ಕರ್ನಾಟಕದಲ್ಲಿ ವಕ್ಫ್‌ ವಿವಾದ: ಅಂತಿಮವಾಗಿ ಗೆದ್ದಿದ್ದು ಯಾರು?

Date:

Advertisements
ಸರ್ಕಾರ ಹಾಗೂ ಕಾಂಗ್ರೆಸ್ ವಾಸ್ತವಾಂಶ ದಾಖಲೆಗಳೊಂದಿಗೆ ವಕ್ಫ್‌ ವಿಚಾರದಲ್ಲಿ ಮೇಲ್ನೋಟಕ್ಕೆ ಗೆಲುವು ಸಾಧಿಸಿದಂತಾಗಿದೆ. ಆದರೆ ಸಾರ್ವಜನಿಕ ವಲಯದಲ್ಲಿ ವಿವಾದ ಮತ್ತಷ್ಟು ಆಳಕ್ಕೆ ತಲುಪಿದೆ. ಜನಸಾಮಾನ್ಯರು ಸರ್ಕಾರ ನೀಡಿರುವ ಉತ್ತರವನ್ನು ಆ ಕ್ಷಣದಲ್ಲಿ ನಂಬಿದರೂ ಬಿಜೆಪಿ ಬಿತ್ತಿರುವ ಸುಳ್ಳು – ಕೋಮು ದ್ವೇಷದ ಅಮಲು ಅವರ ಮನಸ್ಸಿನಲ್ಲಿ ಬೇರೂರಿದೆ. ಧರ್ಮಧರ್ಮಗಳ ನಡುವೆ ದ್ವೇಷದ ಜ್ವಾಲೆ ಪ್ರಕೋಪಕ್ಕೆ ಮುಟ್ಟಿದೆ.

ಬಿಜಾಪುರದ ಹೊನವಾಡ ಎಂಬ ಸಣ್ಣ ಗ್ರಾಮದಲ್ಲಿ ರೈತರಿಗೆ ವಕ್ಫ್‌ ಬೋರ್ಡ್‌ನಿಂದ ನೋಟಿಸ್‌ ನೀಡಲಾಯಿತು ಎಂಬ ವಿವಾದ ರಾಜ್ಯಾದ್ಯಂತ ಭುಗಿಲೆದ್ದಿತ್ತು. ಅಧಿಕಾರಿಗಳು ಹಾಗೂ ಹಳ್ಳಿಯ ಜನರ ನಡುವೆ ಕೆಲವು ನಿಮಿಷಗಳಲ್ಲಿ ಇತ್ಯರ್ಥವಾಗಬೇಕಾದ ವಿಷಯವನ್ನು ಬಿಜೆಪಿ ಹಾಗೂ ಸಂಘಪರಿವಾರದವರು ರಾಷ್ಟ್ರಮಟ್ಟಕ್ಕೆ ತೆಗೆದುಕೊಂಡು ಹೋದರು. ರೈತರಲ್ಲಿ, ಸಾಮಾನ್ಯ ಜನರಲ್ಲಿ ಭಯ ಹುಟ್ಟಿಸಿದರು. ವಾಡಿಕೆಯಂತೆ ಜಮೀನುಗಳು, ಅದಕ್ಕೆ ಸಂಬಂಧಿಸಿದ ಮತ್ತಿತರ ವ್ಯಾಜ್ಯಗಳಿಗೆ ಕಂದಾಯ ಇಲಾಖೆ ಪ್ರತಿ ವರ್ಷವೂ ನೋಟಿಸ್‌ ನೀಡುತ್ತಿತ್ತು. ನೋಟಿಸ್‌ ನೀಡುವುದು ಎಲ್ಲ ಸರ್ಕಾರಗಳಲ್ಲಿ ಸಾಮಾನ್ಯವಾಗಿತ್ತು. ಆದರೆ ವಿಪಕ್ಷಗಳು ಸಣ್ಣ ವಿಷಯವನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡವು.

ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಕ್ಫ್‌ ವಿವಾದಕ್ಕೆ ಸಂಬಂಧಿಸಿದಂತೆ ದೊಡ್ಡ ಮಟ್ಟದಲ್ಲಿ ಚರ್ಚೆ, ವಾಗ್ವಾದ, ಪ್ರತಿಭಟನೆಗಳನ್ನು ಸದನದಲ್ಲಿ ಹಾಗೂ ಸಾರ್ವಜನಿಕ ಮಟ್ಟದಲ್ಲಿ ನಡೆಸುವುದಾಗಿ ಬಿಜೆಪಿ ಹೇಳಿಕೊಂಡು ಬರುತ್ತಿತ್ತು. ಆದರೆ ಇದ್ಯಾವುದು ಫಲಿಸಲಿಲ್ಲ. ಇನ್ನು ಸ್ಪಷ್ಟವಾಗಿ ಹೇಳಬೇಕೆಂದರೆ ವಕ್ಫ್‌ ವಿಚಾರದಲ್ಲಿ ವಿವಾದ ಎನ್ನುವಂತಹ ವಿಷಯವೇ ಇರಲಿಲ್ಲ. ಯಾವೊಬ್ಬರು ರೈತರಾಗಲಿ, ಸಾಮಾನ್ಯ ಜನರಾಗಲಿ, ಮಠ ಮಂದಿರ ಮುಂತಾದವುಗಳಾಗಲಿ ವಕ್ಫ್‌ ಬೋರ್ಡ್‌ನಿಂದ ಜಮೀನನ್ನು ಕಳೆದುಕೊಂಡಿರಲಿಲ್ಲ. ಭಾರತೀಯ ಜನತಾ ಪಕ್ಷದ ನಾಯಕರು ಜನರಲ್ಲಿ ದ್ವೇಷ ಬಿತ್ತಲು ವಿಷಯವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮಾಡಿದ ಕುತಂತ್ರ ಇದಾಗಿತ್ತು. ಬಸನಗೌಡ ಪಾಟೀಲ್‌ ಯತ್ನಾಳ್‌, ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಸಿ ಟಿ ರವಿ ಮುಂತಾದ ಬೆಂಕಿ ಉಗುಳುವ ನಾಯಕರು ವಕ್ಫ್‌ ವಿಷಯದಲ್ಲಿ ನಿಜವಾಗಿಯೂ ಏನಾಗುತ್ತಿದೆ ಎಂಬ ಸತ್ಯಾಂಶವನ್ನು ತಿಳಿಸದೆ ಜನರಲ್ಲಿ ಭಯ ಹುಟ್ಟಿಸಿದರು. ಪ್ರಾಮಾಣಿಕವಾಗಿ ಪ್ರಜೆಗಳ ಸೇವೆ ಮಾಡುತ್ತೇವೆ ಎಂದು ಪ್ರಮಾಣವಚನ ಸ್ವೀಕರಿಸಿದವರು ಸುಳ್ಳೆ ನಮ್ಮ ಅಸ್ತ್ರ, ಭಯ ಮೂಡಿಸುವುದೆ ನಮ್ಮ ಪಕ್ಷದ ಸಿದ್ಧಾಂತ ಎಂದುಕೊಂಡು ಅಸತ್ಯಗಳ ಕಂತೆಗಳನ್ನೆ ರಾಜ್ಯದ ತುಂಬೆಲ್ಲ ಹರಡಿದರು.

