುವ ದೃಢ ನಿರ್ಧಾರಕ್ಕೆ ಬಂದರು. ಈ ಬಗೆಯ ಮನಸ್ಸಿನ ಬದಲಾವಣೆ ಕಂಡ ತಕ್ಷಣ ಬಿಜಾಪುರಕ್ಕೆ ಮರಳಿ ಕಟಿಬದ್ಧವಾಗಿ ಜನರ ಪರವಾಗಿ ಚಳವಳಿ ಹೋರಾಟದಲ್ಲಿ ತಮ್ಮನ್ನು ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡರು. ಆಗ ತನ್ನ ನಿಲುವುಗಳಿಗೆ ಹೊಂದಿಕೆಯಾಗುತ್ತಿದ್ದ ಕಮ್ಯುನಿಸ್ಟ್‌ ಚಳವಳಿಗಳತ್ತ ಆಕರ್ಷಿತರಾಗಿ 1972ರಲ್ಲಿ ಸಿಪಿಐ(ಎಂ) ಪಕ್ಷದ ಸಕ್ರಿಯ ಸದಸ್ಯತ್ವ ಪಡೆದರು. ರೈತರನ್ನು ಸಂಘಟಿಸಿದರು. ಹೀಗೆ ಆರಂಭವಾದ ಇವರ ಚಳವಳಿಯ ದಾರಿಯ ಪಯಣ ಇದೀಗ 75ನೇ ವರ್ಷಕ್ಕೆ ಕಾಲಿಟ್ಟಿದೆ. ಇಂತಹ ಭೀಮಶಿಯವರ ದಣಿವರಿಯದ ಚಳವಳಿಯ ಪಯಣ ಕೂಡ ಕುತೂಹಲಕಾರಿಯಾಗಿದೆ.

ಭೀಮಶಿ ಅವರ ಹೋರಾಟದ ಹಾದಿ

ಭೀಮಶಿ ಅವರು ಬಿಜಾಪುರ ಭಾಗದಲ್ಲಿ ರೈತಪರವಾದ ಗಟ್ಟಿಧ್ವನಿ ಮೊಳಗಿಸಲು ಸಂಗಾತಿಗಳನ್ನು ಸಜ್ಜುಗೊಳಿಸಿದವರು. 1980ರಲ್ಲಿ ಗುಂಡೂರಾವ್ ಸರ್ಕಾರ ನರಗುಂದದ ರೈತರ ಮೇಲೆ ಗೋಲಿಬಾರ್ ನಡೆಸಿದಾಗ, ಅದರ ವಿರುದ್ಧ ದೊಡ್ಡ ಹೋರಾಟವನ್ನು ರೂಪಿಸಿದರು. ಕರ್ನಾಟಕ ಪ್ರಾಂತ ರೈತ ಸಂಘದ ಮೂಲಕ ಈ ಭಾಗದಲ್ಲಿ ಹಲವಾರು ರೈತಪರ ಚಳವಳಿಗಳಲ್ಲಿ ಭೀಮಶಿ ಸಕ್ರಿಯವಾಗಿ ಪಾಲ್ಗೊಂಡರು. ಮುಖ್ಯವಾಗಿ ದೇವರಾಜ ಅರಸು ಕಾಲದಲ್ಲಿ ಜಾರಿಯಾದ ಭೂಸುಧಾರಣಾ ಕಾಯ್ದೆಯನ್ವಯ ಪಟ್ಟಭದ್ರರ ಭೂಹಿಡಿತವನ್ನು ತಪ್ಪಿಸಲು ಮತ್ತು ರೈತರಿಗೆ ಭೂಮಿ ಕೊಡಿಸಲು ಗ್ರಾಮಗಳಲ್ಲಿ ಜಾಗೃತಿ ಮೂಡಿಸುವ ಹಲವು ಬಗೆಯ ಹೋರಾಟಗಳನ್ನು ರೂಪಿಸುವಲ್ಲಿ ಭೀಮಶಿ ಅವರು ಶ್ರಮಿಸಿದ್ದಾರೆ.

ನಿರಂತರ ಬರದಿಂದ ಕೃಷಿಕರನ್ನು ಮುಕ್ತರನ್ನಾಗಿಸಲು ಬಿಜಾಪುರ ಜಿಲ್ಲೆಯೂ ಒಳಗೊಂಡಂತೆ ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆಗಳಿಗಾಗಿ ನಡೆದ ಹೋರಾಟಗಳಲ್ಲಿ ಭೀಮಶಿ ಪಾಲ್ಗೊಂಡಿದ್ದಾರೆ. ಮುಳವಾಡ ಮತ್ತು ಅಡಿಹುಡಿ ಏತನೀರಾವರಿ ಯೋಜನೆಗಾಗಿ ನಡೆದ ಹೋರಾಟ, ಕೃಷ್ಣ ಮೇಲ್ದಂಡೆ ಯೋಜನೆಯ ಕಳಪೆ ಕಾಮಗಾರಿ ವಿರುದ್ಧದ ಹೋರಾಟ, ನಾರಾಯಣಪುರ ಎಡದಂಡೆ ಕಾಲುವೆಗೆ ನೀರು ಬಿಡಿಸಲು ನಡೆದ ಪ್ರತಿಭಟನೆ, ಕೃಷ್ಣಾ ಕಾಲುವೆಯಿಂದ ಕೆರೆಗೆ ನೀರು ಬಿಡಿಸಲು ಹಕ್ಕೊತ್ತಾಯ, ಆಂಧ್ರದ ಗುತ್ತಿಗೆದಾರರ ವಿರುದ್ಧದ ಹೋರಾಟ, ಭೀಮಾ ನದಿಗೆ ಉಜನಿ ನೀರು ಬಿಡಿಸಲು ಹೋರಾಟ, ಕೃಷ್ಣ ಎಡದಂಡೆ ಕಾಲುವೆ ಉಳಿಸಿ ಹೋರಾಟ – ಹೀಗೆ ಉತ್ತರ ಕರ್ನಾಟಕ ಭಾಗದ ನೀರಾವರಿ ಹೋರಾಟಗಳನ್ನು ರೈತ ಸಂಘ, ಸಿಪಿಎಂ ಮೊದಲಾದ ಸಂಘಟನೆಗಳೊಡಗೂಡಿ ಜಂಟಿ ಹೋರಾಟಗಳು ರೂಪುಗೊಂಡಿವೆ. ಈ ಹೋರಾಟಗಳನ್ನು ರೂಪಿಸುವಲ್ಲಿ ಈ ಭಾಗದ ಇತರೆ ಚಳವಳಿಗಾರರೊಂದಿಗೆ ಭೀಮಶಿ ಪಾತ್ರ ದೊಡ್ಡದಿದೆ.

