ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಬಜೆಟ್ ಭಾಷಣದಲ್ಲಿ 16 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ವೃತ್ತಿಪರ ವಿಷಯ ತಜ್ಞರನ್ನು ‘professor of practice’ ಆಗಿ ನೇಮಕ ಮಾಡಿಕೊಳ್ಳಲಾಗುವುದು ಎಂದಿದ್ದಾರೆ. ಇದು ಕೇಂದ್ರ ಸರ್ಕಾರದ ಹೊಸ ಶಿಕ್ಷಣ ನೀತಿಯ ಶಿಫಾರಸು. ಹೊಸ ಶಿಕ್ಷಣ ನೀತಿಯನ್ನು ತಿರಸ್ಕರಿಸಿರುವ ರಾಜ್ಯ ಸರ್ಕಾರವು ಆ ನೀತಿಯ ಆತ್ಮವನ್ನೇ ಜಾರಿಗೊಳಿಸುತ್ತಿರುವುದು ವಿಡಂಬನೆಯೇ ಸರಿ ಎಂದು ಶಿಕ್ಷಣ ತಜ್ಞ ಶ್ರೀಪಾದ್ ಭಟ್ ಹೇಳಿದ್ದಾರೆ.
“ರಾಜ್ಯದ ಬಜೆಟ್ಟನ್ನು ಕೇಂದ್ರದ ಆರ್ಥಿಕ ಸ್ಥಿತಿ ಮತ್ತು ನಾನಾ ಆದ್ಯತೆಯ ವಲಯಗಳಿಗೆ ಕೇಂದ್ರ ಬಜೆಟ್ಟಿನಲ್ಲಿ ಮಾಡಿರುವ ಕಡಿತದ ಹಿನ್ನೆಲೆಯಲ್ಲಿ ನೋಡಬೇಕಾಗುತ್ತದೆ. ಮುಕ್ತ ಮಾರುಕಟ್ಟೆ ವ್ಯವಸ್ಥೆಯಲ್ಲಿ ಈ ಕೆಳಕಂಡ ಕೇಂದ್ರ ಆರ್ಥಿಕ ಪರಿಸ್ಥಿತಿ ರಾಜ್ಯಗಳ ಮೇಲೂ ಪರಿಣಾಮ ಬೀರುತ್ತದೆ” ಎಂದು ಅವರು ವಿಶ್ಲೇಷಿಸಿದ್ದಾರೆ.
2024-25ರವರೆಗೆ ಕರ್ನಾಟಕದ ಸಾಲ 6.65 ಲಕ್ಷ ಕೋಟಿ ರೂ. ಇದೆ. ಇಂದಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು 1.16 ಲಕ್ಷ ಕೋಟಿ ರೂ. ಸಾಲ ಪಡೆಯುವುದಾಗಿ ಹೇಳಿದ್ದಾರೆ. ಅಂದರೆ, ಮೋದಿ ಸರ್ಕಾರವು ಕರ್ನಾಟಕದ ಪಾಲಿನ ತೆರಿಗೆ ಕೊಡುತ್ತಿಲ್ಲ, ಮತ್ತೊಂದೆಡೆ ರಾಜ್ಯಗಳಿಗೆ ನಯಾ ಪೈಸೆಯಷ್ಟೂ ಪಾಲು ದೊರಕದ ‘ಸೆಸ್’ ಮತ್ತು ‘ಸರ್ಚಾರ್ಜ್’ ಹೆಚ್ಚಿಸುತ್ತಿದೆ.
