ರೈತ ವಿರೋಧಿ ಯಾರು- ಬಿಜೆಪಿಯೇ ಅಥವಾ ವಕ್ಫ್‌ ಮಂಡಳಿಯೇ? ಇಲ್ಲಿದೆ ಕಂಪ್ಲೀಟ್‌ ಡೀಟೇಲ್ಸ್‌

Date:

Advertisements
ಈಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿಚಾರಗಳು ಬೇಕು. ಅದಕ್ಕಾಗಿಯೇ, ವಕ್ಫ್‌ ಆಸ್ತಿ ವಿಚಾರವನ್ನು ವಿವಾದಕ್ಕೆ ಸಿಲುಕಿಸಿ, ರಾಜ್ಯದಲ್ಲಿ ಗದ್ದಲ ಸೃಷ್ಟಿಸುತ್ತಿದೆ. ಜೊತೆಗೆ, ನೆರೆಯ ರಾಜ್ಯ ಮಹಾರಾಷ್ಟ್ರದ ಜನರ ಗಮನವನ್ನೂ ಸೆಳೆದು, ಕೋಮು ರಾಜಕಾರಣಕ್ಕೆ ಈ ವಿವಾದವನ್ನ ಬಳಸಿಕೊಳ್ಳುತ್ತಿದೆ.

ರಾಜ್ಯದಲ್ಲಿ ಉಪಚುನಾವಣೆಯ ನಡುವೆ ವಕ್ಫ್‌ ಆಸ್ತಿ ವಿಚಾರವನ್ನು ಬಿಜೆಪಿ ವಿದಾದವನ್ನಾಗಿ ಮಾಡಿದೆ. ವಕ್ಫ್‌ ಮಂಡಳಿಯು ರೈತರ ಆಸ್ತಿಯನ್ನ ಕಬಳಿಸುತ್ತಿದೆ. ರೈತರು ಆತಂಕದಲ್ಲಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಕುಮ್ಮಕ್ಕಿನಿಂದ ವಕ್ಫ್‌ ಬೋರ್ಡ್‌ ರೈತರ ಆಸ್ತಿಯನ್ನು ತನ್ನ ವಶಕ್ಕೆ ಪಡೆಯುತ್ತಿದೆ ಎಂದು ಬಿಜೆಪಿ ಆರೋಪಿಸಿದೆ. ವಿವಾದ ಸೃಷ್ಟಿಸಿ, ಗದ್ದಲ, ಸಂಘರ್ಷ, ಗಲಭೆಗಳನ್ನು ಹುಟ್ಟುಹಾಕುತ್ತಿದೆ. ಆದರೆ, ವಾಸ್ತವವೇ ಬೇರೆ ಇದೆ.

ಅಂದಹಾಗೆ, ವಕ್ಫ್‌ ಒಂದು ಮುಸ್ಲಿಮರ ಧಾರ್ಮಿಕ ಮಂಡಳಿ. ಕೇಂದ್ರ ಸರ್ಕಾರದ ವಕ್ಫ್‌ ಕಾಯ್ದೆಯಡಿ ಅದು ಕೆಲಸ ಮಾಡುತ್ತಿದೆ. ವಕ್ಫ್‌ ಬೋರ್ಡ್‌ – ಜನಸಮುದಾಯದಿಂದ ದಾನವಾಗಿ ದೊರೆತ ಆಸ್ತಿಯನ್ನ ಬಳಸಿಕೊಂಡು, ಅದರಿಂದ ಬರುವ ಆದಾಯವನ್ನ ಮುಸ್ಲಿಂ ಸಮುದಾಯದ ಕಲ್ಯಾಣಕ್ಕಾಗಿ ಬಳಸಿಕೊಳ್ಳಬೇಕು ಎಂದು ವಕ್ಫ್‌ ನಿಯಮಗಳು ಹೇಳುತ್ತವೆ. ಅದರಂತೆಯೇ ವಕ್ಫ್‌ ಬೋರ್ಡ್‌ ಕೆಲಸ ಮಾಡುತ್ತಿದೆ. ಮುಖ್ಯ ವಿಚಾರ ಅಂದರೆ, 2016ರಲ್ಲಿ ಮೋದಿ ಸರ್ಕಾರವೇ ದೇಶಾದ್ಯಂತ ವಕ್ಫ್‌ ಬೋರ್ಡ್‌ನ ಆಸ್ತಿಯನ್ನು ಉಳಿಸಬೇಕು ಮತ್ತು ರಕ್ಷಿಸಬೇಕು ಅಂತ ಸುತ್ತೋಲೆಯನ್ನ ಹೊರಡಿಸಿತ್ತು. ಅದರ ಅನುಸಾರವಾಗಿಯೇ ರಾಜ್ಯ ಸರ್ಕಾರ 2017ರಲ್ಲಿ ವಕ್ಫ್‌ ಆಸ್ತಿ ಉಳಿವಿಗಾಗಿ ನಿಯಮಗಳನ್ನು ರೂಪಿಸಿತ್ತು.

