ನೆಲೆ ಮತ್ತು ನೆಲದ ಒಡೆತನವಿಲ್ಲದ ದಮನಿತ ಅಲೆಮಾರಿ, ಆದಿವಾಸಿಗಳ ಬದುಕಿಗೆ ಗ್ಯಾರಂಟಿ ಸಿಗುವುದು ಯಾವಾಗ..?

Date:

Advertisements
70ರ ದಶಕದಲ್ಲಿ ದೇವರಾಜ ಅರಸು ಅವರು ವಿಶೇಷ ಆಸಕ್ತಿವಹಿಸಿ ದಮನಿತರಿಗೆ ಮೀಸಲಾತಿಯನ್ನು ಕಲ್ಪಿಸಿದರು. ಆದರೆ, ಅಂದಿನಿಂದ ಇಂದಿನವರೆಗೆ ಮೀಸಲಾತಿಯಿದ್ದರು ಒಂದಿಂಕ್ರದಷ್ಟು ಚಲಿಸಲಾಗದೇ ಈ ಸಮುದಾಯಗಳ ಜನರು ನಿಂತಲ್ಲೇ ತೆವಳುತ್ತಿದ್ದಾರೆ. ಕಾರಣ ಇಂದಿನ ರಾಜಕಾರಣಕ್ಕೆ ಸಾಮಾಜಿಕ ನ್ಯಾಯ ಒಗ್ಗದ ಮಗ್ಗಲುಮುಳ್ಳು.

ಚುನಾವಣೋತ್ತರ ಭರವಸೆಯಂತೆ ರಾಜ್ಯದಲ್ಲಿ ಒಂದೆಡೆ ಆಡಳಿತ ಪಕ್ಷದಿಂದ ಜನರಿಗೆ ಗ್ಯಾರಂಟಿ ಭಾಗ್ಯಗಳ ಸಂಕ್ರಮಣವೇ ಆರಂಭವಾಗಿದ್ದರೆ, ಇನ್ನೊಂದೆಡೆ ವಿರೋಧ ಪಕ್ಷಗಳ ಹಳೇ ಚಾಳಿಯಂತೆ ಗ್ಯಾರಂಟಿಗೆ ಅಡ್ಡಿಪಡಿಸಿ, ವಿರೋಧಿಸುತ್ತಾ ವೃಥಾ ಕಾಲಹರಣ ಮಾಡುತ್ತಿವೆ. ಇವೆರಡರ ನಡುವೆ ಜನ ಮಾಧ್ಯಮದಲ್ಲಿ ಗ್ಯಾರಂಟಿಗಳ ಪರ-ವಿರೋಧದ ವಾಕ್ಸಮರವೇ ನೆಡೆಯುತ್ತಿದೆ. ಆದರೇ ಇದಕ್ಕೆಲ್ಲ ಅಂಕುಶವಿಡುವ ನಿಟ್ಟಿನಲ್ಲಿ ಸಿದ್ದರಾಮಯ್ಯ ನೇತೃತ್ವದ ಇಡೀ ಸರ್ಕಾರ ಶತಾಯ-ಗತಾಯ ಗ್ಯಾರಂಟಿ ಯೋಜನೆಗಳು ಅನುಷ್ಠಾನಗೊಳಿಸಲು ಅಧಿಕಾರಿಗಳಿಗೆ ವರ್ಗಾವಣೆಯ ಬಿಸಿಮುಟ್ಟಿಸಿ, ಆಡಳಿತಕ್ಕೆ ಮೆಗಾ ಸರ್ಜರಿ ಮಾಡಿ ಗ್ಯಾರಂಟಿ ಜಾರಿಯನ್ನು ಸುಗಮಗೊಳಿಸಲು ಟೊಂಕಕಟ್ಟಿನಿಂತಿದೆ. ಆದರೆ ಲಗಾಯ್ತಿನಿಂದಲೂ ಬಹುಜನರಹಿತ ಕಾರ್ಯವನ್ನು ವಿರೋಧಿಸುವ ಸ್ವಲ್ಪಸಂಖ್ಯಾತ ಪಟ್ಭಭದ್ರಹಿತಾಶಕ್ತಿಗಳು ದಮನಿತರ ಶತಮಾನಗಳ ಹಸಿವು ಮತ್ತು ಅಸಮಾನತೆಯ ಶ್ರೇಣಿಕೃತ ಜಾತಿ ವ್ಯವಸ್ಥೆಯನ್ನು ಬೆಂಬಲಿಸಿ ಬಹುಜನರ ಕಣ್ಮರೆಸಿ ಅನೂಚಾನವಾಗಿ ಸಂಪತ್ತು ಮತ್ತು ಅಧಿಕಾರವನ್ನು ಅನುಭವಿಸಿ, ಸಮಾಜಿಕ ನ್ಯಾಯವನ್ನು ಅಣಕಿಸುತ್ತಾ ಪ್ರಜಾಪ್ರಭುತ್ವದ ಬೇರುಗಳನ್ನು ಅಲುಗಾಡಿಸಲು ಹವಣಿಸುತ್ತಿದ್ದಾರೆ.

