ಸುಳ್ಳೇ ಬಂಡವಾಳ | ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೃಷ್ಟಿಸಿದ ಸರಣಿ ಸುಳ್ಳುಗಳು, ಇಲ್ಲಿವೆ ನೋಡಿ!

Date:

Advertisements
ಸೋಷಿಯಲ್ ಮೀಡಿಯಾಗಳಲ್ಲಿ ಜೀವಂತವಿರುವ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಸುಳ್ಳು ಸೃಷ್ಟಿಸುವಲ್ಲಿ, ಹಂಚುವಲ್ಲಿ ಮತ್ತು ಅದು ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುವಂತೆ ನೋಡಿಕೊಳ್ಳುವಲ್ಲಿ ನಿಸ್ಸೀಮರು. ಜವಾಬ್ದಾರಿಯುತ ಸಂಸದನಾಗಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಸಿಕೊಡುವುದನ್ನು ಮರೆತು, ಸುಳ್ಳು ಸೃಷ್ಟಿಸಿ ಹಂಚುವಲ್ಲಿ ನಿರತರಾಗಿದ್ದಾರೆ. ಸೂರ್ಯ ಸೃಷ್ಟಿಸಿದ ಅಂತಹ ಹತ್ತಾರು ಸುಳ್ಳುಗಳು ಇಲ್ಲಿವೆ...

ಸುಳ್ಳು, ಅಪಪ್ರಚಾರ, ಕೋಮುವಾದ, ಹುಸಿ ಭರವಸೆ, ದ್ವೇಷ – ಇವು ರಾಜಕಾರಣ ಮತ್ತು ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಅಸ್ತ್ರಗಳು. ವಿರೋಧ ಪಕ್ಷಗಳು ಮತ್ತು ವಿಪಕ್ಷಗಳ ನಾಯಕರ ವಿರುದ್ಧ ಪ್ರಧಾನಿ ಮೋದಿಯಿಂದ ಹಿಡಿದ ಬಿಜೆಪಿಯ ಎಲ್ಲರೂ ಸುಳ್ಳು ಆರೋಪ, ಅಪಪ್ರಚಾರ ಮಾಡುತ್ತಲೇ ಇದ್ದಾರೆ. ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಮೋದಿ ಹೇಳಿದ ಸುಳ್ಳುಗಳನ್ನು ಈದಿನ.ಕಾಮ್‌ ಆಗಾಗ್ಗೆ ಬಯಲಿಗೆಳೆದಿದೆ. ಇದೀಗ, ರಾಜ್ಯದಲ್ಲಿ ವಕ್ಫ್‌ ಆಸ್ತಿ ವಿವಾದ ಮುನ್ನೆಲೆಯಲ್ಲಿದೆ. ಸಮಸ್ಯೆಯೇ ಅಲ್ಲದ ವಿಚಾರವನ್ನು ವಿವಾದವನ್ನಾಗಿಸಿ ಉಪಚುನಾವಣೆಯಲ್ಲಿ ಮತ ಕ್ರೋಡೀಕರಣಕ್ಕೆ ಬಿಜೆಪಿ ಯತ್ನಿಸುತ್ತಿದೆ. ಅದೇ ವಿಚಾರವಾಗಿ ಸುಳ್ಳುಗಳನ್ನೂ ಹರಿಬಿಡುತ್ತಿದೆ.

ಕಾಂಗ್ರೆಸ್‌ ಸರ್ಕಾರದ ವಿರುದ್ಧ ಅಬ್ಬರಿಸಿ-ಬೊಬ್ಬಿರಿಯುವ ಭರದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ತಮ್ಮ ಸುಳ್ಳನ್ನೇ ಮತ್ತೆ ದಾಳವಾಗಿ ಬಳಸಿಕೊಂಡಿದ್ದಾರೆ. 2022ರಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದ ಹಾವೇರಿ ಜಿಲ್ಲೆಯ ರೈತನ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿ, ವಕ್ಫ್‌ ವಿವಾದದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸುಳ್ಳು ಹೇಳಿದ್ದಾರೆ. ಅದನ್ನೇ ನಂಬಿದ ಹಲವಾರು ಮಾಧ್ಯಮಗಳು ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಸುದ್ದಿ ಪ್ರಕಟಿಸಿವೆ.

