“ಸಾವಿಲ್ಲದ ಮನೆಯ ಸಾಸಿವೆ ತಾ” ಎಂದು ಬುದ್ಧ ಹೇಳಿಲ್ಲವೇ? ಆದರೂ, ಬೇರೆಯವರ ಸಾವು, ಸೋಲಿಗೆ ಕುಹಕವಾಡುವ, ಸಂಭ್ರಮಿಸುವ ಮನೋವಿಕಾರ ಇಂದಿನ ಯುವ ಸಮೂಹಕ್ಕೆ ಎಲ್ಲಿಂದ ಬಂತು? ದೇಶಭಕ್ತರು, ಶ್ರೇಷ್ಠ ಹಿಂದೂ ಧರ್ಮದವರು ಎಂದು ಹೇಳಿಕೊಳ್ಳುವವರ ಅನುಯಾಯಿಗಳು ಯಾಕೆ ಮನುಷ್ಯತ್ವ ಮರೆತು ವರ್ತಿಸುತ್ತಾರೆ?
ಎಲ್ಲೋ ಒಂದು ಅಪಘಾತ ಸಂಭವಿಸುತ್ತದೆ. ಒಂದೇ ಕುಟುಂಬದ ನಾಲ್ಕಾರು ಮಂದಿ ಅಸುನೀಗುತ್ತಾರೆ. ಪ್ರವಾಸದ ಖುಷಿಯಲ್ಲಿದ್ದ ಇಡೀ ಕುಟುಂಬ ಜಲಪಾತದ ಪ್ರವಾಹದಲ್ಲಿ ಕೊಚ್ಚಿ ಹೋಗುತ್ತದೆ. ಇಡೀ ಕುಟುಂಬವೊಂದನ್ನು ಪಾತಕಿಯೊಬ್ಬ ಕೊಂದು ಹಾಕುತ್ತಾನೆ. ಬೈಕ್ ಅಪಘಾತದಲ್ಲಿ ಯುವಕನೊಬ್ಬ ಅಸುನೀಗುತ್ತಾನೆ- ಈ ಸುದ್ದಿಗಳೆಲ್ಲ ಎಂಥವರನ್ನೂ ಒಂದು ಕ್ಷಣ ಮೂಕವಾಗಿಸುತ್ತದೆ. ಆದರೆ ಕೆಲವರಿದ್ದಾರೆ ಇಂತಹ ಸುದ್ದಿಗಳು ಆನ್‌ಲೈನ್‌ನಲ್ಲಿ ಬರುತ್ತಿದ್ದಂತೆ ಅಲ್ಲಿ ನಗುವ ಕೆಲವರು ಇಮೋಜಿ ಒತ್ತುತ್ತಾರೆ. ಅಥವಾ ಸತ್ತದ್ದನ್ನು ಸಂಭ್ರಮಿಸುವ ಹಂಗಿಸುವ ಕಮೆಂಟ್ ಹಾಕಿರುತ್ತಾರೆ. ಏಕೆಂದರೆ ಸತ್ತವರು ಮುಸ್ಲಿಂ ಸಮುದಾಯಕ್ಕೆ ಸೇರಿರುತ್ತಾರೆ.
ಕೋಮುವಾದ, ಮೌಢ್ಯದ ವಿರುದ್ಧ ಇರುವ ಸಾಹಿತಿಗಳು – ಪ್ರಗತಿಪರರು ಸತ್ತಾಗ, ಕಾಯಿಲೆ ಬಿದ್ದ ಸುದ್ದಿ ಬಂದಾಗ, ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಾಗ ಸಂಭ್ರಮಿಸುತ್ತಾರೆ. ಅವರ ಫೋಟೋಗೊಂದು ಹಾರಹಾಕಿ ವಿಕೃತಿ ಮೆರೆಯುತ್ತಾರೆ. ಅಷ್ಟೇ ಏಕೆ, ಪ್ರಾಕೃತಿಕ ವಿಕೋಪ ನಡೆದಾಗ ಆ ರಾಜ್ಯದಲ್ಲಿ ತಮ್ಮ ನಿಷ್ಠೆಯ ಸರ್ಕಾರ ಇಲ್ಲದಿದ್ದರೆ ಅದಕ್ಕೂ ಸಂಭ್ರಮಿಸುತ್ತಾರೆ.
