2025ರ ಜನವರಿ 13ರಂದು, ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದದ ಅಂತಿಮ ಕರಡನ್ನು ಮಂಡಿಸಲಾಗಿದೆ. 15 ತಿಂಗಳಿಗೂ ಹೆಚ್ಚು ಕಾಲ ಗಾಜಾ ಮೇಲೆ ಇಸ್ರೇಲ್ ನಡೆಸಿದ ಕ್ರೌರ್ಯಕ್ಕೆ ತಡೆಬಿದ್ದಿದೆ. ಆದಾಗ್ಯೂ, ಇನ್ನೂ ಹಲವಾರು ಸುತ್ತಿನ ಮಾತುಕತೆಗಳು, ಒಪ್ಪಂದಗಳು, ಪರಿಹಾರ ಕಾರ್ಯಗಳು ಬಾಕಿ ಉಳಿದಿವೆ. ಪರಿಹಾರ, ಪುನರ್ವಸತಿ ವಿಚಾರದಲ್ಲಿ ಮುಂದೆ ಏನಾಗಲಿವೆ ಎಂಬುದನ್ನು ಜಗತ್ತು ಎದುರು ನೋಡುತ್ತಿದೆ.
ತಾವು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಕ್ಕೂ ಮೊದಲೇ ಕದನ ವಿರಾಮ ಘೋಷಿಸಬೇಕೆಂದು ಇಸ್ರೇಲ್ಗೆ ಎಚ್ಚರಿಕೆ ನೀಡಿದ್ದರು. ಅದರಂತೆಯೇ ಕದನ ವಿರಾಮದ ಪ್ರಕಿಯೆಗಳು ನಡೆದಿವೆ. ಈ ಕದನ ವಿರಾಮದ ಕ್ರೆಡಿಟ್ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶಾಂತಿ ಒಪ್ಪಂದಕ್ಕೆ ಮನ್ನಣೆ ನೀಡಿದ್ದಾರೆ.
ಗಮನಾರ್ಹವೆಂದರೆ, ಟ್ರಂಪ್ ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಇಸ್ರೇಲ್ ಪರವಾಗಿದ್ದರು. ಮುಸ್ಲಿಂ ವಿರೋಧಿ ಮತ್ತು ಅರಬ್ ವಿರೋಧಿ ಧೋರಣೆಗಳನ್ನು ತಳೆದಿದ್ದರು. ಇಸ್ರೇಲ್ ಯಾವಾಗಲೂ ಅಮೆರಿಕದ ಬೆಂಬಲದೊಂದಿಗೆ ಕಾರ್ಯನಿರ್ವಹಿಸಿದೆ. ಆದರೆ, ಟ್ರಂಪ್ ಈಗ ಇಸ್ರೇಲ್ ಮೇಲೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಕಾರಣ, ಇಸ್ರೇಲ್ ಪ್ರಧಾನಿ ನೆತನ್ಯಾಹು ಮತ್ತು ಅಮೆರಿಕ ಮಾಜಿ ಅಧ್ಯಕ್ಷ ಜೋ ಬೈಡೆನ್ ನಡುವಿನ ನಿಕಟತೆಯ ಬಗ್ಗೆ ಅವರಿಗಿರುವ ಕೋಪ. ಮುಂದಿನ ದಿನಗಳಲ್ಲಿ ಅವರು ಇಸ್ರೇಲ್ ವಿರುದ್ಧ ನಿಲುವುಗಳನ್ನು ತೆಗೆದುಕೊಳ್ಳಬಹುದು ಎಂಬ ನಿರೀಕ್ಷೆಗಳೂ ಇವೆ.