ವಕ್ಫ್‌ ಮಂಡಳಿಗೆ ಸೇರಿದ ಆಸ್ತಿಗಳ ರಕ್ಷಣೆ ಹಾಗೂ ಗೊಂದಲ ನಿವಾರಣೆಗೆ ಸರ್ಕಾರ ವಕ್ಫ್‌ ಅದಾಲತ್‌ ನಡೆಸಿತ್ತು. ಅದನ್ನೇ ಬಿಜೆಪಿಯವರು ದರ್ಬಳಕೆ ಮಾಡಿಕೊಂಡರು. ಕೇಂದ್ರ ಸರ್ಕಾರ ರೂಪಿಸಿರುವ ಕಾಯ್ದೆಯಂತೆ ವಕ್ಫ್‌ ಆಸ್ತಿಗಳ ರಕ್ಷಣೆಯ ಕೆಲಸ ನಡೆದಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಎಲ್ಲ ಪಕ್ಷಗಳ ನೇತೃತ್ವದ ಸರ್ಕಾರಗಳ ಅವಧಿಯಲ್ಲೂ ವಕ್ಫ್‌ ಆಸ್ತಿಗಳ ಒತ್ತುವರಿದಾರರಿಗೆ ನೋಟಿಸ್ ನೀಡಲಾಗಿದೆ. ಬಿಜೆಪಿ ನೇತೃತ್ವದ ಸರ್ಕಾರ ಇದ್ದಾಗಲೇ ಹೆಚ್ಚು ನೋಟಿಸ್‌ಗಳನ್ನು ನೀಡಲಾಗಿತ್ತು. ಬಿಜಾಪುರ, ಬೆಳಗಾವಿ, ಬೀದರ್‌, ಕಲಬುರಗಿ, ಉತ್ತರ ಕನ್ನಡ, ಮಂಡ್ಯ, ಕೊಡಗು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು ಸೇರಿದಂತೆ ರಾಜ್ಯದ ಯಾವ ಜಿಲ್ಲೆಗಳಲ್ಲೂ ವಕ್ಫ್‌ ಬೋರ್ಡ್ ರೈತರ ಭೂಮಿಗಳಿಗಾಗಲಿ, ಸರ್ಕಾರಿ ಜಾಗಗಳಿಗಾಗಲಿ ನೋಟಿಸ್‌ ನೀಡಿರಲಿಲ್ಲ. ಭಾರತೀಯ ಜನತಾಪಕ್ಷದ ನಾಯಕರು ಹರಡಿದ್ದ ಸುಳ್ಳಿನ ಮೂಟೆಗಳನ್ನು ಮುಖ್ಯಮಂತ್ರಿ, ವಕ್ಫ್‌ ಸಚಿವ ಜಮೀರ್‌ ಅಹಮದ್‌, ಕೃಷಿ ಸಚಿವ ಕೃಷ್ಣ ಬೈರೇಗೌಡ ಸೇರಿದಂತೆ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಸಾಕ್ಷಿ ಸಮೇತ ಸಾರ್ವಜನಿಕರಿಗೆ ಮನದಟ್ಟು ಮಾಡಿದರು.

Advertisements

ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರೆ ”ರೈತರಿಗೆ ಮಂಜೂರಾದ ಜಮೀನು, ಮಠ, ಮಂದಿರಗಳ ಆಸ್ತಿ ಮತ್ತು ರುದ್ರಭೂಮಿಗಳ ಜಮೀನಿನ ಮೇಲೆ ವಕ್ಫ್‌ ಮಂಡಳಿ ಹಕ್ಕು ಸಾಧಿಸುವುದಿಲ್ಲ. ಅದಕ್ಕೆ ಹೊರತಾಗಿಯೂ ಗೊಂದಲಗಳಿದ್ದರೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಲಾಗುವುದು” ಎಂದು ವಿಧಾನಸಭೆಯಲ್ಲಿಯೇ ತಿಳಿಸಿದರು.

