ಬ್ರಾಹ್ಮಣ ರೋಹಿತ್‌ಗೆ ಒಂದು ಅಳತೆಗೋಲು – ಒಬಿಸಿ ವಿನೇಶ್‌ಗೆ ಬೇರೊಂದು ಅಳತೆಗೋಲು; ಇದೇ ಮನುವಾದಿ ಬಿಜೆಪಿಯ ಎರಡು ಮುಖ

Date:

Advertisements
ವಿನೇಶ್ ಫೋಗಟ್‌ಗೆ ಒಂದು ಅಳತೆಗೋಲು – ರೋಹಿತ್ ಶರ್ಮಾಗೆ ಮತ್ತೊಂದು ಅಳತೆಗೋಲು; ಇಲ್ಲಿ ಬಿಜೆಪಿ ಸ್ಪಷ್ಟ ನಿಲುವು ಏನು? ಆ ನಿಲುವು ಮನುವಾದ ಮತ್ತು ಬ್ರಾಹ್ಮಣ್ಯವಾದ! ವಿನೇಶ್ ಓರ್ವ ಹೆಣ್ಣು, ಒಬಿಸಿ ಸಮಯದಾಯದವರು - ರೋಹಿತ್ ಒಬ್ಬ ಗಂಡು, ಬ್ರಾಹ್ಮಣ ಸಮುದಾಯದವರು ಎಂಬ ಧೋರಣೆಯುಳ್ಳ ನಿಲುವು.

ಐಸಿಸಿ ಚಾಂಪಿಯನ್ಸ್‌ ಟ್ರೋಫಿಯ ಪಂದ್ಯಾವಳಿಗಳು ನಡೆಯುತ್ತಿವೆ. ಟೂರ್ನಿಯಲ್ಲಿ ಸೆಮಿಫೈನಲ್ ಸೇರಿದಂತೆ ಭಾರತ ತಂಡ ತಾನು ಆಡಿದ ನಾಲ್ಕೂ ಪಂದ್ಯಗಳನ್ನು ಗೆದ್ದಿದೆ. ಫೈನಲ್ ಪ್ರವೇಶಿಸಿದೆ. ಇದೇ ಹೊತ್ತಿನಲ್ಲಿ, ಕಾಂಗ್ರೆಸ್‌ ವಕ್ತಾರೆ ಡಾ. ಶಮಾ ಮೊಹಮದ್ ಮಾಡಿದ್ದ ಪೋಸ್ಟ್‌ವೊಂದು ವೈರಲ್ ಆಗಿದೆ. ‘ಬಾಡಿ ಶೇಮಿಂಗ್‌’ ಎಂಬುದು ಕ್ರೀಡಾವಲಯಕ್ಕೆ ಅನ್ವಯಿಸುತ್ತದೆಯೇ ಇಲ್ಲವೇ ಎಂಬ ವಿಚಾರವಾಗಿ ಪರ-ವಿರೋಧ ಚರ್ಚೆಗಳನ್ನು ಹುಟ್ಟುಹಾಕಿದೆ. ಜೊತೆಗೆ, ಬಿಜೆಪಿಯ ಮನುವಾದಿ ಧೋರಣೆಯನ್ನು ಮತ್ತೆ ಬಿಚ್ಚಿಟ್ಟಿದೆ.

ಮಾರ್ಚ್‌ 2ರ ಭಾನುವಾರ ನಡೆದ ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳ ನಡುವಿನ ಪಂದ್ಯದಲ್ಲಿ ತಂಡದ ನಾಯಕ ರೋಹಿತ್ ಶರ್ಮಾ ಕೇವಲ 15 ರನ್‌ ಗಳಿಸಿ ಔಟ್‌ ಆದರು. ಅವರು ಔಟ್‌ ಆಗಿದ್ದರ ಬಗ್ಗೆ ಟ್ವೀಟ್‌ ಮಾಡಿದ್ದ ಶಮಾ ಮೊಹಮದ್, “ರೋಹಿತ್‌ ಶರ್ಮಾ ದಪ್ಪಗಾಗಿದ್ದಾರೆ. ಅವರು ತೂಕವನ್ನು ಇಳಿಸಿಕೊಳ್ಳಬೇಕು. ಅವರು ಭಾರತ ಕಂಡ ಅತ್ಯಂತ ಅಸಮರ್ಥ ನಾಯಕ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

ಕೆಲವೇ ಕ್ಷಣಗಳಲ್ಲಿ ಅವರ ಟ್ವೀಟ್ ವೈರಲ್ ಆಯಿತು. ಆಕೆಯ ವಿರುದ್ಧ ರೋಹಿತ್ ಅಭಿಮಾನಿಗಳು ಮುಗಿಬಿದ್ದರು. ಆಕೆ ಕಾಂಗ್ರೆಸ್‌ ವಕ್ತಾರೆ ಎಂಬ ಕಾರಣಕ್ಕೆ ಬಿಜೆಪಿಗರೂ ಜಿಗಿದು ನೆಗೆದು ಪ್ರತಿಭಟಿಸಿದರು. ಕ್ರೀಡಾಪಟುವನ್ನು ಅವಮಾನಿಸಬಾರದು, ಬಾಡಿ ಶೇಮಿಂಗ್ ಮಾಡಬಾರದು, ಬಾಡಿ ಶೇಮಿಂಗ್ ಮಾಡುವುದು ಕಾಂಗ್ರೆಸ್‌ನ ಹುಟ್ಟುಗುಣ ಎಂಬಿತ್ಯಾದಿ ಹೇಳಿಕೆಗಳ ಪ್ರವಾಹವೇ ಹರಿಯಿತು.

Advertisements

ಬಿಜೆಪಿ ನಾಯಕರು, “ರಾಹುಲ್‌ ಗಾಂಧಿ ನಾಯಕತ್ವದಲ್ಲಿ 90 ಚುನಾವಣೆ ಸೋತವರು ರೋಹಿತ್‌ ಶರ್ಮಾ ಅವರ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ” ಎಂದು ಚೇಡಿಸಿದರು. ಅಷ್ಟೇ ಯಾಕೆ? ಸ್ವತಃ ಕಾಂಗ್ರೆಸ್ಸಿಗರೇ ಶಮಾ ವಿರುದ್ಧ ಸಿಡಿದರು. ಆಕೆಗೆ ಟ್ವೀಟ್ ಡಿಲೀಟ್ ಮಾಡುವಂತೆ ಕಾಂಗ್ರೆಸ್ ಹೈಕಮಾಂಡ್ ಒತ್ತಾಯಿಸಿತು. ಮಾತ್ರವಲ್ಲ, ಪೋಸ್ಟ್‌ಅನ್ನು ಡಿಲೀಟ್ ಮಾಡಿಸಿತು ಕೂಡ.

ಅವರ ಟ್ವೀಟ್‌ನಿಂದಾಗಿ ಬಾಡಿ ಶೇಮಿಂಗ್ ವಿಚಾರ ಚರ್ಚೆಯಲ್ಲಿದೆ. ಯಾವುದೇ ವ್ಯಕ್ತಿಯನ್ನು ಅವರ ದೇಹದ ರಚನೆಯ ಕಾರಣಕ್ಕಾಗಿ ನಿಂದಿಸುವುದು, ಅವಮಾನಿಸುವುದು ಅಕ್ಷರಶಃ ತಪ್ಪು. ಆದರೆ, ಇದು ಕ್ರೀಡಾ ವಲಯಕ್ಕೂ ಅನ್ವಯಿಸುತ್ತದೆಯೇ? ಖಂಡಿತಾ ಇಲ್ಲ! ಯಾಕೆಂದರೆ, ಕ್ರೀಡಾ ಕ್ಷೇತ್ರದಲ್ಲಿ ಆಟಗಾರರಿಗೆ ಅಥವಾ ಕ್ರೀಡಾಪಟುವಿಗೆ ಅವರು ದೇಹದ ಸದೃಢತೆಯೇ ಅತೀ ಮುಖ್ಯ. ಕ್ರೀಡಾಳುಗಳಿಗೆ ದೈಹಿಕ ಸದೃಢತೆ ಮತ್ತು ‘ಫ್ಲೆಕ್ಸಿಬಲಿಟಿ’ ಇರಲೇಬೇಕು. ಅವರು ತಮ್ಮ ದೈಹಿಕ ಫಿಟ್‌ನೆಸ್‌’ ಮೇಲೆ ಹೆಚ್ಚು ಗಮನ ಕೊಡಬೇಕು. ಅವರು ದೈಹಿಕವಾಗಿ ‘ಫಿಟ್’ ಆಗಿದ್ದಾಗ ಮಾತ್ರವೇ, ಪಂದ್ಯಗಳನ್ನು ಗೆಲ್ಲಲು ಸಾಧ್ಯ. ಗುರಿ ಮುಟ್ಟುವುದು ಸುಲಭ. ಅದು ಕ್ರಿಕೆಟ್‌ಗೂ ಅನ್ವಯಿಸುತ್ತದೆ. ಕ್ರಿಕೆಟ್‌ ರಂಗದಲ್ಲಿ ಇಡೀ ಜಗತ್ತಿನಲ್ಲಿಯೇ ಅತ್ಯಂತ ಫಿಟ್‌ ಆಗಿರುವ ಕ್ರಿಕೆಟಿಗ ಎಂಬ ಹೆಗ್ಗಳಿಕೆ ವಿರಾಟ್‌ ಕೊಹ್ಲಿ ಅವರದ್ದು.