ಈಗ, ಕೆಲವು ರೈತರ ಪಹಣಿಗಳಲ್ಲಿ ವಕ್ಫ್‌ ಆಸ್ತಿ ಎಂದು ನಮೂದಾಗುತ್ತಿದೆ ಎಂಬ ವಿಚಾರ ಚರ್ಚೆಯಾಗುತ್ತಿದೆ. ರಾಜ್ಯ ಸರ್ಕಾರ ರೈತರ ಜಮೀನಿಗ ವಕ್ಫ್‌ ಆಸ್ತಿ ಅಂತ ಹಾಕಿ, ರೈತರ ಜಮೀನನ್ನ ಕಬಳಿಸಲಿಕ್ಕೆ ಮುಂದಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಅಷ್ಟೇ ಅಲ್ಲ, ರೈತರನ್ನು ಸಂಘಟಿಸಿ ಜಿಲ್ಲಾಧಿಕಾರಿಗಳ ಮುಂದೆ ಪ್ರತಿಭಟನೆ ಹಮ್ಮಿಕೊಂಡು ಪ್ರಚಾರ ಗಿಟ್ಟಿಸುತ್ತಿದೆ. ರೈತರು ಹಾಗೂ ಜನಸಾಮಾನ್ಯರಲ್ಲಿ ಗೊಂದಲವನ್ನು ಹುಟ್ಟುಹಾಕಿ, ವಿವಾದ ಸೃಷ್ಟಿಸಿದೆ.

Advertisements

ಜೊತೆಗೆ, ವಕ್ಫ್‌ಗೆ ಪರಮಾಧಿಕಾರವಿದೆ. ವಕ್ಫ್‌ ನಾಳೆ ಯಾರ ಆಸ್ತಿಯನ್ನ ಬೇಕಾದರೂ ತನ್ನ ಆಸ್ತಿ ಎಂದು ವಶಕ್ಕೆ ಪಡೆದುಕೊಳ್ಳಬಹುದು. ಇಡೀ ರಾಜ್ಯವೇ ನಮ್ಮದು ಅಂತ ಹೇಳಬಹುದು. ಕೊನೆಗೆ ನಮ್ಮನ್ನೇ ಹೊರದಬ್ಬಬಹುದು ಎಂಬಂತಹ ವದಂತಿ, ಸುಳ್ಳು ನರೆಟೀವ್‌ಗಳನ್ನ ಹರಿಬಿಡಲಾಗುತ್ತಿದೆ.

ಆದರೆ, ವಾಸ್ತವ ಹಾಗಿಲ್ಲ. ವಕ್ಫ್‌ಗೆ ಯಾವುದೇ ಪರಮಾಧಿಕಾರ ಇಲ್ಲ. ಈ ಹಿಂದೆ, ಯಾವುದಾದರೂ ಆಸ್ತಿಯನ್ನ ವಕ್ಫ್‌ಗೆ ಯಾರಾದರೂ ದಾನ ಮಾಡಿದ್ದು, ಆ ಭೂಮಿ ವಕ್ಫ್‌ ಆಸ್ತಿ ಅಂತ ಗೆಜೆಟ್ ಆಗಿದ್ದರೆ ಹಾಗೂ ಯಾವುದೇ ತಕರಾರು ಇಲ್ಲದೆ ವಕ್ಫ್‌ಗೆ ಹಸ್ತಾಂತರವಾಗಿದ್ದರೆ ಮಾತ್ರ, ಅದನ್ನ ವಕ್ಫ್‌ ಆಸ್ತಿ ಅಂತ ನೋಂದಣಿ ಮಾಡಲಾಗುತ್ತದೆ.

