“ಭಾರತದಲ್ಲಿ ಮತದಾನವನ್ನು ಉತ್ತೇಜಿಸಲು ಅಮೆರಿಕದ ಯುಎಎಸ್-ಏಡ್‌ನಿಂದ ಭಾರತಕ್ಕೆ 21 ದಶಲಕ್ಷ ಡಾಲರ್ ನೆರವು ನೀಡಲಾಗಿದೆ. ಅಧಿಕ ಸುಂಕ ಪಡೆಯುವ ಭಾರತಕ್ಕೆ ನಾವು ಏಕೆ ಹಣ ನೀಡಿಬೇಕು. ನಾವು ಭಾರತಕ್ಕೆ ನೀಡಲಾಗುವ ನೆರವನ್ನು ನಿಲ್ಲಿಸುತ್ತೇವೆ” ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವರದಿಯಾಗುತ್ತಲೇ, ಭಾರತದ ರಾಜಕೀಯದಲ್ಲಿ ಸಂಚಲನ ಸೃಷ್ಟಿಯಾಗಿದೆ. ಆಡಳಿತಾರೂಢ ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ರಾಜಕೀಯ ಕೆಸರೆರಚಾಟಗಳು ಸೃಷ್ಟಿಯಾಗಿವೆ. ಆದರೆ, ಟ್ರಂಪ್ ಹೇಳಿಕೆ ನಿಜಯೇ-ಸುಳ್ಳೇ ಎಂಬುದನ್ನು ಪರಿಶೀಲಿಸುವ ಗೋಜಿಗೆ ಯಾರೂ ಮುಂದಾಗಲಿಲ್ಲ.
ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಟ್ರಂಪ್, “ಯುಎಸ್-ಏಡ್ ನೆರವಿನೊಂದಿಗೆ ಬಹುಶಃ ಭಾರತದಲ್ಲಿ ‘ಬೇರೊಬ್ಬರ ಸರ್ಕಾರ’ವನ್ನು ಅಸ್ತಿತ್ವಕ್ಕೆ ತರುವುದು ಈ ಹಿಂದಿನ ಜೋ ಬೈಡನ್ ಆಡಳಿತದ ಇರಾದೆಯಾಗಿತ್ತು ಎಂಬುದು ನಮ್ಮ ಬಲವಾದ ಅನುಮಾನ” ಎಂಬ ವಿವಾದಾತ್ಮಕ ಹೇಳಿಕೆಯನ್ನೂ ನೀಡಿದ್ದಾರೆ. ಟ್ರಂಪ್ ಹೇಳಿಕೆಯು ನೇರವಾಗಿ ಬಿಜೆಪಿಯತ್ತ ಬೊಟ್ಟುಮಾಡುವಂತಿತ್ತು. ಆದರೆ, ಇದು ತಮ್ಮ ಪಕ್ಷದ ಮೇಲೆ ಚರ್ಚೆಯನ್ನು ಸೃಷ್ಟಿಸುವುದಕ್ಕೂ ಮುನ್ನವೇ ಎಚ್ಚೆತ್ತ ಬಿಜೆಪಿಗರು, ದೇಶದ ಜನರು ಚಿತ್ತವನ್ನು ಕಾಂಗ್ರೆಸ್ ಎಡೆಗೆ ತಿರುಗಿಸಲು ಯತ್ನಿಸಿದರು.
ಬಿಜೆಪಿ ಐಟಿ ಸೆಲ್ ಹಣದ ಸತ್ಯಾಸತ್ಯತೆಯನ್ನೂ ಪರಿಶೀಲಿಸದೆ, “ಯುಎಸ್-ಏಡ್‌ನಿಂದ ನೇರವಾಗಿ ನಾವು ಹಣ ಪಡೆದಿಲ್ಲ. ಕಾಂಗ್ರೆಸ್ ಹಣವನ್ನ ಪಡೆದು ಚುನಾವಣೆಯಲ್ಲಿ ಗೆಲ್ಲಬೇಕು ಎಂಬ ಹೊಂಚನ್ನು ಹಾಕಿತ್ತು” ಎಂದು ಆರೋಪ ಮಾಡಿದೆ.