2010-11ರಲ್ಲಿ ಒಟ್ಟು ತೆರಿಗೆಯ ಶೇ.10.4ರಷ್ಟಿದ್ದ ಸೆಸ್ ಮತ್ತು ಸರ್ಚಾರ್ಜ್ 2022-23ರ ವೇಳೆಗೆ ಶೇ.21.2ರಷ್ಟಾಗಿದೆ. ಅಂದರೆ ಹತ್ತು ವರ್ಷಗಳಲ್ಲಿ ಕೇಂದ್ರ ಸರ್ಕಾರದ ಆದಾಯ ದುಪ್ಪಟ್ಟಾಗಿದೆ, ರಾಜ್ಯಗಳಿಗೆ ಅಷ್ಟು ಪ್ರಮಾಣದಲ್ಲಿ ಕೊರತೆಯಾಗಿದೆ. ಇಂತಹ ಆರ್ಥಿಕ ಸರ್ವಾಧಿಕಾರಿ ವ್ಯವಸ್ಥೆಯಲ್ಲಿ ರಾಜ್ಯಗಳ ಅಭಿವೃದ್ಧಿಗೆ ಸಂಪನ್ಮೂಲ ಎಲ್ಲಿದೆ? ಹೀಗಾಗಿ ಸಾಲದ ಹೊರೆ ಹೆಚ್ಚಾಗುತ್ತದೆ. ಇಂತಹ ಮೋಸದ ಕುರಿತು ಮಾತನಾಡದೆ ಗ್ಯಾರಂಟಿ ಯೋಜನೆಗಳನ್ನು ಟೀಕಿಸುವುದು ತಪ್ಪಲ್ಲವೇ?
ಸಿದ್ದರಾಮಯ್ಯ, ಕೃಷ್ಣ ಬೈರೇಗೌಡ, ಪ್ರಿಯಾಂಕ್ ಖರ್ಗೆರಂತಹ ಬೆರಳೆಣಿಕೆ ಮುಖಂಡರನ್ನು ಹೊರತುಪಡಿಸಿ ಕಾಂಗ್ರೆಸ್‌ನ ಬೇರೆ ಯಾವ ರಾಜಕಾರಣಿಗಳು ಈ ವಂಚನೆ ಕುರಿತು ಮಾತನಾಡುತ್ತಿಲ್ಲ. ಬದಲಿಗೆ ಬಿಜೆಪಿ ಜೊತೆ ಸೇರಿಕೊಂಡು ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಾರೆ.
ಈ ಬಾರಿ ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿಗಳು ‘ಒಟ್ಟು ತೆರಿಗೆ ರವಿನ್ಯೂನಲ್ಲಿ ಸೆಸ್ ಮತ್ತು ಸರ್ಚಾರ್ಜ್ಅನ್ನು ಶೇ.5ಕ್ಕೆ ಮಿತಿಗೊಳಿಸಬೇಕು ಮತ್ತು ಅದರಲ್ಲಿ ರಾಜ್ಯಗಳಿಗೂ ಪಾಲು ದೊರಕಬೇಕು’ ಎಂದು ಹೇಳಿದ್ದಾರೆ. ಜೊತೆಗೆ, ರಾಜ್ಯಗಳಿಗೆ ಶೇ.50ರಷ್ಟು ತೆರಿಗೆ ಹಂಚಿಕೆ ಪಾಲು ದೊರಕಬೇಕು ಎಂದು ಒತ್ತಾಯಿಸಿದ್ದಾರೆ. ಈ ಕುರಿತ ಚಳವಳಿಯೇ ನಡೆಯಬೇಕಿದೆ ಎಂದು ಶ್ರೀಪಾದ ಭಟ್ ಹೇಳಿದ್ದಾರೆ.
ಇಂದು ದೇಶದ ಅರ್ಥ ವ್ಯವಸ್ಥೆಯು oligarchyಯ (ಕೆಲವೇ ಕ್ರೋನಿ ಬಂಡವಾಳಶಾಹಿ) ತೆಕ್ಕೆಯೊಳಗಿದೆ. ಆರ್ಥಿಕತೆಯನ್ನು ಮೋದಿ ಆಡಳಿತವು ಸಂಪೂರ್ಣವಾಗಿ ಕೇಂದ್ರೀಕರಣಗೊಳಿಸಿದೆ. ಹೀಗಾಗಿ ರಾಜ್ಯಗಳ ಬಜೆಟ್‌ಗೆ ಮಹತ್ವ ಕಡಿಮೆಯಾಗುತ್ತಿದೆ. ತೆರಿಗೆ ಮತ್ತು ಇತರೆ ಇಲಾಖೆಗಳಿಗೆ ಅರ್ಧದಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನಿರ್ಧರಿಸುವುದರಿಂದ ರಾಜ್ಯಗಳ ಸ್ವಾಯತ್ತತೆ ಕುಂಠಿತಗೊಂಡಿದೆ. ಭಾರತದ ವಿದೇಶಿ ಸಾಲ 62 ಲಕ್ಷ ಕೋಟಿ ರೂ. ಆಗಿದೆ. ಆಂತರಿಕ ಸಾಲ 134 ಲಕ್ಷ ಕೋಟಿ ರೂ. ಇದೆ. ಒಟ್ಟು ಸಾಲ 196 ಲಕ್ಷ ಕೋಟಿ ರೂಪಾಯಿ. 2014-15 ರಿಂದ 2024-25ರ ಅವಧಿಯಲ್ಲಿ ಮೋದಿ ಸರ್ಕಾರ 134 ಲಕ್ಷ ಕೋಟಿ ರೂ. ಸಾಲ ಮಾಡಿದೆ. ಬಂಗಾರದ ಮೇಲಿನ ಸಾಲ 1.74 ಲಕ್ಷ ಕೋಟಿ ರೂ. ದಾಟಿದೆ. ಆದರೂ 100 ಕೋಟಿ ಜನಸಂಖ್ಯೆ ಬಳಿ ಕೊಳ್ಳುವ ಸಾಮರ್ಥ್ಯವಿಲ್ಲ.