ಆದರೆ, ಇಂಥವೆಲ್ಲ ತಂತ್ರ-ಕುತಂತ್ರದ ರಾಜತಾಂತ್ರಿಕ ನಿಪುಣತೆಯ ಗೊಡವೆಯೇ ಇಲ್ಲದೇ ನಮ್ಮ ನಡುವೆಯೇ ಬದುಕುತ್ತಿರುವ ಒಂದು ವಿಶಿಷ್ಠ ಜನವರ್ಗವೆನಿಸಿರುವ ಅಲೆಮಾರಿ ಮತ್ತು ಆದಿವಾಸಿಗಳ ಮತ್ತೊಂದು ಲೋಕವಿದೆ, ಇವರು ಲಾಗಾಯ್ತಿನಿಂದಲೂ ಸಮಾಜಿಕ ಹಾಗೂ ಆಡಳಿತ ವ್ಯವಸ್ಥೆಯ ಭಾಗವಾಗದೇ, ದೂರವೇ ಉಳಿದು, ಸಂವಿಧಾನಬದ್ದ ಹಕ್ಕು ಮತ್ತು ಅವಕಾಶಗಳಿಂದ ವಂಚಿತರಾಗಿ, ಅಭಿವೃದಿಯಿಂದ ಗೌಣವಾಗಿ ಅಗೋಚರರಾಗಿಯೇ ಉಳಿದಿದ್ದು, ಈ ಹೊತ್ತಿನ ಚರ್ಚಿತ ವಿಷಯವಾಗಿದೆ, ಸ್ವಾತಂತ್ರೋತ್ತರ ಭಾರತವು ಅಮೃತ ಮಹೋತ್ಸಕ್ಕೆ ಅಡಿಯಿಟ್ಟರೂ ಸಹ ಇಂದಿಗೂ ನಾಡಿನ ಸುಮಾರು, 25 ಲಕ್ಷಕ್ಕೂ ಮಿಕ್ಕಿರುವ ಅಲೆಮಾರಿ, ವಿಮುಕ್ತ, ಬುಡಕಟ್ಟು ಆದಿವಾಸಿಗಳಿಗೆ ತುಂಡು ಭೂಮಿಯ ಒಡೆತನದ ಹಂಗಿಲ್ಲ. ಹೀಗೆ ನೆಲೆ ಇಲ್ಲದೇ ತಮ್ಮ ಮೂಲ ನೆಲದಲ್ಲೇ ತಬ್ಬಲಿಯಾದ ದಮನಿತ ಅಲೆಮಾರಿಗಳಿಗೆ ‌ಕನಿಷ್ಠ ವಿಳಾಸಕ್ಕೊಂದು ಶಾಶ್ವತ ನೆಲೆ ಧಕ್ಕಿಲ್ಲದಿರುವುದು, ನಮ್ಮ ಮುಂದಿರುವ ಇತಿಹಾಸ. ಪ್ರಸ್ತುತ ಸಮಾಜದಲ್ಲಿ ವಿಜ್ಞಾನ-ತಂತ್ರಜ್ಞಾನ ನಾಗಲೋಟದಲ್ಲಿದ್ದರೂ ಸಹ ನಮ್ಮ ನಡುವೆಯೇ ಬದುಕುತ್ತಿರುವ ವಿಳಾಸವೇ ಇಲ್ಲದ ಅಲೆಮಾರಿ ಜನರಿಗೆ ಕನಿಷ್ಟ ಸೂರು ಓದಗಿಸದಿರುವುದು ಮಾತ್ರ ಸರ್ಕಾರಕ್ಕಲ್ಲದೇ, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಹ ಸಂಗತಿಯಾಗಿರುವುದು ಮಾತ್ರ ಈ ಕಾಲದ ದುರ್ದೈವವೇ ಸರಿ.

WhatsApp Image 2023 06 27 at 5.54.20 PM

ಅಲೆಮಾರಿಗಳ ಪ್ರಸ್ತುತ ಸಮಾಜಿಕ ಹಿನ್ನಲೆ

Advertisements

ದೇಶಾದ್ಯಂತ ಅಂದಾಜು 15 ಕೋಟಿ ಜನಸಂಖ್ಯೆವುಳ್ಳ 741 ಅಲೆಮಾರಿ, ವಿಮುಕ್ತ ಅಲೆಮಾರಿ ಸಮುದಾಯಗಳಿವೆ. ಕರ್ನಾಟಕದ ಮಟ್ಟಿಗೆ ಸರ್ಕಾರ ಸುಮಾರು 120 ಅಲೆಮಾರಿ ಹಿನ್ನಲೆಯ ಜಾತಿಗಳನ್ನು ಗುರುತಿಸಿದೆ, ಅದರಲ್ಲಿ ಪ.ಜಾ., 51, ಪ.ವರ್ಗದ 23, ಹಾಗೂ ಹಿಂದುಳಿದ ವರ್ಗದ 48 ಅಲೆಮಾರಿ ಸಮುದಾಯಗಳಿವೆ. ಇವರಲ್ಲಿ ರಾಷ್ಟ್ರೀಯ ಕಾನೂನು ಶಾಲೆಯ ಸಮೀಕ್ಷಾ ವರದಿಯಂತೆ ಸುಮಾರು 25 ಲಕ್ಷ ಜನರಿದ್ದು, ಶೇ 42% ಜನರಿಗೆ ಸ್ವಂತ ಸೂರಿಲ್ಲ, 89% ಜನರಿಗೆ ತುಂಡು ಭೂಮಿಯ ಒಡೆತನವಿಲ್ಲ, ಶೇ 66 % ಜನರು ನಿರಕ್ಷರಕುಕ್ಷಿಗಳು, ಶೇ 43% ಜನರಿಗೆ ಸ್ವಂತ ನಿವೇಶನವೇ ಇಲ್ಲದೇ, ಇಂದಿಗೂ ಶಾಶ್ವತ ನೆಲೆ ಇಲ್ಲದೇ, ನೆಲ ಬಾಡಿಗೆ ಆಧಾರದಲ್ಲಿ ಖಾಸಗಿ/ಸರ್ಕಾರಿ ಜಮೀನಿನಲ್ಲಿ ಟೆಂಟ್‌ ನಿಮಿಸಿಕೊಂಡು ತುತ್ತು ಕೂಳಿಗಾಗಿ ಪರಿತಪಿಸುತ್ತಾ ಅಲೆಯುತ್ತಿದ್ದಾರೆ. ಹೀಗೆ ರಾಜಕೀಯ, ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಅವಕಾಶವಿಲ್ಲದೇ ತೀರಾ ದಯನೀಯವಾದ ಸ್ಥಿತಿಯಲ್ಲಿದ್ದಾರೆ.