ಈ ಚರ್ಚೆಗಳ ನಡುವೆ ಒಂದು ಸತ್ಯ ಹೊರಬಿದ್ದಿದೆ. ಅದೇನಂದರೇ, ಮತದಾನ ಪ್ರಮಾಣದ ಹೆಚ್ಚಳಕ್ಕಾಗಿ ಯುಎಸ್-ಏಡ್ 21 ದಶಲಕ್ಷ ಡಾಲರ್ ಹಣದ ನೆರವು ನೀಡಿದ್ದು, ಭಾರತಕಲ್ಲ. ಭಾರತಕ್ಕೆ ಅಂತಹ ಯಾವುದೇ ನೆರವು ನೀಡಲಾಗಿಲ್ಲ. ಬದಲಾಗಿ, ಆ ಹಣವನ್ನು ಬಾಂಗ್ಲಾದೇಶಕ್ಕೆ ನೀಡಲಾಗಿದೆ ಎಂಬ ಸತ್ಯ ಬಹಿರಂಗವಾಗಿದೆ. ಆದರೆ, ಟ್ರಂಪ್ ಅವರು ಢಾಕಾ ಮತ್ತು ದೆಹಲಿ ನಡುವೆ ಗೊಂದಲಕ್ಕೊಳಗಾಗಿ, ಎರಡೂ ಒಂದೇ ಎಂದು ಭಾವಿಸಿ ತಪ್ಪು ಮಾಹಿತಿಯೊಂದಿಗೆ ಹೇಳಿಕೆ ನೀಡಿದ್ದಾರೆ. ಇದೀಗ, ಅದರ ಫ್ಯಾಕ್ಟ್‌ಚೆಕ್ ನಡೆಸಲಾಗಿತ್ತು. ಸತ್ಯಾಂಶ ಹೊರಬಿದ್ದಿದೆ.
ಯುಎಸ್-ಏಡ್ – ಸರ್ಕಾರಿ ಸ್ವಾಮ್ಯದ ಸ್ವಾಯತ್ತ ಸಂಸ್ಥೆ. ಇದರು ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ವಿವಿಧ ದೇಶಗಳಿಗೆ ನಾನಾ ರೀತಿಯ ನೆರವು ನೀಡುವ ಕೆಲಸವನ್ನು ನಿರ್ವಹಿಸುತ್ತದೆ. ಇತ್ತೀಚೆಗೆ, ಈ ಸಂಸ್ಥೆಗೆ ಉದ್ಯಮಿ ಎಲಾನ್ ಮಸ್ಕ್ ಅವರನ್ನು ಉಸ್ತುವಾರಿಯಾಗಿ ಟ್ರಂಪ್ ನೇಮಿಸಿದ್ದಾರೆ. ಈ ಸಂಸ್ಥೆಯು ಮತದಾನದ ಉತ್ತೇಜನಕ್ಕಾಗಿ ಭಾರತಕ್ಕೆ ನೀಡಲಾಗುವ 21 ಮಿಲಿಯನ್ ಡಾಲರ್ ಹಣದ ನೆರವನ್ನು ರದ್ದುಗೊಳಿಸುವ ತೀರ್ಮಾನ ಕೈಗೊಂಡಿದೆ ಎಂದು ಟ್ರಂಪ್ ಅವರು ಫೆಬ್ರವರಿ 16ರಂದು ಘೋಷಿಸಿದರು.