ಅಸಂಘಟಿಕ ಕಾರ್ಮಿಕರಲ್ಲಿ ಸಂಘಟನೆಯ ಮನೋಭಾವವನ್ನು ಬೆಳೆಸುವಲ್ಲಿ ಭೀಮಶಿ ಕಾಳಜಿ ಎದ್ದು ಕಾಣುತ್ತದೆ. 1992ರಲ್ಲಿ ಲಾರಿ ಹಮಾಲರ ಸಂಘವನ್ನು ಸ್ಥಾಪಿಸಿ ಅವರ ನ್ಯಾಯಯುತ ಬೇಡಿಕೆಗಳಿಗಾಗಿ ಹೋರಾಟಗಳನ್ನು ರೂಪಿಸಿದರು. ಅಂತೆಯೇ ಬೀಡಿ ಕಾರ್ಮಿಕರ ಸಂಘಟನೆಯನ್ನು ಮಾಡಿ ಅವರಲ್ಲಿ ಕಾರ್ಮಿಕ ಹೋರಾಟಗಳ ಮಹತ್ವವನ್ನು ವಿವರಿಸುತ್ತಲೇ ಸಂಘಟನೆಗೆ ಬೇಕಾದ ಮನಸ್ಥಿತಿಯನ್ನು ರೂಪಿಸಿದರು. ಹಾಗೆಯೇ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಸಂಘಟನೆ, ಬಿಸಿಯೂಟ ಅಡುಗೆಯವರ ಸಂಘಟನೆ, ಕುಸುಬಿ ಕೇರುವ ಮಹಿಳೆಯರ ಸಂಘ, ಪೌರಕಾರ್ಮಿಕರ ದಿನಗೂಲಿ ನೌಕರರ ಸಂಘ. ಕೃಷಿ ಕೂಲಿಕಾರ್ಮಿಕರ ಸಂಘ ಹೀಗೆ ಹಲವು ಅಸಂಘಟಿಕ ವಲಯಗಳಲ್ಲಿ ಸಂಘಟನೆಯನ್ನು ಕಟ್ಟಿ ಅವರ ಪರವಾದ ನ್ಯಾಯಯುತ ಬೇಡಿಕೆಗಳಿಗಾಗಿ ಜೊತೆಯಾಗಿದ್ದಾರೆ.

WhatsApp Image 2024 08 06 at 10.52.09 AM 1

ಹಲವು ಕೆಳಸಮುದಾಯಗಳಲ್ಲಿಯೂ ಭೀಮಶಿ ಅವರು ಪ್ರತಿಭಟನೆಯ ಅರಿವನ್ನು ಮೂಡಿಸಿದ್ದಾರೆ. ಮುಖ್ಯವಾಗಿ ಈ ಭಾಗದಲ್ಲಿ ಹೆಚ್ಚಾಗಿರುವ ಲಂಬಾಣಿ ಸಮುದಾಯದ ಸಮಸ್ಯೆಗಳ ಪರವಾಗಿ ಧ್ವನಿ ಎತ್ತಿದ್ದಾರೆ. ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ತಾಂಡಾದ ಯುವತಿಯನ್ನು ಅಪಹರಿಸಿ ಅತ್ಯಾಚಾರ ಮಾಡಿ ಅವಳನ್ನು ಅಕ್ರಮವಾಗಿ ಅಡಗಿಸಿಡಲಾಗಿತ್ತು. ಆಗ ಅಪರಾಧಿಗಳೊಂದಿಗೆ ಶಾಮೀಲಾಗಿದ್ದ ಪೋಲೀಸ್ ವ್ಯವಸ್ಥೆಯನ್ನು ತರಾಟೆಗೆ ತೆಗೆದುಕೊಂಡು ಸಂತ್ರಸ್ಥೆಯನ್ನು ಬಿಡುಗಡೆಗೊಳಿಸಿದ್ದಲ್ಲದೆ, ಪರಿಹಾರವೂ ದೊರೆಯುವಂತೆ ಮಾಡಿದ್ದರು. ಕೌಜಲಗಿ ತಾಂಡಾದ ಲಂಬಾಣಿಗರಿಗೆ ಸರ್ಕಾರಿ ಜಾಗ ಹಂಚಿಕೆ ಮಾಡಿಸಲು ಶ್ರಮಿಸಿದ್ದಾರೆ. ಸಿಂಧಗಿ ತಾಲೂಕಿನ ಚಟ್ಟರಕಿ ಗ್ರಾಮದ ಅಗಸ ಸಮುದಾಯದ ದಬ್ಬಾಳಿಕೆಯನ್ನು ತಹಬದಿಗೆ ತರುವಲ್ಲಿಯೂ ನಿರ್ಣಾಯಕ ಪಾತ್ರ ವಹಿಸಿದ್ದರು. ಅಂತೆಯೇ ಭೋವಿ ಸಮುದಾಯದ ಸಮಸ್ಯೆಗಳಿಗೂ ಸ್ಪಂದಿಸಿದ್ದಾರೆ.