ಆ ಆಸ್ತಿಯನ್ನ ವಕ್ಫ್‌ ನಿರ್ವಹಣೆ ಮಾಡುತ್ತದೆ. ಅದರಿಂದ ಬರುವ ಆದಾಯವನ್ನು ಮುಸ್ಲಿಂ ಸಮುದಾಯದ ಮಕ್ಕಳ ಶಿಕ್ಷಣ, ಮಸೀದಿ ನಿರ್ವಹಣೆ, ಮದ್ರಾಸ, ಖಬರ್ ಸ್ಥಾನಗಳ ನಿರ್ವಹಣೆಗೆ ಬಳಸಿಕೊಳ್ಳುತ್ತದೆ. ಜೊತೆಗೆ, ವಕ್ಫ್‌ ಆಸ್ತಿಗಳನ್ನ ಸಂರಕ್ಷಿಸುವ ಜವಾಬ್ದಾರಿಯೂ ವಕ್ಫ್‌ ಬೋರ್ಡ್‌ನದ್ದಾಗಿದೆ. ಈ ಜವಾಬ್ದಾರಿಯನ್ನ ‘ವಕ್ಫ್‌ ಕಾಯ್ಡೆ’ಯ ಮೂಲಕ ಕೇಂದ್ರ ಸರ್ಕಾರವೇ ನೀಡಿದೆ.

ಆದಾಗ್ಯೂ, 3-4 ದಶಕಗಳಿಗೂ ಹಿಂದೆ ವಕ್ಫ್‌ ಅಪಾರ ಪ್ರಮಾಣದ ಆಸ್ತಿಯನ್ನ ಹೊಂದಿತ್ತು. ಆದರೆ, ಭೂಸುಧಾರಣೆ ಕಾಯ್ದೆಯೂ ಸೇರಿದಂತೆ ನಾನಾ ಕಾಯ್ದೆಗಳು ಜಾರಿಗೆ ಬಂದಾಗ, ವಕ್ಫ್‌ ಅನೇಕ ಆಸ್ತಿಯನ್ನ ಕಳೆದುಕೊಂಡಿದೆ ಅನ್ನುವುದು ಸತ್ಯ. ಅದರಲ್ಲೂ, ತನ್ನ ಹೆಚ್ಚಿನ ಆಸ್ತಿಯನ್ನ ರೈತರಿಗಾಗಿಯೇ ಬಿಟ್ಟುಕೊಟ್ಟಿದೆ ಎಂಬುದು ಗಮನಾರ್ಹವಾದ ಸಂಗತಿ.

ಕರ್ನಾಟಕದಲ್ಲಿ, ಕೇವಲ ಮೂರು ದಶಕಗಳ ಹಿಂದೆ 1.10 ಲಕ್ಷ ಎಕರೆಯಷ್ಟು ಭೂಮಿಯನ್ನ ವಕ್ಫ್‌ ಹೊಂದಿತ್ತು. ಆದರೆ, ಈಗ ಇಡೀ ರಾಜ್ಯದಲ್ಲಿ ವಕ್ಫ್‌ ಹೊಂದಿರುವುದು ಕೇವಲ 23 ಸಾವಿರ ಎಕರೆ ಮಾತ್ರ. ಉಳಿದ ಭೂಮಿಯನ್ನ ಸರ್ಕಾರ ಹಾಗೂ ರೈತರಿಗಾಗಿ ವಕ್ಫ್‌ ಬಿಟ್ಟುಕೊಟ್ಟಿದೆ. 1974ರಲ್ಲಿ ಭೂಸುಧಾರಣಾ ಕಾಯ್ದೆ ಜಾರಿಗೆ ಬಂದಾಗ ಹಾಗೂ ಇನಾಂ ರದ್ದತಿ ನಿಯಮ ಜಾರಿಯಾದ ಸಂದರ್ಭದಲ್ಲಿ, ವಕ್ಫ್‌ನ ಹಲವು ಭೂಮಿಯಲ್ಲಿ ರೈತ ಸಮುದಾಯ ಉಳುಮೆ ಮಾಡುತ್ತಿತ್ತು. ಆ ಜಮೀನನ್ನ ಯಾವುದೇ ತಕರಾರು ಇಲ್ಲದೆ, ರೈತರಿಗೆ ವಕ್ಫ್‌ ಬಿಟ್ಟುಕೊಟ್ಟಿತು. ವಕ್ಫ್‌ ಯಾವುದೇ ಆಕ್ಷೇಪ ಎತ್ತದ ಕಾರಣ, ನಿರಾಯಾಸವಾಗಿ ವಕ್ಫ್‌ನ ಭೂಮಿ ರೈತರ ಹೆಸರಿಗೆ ವರ್ಗವಾಯಿತು. ಆದರೆ, ಕೆಲವು ಪ್ರಬಲ ಜಾತಿಯ ಹಿಂದು ಭೂ ಮಾಲೀಕರು ತಮ್ಮ ಅಧೀನದಲ್ಲಿದ್ದ, ರೈತರು ಉಳುಮೆ ಮಾಡುತ್ತಿದ್ದ ಭೂಮಿಯನ್ನು ರೈತರಿಗೆ ಬಿಟ್ಟುಕೊಡಲು ಹಿಂದೇಟು ಹಾಕಿದ್ದರು, ಗದ್ದಲ ಸೃಷ್ಟಿಸಿದ್ದರು, ತಕರಾರು ಎತ್ತಿದ್ದರು ಎಂಬ ವಿಚಾರವನ್ನೂ ನಾವು ಮರೆಯುವಂತಿಲ್ಲ.