ಇತ್ತೀಚಿನ ಎರಡು ಉದಾಹರಣೆ ನೋಡಿದರೆ ಸಾಕು ಬಿಜೆಪಿಯವರು ತುಂಬಿದ ಕೋಮುವಾದದ ವಿಷದಿಂದ ಮನೋವಿಕಾರಗೊಂಡವರ ಪ್ರತಿಕ್ರಿಯೆಗಳು ಹೀಗೂ ಇರಲು ಸಾಧ್ಯವೇ ಎಂದು ಅಚ್ಚರಿಯಾಗುತ್ತದೆ. ಉತ್ತರಕನ್ನಡದ ಶಿರೂರಿನಲ್ಲಿ ಭೀಕರ ಭೂಕುಸಿತ ಸಂಭವಿಸಿ ಹನ್ನೊಂದು ಜನ ಮೃತರಾಗಿದ್ದರು. ವಾರದ ಕಾರ್ಯಾಚರಣೆಯ ನಂತರವೂ ಕೇರಳದ ಲಾರಿ ಚಾಲಕ ಮತ್ತು ಸ್ಥಳೀಯ ವ್ಯಕ್ತಿಯೊಬ್ಬರ ಮೃತದೇಹ ಇನ್ನೂ ಪತ್ತೆಯಾಗಿಲ್ಲ. ಅದಾಗಿ ಕೆಲವೇ ದಿನಗಳಲ್ಲಿ ಜುಲೈ 31ರ ಮುಂಜಾನೆ ವಯನಾಡಿನಲ್ಲಿ ಊರಿಗೆ ಊರೇ ಕೊಚ್ಚಿ ಹೋಗಿತ್ತು. ನಾನೂರಲ್ಲೂ ಹೆಚ್ಚು ಕುಟುಂಬಗಳು ಮಣ್ಣಿನಡಿ ಸಿಲುಕಿವೆ ಎಂಬ ವರದಿ ಬರುತ್ತಿದ್ದಂತೆ ಇಡೀ ದೇಶವೇ ಸೂತಕದ ಛಾಯೆ ಹೊದ್ದಿತ್ತು.

ಆದರೆ, ಎಚ್ಚೆತ್ತುಕೊಂಡ ಕೋಮುವಾದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಕೊಳೆತ ಮನಸ್ಥಿತಿಯನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಕೇರಳ, ಕರ್ನಾಟಕ, ಸೇರಿದಂತೆ ಭೂಕುಸಿತಕ್ಕೆ ಅಭಿವೃದ್ಧಿಯ ಹೆಸರಿಟ್ಟು ಅರಣ್ಯ ನಾಶ, ಗುಡ್ಡಗಳನ್ನು ಕೊರೆದು ಪ್ರವಾಸಿತಾಣ, ರೆಸಾರ್ಟ್, ರಸ್ತೆ ನಿರ್ಮಾಣ ಮುಂತಾದ ಹತ್ತು ಹಲವು ಕಾರಣಗಳನ್ನು ಪರಿಸರವಾದಿಗಳು, ವಿಜ್ಞಾನಿಗಳು ಪಟ್ಟಿ ಮಾಡುತ್ತಿದ್ದರೆ; ಅತ್ತ ತಮ್ಮ ತಲೆಬುಡ ಇಲ್ಲದ ವಾದದ ಕಾರಣಗಳಿಂದ ವ್ಯಂಗ್ಯವಾಗಿ ʼಝೋಂಬಿʼಗಳೆಂದು ಕರೆಸಿಕೊಳ್ಳುವ ಕೋಮುವಾದಿಗಳು ಅದರಲ್ಲೂ ಹಿಂದುತ್ವದ ನಶೆ ಏರಿಸಿಕೊಂಡವರು ಕೇರಳದ ದುರಂತಕ್ಕೆ “ಹಸುಗಳ ಶಾಪ ಕಾರಣ“, “ಜಿಹಾದಿಗಳು ಗೋಹತ್ಯೆ ಮಾಡಿದರ ಪರಿಣಾಮ” ಎಂದರು. ಕೆಲವರು “ಎಲ್ಲರೂ ಸತ್ತು ಹೋಗಲಿ” ಎಂದು ಶಾಪ ಹಾಕಿದರು.