ಇನಾಂ ರದ್ದತಿ ಕಾಯ್ದೆ ಮತ್ತು ಕರ್ನಾಟಕ ಭೂ ಸುಧಾರಣಾ ಕಾಯ್ದೆಯಡಿ ರೈತರಿಗೆ ಮಂಜೂರಾಗಿರುವ ಯಾವುದೇ ಜಮೀನಿನ ಮೇಲೆ ವಕ್ಫ್‌ ಮಂಡಳಿ ಹಕ್ಕು ಸಾಧಿಸಲು ಅವಕಾಶ ನೀಡುವುದಿಲ್ಲ. ದೇವಸ್ಥಾನ, ರುದ್ರಭೂಮಿ ಮತ್ತು ಶಾಲೆಗಳು ವಕ್ಫ್‌ ಆಸ್ತಿಯಲ್ಲಿದ್ದರೆ ಅಂತಹ ಆಸ್ತಿಗಳ ಮೇಲಿನ ಹಕ್ಕನ್ನೂ ತ್ಯಜಿಸಲು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ವಕ್ಫ್‌ ಆಸ್ತಿಯಲ್ಲಿರುವ ದೇವಸ್ಥಾನ, ರುದ್ರಭೂಮಿ, ಶಾಲೆಗಳಿಗೂ ರಕ್ಷಣೆ ದೊರಕಲಿದೆ ಎಂದು ಕೂಡ ಸರ್ಕಾರ ಸ್ಪಷ್ಟಪಡಿಸಿದೆ.

ಈ ಸುದ್ದಿ ಓದಿದ್ದೀರಾ? ಸಮಗ್ರ ವರದಿ | ವಕ್ಫ್ ಬಗ್ಗೆ ಬಿಜೆಪಿ ಬಿತ್ತಿದ ಭಯಾನಕ ಸುಳ್ಳುಗಳು!

ವಕ್ಫ್‌ ಬಳಿಯಿರುವುದು 0.006ರಷ್ಟು ಜಮೀನು

ರಾಜ್ಯದಲ್ಲಿ ಒಟ್ಟು 3 ಕೋಟಿ ಎಕರೆ ಕೃಷಿ ಜಮೀನಿದೆ. ವಕ್ಫ್‌ ಮಂಡಳಿ ಬಳಿ ಇರುವುದು ಕೇವಲ 20 ಸಾವಿರ ಎಕರೆ ಮಾತ್ರ. ಶೇಕಡವಾರಿನಲ್ಲಿ 0.006ರಷ್ಟು ಜಮೀನು ಮಾತ್ರ ವಕ್ಫ್‌ ಬಳಿಯಿದೆ. ಈ ಮೊದಲು ವಕ್ಫ್‌ ಮಂಡಳಿಯಲ್ಲಿ 1.12 ಲಕ್ಷ ಎಕರೆ ಜಮೀನಿತ್ತು. ಅದರಲ್ಲಿ 92,000 ಎಕರೆ ಮಂಡಳಿಯ ಸ್ವಾಧೀನಕ್ಕೆ ಬಂದಿಲ್ಲ. ಬಿಜೆಪಿ ನೇತೃತ್ವದ ಸರ್ಕಾರಗಳು ಇದ್ದಾಗ ವಕ್ಫ್‌ ಮಂಡಳಿ ಹೆಸರಿನಲ್ಲಿ 4,500 ಆಸ್ತಿಗಳ ಖಾತೆ ಮಾಡಲಾಗಿದೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರದ ಅವಧಿಯಲ್ಲಿ 600 ಆಸ್ತಿಗಳ ಖಾತೆ ಮಾತ್ರ ಮಾಡಲಾಗಿದೆ. ಇವೆಲ್ಲ ಮಾಹಿತಿಗಳನ್ನು ಸರ್ಕಾರವೇ ಜನರಿಗೆ ನೀಡಬೇಕಾಯಿತೆ ವಿನಾ ಪ್ರತಿಪಕ್ಷಗಳ ನಾಯಕರು ಮಾತ್ರ ‘ಮುಸ್ಲಿಮರು ಹಿಂದೂಗಳ ಆಸ್ತಿ ಕಬಳಿಸುತ್ತಿದ್ದಾರೆ’ ಎಂಬ ಭೀತಿ ಸೃಷ್ಟಿಸುವ ಕಿಚ್ಚನ್ನು ಹೆಚ್ಚಿಸುವ ಕೆಲಸವನ್ನು ಮುಂದುವರಿಸಿದವು.