ವಿಮುಕ್ತ ಅಲೆಮಾರಿಗಳ ಇತಿಹಾಸ ಮತ್ತು ಭಾರತ ಸ್ವಾತಂತ್ರ್ಯ ಸಂಗ್ರಾಮ

1800ರ ದಶಕದಲ್ಲಿ ಬ್ರಿಟಿಷರ ಸರ್ವಾಧಿಕಾರಿ ಗವರ್ನರ್‌ಗಳ ಆಳ್ವಿಕೆಯಲ್ಲಿ ಆಧುನೀಕರಣ, ನಗರೀಕರಣದ ಹೆಸರಿನಲ್ಲಿ ಬ್ರಿಟಿಷರು ಬೆಲೆಬಾಳುವ ಶ್ರೀಗಂಧ, ರಕ್ತ ಚಂದನ, ಹೊನ್ನೆ, ಬೀಟೆ ಮರಗಳನ್ನು ಕಡಿದು ವಿದೇಶಕ್ಕೆ ಸಾಗಿಸಲು ಹಡಗು ಮತ್ತು ರೈಲ್ವೇ ಸಂಪರ್ಕ ಕಲ್ಪಿಸಲು ಅರಣ್ಯನಾಶ ಮಾಡಿ ಸಂಪತ್ತನ್ನು ಲೂಟಿ ಮಾಡುತ್ತಾ, ಕಾಫಿ, ಮತ್ತು ಟೀ ಎಸ್ಟೇಟುಗಳನ್ನು ನಿರ್ಮಿಸಿದರು. ಉಪ್ಪು ಮತ್ತು ಅರಣ್ಯ ಉತ್ಪನ್ನಗಳಾದ ಸಾಂಬಾರು ಪದಾರ್ಥಗಳ ಮೇಲೆ ಏಕಸ್ವಾಮ್ಯ ಸಾಧಿಸಿದ್ದ, ಅಲೆಮಾರಿ ವ್ಯಾಪಾರಿ ಬುಡಕಟ್ಟುಗಳ ಮೇಲೆ ಅಪಾರ ಪ್ರಮಾಣದ ತೆರಿಗೆ ವಿಧಿಸಿದರು. ಈ ನಿರಂಕುಶ ಪ್ರಭುತ್ವದ ಆಳ್ವಿಕೆಯ ವಿರುದ್ದ ಆದಿವಾಸಿಗಳು ಮತ್ತು ಅಲೆಮಾರಿ ಬುಡಕಟ್ಟು ಜನರು ಮೊದಲ ಬಾರಿಗೆ ಮಧ್ಯಪ್ರದೇಶ, ಬಿಹಾರ ಹಾಗೂ ಕೇರಳದ ಅರಣ್ಯದಲ್ಲಿ ದಂಗೆ ಎದ್ದರು ಇವರನ್ನು ನಿಗ್ರಹಿಸಲು ಬ್ರಿಟಿಷರು 1824 ರಲ್ಲಿ ಅರಣ್ಯ, ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದು ಅರಣ್ಯ ಉತ್ಪನ್ನದ ಮೇಲೆ ನಿರ್ಬಂಧ ವಿಧಿಸಿದರು ಇದನ್ನು ವಿರೋಧಿಸಿ ಬ್ರಿಟಿಷರ ವಿರುದ್ದ ಗೆರಿಲ್ಲಾ ಮಾದರಿಯ ಯುದ್ದತಂತ್ರದ ಮೂಲಕ ಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮುಕಿದರು.

WhatsApp Image 2023 06 27 at 5.54.17 PM

ಹೀಗೆ ಅರಣ್ಯ ಸಂಪನ್ಮೂಲವನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದ ಅಲೆಮಾರಿಗಳು ಪ್ರಾಂತೀಯ ರಾಜರಿಗೆ ಗೂಢಾಚಾರಿಕೆ ಮಾಡುತ್ತಾ ಮೂಲಕ ಬ್ರಿಟಿಷರ ವಿರುದ್ದ ಸ್ಥಳೀಯ ರಾಜರಿಗೆ ಯುದ್ದದ ಸಂದರ್ಭದಲ್ಲಿ ಗೆರಿಲ್ಲಾ ಸೈನಿಕರಾದರು. ಬ್ರಿಟಿಷ್‌ ವಸಾಹತುಶಾಹಿ ಆಡಳಿತ ಪದ್ದತಿಯ ಒಡೆದು ಆಳುವ ನೀತಿಯ ಪರಿಣಾಮದಿಂದಾಗಿ ಜನರು ಸಹಾಯಕ ಸೈನ್ಯ ಪದ್ದತಿಯ ರದ್ದತಿಯಿಂದ ಬೀದಿಗೆ ಬಿದ್ದರು. ಇದೇ ಸಂದರ್ಭಕ್ಕೆ ಕಾದಿದ್ದ ಬ್ರಿಟಷರು ಭಾರತದಲ್ಲಿ 1861ರಲ್ಲಿ ಕ್ರಿಮಿನಲ್ ಟ್ರೈಬ್ಸ್‌ ಕಾಯಿದೆ ಜಾರಿಗೆ ತಂದು, ಅರಣ್ಯ ಹಾಗೂ ಆದಿವಾಸಿ ಬುಡಕಟ್ಟುಗಳನ್ನು ಒಕ್ಕಲೆಬ್ಬಿಸಿದರು. ಆದರೆ ಈ ಸಂಗತಿಗಳನ್ನು ಬಿಟ್ರಿಷ್‌ ಚರಿತ್ರಾಕಾರರು ಇತಿಹಾಸದಲ್ಲಿ ಎಲ್ಲಿಯೂ ದಾಖಲಿಸಿಲ್ಲದಿರುವುದು ವಿಪರ್ಯಾಸ.