ತಮ್ಮದೇ ರಾಜ್ಯದ ಶಿರೂರಿನಲ್ಲಿ ಸತ್ತವರೆಲ್ಲ ಹಿಂದೂಗಳು. ಅವರಿಗೆ ಗೋಹತ್ಯೆಯ ಹಿನ್ನೆಲೆ ಇತ್ತೇ? ಗೋಮಾಂಸ ತಿನ್ನದ, ಗೋಮಾಂಸ ಸಿಗದ ರಾಜ್ಯ ಯಾವುದಿದೆ? ಉತ್ತರ ಪ್ರದೇಶದ ಸತ್ಸಂಗದಲ್ಲಿ ಕಾಲ್ತುಳಿತಕ್ಕೆ ನೂರಾರು ಜನ ಸತ್ತರಲ್ಲ, ಅವರೆಲ್ಲ ಹಿಂದೂಗಳು, ದೈವಭಕ್ತರು. ಅವರಲ್ಲಿ ಬಹುತೇಕರು ಬಿಜೆಪಿಯ ಭಕ್ತರೇ ಇರಬಹುದು, ಅನುಮಾನವೇ ಇಲ್ಲ. ಅವರನ್ನು ಸಾಕ್ಷಾತ್ ಶ್ರೀರಾಮ ರಕ್ಷಿಸಿದನೇ? ಕೇರಳದಲ್ಲಿ ನಡೆದ ಘಟನೆ ಉತ್ತರಪ್ರದೇಶ, ಗುಜರಾತ್, ರಾಜಸ್ಥಾನ್, ಮಧ್ಯಪ್ರದೇಶದಂತಹ ಬಿಜೆಪಿ ಸರ್ಕಾರವಿರುವ ರಾಜ್ಯದಲ್ಲಿ ನಡೆದಿದ್ದರೆ ಇಂತಹ ಪ್ರತಿಕ್ರಿಯೆಗಳು ಬರುತ್ತಿದ್ದವೇ?
ಉತ್ತರಾಖಂಡದಲ್ಲಿ ಪ್ರತಿವರ್ಷವೂ ಭೂಕುಸಿತವಾಗಿ ಅಮರನಾಥ ಯಾತ್ರಿಕರು ಸಾಯುತ್ತಿದ್ದಾರೆ. ಜಾತ್ರೆ, ಉತ್ಸವದಲ್ಲಿ ದುರಂತಗಳು ನಡೆದು ದೇವರ ಭಕ್ತರೇ ಸಾಯುತ್ತಾರೆ. ರಥದ ಚಕ್ರದಡಿಗೆ ಸಿಲುಕಿ, ಕೊಂಡ ಹಾಯುವಾಗ ಕೆಂಡಕ್ಕೆ ಬಿಟ್ಟು ಸಾಯುತ್ತಿದ್ದಾರೆ. ದೇವಸ್ಥಾನದ ಪ್ರಸಾದ ತಿಂದು ಸತ್ತ ಉದಾಹರಣೆಗಳು ಎಷ್ಟಿಲ್ಲ? ಅದಕ್ಕೆಲ್ಲ ಗೋಹತ್ಯೆಯೇ ಕಾರಣವೇ? ತಿರುಪತಿ, ಧರ್ಮಸ್ಥಳ, ಸುಬ್ರಹ್ಮಣ್ಯ, ಶಿರಡಿ ಅಂತ ತೀರ್ಥಯಾತ್ರೆ ಮಾಡಿ ಮುಡಿ ಹರಕೆ ಕೊಟ್ಟು, ಕಾಣಿಕೆಯೂ ಹಾಕಿ ವಾಪಸ್ ಹೊರಟವರು ಮನೆಗೆ ಸೇರುವ ಧಾವಂತದಲ್ಲಿ ರಸ್ತೆಯಲ್ಲಿಯೇ ಉಸಿರು ಚೆಲ್ಲುವ ಎಷ್ಟೋ ಘಟನೆಗಳು ದಿನವೂ ವರದಿಯಾಗುತ್ತಿವೆ. ಆದರೂ ಬೇರೊಬ್ಬರ ಸಾವನ್ನು ಸಂಭ್ರಮಿಸುವಷ್ಟು ಮಟ್ಟಿಗೆ ಅದ್ಯಾವ ಭೂತ ನವಪೀಳಿಗೆಯ ಮನಸ್ಸಿನಲ್ಲಿ ಕೂತು ಬಿಟ್ಟಿದೆ?