ಭೀಮಶಿ ದಲಿತರ ಪ್ರಶ್ನೆಗಳಿಗಾಗಿಯೂ ಚಳವಳಿ ರೂಪಿಸಿದ್ದಾರೆ. ಬಿಜಾಪುರ ತಾಲೂಕಿನ ಅರ್ಜುಣಗಿ ಗ್ರಾಮದ ಬಳಿ ಸರ್ಕಾರಿ ಜಮೀನಿನಲ್ಲಿ ಮುಳ್ಳುಕಂಟಿಗಳು ಬೆಳೆದಿದ್ದವು. ಇಂತಹ ಸಂದರ್ಭದಲ್ಲಿ ಹೆಬ್ಬಾಳಟ್ಟಿ ಗ್ರಾಮದ ಲಕ್ಷಣ ಮಾದಾರ ಅವರು ರೈತಸಂಘದ ಅಧ್ಯಕ್ಷರಾಗಿದ್ದ ಭೀಮಶಿ ಅವರಲ್ಲಿ ಈ ಭೂಮಿ ಕೊಡಿಸುವ ಬಗ್ಗೆ ಮನವಿ ಮಾಡಿದರು. ಇದನ್ನು ಪರಿಶೀಲಿಸಿ ಭೂಸುಧಾರಣಾ ಕಾಯ್ದೆಯನ್ವಯ ಈ ಭೂಮಿಗಾಗಿ ದಲಿತರಿಂದ ಅರ್ಜಿ ಹಾಕಿಸಿದರು. ಈ ವಿಯಷ ತಿಳಿದು ಮೇಲುಜಾತಿಗಳು ಈ ಭೂಮಿಯು ದಲಿತರಿಗೆ ದಕ್ಕದಂತೆ ಕುತಂತ್ರ ಮಾಡಿದರು. ಭೀಮಶೀಯವರ ನಿರಂತರ ಹೋರಾಟದಿಂದ ಹೆಬ್ಬಾಳಟ್ಟಿಯ 13 ಜನ ದಲಿತ ಕುಟುಂಬಗಳಿಗೆ ಒಟ್ಟು 27 ಎಕರೆ ಹೊಲದ ಹಂಚಿಕೆಯಾಯಿತು. ಬಸವನ ಬಾಗೇವಾಡಿ ತಾಲೂಕಿನ ಕಡಕೋಳ ಗ್ರಾಮದ ದಲಿತರಿಗೆ ಕೆರೆ ನೀರು ಬಳಸದಂತೆ ಬಹಿಷ್ಕಾರ ಹಾಕಿದಾಗ ದೊಡ್ಡ ಚಳವಳಿಯನ್ನು ರೂಪಿಸಿ ಕೆರೆಯನ್ನು ದಲಿತರಿಗೆ ಮುಕ್ತವಾಗಿಸುವ ಹೋರಾಟದಲ್ಲಿ ಪಾಲ್ಗೊಂಡರು. ಹೀಗೆ ಬಿಜಾಪುರ ಭಾಗದಲ್ಲಿ ಎಲ್ಲಿಯೆ ದಲಿತರ ಬಹಿಷ್ಕಾರ, ಹಿಂಸೆ, ಮೇಲ್ಜಾತಿಗಳ ದಬ್ಬಾಳಿಕೆ ನಡೆದಾಗಲೆಲ್ಲಾ ಭೀಮಶಿ ತನ್ನ ಸಂಗಾತಿಗಳೊಂದಿಗೆ ದಲಿತರ ಪರವಾಗಿ ಹೋರಾಟಗಳನ್ನು ರೂಪಿಸಲು ಸಕ್ರಿಯವಾಗಿ ಶ್ರಮಿಸಿದ್ದಾರೆ.

ಭೀಮಶಿ ಅವರು ಗಾಂಧಿ ಪ್ರಣೀತ ನೈತಿಕವಾದಿಯಾದ ಕಾರಣ ಅಕ್ರಮ ಮದ್ಯ ಮಾರಾಟ, ಅಕ್ರಮ ವೇಶ್ಯಾವಾಟಿಕೆ ದಂಧೆ ಮುಂತಾದ ಅನೈತಿಕ ಚಟುವಟಿಕೆಗಳ ವಿರುದ್ಧವೂ ಜನಭಿಪ್ರಾಯ ರೂಪಿಸಿದ್ದಾರೆ. ಅಂತೆಯೇ ಸರ್ಕಾರಿ ಅಧಿಕಾರಿಗಳ ವಿರುದ್ಧದ ಭ್ರಷ್ಟಾಚಾರದ ವಿರುದ್ಧ ಭೀಮಶಿ ಸಮರವನ್ನೇ ಸಾರಿದ್ದರು. ಭ್ರಷ್ಟ ಅಧಿಕಾರಿಗಳ ಸುಳಿವು ಸಿಕ್ಕಾಗಲೆಲ್ಲ ಅವರ ಲಂಚಗುಳಿತನದ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಜನಸಾಮಾನ್ಯರಿಗೆ ಇವರಿಂದಾಗುತ್ತಿದ್ದ ತೊಂದರೆಗಳನ್ನು ತಪ್ಪಿಸಿದ್ದಾರೆ. ಹೀಗಾಗಿಯೇ ಈ ಭಾಗದ ಸರ್ಕಾರಿ ಅಧಿಕಾರಿಗಳಿಗೆ ಭೀಮಶಿ ಒಂದು ಬಗೆಯಲ್ಲಿ ಸಿಂಹಸ್ವಪ್ನವಾಗಿದ್ದರು.