ಅದೇನೆ ಇರಲಿ, 2016ರಲ್ಲಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವೇ ವಕ್ಫ್‌ ಕಾಯ್ದೆಯಡಿ ವಕ್ಫ್‌ ಆಸ್ತಿಗಳನ್ನ ವಕ್ಫ್‌ ಬೋರ್ಡ್‌ ಸಂರಕ್ಷಣೆ ಮಾಡಬೇಕು. ಅದಕ್ಕಾಗಿ, ವಕ್ಫ್‌ ಬೋರ್ಡ್‌ಗೆ ಅಧಿಕಾರ ಮತ್ತು ಜವಾಬ್ದಾರಿ ನೀಡಲು ನಿಯಮಾವಳಿಗಳನ್ನು ರೂಪಿಸಬೇಕು ಅಂತ ಸುತ್ತೋಲೆಯನ್ನ ಹೊರಡಿಸಿತು. ಅದರಂತೆ, ಕಟ್ಟುನಿಟ್ಟಿನ ನಿಯಮಗಳನ್ನ ರೂಪಿಸಲಾಗಿದೆ.

ಹೀಗಾಗಿ, ವಕ್ಫ್‌ನ ಆಸ್ತಿಯಾಗಿ ಉಳಿದಿರುವ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು ವಕ್ಫ್‌ನ ಹೊಣೆ. ಆದರೂ, ಯಾರದ್ದೋ ಆಸ್ತಿಯನ್ನ ವಕ್ಫ್‌ ನೇರವಾಗಿ ಬಂದು ತನ್ನದೆಂದು ವಶಕ್ಕೆ ಪಡೆಯುವುದಿಲ್ಲ. ವಕ್ಫ್‌ ನ್ಯಾಯ ಮಂಡಳಿಯಲ್ಲಿ ಆ ಆಸ್ತಿಗಳ ವ್ಯಾಜ್ಯಗಳನ್ನ ಇತ್ಯರ್ಥ ಮಾಡಿಕೊಂಡು, ಬಳಿಕ ವಕ್ಫ್‌ಗೆ ಸಂಬಂಧಿಸಿದ ಆಸ್ತಿಯನ್ನ ವಕ್ಫ್‌ ವಶಕ್ಕೆ ಪಡೆಯಬಹುದು. ಒಂದು ವೇಳೆ, ವಕ್ಫ್ ನ್ಯಾಯ ಮಂಡಳಿಯ ಆದೇಶದ ಬಗ್ಗೆ ಆಕ್ಷೇಪಗಳಿದ್ದರೆ, ಅಂತಹ ಖಾಸಗಿ ವ್ಯಕ್ತಿಗಳು ಹೈಕೋರ್ಟ್‌, ಸುಪ್ರೀಂ ಕೋರ್ಟ್‌ವರೆಗೂ ಮೇಲ್ಮನವಿ ಸಲ್ಲಿಸಬಹುದು. ಆದರೆ, ವಕ್ಫ್‌ ನ್ಯಾಯಮಂಡಳಿಯ ಆದೇಶವೇ ಅಂತಿಮವೆಂದು ಬಿಜೆಪಿ ಸುಳ್ಳು ಹರಿಬಿಡುತ್ತಿದೆ. ರೈತರಲ್ಲಿ ಗೊಂದಲ ಉಂಟು ಮಾಡುತ್ತಿದೆ. ಆ ಮೂಲಕ ಹಿಂದು-ಮುಸ್ಲಿಮರಲ್ಲಿ ದ್ವೇಷಾಸೂಯೆಯನ್ನು ಬಿತ್ತುತ್ತಿದೆ.