ವಿನೇಶ್‌ಳನ್ನೂ ಕಾಡಿದ ಟ್ರೋಲರ್ ಪಡೆ
ತಾವು ಮಹಾನ್ ದೇಶಪ್ರೇಮಿಗಳು ಎನ್ನುತ್ತಾರೆ. ಆದರೆ, ದೇಶದ ಘನತೆಗೆ ಧಕ್ಕೆ ತರುವ ರೀತಿ ವರ್ತಿಸುತ್ತಾರೆ. ಮಹಿಳೆಯರನ್ನು ಮಾತೆಯರು ಎಂದು ಗೌರವಿಸುವ ದೇಶ ನಮ್ಮದು ಎನ್ನುತ್ತಾರೆ. ಬೇಟಿ ಪಡಾವೊ, ಬೇಟಿ ಬಚಾವೋ ಎಂಬ ಮೋದಿಯವರ ಸ್ಲೋಗನ್ ಆಗಾಗ ನಗೆಪಾಟಲಿಗೀಡಾಗುತ್ತಲೇ ಇದೆ. ಕಳೆದ ವರ್ಷ ಕುಸ್ತಿ ಫೆಡರೇಷನ್ ಅಧ್ಯಕ್ಷ ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಖ್ಯಾತ ಮಹಿಳಾ ಕುಸ್ತಿಪಟುಗಳಾದ ಸಾಕ್ಷಿ ಮಲ್ಲಿಕ್ ಮತ್ತು ವಿನೇಶ್ ಫೋಗಟ್ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ದೆಹಲಿಯ ಪೊಲೀಸರು ಎಫ್ಐಆರ್ ದಾಖಲಿಸಲಿಲ್ಲ ಎಂದು ಧರಣಿ ಕುಳಿತು ಅಂಗಲಾಚಿದರೂ ಪ್ರಧಾನಿ ಸಹಿತ ಕೇಂದ್ರ ಸರ್ಕಾರದ ಯಾರೊಬ್ಬರೂ ಕುಸ್ತಿಪಟುಗಳ ಅಹವಾಲು ಕೇಳಲು ಹೋಗಿಲ್ಲ. ಅಷ್ಟೇ ಅಲ್ಲ ಆರೋಪಿ ಬ್ರಿಜ್ ಭೂಷಣನ ವಿರುದ್ಧ ಯಾವ ಕ್ರಮವನ್ನೂ ಕೈಗೊಂಡಿರಲಿಲ್ಲ. ಆತನನ್ನು ಕುಸ್ತಿ ಒಕ್ಕೂಟದ ಅಧ್ಯಕ್ಷ ಸ್ಥಾನದಿಂದಲೂ ಕೆಳಗಿಳಿಸಲಿಲ್ಲ. ಯಥಾಪ್ರಕಾರ ಮೋದಿ ಭಕ್ತರು, ಬಿಜೆಪಿ ಕಾರ್ಯಕರ್ತರು ಆ ಕ್ರೀಡಾಪಟುಗಳ ವಿರುದ್ಧವೇ ಅಭಿಯಾನ ನಡೆಸಿದರು. ಕಾಂಗ್ರೆಸ್ ಪ್ರೇರಿತ ಪ್ರತಿಭಟನೆ ಎಂದರು.”ಕಿರುಕುಳ ಆದಾಗಲೇ ಯಾಕೆ ದೂರು ಕೊಟ್ಟಿಲ್ಲ, ಪದಕ ಗಳಿಸುವಾಗ ಎಲ್ಲವೂ ಚೆನ್ನಾಗಿತ್ತಾ” ಎಂದು ಪ್ರಶ್ನೆ ಮಾಡಿದರು.