ದ್ವೇಷದ ಕಿಡಿ ಹೊತ್ತಿಸಿರುವ ವಿಪಕ್ಷಗಳು

ವಕ್ಫ್‌ ವಿಚಾರದಲ್ಲಿ ಆಸ್ತಿ ಕಬಳಿಕೆ, ಭಯ ಬೀಳಿಸುವ, ಸಂಕಷ್ಟಕ್ಕೆ ದೂಡುವ ಯಾವುದೇ ಅಂಶಗಳು ಇಲ್ಲದಿರುವುದು ಸರ್ಕಾರ ನೀಡಿರುವ ದಾಖಲೆಗಳಿಂದ ಸಾಬೀತಾಗಿದೆ. ಅವಕ್ಕೆ ಒಂದಿಷ್ಟು ಉದಾಹರಣೆಗಳನ್ನು ಹೇಳಬೇಕೆಂದರೆ, ಉತ್ತರ ಕನ್ನಡದ ಶಿರಸಿಯ ಇಳಸೂರಿನಲ್ಲಿ 50 ಎಕರೆ ವಕ್ಫ್‌ ಆಸ್ತಿ ಇದೆ ಎಂಬುದು ಸುಳ್ಳಾಗಿತ್ತು. ಅಲ್ಲಿ ಇದ್ದಿದ್ದು 7.22 ಗುಂಟೆ ಮಾತ್ರ. ಚಿಕ್ಕಬಳ್ಳಾಪುರದ ಮುದ್ದೇನಹಳ್ಳಿಯಲ್ಲಿ ಸರ್.ಎಂ. ವಿಶ್ವೇಶ್ವರಯ್ಯ ಓದಿದ ಸರ್ಕಾರಿ ಶಾಲೆಯ ಜಮೀನು ದರ್ಗಾ ಹೆಸರಿನಲ್ಲಿತ್ತು. ಆದರೆ ದರ್ಗಾಕ್ಕೆ 1.04 ಗುಂಟೆ ನೀಡಿದರೆ, 17.12 ಗುಂಟೆ ಶಾಲೆಗೆ ಮಂಜೂರಾಗಿತ್ತು. ಮೈಸೂರಿನ ಕೃಷ್ಣರಾಜ ಕ್ಷೇತ್ರದ ಮುನೇಶ್ವರನಗರದಲ್ಲಿ ವಕ್ಫ್‌ ಮಂಡಳಿಗೆ 13 ಎಕರೆ 04 ಗುಂಟೆ ಜಮೀನಿದೆ. ಇದರಲ್ಲಿ 1 ಎಕರೆ 32 ಗುಂಟೆ ಜಮೀನಿನಲ್ಲಿ ಅನಧಿಕೃತವಾಗಿ 100 ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಈ ಬಗ್ಗೆ ವಕ್ಫ್‌ ಮಂಡಳಿ ಇಲ್ಲಿಯವರೆಗೂ ಯಾವುದೇ ನೋಟಿಸ್‌ ಹಾಗೂ ಮುಂತಾದ ತಕರಾರುಗಳನ್ನು ತೆಗೆದಿಲ್ಲ. ಸ್ಥಳೀಯ ಹಿಂದೂ ಧರ್ಮದ ವ್ಯಕ್ತಿಯೊಬ್ಬರೆ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೋರ್ಟ್‌ ನಿರ್ದೇಶನದಂತೆ ನೋಟಿಸ್ ಕೂಡ ನೀಡಲಾಗಿದೆ. ಮಂಡ್ಯದ ಶ್ರೀರಂಗಪಟ್ಟಣದಲ್ಲಿ ಕಣ್ತಪ್ಪಿನಿಂದ ಚಿಕ್ಕಮ್ಮನಗುಡಿ ಜಮೀನಿನಲ್ಲಿ ವಕ್ಫ್‌ ಹೆಸರು ನಮೂದಾಗಿದ್ದು, ಅದನ್ನೀಗ ಸರಿಪಡಿಸಲಾಗಿದೆ. ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಗ್ರಾಮದ ಸರ್ವೆ ನಂಬರ್‌ 220ರಲ್ಲಿ ವಕ್ಫ್‌ ಮಂಡಳಿಗೆ 2 ಎಕರೆ ಜಮೀನಿದೆ. ಅದಕ್ಕೂ ಸೋಮೇಶ್ವರ ದೇವಸ್ಥಾನಕ್ಕೂ ಸಂಬಂಧವಿಲ್ಲ. ಇಷ್ಟಲ್ಲದೆ ರಾಜ್ಯದ ಇನ್ನು ಹಲವಾರು ಪ್ರಕರಣಗಳಿಗೂ ವಕ್ಫ್‌ ಮಂಡಳಿಗೂ ಸಂಬಂಧವೇ ಇರಲಿಲ್ಲ.