ಗಮನಾರ್ಹ ಸಂಗತಿ ಎಂದರೆ, 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವೇ ಅಧಿಕಾರದಲ್ಲಿತ್ತು. ಬ್ಯಾಂಕ್‌ನಲ್ಲಿ ಸಾಲ ಪಡೆದಿದ್ದ ಆ ರೈತ, ಅತೀವೃಷ್ಟಿಯಿಂದ ಬೆಳೆ ನಾಶವಾಗಿ ಸಾಲ ತೀರಿಸಲಾಗದೆ, ಮನವೊಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಹಾವೇರಿ ಪೊಲೀಸರು ಸ್ಪಷ್ಟನೆಯನ್ನೂ ನೀಡಿದ್ದಾರೆ.

Advertisements

ಹೀಗೆ, ತೇಜಸ್ವಿ ಸೂರ್ಯ ಸುಳ್ಳು ಸುದ್ದಿ ಹರಿಬಿಡುವುದು, ಸುಳ್ಳು ಅಪಪ್ರಚಾರ ಮಾಡುವುದು ಹಾಗೂ ತೇಜಸ್ವಿಯ ಸುಳ್ಳನ್ನೇ ಸತ್ಯವೆಂದು ಮಾಧ್ಯಮಗಳು ವರದಿ ಮಾಡುವುದು ಇದೇ ಮೊದಲಲ್ಲ. ಈ ಹಿಂದೆಯೂ ತೇಜಸ್ವಿ ಸೂರ್ಯ ಹತ್ತಾರು ಸುಳ್ಳುಗಳನ್ನು ಹೇಳಿದ್ದಾರೆ. ಸುಳ್ಳಗಳ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ತೇಜಸ್ವಿ ಸೂರ್ಯ ಹೇಳಿದ ಸರಣಿ ಸುಳ್ಳುಗಳಿವು:

ಸುಳ್ಳು ಒಂದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎಡಿಟ್ ಮಾಡಿದ ವಿಡಿಯೋವನ್ನು ಹಂಚಿಕೊಂಡಿದ್ದ ತೇಜಸ್ವಿ ಸೂರ್ಯ, ”ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ದುರಂತವಾಗಿ ಸಾವನ್ನಪ್ಪಿದ ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಕುಟುಂಬಕ್ಕೆ ಆರ್ಥಿಕ ಪರಿಹಾರವನ್ನು ಘೋಷಿಸಲು ಕರ್ನಾಟಕ ಕಾಂಗ್ರೆಸ್‌ ಸರ್ಕಾರ ನಿರ್ಲಕ್ಷಿಸಿದೆ” ಎಂದು ಸುಳ್ಳು ಆರೋಪ ಮಾಡಿದ್ದರು.

ಸತ್ಯ: ಕರ್ನಾಟಕ ಸರ್ಕಾರವು ಕ್ಯಾಪ್ಟನ್ ಎಂ.ವಿ ಪ್ರಾಂಜಲ್ ಅವರ ಕುಟುಂಬಕ್ಕೆ ಆರ್ಥಿಕ ಪರಿಹಾರ ಘೋಷಿಸಿದೆ. ಜಿಲ್ಲಾಡಳಿತವು ಪರಿಹಾರವನ್ನು ಕ್ಯಾಪ್ಟನ್ ಅವರ ಪೋಷಕರಿಗೆ ಹಸ್ತಾಂತರಿಸಿದೆ.