ಆದರೆ, ರೋಹಿತ್ ಶರ್ಮಾ ಫಿಟ್‌ ಆಗಿದ್ದಾರೆಯೇ ಎಂಬ ಪ್ರಶ್ನೆಗೆ ಅವರ ದೇಹವೇ ಉತ್ತರ ನೀಡುತ್ತದೆ. ರೋಹಿತ್ ಅವರು ಬರೋಬ್ಬರಿ 80 ಕೆ.ಜಿ.ಗೂ ಅಧಿಕ ತೂಕ ಹೊಂದಿದ್ದಾರೆ. 80 ಕೆ.ಜಿ ತೂಕವೇನು ಸಮಸ್ಯೆಯಲ್ಲ. ಆದರೆ, ದೈಹಿಕ ಸದೃಢತೆ ಇರಬೇಕು. ಅದು ರೋಹಿತ್ ಅವರಲ್ಲಿ ಇಲ್ಲ.

ಇಲ್ಲಿ, ಮತ್ತೊಂದು ಗಂಭೀರ ವಿಚಾರ, ರೋಹಿತ್‌ ಶರ್ಮಾ ವಿಚಾರದಲ್ಲಿ ಶಮಾ ವಿರುದ್ಧ ಸಿಡಿದಿರುವ ಬಿಜೆಪಿಯ ಧೋರಣೆ ಮತ್ತು ನಿಲುವುಗಳು. ಇದೇ ಬಿಜೆಪಿ, ಮಹಿಳಾ ಕುಸ್ತಿಪಟು ವಿನೇಶ್‌ ಫೋಗಟ್ ವಿಚಾರದಲ್ಲಿ ಹೇಗೆ ನಡೆದುಕೊಂಡಿತು. ಆಕೆಯನ್ನು ಯಾವ ರೀತಿ ಅವಮಾನಿಸಿತು ಎಂಬುದನ್ನು ಇಡೀ ಜಗತ್ತು ನೋಡಿದೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಪ್ಯಾರಿಸ್‌ ಒಲಿಂಪಿಕ್ಸ್‌ ನಡೆಯಿತು. ಆ ಕ್ರೀಡಾಕೂಟದಲ್ಲಿ 50 ಕೆ.ಜಿ ವಿಭಾಗದ ಕುಸ್ತಿ ಪಂದ್ಯಾವಳಿಯಲ್ಲಿ ವಿನೇಶ್‌ ಫೋಗಟ್‌ ಭಾಗವಹಿಸಿದ್ದರು. ಫೈನಲ್ ಪ್ರವೇಶಿಸಿದ್ದ ಅವರನ್ನು 50 ಕೆ.ಜಿ.ಗಿಂತ 100 ಗ್ರಾಂ ಹೆಚ್ಚು ತೂಕ ಹೊಂದಿದ್ದಾರೆ ಎಂಬ ಕಾರಣಕ್ಕೆ ಕ್ರೀಡಾಕೂಟದಿಂದ ಹೊರದಬ್ಬಲಾಯಿತು. ಆಕೆ ಫೈನಲ್‌ ಕುಸ್ತಿಯಲ್ಲಿ ಭಾಗವಹಿಸದಂತೆ ತಡೆಯಲಾಗಿತು. ಅವರು ಪಂದ್ಯದಿಂದ ಹೊರಬಿದ್ದುದ್ದನ್ನು ಬಿಜೆಪಿ ಮತ್ತು ಸಂಘಪರಿವಾರದ ನಾಯಕರಿಂದ ಹಿಂಬಾಲಕರವರೆಗೆ ಎಲ್ಲರೂ ಸಂಭ್ರಮಿಸಿದರು. ಬಿಜೆಪಿ ಐಟಿ ಸೆಲ್ ನಾನಾ ರೀತಿಯಲ್ಲಿ ಫೋಗಟ್ ಅವರನ್ನು ಟ್ರೋಲ್ ಮಾಡಿತು. ದೇಹದ ತೂಕ ಕಾಪಾಡಿಕೊಳ್ಳದ ಕ್ರೀಡಾಪಟು ಅದೆಂತಹ ಕ್ರೀಡಾಪಟು ಎಂದು ಹೀಗಳೆಯಿತು.