ಮೂಲನೆಲೆ ಕಳೆದುಕೊಂಡ ಕಳಂಕಿತ ಅಲೆಮಾರಿ ಬುಡಕಟ್ಟುಗಳು

ಅರಣ್ಯದಿಂದ ನೆಲೆಕಳೆದುಕೊಂಡ ಅಲೆಮಾರಿ ಬುಡಕಟ್ಟುಗಳ ಮೇಲೆ ಬ್ರಿಟಿಷರು, ಸಮಾಜದ ಕಳಂಕಿತ ವೃತ್ತಿಗಳಾದ ಕಳ್ಳತನ, ದರೋಡೆ ಮತ್ತಿತ್ತರೆ ವಿಧ್ವಂಸಕ ಕೃತ್ಯವನ್ನು ಕುತಂತ್ರದ ಮೂಲಕ ದುರುದ್ದೇಶಪೂರ್ವಕವಾಗಿ ಹೇರಿ, ನಾಡಿನಲ್ಲಿ ನೆಲೆ ಕಂಡುಕೊಳ್ಳದಂತೆ ಮಾಡಿ, ಅಲೆಮಾರಿಗಳನ್ನು ನಿರ್ದಯವಾಗಿ ದಂಡಿಸಿ, ಅವರನ್ನು ಕಳ್ಳರು, ಅಪರಾಧಿಗಳು ಎಂಬ ಆರೋಪಗಳನ್ನು ಹೊರಿಸಿ, ನಾಡ ದ್ರೋಹಿಗಳೆಂದು ಬಿಂಬಿಸಿ ಕಳಂಕದ ಹಣೆಪಟ್ಟಿ ಕಟ್ಟಿ, ಅವರನ್ನು ಬಯಲು ಜೈಲಿನ ವಸಾಹತು(ಸೆಂಟ್ಲುಮೆಂಟ್)ಗಳಲ್ಲಿ ಬಂಧಿಸಿ, ಮಹಿಳೆಯರು ಹಾಗೂ ಮಕ್ಕಳ ಮೇಲೆ ದೌರ್ಜನ್ಯ ನೆಡೆಸಿ ಮಾನವ ಹಕ್ಕುಗಳನ್ನು ಅವ್ಯಾತವಾಗಿ ಉಲ್ಲಂಘಿಸಿದರು. ಆದರೆ ವಾಸ್ತವವಾಗಿ ಇಂತಹ ಲಕ್ಷಾಂತರ ಅಲೆಮಾರಿಗಳು ದಾಸ್ಯ ಭಾರತದ ವಿಮೋಚನೆಗಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರಾಗಿದ್ದರು.

WhatsApp Image 2023 06 27 at 5.54.18 PM

ಇಂತಹ ಸಮುದಾಯಗಳನ್ನು ನಿಗ್ರಹಿಸಲು ಬ್ರಿಟಿಷರು ಕುತಂತ್ರ ಹೆಣೆದು ಅಪರಾಧಿ ಬುಡಕಟ್ಟು ಎಂದು ಹಣೆಪಟ್ಟಿ ಕಟ್ಟಿ, ಅಪರಾಧವನ್ನು ವಂಶಪಾರಂಪರ್ಯವಾಗಿ ಇಡೀ ಜನಾಂಗಕ್ಕೆ ಹಬ್ಬಿಸಿರುವುದಕ್ಕೆ ಸಾಕ್ಷಿ, ಮೊನ್ನೆ ತೆರೆಕಂಡ ಜೈ ಭೀಮ್‌ ಸಿನಿಮಾ. ಇಂದಿಗೂ ಅಲೆಮಾರಿಗಳ ಕರಾಳ ಇತಿಹಾಸಕ್ಕೆ ದೈತ್ಯ ಸಾಕ್ಷಿಯಂತಿರುವ ಏಷ್ಯಾದ ಅತಿದೊಡ್ಡ ಸ್ಲಂ ಆಗಿರುವ ಕ್ರಿಮಿನಲ್‌ ಟ್ರೈಬ್ಸ್ ಗಳ ಮುಂಭೈನ ಧಾರವಿ ಸೆಂಟ್ಲುಮೆಂಟ್‌ ನಲ್ಲಿರುವ ಜನರ ಇಂದಿನ ಸ್ಥಿತಿಗತಿ. ಅಂತೆಯೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕಂಡು ಬರುವ 7 ಸೆಂಟ್ಲುಮೆಂಟ್‌ಗಳಲ್ಲಿ ವಾಸಿಸುತ್ತಿರುವ ಮಾಜಿ ಅಪರಾಧಿ ವಿಮುಕ್ತ ಬುಡಕಟ್ಟು ಸಮುದಾಯಗಳಾದ ಕಂಜರ್‌ಭಾಟ್, ಕೊರಮ, ಕೊರಚ, ದೊಂಬರು, ಹಂದಿಜೋಗಿ, ಮಾಂಗ್‌ ಗಾರುಡಿ, ಘಂಟಿಚೋರ್‌,‌ ಚಪ್ಪರ್‌ ಬಂದ್, ಪಾರ್ಥಿ, ಹರಿಣಿ ಹೀಗೆ ಇತ್ಯಾದಿ ಜನ ಸಮುದಾಯಗಳು ತಮ್ಮ ಜಾತಿಯ ಹೆಸರಿಗೆ ಅಂಟಿರುವ ಕಳಂಕದಿಂದ ಹೊರಬಾರಲಾರದೇ ಇಂದು ಸಮಾಜದಲ್ಲಿ ಸಾರ್ವಜನಿಕವಾಗಿ ತಮ್ಮ ಜಾತಿಯನ್ನು ಹೇಳಿಕೊಂಡು ಬದುಕಲಾರದೇ ನಿತ್ಯವೂ ತಮ್ಮದಲ್ಲದ ತಪ್ಪಿಗೆ ಸಾರ್ವಜನಿಕರಿಂದ ನಿಂದನೆ, ಕುಹಕ, ಅಪಮಾನಕ್ಕೆ ತುತ್ತಾಗಿ ತಮಗೇ ತಾವೇ ಹಲುಬಿಕೊಂಡು ಸಮಾಜಿಕ ಅಪಮಾನದ ಕಳಂಕವನ್ನು ಅನುಭವಿಸುತ್ತಿವೆ.