ಜೊತೆಗೆ, ಹಿಂದುಗಳ ಭೂಮಿ, ರೈತರ ಭೂಮಿಯನ್ನ ವಕ್ಫ್‌ ತನ್ನ ವಶಕ್ಕೆ ಪಡೆದುಕೊಳ್ಳಲು ಮುಂದಾಗಿದೆ ಎಂಬ ಆರೋಪವನ್ನೂ ಬಿಜೆಪಿ ಎಗ್ಗಿಲ್ಲದೆ ಹರಡುತ್ತಿದೆ. ಆದರೆ, ವಕ್ಫ್‌ ಆಸ್ತಿ ವಿವಾದ ಹೆಚ್ಚಾಗಿ ಇರುವುದು ಮುಸ್ಲಿಂ ಸಮುದಾಯದ ಒಳಗೆಯೇ ಎಂಬುದು ಗಮನಾರ್ಹ. ಈಗ ವಕ್ಫ್‌ ಆಸ್ತಿಯನ್ನು ಹೆಚ್ಚಾಗಿ ಒತ್ತುವರಿ ಮಾಡಿಕೊಂಡಿರುವವರು ರೈತರಲ್ಲ, ಪ್ರಭಾವಿ ಮುಸ್ಲಿಂ ಮುಖಂಡರು. ಅವರು ಕಬ್ಜ ಮಾಡಿಕೊಂಡಿರುವ ಭೂಮಿಯನ್ನು ವಕ್ಫ್‌ ಮರಳಿ ಪಡೆಯಲು ಮುಂದಾಗಿದೆ. ಅಂತಹ ಹಲವಾರು ವ್ಯಾಜ್ಯಗಳು ‘ವಕ್ಫ್‌ ನ್ಯಾಯ ಮಂಡಳಿ’ಯ ಮುಂದಿವೆ. ಕಾನೂನಾತ್ಮಕವಾಗಿ ವಕ್ಫ್‌ ತನ್ನ ಭೂಮಿಯನ್ನು ಮರಳಿ ಪಡೆಯುವ ಪ್ರಯತ್ನದಲ್ಲಿದೆ. ಆದರೆ, ಅದನ್ನ ಮರೆಮಾಚುತ್ತಿರುವ ಬಿಜೆಪಿ, ವಕ್ಫ್‌ ರೈತ ವಿರೋಧಿ, ರೈತರ ಭೂಮಿಯನ್ನು ಕಿತ್ತುಕೊಳ್ಳಲು ಮುಂದಾಗಿದೆ ಎಂದು ಆರೋಪ ಮಾಡುತ್ತಿದೆ.

ಕೆಲ ರೈತರೂ ವಕ್ಫ್‌ ಆಸ್ತಿಯಲ್ಲಿ ಉಳುಮೆ ಮಾಡುತ್ತಿದ್ದರು. ಆದರೆ, ಹೆಚ್ಚಿನ ಆಸ್ತಿ ಭೂಸುಧಾರಣೆ, ಇನಾಂ ರದ್ದತಿ ಕಾಯ್ದೆಗಳ ಅಡಿಯಲ್ಲಿ ರೈತರ ಪಾಲಿಗೆ ಹೋಗಿವೆ. ಆದಾಗ್ಯೂ, ಈ ಕಾಯ್ದೆಗಳ ಅಡಿಯಲ್ಲಿ ರೈತರಿಗೆ ಭೂಮಿ ಹಂಚಿಕೆ ಆದ ಬಳಿಕವೂ ವಕ್ಫ್‌ನ ಕೆಲ ಭೂಮಿಯನ್ನು ಕೆಲ ರೈತರು ಆಕ್ರಮಿಸಿಕೊಂಡು, ಉಳುಮೆ ಮಾಡುತ್ತಿದ್ದಾರೆ. ಅಂತಹ ಭೂಮಿಯ ಪಹಣಿಯಲ್ಲಿ ವಕ್ಫ್‌ ಆಸ್ತಿ ಎಂದು ಉಲ್ಲೇಖವಾಗಿರುವುದು ಸಹಜ. ಅಂತಹ ಸಂದರ್ಭದಲ್ಲಿ ತಾಲೂಕು ಕಚೇರಿಯಲ್ಲಿ ರೈತರು ಅರ್ಜಿ ಸಲ್ಲಿಸಿ, ಅಗತ್ಯ ದಾಖಲೆಗಳನ್ನ ಒದಗಿಸಿ, ಆ ಭೂಮಿಯನ್ನ ಸಂಪೂರ್ಣವಾಗಿ ತಮ್ಮ ಹೆಸರಿಗೆ ಮಾಡಿಕೊಳ್ಳಬಹುದು. ಒಂದು ವೇಳೆ, ಆ ಭೂಮಿ ರೈತರದ್ದಲ್ಲ, ಅದು ಅವರ ಹೆಸರಿಗೆ ಪೋಡಿ ಆಗಿಲ್ಲ. ಬದಲಾಗಿ, ವಕ್ಫ್‌ನದ್ದು ಎಂದು ಸಾಬೀತಾದರೆ, ಅದು ವಕ್ಫ್‌ ಬೋರ್ಡ್‌ ಅಧೀನಕ್ಕೆ ಒಳಪಡುತ್ತದೆ. ಇಂತಹ ಪ್ರಕರಣಗಳು ತೀರಾ ವಿರಳ.