ಹಿಂದು-ಮುಸ್ಲಿಂ ಸೌಹಾರ್ದತೆಗೆ ಭೀಮಶಿ ಕೊಡುಗೆ

ಬಿಜಾಪುರದಲ್ಲಿ ಆದಿಲ್ ಶಾಹಿಗಳ ಆಡಳಿತದ ಕಾರಣಕ್ಕೆ ಸಹಜವಾಗಿ ಮುಸ್ಲಿಂಮರ ಸಂಖ್ಯೆ ಹೆಚ್ಚಿದೆ. ಈ ಕಾರಣಕ್ಕೆ ಇಲ್ಲಿ ಹಿಂದೂ ಮೂಲಭೂತವಾದಿ ಸಂಘಟನೆಗಳೂ ಕ್ರಿಯಾಶೀಲವಾಗಿವೆ. ಇಂತಹ ಪರಿಸರದಲ್ಲಿ ಭೀಮಶಿ ಸಂಗಾತಿಗಳು ಕೋಮುಸೌಹಾರ್ದಕ್ಕಾಗಿ ಹಲವಾರು ಚಳವಳಿ, ಜಾಗೃತಿ ಸಮಾವೇಶಗಳನ್ನು ರೂಪಿಸಿದ್ದಾರೆ. 1983-84ರಲ್ಲಿ ಮುಸ್ಲಿಂ ವ್ಯಾಪಾರಿಗಳೇ ಹೆಚ್ಚಿದ್ದ ವಿಜಯಪುರ ನಗರದ ಮಧ್ಯೆ ಭಾಗದಲ್ಲಿದ್ದ ಕಿರಾಣಿ ಮಾರುಕಟ್ಟೆಯನ್ನು ಕೋಮುವಾದಿ ಸಂಘಪರಿವಾರದವರು ಸುಟ್ಟು ಭಸ್ಮಮಾಡಿದ್ದರು. ಈ ಸಂದರ್ಭದಲ್ಲಿ ತನ್ನ ಸಂಗಾತಿಗಳೊಂದಿಗೆ ವ್ಯಾಪಾರಸ್ಥರ ಪುನರ್ ವಸತಿಗಾಗಿ ಭೀಮಶಿ ಹೋರಾಟ ರೂಪಿಸಿದರು. 1992 ಬಾಬ್ರಿ ಮಸೀದಿ ದ್ವಂಸಗೊಳಿಸಿದ ಪ್ರಕರಣದ ಬಿಸಿ ಬಿಜಾಪುರಕ್ಕೂ ಮುಟ್ಟಿತ್ತು. ಇದರ ಪರಿಣಾಮ ಹಿಂದೂ-ಮುಸ್ಲಿಂ ಸಂಘರ್ಷಗಳಾದಾಗ ಭೀಮಶಿ ಸಂಗಾತಿಗಳೊಡಗೂಡಿ ಸೌಹಾರ್ದಕ್ಕಾಗಿ ಜನರ ಸಭೆಗಳನ್ನು ಮಾಡಿದರು.

ರಾಷ್ಟ್ರೀಯ ಏಕತಾ ಆಂದೋಲನದ ಸಮಿತಿಯ ಸಂಚಾಲಕರಾಗಿದ್ದ ಭೀಮಶಿ ಅವರು ಸಂಗಾತಿಗಳೊಂದಿಗೆ ಸೌಹಾರ್ದತೆಗಾಗಿ ಸಹಿ ಸಂಗ್ರಹ ಜಾಥಾಗಳನ್ನು ಹಮ್ಮಿಕೊಂಡಿದ್ದರು. ಸೌಹಾರ್ದತೆಗಾಗಿ ಇಂಡಿ ಬಸವನ ಬಾಗೇವಾಡಿ ಒಳಗೊಂಡಂತೆ ಬಿಜಾಪುರ ಜಿಲ್ಲೆಯ ಹಲವೆಡೆಗಳಲ್ಲಿ ಮಾನವ ಸರಪಳಿ ರಚಿಸಿ ಜಾಗೃತಿ ಮೂಡಿಸುವ ಕೆಲಸದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ಸಿಪಿಐ(ಎಂ) ಪಕ್ಷವು 2008ರಲ್ಲಿ ಕೋಮುವಾದದ ವಿರುದ್ಧ ಜನಜಾಗೃತಿ ಜೀಪ್ ಜಾಥಾ ನಡೆಸಿದಾಗ ಕೂಡಲ ಸಂಗಮದಿಂದ ಹೊರಡುವ ಜೀಪ್ ಜಾಥಾದ ಜವಾಬ್ದಾರಿಯನ್ನು ಭೀಮಶಿ ವಹಿಸಿದ್ದರು. ಈ ಜಾಥಾ ಸಿಂಧಗಿ, ವಿಜಯಪುರ ಮಾರ್ಗವಾಗಿ ಜಮಖಂಡಿಯನ್ನು ತಲುಪಬೇಕಿತ್ತು. ಇದು ಹಳ್ಳಿಹಳ್ಳಿಗಳಲ್ಲಿ ಕೋಮುಸೌಹಾರ್ದದ ಬಗ್ಗೆ ಅರಿವು ಮೂಡಿಸುವ ಭಾಷಣ, ಹಾಡು, ಬೀದಿನಾಟಕ ಒಳಗೊಂಡಂತೆ ಸೌಹಾರ್ದತೆಯ ಸಂಕೇತವಾದ ಜನಪದ ಕಲೆಗಳನ್ನು ಒಳಗೊಂಡಿತ್ತು. ಹೀಗೆ ಬಿಜಾಪುರ ಜಿಲ್ಲೆಯ ಯಾವ ಭಾಗದಲ್ಲಿಯೇ ಕೋಮುಗಲಭೆಗಳು ನಡೆದಾಗ ಭೀಮಶಿ ಅವರು ತನ್ನ ಸಂಗಾತಿಗಳೊಡಗೂಡಿ ಅಲ್ಲಲ್ಲಿಗೆ ತೆರಳಿ ಸೌಹಾರ್ದತೆ ಮೂಡಿಸುವ ಚಟುವಟಿಕೆಗಳನ್ನು ನಡೆಸಿದ್ದಾರೆ. ಭೀಮಶಿ ಪೋಲೀಸ್, ಕೋರ್ಟ್‌, ಕಚೇರಿಗಳಾಚೆ ತಾವೇ ಕುಂತು ನ್ಯಾಯ ಪಂಚಾಯ್ತಿ ಮಾಡಿ ಬಗೆಹರಿಸಿರುವ ಹಲವಾರು ನಿದರ್ಶನಗಳಿವೆ.

WhatsApp Image 2024 08 06 at 10.52.09 AM 3

ಸಹಜವಾಗಿ ಪಟ್ಟಭದ್ರರನ್ನು, ಜಮೀನ್ದಾರರನ್ನು, ರಾಜಕಾರಣಿಗಳನ್ನು, ಅಧಿಕಾರಶಾಹಿಯನ್ನು ಎದುರು ಹಾಕಿಕೊಂಡಿದ್ದ ಭೀಮಶಿ ಅವರಿಗೆ ಹಲವಾರು ಆಮಿಷಗಳನ್ನು ಒಡ್ಡಲಾಗಿತ್ತು. ಆದರೆ, ಅಂತಹ ಆಮಿಷಗಳಿಗೆ ಬಲಿಯಾಗದೆ ಗಟ್ಟಿಯಾಗಿ ನಿಂತಾಗ ಕೆವಲರು ದಮನಗೊಳಿಸುವ ಅಥವಾ ಭಯಗೊಳಿಸಲು ಯತ್ನಸಿದರು. ಆಮಿಷ, ಬೆದರಿಕೆಗಳಿಗೆ ಸೊಪ್ಪುಹಾಕದ ಭೀಮಶಿ ಧೈರ್ಯವಾಗಿ ಹೋರಾಟ ಮುಂದುವರೆಸಿದರು. ಆದರೆ, ಒಮ್ಮೆ ಮಾತ್ರ ಸಿನಿಮೀಯ ರೀತಿಯಲ್ಲಿ ಭೀಮಶಿ ಅವರನ್ನು ಅಪಹರಣ ಮಾಡಲಾಗಿತ್ತು. ಇದು ಬಿಜಾಪರದಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಕೊಲೆಯ ಸಂಚು ಹೂಡಿ ಅವರನ್ನು ಅಪಹರಿಸಲಾಗಿತ್ತಾದರೂ, ಭೀಮಶಿ ಯಾವುದೇ ಅಪಾಯವಾಗದೆ ಮರಳಿದರು.