ಈ ಅಂಕಣ ಓದಿದ್ದೀರಾ?: ʼಅನ್ನಭಾಗ್ಯʼ: ಚುಚ್ಚುವ ಮುಳ್ಳೇ?

ಇಂತಹ ಜನಾಂಗದ ಸ್ಥಿತಿಯನ್ನು ಅರ್ಥೈಸಿಕೊಂಡು (ಬಯಲುಜೈಲು) ಸೆಂಟ್ಲುಮೆಂಟ್‌ಗಳಿಂದ ಇವರನ್ನು ವಿಮುಕ್ತಿಗೊಳಿಸಿ ಅವರಿಗೆ ಸ್ವಾಭಿಮಾನದ, ಆತ್ಮಗೌರವದ ಬದುಕು ಕಟ್ಟಿಕೊಡುವ ನಿಟ್ಟಿನಲ್ಲಿ ಹಿಂದಿನ ಯಾವ ಸರ್ಕಾರ ಗಳು ಸಹ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಿಲ್ಲ. ಆದರೆ, ಇದೇ ಮಾಜಿ ಅಪರಾಧಿ ಬುಡಕಟ್ಟುಗಳ ಅಮಾಯಕರು ಜೈಲು ಸೇರಿ ಕೇವಲ ಹೊಟ್ಟೆ-ಬಟ್ಟೆಯ ಹಂಗಿಗೆ ಬಿಟ್ಟಿಯಾಗಿ ಬೆವರು ಸುರಿಸಿ ಕಟ್ಟಿದ್ದ ಕಾಮಗಾರಿಗಳ ಲೆಕ್ಕವಿಲ್ಲ. ಭಾರತದ ಅತಿದೊಡ್ಡ ರೈಲ್ವೇ ಲೈನು, ಭಾರೀ ಅಣೆಕಟ್ಟುಗಳು, ಹಾಗೇಯೆ ದಿನಕ್ಕೆ ಒಂದು ರೂಪಾಯಿಯ ಕೂಲಿಯಂತೆ ರಾಜ್ಯದ ಸುಂದರವಾದ ವಿಧಾನಸೌಧವನ್ನು ನಿರ್ಮಿಸಿದ ಸುಮಾರು 5,000 ಸಾವಿರ ಖೈದಿಗಳ ಪೈಕಿ ಶೇ 85% ರಷ್ಟು ಜನರು ಇದೇ ವಿಮುಕ್ತ ಅಲೆಮಾರಿಗಳು ಎಂಬುದು ಇತಿಹಾಸದ ಪುಟದಲ್ಲಿ ಮರೆಮಾಚಲ್ಪಟ್ಟ ಕಠೋರ ಸತ್ಯ.

ಅಲೆಮಾರಿಗಳ ಪ್ರಸ್ತುತ ಸ್ಥಿತಿಗತಿ ಹಾಗೂ ಆಳುವ ಸರ್ಕಾರಗಳ ದಿವ್ಯ ನಿರ್ಲಕ್ಷ್ಯ.!

ಆದರೆ, ಸ್ವಾತಂತ್ರಪೂರ್ವದ ಮಹಾರಾಷ್ಟ್ರದಲ್ಲಿ 1904ರಲ್ಲಿ ಛತ್ರಪತಿ ಶಾಹುಮಹರಾಜರು, ಮೈಸೂರು ರಾಜ್ಯದಲ್ಲಿ 1918ರಲ್ಲಿ ನಾಲ್ವಡಿ ಕೃಷ್ಟರಾಜ ಓಡೆಯರ್, 70ರ ದಶಕದಲ್ಲಿ ದೇವರಾಜ ಅರಸು ಅವರು ಇಂತವರಿಗೆ ವಿಶೇಷ ಆಸಕ್ತಿವಹಿಸಿ ಮೀಸಲಾತಿಯನ್ನು ಕಲ್ಪಿಸಿದರು. ಆದರೆ ಅಂದಿನಿಂದ ಮೀಸಲಾತಿಯಲ್ಲಿದ್ದರು ಒಂದಿಂಕ್ರದಷ್ಟು ಚಲಿಸಲಾಗದೇ ನಿಂತಲ್ಲೇ ತೆವಳುತ್ತಿದ್ದಾರೆ. ಕಾರಣ ಇಂದಿನ ರಾಜಕಾರಣಕ್ಕೆ ಸಾಮಾಜಿಕ ನ್ಯಾಯ ಒಗ್ಗದ ಮಗ್ಗಲುಮುಳ್ಳು ಹಾಗಾಗಿ 2016 ರವರೆಗೂ ಸರ್ಕಾರದ ಯಾವುದೇ ನಿಗಮದಿಂದ ಒಂದೇ ಒಂದು ಸಾಲ-ಸೌಲಭ್ಯ ಪಡೆಯದ ಪರಿಶಿಷ್ಟ ಅಲೆಮಾರಿಗಳಿಗೆ 2018ರ ಬಜೆಟ್‌ ನಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಹೆಚ್‌. ಆಂಜನೇಯರ ದೂರದೃಷ್ಟಿಯ ಫಲವಾಗಿ ಪ.ಜಾ/ವರ್ಗದ ಸುಮಾರು 9.6 ಲಕ್ಷ ಅಲೆಮಾರಿ, ಅರೆಅಲೆಮಾರಿ, ಸೂಕ್ಷ್ಮ,ಅತಿಸೂಕ್ಷ್ಮ ಸಮುದಾಯಗಳ ಸಮಗ್ರ ಪ್ರತ್ಯೇಕ ಅಲೆಮಾರಿ ಅಭಿವೃದ್ದಿಗೆ ಕೋಶ ಆರಂಭಿಸಲು124 ಕೋಟಿ ಅನುದಾನ ನೀಡಿದರೂ ಸಹ ಅದು ಪರಿಣಾಕಾರಿಯಾಗಿ ಅನುಷ್ಟಾನ ಆಗಲಿಲ್ಲ.

