ಸರ್ಕಾರದ ಅವಧಿಗೂ ಮುನ್ನವೇ ಕಾಂಗ್ರೆಸ್ ಸರ್ಕಾರ ಪತನಗೊಳ್ಳಲಿದೆ. 2028ರೊಳಗೆ ಕರ್ನಾಟಕಕ್ಕೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರ ಹೇಳಿಕೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಬಿಜೆಪಿ-ಜೆಡಿಎಸ್ ಮೈತ್ರಿಯು ಮತ್ತೆ ಆಪರೇಷನ್ ಕಮಲದ ಹಿಂಬಾಗಿಲಿನ ರಾಜಕಾರಣ ಮಾಡುತ್ತವೆಯೇ ಎಂಬ ಅನುಮಾನ ಒಂದೆಡೆಯಾದರೆ, ಇತ್ತೀಚೆಗೆ ನಡೆಯುತ್ತಿರುವ ಬಿಜೆಪಿ-ಜೆಡಿಎಸ್ ನಾಯಕರ ಹಗರಣಗಳ ಕುರಿತಾದ ಚರ್ಚೆಯನ್ನು ಡೈವರ್ಟ್ ಮಾಡಲು ಯತ್ನಿಸುತ್ತಿದ್ದಾರಾ ಎಂಬುದು ಮತ್ತೊಂದೆಡೆ ಇದೆ.
ಭಾನುವಾರ ಮಂಡ್ಯದಲ್ಲಿ ಮಾತನಾಡಿರುವ ಕುಮಾರಸ್ವಾಮಿ, “ರಾಜ್ಯದ ಕಾಂಗ್ರೆಸ್ ಸರಕಾರ 2028ರವರೆಗೂ ನಡೆಯುವುದಿಲ್ಲ. ನಾವೇನು ಆ ಸರ್ಕಾರವನ್ನು ಉರುಳಿಸುವುದಿಲ್ಲ. ಕಾಂಗ್ರೆಸ್ ಶಾಸಕರೇ ತಮ್ಮ ಸರ್ಕಾರವನ್ನು ಪತನಗೊಳಿಸುತ್ತಾರೆ. 2028ರೊಳಗೆ ನಾನು ಮುಖ್ಯಮಂತ್ರಿ ಆಗುತ್ತೇನೆ” ಎಂದಿದ್ದಾರೆ.
“ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನವಿದೆ. ಅದು ಯಾವಾಗ ಸ್ಪೋಟ ಆಗುತ್ತದೆ ಕಾದು ನೋಡೋಣ. ಶಾಸಕರು ಹಳ್ಳಿಗೆ ಹೋಗಿ ಜನರನ್ನ ಭೇಟಿ ಮಾಡದ ಕಾರಣದಿಂದ ಇಂತಹ ವಾತಾವರಣ ಸೃಷ್ಟಿಯಾಗಿದೆ” ಎಂದೂ ಅವರು ಹೇಳಿದ್ದಾರೆ.
ಕುಮಾರಸ್ವಾಮಿ ಅವರು ಇಂತಹ ಹೇಳಿಕೆ ಕೊಡುವುದು ಹೊಸತೇನಲ್ಲ. ಇದೂವರೆಗೂ ಹಲವು ಬಾರಿ, ನನ್ನ ಬಳಿ ಸಿ.ಡಿ ಇದೆ. ಪೆನ್‌ಡ್ರೈವ್ ಇದೆ. ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆಂದು ಹಲವು ಬಾರಿ ಹೇಳಿದ್ದಾರೆ. ಆದರೆ, ಈವರೆಗೆ ಎಂದಿಗೂ ಅವರು ಯಾವುದೇ ಸಿ.ಡಿ, ಪೆನ್‌ಡ್ರೈವ್‌ಗಳನ್ನು ಬಿಡುಗಡೆ ಮಾಡಿಲ್ಲ. ಬದಲಾಗಿ, ಕಳೆದ ಲೋಕಸಭಾ ಚುನಾವಣೆ ವೇಳೆ, ಅವರ ಅಣ್ಣನ ಮಗ ಪ್ರಜ್ವಲ್ ರೇವಣ್ಣ ಎಸಗಿದ್ದ ಅತ್ಯಾಚಾರ ಕೃತ್ಯಗಳ ಪೆನ್‌ಡ್ರೈವ್ ಬಿಡುಗಡೆಯಾಗಿತ್ತು.
ಇನ್ನು, ಮುಖ್ಯಮಂತ್ರಿ ಹುದ್ದೆ, ಸರ್ಕಾರವನ್ನು ಅಸ್ಥಿರಗೊಳಿಸುವ ಬಗ್ಗೆಯೂ ಕುಮಾರಸ್ವಾಮಿ ಅವರು ಆಗ್ಗಾಗ್ಗೆ ಮಾತನಾಡಿದ್ದಾರೆ. ಆದರೆ, ಈವರೆಗೂ ಅವರು ಹೇಳಿದಂತೆ ಯಾವುದೂ ನಡೆದಿಲ್ಲ. ಇದೀಗ, ಮತ್ತೆ ಕಾಂಗ್ರೆಸ್ ಸರ್ಕಾರ ಪತನವಾಗುತ್ತದೆ. 2028ರ ವಿಧಾನಸಭಾ ಚುನಾವಣೆಗೂ ಮುನ್ನ ನಾನೇ ಮುಖ್ಯಮಂತ್ರಿ ಆಗುತ್ತೇನೆಂದು ಹೇಳಿಕೊಳ್ಳುತ್ತಿದ್ದಾರೆ.