ಭೀಮಶಿ ರಚಿಸಿದ ಪುಸ್ತಕಗಳು

ಭೀಮಶಿ ಅವರು ತಮ್ಮ ಹೋರಾಟದ ಅನುಭವಗಳನ್ನು ಒಳಗೊಂಡಂತೆ 1975ರಲ್ಲಿ ‘ಸಮಾಜವಾದ’ ಎನ್ನುವ ಪುಸ್ತಕವನ್ನು ಪ್ರಕಟಿಸಿದರು. ಈ ಕೃತಿಯಲ್ಲಿ ಸರ್ಕಾರದ ಇಲಾಖೆಗಳಲ್ಲಿ ಹೇಗೆ ಭ್ರಷ್ಟಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ಲೇಷಿಸಿದ್ದರು. ಈ ಕೃತಿಯನ್ನು ಅಂದಿನ ರಾಷ್ಟ್ರೀಯ ಕಾರ್ಮಿಕ ನಾಯಕ ಜಾರ್ಜ್ ಫರ್ನಾಂಡಿಸ್ ಬಿಡುಗಡೆ ಮಾಡಿದ್ದರು. ಭ್ರ‍ಷ್ಟಾಚಾರದ ವಿವರಗಳು ದಾಖಲಾದ ಕಾರಣ ಈ ಪುಸ್ತಕ ಚರ್ಚೆಯನ್ನು ಹುಟ್ಟುಹಾಕಿ ಸಂಚಲನ ಮೂಡಿಸಿತ್ತು. 2011ರಲ್ಲಿ ‘ಅವಳಿ ಜಿಲ್ಲೆಗಳ ನೀರಾವರಿ ಹೋರಾಟಗಳ ಇತಿಹಾಸ’ ಎನ್ನುವ ಕೃತಿಯನ್ನು ಬರೆದು ಚಳವಳಿಯ ಇತಿಹಾಸವನ್ನು ದಾಖಲಿಸಿದರು. 2012ರಲ್ಲಿ ‘ಉತ್ತಮ ಬದುಕಿಗಾಗಿ ಪಂಚಾಯತ್ ನೌಕರರ ಹೋರಾಟಗಳು’ ಎನ್ನುವ ಕೃತಿಯನ್ನು ರಚಿಸಿದರು.

ಹೀಗೆ 6ನೇ ತರಗತಿಯವರೆಗೆ ಮಾತ್ರ ಔಪಚಾರಿಕ ಶಿಕ್ಷಣ ಪಡೆದರೂ, ಭೀಮಶಿ ಅವರು ತಮ್ಮ ಹೋರಾಟಗಳ ಬದುಕಿನ ಅನುಭವದಿಂದ ಕಲಿತದ್ದೇ ಹೆಚ್ಚು. ಈ ಕೃತಿಗಳು ಅವರ ಅನುಭವದ ಸಾರರೂಪಿಗಳಾಗಿವೆ. ಎಂ.ಎಸ್ ಪಾಟೀಲ್ ಎನ್ನುವವರು ನಡೆಸುತ್ತಿದ್ದ ‘ರೈತ ಸಂಘಟನೆ’ ಪತ್ರಿಕೆಯ ಜವಾಬ್ದಾರಿ ಭೀಮಶಿ ಅವರ ಮೇಲೆ ಬಿದ್ದಾಗ ಪತ್ರಿಕೆಗೆ ಸಂಪಾದಕರಾಗಿ ಕೆಲವು ವರ್ಷಗಳ ಕಾಲ ತಮ್ಮ ಹೋರಾಟಗಳ ಮುಖವಾಣಿಯಾಗಿ ಈ ಪತ್ರಿಕೆಯನ್ನು ಪ್ರಕಟಿಸಿದರು.

ಭೀಮಶಿ ರಾಜಕಾರಣ

ನಿರಂತರ ಹೋರಾಟದ ಅನುಭವದಲ್ಲಿ ಭ್ರಷ್ಟ ರಾಜಕಾರಣಿಗಳ ವಿರುದ್ಧ ಹೋರಾಡೋದಕ್ಕಿಂತ, ರಾಜಕೀಯ ಪ್ರವೇಶಿಸಿ ಜನಪ್ರತಿನಿಧಿಯಾಗಿ ಕೆಲಸ ಮಾಡುವ ಬಗ್ಗೆ ಸಂಗಾತಿಗಳಲ್ಲಿ ಚರ್ಚೆಯಾಯಿತು. ಇದರ ಪರಿಣಾಮ ಒಮ್ಮೆ ವಿಧಾನಸಭಾ ಸದಸ್ಯತ್ವಕ್ಕೆ ಭೀಮಶಿ ಸ್ಪರ್ಧಿಸಿದರು. ಈ ಸಂದರ್ಭವನ್ನು ಅವರು ನೆನಪಿಸಿಕೊಳ್ಳುತ್ತಾ ‘ಎಲ್ಲರೂ ಮತ ಹಾಕ್ತೀವಿ ಅಂತೇಳತಿದ್ರು, ಆದರ ಗೆಲ್ಲಲಿಲ್ಲ. 1,600 ಮತ ಬಿದ್ದಿದ್ವು. ಅವತ್ತ ತೀರ್ಮಾನ ಮಾಡದೆ ಮತ್ತೆ ಎಲೆಕ್ಷನ್‌ಗ ನಿಲ್ಲೋದು ಬ್ಯಾಡ ಅಂತ. ಈ ಬಂಡವಾಳಶಾಹಿ ವ್ಯವಸ್ಥ ಹೋಗೋತಕಾ ಕಾರ್ಪೋರೇಟ್‍ಗಳ ಹಿಡಿತಾ ತಪ್ಪೋತಕಾ, ಹಣ ಖರ್ಚು ಮಾಡದೆ ಜನಪ್ರತಿನಿಧಿಗಳು ಗೆಲ್ಲೋಕೆ ಸಾಧ್ಯವಿಲ್ಲ. ಹಂಗೇ ಒಳ್ಳೆ ಸರ್ಕಾರ ಬರೋಕ್ ಸಾಧ್ಯ ಇಲ್ಲ. ಎಲೆಕ್ಷನ್ಯಾಗ ಬಡವರನ್ನ ಕೆಡವಿ, ದರೋಡೆಕೋರರೆಲ್ಲ ಗೆದ್ದು ಬರ್ತಾರ ಇನ್ನು ಬಡವ್ರು ರೈತ್ರು ಉದ್ದಾರ ಆಗಂದ್ರ ಹೆಂಗ್ ಅಕ್ಕಾರ?’ ಎನ್ನುತ್ತಾರೆ.