ಆದಿವಾಸಿ 1

ತದನಂತರದಲ್ಲಿ ಅನೇಕ ದಲಿತ, ದಮನಿತ, ಅಲೆಮಾರಿ, ಪ್ರಗತಿಪರ ಸಂಘಟನೆಗಳ ಹೋರಾಟ ಹಾಗೂ ಓತ್ತಡ ಹೆಚ್ಚಾದಾಗ ಹಾಗೂ ನಿವೃತ್ತ ನ್ಯಾಯಮೂರ್ತಿ ನಾಗಮೋಹನದಾಸ್‌ ಆಯೋಗವು ಅಲೆಮಾರಿ ಮತ್ತು ಆದಿವಾಸಿಗಳಿಗೆ ಪ್ರತ್ಯೇಕ ಅಭಿವೃದ್ದಿ ನಿಗಮಕ್ಕೆ ಶಿಫಾರಸ್ಸು ಮಾಡಿತ್ತು. ಅದರನ್ವಯ ಬೊಮ್ಮಯಿ ಸರ್ಕಾರ, 2022 ಡಿಸೆಂಬರ್‌ 17 ರಂದು ಕರ್ನಾಟಕ ಪ.ಜಾ ಮತ್ತು ಪ.ವರ್ಗ ಅಲೆಮಾರಿ ಅಭಿವೃದ್ಧಿ ನಿಗಮ ಸ್ಥಾಪಿಸಿ ಕೇವಲ ಆದೇಶ ಹೊರಡಿಸಿತು. ಆದರೆ ನಯಾ ಪೈಸೆ ಅನುದಾನ ನೀಡಲಿಲ್ಲ. ಸದರಿ ನಿಗಮಕ್ಕೆ ಇಂದಿಗೂ, ಆರ್ಥಿಕ ಸಂಪನ್ಮೂಲ, ಖಾಯಂ ಸಿಬ್ಬಂದಿಯನ್ನೇ ನೀಡದಿರುವುದು, ತಳಸಮುದಾಯಗಳ ಬಗೆಗೆ ಆಳುವ ಸರ್ಕಾರ, ಸಮಾಜ ಕಲ್ಯಾಣ ಇಲಾಖೆ ಹಾಗೂ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿಯ ಕೊರತೆ, ಎದ್ದು ಕಾಣುತ್ತದೆ. ಆದ ಕಾರಣ ಅಲೆಮಾರಿಗಳ ಸಮಗ್ರ ಅಭಿವೃದ್ಧಿ ನಿಗಮಕ್ಕೆ ಗ್ರಹಣ ಹಿಡಿದಿರುವುದು ಪ್ರಸ್ತುತ ಆಡಳಿತ ವ್ಯವಸ್ಥೆಯೂ ತಳಸಮುದಾಯಗಳ ಬಗೆಗಿನ ಅಭಿವೃದ್ಧಿಗೆ ಹಿಡಿದ ಕೈಗನ್ನಡಿಯಾಗಿದೆ.
ರಾಜ್ಯದಲ್ಲಿ ಇಂದಿಗೂ ಸುಮಾರು 5 ಲಕ್ಷಕ್ಕಿಂತಲೂ ಅಧಿಕ ಸಂಖ್ಯೆಯಲ್ಲಿ ಅಲೆಮಾರಿ ಜನರು ರಸ್ತೆಯಲ್ಲಿ ಧಾರ್ಮಿಕ ಭಿಕ್ಷಾಟನೆ ಮಾಡುತ್ತಾ, ತೊಗಲುಗೊಂಬೆಯಾಟ, ಕೊರವಂಜಿ ಕಣಿ, ಹಗಲುವೇಷ, ಬುರಾ, ಬೀದಿಯಲ್ಲಿ ಕೊಲೆಬಸವ, ದೊಂಬರಾಟ, ಮಾಡುತ್ತಾ ನಿರ್ವಸತಿಕರಾಗಿ ಶಾಶ್ವತ ನೆಲೆ ಇಲ್ಲದೇ ಅಲೆಮಾರಿಗಳು ನೆತ್ತಿಮ್ಯಾಲೊಂದು ಸ್ವಂತ ಸೂರಿಗಾಗಿ ಕಳೆದ 5 ವರ್ಷಗಳಿಂದ ಸಿಕ್ಕ-ಸಿಕ್ಕ ಅಧಿಕಾರಿಗಳಿಗೆ, ಮಂತ್ರಿ-ಮಹೋದಯರಿಗಾಗಿ ಎಡೆತಾಕಿ ಕಛೇರಿ-ಕಛೇರಿಗಳಿಗೆ ಅಲೆದಲೆದು ಸ್ವಂತ ಸೂರಿನ ಕನ್ನಸೇ ಭಗ್ನಗೊಂಡಿದೆ.