ಒಲಿಂಪಿಕ್ಸ್‌ನಿಂದ ಮರಳಿದ ಫೋಗಟ್‌ಗೆ ಹರಿಯಾಣ ಜನರು ಪ್ರೀತಿಯಿಂದ ಸ್ವಾಗತಿಸಿದರು. “ಅಧಿಕ ತೂಕದಿಂದ ಅನರ್ಹಗೊಂಡ ಮತ್ತು ಶೂನ್ಯ ಪದಕಗಳೊಂದಿಗೆ ಹಿಂದಿರುಗಿದ ಫೋಗಟ್‌ಗೆ ಈ ಭವ್ಯ ಸ್ವಾಗತ ಅನಗತ್ಯ. ಮಾತ್ರವಲ್ಲ, ತೀವ್ರ ನಿರಾಶಾದಾಯಕ ಮತ್ತು ಶೋಚನೀಯ ಪ್ರದರ್ಶನ” ಎಂದು ಬಿಜೆಪಿ ಗೇಲಿ ಮಾಡಿತ್ತು.

ಫೋಗಟ್ ವಿರುದ್ಧ ಬಿಜೆಪಿ ಮುಗಿಬೀಳಲು ಕಾರಣ, ಫೋಗಟ್ ಸೇರಿದಂತೆ ಹಲವಾರು ಮಹಿಳಾ ಕುಸ್ತಿಪಟುಗಳು ಕುಸ್ತಿ ಫೆಡರೇಷನ್‌ನ ಅಧ್ಯಕ್ಷನಾಗಿದ್ದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್‌ ವಿರುದ್ಧ ಪ್ರತಿಭಟನೆ ನಡೆಸಿದ್ದದ್ದು. ಮಹಿಳಾ ಕುಸ್ತಿಪಟುಗಳಿಗೆ ಬ್ರಿಜ್ ಭೂಷಣ್ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಕುಸ್ತಿಪಟುಗಳು ದೆಹಲಿಯಲ್ಲಿ ಹಲವು ದಿನಗಳ ಕಾಲ ಧರಣಿ ನಡೆಸಿದ್ದರು. ಅವರ ಸಮಸ್ಯೆ ಆಲಿಸಬೇಕಿದ್ದ ಕೇಂದ್ರ ಸರ್ಕಾರ, ಕುಸ್ತಿಪಟುಗಳ ಮೇಲೆ ದೆಹಲಿ ಪೊಲೀಸರನ್ನು ‘ಛೂ’ ಬಿಟ್ಟಿತ್ತು. ದಮನ ನಡೆಸಿತ್ತು. ಈ ಅಂತಾರಾಷ್ಟ್ರೀಯ ಪ್ರತಿಷ್ಠೆಯ ಮಹಿಳಾ ಕುಸ್ತಿಪಟುಗಳನ್ನು ಬಹಿರಂಗವಾಗಿ ಎಳೆದಾಡಿ, ಬೂಟುಕಾಲುಗಳಿಂದ ತುಳಿಯಲಾಯಿತು. ಕುಖ್ಯಾತ ಅಪರಾಧಿಗಳಂತೆ ಪೊಲೀಸ್ ವ್ಯಾನಿನಲ್ಲಿ ತುಂಬಿ ಎಳೆದೊಯ್ಯಲಾಯಿತು. ಆದರೆ, ಕುಸ್ತಿ ಕ್ರೀಡಾರಂಗದ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಶೋಷಿಸಿದ್ದ ಬ್ರಿಜ್ ಭೂಷಣ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಿಲ್ಲ.

