“ಮಹಿಳೆಯರ ಋತುಸ್ರಾವ ಅಂಗವೈಕಲ್ಯವಲ್ಲ. ಅದು ಅವರ ಜೀವನದ ನೈಸರ್ಗಿಕ ಭಾಗವಾಗಿದೆ” ಎಂಬ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರ ಮಾತು ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯೇ ವಿಚಿತ್ರವೆನಿಸುತ್ತದೆ. ಋತುಚಕ್ರದ ರಜೆಯ ಪ್ರಸ್ತಾವನೆ ಮಹಿಳೆಗೆ ಸಿಗಬೇಕಾದ ಸೌಲಭ್ಯವೆಂಬುದನ್ನರಿತು ಪೋಷಿಸಬೇಕಾದ ಮಹಿಳಾ ಪ್ರತಿನಿಧಿಯೇ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದು ವಿಷಾದನೀಯ
ಭಾರತದಂತಹ ಸಾಂಪ್ರದಾಯಿಕ ಸ್ವರೂಪದ ಸಾಮಾಜಿಕ ವ್ಯವಸ್ಥೆಯಲ್ಲಿ ‘ಮುಟ್ಟು’ ಎಂಬುದು ಇನ್ನೂ ಗಟ್ಟಿಯಾಗಿಯೇ ಉಳಿದುಕೊಂಡಿರುವ ಮಡಿವಂತಿಕೆಯ ವಿಚಾರ. ಮುಟ್ಟಿನ ಸಂದರ್ಭದಲ್ಲಿ ತಮ್ಮದೇ ಮನೆಯ ದೇವರ ಕೋಣೆ, ಅಡುಗೆ ಕೋಣೆಗಳಿಗೂ ಗ್ರಾಮೀಣ ಪ್ರದೇಶದಲ್ಲಿನ ಎಷ್ಟೋ ಮಹಿಳೆಯರಿಗೆ ಇಂದಿಗೂ ಪ್ರವೇಶಕ್ಕೆ ನಿಷೇಧವಿರುವುದು ಒಂದೆಡೆಯಾದರೆ, ಒಟ್ಟಾರೆ ಮನೆಯೊಳಕ್ಕೇ ಪ್ರವೇಶ ನಿಷಿದ್ಧವಾಗಿ ಪಡಸಾಲೆ ಅಥವಾ ಜಗುಲಿಯ ಮೇಲೆ ತಿಂಗಳ ಮೂರು ದಿನ ಸವೆಸಬೇಕಾದ ಸಂಪ್ರದಾಯವೂ ಸಂಪೂರ್ಣ ಕಣ್ಮರೆಯಾಗಿಲ್ಲ. ಒಂದೆಡೆ ಈ ಪರಿಪಾಠ ಬಹಿಷ್ಕಾರದಂತೆ ಕಂಡರೆ ಮತ್ತೊಂದೆಡೆ ‘ಆ’ ಸಮಯಕ್ಕೆ ಅಗತ್ಯವಾದ ವಿರಾಮವೂ ದೊರೆಯಿತೆನ್ನೋಣ. ಸಂಪ್ರದಾಯದ ಹೆಸರಿನಲ್ಲಿ ಹಿಂದಿನಿಂದ ನಡೆದು ಬರುತ್ತಿರುವ ಇಂತಹ ‘ನಡೆ’ಯ ವೈಜ್ಞಾನಿಕ ಕಾರಣವೇ ವಿರಾಮದ ಔಚಿತ್ಯ. ಆದರೆ ಇಂದಿಗೂ ಅದನ್ನು ಮುಂದುವರಿಸಿಕೊಂಡು ಬರುತ್ತಿರುವ ರೀತಿ ಮಾತ್ರ ಅವೈಜ್ಞಾನಿಕ ಮತ್ತು ಅಸಹನೀಯ. ಇಲ್ಲೆಲ್ಲವೂ ನಾಗರಿಕ ಸಮಾಜದ ಅರಿವು ಜಾಗೃತವಾಗಬೇಕಾದದ್ದು ಅನಿವಾರ್ಯವಷ್ಟೇ. ಹಾಗಿದ್ದ ಮೇಲೆ ಮುಟ್ಟು ಅಥವಾ ಮಾಸಿಕ ಋತುಸ್ರಾವವೆಂಬುದು ಮಹಿಳೆಯರ ಜೀವನದ ನೈಸರ್ಗಿಕ ಭಾಗವಾಗಿದೆ ಎಂಬ ಅರಿವು ಮೂಡಿಸುವ ಜವಾಬ್ದಾರಿಯನ್ನು ರಾಜ್ಯಸಭೆಯಲ್ಲಿ ದನಿಯೆತ್ತುವ ಮಹಿಳಾ ಪ್ರತಿನಿಧಿಗಳು ನೆನಪಿಸಿಕೊಳ್ಳುವುದಿಲ್ಲವೇಕೆ?
