ಯಡಿಯೂರಪ್ಪ ಇಂದು ಸಂಡೂರಿನಲ್ಲಿ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು “ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ. ಅವರು ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಮನಸ್ಸು ಮಾಡಿದ್ದರೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಯಡಿಯೂರಪ್ಪ ಜೈಲಿನಲ್ಲಿರುತ್ತಿದ್ದರು.
ಪೋಕ್ಸೊ ಪ್ರಕರಣದ ಆರೋಪಿ ಮಾಜಿ ಸಿಎಂ ಯಡಿಯೂರಪ್ಪ ಅವರು ಉಪಚುನಾವಣೆ ನಡೆಯುತ್ತಿರುವ ಮೂರು ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ. ಇದೇ ಸಮಯದಲ್ಲಿ ಅವರ ವಿರುದ್ಧ ಮತ್ತೊಂದು ಹಗರಣದ ತನಿಖಾ ವರದಿ ಬಂದಿದೆ. ಕೊರೋನಾ ಕಾಲದಲ್ಲಿ ಸ್ಥಳೀಯವಾಗಿ ತಯಾರಿಸಿದ ಪಿಪಿಇ ಕಿಟ್ 330ರೂಪಾಯಿಗೆ ಲಭ್ಯವಿದ್ದರೂ ಚೀನಾದಿಂದ 2000 ರೂಪಾಯಿಗೆ ತರಿಸಿಕೊಂಡು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಕೊರೋನಾ ಭ್ರಷ್ಟಾಚಾರ ಕುರಿತು ತನಿಖೆ ನಡೆಸುತ್ತಿರುವ ನ್ಯಾ. ಮೈಕೆಲ್ ಡಿಕುನ್ಹಾ ಆಯೋಗ ಹೇಳಿದೆ. 7ಸಾವಿರ ಕೋಟಿಯ ಬೃಹತ್ ಭ್ರಷ್ಟಾಚಾರ ಎಂದು ಕಾಂಗ್ರೆಸ್ ವಿರೋಧ ಪಕ್ಷದಲ್ಲಿದ್ದಾಗ ಆರೋಪಿಸಿತ್ತು. ಸ್ಯಾನಿಟೈಸರ್, ಬೆಡ್, ವೆಂಟಿಲೇಟರ್, ಖಾಸಗಿ ಆಸ್ಪತ್ರೆಗಳ ವೆಚ್ಚ ಹೀಗೆ ಎಲ್ಲರಲ್ಲೂ ಬ್ರಹ್ಮಾಂಡ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.
ಕೊರೋನಾ ಸಾಂಕ್ರಾಮಿಕದಲ್ಲಿ ಬಡವ, ಶ್ರೀಮಂತ ಎನ್ನದೇ ಎಲ್ಲರೂ ತತ್ತರಿಸಿದ ಸಮಯದಲ್ಲಿ ಯಡಿಯೂರಪ್ಪನವರ ಸರ್ಕಾರ ಜನರ ಹಣ ದೋಚುವ ದಂಧೆಗೆ ಇಳಿದಿತ್ತು. ದಿನಸಿ ಕಿಟ್‌ಗಳಿಗೆ ಪಕ್ಷದ ಚಿನ್ಹೆ ಹಾಕಿ ರಾಜಕೀಯ ಲಾಭಕ್ಕೆ ಹೊರಟಿತ್ತು ಬಿಜೆಪಿ. ಅಂಗನವಾಡಿಯ ಅಕ್ಕಿ, ಬೇಳೆಯನ್ನೂ ದುರ್ಬಳಕೆ ಮಾಡಿದ್ದರು. ತಮ್ಮ ಪಕ್ಷದ ಬೆಂಬಲಿಗರಿಗೆ ಮಾತ್ರ ಕಿಟ್ ಹಂಚುವ ದುಷ್ಟತನವನ್ನೂ ತೋರಿಸಿದ್ದರು. ಕೊರೋನಾ ಎರಡನೇ ಅಲೆ ಬರುತ್ತದೆ ಎಂದು ಗೊತ್ತಿದ್ದರೂ ಅದನ್ನು ಎದುರಿಸಲು ಯಾವುದೇ ಸರ್ಕಾರ ತಯಾರಿ ಮಾಡಿಕೊಂಡಿರಲಿಲ್ಲ. ದೇಶದಲ್ಲಿಯೇ ಅತ್ಯಂತ ದೊಡ್ಡ ಕೊರೋನಾ ಆಸ್ಪತ್ರೆ ಎಂದು ಪ್ರಚಾರ ಮಾಡಿ ಹಾಸಿಗೆ ಖರೀದಿಯಲ್ಲೂ ಭ್ರಷ್ಟಾಚಾರದ ವಾಸನೆ ಬಂದಿತ್ತು. ನಿಂತ ನಿಂತಲ್ಲೇ ಜನ ಆಂಬುಲೆನ್ಸ್, ವೆಂಟಿಲೇಟರ್ ಸಿಗದೇ ಸಾಯುತ್ತಿದ್ದಾಗ, ಹೆಣ ಸುಟ್ಟು ಸುಟ್ಟು ನಿತ್ರಾಣಗೊಂಡು ವಿದ್ಯುತ್ ಚಿತಾಗಾರಗಳೂ ಸ್ತಬ್ಧಗೊಂಡಿದ್ದವು. ಬೆಂಗಳೂರು ನಗರದ ಹೊರವಲಯದಲ್ಲಿ ಮೂರು ಕಡೆ ಬಯಲು ಸ್ಮಶಾನಗಳನ್ನು ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾಯಿತು. ಆ ಮಟ್ಟಿಗೆ ಅವ್ಯವಸ್ಥೆ ತಾಂಡವವಾಡಿತ್ತು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಕೊರೋನಾ ಕಾಲದ ವೈದ್ಯಕೀಯ ಪರಿಕರ ಖರೀದಿಯ ಹಗರಣದ ತನಿಖೆಗೆ ನ್ಯಾ ಡಿಕುನ್ಹಾ ಆಯೋಗ ರಚನೆ ಮಾಡಿದ್ದರು. ತಿಂಗಳ ಹಿಂದೆಯಷ್ಟೇ ಅದು ಮಧ್ಯಂತರ ವರದಿ ಕೊಟ್ಟಿತ್ತು. ಆಗಿನ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಸಿಎಂ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸಬೇಕು ಎಂದು ಶಿಫಾರಸ್ಸು ಮಾಡಿದೆ ಎಂಬ ಮಾಹಿತಿ ಇಂದಷ್ಟೇ ಹೊರಬಿದ್ದಿದೆ. ಇಷ್ಟಾದರೂ ಇಂದು ಸಂಡೂರಿನಲ್ಲಿ ಯಡಿಯೂರಪ್ಪ ಪ್ರಚಾರ ಭಾಷಣ ಮಾಡಿದ್ದಾರೆ. ನಿನ್ನೆ ಚನ್ನಪಟ್ಟಣದಲ್ಲೂ ಪ್ರಚಾರ ಮಾಡಿದ್ದಾರೆ. ಪೋಕ್ಸೊ ಆರೋಪಿಗೆ ಚುನಾವಣಾ ಪ್ರಚಾರ ನಡೆಸಲು ಅವಕಾಶ ಕೊಡಬಾರದು ಎಂದು ಪ್ರಗತಿಪರ ಮಹಿಳೆಯರು ಶುಕ್ರವಾರ ಮಹಿಳಾ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ. ಆದರೂ ಯಾವ ಲಜ್ಜೆಯೂ ಇಲ್ಲದೇ ಕ್ಷೇತ್ರದಲ್ಲಿ ಸುತ್ತಾಟ ನಡೆಸುತ್ತಿದ್ದಾರೆ. ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ.