ಸುಳ್ಳು ಎರಡು. ಈ ಯೋಜನೆಯು ಮುಸ್ಲಿಮರಿಗಾಗಿ ಇರುವ ಯೋಜನೆ ಎಂದು ಉಲ್ಲೇಖಿಸುತ್ತಾ ‘ಸಿದ್ದರಾಮಯ್ಯ ಸರ್ಕಾರ ಧರ್ಮಾಧಾರಿತ ಯೋಜನೆ ಜಾರಿಗೊಳಿಸಿದೆ’ ಎಂದು ತೇಜಸ್ವಿ ಸೂರ್ಯ ತಪ್ಪು ಮಾಹಿತಿ ಹರಡಿದ್ದರು. ಅವರ ಟ್ವೀಟ್‌ಅನ್ನೇ ನಂಬಿಕೊಂಡು ಆಜ್‌ ತಕ್ ಸುದ್ದಿ ಸಂಸ್ಥೆ ಬ್ರೇಕಿಂಗ್ ಸುದ್ದಿ ಮಾಡಿತ್ತು.

ಸತ್ಯ: ನಿರುದ್ಯೋಗಿ ಯುವಕರಿಗೆ ಸ್ವಾವಲಂಬಿ ಬದುಕಿಗೆ ಆಟೋ, ಗೂಡ್ಸ್, ಟ್ಯಾಕ್ಸಿ ಖರೀದಿಗೆ ಶೇ.50 ರಷ್ಟು ಅಂದರೆ ಗರಿಷ್ಠ 3 ಲಕ್ಷದವರೆಗೆ ಸಬ್ಸಿಡಿ ನೀಡುವ ‘ಸ್ವಾವಲಂಬಿ ಸಾರಥಿ ಯೋಜನೆ’ಗೆ ಸಂಬಂಧಿಸಿ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ(ಕೆಎಂಡಿಸಿ) ಇತ್ತೀಚೆಗೆ ಅರ್ಜಿ ಆಹ್ವಾನಿಸಿತ್ತು. ”ಈ ಯೋಜನೆ ಕೇವಲ ಕೆಎಂಡಿಸಿ ಮಾತ್ರವಲ್ಲದೇ, ದೇವರಾಜ ಅರಸು ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಆದಿ ಜಾಂಬವ ಅಭಿವೃದ್ಧಿ ನಿಗಮದಲ್ಲೂ ಜಾರಿಗೆ ಬಂದಿದೆ” ಎಂದು ನಿಗಮದ ನಿರ್ದೇಶಕ ಮೊಹಮ್ಮದ್ ನಝೀರ್ ಸ್ಪಷ್ಟನೆ ನೀಡಿದ್ದರು. ಅಲ್ಲದೆ, ಸುಳ್ಳು ಸುದ್ದಿ ಹಬ್ಬಿಸಿದ್ದಕ್ಕಾಗಿ ತೇಜಸ್ವಿ ಸೂರ್ಯ ಮತ್ತು ಆಜ್‌ ತಕ್ ಸುದ್ದಿ ಸಂಸ್ಥೆ ವಿರುದ್ಧ ಎಪ್‌ಐಆರ್‌ ಕೂಡ ದಾಖಲಾಗಿದೆ.

ಸುಳ್ಳು ಮೂರು. 15ನೇ ಹಣಕಾಸು ಆಯೋಗವು ತನ್ನ ಶಿಫಾರಸುಗಳ ಅಂತಿಮ ವರದಿಯಲ್ಲಿ ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಹೇಳಿಯೇ ಇಲ್ಲವೆಂದು ತೇಜಸ್ವಿ ಸೂರ್ಯ ಪ್ರತಿಪಾದಿಸಿ, ಟ್ವೀಟ್‌ ಮಾಡಿದ್ದರು.