ಹೆಣ್ಣುಮಕ್ಕಳನ್ನು ಗೌರವಿಸುವ ದೇಶದಲ್ಲಿ ಲೈಂಗಿಕ ಕಿರುಕುಳ ನೀಡುತ್ತಿದ್ದ ವ್ಯಕ್ತಿಯ ವಿರುದ್ಧ ಸೊಲ್ಲೆತ್ತುವುದೇ ಅಪರಾಧವಾಗಿ ಹೋಯ್ತು. ವಿನೇಶ್ ಫೋಗಟ್ ಮತ್ತು ಸಾಕ್ಷಿ ಮಲ್ಲಿಕ್ ಲೈಂಗಿಕ ಕಿರುಕುಳದ ಆಘಾತಕ್ಕಿಂತ ಈ ಭಕ್ತರ ಟ್ರೋಲ್ ಮಾಡಿರುವ ಘಾಸಿಯೇ ಹೆಚ್ಚಿತ್ತೇನೋ. ಬ್ರಿಜ್‌ಭೂಷಣ್ ವಿರುದ್ಧ ಮೋದಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದ ನಡೆಯನ್ನು ಪ್ರತಿಭಟಿಸಿ ಸಾಕ್ಷಿ ಮಲ್ಲಿಕ್ ಕುಸ್ತಿಗೆ ವಿದಾಯ ಹೇಳಿದ್ದರು. ಅದಾಗಿ ಒಂದೇ ವರ್ಷದಲ್ಲಿ ಕುಸ್ತಿ ಪಟು ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಫೈನಲ್‌ಗೆ ಪ್ರವೇಶ ಪಡೆದ ದೇಶದ ಮೊದಲ ಮಹಿಳೆ ಎನಿಸಿದ್ದು ಕೋಟ್ಯಂತರ ಜನ ಸಂಭ್ರಮಿಸಿದ್ದರು. ಚಿನ್ನ ಅಥವಾ ಬೆಳ್ಳಿಯ ಪದಕ ನಿಶ್ಚಿತ ಎಂದುಕೊಂಡು ರಾತ್ರಿ ಬೆಳಗಾಗುವುದರಲ್ಲಿ ಕೆಟ್ಟ ಸುದ್ದಿಯೊಂದನ್ನು ಕೇಳಬೇಕಾಯ್ತು. ವಿನೇಶ್ ಫೈನಲ್ ಪಂದ್ಯಕ್ಕೆ ಅನರ್ಹರಾಗಿದ್ದರು. ಇಡೀ ದೇಶವೇ ಆಘಾತದಲ್ಲಿರುವಾಗ ಅಗೋ ಎಚ್ಚೆತ್ತುಕೊಂಡಿತ್ತು ಬಿಜೆಪಿಯ ಟ್ರೋಲ್ ಪಡೆ.

ದೇಶಕ್ಕೆ ಪದಕದ ಕೀರ್ತಿ ತಂದುಕೊಡುವ ಸಾಮರ್ಥ್ಯವಿದ್ದ ಕುಸ್ತಿಪಟು ಕೇವಲ ನೂರು ಗ್ರಾಂ ತೂಕ ಹೆಚ್ಚಿತ್ತು ಎಂಬ ಕಾರಣದಿಂದ ಅಂತಿಮ ಸ್ಪರ್ಧೆಗೆ ಅನರ್ಹಗೊಂಡಿದ್ದು ನಿಜಕ್ಕೂ ದೇಶದ ಪಾಲಿಗೆ ದುರದೃಷ್ಟಕರ. ಒಲಿಂಪಿಕ್‌ನಲ್ಲಿ ಅಂತಿಮ ಸುತ್ತಿಗೆ ಪ್ರವೇಶ ಪಡೆದ ಮೊದಲ ಭಾರತೀಯ ಕ್ರೀಡಾಪಟು ವಿನೇಶ್. ಆದರೆ, ಆಕೆಯ ಸಾಧನೆಯ ಒಂದು ಅಣುವಿನಷ್ಟೂ ಸಾಧನೆ ಮಾಡದ ಭಕ್ತಪಡೆ, “ಕೊಬ್ಬು ಜಾಸ್ತಿಯಾಗಿತ್ತು, ಬೀದಿಯಲ್ಲಿ ಹೊರಳಿ ಪ್ರಾಕ್ಟೀಸ್ ಮಾಡದೇ ಒಲಿಂಪಿಕ್‌ಗೆ ಹೋದರೆ ಇನ್ನೇನಾಗುತ್ತದೆ” ಎಂದೆಲ್ಲ ಬರೆದು ಕಾರಿಕೊಂಡರು. ಒಲಿಂಪಿಕ್‌ನಲ್ಲಿ ಸ್ಪರ್ಧಿಸುವುದು ಪದಕ ತರುವುದು ಅದೆಷ್ಟು ವರ್ಷಗಳ ಕನಸು, ಶ್ರಮ, ಸವಾಲು ಎಂಬ ಬಗ್ಗೆ ಕಿಂಚಿತ್ತು ಜ್ಞಾನ ಇಲ್ಲದ ಬುದ್ಧಿಗೇಡಿಗಳು ದೇಶಕ್ಕೆ ಪದಕ ತಪ್ಪಿದ ಕಾರಣಕ್ಕೆ ಸಂಭ್ರಮಿಸುತ್ತಾರೆ ಎಂದರೆ ಅವರನ್ನು ಏನೆಂದು ಕರೆಯುವುದು? ಅವರ ಮನಸ್ಥಿತಿ ಎಂತಹದು?