ಆದಾಗ್ಯೂ, ಟ್ರಂಪ್ ಅವರ ಬೆದರಿಕೆಗೆ ಮಣಿದು ಕದನ ವಿರಾಮಕ್ಕೆ ನೆತನ್ಯಾಹು ಒಪ್ಪಿಕೊಂಡಿರಬಹುದು. ಆದರೆ, ಹಮಾಸ್-ಇಸ್ರೇಲ್ ನಡುವಿನ ಬಿಕ್ಕಟ್ಟು ಮುಗಿದಂತೆ ಕಾಣುತ್ತಿಲ್ಲ. ಸದ್ಯ, 2025ರ ಜನವರಿ 17ರಂದು ಇಸ್ರೇಲ್ ಮತ್ತು ಹಮಾಸ್ ಕದನ ವಿರಾಮ ಮತ್ತು ಕೈದಿಗಳ ಬಿಡುಗಡೆ ಒಪ್ಪಂದವನ್ನು ಒಪ್ಪಿಕೊಂಡಿವೆ. ಮೊದಲ ಹಂತದಲ್ಲಿ, ಇಸ್ರೇಲ್ ಮತ್ತು ಹಮಾಸ್ ಎರಡೂ 33 ಬಂಧಿತರನ್ನು ಬಿಡುಗಡೆ ಮಾಡುತ್ತವೆ. ಗಾಜಾದಿಂದ ಸ್ಥಳಾಂತರಗೊಂಡಿದ್ದ ಪ್ಯಾಲೆಸ್ತೀನಿಯರು ಗಾಜಾಗೆ ಮರಳುತ್ತಾರೆ. ಜೊತೆಗೆ, ಮೂಲಭೂತ ಸೌಕರ್ಯಕ್ಕಾಗಿ ಗಾಜಾಗೆ ಇಸ್ರೇಲ್ ದಿನಕ್ಕೆ 600 ಟ್ರಕ್ ಅಗತ್ಯ ವಸ್ತುಗಳ ಸಹಾಯ ಒದಗಿಸುತ್ತದೆ. ಗಾಜಾದಿಂದ ಇಸ್ರೇಲ್ ತನ್ನ ಸೈನ್ಯವನ್ನು ಭಾಗಶಃ ಹಿಂತೆಗೆದುಕೊಳ್ಳುತ್ತದೆ.
ಎರಡನೇ ಹಂತದಲ್ಲಿ, ಹಮಾಸ್ ತನ್ನ ಎಲ್ಲ ಬಂಧಿತರನ್ನು ಬಿಡುಗಡೆ ಮಾಡುತ್ತದೆ ಮತ್ತು ಇಸ್ರೇಲ್ ಸೀಮಿತ ಸಂಖ್ಯೆಯ ಬಂಧಿತರನ್ನು ಬಿಡುಗಡೆ ಮಾಡುತ್ತದೆ. ಮೂರನೇ ಹಂತದಲ್ಲಿ, ಹಮಾಸ್ ಮತ್ತು ಇಸ್ರೇಲ್ ತಮ್ಮಲ್ಲಿರುವ ಎಲ್ಲ ಮೃತದೇಹಗಳನ್ನು ಪರಸ್ಪರ ಉಭಯ ರಾಷ್ಟ್ರಗಳಿಗೆ ಹಸ್ತಾಂತರಿಸುತ್ತವೆ. ಇಸ್ರೇಲ್ ಗಾಜಾ ಮೇಲಿನ ದಿಗ್ಬಂಧನವನ್ನು ಕೊನೆಗೊಳಿಸುತ್ತದೆ. ಅಲ್ಲದೆ, ಹಮಾಸ್ ತನ್ನ ಮಿಲಿಟರಿ ಸಾಮರ್ಥ್ಯಗಳನ್ನು ಪುನರ್ನಿರ್ಮಿಸುವುದಿಲ್ಲ ಎಂದು ಭರವಸೆ ನೀಡಿದೆ. ಈ ಮೂರು ಹಂತಗಳನ್ನು ಈಜಿಪ್ಟ್, ಕತಾರ್ ಮತ್ತು ಅಮೆರಿಕ ಮೇಲುಸ್ತುವಾರಿ ನಡೆಸುತ್ತವೆ.
ಈ ವರದಿ ಓದಿದ್ದೀರಾ?: ಮಣಿಪುರದ ಬಗ್ಗೆ ಮೋದಿ ಮೌನ ಯಾಕೆ? ಇಲ್ಲಿವೆ ಆ ಆರು ಕಾರಣಗಳು!
ಇನ್ನು, ಜನವರಿ 20 ರಂದು ಪ್ರಮಾಣವಚನ ಪಡೆದ ಟ್ರಂಪ್, ನೂರು ಕಾರ್ಯಕಾರಿ ಆದೇಶಗಳನ್ನು ಜಾರಿಗೊಳಿಸಿದ್ದಾರೆ. ಅದರಲ್ಲಿ, ವಲಸೆ ನೀತಿ, ಎಚ್1ಬಿ ವೀಸಾ, ಗ್ರೀನ್ ಕಾರ್ಡ್ ನೀಡುವುದನ್ನು ನಿರ್ಬಂಧಿಸಿದ್ದಾರೆ. ಇದರ ಪರಿಣಾಮ ಭಾರತದ ಮೇಲೂ ಬೀಳಲಿದೆ. ಟ್ರಂಪ್ ಮತ್ತು ಮೋದಿ ಉತ್ತಮ ಸ್ನೇಹಿತರು. ಹಿಂದಿನ ಟ್ರಂಪ್ ಅವಧಿಯಲ್ಲಿ, ಮೋದಿಯನ್ನು ಅಮೆರಿಕಗೆ ಕರೆಸಿಕೊಂಡಿದ್ದ ಟ್ರಂಪ್, ‘ಹೌಡಿ ಮೋದಿ’ ಕಾರ್ಯಕ್ರಮ ನಡೆಸಿದ್ದರು. ತಾವಿಬ್ಬರೂ ಗೆಳೆಯರು ಎಂಬಂತೆ ತೋರಿಸಿಕೊಂಡಿದ್ದರು.