ಫೋಗಟ್‌ ಪ್ಯಾರೀಸ್ ಒಲಿಂಪಿಕ್‌ನಿಂದ ಹೊರಬಂದ ಸಮಯದಲ್ಲಿಯೂ, ರೋಹಿತ್ ಶರ್ಮಾ ಅವರ ದೈಹಿಕ ಸದೃಢತೆಯ ಬಗ್ಗೆ ಚರ್ಚೆಗಳು ನಡೆದಿದ್ದವು. “ಅದೃಷ್ಟವಶಾತ್, ಕ್ರಿಕೆಟ್‌ನಲ್ಲಿ ಪಂದ್ಯಕ್ಕೂ ಮುನ್ನ ತೂಕ ಹಾಕುವ ನಿಯಮವಿಲ್ಲ. ಇಲ್ಲವಾದರೆ, ರೋಹಿತ್‌ ಶರ್ಮಾಗೆ ಭಾರೀ ಕಷ್ಟವಾಗುತ್ತಿತ್ತು” ಎಂದು ನೆಟ್ಟಿಗರು ಜರಿದಿದ್ದರು.

ರೋಹಿತ್ ಶರ್ಮಾ ಅವರ ಫಿಟ್‌ನೆಸ್‌ ಬಗ್ಗೆ ಪ್ರತಿಕ್ರಿಯಿಸಿದ್ದ ಕ್ರಿಕೆಟ್‌ ದಂತಕತೆಗಳಲ್ಲಿ ಒಬ್ಬರಾದ ಕಪಿಲ್ ದೇವ್, “ಫಿಟ್ ಆಗಿರುವುದು ಬಹಳ ಮುಖ್ಯ. ತಂಡದ ನಾಯಕನಿಗೆ ಇನ್ನೂ ಹೆಚ್ಚು ಮುಖ್ಯ. ಫಿಟ್ ಆಗಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ. ರೋಹಿತ್ ಶರ್ಮಾ ಒಬ್ಬ ಅದ್ಭುತ ಬ್ಯಾಟ್ಸ್‌ಮನ್. ಆದರೆ, ಅವರು ಸ್ವಲ್ಪ ಅಧಿಕ ತೂಕ ಹೊಂದಿದ್ದಾರೆ. ಅವರು ಫಿಟ್ ಆಗಬೇಕು” ಎಂದಿದ್ದರು.

ವಿನೇಶ್ ಫೋಗಟ್‌ ಅವರ 100 ಗ್ರಾಂನಷ್ಟು (100 ಗ್ರಾಮ್ ಎಂದರೆ ಒಂದು ಚಟಾಕು) ಅಧಿಕ ತೂಕದ ಕಾರಣಕ್ಕೆ ಅವರನ್ನು ಬಿಜೆಪಿ ಟ್ರೋಲ್ ಮಾಡಿತು. ಆದರೆ, ಈಗ ಹತ್ತಿಪ್ಪತ್ತು ಕೇಜಿ ಅಧಿಕ ತೂಕ ಹೊಂದಿರುವ ರೋಹಿತ್ ಶರ್ಮಾ ಬಗ್ಗೆ ಮಾತನಾಡುವುದು ಬಿಜೆಪಿಗೆ ತಪ್ಪಾಗಿ ಕಾಣುತ್ತಿದೆ. ರೋಹಿತ್ ತೂಕವನ್ನು ಟೀಕಿಸಿದ್ದು, ‘ಬಾಡಿ ಶೇಮಿಂಗ್‌’ ಆಗಿ ಕಾಣುತ್ತಿದೆ. ಶರ್ಮಾ ಪರವಾಗಿ ಬಿಜೆಪಿ ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುತ್ತಿದೆ.