ಮೊದಲೇ ಹೇಳಿದಂತೆ ಭೀಮಶಿ ಆರನೆ ತರಗತಿ ಓದಿದವರು. ಮನೆ ಪರಿಸರದಲ್ಲಿ ಒಂದು ಪುಸ್ತಕವು ಕಾಣಲಿಲ್ಲ. ಈ ಬಗ್ಗೆ ಕುತೂಹಲದಿಂದ ಕೇಳಿದಾಗ, ‘ಕಚೇರಿ ಒಳಗ ಪುಸ್ತಕಗಳು ಇದಾವ್ರಿ’ ಎಂದರು. ನಾನು ಮಾತು ಮುಂದುವರೆಸಿ ಕಮ್ಯುನಿಸ್ಟ್‌ ಪಾರ್ಟಿ ಮತ್ತು ಸಿದ್ಧಾಂತದ ಕುರಿತು ನಿಮ್ಮ ಓದಿನ ಬಗ್ಗೆ ಕುತೂಹಲವಿದೆ ಎಂದಾಗ, ಅವರು ತತ್ವಕ್ಕಿಂತ ನಡೆನುಡಿ ಮುಖ್ಯ ಎನ್ನುವ ವಚನಕಾರರ ನಿಲುವನ್ನು ತಾಳುತ್ತಾರೆ.ಬುಕ್ಕ ತತ್ವ ಓದಾದ್ ಸರಳದ, ಆದ್ರ ನಡೆಯೋದ್ ಕಠಿಣ ಅದ, ಕಮ್ಯುನಿಷ್ಟ ಪಕ್ಷದ ಸಿದ್ಧಾಂತ ಓದಿದವ ನಡಿಯೋದ್ ಭಾಳ ಕಠಿಣ ಅದ. ಕೆಲವು ಜನ ಸಿದ್ಧಾಂತ ಓದಿ ಅದರಂಗ ನಡಿಯಂಗಿಲ್ಲ. ಬೇಕಾದಷ್ಟು ಸಿದ್ದಾಂತ ಓದಿ ಹಿಂದೋಗಿ ರೊಕ್ಕಾ ತಿಂದ್ರ ನಾವ್ ಏನ್ ಮಾಡಾಣ..ಹೋರಾಟ ದಂದಾ ಆಗಬಾರದು. ಹಂಗಾಗಿ ನಾನು ಹೆಚ್ಚು ಓದಿದ್ದಕ್ಕಿಂತ ಹೋರಾಟದ ಅನುಭವಗಳಲ್ಲಿ ಕಲಿತದ್ದೇ ಹೆಚ್ಚು’ ಎನ್ನುತ್ತಾರೆ.

ಮುಂದುವರಿದು ‘ನಾವ್ ಹೋರಾಟ್ ಮಾಡಿದ ಊರ್‍ಗಳಲ್ಲಿ ದರವೊಂದ್ ಹಳ್ಳಿಗೊಳಗ ಹೋದ್ರ ಗೌಡ್ರು ದೊಡ್ ದೊಡ್ ಮಂದಿ ಹೊರಾಗ್ ಬರ್ತಿರ್ಲಿಲ್ಲ. ಭಿಮಸೇರು ಹೋಗ್ಯಾರಿಲ್ಲೋ ಅಂತ ಕೇಳತಿದ್ರು. ನಾಯೇನು ಹೊಡಿದುಲ್ಲ ಬಡಿದುಲ್ಲ, ನಾಯೇನ್ ದೊಡ್ಡ ಡಿಗ್ರಿ ತಗಂಡಿಲ್ಲ, ಡ್ರೆಸ್ಸಾದ್ರೂ ಬರೋಬರಿ ಇಲ್ಲ ಆದ್ರ ಎದುಕು ಭಯ ಅಂದ್ರ ನೈತಿಕ ಮಟ್ಟ ಚಲೋ ಐತಂತ ತಪ್ ಮಾಡಿದವ್ರು ಅಂಜತಾರ, ಈಗ್ ನಾವ್ ಇಷ್ಟು ಕಂಟ್ರೋಲ್ ಇದ್ರೂ ವಿರೋಧಿಗಳು ಟೀಕಾ ಮಾಡತಾರ, ನಾವ್ ಖರೇ ಇದ್ರ ಯಾರಿಗೂ ಎದ್ರೋ ಅವಶ್ಯ ಇಲ್ಲ’ ಎನ್ನುವುದು ಭೀಮಶಿ ಅವರ ಖಚಿತ ನಿಲುವು.

ಈ ವರದಿ ಓದಿದ್ದೀರಾ?: ವೆನೆಜುವೆಲಾ ಚುನಾವಣೆ | ಫಲಿತಾಂಶದ ವಿರುದ್ಧ ವಿಪಕ್ಷಗಳ ಪ್ರತಿಭಟನೆ – ಅಮೆರಿಕ ಕುಮ್ಮಕ್ಕು?