ಸಂತ್ರಸ್ತ ಮಹಿಳೆಯರು, ರೈತರನ್ನೂ ಅವಮಾನಿಸಿದ ಕೋಮುವಾದಿಗಳು
ನಾಲ್ಕು ವರ್ಷಗಳ ಹಿಂದೆ ಕೇಂದ್ರ ಸರ್ಕಾರದ ರೈತವಿರೋಧಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪಂಜಾಬ್, ಹರಿಯಾಣದ ರೈತರು ಧರಣಿ ಕುಳಿತರೆ, ಆ ಅನ್ನದಾತರನ್ನೂ ಗೇಲಿ ಮಾಡಿದವರು ಬಿಜೆಪಿಯ ನಾಯಕರು, ಮಂತ್ರಿಗಳು, ಕಾಲಾಳು ಭಕ್ತರು. ನಕಲಿ ರೈತರು, ಖಲಿಸ್ತಾನಿಗಳು, ಕಾಂಗ್ರೆಸ್ ಏಜೆಂಟರು, ಲೂಟಿಕೋರರು ಎಂದು ಗೇಲಿ ಮಾಡಿದರು. ರೈತರು, ಪ್ರಗತಿಪರರು, ಕಾರ್ಮಿಕರು, ಹೋರಾಟಗಾರರು, ಸಾಮಾನ್ಯ ಜನರು ಯಾರೇ ಆಗಲಿ ಮೋದಿ ಸರ್ಕಾರದ ನೀತಿಗಳ ವಿರುದ್ಧ ಅಥವಾ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿದರೆ, ಮಾತನಾಡಿದರೆ ಅದು ಮೋದಿ ವಿರುದ್ಧ, ದೇಶದ ವಿರುದ್ಧ, ಹಿಂದೂಗಳ ವಿರುದ್ಧ ಎಂದು ಬಿಂಬಿಸುವ ಐಟಿ ಸೆಲ್ ಪಡೆಯೇ ಇದೆ.

ಮಹಿಳೆಯರ ಮೇಲೆ ಅತ್ಯಾಚಾರ ನಡೆದಾಗಲೂ ಅತ್ಯಾಚಾರದ ಆರೋಪಿ ಬಿಜೆಪಿಯಲ್ಲಿ ಗುರುತಿಸಿಕೊಂಡವ ಎಂದು ಗೊತ್ತಾದರೆ ಸಾಕು ಸಂತ್ರಸ್ತೆಯನ್ನೇ ಅವಮಾನಿಸಲೂ ಹೇಸುವುದಿಲ್ಲ. ಆಕೆ ಅಷ್ಟೊತ್ತಿಗೆ ಅಲ್ಲಿಗೆ ಯಾಕೆ ಹೋದಳು? ರಾತ್ರಿ ಹೊರಗೆ ಹೋಗಿದ್ದು ತಪ್ಪು, ತಕ್ಷಣ ಏಕೆ ದೂರು ಕೊಟ್ಟಿಲ್ಲ- ಹೀಗೆ ಪ್ರಶ್ನೆಗಳನ್ನು ಕೇಳಲು ಶುರು ಮಾಡುತ್ತಾರೆ. ಶ್ರೀನಗರದಲ್ಲಿ ಕೆಲ ವರ್ಷಗಳ ಹಿಂದೆ ಎಂಟು ವರ್ಷದ ಬಾಲೆ ಅಸೀಫಾಳನ್ನು ದೇವಸ್ಥಾನದೊಳಗೆ ಅರ್ಚಕರ ತಂಡ ಅತ್ಯಾಚಾರ ಎಸಗಿ ಕೊಂದ ಪ್ರಕರಣದಲ್ಲಿ ಅತ್ಯಾಚಾರಿಗಳ ಬಂಧನ ವಿರೋಧಿಸಿ ದೊಡ್ಡ ಪ್ರತಿಭಟನೆ ನಡೆದಿತ್ತು. ವಕೀಲರ ಸಂಘದವರೇ ಪ್ರತಿಭಟನೆ ಮಾಡಿದ್ದರು. ಅಲ್ಲಿನ ಸರ್ಕಾರದ ಭಾಗವಾಗಿದ್ದ ಬಿಜೆಪಿಯ ನಾಯಕನೇ ಮೆರವಣಿಗೆಯಲ್ಲಿ ಭಾಗಿಯಾಗಿದ್ದ!.