ಸತ್ಯ: 2020-21ರ ಆರ್ಥಿಕ ವರ್ಷದಲ್ಲಿ ಅಂತಿಮ ವರದಿ ನೀಡಿದ್ದ 15ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ₹5,495 ಕೋಟಿ ವಿಶೇಷ ಅನುದಾನ ನೀಡಬೇಕೆಂದು ಶಿಫಾರಸು ಮಾಡಿತ್ತು. ಆ ವಿಶೇಷ ಅನುದಾನವನ್ನು ರಾಜ್ಯಕ್ಕೆ ತೆರಿಗೆ ಹಂಚಿಕೆಯಲ್ಲಿ ಕಡಿಮೆಯಾದ ಪಾಲನ್ನು ಸರಿದೂಗಿಸುವ ಉದ್ದೇಶದಿಂದ ನೀಡಬೇಕೆಂದು ಹೇಳಿತ್ತು. ಆಯೋಗದ ಶಿಫಾರಸಿನ ಹೊರತಾಗಿಯೂ, ಅನುದಾನ ನೀಡಲು ಕೇಂದ್ರ ಸರ್ಕಾರ ಮುಂದಾಗಿಲ್ಲ. ಪರಿಣಾಮ, ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆಡಳಿತಾರೂಢ ಕಾಂಗ್ರೆಸ್‌ ಸೇರಿದಂತೆ ರಾಜ್ಯದ ಜನರು ಪ್ರತಿಭಟನೆ ನಡೆಸಿದ್ದಾರೆ.

ಸುಳ್ಳು ನಾಲ್ಕು. ಪದ್ಮಶ್ರೀ ಪುರಸ್ಕೃತ ಮತ್ತು ಸರೋದ್ ವಿದ್ವಾಂಸ ಪಂಡಿತ್ ರಾಜೀವ್ ತಾರಾನಾಥ್ ಅವರು ದಸರಾ ಉತ್ಸವದಲ್ಲಿ ಪ್ರದರ್ಶನ ನೀಡಲು, ನೀಡುವ ಸಂಭಾವನೆಯಲ್ಲಿ ಅವರಿಂದ ಕಮಿಷನ್ ಕೇಳಲಾಗಿದೆ. ಕಾರ್ಯಕ್ರಮದ ಆಯೋಜನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಸತ್ಯ: ದಸರಾ ಉಪ ಸಮಿತಿಯ ಯಾವುದೇ ಅಧಿಕಾರಿಗಳು ಅಥವಾ ಸದಸ್ಯರು ತಮ್ಮ ಬಳಿ ಕಮಿಷನ್ ಕೇಳಿಲ್ಲ. ಲಂಚಕ್ಕೆ ಬೇಡಿಕೆ ಇಟ್ಟಿಲ್ಲವೆಂದು ಸ್ವತಃ ಪಂಡಿತ್ ತಾರಾನಾಥ್ ಅವರೇ ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಐದು. ಕರ್ನಾಟಕ ಕಾಂಗ್ರೆಸ್ ಸರ್ಕಾರ ವಿಧಾನಸೌಧದಲ್ಲಿ ಆಯುಧ ಪೂಜೆ ವೇಳೆ ಕುಂಕುಮ ಮತ್ತು ಅರಿಶಿನ ಬಳಕೆ ನಿಷೇಧಿಸಿ ಆದೇಶ ಹೊರಡಿಸಿದೆ. ಕಾಂಗ್ರೆಸ್‌ ಸರ್ಕಾರ ಹಿಂದು ವಿರೋಧಿ ಎಂದೂ ಸೂರ್ಯ ಸುಳ್ಳ ಆರೋಪ ಮಾಡಿದ್ದರು. ಆ ಮೂಲಕ ಕಾಂಗ್ರೆಸ್‌ ವಿರುದ್ಧ ಕೋಮುದ್ವೇಷ ಬಿತ್ತಲು ಯತ್ನಿಸಿದ್ದರು.

