ಭಾರತದ ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಸ್ನೇಹಿತರೇ ಆಗಿದ್ದರೂ, ಟ್ರಂಪ್ ಅವರ ತಿಕ್ಕಲು ನಡೆಯನ್ನು ನಿಭಾಯಿಸಲು ಮೋದಿಗೆ ಸಾಧ್ಯವಿಲ್ಲ. ಟ್ರಂಪ್ ಸರ್ವಾಧಿಕಾರಿ ಧೋರಣೆಯನ್ನು ನಿಭಾಯಿಸಿ, ಬದಿಗೊತ್ತಿ ವ್ಯವಹಾರ ಪಾಲುದಾರಿಕೆಯನ್ನು ಮುಂದುವರೆಸುವುದು ಸುಲಭವಾಗಿಲ್ಲ.
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ರ್ 2ನೇ ಬಾರಿಗೆ ಅಧಿಕಾರ ವಹಿಸಿಕೊಂಡಿದ್ದಾರೆ. ಟ್ರಂಪ್ ಪದಗ್ರಹಣ ಕಾರ್ಯಕ್ರಮದಲ್ಲಿ ಅವರ ಆಪ್ತಮಿತ್ರ ಮೋದಿ ಭಾಗಿಯಾಗಿರಲಿಲ್ಲ. ಇದು, ಮೋದಿ-ಟ್ರಂಪ್ ನಡುವಿನ ಸಂಬಂಧ ಹದಗೆಡುತ್ತಿದೆ. ಭಾರತ-ಅಮೆರಿಕ ನಡುವಿನ ವ್ಯಾವಹಾರಿಕ ಸಂಬಂಧವೂ ದುರ್ಬಲಗೊಳ್ಳುತ್ತಿದೆ ಎಂಬ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ನಡುವೆ, ಟ್ರಂಪ್ ಮತ್ತು ಮೋದಿ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಅಮೆರಿಕದೊಂದಿಗೆ ಭಾರತವು ‘ನ್ಯಾಯಯುತ’ ದ್ವಿಪಕ್ಷೀಯ ವ್ಯಾಪಾರ ಸಂಬಂಧವನ್ನು ಮುನ್ನಡೆಸಲು ಮತ್ತು ಹೆಚ್ಚಿನ ಅಮೆರಿಕನ್ ಶಸ್ತ್ರಾಸ್ತ್ರಗಳನ್ನು ಖರೀದಿಸಲು ಮೋದಿ ಅವರನ್ನು ಟ್ರಂಪ್ ಒತ್ತಾಯಿಸಿದ್ದಾರೆ. ಮಾತ್ರವಲ್ಲದೆ, ಅಕ್ರಮ ವಲಸಿಗರನ್ನು ಹಿಂದಕ್ಕೆ ಕರೆಸಿಕೊಳ್ಳುವ ವಿಷಯದಲ್ಲಿ ಭಾರತವು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ಭಾವಿಸಿದ್ದೇವೆ. ಈ ಎಲ್ಲದರ ಬಗ್ಗೆ ಚರ್ಚಿಸಲು ಫೆಬ್ರವರಿಯಲ್ಲಿ ಮೋದಿ ಅಮೆರಿಕಗೆ ಬರಲಿದ್ದಾರೆ ಎಂದೂ ಟ್ರಂಪ್ ಹೇಳಿಕೊಂಡಿದ್ದಾರೆ.
ಪ್ರಧಾನಿ ಮೋದಿ ಅವರು ಜನವರಿ 27ರ ಸೋಮವಾರ ಟ್ವೀಟ್ ಮಾಡಿದ್ದು, ”ಆತ್ಮೀಯ ಸ್ನೇಹಿತ ಟ್ರಂಪ್ ಅವರೊಂದಿಗೆ ಮಾತನಾಡಿದ್ದು ಸಂತೋಷ ತಂದಿದೆ. ಇಬ್ಬರೂ ಪರಸ್ಪರ ಪ್ರಯೋಜನಕಾರಿ ಮತ್ತು ವಿಶ್ವಾಸಾರ್ಹ ಪಾಲುದಾರಿಕೆಗೆ ಬದ್ಧರಾಗಿದ್ದೇವೆ” ಎಂದು ಬರೆದುಕೊಂಡಿದ್ದಾರೆ.
ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, ಇಸ್ರೇಲ್ ಮತ್ತು ಗಾಜಾ ನಡುವಿನ ಕದನ ವಿರಾಮಕ್ಕೆ ಒಪ್ಪಿಕೊಂಡಿರುವ ಬಗ್ಗೆ, ಪಶ್ಚಿಮ ಏಷ್ಯಾ ಮತ್ತು ಉಕ್ರೇನ್‌ನಲ್ಲಿನ ಪರಿಸ್ಥಿತಿಯ ಬಗ್ಗೆಯೂ ಮೋದಿ ಮತ್ತು ಟ್ರಂಪ್ ಚರ್ಚಿಸಿದ್ದಾರೆ. ಜಾಗತಿಕ ಶಾಂತಿ, ಸಮೃದ್ಧಿ ಮತ್ತು ಭದ್ರತೆಯನ್ನು ಉತ್ತೇಜಿಸಲು ಒಟ್ಟಾಗಿ ಕೆಲಸ ಮಾಡಲು ತಾವು ಬದ್ಧರಾಗಿರುವುದಾಗಿ ಹೇಳಿಕೊಂಡಿದ್ದಾರೆ.
ಶ್ವೇತಭವನದ ಹೇಳಿಕೆ ಪ್ರಕಾರ, ಅಮೆರಿಕದ ಅಧ್ಯಕ್ಷ ಟ್ರಂಪ್ ಅವರು ಭಾರತದ ಎದುರು ಕೆಲವು ಮಹತ್ವದ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ ಎಂಬುದನ್ನು ವಿವರಿಸಿದೆ. ”ಭಾರತವು ಅಮೆರಿಕ ನಿರ್ಮಿತ ಭದ್ರತಾ ಸಲಕರಣೆಗಳ (ಶಸ್ತ್ರಾಸ್ತ್ರ) ಖರೀದಿಯನ್ನು ಹೆಚ್ಚಿಸಬೇಕು. ನ್ಯಾಯಯುತ ದ್ವಿಪಕ್ಷೀಯ ವ್ಯಾಪಾರ ಸಂಬಂಧಕ್ಕೆ ಒತ್ತು ಕೊಡಬೇಕು” ಎಂದು ಟ್ರಂಪ್ ಒತ್ತಾಯಿಸಿರುವುದಾಗಿ ಹೇಳಿದೆ.
ಅಂದಹಾಗೆ, 2017 ಮತ್ತು 2021ರ ನಡುವೆ ಟ್ರಂಪ್ ಅಧ್ಯಕ್ಷರಾಗಿದ್ದ ಮೊದಲ ಅವಧಿಯಲ್ಲಿ ಮೋದಿ ಮತ್ತು ಟ್ರಂಪ್ ಆತ್ಮೀಯ ಸಂಬಂಧ ಬೆಳೆಸಿಕೊಂಡಿದ್ದರು. ಮೋದಿ ಗೆದ್ದಾಗ ಟ್ರಂಪ್ ‘ಮೋದಿ ನನ್ನ ಉತ್ತಮ ಗೆಳೆಯ’ ಎಂದಿದ್ದರು. ಟ್ರಂಪ್ ಗೆದ್ದಾಗ, ‘ಕಂಗ್ರಾಜುಲೇಷನ್ಸ್ ಮೈ ಫ್ರೆಂಡ್’ ಎಂದು ಮೋದಿ ಹೇಳಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಟ್ರಂಪ್ ಗೆದ್ದ ಸಮಯದಲ್ಲಿ ಟ್ರಂಪ್‌ಗೆ ಫೋನ್ ಕರೆ ಮಾಡಿದ ಮೊದಲ ವಿದೇಶಿ ನಾಯಕರಲ್ಲಿ ಮೋದಿ ಒಬ್ಬರು.