ಪೋಕ್ಸೊ ಪ್ರಕರಣದಲ್ಲಿ ಯಡಿಯೂರಪ್ಪ ವಿರುದ್ಧ ಹಲವು ಸಾಕ್ಷ್ಯಾಧಾರಗಳು ಲಭಿಸಿದ್ದು ಚಾರ್ಜ್‌ಶೀಟ್ ಕೋರ್ಟ್‌ಗೆ ಸಲ್ಲಿಕೆಯಾಗಿದೆ. ನ್ಯಾಯಾಲಯ ಆರಂಭದಿಂದಲೂ ಯಡಿಯೂರಪ್ಪ ಅವರಿಗೆ ಸಂಪೂರ್ಣ ರಕ್ಷಣೆ ಕೊಟ್ಟಿದೆ. ಈ ಪೋಕ್ಸೊ ಆರೋಪಿಯನ್ನು ಬಂಧಿಸದೇ ವಿಚಾರಣೆ ನಡೆಸಿ ಎಂದು ನ್ಯಾಯಾಧೀಶರೇ ಹೇಳಿದ್ದಾರೆ. ಯಾಕೆಂದರೆ ಆತ ದೊಡ್ಡ ಮನುಷ್ಯ. ಅದು ಒಂದು ಕಡೆಗಿರಲಿ. ಇತಿಹಾಸ ಆತನನ್ನು ಒಬ್ಬ ಪೋಕ್ಸೊ ಪ್ರಕರಣದ ಆರೋಪಿತ ಎಂದೇ ನೆನಪಿಡುತ್ತದೆ. ಅಷ್ಟೇ ಯಡಿಯೂರಪ್ಪ ಜೈಲಿಗೆ ಹೋದ ಮುಖ್ಯಮಂತ್ರಿ ಎಂಬುದು ಇತಿಹಾಸದ ಪುಟ ಸೇರಿಯಾಗಿದೆ. ತನ್ನ ಪುತ್ರ ಚುನಾವಣೆಗೆ ನಿಲ್ಲುವ ಮುನ್ನವೇ ಗುತ್ತಿಗೆದಾರರಿಂದ ವಸೂಲಿಗಿಳಿದಿದ್ದ ಲೂಟಿಕೋರ. ಆತನೇ ಈಗ ರಾಜ್ಯ ಬಿಜೆಪಿಗೆ ಅಧ್ಯಕ್ಷ. ಅಪ್ಪನ ಭ್ರಷ್ಟಾಚಾರದ ನೆರಳಿನಲ್ಲಿ ಬೆಳೆದ ಮಗ ಮುಂದೆ ಅದೆಷ್ಟು ಲೂಟಿ ಮಾಡಲಿದ್ದಾನೋ ಊಹಿಸಬಹುದು.
ಯಡಿಯೂರಪ್ಪ ಇಂದು ಸಂಡೂರಿನಲ್ಲಿ ಗಣಿ ಲೂಟಿಕೋರ ಜನಾರ್ದನ ರೆಡ್ಡಿಯನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು “ಉಪ ಚುನಾವಣೆಯ ಫಲಿತಾಂಶ ಬಂದ ನಂತರ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ. ಸಿದ್ದರಾಮಯ್ಯ ಕೆಲ ದಿನಗಳಲ್ಲಿ ಜೈಲಿಗೆ ಹೋಗುತ್ತಾರೆ” ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಸರ್ಕಾರ ಅಡ್ಜೆಸ್ಟ್ ಮೆಂಟ್ ರಾಜಕಾರಣ ಮಾಡದೇ ಇದ್ದಿದ್ದರೆ ಲೋಕಸಭಾ ಚುನಾವಣೆಯ ಸಮಯದಲ್ಲಿ ಯಡಿಯೂರಪ್ಪ ಪೋಕ್ಸೊ ಕೇಸಿನಲ್ಲಿ ಜೈಲಿನಲ್ಲಿರುತ್ತಿದ್ದರು ಎಂಬುದು ಅವರ ಅಭಿಮಾನಿಗಳೂ ಹೇಳುವ ಮಾತು. ಕಳೆದ ಮಾರ್ಚ್‌ನಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ. ಸಿಐಡಿ ಅಧಿಕಾರಿಗಳು ಗಾಢ ನಿದ್ರೆಗೆ ಜಾರಿದ್ರು. ಅವರೇ ನಿದ್ರೆಗೆ ಜಾರಿದ್ರಾ ಅಥವಾ ಸರ್ಕಾರವೇ ಅವರಿಗೆ ನಿದ್ರೆ ಮಾತ್ರೆ ಹಾಕಿತ್ತಾ ಗೊತ್ತಿಲ್ಲ. ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದ್ರೆ ದೂರುದಾರೆ ಸತ್ತು, ಆಕೆಯ ಮಗ ಕೋರ್ಟ್ ಮೊರೆ ಹೋಗಬೇಕಾಯ್ತು. ಕೋರ್ಟ್ ಅರೆಸ್ಟ್ ವಾರೆಂಟ್ ಹೊರಡಿಸಿತ್ತು. ಅಷ್ಟರಲ್ಲಿ ಹೈಕೋರ್ಟ್ ನಿರೀಕ್ಷಣಾ ಜಾಮೀನು ಕೊಟ್ಟಿತ್ತು. ಅಷ್ಟೇ ಅಲ್ಲ ಯಡಿಯೂರಪ್ಪ ಅವರನ್ನು ಬಂಧಿಸದೇ ವಿಚಾರಣೆ ನಡೆಸಬೇಕು ಎಂದು ಸ್ವತಃ ನ್ಯಾಯಾಧೀಶರೇ ಹೇಳಿದ್ದಾರೆ.
ಇಷ್ಟಾದರೂ ಯಡಿಯೂರಪ್ಪ ಚುನಾವಣಾ ಪ್ರಚಾರಕ್ಕೆ ಯಾವ ಮುಖ ಹೊತ್ತುಕೊಂಡು ಹೋಗುತ್ತಿದ್ದಾರೆ ಎಂದು ಕೇಳಬಹುದು. 85ವರ್ಷ ದಾಟಿದ ಮುದುಕ ಅಪ್ರಾಪ್ತ ಬಾಲಕಿಯ ಮೈ ಮುಟ್ಟುವಾಗ ಹೊತ್ತ ಅದೇ ಮುಖ ಹೊತ್ತುಕೊಂಡು ಜನರ ಮುಂದೆ ನಿಂತಿದ್ದಾನೆ. ಅಷ್ಟೇ ಅಲ್ಲ ಲಜ್ಜೆ ಬಿಟ್ಟು ಸಿಎಂ ಸಿದ್ದರಾಮಯ್ಯ ಜೈಲಿಗೆ ಹೋಗ್ತಾರೆ ಅಂತ ಪದೇ ಪದೇ ಹೇಳುತ್ತಿದ್ದಾರೆ. ಬಿಜೆಪಿ ಹೈಕಮಾಂಡ್‌ಗಾಗಲಿ, ರಾಜ್ಯ ನಾಯಕರಿಗಾಗಲಿ, ಸ್ವತಃ ರಾಜ್ಯ ಘಟಕದ ಅಧ್ಯಕ್ಷ ಪುತ್ರ ವಿಜಯೇಂದ್ರ ಅವರಿಗಾಗಲಿ ಪೋಕ್ಸೊ ಪ್ರಕರಣದಲ್ಲಿ ವಿಚಾರಣೆ ನಡೆಯುತ್ತಿರುವಾಗ ಯಡಿಯೂರಪ್ಪ ಅವರು ಪ್ರಚಾರಕ್ಕೆ ಹೋದರೆ ಮುಜುಗರವಾಗುತ್ತದೆ ಎಂದು ಗೊತ್ತಿಲ್ಲವೇ ಎಂದು ಕೇಳಬಹುದು. ಬಿಜೆಪಿಯಲ್ಲಿರುವ ಬಹುತೇಕರು ಇಂತಹ ಕೃತ್ಯಗಳ ಆರೋಪಿತರೇ. ದೇಶದ ಮಟ್ಟದಲ್ಲಿಯೂ ಅಂತಹ ನಾಯಕರೇ ಇದ್ದಾರೆ. ಹಾಗಾಗಿ ಇದು ಅವರಿಗೆ ಅಂತಹ ಮುಜುಗರ ನಾಚಿಕೆಯ ವಿಷಯವೇ ಅಲ್ಲ. ಇನ್ನು ಬೇರೆ ಬೇರೆ ಪಕ್ಷಗಳ ಪರಮ ಭ್ರಷ್ಟರನ್ನು ಹುಡುಕಿ ಅವರಿಗೆ ಇ.ಡಿ. ಭಯ ಹುಟ್ಟಿಸಿ, ಸಿಬಿಐ ಗುಮ್ಮ ತೋರಿಸಿ ತಮ್ಮ ಪಕ್ಷಕ್ಕೆ ಕರೆತಂದು ಪರಿಶುದ್ಧರನ್ನಾಗಿ ಮಾಡುತ್ತಿರುವುದು ದೇಶವೇ ನೋಡಿದೆ.