ಸತ್ಯ: ಕಾಂಗ್ರೆಸ್‌ ಸರ್ಕಾರ ಅರಿಶಿನ-ಕುಂಕುಮ ಬಳಕೆಯನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿರಲಿಲ್ಲ. ಬದಲಿಗೆ, ಪಾರಂಪರಿಕ ಕಟ್ಟಡದ ಸೌಂದರ್ಯವನ್ನು ಸಂರಕ್ಷಿಸಲು ಆವರಣದಲ್ಲಿ ರಾಸಾಯನಿಕ ಆಧಾರಿತ ಬಣ್ಣಗಳನ್ನು ಬಳಸಬಾರದು. ರಾಸಾಯನಿಕ ಕಲೆಗಳಿಂದ ವಿಧಾನಸೌಧಕ್ಕೆ ಹಾನಿಯಾಗದಂತೆ ತಡೆಯಬೇಕೆಂಬ ಉದ್ದೇಶದಿಂದ ಆ ಸುತ್ತೋಲೆ ಹೊರಡಿಸಲಾಗಿತ್ತು. ಮುಖ್ಯ ಸಂಗತಿ ಎಂದರೆ, ವಿಧಾನಸೌಧದಲ್ಲಿ ರಾಸಾಯನಿಕ ಬಣ್ಣಗಳ ಬಳಕೆಯನ್ನು ನಿಷೇಧಿಸಿ ಹಿಂದಿನ ಬಿಜೆಪಿ ಸರ್ಕಾರವೂ ಸುತ್ತೋಲೆ ಹೊರಡಿಸಿತ್ತು.

ಸುಳ್ಳು ಆರು. ಬೆಂಗಳೂರು ಸಬ್ ಅರ್ಬನ್ ಯೋಜನೆಗೆ ಕೇಂದ್ರ ಸರ್ಕಾರ 17,000 ಕೋಟಿ ರೂ. ಅನುದಾನ ಘೋಷಿಸಿತ್ತು. ಆದರೆ, ಹಣ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಿದ್ದಾರೆ ಎಂದು ಸತ್ಯವನ್ನೇ ತಿರುಚಿದ್ದ ಸೂರ್ಯ.

ಸತ್ಯ: ಕೇಂದ್ರ ಸರ್ಕಾರವು 2018-19ರ ಕೇಂದ್ರ ಬಜೆಟ್‌ನಲ್ಲಿ ಬೆಂಗಳೂರಿನ ಉಪನಗರ ರೈಲು ಜಾಲಕ್ಕೆ 17,000 ಕೋಟಿ ರೂ. ಅನುದಾನ ನೀಡುವುದಾಗಿ ಘೋಷಿಸಿರುವುದು ಸತ್ಯ. ಅಲ್ಲದೆ  2018ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿಯೂ ಉಪನಗರ ರೈಲು ಯೋಜನೆಯನ್ನು ಪೂರ್ಣಗೊಳಿಸಲು ಕೇಂದ್ರದ 17,000 ಕೋಟಿ ರೂ. ಹಣವನ್ನು ಸದುಪಯೋಗ ಮಾಡಿಕೊಳ್ಳುವುದಾಗಿಯೇ ಭರವಸೆ ನೀಡಿತ್ತು.

ಸುಳ್ಳು ಏಳು. ಬೆಂಗಳೂರು ಮೆಟ್ರೋದ ನೇರಳೆ ಮಾರ್ಗದ ಕಾಮಗಾರಿ ಪೂರ್ಣಗೊಂಡಿದ್ದರೂ, ಉದ್ಘಾಟನೆಗೆ ಕಾಂಗ್ರೆಸ್ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ತೇಜಸ್ವಿ ಸೂರ್ಯ ಸುಳ್ಳು ಆರೋಪ ಮಾಡಿದ್ದರು.

ಸತ್ಯ: ನಾಗರಿಕರಿಗೆ ತಕ್ಷಣದ ಅನುಕೂಲಕ್ಕಾಗಿ ಔಪಚಾರಿಕ ಉದ್ಘಾಟನೆ ಇಲ್ಲದೆಯೇ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರವನ್ನು ಸಂಪೂರ್ಣವಾಗಿ ಪ್ರಾರಂಭಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಆದರೂ, ಕೇಂದ್ರವು ಅನುಮತಿ ನೀಡಿರಲಿಲ್ಲ. ಅಂದಹಾಗೆ, ಈ ಮಾರ್ಗವನ್ನು ಉದ್ಘಾಟಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಲಭ್ಯವಿಲ್ಲದಿದ್ದ ಕಾರಣಕ್ಕೆ ವಿಳಂಬವಾಗಿತ್ತು ಎಂಬುದು ಸತ್ಯ.