ಈ ಹೇಳಿಕೆಯಲ್ಲಿ ಆಶ್ಛರ್ಯವೇನೂ ಇಲ್ಲ. ಆದರೆ, ಅದರ ಹಿಂದೆ ನಾನಾ ತಂತ್ರಗಳಿವೆ ಎಂಬುದು ಸ್ಪಷ್ಟ. ಇತ್ತೀಚೆಗಷ್ಟೇ, ಕುಮಾರಸ್ವಾಮಿ ಅವರು ಎ2 ಆರೋಪಿಯಾಗಿರುವ ‘ಡಿನೋಟಿಫಿಕೇಷನ್ ಹಗರಣ’ದ ತನಿಖೆ ಮತ್ತೆ ಚುರುಕುಗೊಂಡಿದೆ. ತಮ್ಮ ಮೈತ್ರಿ ಪಾಲದಾರ ಬಿಜೆಪಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಅದೇ ಹಗರಣದಲ್ಲಿ ಎ1 ಆರೋಪಿಯಾಗಿದ್ದಾರೆ. ಇವರಿಬ್ಬರಿಗೂ ನೋಟಿಸ್ ಕೊಟ್ಟು ಕಚೇರಿಗೆ ಕರೆಸಿಕೊಂಡು ಲೋಕಾಯುಕ್ತ ವಿಚಾರಣೆಗೆ ಒಳಪಡಿಸಿದೆ.
ಈ ವರದಿ ಓದಿದ್ದೀರಾ?: ಎಚ್‌ಡಿಕೆ ಅಧಿಕಾರ ದುರುಪಯೋಗ; ಎಡಿಜಿಪಿ ಚಂದ್ರಶೇಖರ್ ದಾಖಲಿಸಿದ ದೂರಿನಲ್ಲಿವೆ ಗಂಭೀರ ಆರೋಪಗಳು!
ಅಲ್ಲದೆ, ಸಾಯಿ ವೆಂಕಟೇಶ್ವರ ಅಕ್ರಮ ಪ್ರಕರಣದಲ್ಲಿಯೂ ಕುಮಾರಸ್ವಾಮಿ ಅವರು ಆರೋಪಿಯಾಗಿದ್ದಾರೆ. ಆ ಪ್ರಕರಣವನ್ನು ಎಡಿಜಿಪಿ ಚಂದ್ರಶೇಖರ್ ನೇತೃತ್ವದ ಲೋಕಾಯುಕ್ತ ಎಸ್‌ಐಟಿ ತಂಡ ತನಿಖೆ ನಡೆಸುತ್ತಿದೆ. ತನಿಖೆ ನಡೆಸುತ್ತಿರುವ ಚಂದ್ರಶೇಖರ್ ವಿರುದ್ಧವೇ ಕುಮಾರಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ನಿಂದಿಸಿದ್ದು, ಬೆದರಿಕೆ ಹಾಕುವ ದಾಟಿಯಲ್ಲಿ ಮಾತನಾಡಿದ್ದಾರೆ.
ಇದೆಲ್ಲದರ ನಡುವೆ, ಕುಮಾರಸ್ವಾಮಿ ಅವರ ಸಹೋದ್ಯೋಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರ ಸಹೋದರ ಗೋಪಾಲ್ ಜೋಶಿ ಲೋಕಸಭಾ ಚುನಾವಣೆಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆ ಕೊಟ್ಟು, ಮಾಜಿ ಶಾಸಕರ ಪತ್ನಿಯಿಂದ 2 ಕೋಟಿ ರೂ. ಪಡೆದು, ವಂಚಿಸಿದ್ದಾರೆ. ಪ್ರಕರಣದಲ್ಲಿ ಪ್ರಲ್ಹಾದ್ ಜೋಶಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಸರೂ ಕೂಡ ತಳುಕುಹಾಕಿಕೊಂಡಿದೆ.
ಈ ಎಲ್ಲ ಹಗರಣ, ಪ್ರಕರಣಗಳು ಬಿಜೆಪಿ-ಜೆಡಿಎಸ್‌ಗೆ ಮುಜುಗರ ಉಂಟುಮಾಡುತ್ತಿವೆ. ಹೀಗಾಗಿ, ಇವುಗಳ ಬಗ್ಗೆ ಮಾಧ್ಯಮದಲ್ಲಿಯೂ, ಸಾರ್ವಜನಿಕವಾಗಿಯೂ ಹೆಚ್ಚು ಚರ್ಚೆಯಾಗಬಾರದು. ರಾಜ್ಯದ ಜನರ ಚಿತ್ತವನ್ನು ಬೇರೆಡೆ ಸೆಳೆಯಬೇಕೆಂದು ಮೈತ್ರಿ ಪಕ್ಷಗಳು ಯತ್ನಿಸುತ್ತಿವೆ. ಇಂತಹ ಯತ್ನದ ಭಾಗವಾಗಿಯೇ ಕುಮಾರಸ್ವಾಮಿ ಅವರ ಮುಖ್ಯಮಂತ್ರಿ ಹೇಳಿಕೆ ಹೊರಬಂದಿದೆ ಎಂಬ ಅನುಮಾನವೂ ಇದೆ.
ಹಗಲು ಕನಸು