ಮಹಿಳೆಯರು ಔಪಚಾರಿಕ ವಲಯದ ವೃತ್ತಿರಂಗಕ್ಕೆ ಪ್ರವೇಶಿಸುವ ಮೊದಲು, ಹಿಂದಿನ ದಿನಗಳಲ್ಲಿ ಸುಧಾರಿತ ವಿಜ್ಞಾನ, ತಂತ್ರಜ್ಞಾನ ಹಾಗೂ ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದಾಗಿ ಅವರನ್ನು ಮಾಸಿಕ ಋತುಚಕ್ರದ ಸಂದರ್ಭದಲ್ಲಿ ದೈನಂದಿನ ಚಟುವಟಿಕೆಗಳಿಂದ ದೂರವಿರಿಸಲಾಗುತ್ತಿತ್ತು. ನೈರ್ಮಲ್ಯದ ದೃಷ್ಟಿಯಿಂದ ಇಂದು ನಾವು ಬಳಸುವ ಅಗತ್ಯ ಸುಧಾರಿತ ಸೌಲಭ್ಯಗಳಾದ ಸ್ಯಾನಿಟರಿ ಪ್ಯಾಡ್‌ಗಳಾಗಲಿ, ಮುಟ್ಟಿನ ಕಪ್‌ಗಳಾಗಲಿ, ಸ್ಯಾನಿಟೈಸರ್ – ಹ್ಯಾಂಡ್ ವಾಶ್‌ಗಳಾಗಲಿ ಲಭ್ಯವಿರದಿದ್ದ ದಿನಗಳಲ್ಲಿ ಬಟ್ಟೆಯ ಬಳಕೆ ಹಾಗೂ ಅದನ್ನು ಶುಭ್ರಗೊಳಿಸಿ ಮರುಬಳಕೆ ಮಾಡುವುದು ಅನಿವಾರ್ಯವಾಗಿತ್ತು. ಇಂತಹ ಸಂದರ್ಭದಲ್ಲಿ ಅಡುಗೆ ಮಾಡುವಾಗ ಕೈಗಳಲ್ಲಿಯೋ, ಕೈ ಬೆರಳ ಉಗುರಿನ ಸಂದುಗಳಲ್ಲಿಯೋ ಉಳಿದಿರಬಹುದಾದ ಬ್ಯಾಕ್ಟೀರಿಯಾಗಳು ನಮ್ಮ ಆಹಾರವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ದಾರಿಯಾಗಬಹುದೆಂಬ ಕಾರಣದಿಂದಾಗಿ ‘ಆ ದಿನ’ಗಳಲ್ಲಿ ಅಡುಗೆ ಮನೆ ಪ್ರವೇಶಕ್ಕೆ ಕತ್ತರಿ ಬಿದ್ದಿತ್ತು.