ಆದರೆ, ಸತ್ಯಾಂಶ ಏನೆಂದರೆ, 2022ರಲ್ಲಿ ಯುಎಸ್-ಏಡ್ ಬಿಡುಗಡೆ ಮಾಡಿದ 21 ಮಿಲಿಯನ್ ಡಾಲರ್‌ಅನ್ನು ಭಾರತಕಲ್ಲ, ಬಾಂಗ್ಲಾದೇಶಕ್ಕೆ ಎಂಬುದು ಸ್ಪಷ್ಟವಾಗಿದೆ. ಆದಾಗ್ಯೂ, ಆ ಮೊತ್ತದಲ್ಲಿ, ಈವರೆಗೆ 13.4 ಮಿಲಿಯನ್ ಡಾಲರ್‌ಅನ್ನು ಮಾತ್ರವೇ ವಿತರಿಸಲಾಗಿದೆ. ಈ ಹಣವನ್ನು 2024ರ ಜನವರಿಯಲ್ಲಿ, ಅಂದರೆ, ಭಾರತದ ಲೋಕಸಭಾ ಚುನಾವಣೆಗೂ ಮುನ್ನ, ಬಾಂಗ್ಲಾ ದೇಶದಲ್ಲಿ ನಿರುದ್ಯೋಗ ಪ್ರಮಾಣದಲ್ಲಿ ಹೆಚ್ಚುತಿದ್ದು, ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಕ್ಕೆ ನೀಡಲಾಗುವ ಮೀಸಲಾತಿ ವಿರುದ್ಧದ ಹೋರಾಟದ ಸಮಯದಲ್ಲಿ ವಿತರಿಸಲಾಗಿದೆ. ಆ ಹಣವನ್ನು ಪ್ರಜಾಪ್ರಭುತ್ವ, ಹಕ್ಕುಗಳು ಮತ್ತು ಆಡಳಿತ ಕಾರ್ಯಕ್ರಮಗಳ ನಿರ್ವಹಣೆಯಲ್ಲಿ ಪರಿಣತಿ ಹೊಂದಿರುವ ವಾಷಿಂಗ್ಟನ್ ಮೂಲದ ‘ಕನ್ಸೋರ್ಟಿಯಂ ಫಾರ್ ಎಲೆಕ್ಷನ್ಸ್ ಅಂಡ್ ಪೊಲಿಟಿಕಲ್ ಪ್ರೊಸೆಸ್ ಸ್ಟ್ರೆಂಥನಿಂಗ್’ (CEPPS) ಮೂಲಕ ರವಾನೆ ಮಾಡಲಾಗಿದೆ.
ಯುಎಸ್ಏಡ್‌ನಿಂದ ಒಟ್ಟು 486 ದಶಲಕ್ಷ ಡಾಲರ್‌ಗಳನ್ನು ಸ್ವೀಕರಿಸಲು CEPPS ಉದ್ದೇಸಿಸಿತ್ತು. DOGE ಪ್ರಕಾರ, ಈ ಹಣವನ್ನು ಮೊಲ್ಡೊವಾದಲ್ಲಿ ‘ರಾಜಕೀಯದಲ್ಲಿ ಒಳಗೊಳ್ಳುಕೆ ಮತ್ತು ಭಾಗವಹಿಸುವ ಪ್ರಕ್ರಿಯೆ’ಗಾಗಿ $22 ಮಿಲಿಯನ್; ಮತ್ತು “ಬಾಂಗ್ಲಾದಲ್ಲಿ ಮತದಾರರ ಮತದಾನವನ್ನು ಉತ್ತೇಜಿಸಲು $21 ಮಿಲಿಯನ್ ಬಳಸಲು ಯೋಜಿಸಲಾಗಿತ್ತು.
ಈ ವರದಿ ಓದಿದ್ದೀರಾ?: ಅಮೆರಿಕಗೆ ತಿರುಗುಬಾಣವಾದ ಯುಎಸ್‌ಏಡ್ ಎಂಬ ಗುಪ್ತ ಕಾರ್ಯಸೂಚಿ!
ಮೊಲ್ಡೊವಾದಲ್ಲಿ “ರಾಜಕೀಯದಲ್ಲಿ ಒಳಗೊಳ್ಳುಕೆ ಮತ್ತು ಭಾಗವಹಿಸುವಿಕೆ ಪ್ರಕ್ರಿಯೆಯನ್ನು ಉತ್ತೇಜಿಸಲು 2016ರ ಸೆಪ್ಟೆಂಬರ್‌ನಲ್ಲಿ CEPPSಗೆ ಮೊದಲ ಕಂತು ಬಿಡುಗಡೆ ಮಾಡಲಾಗಿತ್ತು. ಫೆಡರಲ್ ಅವಾರ್ಡ್ ಐಡೆಂಟಿಫಿಕೇಷನ್ ನಂಬರ್ AID117LA1600001 (ಅನುದಾನಕ್ಕೆ ನಿರ್ದಿಷ್ಟವಾದ ID) ಜೊತೆಗೆ, ಹಣ ಬಿಡುಗಡೆ 13.2 ದಶಲಕ್ಷ ಡಾಲರ್ ವಿತರಿಸಲಾಗಿದೆ. ಉಳಿದ ಹಣ ವಿತರಣೆಯು 2026ರ ಜುಲೈ ವರೆಗೆ ಮುಂದುವರೆಯಬೇಕಿತ್ತು. ಅಂತೆಯೇ, 21 ಮಿಲಿಯನ್ ಡಾಲರ್ ನೆರವನ್ನು ಬಾಂಗ್ಲಾದೇಶದ ರಾಜಕೀಯ ಯೋಜನೆಗಾಗಿ ಬಳಸಲು ಉದ್ದೇಶಿಸಲಾಗಿತ್ತು.