ಫೋಗಟ್ ವಿಚಾರದಲ್ಲಿ ಒಂದು ಧೋರಣೆ – ಶರ್ಮಾ ವಿಚಾರದಲ್ಲಿ ಮತ್ತೊಂದು ಧೋರಣೆ; ಇಲ್ಲಿ ಬಿಜೆಪಿ ಸ್ಪಷ್ಟ ನಿಲುವು ಏನು? ಆ ನಿಲುವು ಮನುವಾದ ಮತ್ತು ಬ್ರಾಹ್ಮಣ್ಯವಾದ! ಅಂದರೆ, ವಿನೇಶ್‌ ಫೋಗಟ್‌ ಒಬ್ಬ ಹೆಣ್ಣು, ಹಿಂದುಳಿದ ‘ಜಾಟ್‌’ (ಒಬಿಸಿ-ಶೂದ್ರ) ಸಮುದಾಯಕ್ಕೆ ಸೇರಿದವರು. ಮಾತು ಇಷ್ಟಕ್ಕೇ ನಿಲ್ಲುವುದಿಲ್ಲ. ಬ್ರಿಜಭೂಷಣನೆಂಬ ಬಿಜೆಪಿಯ ಬಾಹುಬಲಿಯ ವಿರುದ್ಧ ಜಗತ್ತೇ ಗಮನಿಸುವಂತೆ ಪ್ರತಿಭಟಿಸಿದವರು ವಿನೇಶ್ ಮತ್ತು ಸಂಗಡಿಗರು. ಮೋದಿ ಮತ್ತು ಅಮಿತ್ ಶಾ ತೀವ್ರ ಮುಜುಗರಕ್ಕೆ ಒಳಗಾದರು. ಬ್ರಿಜಭೂಷಣ ವಿರುದ್ಧ ಕ್ರಮ ಕೈಗೊಳ್ಳಲಾರದೆ ತುಟಿ ಕಚ್ಚಿಕೊಂಡು ಲೋಕನಿಂದೆಯನ್ನು ಎದುರಿಸುವ ಇಕ್ಕಟ್ಟಿಗೆ ಸಿಕ್ಕಿಕೊಂಡರು. ಈ ರೋಹಿತ್ ಶರ್ಮಾ ಮೇಲ್ಜಾತಿಯ ಬ್ರಾಹ್ಮಣ ಸಮುದಾಯದವರು. ಇದೇ ಬಿಜೆಪಿಯ ಈ ಧೋರಣೆಗೆ ಪ್ರಮುಖ ಕಾರಣ!

ಬಿಜೆಪಿಗರಿಗೆ ಮನುಸ್ಮೃತಿಯೇ ಸಂವಿಧಾನ. ಮನುಸ್ಮೃತಿಯನ್ನು ಬರೆದಿದ್ದ ಮನು ಒಬ್ಬ ಜಾತಿವಾದಿ. ಸಮಾಜದಲ್ಲಿ ವರ್ಣಾಶ್ರಮಗಳು ಜಾರಿಯಲ್ಲಿರಬೇಕು ಎಂದು ಪ್ರತಿಪಾದಿಸಿದ್ದವನು. ಶೂದ್ರರು-ಅಸ್ಪೃಶ್ಯರು ಮುಟ್ಟಲು ಅರ್ಹರಲ್ಲದವರು ಎಂದಿದ್ದವನು. ಮಹಿಳೆಯರು 2ನೇ ದರ್ಜೆಯ ಪ್ರಜೆಗಳು, ಗಂಡಿನ ಅಧೀನದಲ್ಲಿರಬೇಕು ಎಂದು ಹೇಳಿದ್ದವನು. ಬಿಜೆಪಿ-ಆರ್‌ಎಸ್‌ಎಸ್‌ ಸೇರಿದಂತೆ ಹಿಂದುತ್ವವಾದಿಗಳು ಮನುವನ್ನು ತಮ್ಮ ಆರಾಧ್ಯ ದೈವದಂತೆ ನೋಡುತ್ತಾರೆ. ಬಿಜೆಪಿ-ಆರ್‌ಎಸ್‌ಎಸ್‌ನ ಒಳ ಅಜೆಂಡಾ ಕೂಡ ಮನು ಬರೆದ ಮನುಸ್ಮೃತಿಯನ್ನೇ ಸಂವಿಧಾನ ಮಾಡಬೇಕೆಂಬುದು. ಬಿಜೆಪಿ-ಆರ್‌ಎಸ್‌ಎಸ್‌ನ ಜೀವಾಳವೇ ಮನುವಾದ.