ಇನ್ನು ಮುಟ್ಟಿನ ದಿನಗಳಲ್ಲಿ ವಯಸ್ಸಿನ ಭೇದವಿಲ್ಲದೆ ಮಹಿಳೆಯರು ಅನುಭವಿಸುವ ನಿಶ್ಶ್ಯಕ್ತಿ, ತಲೆಸುತ್ತು, ವಾಕರಿಕೆ, ಬೆವರುವಿಕೆ, ಸೊಂಟ ನೋವು, ಬೆನ್ನು ಸೋಲುವಿಕೆ, ಕೈಕಾಲುಗಳ ಸೆಳೆತ, ಕಿಬ್ಬೊಟ್ಟೆ ನೋವು, ಮಾನಸಿಕ ಕಿರಿಕಿರಿ… ಒಮ್ಮೊಮ್ಮೆ ಕಡಿಮೆ ರಕ್ತದೊತ್ತಡದಂತಹ ಸವಾಲುಗಳು ಅಂದೂ ಇದ್ದವು; ಇಂದಿಗೂ ಅವುಗಳಿಂದ ಹೊರಬರಲು ಸಾಧ್ಯವಾಗಿಲ್ಲ. ಸಂಪ್ರದಾಯ, ಧಾರ್ಮಿಕ ನಂಬಿಕೆಗಳ ಕಾರಣಕ್ಕಾಗಿ ಮಾತ್ರವಲ್ಲದೆ ಮಡಿವಂತಿಕೆಯ ಸಾಮಾಜಿಕ ಸ್ಥಿತಿಗೆ ತಮ್ಮನ್ನು ತೆರೆದುಕೊಳ್ಳಲು ಹಿಂಜರಿದು ಋತುಸ್ರಾವದ ದಿನಗಳ ನೋವು ಹಾಗೂ ಕಿರಿಕಿರಿಗಳನ್ನು ಮುಚ್ಚಿಟ್ಟು ತೀರಾ ಸಹಜವಾಗಿರುವಂತೆ ತೋರಿಸಿಕೊಳ್ಳುವ ಎಲ್ಲ ಮಹಿಳೆಯರೂ ಇಂತಹ ಆರೋಗ್ಯದ ಅನನುಕೂಲತೆ ಅಥವಾ ಅಸ್ವಸ್ಥತೆಯಿಂದ ಬಳಲುವುದೇ ಇಲ್ಲವೆಂಬುದು ಒಮ್ಮುಖವಾದ ಅಭಿಪ್ರಾಯವಾದೀತು.
ಅನುತ್ಪಾದಕವೆಂದು ಪರಿಗಣಿಸಲ್ಪಟ್ಟ ಮಹಿಳೆಯರ ಕೆಲಸಗಳೆಲ್ಲವೂ ಗೃಹ ಕೃತ್ಯಗಳಿಗೆ ಸೀಮಿತವಾಗಿದ್ದ ಕಾಲಘಟ್ಟದಲ್ಲಿ ಅಗತ್ಯ ಬಿದ್ದಾಗ, ಅನಿವಾರ್ಯವಾದಾಗಲೆಲ್ಲ ವಿಶ್ರಾಂತಿ ಪಡೆಯುವ ಅವಕಾಶ ಮನೆಯಲ್ಲಿರುತ್ತಿತ್ತು. ಆದರೆ ಔಪಚಾರಿಕವಾಗಿ ವೃತ್ತಿಪರ ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ಇಂಥದ್ದೊಂದು ವಿರಾಮ ಅನಿವಾರ್ಯವೇ ಆದರೂ ಅವಕಾಶ ಇಲ್ಲವಾಗಿರುವುದು ಕೊರತೆಯೇ ಸರಿ.