2024ರ ಡಿಸೆಂಬರ್‌ನಲ್ಲಿ ಅಮೆರಿಕಗೆ ಭೇಟಿ ನೀಡಿದ್ದ ಢಾಕಾದಲ್ಲಿರುವ ಯುಎಸ್ ಏಡ್ ರಾಜಕೀಯ ಪ್ರಕ್ರಿಯೆಗಳ ಸಲಹೆಗಾರರು ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದರು; “ಬಾಂಗ್ಲಾದೇಶಕ್ಕೆ ಯುಎಸ್ ಏಡ್ 21 ಮಿಲಿಯನ್ ಡಾಲರ್ ಹಣವನ್ನು ನಾಗರಿಕ ಯೋಜನೆಗಾಗಿ ನೆರವು ನೀಡಿದೆ. ಇದನ್ನ ನಾವು ನಿರ್ವಹಿಸುತ್ತೇವೆ” ಎಂದು ಹೇಳಿದ್ದರು.
2025ರ ಜುಲೈವರೆಗೆ ನೆರವು ನೀಡಲು ಉದ್ದೇಶಿಸಲಾಗಿದ್ದ ಈ ಅನುದಾನದಲ್ಲಿ ಈವರೆಗೆ 13.4 ದಶಲಕ್ಷ ಡಾಲರ್ ಖರ್ಚು ಮಾಡಲಾಗಿದೆ ಎಂದು ದಾಖಲೆಗಳು ತೋರಿಸುತ್ತವೆ.
ಇನ್ನು, ಅಮೆರಿಕ ಫೆಡರಲ್ ಖರ್ಚಿನ ಅಧಿಕೃತ ದತ್ತಾಂಶಗಳ ಪ್ರಕಾರ, 2008ರಿಂದ ಭಾರತಕ್ಕೆ USAID ನಿಧಿಯಿಂದ ನೀಡಲ್ಪಟ್ಟ ಯಾವುದೇ CEPPS ಯೋಜನೆ ಘೋಷಿಸಲಾಗಿಲ್ಲ.
ಭಾರತಕ್ಕೆ ಒಂದು ರೂಪಾಯಿ ನೆರವು ಒದಗಿಸಿದೆಯೇ ಟ್ರಂಪ್ ಭಾರತದ ಮೇಲೆ ವಾಗ್ದಾಳಿ ನಡೆಸಿದ್ದಾರೆ. ಗೊಂದಲದಿಂದ ಟ್ರಂಪ್ ನೀಡಿದ ಹೇಳಿಕೆಯನ್ನು ಪರಿಶೀಲಿಸಿ, ಟ್ರಂಪ್ ಹೇಳಿಕೆ ಸುಳ್ಳು ಎಂದು ಘೋಷಿಸಬೇಕಾದ ಮೋದಿ ಸರ್ಕಾರ ತಬ್ಬಿಬ್ಬಾಗಿದೆ. ಸತ್ಯ ಪರಿಶೀಲಿಸದೆ, ಏಕಾಏಕಿ ಕಾಂಗ್ರೆಸ್ ಮೇಲೆ ಆರೋಪ ಮಾಡುತ್ತಿದೆ. ಮೋದಿ ಸರ್ಕಾರ ಮತ್ತು ಬಿಜೆಪಿಯ ನಡೆ ‘ಕುಂಬಳಕಾಯಿ ಕಳ್ಳ ಎಂದರೆ, ಹೆಗಲು ಮುಟ್ಟಿ ನೋಡಿಕೊಂಡ’ ಎಂಬಂತಿದೆ. ಹಾಸ್ಯಾಸ್ಪದವಾಗಿದೆ.