ಈ ವರದಿ ಓದಿದ್ದೀರಾ?: ಇದು ಒಕ್ಕೂಟ ವ್ಯವಸ್ಥೆಯೋ ಅಥವಾ ಸರ್ವಾಧಿಕಾರಿ -ಏಕಾಕಾರಿ ವ್ಯವಸ್ಥೆಯೇ?

ಮನುಸ್ಮೃತಿ ಹೇಳುವಂತೆ ಹೆಣ್ಣು ಗಂಡಿನ ಅಧೀನಳಾಗಿರಬೇಕು. ಪ್ರಶ್ನಿಸಬಾರದು. ಆದರೆ, ವಿನೇಶ್‌ ಫೋಗಟ್‌ ಯಾರಿಗೂ ಅಧೀನಳಾಗಲಿಲ್ಲ. ಬದಲಾಗಿ, ಬ್ರಿಜ್‌ ಭೂಷಣ್‌ನ ಕಾಮುಕ ಮುಖವನ್ನು ಜಗತ್ತಿನ ಎದುರು ತೆರೆದಿಟ್ಟರು. ಓರ್ವ ಹೆಣ್ಣಾಗಿ, ಶೂದ್ರ ಜಾತಿಯವರಾಗಿ ಫೋಗಟ್‌ ಅವರು ತಮ್ಮದೇ ಪಕ್ಷದ (ಬಿಜೆಪಿ) ಸಂಸದನ ವಿರುದ್ಧ ದನಿ ಎತ್ತಿದ್ದನ್ನು ಬಿಜೆಪಿಗರಿಗೆ ಸಹಿಸಲು ಸಾಧ್ಯವಾಗಲಿಲ್ಲ. ಹೀಗಾಗಿ, ಈ ಪಕ್ಷ ಫೋಗಟ್ ವಿರುದ್ಧ ಮುಗಿಬಿದ್ದಿತ್ತು. ಬ್ರಾಹ್ಮಣ ರೋಹಿತ್ ಶರ್ಮಾ ಅವರನ್ನು ಟೀಕಿಸಿದ ಶಮಾ ಮೊಹಮ್ಮದ್ ಮುಸ್ಲಿಮರು, ಜೊತೆಗೆ ಕಾಂಗ್ರೆಸ್ ಪಕ್ಷದ ವಕ್ತಾರೆ. ಮುಸ್ಲಿಮ್ ದ್ವೇಷವನ್ನೇ ಉಸಿರಾಡಿರುವ ಬಿಜೆಪಿ ಸಮಾಜವನ್ನೂ ಅದೇ ಬೆಂಕಿಯಲ್ಲಿ ಕುದಿಸತೊಡಗಿದೆ.