ಭೀಮಶಿ ಅವರು ಹೋರಾಟಗಾರರು ಭ್ರಷ್ಟರಾಗುವ ಬಗ್ಗೆಯೂ ಅವರದೇ ನೆಲೆಯಲ್ಲಿ ಕಾರಣ ಶೋಧ ಮಾಡಿದ್ದಾರೆ. ಇದನ್ನು ಅವರು ವಯಕ್ತಿಕ ನೆಲೆಯ ಪ್ರಯೋಗದ ಹಿನ್ನೆಲೆಯಲ್ಲಿ ಗುರುತಿಸಲು ಪ್ರಯತ್ನಿಸುತ್ತಾರೆ. ‘ನಮಗೆ ಮೊದ್ಲಿಂದ್ ಯಾವ್ ಚಟಗಳಿಲ್ಲ ಚಾ ಬೀಡಿ ಸಿಗರೇಟ್ ಸಿಂಧಿ ಮಾಂಸ ಇವ್ಯಾವೂ ನಮ್ ಸಮೀಪ ಸುಳಿದಿಲ್ಲ. ಹೋರಾಟ್ ಮಾಡಾರಿಗೆ ಹಣ, ಆಸ್ತಿ, ಹೆಣ್ಣು ಹೆಂಡ ಬಟ್ಟೆಬರೆ ಪ್ರಚಾರ ಇವ್ಯಾವುಗಳ ಮೇಲೆ ಆಸೆ ಇರಬಾರ್ದು. ಇವು ಇದ್ರ ಹೋರಾಟದ ನೆಪದಾಗ ಜನರನ್ನು ಸುಲಿಗೆ ಮಾಡಬೇಕಕ್ಕಾತಿ. ಹಂಗಾಗಿ ಹೋರಾಟಗಾರರಿಗೆ ಯಾವದೇ ಚಟಗಳಿರಬಾರದು. ಆಸೆಗಳು ಇದ್ರ ಇವುಗಳ ಆಮಿಶ ತೋರ್ಸಿ ಹೋರಾಟಗಾರರನ್ನ ಭ್ರಷ್ಟರನ್ನಾಗಿ ಮಾಡತಾರ. ಇವತ್ತು ಹೋರಾಟಗಾರ್ರು ಚಳವಳಿಗಾರರು ಕೆಟ್ಟೋಗಿರೋದೆ ಇದರಿಂದ ನೋಡ್ರಿ’ ಎಂದು ಹೋರಾಟಗಾರರ ನಡೆಯನ್ನು ವಿವರಿಸುತ್ತಾರೆ.

ವರ್ತಮಾನದ ರಾಜಕಾರಣವನ್ನೂ ಭೀಮಶಿ ಅವರು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಕುತೂಹಲಕ್ಕೆ ಕೇಂದ್ರದ ನರೇಂದ್ರ ಮೋದಿ ಅವರ ಆಡಳಿತದ ಬಗ್ಗೆ ಕೇಳಿದಾಗ ಮೋದಿ ರೈತ ಕಾರ್ಮಿಕ ಪರವಾಗಿಲ್ಲ, ಬಂಡವಾಳಶಾಹಿ ಕಾರ್ಪೋರೇಟ್ಸ್ ಪರವಾಗಿ ಇದಾನ. ಡೋಂಗಿ ನಾಟಕ್ ಮಾಡಿ ಸೋಗ್ ಹಾಕ್ಯಾನ. ಮುಖವಾಡ ಹಾಕ್ಯೋಂಡ್ ಭಾರತ ಸ್ವಚ್ಚ ಮಾಡಾಕತ್ಯಾನ. ನೋಡರಿ ರೈತರ ನಾಶ ಮಾಡಲಕ ಭೂಸ್ವಾಧೀನ ಸುಗ್ರೀವಾಜ್ಞೆ ಮಾಡಿದ, ನಾವ್ ಹೋರಾಟ ಮಾಡಿದಕ ಇದನ್ನ ತಡೆ ಹಿಡಿಯೋಕ್ ಸಾಧ್ಯ ಆಯ್ತು…’ ಎನ್ನುತ್ತಾ ಕಾಂಗ್ರೇಸ್ಸಾ ಬೀಜೇಪಿ ಒಂದ್ ನಾಣ್ಯದ ಎರಡು ಮುಖ ಇದ್ದಾಂಗ’ ಎನ್ನುತ್ತಾರೆ. ಅಂತೆಯೇ ಕರ್ನಾಟಕದ ಸರಕಾರದ ಬಗ್ಗೆಯೂ ಸಿನಿಕತೆ ಇಲ್ಲದೆ ಪ್ರತಿಕ್ರಿಯಿಸುತ್ತಾರೆ,ನಾವು ಸಿದ್ದರಾಮಯ್ಯ ಇದ್ರೂ ಟೀಕಾ ಮಾಡ್ತೀವಿ, ಅಧಿಕಾರಕ್ ಬಂದ್ ಗಳೆ ಅನ್ನಭಾಗ್ಯ ಅಂತ ಒಂದ್ರುಪಾಯ್ ಕೆಜಿ ಅಕ್ಕಿ ಮಾಡಿದ. ಇದ್ರಲ್ಲಿ ಎಷ್ಟು ಬಡ್ರು ಉಪಾಸ ಬೀಳೋರು ಬದುಕಿದ್ರು. ಇದರಲ್ಲಿ ಪಕ್ಷ ನೋಡೋದ್ ಬ್ಯಾಡ ಮಾನವೀಯತೆ ನೋಡಾಣ, ಈಗಿನ ಕಾಂಗ್ರೇಸ್ ಸರಕಾರ ಇದ್ದದ್ರಲ್ಲಿ ಚಲೋ ಆಡಳಿತ ನಡಿಸ್ಯಾರ’ ಎನ್ನುತ್ತಾರೆ.