ಸುಳ್ಳು ಎಂಟು. ದೇವಸ್ಥಾನದ ಹಣವನ್ನು ಧಾರ್ಮಿಕೇತರ ಉದ್ದೇಶಗಳಿಗೆ ಬಳಸಲು ದೇವಸ್ಥಾನಗಳ ಮೇಲೆ ಕಾಂಗ್ರೆಸ್ ಜಿಜಿಯಾ ತೆರಿಗೆ ವಿಧಿಸಿದೆ ಎಂದು ತೇಜಸ್ವಿ ಸೂರ್ಯ ಆರೋಪಿಸಿದ್ದರು.

ಸತ್ಯ: ಸರ್ಕಾರವು ಆದಾಯದ ಮಿತಿಯನ್ನು ಮಾತ್ರ ಹೆಚ್ಚಿಸಿದೆ. ಅಲ್ಲದೆ, ದತ್ತಿ ಇಲಾಖೆಯ ಅಡಿಯಲ್ಲಿರುವ ದೇವಾಲಯಗಳು ತಮ್ಮ ಆದಾಯದಲ್ಲಿ ಇಂತಿಷ್ಟು ಶೇಕಡಾವಾರು ಹಣವನ್ನು ಸರ್ಕಾರಕ್ಕೆ ಪಾವತಿಸುವುದು ಹಿಂದಿನಿಂದಲೂ ಇದೆ. ಈ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ದೇವಾಲಯಗಳಿಂದ ಇಂತಹ ಪಾವತಿಗಳನ್ನು ಪಡೆದಿದೆ. ಆ ಹಣವನ್ನು ಕೇವಲ ಹಿಂದು ಧಾರ್ಮಿಕ ಚಟುವಟಿಕೆಗಳಿಗೆ ಸರ್ಕಾರ ಮೀಸಲಿಡುತ್ತದೆ. ಆದಾಯವಿಲ್ಲದ ದೇವಸ್ಥಾನಗಳ ನಿರ್ವಹಣೆಗಾಗಿ ಆ ಹಣವನ್ನು ಸರ್ಕಾರ ಹಂಚಿಕೆ ಮಾಡುತ್ತದೆ.

image 19

ಸುಳ್ಳು ಒಂಭತ್ತು. ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿಯೂ ಮುಸ್ಲಿಮರ ವಿರುದ್ಧ ದ್ವೇಷ ಬಿತ್ತಲು ತೇಜಸ್ವಿ ಸೂರ್ಯ ಯತ್ನಿಸಿದ್ದರು. ಪತ್ರಿಕಾಗೋಷ್ಠಿ ನಡೆಸಿ, ಬಿಬಿಎಂಪಿ ಆಸ್ಪತ್ರೆಯ ಹಾಸಿಗೆಗಳು ರೋಗಿಗಳಿಗೆ ಲಭ್ಯವಾಗುತ್ತಿಲ್ಲ. ಮುಸ್ಲಿಂ ಸಿಬ್ಬಂದಿಗಳು ಹಣಕ್ಕಾಗಿ ಆಸ್ಪತ್ರೆಯ ಬೆಡ್‌ ಬುಕ್ ಮಾಡುತ್ತಿದ್ದಾರೆ. ‘ಬೆಡ್‌ ಬ್ಲಾಕಿಂಗ್’ ಹಗರಣ ನಡೆಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಸತ್ಯ: ಬಿಬಿಎಂಪಿ ಆಸ್ಪತ್ರೆಗಳಲ್ಲಿ ಮುಸ್ಲಿಮರು ಬೆಡ್‌ ಬ್ಲಾಕಿಂಗ್ ಮಾಡಿದ್ದಾರೆ ಎಂಬುದು ಸಂಪೂರ್ಣ ಸುಳ್ಳು. ಬಿಬಿಎಂಪಿಯೇ ನೀಡಿದ್ದ ದತ್ತಾಂಶಗಳ ಪ್ರಕಾರ, ಆಸ್ಪತ್ರೆಗಳಲ್ಲಿ ಹಾಸಿಗೆಗಳು ಲಭ್ಯವಿದ್ದವು. 2020ರ ಏಪ್ರಿಲ್ 28 ರಂದು 1,716, ಏಪ್ರಿಲ್ 29 ರಂದು 1,837, ಮೇ 2 ರಂದು 1,180 ಹಾಗೂ ಮೇ 3 ರಂದು 1,506 ಹಾಸಿಗೆಗಳು ರೋಗಿಗಳಿವೆ ಲಭ್ಯವಿದ್ದವು.