ರೋಹಿತ್‌ ಶರ್ಮಾ ಓರ್ವ ಗಂಡು, ಅದರಲ್ಲೂ ಬ್ರಾಹ್ಮಣ ಜಾತಿಗೆ ಸೇರಿದ ಗಂಡು. ಆತನನ್ನು ಕ್ರೀಡಾಪಟು ಎಂಬುದಕ್ಕಿಂತ ಮುಖ್ಯವಾಗಿ ಜಾತಿ ಪ್ರೇಮದ ಕಾರಣಕ್ಕಾಗಿಯೇ ಬಿಜೆಪಿಗರು ಅಪ್ಪಿಕೊಳ್ಳುತ್ತಿದ್ದಾರೆ. ಜೊತೆಗೆ, ರೋಹಿತ್‌ ಅವರನ್ನು ಟೀಕಿಸಿದ್ದು ಕಾಂಗ್ರೆಸ್‌ನ ಓರ್ವ ಹೆಣ್ಣು, ಅದೂ ಮುಸ್ಲಿಂ ಸಮುದಾಯದ ಹೆಣ್ಣು. ಆಕೆಯ ಟೀಕೆಯನ್ನು ಬಿಜೆಪಿಗರು ಸಹಿಸುವುದಿಲ್ಲ. ಸಹಿಸಿದರೆ, ಅದು ಬಿಜೆಪಿಯ ಕೋಮುವಾದ ಮತ್ತು ಮನುವಾದಕ್ಕೆ ಹಿನ್ನಡೆಯಾದಂತೆ. ಆ ಕಾರಣಕ್ಕಾಗಿಯೇ ಬಿಜೆಪಿಗರು ಶಮಾ ವಿರುದ್ದ ಸಿಡಿದೆದ್ದು ಟೀಕಿಸುತ್ತಿದ್ದಾರೆ. ಆಕೆಯನ್ನು ಮಣಿಸಲು, ಮುರಿಯಲು ಯತ್ನಿಸುತ್ತಿದ್ದಾರೆ.

ಬಿಜೆಪಿಯ ಈ ಜಾತಿ, ಲಿಂಗ ಹಾಗೂ ಧಾರ್ಮಿಕ ರಾಜಕಾರಣವನ್ನು ಅರಿತುಕೊಳ್ಳುವ ತುರ್ತು ಭಾರತೀಯ ಸಮಾಜಕ್ಕೆ ಅಗತ್ಯವಿದೆ. ಬಿಜೆಪಿಯ ರಾಜಕೀಯವನ್ನು ನೋಡುವ ಜನರ ದೃಷ್ಟಿಕೋನ ಬದಲಾಗಬೇಕಿದೆ. ಆಗ ಮಾತ್ರವೇ ಬಿಜೆಪಿಯ ಇಂತಹ ಎರಡು ಮುಖಗಳು ಮತ್ತು ಇಬ್ಬಗೆಯ ಮಾನದಂಡಗಳು ಸ್ಪಷ್ಟವಾಗಿ ಅರ್ಥವಾಗುತ್ತವೆ!

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. Mr. Chalya’s preconceived biases are no less despicable than those of the BJP’s which he redicules.That fitness of the body is essential for any person in any profession for a proper discharge of his functions is undeniable.When Ms. Phogat’s sport demanded precise weight for eligibility, it was her duty to make sure at the Olympics level, to maintain the stipulated weight,failure to do so is totally undefendable, and Sri Chalya wants the world to defend the undefendable, merely because Ms.Phogat is regarded as not belonging to the Manuvaadi class! Wah sir wah! What journalism, what logic.In Sharma’s case, no stipulation of weight as to eligibility to participate in his game.It is of course ideal if fitness of the ideal kind is possessed by everybody.But Sharma, as he is, has proved himself a very feared opponent in his game. Has it no relevance in the world of sports? Sri Chalya is at the game of defending the undefendable again, when he seems to approve Ms. Shama MD.’s comments in which she calls Sharma and average captain.Is he? What the record speaks? Perhaps, after Dhoni ,he is the most successful captain our national cricket team.Has Sri Chalya has, before his casteist outbursts considered this aspect conveniently overlooked by Ms.Md.? Why compare the uncomparables?Why is this patently wrong path trodden by intelligent persons like Ms.Md., and Sri Chalya? Whether Brij Bhushan not being arraign by Courts to which Ms. Phogat is something only legal experts can tell us. Court decisions too to be ignored to further a casteist agenda? Motivated political party spokes person and apparently an independent journalist are also dangerous to us because they are not only wrong but intelligent too in a perverse way. I neither belong to Manu’s caste, nor a member of BJP.But petty politics at every level and by all parties is nauseating.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X