ಆದಾಗ್ಯೂ, ಟ್ರಂಪ್ ಅವರು ತಮ್ಮ ಮೊದಲ ಅವಧಿಯಲ್ಲಿ, ಭಾರತವು ಹಾರ್ಲೆ ಡೇವಿಡ್ಸನ್ ಬೈಕ್‌ಗಳ ಮೇಲೆ ಹೆಚ್ಚಿನ ಕಸ್ಟಮ್ಸ್ ಸುಂಕಗಳನ್ನು ವಿಧಿಸಿದ್ದಕ್ಕಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಭಾರತವನ್ನು ‘ಸುಂಕದ ರಾಜ’ ಎಂದು ಕರೆದಿದ್ದರು. ಇದೀಗ, ಭಾರತದ ಮೇಲೆ 100% ಆಮದು ಶುಲ್ಕ ವಿಧಿಸುವುದಾಗಿಯೂ ಟ್ರಂಪ್ ಹೇಳುತ್ತಿದ್ದಾರೆ. ಜೊತೆಗೆ, ಶಸ್ತ್ರಾಸ್ತ್ರ ಖರೀದಿಯನ್ನು ಹೆಚ್ಚಿಸುವಂತೆ ಮೋದಿಗೆ ತಾಕೀತು ಮಾಡುತ್ತಿದ್ದಾರೆ.
ಭಾರತಕ್ಕೆ ಹೆಚ್ಚು ಶಸ್ತ್ರಾಸ್ತ್ರಗಳನ್ನು ಪೂರೈಸುವ ರಾಷ್ಟ್ರ ರಷ್ಯಾ. ಭಾರತಕ್ಕೆ ಅಗತ್ಯವಿರುವ ಬಹುತೇಕ ಶಸ್ತ್ರಾಸ್ತ್ರ ಸಲಕರಣೆಗಳನ್ನು ಭಾರತವು ರಷ್ಯಾದಿಂದ ಖರೀದಿಸುತ್ತದೆ. ಭಾರತಕ್ಕೆ ಶಸ್ತ್ರಾಸ್ತ್ರ ಪೂರೈಸುವ ರಾಷ್ಟ್ರಗಳಲ್ಲಿ ಫ್ರಾನ್ಸ್ ಎರಡನೇ ಸ್ಥಾನದಲ್ಲಿದ್ದರೆ, ಅಮೆರಿಕ ಮೂರನೇ ಸ್ಥಾನದಲ್ಲಿದೆ.
2017ರಲ್ಲಿ, ಟ್ರಂಪ್ ಮೊದಲ ಬಾರಿಗೆ ಅಧ್ಯಕ್ಷರಾದಾಗ ಭಾರತವು 282 ಮಿಲಿಯನ್ ಡಾಲರ್ ಮೌಲ್ಯದ ಅಮೆರಿಕನ್ ಶಸ್ತ್ರಾಸ್ತ್ರಗಳನ್ನು ಖರೀದಿಸಿತ್ತು. ಅದಾದ ನಾಲ್ಕು ವರ್ಷಗಳ ನಂತರ 2020ರಲ್ಲಿ, 336 ಮಿಲಿಯನ್ ಡಾಲರ್ ಮೌಲ್ಯದ ಭದ್ರತಾ ಉಪಕರಣಗಳನ್ನು ಖರೀದಿಸಿತು. ಅಂದಿನಿಂದ ಈವರೆಗೆ, ಅದರಲ್ಲೂ ಜೋ ಬೈಡನ್ ಅಧಿಕಾರಾವಧಿಯಲ್ಲಿ ಭಾರತವು ಅಮೆರಿಕದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಿಲ್ಲ. ಇದೀಗ, ಟ್ರಂಪ್ ಮತ್ತೆ ಅಧ್ಯಕ್ಷರಾಗಿದ್ದು, ಶಸ್ತ್ರಾಸ್ತ್ರ ಖರೀದಿಗಾಗಿ ಭಾರತವನ್ನು ಒತ್ತಾಯಿಸುತ್ತಿದ್ದಾರೆ.