ಅಲೆಮಾರಿಗಳು ಸ್ವಂತ ಸೂರು ಪಡೆಯುವುದೇ ಸವಾಲು?

ಕಳೆದ ಸರ್ಕಾರ 2021-2022 ಹಾಗೂ 2022-23ನೇ ಸಾಲಿನ ಬಜೆಟ್‌ನಲ್ಲಿ ಎಸ್‌.ಸಿ-ಎಸ್‌.ಟಿ ಅಲೆಮಾರಿಗಳ ಶಾಶ್ವತ ಸೂರಿಗಾಗಿ 550 ಕೋಟಿ ಅನುದಾನವನ್ನು ಘೋಷಿಸಿ, ಅನುಷ್ಠಾನಕ್ಕೆ ಅನುದಾನ ನೀಡದೇ, ವಂಚಿಸಿ ಅಲೆಮಾರಿಗಳ ಸ್ವಂತ ಸೂರಿನ ಕನಸ್ಸಿಗೆ ತಣ್ಣೀರೆರಚಿದೆ. ಈ ಬಗ್ಗೆ ಪ್ರಶ್ನಿಸಿದರೆ ವಸತಿ ಇಲಾಖೆಯ ಅಧಿಕಾರಗಳು ಆರ್ಥಿಕ ಇಲಾಖೆ ಕಡೆಗೆ ಬೆರಳುತೊರಿಸಿ ತಮ್ಮ ಜವಾಬ್ದಾರಿಯಿಂದ ನಯವಾಗಿ ನುಣಚಿಕೊಳ್ಳುತ್ತಾರೆ. ಇತ್ತ ಅಲೆಮಾರಿ ನಿಗಮ, ಸಮಾಜ ಕಲ್ಯಾಣ ಇಲಾಖೆ ಮತ್ತು ಆರ್ಥಿಕ ಇಲಾಖೆಯೊಂದಿಗೆ ಸಕಾಲಕ್ಕೆ ಸಮನ್ವಯ ನಡೆಸಿ ಯೋಜನೆ ಅನುಷ್ಟಾನಕ್ಕೆ ಕ್ರಮ ಕೈಗೊಳ್ಳಲು ಸಮರ್ಥ ಸಿಬ್ಬಂದಿಯೇ ಇಲ್ಲದಿರುವುದು ಅಲೆಮಾರಿ ಜನರ ದುರ್ದೈವವಾಗಿದೆ.

ಆದಿವಾಸಿ 2

ದಕ್ಕಿದ್ದ ಅನುದಾನದಲ್ಲಿ ಮಿಕ್ಕಿಸಿಕೊಂಡಷ್ಟನ್ನಾದರೂ ಸಕಾಲಕ್ಕೆ ಸದುಪಯೋಗ ಪಡಿಸಿಕೊಳ್ಳಬೇಕೆಂದು ವಸತಿ ರಹಿತ ಅಲೆಮಾರಿಗಳ ಮನೆ ನಿರ್ಮಾಣಕ್ಕೆ ನಿಗದಿಪಡಿಸಿದ್ದ ರೂ 4 ಲಕ್ಷ ಘಟಕ ವೆಚ್ಚವನ್ನುರೂ 5 ಲಕ್ಷಕ್ಕೆ ಹೆಚ್ಚಿಸುತ್ತೇವೆಂದು ಅಂದಿನ ಸಚಿವ ಕೋಟಾ ಶ್ರೀನಿವಾಸ ಪೂಜಾರಿ 5,000 ಮನೆಗೆ ಮಂಜೂರಾತಿ ಕೊಟ್ಟು ಘಟಕವೆಚ್ಚವನ್ನು 2 ಲಕ್ಷಕ್ಕೆ ಇಳಿಸಿ ಅಲೆಮಾರಿಗಳಿಗೆ ನಂಬಿಸಿ, ಮೂಗಿಗೆ ತುಪ್ಪ ಸವರಿ ಸಮಾಧಾನಪಡಿಸಿದರು. ಇತ್ತ ಅಲೆಮಾರಿ ಕೋಶಕ್ಕೂಹೆಚ್ಚಿನ ಅನುದಾನ ನೀಡದೆ ಯಾಮಾರಿಸಿ ಕೊಟ್ಟ ಕವಡೆ ಕಾಸಿನ ಅನುದಾನದಲ್ಲಿ 74 ಸಮುದಾಯಗಳ ಅಭಿವೃದಿಗೆ ಬರೆ ಎಳೆದು, ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಂತಾಗಿ ಎಲ್ಲಾ ಆರ್ಥಿಕ ಯೊಜನೆಗಳಿಗೂ ಅನುದಾನವಿಲ್ಲದೇ ನೆನೆಗುದಿಗೆ ಬಿದ್ದಿವೆ. ಹೀಗೆ ಅಲೆಮಾರಿ ಜನರು ಕಳೆದ 4 ವರ್ಷಗಳಿಂದ ಅರ್ಜಿ ಸಲ್ಲಿಸಿ ಅನುದಾನಕ್ಕಾಗಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ, ಹೀಗೆ ಬಡವರ ಕೋಪ ದವಡೆಗೆ ಮೂಲ ಎಂಬಂತೆ ಅಲೆಮಾರಿಗಳು ಗರಬಡಿದವರಂತೆ ಮಂಕಾಗಿದ್ದಾರೆ.

ಪರಿಹಾರೋಪಾಯಗಳು.! ಮತ್ತು ಸರ್ಕಾರದ ಇಚ್ಚಾಶಕ್ತಿ.?