ಇದೇ ವಿಷಯವನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ನಡೆದ ಶಿಗ್ಗಾವಿ, ಚನ್ನಪಟ್ಟಣ, ಸಂಡೂರಿನಲ್ಲಿ ನಡೆದ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಭಾರಿ ಮುಖಭಂಗವನ್ನು ಅನುಭವಿಸಿತು. ಚನ್ನಪಟ್ಟಣದಲ್ಲಿ ಮಾಜಿ ಪ್ರಧಾನಿ ಮೊಮ್ಮಗ, ಹಾಲಿ ಕೇಂದ್ರ ಸಚಿವರ ಪುತ್ರ ಸ್ಪರ್ಧಿಸಿದ್ದರು. ಶಿಗ್ಗಾವಿಯಲ್ಲಿ ಎರಡು ತಲೆಮಾರಿನಿಂದ ಮುಖ್ಯಮಂತ್ರಿಯಾಗಿದ್ದ ಪುತ್ರರು ಕಣಕ್ಕಿಳಿದಿದ್ದರು. ಇಬ್ಬರು ಸೋಲು ಅನುಭವಿಸಿದರು. ಜನಮತದಲ್ಲಿ ನಾಗರಿಕರು ಸತ್ಯಕ್ಕೆ ಮಣೆಹಾಕಿ ಸುಳ್ಳನ್ನು ತಿರಸ್ಕರಿಸಿದರು. ವಕ್ಫ್‌ ವಿಷಯದಲ್ಲಿ ಸ್ವಪಕ್ಷದ ಕೆಲವು ಶಾಸಕರೆ ತಮ್ಮ ನಾಯಕರುಗಳ ವಿರುದ್ಧ ತಿರುಗಿಬಿದ್ದರು. ಈ ಮುಜುಗರವನ್ನು ಕೂಡ ಬಿಜೆಪಿ ಅನುಭವಿಸಬೇಕಾಯಿತು.