ಗಮನಿಸಬೇಕಾದ ಸಂಗತಿ ಎಂದರೆ, ತೇಜಸ್ವಿ ಸೂರ್ಯ ಪತ್ರಿಕಾಗೋಷ್ಠಿ ನಡೆಸುವುದಕ್ಕೂ ಒಂದು ದಿನ ಮುನ್ನವೇ, BBMP ಕಮಿಷನರ್ ಗೌರವ್ ಗುಪ್ತಾ ಅವರು ಬಿಬಿಎಂಪಿ ಆಸ್ಪತ್ರೆಗಳಲ್ಲಿ ಸರಿಸುಮಾರು 2,000 ಹಾಸಿಗೆಗಳು ಲಭ್ಯವಿದೆ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ, ಸೆಂಟ್ರಲ್ ಕ್ರೈಂ ಬ್ರಾಂಚ್ (CCB) ನಡೆಸಿದ ತನಿಖೆಯಲ್ಲಿ, ಮುಸ್ಲಿಂ ಸಿಬ್ಬಂದಿಗಳು ಯಾವುದೇ ತಪ್ಪು ಮಾಡಿಲ್ಲ. ಬೆಡ್ ಬ್ಲಾಕಿಂಗ್ ಹಗರಣ ನಡೆದಿಲ್ಲ. ಹಗರಣ ನಡೆದಿದೆ ಎಂಬುದಕ್ಕೆ ಸಂಬಂಧಿಸಿದ ಯಾವುದೇ ಪುರಾವೆಗಳೂ ಇಲ್ಲವೆಂದು ಸ್ಪಷ್ಟಪಡಿಸಿತ್ತು.

image 21

ಆದರೆ, ಮತ್ತೊಂದು ಗಂಭೀರ ವಿಚಾರವೆಂದರೆ, ಬೊಮ್ಮನಹಳ್ಳಿಯ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಅವರ ಆಪ್ತ ಸಹಾಯಕ ಬೆಡ್ ಬ್ಲಾಕಿಂಗ್ ಹಗರಣ ಎಸಗಿದ್ದಾರೆ ಎಂಬುದು ತನಿಖೆಯಲ್ಲಿ ಬಯಲಾಗಿತ್ತು.

ಸುಳ್ಳು ಹತ್ತು. ಮನೆಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ನೀಡುವ ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಗೆ 2023ರಲ್ಲಿ ವಿದ್ಯುತ್ ದರವನ್ನು ಹೆಚ್ಚಿಸುವ ಮೂಲಕ ಹಣ ನೀಡಲಾಗಿದೆ ಎಂದು ತೇಜಸ್ವಿ ಸೂರ್ಯ ಸುಳ್ಳು ಹೇಳಿದ್ದಾರೆ.