ಅಂತೆಯೇ, ಭಾರತಕ್ಕೆ ಅದರಲ್ಲೂ ತಮ್ಮ ತವರು ರಾಜ್ಯ ಗುಜರಾತ್ಗೆ ಟ್ರಂಪ್ರನ್ನು ಕರೆಸಿದ್ದ ಮೋದಿ, ‘ನಮಸ್ತೆ ಟ್ರಂಪ್’ ಕಾರ್ಯಕ್ರಮ ನಡೆಸಿದ್ದರು. ಅಮೆರಿಕ-ಭಾರತದ ದ್ವಿಪಕ್ಷೀಯ ಸಂಬಂಧವು ಮತ್ತಷ್ಟು ಗಟ್ಟಿಗೊಳ್ಳುತ್ತದೆ ಎಂದು ಹೇಳಿದ್ದರು. ಅಂತೆಯೇ, ಟ್ರಂಪ್ ಅವರ 2ನೇ ಅವಧಿಯಲ್ಲಿ ಹೆಚ್ಚಿನ ಅಧಿಕಾರಿಗಳು ಎರಡೂ ದೇಶಗಳ ನಡುವೆ ಸುಗಮ ಮತ್ತು ರಾಜತಾಂತ್ರಿಕ ಸಂಬಂಧವನ್ನು ನಿರೀಕ್ಷಿಸುತ್ತಾರೆ. ಆದರೆ, ಆಮದು ಸರಕುಗಳ ಮೇಲಿನ ಸುಂಕ ಮತ್ತು ವಲಸೆ ವಿಚಾರದಲ್ಲಿ ಟ್ರಂಪ್ ವರಸೆ ಬದಲಾಗಿದೆ.
ಭಾರತದ ಉತ್ಪನ್ನಗಳ ಮೇಲೆ 100% ಆಮದು ತೆರಿಗೆ ವಿಧಿಸುವುದಾಗಿ ಟ್ರಂಪ್ ಹೇಳುತ್ತಿದ್ದಾರೆ. ಭಾರತವು ತಮ್ಮ ಎದುರು ಹೆಚ್ಚಿನದ್ದನ್ನು ಮಾತನಾಡಬಾರದು ಎಂಬಂತಹ ಧೋರಣೆಯಿಂದ ವರ್ತಿಸುತ್ತಿದ್ದಾರೆ. ಇದು, ಅವರು ಭಾರತವನ್ನು ಮಿತ್ರನಾಗಿ ಅಲ್ಲದೆ, ಅಧೀನ ರಾಷ್ಟ್ರ ಎಂಬಂತೆ ನೋಡಲು ಆರಂಭಿಸುತ್ತಿರುವಂತೆ ಕಾಣುತ್ತಿದೆ.
ಇಲ್ಲಿಯವರೆಗೆ ತೆಗೆದುಕೊಂಡಿರುವ ನಿರ್ಧಾರಗಳನ್ನು ನೋಡಿದರೆ, ಭಾರತವನ್ನು ಗುಲಾಮ ರಾಷ್ಟ್ರವೆಂಬಂತೆಯೇ ನೋಡಿದ್ದಾರೆ ಟ್ರಂಪ್. ದೊಡ್ಡಣ್ಣನ ಧೋರಣೆ ಮತ್ತು ದುರಹಂಕಾರ ಪ್ರತಿ ನಡೆಯಲ್ಲೂ ಕಾಣುತ್ತಿದೆ. ಆದಾಗ್ಯೂ, ಭಾರತವು ಚೀನಾವನ್ನು ಪ್ರತಿಸ್ಪರ್ಧಿಯಂತೆ ನೋಡುತ್ತಿರುವ ಕಾರಣ, ಭಾರತವು ಅಮೆರಿಕದಿಂದ ಹೆಚ್ಚಿನ ಬೆಂಬಲವನ್ನು ಪಡೆಯಬಹುದು ಎಂಬ ಆಶಾವಾದಿ ಭರವಸೆಗಳೂ ಇವೆ.