ಇದನ್ನೂ ಓದಿ 330 ರೂ. ಕಿಟ್‌ಗೆ 2,200 ರೂ. ಪಾವತಿಸಿದ್ದ ಬಿಎಸ್‌ವೈ ಸರ್ಕಾರ; ಏಳು ಪಟ್ಟು ಹೆಚ್ಚು ಹಣಕ್ಕೆ ಕಾರಣಗಳೇ ಇಲ್ಲ!
ಸಂತ್ರಸ್ತೆಯ ಪರ ಹಿರಿಯ ನ್ಯಾಯವಾದಿ ಎಸ್ ಬಾಲನ್ ಪ್ರಬಲ ವಾದ ಮಂಡಿಸುತ್ತಿದ್ದಾರೆ. ಆರೋಪಿಯ ಬಂಧನಕ್ಕೆ ನೀಡಿದ್ದ ತಡೆಯನ್ನು ತೆರವುಗೊಳಿಸಬೇಕು ಎಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ ಅರ್ಜಿಯ ವಿಚಾರಣೆ ತಿಂಗಳ ಲೆಕ್ಕದಲ್ಲಿ ಮುಂದಕ್ಕೆ ಹಾಕುತ್ತಿದ್ದಾರೆ. ಈ ಬಗ್ಗೆ ಈ ದಿನದ ಜೊತೆ ಮಾತನಾಡಿದ ಬಾಲನ್,“ಯಡಿಯೂರಪ್ಪ ಬಂಧನಕ್ಕೆ ನೀಡಿದ್ದ ಸ್ಟೇ ವೆಕೇಟ್ ಮಾಡಬೇಕು ಎಂದು ಹೈಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಅಕ್ಟೋಬರ್ 30ರಂದು ನಡೆಯಬೇಕಿತ್ತು. ಆದರೆ ಅಂದು ನ್ಯಾಯಮೂರ್ತಿ ನಾಗಪ್ರಸನ್ನ ರಜೆ ಇದ್ದರು. ಮತ್ತೆ ಯಾವಾಗ ಎಂಬುದು ಇನ್ನೂ ನಿಗದಿಯಾಗಿಲ್ಲ. ನಟ ಉಪೇಂದ್ರ ಹೊಲಗೇರಿ ಹೇಳಿಕೆ ಪ್ರಕರಣ, ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಕುರಿತ ಅವಮಾನಕರ ಹೇಳಿಕೆ ಪ್ರಕರಣದಲ್ಲೂ ವಿಚಾರಣೆಗೆ ತಡೆ ನೀಡಲಾಗಿದೆ. ಈ ಮೂರೂ ಪ್ರಕರಣಗಳ ತಡೆಯನ್ನು ತೆರವುಗೊಳಿಸಬೇಕು ಎಂದು ನ.11ರಂದು ಅರ್ಜಿ ಸಲ್ಲಿಸಲಾಗುವುದು“ ಎಂದು ತಿಳಿಸಿದರು.

ಹೇಮಾ ವೆಂಕಟ್
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.