ಸತ್ಯ: ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು (ಕೆಇಆರ್‌ಸಿ) ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ವಿದ್ಯುತ್ ದರ ಏರಿಕೆಗೆ ಅನುಮೋದನೆ ನೀಡಿತ್ತು. ಆದರೆ, ಚುನಾವಣಾ ನೀತಿ ಸಂಹಿತೆಯಿಂದಾಗಿ ಅದು ಜಾರಿಗೆ ಬಂದಿಲ್ಲ. ಚುನಾವಣೆ ಮುಗಿದು, ನೀತಿ ಸಂಹಿತೆ ರದ್ದಾದ ತಕ್ಷಣವೇ ಹೊಸ ದರಪಟ್ಟಿಯನ್ನು ಕೆಇಆರ್‌ಸಿ ಜಾರಿಗೊಳಿಸಿತ್ತು. ವಿದ್ಯುತ್ ಬೆಲೆ ಏರಿಕೆ ನಿರ್ಧಾರವು ಹಿಂದಿನ ಬಿಜೆಪಿ ಸರ್ಕಾರದ್ದಾಗಿತ್ತೇ ಹೊರತು, ಕಾಂಗ್ರೆಸ್ ಸರ್ಕಾರದ ನಿರ್ಧಾರವಲ್ಲ.

image 20

ಸುಳ್ಳು ಹನ್ನೊಂದು. ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ಅಂಗಡಿ ಮಾಲೀಕನ ಮೇಲೆ ಮುಸ್ಲಿಂ ಯುವಕ ಹಲ್ಲೆಗೈದಿದ್ದಾನೆಂದೂ ತೇಜಸ್ವಿ ಸೂರ್ಯ ಸುಳ್ಳು ಆರೋಪ ಮಾಡಿದ್ದರು.

ಸತ್ಯ: ಆ ಘಟನೆ ಹನುಮಾನ್ ಚಾಲೀಸ್ ಪಠಿಸಿದ್ದಕ್ಕೆ ಅಥವಾ ಕೋಮುವಾದದ ಕಾರಣಕ್ಕೆ ನಡೆದಿದ್ದಲ್ಲ ಎಂದು ಸ್ವತಃ ಚಿಕ್ಕಪೇಟೆಯ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ. ಸುಳ್ಳು ಆರೋಪವನ್ನೇ ಮುಂದಿಟ್ಟುಕೊಂಡು, ಅನುಮತಿಯನ್ನೂ ಪಡೆಯದೆ ಕಾನೂನುಬಾಹಿರ ಪ್ರತಿಭಟನೆ ನಡೆಸಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಕ್ಕಾಗಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಸೇರಿದಂತೆ 45 ಮಂದಿ ವಿರುದ್ಧ ಪೊಲೀಸರು ಎಫ್‌ಐಆರ್‌ಅನ್ನೂ ದಾಖಲಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ವಿದ್ಯಾವಂತ ಮತದಾರರು ತೇಜಸ್ವಿ ಸೂರ್ಯರನ್ನು ಎರಡು ಬಾರಿ ಸಂಸದರನ್ನಾಗಿ ಆಯ್ಕೆ ಮಾಡಿ, ದೆಹಲಿಗೆ ಕಳಿಸಿದ್ದಾರೆ. ಆರಿಸಿ ಕಳಿಸಿದ ಮತದಾರರಿಗಾಗಿ ಸೂರ್ಯ ಮಾಡಿರುವ ಮಹತ್ಕಾರ್ಯವಾದರೂ ಏನು? ಈ ರೀತಿ ಸುಳ್ಳು ಸೃಷ್ಟಿಸಿ ಮತದಾರರನ್ನು ದಾರಿ ತಪ್ಪಿಸುವ, ಜನರ ನಡುವೆ ದ್ವೇಷಾಸೂಯೆ ಬಿತ್ತುವ, ಗಲಭೆ-ಘರ್ಷಣೆಗೆ ಕಾರಣವಾಗುವ ಇವರನ್ನು ಜವಾಬ್ದಾರಿಯುತ ಸಂಸದರು ಎಂದು ಕರೆಯಬಹುದೇ?

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X