ಉತ್ಪಾದನಾ ವಲಯದ ಅಭಿವೃದ್ಧಿ ಕಳೆದ 14 ವರ್ಷಗಳಲ್ಲಿ ಅತ್ಯಂತ ಕನಿಷ್ಠ ಮಟ್ಟದಲ್ಲಿದೆ. ಹೂಡಿಕೆದಾರರು ಒಂದು ಟ್ರಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ. 2013-14ರಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹ 4.28 ಲಕ್ಷ ಕೋಟಿ ರೂ.ಗಳಷ್ಟಿದ್ದರೆ ಆದಾಯ ತೆರಿಗೆ ಸಂಗ್ರಹ 2.46 ಲಕ್ಷ ಕೋಟಿ ರೂ. ಇತ್ತು. ಕಾರ್ಪೊರೇಟ್ ಮತ್ತು ಆದಾಯ ತೆರಿಗೆ ಅನುಪಾತವು 64:36ರಷ್ಟಿತ್ತು.
2024-25ರಲ್ಲಿ ಆದಾಯ ತೆರಿಗೆ ಸಂಗ್ರಹ 11.99 ಲಕ್ಷ ಕೋಟಿ ರೂ.ಗಳಷ್ಟಿದ್ದರೆ ಕಾರ್ಪೊರೇಟ್ ತೆರಿಗೆ ಸಂಗ್ರಹ 9.8 ಲಕ್ಷ ಕೋಟಿ ರೂ.ಗಳಷ್ಟಿದೆ. ಹತ್ತು ವರ್ಷಗಳಲ್ಲಿ ಅನುಪಾತವು ಉಲ್ಟಾ ಆಗಿ ಕಾರ್ಪೊರೇಟ್ ತೆರಿಗೆ ಮತ್ತು ಆದಾಯ ತೆರಿಗೆ ಅನುಪಾತವು 40:60ರಷ್ಟಾಗಿದೆ.
ಈ ವರದಿ ಓದಿದ್ದೀರಾ?: ಹಗರಣಗಳ ಕುಣಿಕೆ, ‘ಮೋಶಾ’ಗಳ ಪಾಶ: ಕುಮಾರಸ್ವಾಮಿಯವರ ಕತೆ ಏನು?