ಆದರೆ, ಇಂತಹ ಸಮಸ್ಯೆಯೊಳಗೆ ರಾಜಕಾರಣಿಗಳು ಪ್ರವೇಶಿಸಿ, ನಿಯಮಾನುಸಾರ ಬಗೆಹರಿಯಬಹುದಾದ ವಿಚಾರವನ್ನ ವಿವಾದವನ್ನಾಗಿ ಮಾರ್ಪಡಿಸುತ್ತಿದ್ದಾರೆ. ವಕ್ಫ್‌ ಕಾಯ್ದೆ, ಪಹಣಿ, ನೋಂದಣಿಗಳನ್ನು ಗಮನಿಸದೆ ಸಂಘರ್ಷ ಹುಟ್ಟುಹಾಕುತ್ತಿದ್ದಾರೆ.

ಸ್ಪಷ್ಟ ವಿಚಾರ ಎಂದರೆ, ಯಾವುದೇ ಆಸ್ತಿಯನ್ನು ವಕ್ಫ್‌ ತನ್ನದೆಂದು ಹೇಳುವುದಿಲ್ಲ. ಆ ರೀತಿ ಹೇಳಿಕೆಯಿಂದಾಗಿ ಯಾವುದೇ ಭೂಮಿಯನ್ನು ತನ್ನ ವಶಕ್ಕೆ ಪಡೆಯಲು ಸಾಧ್ಯವಿಲ್ಲ. ಖಾಸಗಿ ವ್ಯಕ್ತಿಗಳು ಅನುಭವಿಸುತ್ತಿರುವ ಭೂಮಿಯು ವಕ್ಫ್‌ ಆಸ್ತಿಯೇ ಆಗಿದ್ದರೂ, ಆ ಭೂಮಿಯನ್ನು ಕಾನೂನು ಹೋರಾಟದ ಮೂಲಕವೇ ವಕ್ಫ್‌ ತನ್ನ ವಶಕ್ಕೆ ಪಡೆಯಬೇಕು. ಅದೇ ನಿಯಮ. ವಕ್ಫ್‌ ಅದನ್ನೇ ಪಾಲಿಸುತ್ತಿದೆ.

ಗಮನಾರ್ಹ ಸಂಗತಿ ಎಂದರೆ, ರಾಜ್ಯದಲ್ಲಿ ಬಿಜೆಪಿ ಆಡಳಿತವಿದ್ದ 2019-23ರ ನಡುವೆ 200ಕ್ಕೂ ಹೆಚ್ಚು ನೋಟಿಸ್‌ಗಳನ್ನ ಸರ್ಕಾರವೇ ಜಾರಿಗೊಳಿಸಿ, ವಕ್ಫ್‌ ಆಸ್ತಿಯನ್ನ ಮರಳಿ ವಕ್ಫ್‌ಗೆ ಕೊಡಿಸಿದೆ. ಹಾಲಿ ವಿಪಕ್ಷ ನಾಯಕ ಆರ್‌ ಅಶೋಕ್ ಬಿಜೆಪಿ ಸರ್ಕಾರದಲ್ಲಿ ಕಂದಾಯ ಮಂತ್ರಿಯಾಗಿದ್ದರು. ಅವರ ನೇತೃತ್ವದಲ್ಲಿಯೇ ಹಲವು ರೈತರಿಗೆ ನೋಟಿಸ್‌ ಕೊಟ್ಟು, ವಕ್ಫ್‌ ಆಸ್ತಿಯನ್ನ ಮರಳಿ ವಕ್ಫ್‌ ಮಂಡಳಿಯ ಅಧೀನಕ್ಕೆ ಕೊಡಿಸಿದ್ದಾರೆ. ಇದೆಲ್ಲವೂ ಕಾನೂನಿನ ಅಡಿಯಲ್ಲಿಯೇ ನಡೆದಿದೆ. ಈಗಲೂ ಕೆಲವು ಪ್ರಕರಣಗಳಲ್ಲಿ ಇದೇ ನಡೆಯುತ್ತಿದೆ. ಒತ್ತುವರಿ, ಕಬಳಿಕೆಯಾದ ಭೂಮಿಯನ್ನು ಅದರ ನೈಜ ವಾರಸುದಾರರಿಗೆ ಮರಳಿ ಕೊಡುವುದು, ಕೊಡಿಸುವುದು ನಿರಂತರ ಪ್ರಕ್ರಿಯೆ.