  1. ನಿವೇಶನವಿಲ್ಲದ ಅಲೆಮಾರಿಗಳಿಗೆ ಶಾಶ್ವತ ನೆಲೆ ಒದಗಿಸಲು ಅಲೆಮಾರಿಗಳು ಹೆಚ್ಚಾಗಿ ನೆಲೆಸಿರುವ ಪ್ರದೇಶಗಳಲ್ಲಿ ವಿಶೇಷವಾಗಿ ನಗರಪ್ರದೇಶಗಳ ಅಂಚಿನಲ್ಲಿ ನವಗ್ರಾಮ ನಿರ್ಮಾಣ ಯೋಜನೆಯಡಿ ನೂತನ ಬಡಾವಣೆ ನಿರ್ಮಿಸಿ, ಮೂಲಭೂತ-ನಾಗರೀಕ ಸೌಲಭ್ಯ ಒದಗಿಸಲು 2023-24ರ ಬಜೆಟ್‌ ನಲ್ಲಿ ಪ್ರತ್ಯೇಕ ಅನುದಾನ ಮೀಸಲಿಡಬೇಕು.
  2. ಈಗಾಗಲೇ ಪರಿಶಿಷ್ಟ ಅಲೆಮಾರಿ ಅಭಿವೃದ್ದಿ ನಿಗಮಕ್ಕೆ ಶಾಶ್ವತ ವಸತಿಗಾಗಿ ಸಲ್ಲಿಸಿರುವ ಸುಮಾರು 25 ಸಾವಿರ ವಸತಿರಹಿತರಿಗೆ ರೂ 7 ಲಕ್ಷ ಘಟಕ ವೆಚ್ಚದಲ್ಲಿ ಮನೆ ನಿರ್ಮಿಸಲು ಪ್ರತ್ಯೇಕ ಅನುದಾನ ಬಿಡುಗಡೆ ಮಾಡಿ ಮನೆಗಳನ್ನು ಪೂರ್ಣಗೊಳಿಸಬೇಕು.
  3. ಶಾಶ್ವತ ವಿಳಾಸವಿಲ್ಲದ ಕಾರಣ ಅಲೆಮಾರಿ ಪ್ರವೃತ್ತಿ ಮುಂದುವರೆದಿದೆ. ಜಾತಿ ಪರ್ಯಾಯ ಹೆಸರುಗಳ ಗೊಂದಲ, ಪ್ರದೇಶ ಮಿತಿ ಸಡಿಲಿಕೆ ಹಾಗೂ ನಿರ್ದಿಷ್ಟ ವೃತ್ತಿ ಇಲ್ಲದೇ ಇಂದಿಗೂ ಎಲ್ಲಾ ಮೀಸಲಾತಿ ಸೌಲಭ್ಯಗಳಿಂದ ವಂಚಿತರಾಗಿ ಎಲ್ಲಾ ಕೇತ್ರಗಳಲ್ಲಿ ಗೈರು ಹಾಜರಿಗಿರುವ ಇವರನ್ನು ಗುರುತಿಸಿ ಮುಖ್ಯವಾಹಿನಿಗೆ ತರಲು ಸಮಗ್ರ ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿಗಳ ವಸ್ತುನಿಷ್ಠ, ವೈಜ್ಞಾನಿಕ ಅಧ್ಯಯನ ಸಮೀಕ್ಷೆಅತ್ಯಗತ್ಯ. ಆದ್ದರಿಂದ ನಿರ್ದಿಷ್ಟ ಸ್ವರೂಪ ಮತ್ತು ಕಾರ್ಯವ್ಯಾಪ್ತಿಯ ಅಧಿಕಾರವುಳ್ಳ ಪ್ರತ್ಯೇಕ ಅಲೆಮಾರಿ ಸಂಶೋಧನ ಸಂಸ್ಥೆ ಹಾಗೂ ಶಾಶ್ವತ ಶಾಸನ ಬದ್ದ ಅಲೆಮಾರಿ ಆಯೋಗ ರಚನೆಯಾಗಬೇಕು.

    ಆದ್ದರಿಂದ ಸಾಮಾಜಿಕ ನ್ಯಾಯ ಪ್ರತಿಪಾದಿಸುವ ಕಾಂಗ್ರೇಸ್‌ ಪಕ್ಷದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜಿಕ ಕಳಕಳಿಯುಳ್ಳ ಜನಪ್ರತಿನಿಧಿಗಳನ್ನೊಳಗೊಂಡ ಈ ಸರ್ಕಾರವು ನೆಲೆ, ಮತ್ತು ನೆಲೆ ಕಾರಣ ಅಲೆಮಾರಿ, ಆದಿವಾಸಿ ಬುಡಕಟ್ಟುಗಳಿಗೆ ಇನ್ನಾದರೂ ಸ್ವಾಭಿಮಾನ ಮತ್ತು ಆತ್ಮಗೌರವ ಬದುಕು ಕಲ್ಪಿಸುವ ಗ್ಯಾರಂಟಿ ನೀಡುವುದರ ಮೂಲಕ ಜನಪರ ಸರ್ಕಾರ ಎಂಬುದನ್ನು ಸಾಬೀತುಪಡಿಸುತ್ತಾರೆಯೇ ಎಂಬುದು ಈಗ ಅಲೆಮಾರಿಗಳ ಮುಂದೆ ಇರುವ ಯಕ್ಷ ಪ್ರಶ್ನೆಯಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಕಿರಣ್‌ ಕುಮಾರ್‌ ಕೊತ್ತಗೆರೆ
ಕಿರಣ್‌ ಕುಮಾರ್‌ ಕೊತ್ತಗೆರೆ
ಸಂಘಟಕ, ಸಾಮಾಜಿಕ ಕಾರ್ಯಕರ್ತ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X