ಸರ್ಕಾರ ಹಾಗೂ ಕಾಂಗ್ರೆಸ್ ವಾಸ್ತವಾಂಶ ದಾಖಲೆಗಳೊಂದಿಗೆ ವಕ್ಫ್‌ ವಿಚಾರದಲ್ಲಿ ಮೇಲ್ನೋಟಕ್ಕೆ ಗೆಲುವು ಸಾಧಿಸಿದಂತಾಗಿದೆ. ಆದರೆ ಸಾರ್ವಜನಿಕ ವಲಯದಲ್ಲಿ ವಿವಾದ ಮತ್ತಷ್ಟು ಆಳಕ್ಕೆ ತಲುಪಿದೆ. ಜನಸಾಮಾನ್ಯರು ಸರ್ಕಾರ ನೀಡಿರುವ ಉತ್ತರವನ್ನು ಆ ಕ್ಷಣದಲ್ಲಿ ನಂಬಿದರೂ ಬಿಜೆಪಿ ಬಿತ್ತಿರುವ ಸುಳ್ಳು – ಕೋಮು ದ್ವೇಷದ ಅಮಲು ಅವರ ಮನಸ್ಸಿನಲ್ಲಿ ಬೇರೂರಿದೆ. ಧರ್ಮಧರ್ಮಗಳ ನಡುವೆ ದ್ವೇಷದ ಜ್ವಾಲೆ ಪ್ರಕೋಪಕ್ಕೆ ಮುಟ್ಟಿದೆ. ಹಿಂದೂ ಸಮುದಾಯದ ಆಸ್ತಿಪಾಸ್ತಿಗಳನ್ನು ಮುಸ್ಲಿಂ ಸಮುದಾಯ ಕಿತ್ತುಕೊಳ್ಳಲು ಶುರು ಮಾಡುತ್ತದೆ. ಕಾಂಗ್ರೆಸ್ ಸರ್ಕಾರ ಕೂಡ ಮುಸ್ಲಿಮರ ಪರವಾಗಿಯೇ ತೀರ್ಮಾನ ತೆಗೆದುಕೊಳ್ಳುತ್ತಿದೆ ಎಂಬೆಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ನೋಡಿದರೆ ಬಿಜೆಪಿ ತನ್ನ ರಾಜಕೀಯ ಲಾಭದ ಅಜೆಂಡವನ್ನು ಜನರಿಗೆ ತಲುಪಿಸುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದೆ.

ಮುಂದಿನ ದಿನಗಳಲ್ಲಿ ಇದನ್ನೇ ಆಗಾಗ ಬಂಡವಾಳವನ್ನಾಗಿ ಮಾಡಿಕೊಳ್ಳುವುದರಲ್ಲಿ ಯಾವುದೇ ಸಂದೇಹವಿಲ್ಲ. ಸುಳ್ಳು – ದ್ವೇಷಗಳನ್ನು ಸಾರ್ವಜನಿಕರ ಮನಸ್ಸಿನಲ್ಲಿ ಬೇರೂರಿಸುವ ತನ್ನದೆ ಆದ ಪ್ರಬಲ ಸಾಮಾಜಿಕ ಮಾಧ್ಯಮ ಪಡೆ ಕೇಸರಿ ನಾಯಕರ ಬಳಿಯಿದೆ. ಇಂತಹ ವಿವಾದಗಳನ್ನು ಅವರು ಅಸ್ತ್ರ ಮಾಡಿಕೊಳ್ಳುತ್ತಾರೆ. ಕೋಮು ವಿಚಾರಗಳನ್ನು ತಡೆಯಲು ಸರ್ಕಾರ ಕೂಡ ಸದಾ ಜಾಗೃತವಾಗಿರಬೇಕು. ಒಂದು ಕ್ಷಣ ಕಣ್ಮುಚ್ಚಿದರೂ ರೋಷಾಗ್ನಿ ಪ್ರಜ್ವಲಿಸತೊಡಗಿ ಸಾಮಾನ್ಯ ಜನರು ಸಂಕಷ್ಟಕ್ಕೆ ಒಳಗಾಗುತ್ತಾರೆ. ಸೂಕ್ಷ್ಮ ವಿಷಯಗಳನ್ನು ಸೌಹಾರ್ದತೆಯಿಂದ ನಿಭಾಯಿಸಿ ಶಾಂತಿ ಸಂದೇಶ ಸಾರಬೇಕು. ಇದು ಆಡಳಿತ ನಡೆಸುವವರ ಹೊಣೆಯಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X