ಇದೇ ರೀತಿ ಹಾಥರಸ್‌ನಲ್ಲಿ ಅಪ್ರಾಪ್ತ ಬಾಲಕಿಯ ಅತ್ಯಾಚಾರ ಕೊಲೆ ನಡೆದಾಗ, ಆಕೆಯ ಮೃತದೇಹವನ್ನು ಕುಟುಂಬಕ್ಕೆ ಕೊಡದೇ, ಮನೆಯವರನ್ನು ಕೂಡಿ ಹಾಕಿ, ಪೊಲೀಸರೇ ಹಿತ್ತಲಲ್ಲಿ ಸುಟ್ಟು ಹಾಕಿದ್ದರು. ಆ ಸಂತ್ರಸ್ತೆಯ ಕುಟುಂಬವನ್ನು ಭೇಟಿಯಾಗಲು ಹೊರಟ ಕಾಂಗ್ರೆಸ್ ನಾಯಕರನ್ನು ಊರಾಚೆ ತಡೆದ ಯೋಗಿ ಸರ್ಕಾರದ ನಡೆ ದೇಶವೇ ನೋಡಿದೆ. ಮೋದಿ ಭಕ್ತರು ಮತ್ತು ಗೋದಿ ಮೀಡಿಯಾಗಳು ಅದನ್ನು ರಾಜಕೀಯ ಸ್ಟಂಟ್ ಎಂದು ಕರೆದರು. ಉನ್ನಾವೊದಲ್ಲಿ ಬಿಜೆಪಿ ಶಾಸಕ ಕುಲ್‌ದೀಪ್ ಸೆಂಗಾರ್‌ನೇ ಸಾಮೂಹಿಕ ಅತ್ಯಾಚಾರದ ಆರೋಪದಲ್ಲಿ ಶಿಕ್ಷೆಗೆ ಗುರಿಯಾಗಿದ್ದಾನೆ. ಇದನ್ನೆಲ್ಲ ಭಕ್ತರು ಹೊಟ್ಟೆಗೆ ಹಾಕಿಕೊಳ್ಳುತ್ತಾರೆ. ಬೇರೆ ಧರ್ಮದವರು, ಪಕ್ಷದವರು ಆರೋಪಿಗಳಾದರೆ ಮಾತ್ರ ಧರ್ಮ ಮಹಿಳೆಯ ಘನತೆ ಎಲ್ಲ ನೆನಪಿಗೆ ಬರುತ್ತದೆ.