ಸದ್ಯ, ಅಮೆರಿಕದ ಪ್ರಮುಖ ಆದಾಯ ಮೂಲಗಳಲ್ಲಿ ಶಸ್ತ್ರಾಸ್ತ್ರ ಉದ್ಯಮವೂ ಒಂದು. ಅಮೆರಿಕ ಭಾರೀ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸಿದೆ. ಆದರೆ, ಅವುಗಳನ್ನು ಕೊಳ್ಳುವವರೇ ಇರಲಿಲ್ಲ. ಇದೇ ಸಮಯದಲ್ಲಿ ಉಕ್ರೇನ್-ರಷ್ಯಾ ಮತ್ತು ಇಸ್ರೇಲ್-ಪ್ಯಾಲೆಸ್ತೀನ್ ಯುದ್ಧಗಳು ಆರಂಭವಾದವು. ಸಹಾಯಾಸ್ತದ ನೆಪದಲ್ಲಿ ಉಕ್ರೇನ್ ಮತ್ತು ಇಸ್ರೇಲ್‌ಗೆ ಅಮೆರಿಕ ತನ್ನಲ್ಲಿ ‘ಸ್ಟಾಕ್’ ಇದ್ದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿತು. ಮಾರಾಟವನ್ನೂ ಮಾಡಿತು. ಆದಾಗ್ಯೂ, ಅಮೆರಿಕದ ಬಳಿ ಹೆಚ್ಚಿನ ಪ್ರಮಾಣದ ಶಸ್ತ್ರಾಸ್ತ್ರಗಳು ಉಳಿದಿವೆ.
ಆ ಕಾರಣಕ್ಕಾಗಿಯೇ, ಈ ಹಿಂದೆ, ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸಬಾರದು. ತಮ್ಮಿಂದ ಮಾತ್ರವೇ ಭದ್ರತಾ ಉಪಕರಣಗಳನ್ನು ಖರೀದಿಸಬೇಕೆಂದು ಭಾರತಕ್ಕೆ ಅಮೆರಿಕ ತಾಕೀತು ಮಾಡಿತ್ತು. ಆದಾಗ್ಯೂ, ಜೋ ಬೈಡನ್ ಅಧಿಕಾರಾವಧಿಯಲ್ಲಿ ಅಮೆರಿಕದ ಪ್ರಭಾವಕ್ಕೆ ಯಾವುದೇ ರಾಷ್ಟ್ರವು ಹೆಚ್ಚಾಗಿ ಒತ್ತುಕೊಡುತ್ತಿರಲಿಲ್ಲ. ಆದರೆ, ಈಗ ಟ್ರಂಪ್ ಮರಳಿ ಅಧ್ಯಕ್ಷರಾಗಿದ್ದಾರೆ. ತಮ್ಮ ಸರ್ವಾಧಿಕಾರಿ ಧೋರಣೆಯೊಂದಿಗೆ ಅಧಿಕಾರ ನಡೆಸಲು ಟ್ರಂಪ್ ಮುಂದಾಗಿದ್ದಾರೆ. ಹೀಗಾಗಿಯೇ, ಟ್ರಂಪ್ ಆಣತಿಯಂತೆ ಗಾಜಾ ವಿರುದ್ಧದ ಯುದ್ಧದಲ್ಲಿ ಕದನ ವಿರಾಮ ಒಪ್ಪಂದಕ್ಕೆ ಇಸ್ರೇಲ್ ಮುಂದಾಯಿತು.
ಈಗ, ಭಾರತದ ಪ್ರಧಾನಿ ಮೋದಿ ಅವರು ಟ್ರಂಪ್ ಅವರ ಸ್ನೇಹಿತರೇ ಆಗಿದ್ದರೂ, ಟ್ರಂಪ್ ಅವರ ತಿಕ್ಕಲು ನಡೆಯನ್ನು ನಿಭಾಯಿಸಲು ಮೋದಿಗೆ ಸಾಧ್ಯವಿಲ್ಲ. ಟ್ರಂಪ್ ಸರ್ವಾಧಿಕಾರಿ ಧೋರಣೆಯನ್ನು ನಿಭಾಯಿಸಿ, ಬದಿಗೊತ್ತಿ ವ್ಯವಹಾರ ಪಾಲುದಾರಿಕೆಯನ್ನು ಮುಂದುವರೆಸುವುದು ಸುಲಭವಾಗಿಲ್ಲ. ಹೀಗಾಗಿಯೇ, ಭಾರತದ ಉತ್ಪನ್ನಗಳಿಗೆ 100% ಆಮದು ತೆರಿಗೆ ಹೇರುವುದಾಗಿಯೂ ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಹೀಗಿರುವಾಗ, ಶಸ್ತ್ರಾಸ್ತ್ರ ಖರೀದಿಯ ವಿಚಾರದಲ್ಲಿ ಟ್ರಂಪ್ ಅವರ ತಾಕೀತನ್ನು ಮೀರಿ ಮೋದಿ ಅವರು ವ್ಯವಹರಿಸುವ ಸಾಧ್ಯತೆಗಳು ಕಡಿಮೆ ಎಂದು ವಿಶ್ಲೇಷಕರು ಹೇಳುತ್ತಾರೆ.