ಈ ವರದಿ ಓದಿದ್ದೀರಾ?: ಬಿಜೆಪಿ ಕೋಮುದ್ವೇಷ ಮತ್ತು ವಕ್ಫ್ ಆಸ್ತಿ ವಿವಾದ

ಅಂದಹಾಗೆ, ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹಾಲಿ ಸಂಸದ ಬಸವರಾಜ ಬೊಮ್ಮಾಯಿ ಅವರು 2022ರಲ್ಲಿ, ಮುಸ್ಲಿಂ ಸಮುದಾಯದ ಕೆಎಂಡಿಸಿ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು. ಆಗ, ”ವಕ್ಫ್‌ ಆಸ್ತಿ ಅಲ್ಲಾಹನದ್ದು. ಅದರಲ್ಲಿ ಕಾಂಪ್ರಮೈಸ್ ಇರಬಾರದು. ನೀವು ಕಾಂಪ್ರಮೈಸ್‌ ಆದಲ್ಲಿ ನಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ಊಪರ್‌ವಾಲಾ(ಮೇಲಿನವನು) ನೋಡುತ್ತಿದ್ದಾನೆ. ಖುದಾನ ಜಮೀನನ್ನು ಲೂಟಿ ಮಾಡುತ್ತಿರಬೇಕಾದರೆ ನೀವೆಲ್ಲ ಕಣ್ಣು ಮುಚ್ಚಿ ಕುಳಿತರೆ, ಲೂಟಿ ಮಾಡುವವನಿಗಿಂತ ಲೂಟಿ ಮಾಡಲು ಬಿಟ್ಟವರೇ ದೊಡ್ಡ ಮುಜ್ರಿಂ(ತಪ್ಪಿತಸ್ಥ) ಆಗುತ್ತಾರೆ. ಖುದಾನ ಜಮೀನುಗಳನ್ನು ರಕ್ಷಿಸುವ ಅವಕಾಶ ಲಭಿಸಿರುವ ನೀವು ಪುಣ್ಯವಂತರು” ಎಂದಿದ್ದರು.

”ಕರ್ನಾಟಕದಲ್ಲಿ ಸುಮಾರು 2,000 ಕೋಟಿ ವಕ್ಫ್ ಆಸ್ತಿಯನ್ನು ಈಗಾಗಲೇ ಖಾಸಗಿಯವರು ತಮ್ಮದಾಗಿಸಿಕೊಂಡಿದ್ದಾರೆ. ಅಲ್ಲಿ ಇಲ್ಲಿ ಅಲ್ಪಸ್ವಲ್ಪ ಜಮೀನು ಒಳಗೆ ಹಾಕಿದ್ದರೆ ಬೇರೆ ವಿಷಯ. ಸಂಪೂರ್ಣ ಆಸ್ತಿಗಳನ್ನೇ ಖಾಸಗಿಯವರು ಒಳಗೆ ಹಾಕಿಕೊಂಡಿದ್ದಾರೆ. ಇನ್ನೀಗ ಆಸ್ತಿಯ ಒಂದು ಮೂಲೆಯಲ್ಲಿ ನಾವು ಮಸೀದಿ ಕಟ್ಟುತ್ತೇವೆ ಎಂದರೆ ಅವರು ನಿಮಗೆ ಅವಕಾಶ ಕೊಡುತ್ತಾರಾ? ಆದ್ದರಿಂದ ಖಾಸಗಿಯವರು ವಶಪಡಿಸಿಕೊಂಡಿರುವ ವಕ್ಫ್‌ನ ಎಷ್ಟು ಆಸ್ತಿಗಳಿವೆಯೋ ಅದೆಲ್ಲವೂ ಮತ್ತೆ ವಕ್ಫ್‌ ಬೋರ್ಡಿಗೆ ಬರುವವರೆಗೂ ನೀವೆಲ್ಲ ಸುಮ್ಮನೆ ಕೂರಬಾರದು. ನಿಮ್ಮ ಜೊತೆಗೆ ನಾವಿದ್ದೇವೆ” ಎಂದು ಅಬ್ಬರದ ಭಾಷಣ ಮಾಡಿದ್ದರು.