ಇದೇ ಜನ ಈಗ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಭೀಕರ ಹಲ್ಲೆಗಳಾಗುತ್ತಿವೆ ಎಂದು ತಿರುಚಿದ ವಿಡಿಯೊಗಳನ್ನು ಹಂಚುತ್ತಿದ್ದಾರೆ. ಯಾವುದೋ ಸಂದರ್ಭದ ವಿಡಿಯೋವನ್ನು ತೋರಿಸಿ, “ಬಾಂಗ್ಲಾದಲ್ಲಿ ಹಿಂದೂಗಳು ಮುಸ್ಲಿಮರ ವಿರುದ್ಧ ತಿರುಗಿಬಿದ್ದಿದ್ದಾರೆ” ಎಂದು ಚಕ್ರವರ್ತಿ ಸೂಲಿಬೆಲೆ ತರಹದವರು ಭಕ್ತರನ್ನು ರೊಚ್ಚಿಗೆಬ್ಬಿಸುತ್ತಿದ್ದಾರೆ. ಬಾಂಗ್ಲಾದೇಶದ ಹೊಸ ಸಂಪುಟದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ 13% ಪ್ರಾಶಸ್ತ್ಯ ನೀಡಲಾಗಿದೆ. “ಹಿಂದೂ, ಬೌದ್ಧರ ಮೇಲೆ ಹಲ್ಲೆಗಳಾದರೆ ನಾನು ಈ ಸ್ಥಾನ ತೊರೆಯುತ್ತೇನೆ” ಎಂದು ನೂತನ ಅಧ್ಯಕ್ಷ ಮೊಹಮದ್ ಯೂನುಸ್ ಹೇಳಿರುವುದಾಗಿ ವರದಿಯಾಗಿದೆ. ಇದೆಲ್ಲ ಭಕ್ತರ ಕಣ್ತೆರೆಸುತ್ತಿಲ್ಲ ಎಂಬುದೇ ದುರಂತ.
“ಸಾವಿಲ್ಲದ ಮನೆಯ ಸಾಸಿವೆ ತಾ” ಎಂದು ಬುದ್ಧ ಹೇಳಿಲ್ಲವೇ? ಆದರೂ, ಬೇರೆಯವರ ಸಾವು, ಸೋಲಿಗೆ ಕುಹಕವಾಡುವ, ಸಂಭ್ರಮಿಸುವ ಮನೋವಿಕಾರ ಎಲ್ಲಿಂದ ಬಂತು? ದೇಶಭಕ್ತರು, ಶ್ರೇಷ್ಠ ಹಿಂದೂ ಧರ್ಮದವರು ಎಂದು ಹೇಳಿಕೊಳ್ಳುವವರ ಅನುಯಾಯಿಗಳು ಯಾಕೆ ಮನುಷ್ಯತ್ವ ಮರೆತು ವರ್ತಿಸುತ್ತಾರೆ?
ಇವೆಲ್ಲವುಗಳ ನಡುವೆಯೇ, ಇಂದು ಮತ್ತೊಂದು ಸುದ್ದಿ ಬಂದಿದೆ. ಉತ್ತರಪ್ರದೇಶದ ಬಾಬಾ ಸಿದ್ಧನಾಥನ ದೇವಸ್ಥಾನದಲ್ಲಿ ಕಾಲ್ತುಳಿತಕ್ಕೆ ಏಳು ಮಂದಿ ಭಕ್ತರು ಉಸಿರು ಚೆಲ್ಲಿದ್ದಾರೆ. ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಯಾರ ಶಾಪ? ಭಕ್ತರು ಉತ್ತರಿಸುವರೇ?

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.
Very good article.
ಮನುಷ್ಯನಿಗೆ ಮನುಷ್ಯತ್ವ ಅತೀ ಮುಖ್ಯ. ದಯೆ ಮತ್ತು ಕರುಣೆ ಮುಸ್ಲಿಮರಿಗೆ ಧಾರಾಳವಾಗಿ ಇದೆ. ಹಿಂದೂ ಧರ್ಮದವರಲ್ಲೂ ಇದೆ. ಕಟು ಹೃದಯದ ಸಂಘಿಗಳಿಗೆ ಮಾತ್ರ ಇಲ್ಲ ಅವರ ಮಂಡನೆಯಲ್ಲಿ ಬರೀ ಸೆಗಣಿ ತುಂಬಿದೆ
ಮನುಷ್ಯನಿಗೆ ಮನುಷ್ಯತ್ವ ಅತೀ ಮುಖ್ಯ. ದಯೆ ಮತ್ತು ಕರುಣೆ ಮುಸ್ಲಿಮರಿಗೆ ಧಾರಾಳವಾಗಿ ಇದೆ. ಹಿಂದೂ ಧರ್ಮದವರಲ್ಲೂ ಇದೆ. ಕಟು ಹೃದಯದ ಸಂಘಿಗಳಿಗೆ ಮಾತ್ರ ಇಲ್ಲ ಅವರ ಮಂಡೆಯಲ್ಲಿ ಬರೀ ಸೆಗಣಿ ತುಂಬಿದೆ