“ಮಹಿಳೆಯರ ಋತುಸ್ರಾವ ಅಂಗವೈಕಲ್ಯವಲ್ಲ… ಅದು ಅವರ ಜೀವನದ ನೈಸರ್ಗಿಕ ಭಾಗವಾಗಿದೆ” ಎಂಬ ಮಹಿಳಾ ರಾಜಕಾರಣಿಯೊಬ್ಬರ ಮಾತು ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯೇ ವಿಚಿತ್ರವೆನಿಸುತ್ತದೆ. ಋತುಚಕ್ರದ ರಜೆಯ ಪ್ರಸ್ತಾವನೆ ಮಹಿಳೆಗೆ ಸಿಗಬೇಕಾದ ಸೌಲಭ್ಯವೆಂಬುದನ್ನರಿತು ಪೋಷಿಸಬೇಕಾದ ಮಹಿಳಾ ಪ್ರತಿನಿಧಿಯೇ ಅದಕ್ಕೆ ವಿರೋಧ ವ್ಯಕ್ತಪಡಿಸಿರುವುದು ವಿಷಾದನೀಯ. “ಮಹಿಳೆಯರಿಗೆ ಸಮಾನ ಅವಕಾಶಗಳನ್ನು ನಿರಾಕರಿಸುವ ಪ್ರಸ್ತಾವನೆಯನ್ನು ನಾವು ಒಪ್ಪುವುದಿಲ್ಲ” ಎಂಬ ವಾದವು ಮಹಿಳೆಯರಿಗೆ ಸಮಾನತೆ ದೊರೆಯುವಂತಾಗಲು ಇನ್ನೂ ಕೈಗೆಟುಕದೆ ಉಳಿದ ಮತ್ತು ಸಿಗಬೇಕಾದ ಸೌಲಭ್ಯಗಳ ಬಗೆಗೆ ನಮಗಿರುವ ವಿಸ್ಮೃತಿ ಎಂದರೆ ತಪ್ಪಾಗಲಾರದು.
ನಾವೆಲ್ಲರೂ ಅರಿಯಬೇಕಾದ ಮೊದಲನೇ ವಿಚಾರವೆಂದರೆ, ಸೌಲಭ್ಯವೆಂಬುದು ಎಂದಿಗೂ ಹೇರಿಕೆಯಲ್ಲ. ಸೌಲಭ್ಯವೆಂದರೆ ಅಗತ್ಯಕ್ಕೆ ತಕ್ಕಂತೆ ಲಭ್ಯವಿರುವ ಅವಕಾಶವನ್ನು ಬಳಸಿಕೊಳ್ಳಲು ಇರುವ ಸಾಧ್ಯತೆಯಷ್ಟೇ. ಸೌಲಭ್ಯವಿದ್ದ ಮಾತ್ರಕ್ಕೆ ಎಲ್ಲರೂ ಅದನ್ನು ಬಳಸಿಕೊಳ್ಳಲೇಬೇಕೆಂಬುದು ನಿಯಮವೂ ಅಲ್ಲ; ಅಗತ್ಯವಿದ್ದರೂ ಇಲ್ಲದಿದ್ದರೂ ಎಲ್ಲರೂ ಅದನ್ನು ಬಳಸಿಕೊಂಡೇ ತೀರುತ್ತಾರೆ ಎಂಬುದು ವಾಸ್ತವವೂ ಅಲ್ಲ. ನಾವಿಲ್ಲಿ ಮುಟ್ಟಿನ ದಿನಗಳಲ್ಲಿ ರಜೆಯ ಅಗತ್ಯವಿರುವ ಬಹುಸಂಖ್ಯಾತ ಮಹಿಳಾ ವರ್ಗವನ್ನು ಗಮನದಲ್ಲಿರಿಸಿಕೊಂಡು ಸೌಲಭ್ಯ ನೀಡಬೇಕಿದೆಯೇ ವಿನಹ ಅದರ ಅಗತ್ಯವಿಲ್ಲದ ಅತಿ ಕಡಿಮೆ ಸಂಖ್ಯೆಯ ಉಳಿದ ಮಹಿಳೆಯರನ್ನು ಉದಾಹರಿಸುವ ಮೂಲಕ ಅಲ್ಲ ಎಂಬುದು ಕನಿಷ್ಠ ಸಾಮಾನ್ಯ ಪ್ರಜ್ಞೆಗೆ ಸಂಬಂಧಿಸಿದ ಸಂಗತಿ. ಇಂತಹ ಏಕಮುಖವಾದ ಅಭಿಪ್ರಾಯಗಳು ಬಹು ಸಂಖ್ಯಾತ ದುರ್ಬಲರ ಸಮಸ್ಯೆಗಳನ್ನಲ್ಲದೆ ಅಲ್ಪಸಂಖ್ಯಾತ ಪ್ರಬಲ ವರ್ಗದವರ ಸಮಸ್ಯೆಗಳನ್ನು ಮಾತ್ರ ನಿಜವಾದ ಸಮಸ್ಯೆಗಳೆಂದು ಪರಿಗಣಿಸುವ ಬಂಡವಾಳಶಾಹಿ ಅಥವಾ ಪ್ರಗತಿ ವಿರೋಧಿ ಧೋರಣೆಯನ್ನು ಪ್ರತಿಬಿಂಬಿಸುತ್ತವೆ.