ಆದರೆ, ಈಗ ರಾಜ್ಯದಲ್ಲಿ ಉಪಚುನಾವಣೆ ನಡೆಯುತ್ತಿದೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ನಡೆಯುತ್ತಿದೆ. ಇಂತಹ ಸಮಯದಲ್ಲಿ ಮತದಾರರನ್ನು ತನ್ನತ್ತ ಸೆಳೆಯಲು ಬಿಜೆಪಿಗೆ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ವಿಚಾರಗಳು ಬೇಕು. ಅದಕ್ಕಾಗಿಯೇ, ವಕ್ಫ್‌ ಆಸ್ತಿ ವಿಚಾರವನ್ನು ವಿವಾದಕ್ಕೆ ಸಿಲುಕಿಸಿ, ರಾಜ್ಯದಲ್ಲಿ ಗದ್ದಲ ಸೃಷ್ಟಿಸುತ್ತಿದೆ. ಜೊತೆಗೆ, ನೆರೆಯ ರಾಜ್ಯ ಮಹಾರಾಷ್ಟ್ರದ ಜನರ ಗಮನವನ್ನೂ ಸೆಳೆದು, ಕೋಮು ರಾಜಕಾರಣಕ್ಕೆ ಈ ವಿವಾದವನ್ನ ಬಳಸಿಕೊಳ್ಳುತ್ತಿದೆ.

ಹಾಗೆ ನೋಡಿದರೆ, ರೈತ ವಿರೋಧಿ ವಕ್ಫ್‌ ಮಂಡಳಿಯಲ್ಲ. ಬದಲಾಗಿ, ಬಿಜೆಪಿ ಎಂದು ಸ್ಪಷ್ಟವಾಗಿ ಹೇಳಬಹುದು. ಅಭಿವೃದ್ಧಿ, ಕೈಗಾರಿಕೀಕರಣದ ಹೆಸರಿನಲ್ಲಿ ರೈತರ ಫಲವತ್ತಾದ ಭೂಮಿಯನ್ನು ಸರ್ಕಾರಗಳು ವಶಕ್ಕೆ ಪಡೆಯುತ್ತಿವೆ. ಅದನ್ನೂ ಉಚಿತವಾಗಿ, ತೀರಾ ಕಡಿಮೆ ಹಣಕ್ಕೆ ಬಂಡವಾಳಶಾಹಿಗಳಿಗೆ ಮಾರಾಟ ಮಾಡುತ್ತಿವೆ. ಬೆಂಗಳೂರಿನ ದೇವನಹಳ್ಳಿ ಬಳಿಯ ಚನ್ನರಾಯಪಟ್ಟಣದ ಬಳಿ ರೈತರ ಭೂಮಿಯನ್ನು ಸ್ವಾಧೀನಕ್ಕೆ ಪಡೆಯಲು ಕೆಐಆರ್‌ಡಿಬಿ ಮುಂದಾಗಿದೆ. ಅದನ್ನು ವಿರೋಧಿಸಿ ಬರೋಬ್ಬರಿ 2 ವರ್ಷಗಳಿಂದ ರೈತರು ಹೋರಾಟ ನಡೆಸುತ್ತಿದ್ದಾರೆ. ಆದರೂ, ಸರ್ಕಾರಗಳು ರೈತರ ಸಮಸ್ಯೆಯನ್ನ ಆಲಿಸುತ್ತಿಲ್ಲ. ಇಂತಹ ಹಲವಾರು ಪ್ರಕರಣಗಳು ದೇಶಾದ್ಯಂತ ಇವೆ.

ಇನ್ನು, ಇದೇ ಮೋದಿ ಸರ್ಕಾರ ಮೂರು ರೈತ ವಿರೋಧಿ ಕೃಷಿ ಕಾಯ್ದೆಗಳ ಜಾರಿಗೆ ತಂದಿತ್ತು. ರೈತರ ಏನು ಬೆಳೆಯಬೇಕು. ರೈತರ ಬೆಳೆವ ಬೆಳೆಗೆ ಎಷ್ಟು ಬೆಲೆ ನಿಗದಿ ಮಾಡಬೇಕು ಎಂಬುದೂ ಸೇರಿದಂತೆ ಇಡೀ ರೈತ ಸಮುದಾಯವನ್ನು ನಿಯಂತ್ರಿಸುವ ಅಧಿಕಾರವನ್ನ ಬಂಡವಾಳಶಾಹಿಗಳ ಕೈಗಿಡಲು ಮುಂದಾಗಿತ್ತು. ರೈತರ ನಿರಂತರ ಹೋರಾಟದ ಬಳಿಕ ತನ್ನ ರೈತ ವಿರೋಧಿ ನೀತಿಗಳನ್ನು ಮೋದಿ ಸರ್ಕಾರ ಹಿಂಪಡೆಯಿತು. ಆದರೆ, ಈಗ ಬಿಜೆಪಿ ತಾವೇ ರೈತರ ರಕ್ಷಕರು ಎಂಬಂತೆ ಬೊಬ್ಬೆ ಹೊಡೆಯುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X