ಇಂದಿನ ರಾಜಕಾರಣ ಮತ್ತವರ ಕಾರ್ಯಚಟುವಟಿಕೆಯ ಬಗ್ಗೆಯೂ ವಿಮರ್ಶೆ ಮಾಡುತ್ತಾರೆ. ಈ ಕಾಲ್ದಾಗ ಬಿಜೆಪಿ ಜನ್ಥಾ ಕಾಂಗ್ರೇಸ್ ಎಲ್ರೂನು ರೊಕ್ಕ ಕೊಟ್ ಜನಗಳನ್ನ ತಂದು ಬೆಂಬಲ ತೋರಿಸ್ತಾರ. ಕುಣಿಲಾಕ ದುಡ್ ಕೊಡ್ತಾರ..ಕೇಕಿ ಹೊಡಿಲಾಕ್ ದುಡ್ಡು ಕೊಡ್ತಾರ.. ಆದರ ನಮ್ ಮೆರವಣಿಕೆ ಹಂಗಲ್ಲ ಅವರೇ ರೊಕ್ಕ ಹಾಕೊಂಡ್ ಬರತಾರ, ಅವರ ಖರ್ಚು ಅವರ ನೋಡಿಕೊಂತಾರ, ಇದರಲ್ಲಿ ನಮ್ಮ ಹೋರಾಟದಿಂದ ಲಾಭ ಪಡೆದವರು ಹೆಚ್ಚು ಜನ ತಾವಾ ಆಸಕ್ತಿಯಿಂದ ಬರತಾರ. ಹಂಗಾಗಿ ನಾವ್ ಏನೂ ಇರಲಾರದ ಬಂದ್ ಸ್ಟ್ರೈಕು ಮಾಡಾದಂದ್ರ ಕಠಿಣದ..ಅಂದ್ರೂ ಹೋರಾಟನ ಜೀವಂತ ಇಟಕಂಡು ಹೊಂಟೀವಿ’ ಎನ್ನುತ್ತಾರೆ.

ಹೀಗೆ ರೈತ ಸಂಘ, ಕಮ್ಯುನಿಷ್ಟ್ ಪಾರ್ಟಿ ಮುಂತಾದ ಸಂಘಟನೆಗಳ ಮುಖೇನ ಹೋರಾಟ ಚಳವಳಿಗಳಲ್ಲಿ ಭೀಮಶಿ ನಿರಂತರವಾಗಿ ತೊಡಗಿಕೊಂಡಾಗಲೂ ಎಲ್ಲದರೊಂದಿಗೆ ಒಂದು ಅಂತರವನ್ನು ಕಾಯ್ದುಕೊಂಡಿದ್ದಾರೆ. ಸಮಾಜದ ಬಗ್ಗೆ, ಹೋರಾಟ ಚಳವಳಿಯ ಬಗ್ಗೆ, ಈ ಹೊತ್ತಿನ ರಾಜಕಾರಣದ ಬಗ್ಗೆ ತಮ್ಮದೇ ಆದ ನಿಲುವುಗಳನ್ನು ಹೊಂದಿದ್ದಾರೆ. ಅಂತೆಯೇ ತಮ್ಮ ಚಳವಳಿ ಹೋರಾಟಗಳನ್ನು ವಿಮರ್ಶಾತ್ಮಕವಾಗಿ ಆತ್ಮಾವಲೋಕನ ಮಾಡಿಕೊಳ್ಳುವ ಮನಸ್ಥಿತಿಯನ್ನೂ ಹೊಂದಿದ್ದಾರೆ. ಇದೀಗ ವಿಶ್ರಾಂತ ಜೀವನವನ್ನು ನಡೆಸಬೇಕಾದ ಭೀಮಶಿ ಎಲ್ಲಿಂದಲೇ ಹೋರಾಟದ ಕರೆ ಬಂದ ತಕ್ಷಣ ಹೊರಡಲನುವಾಗುತ್ತಾರೆ. ಅಂತೆಯೇ ಭೀಮಶಿ ಅವರ ಶ್ರೀಮತಿ ಗಂಗವ್ವ ಇವರ ಹೋರಾಟಗಳ ಬಗ್ಗೆ ಮೊದಲೆಲ್ಲಾ ನೊಂದುಕೊಂಡರೂ ಇದೀಗ ಅವರ ಚಳವಳಿಯ ಮಹತ್ವ ಅರಿತವರಂತೆ ಅವರನ್ನು ಬೆಂಬಲಿಸುತ್ತಾರೆ. ಭೀಮಶಿ ಅವರು ಮಾತನಾಡುತ್ತಾನನ್ನ ಹೆಂಡತಿ ನೆರವಾಗದಿದ್ರ ನಾ ಇಷ್ಟೊಂದು ಹೋರಾಟಗಳಲ್ಲಿ ತೊಡಗಿಕೊಳ್ಳಾಕ ಆಗ್ತಿರಲಿಲ್ಲ. ನನ್ನೆಲ್ಲಾ ಚಳವಳಿಗಳ ಹಿಂದಣ ಶಕ್ತಿ ಮಡದಿಯೇ’ ಎನ್ನುವ ಅಭಿಪ್ರಾಯ ಹಂಚಿಕೊಂಡಾಗ ಮಡದಿ ಬಗೆಗೆ ಅಭಿಮಾನ ತಾಳುತ್ತಾರೆ. ಹೀಗೆ ಅವಿರತವಾಗಿ ಹೋರಾಟಗಳಲ್ಲಿ ತೊಡಗಿಸಿಕೊಂಡ ಭೀಮಶಿ
ಇಂದು ನಮ್ಮನ್ನು ಅಗಲಿ ಬೌತಿಕವಾಗಿ ದೂರವಾಗಿದ್ದಾರೆ ಚಳವಳಿಯ ಚರಿತ್ರೆಯಲ್ಲಿ ಬಹುಕಾಲ ನಮ್ಮೊಡನಿರುತ್ತಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಅರುಣ್‌ ಜೋಳದ ಕೂಡ್ಲಿಗಿ
ಅರುಣ್‌ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು

1 COMMENT

  1. ಭೀಮಶಿ ಅವರ ಬಗ್ಗೆ ಚೂರು ಪಾರು ಕೇಳಿದ್ದೆನಾದರು ಅವರನ್ನು ಖುದ್ದಾಗಿ ಹೋಗಿ ಭೇಟಿಯಾಗಿ ಮಾತುಕತೆ ಮಾಡಿ ಬರೆದ ನಿಮ್ಮ ಆಪ್ತ ಬರೆಹ ಮನಸ್ಸಿಗೆ ತಟ್ಟುತ್ತದೆ. ಇಂಥಾ ಒಂದೊಂದೇ ಮಾದರಿಗಳು ಕಣ್ಮರೆಯಾಗುತ್ತಿರುವುದು ನನ್ನಂಥವರಿಗೆ ಆತಂಕ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X