ಇದನ್ನೂ ಓದಿ ಈ ದಿನ ಸಂಪಾದಕೀಯ | ಮುಟ್ಟು ಅಂಗವೈಕಲ್ಯವಲ್ಲ; ಸ್ಮೃತಿ ಇರಾನಿ ಹೇಳಿಕೆ ಯಾರನ್ನು ಮೆಚ್ಚಿಸಲು?
ಮುಟ್ಟಿನ ರಜೆಯು ಉದ್ಯೋಗಿಗಳಲ್ಲಿ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಕಾರಣವಾಗಬಹುದು ಎಂಬ ನಮ್ಮ ಪ್ರಜಾಪ್ರತಿನಿಧಿಗಳ ಪ್ರಜ್ಞಾವಂತಿಕೆ ಮೆಚ್ಚುವಂಥದ್ದೇ. ಆದರೆ ನಿಸರ್ಗ ಸಹಜವೇ ಆದ ಮುಟ್ಟಿನ ಸಂದರ್ಭದಲ್ಲಿ ರಜೆ ಪಡೆಯುವ ಮಹಿಳೆಯರ ವಿರುದ್ಧ ಅದೇ ಕಾರಣದಿಂದಾಗಿ ತಾರತಮ್ಯಗಳಾಗದಂತೆ ನೋಡಿಕೊಳ್ಳುವ ಲಿಂಗಸೂಕ್ಷ್ಮ ಅರಿವು ಹಾಗೂ ಜಾಗೃತಿಯನ್ನು ನಮ್ಮ ಪುರುಷ ಪ್ರಧಾನ ಸಮಾಜದಲ್ಲಿ ಮೂಡಿಸುವುದೂ ತಮ್ಮ ಕರ್ತವ್ಯವೇ ಹೌದೆಂಬುದನ್ನು ಮರೆಯಬಾರದು. ಸಮಾಜಕ್ಕೆ ಯಾವುದೇ ಸೌಲಭ್ಯವೊಂದನ್ನು ನೀಡುವಾಗ ನೊಂದವರ ಪರವಾದ ಮನಸ್ಥಿತಿ ಇರಬೇಕಾದದ್ದು ಅತೀ ಮುಖ್ಯ. ಇಲ್ಲದಿದ್ದರೆ “ನೊಂದವರ ನೋವ ನೋಯದವರೆತ್ತ ಬಲ್ಲರು?” ಎಂಬಂತಾಗುತ್ತದೆ. ಮಹಿಳೆಯರ ಸಮಸ್ಯೆಗಳ ಕುರಿತ ಇಂಥ ವಿಸ್ಮೃತಿಗಳಿಗೆ ಇನ್ನಾದರೂ ತೆರೆ ಬೀಳಲಿ. ಮುಟ್ಟಿನ ರಜೆಯ ಪ್ರಸ್ತಾವನೆಗೆ ಅಂಗೀಕಾರ ದೊರೆಯಲಿ.

ಡಾ ದಿನಮಣಿ ಬಿ ಎಸ್
ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜಶಾಸ್ತ್ರ ಸಹಾಯಕ ಪ್ರಾಧ್ಯಾಪಕಿ