ಈ ವರದಿ ಓದಿದ್ದೀರಾ?: ಟ್ರಂಪ್ ಬಿಲ್ಡ್‌ಅಪ್ | ಇಸ್ರೇಲ್-ಹಮಾಸ್ ಕದನ ವಿರಾಮದಿಂದ ನಿಜಕ್ಕೂ ಶಾಂತಿ ನೆಲೆಸುತ್ತದೆಯೇ?
ಶಸ್ತ್ರಾಸ್ತ್ರ ಖರೀದಿ, ದ್ವಿಪಕ್ಷೀಯ ವ್ಯಾಪಾರ ವಿಚಾರಗಳ ಬಗ್ಗೆ ಚರ್ಚಿಸಲು ಮೋದಿ ಅವರು ಫೆಬ್ರವರಿಯಲ್ಲಿ ಅಮೆರಿಕಗೆ ಬರಲಿದ್ದಾರೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಅಧ್ಯಕ್ಷರಾದ ಬಳಿಕ ಅಮೆರಿಕಗೆ ಭೇಟಿ ನೀಡಲಿರುವ ಮೊದಲ ವಿದೇಶಿ ನಾಯಕರಲ್ಲಿ ಮೋದಿ ಕೂಡ ಒಬ್ಬರು. ಅಲ್ಲದೆ, ಕ್ವಾಡ್ ನಾಯಕರ ಶೃಂಗಸಭೆ ಭಾರತದಲ್ಲಿ ನಡೆಯಲಿದ್ದು, ಆ ಸಭೆಗಾಗಿ ಟ್ರಂಪ್ ಕೂಡ ಈ ವರ್ಷದ ಕೊನೆಯಲ್ಲಿ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಗಳಿವೆ.
ಇದೆಲ್ಲದರ ನಡುವೆ, ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರೂಬಿಯೊ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಭಾರತದಿಂದ ಅಮೆರಿಕಗೆ ಹೋಗುತ್ತಿರುವ ‘ಅನಿಯಮಿತ ವಲಸೆ’ಯ ಬಗ್ಗೆ ಇಬ್ಬರೂ ಚರ್ಚಿಸಿದ್ದಾರೆ. ರೋಬಿಯೊ ಜೊತೆ ಚರ್ಚಿಸಿರುವ ಜೈಶಂಕರ್ ಅಮೆರಿಕದ ಹೊಸ ವಲಸೆ ನೀತಿಯಂತೆ ಅಮೆರಿಕದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಭಾರತೀಯರನ್ನು ಭಾರತಕ್ಕೆ ಹಿಂಪಡೆಯಲು ಕೇಂದ್ರ ಸಿದ್ದವಾಗಿದೆ ಎಂದು ಹೇಳಿದ್ದಾರೆ.
2023-24ರ ಆರ್ಥಿಕ ವರ್ಷದಲ್ಲಿ, ದಾಖಲೆಗಳಿಲ್ಲದೆ ಭೂಗಡಿಯ ಮೂಲಕ ಅಮೆರಿಕಗೆ ನುಸುಳಲು ಪ್ರಯತ್ನಿಸಿರುವ ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. 90,415 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲದೆ, 2022ರ ವೇಳೆಗೆ ಅಮೆರಿಕಾಗೆ 7,00,000ಕ್ಕೂ ಹೆಚ್ಚು ಭಾರತೀಯರು ದಾಖಲೆರಹಿತವಾಗಿ ನುಸುಳಿದ್ದು, ಅಲ್ಲಿಯೇ ವಾಸಿಸುತ್ತಿದ್ದಾರೆ ಎಂದು ಪ್ಯೂ ರಿಸರ್ಚ್ ವರದಿ ಹೇಳಿದೆ. ಅಮೆರಿಕ ಸರ್ಕಾರದ ದತ್ತಾಂಶ ಪ್ರಕಾರ, 20,000ಕ್ಕೂ ಹೆಚ್ಚು ಭಾರತೀಯರನ್ನು ಗಡೀಪಾರು ಮಾಡುವ ಸಾಧ್ಯತೆ ಇದೆ.