ಮೋದಿ ತಮ್ಮ ಆಪ್ತ ಮಿತ್ರನೆಂದು ಬಣ್ಣಿಸುವ ಡೊನಾಲ್ಡ್ ಟ್ರಂಪ್ ಭಾರತದಿಂದ ಅಮೆರಿಕೆಗೆ ರಫ್ತಾಗುವ ಸರಕುಗಳ ಮೇಲಿನ ಸುಂಕವನ್ನು ಹೆಚ್ಙಿಸಿದ್ದಾರೆ. ಇದು ಭಾರತದ ರಫ್ತಿನ ವಹಿವಾಟಿನ ಮೇಲೆ ನೇರ ದುಷ್ಪರಿಣಾಮ ಬೀರಲಿದೆ. ಈಗಾಗಲೇ ಆಮದಿಗಿಂತ ಕಡಿಮೆ ಇರುವ ರಫ್ತಿನ ಪ್ರಮಾಣ ಮತ್ತಷ್ಟು ಕಡಿಮೆಯಾಗುತ್ತದೆ. ಆಮದು ಹೆಚ್ಚಾಗಿ ರಫ್ತು ಕಡಿಮೆಯಾಗಿ trade deficitನ ಪ್ರಮಾಣ ಹೆಚ್ಚಾಗುತ್ತದೆ. ಹಾಗೆಯೇ ಟ್ರಂಪ್ ಧಮ್ಕಿಗೆ ಬಗ್ಗಿದ ’56 ಇಂಚಿನ ಎದೆ’ ಪೆಟ್ರೋಲಿಯಂ ಉತ್ಪನ್ನಗಳನ್ನು ರಷ್ಯಾದ ಬದಲಿಗೆ ಅಮೆರಿಕದಿಂದ ದುಬಾರಿ ಬೆಲೆಗೆ ತರಿಸಿಕೊಳ್ಳಬೇಕಾಗುತ್ತದೆ. ಇದು ಇತರೆ ಉತ್ಪನ್ನಗಳಿಗೂ ಅನ್ವಯವಾಗುತ್ತದೆ. ಪರಿಣಾಮವಾಗಿ trade deficit (ರಫ್ತು ಕಡಿಮೆ, ಆಮದು ಜಾಸ್ತಿ) ಹೆಚ್ಚಾಗುತ್ತದೆ.
ಈಗಾಗಲೇ, 2023-24ರ ಸಾಲಿನಲ್ಲಿ 20.48 ಲಕ್ಷ ಕೋಟಿ trade deficit ಇದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಲಿದೆ.
ಸೆಪ್ಟೆಂಬರ್ 2024ರಲ್ಲಿ ವಿದೇಶಿ ವಿನಿಮಯ ಮೀಸಲು ನಿಧಿ (ಫೋರೆಕ್ಸ್) 60.54 ಲಕ್ಷ ಕೋಟಿ ರೂ.ಗಳಷ್ಟಿದೆ. ಆದರೆ ಆರ್‌ಬಿಐ ರೂಪಾಯಿ ಕುಸಿತವನ್ನು ತಡೆಯಲು ಫೋರೆಕ್ಸ್‌ನಿಂದ ಡಾಲರ್‌ಅನ್ನು ತೆಗೆದು ಮಾರುಕಟ್ಟೆಗೆ ಬಿಡುತ್ತಿದೆ. ಡಿಸೆಂಬರ್ 2024ರಲ್ಲಿ 1.2 ಲಕ್ಷ ಕೋಟಿ ರೂ.ಗಳನ್ನು ಮೀಸಲು ನಿಧಿಯಿಂದ ತೆಗೆದು ಮಾರಿಕೊಂಡಿದೆ. ಇದರ ಫಲವಾಗಿ ಮೀಸಲು ನಿಧಿಯ ಮೊತ್ತವೂ ಕಡಿಮೆಯಾಗುತ್ತಿದೆ. ಈ ಮೀಸಲು ನಿಧಿಯನ್ನು ಆಪತ್ಕಾಲದಲ್ಲಿ ಬಳಕೆಗೆ ಬರಲಿ ಎಂದು ಸಂಚಯ ಮಾಡಲಾಗುತ್ತದೆ. ಆದರೆ ಆರ್‌ಬಿಐ ಅದನ್ನೂ ಕರಗಿಸುತ್ತಿದೆ. 2014-24ರ ಅವಧಿಯಲ್ಲಿ per capita ಸಾಲ 1,09,373 ರೂ.ಗಳಷ್ಟಿದೆ.
ಮುಖ್ಯವಾಗಿ ಹತ್ತಾರು ತೂತುಗಳಿರುವ ಹಡಗಿನ ದೋಣಿಯಲ್ಲಿ ಪಯಣಿಸುತ್ತಿದ್ದೇವೆ. ಅವುಗಳನ್ನು ಯಾರೂ ಮುಚ್ಚುತ್ತಿಲ್ಲ ಎಂದು ಅವರು ವಿಶ್ಲೇಷಿಸಿದ್ದಾರೆ.