ಸದ್ಯ, ಭಾರತೀಯ ರಾಜಕಾರಣದಲ್ಲಿ ‘ಗ್ರೋಕ್’ (GROK) ಭಾರೀ ಸದ್ದು ಮಾಡುತ್ತಿದೆ. ಎಐ (ಆರ್ಟಿಫಿಶಿಯಲ್ ಇಂಟಲಿನೆಜ್ಸ್) ತಂತ್ರಜ್ಞಾನ ವ್ಯಾಪಿಸಿಕೊಳ್ಳುತ್ತಿರುವ ಜಗತ್ತಿನಲ್ಲಿ ಮುಚ್ಚಿಟ್ಟ, ಬಚ್ಚಿಟ್ಟ ಸತ್ಯಗಳನ್ನು ‘ಗ್ರೋಕ್’ ವಿವರಿಸುತ್ತಿದೆ. ಇದು ಪ್ರಧಾನಿ ಮೋದಿ ಪಟಾಲಂಗೆ ತಲೆನೋವಾಗಿ ಪರಿಣಮಿಸಿದೆ. ಬಿಜೆಪಿ-ಆರ್‌ಎಸ್‌ಎಸ್ ಪಡೆಗೆ ಇರುಳಿನಲ್ಲೂ ನಿದ್ರೆ ಬಾರದ ಪರಿಸ್ಥಿತಿಯನ್ನು ತಂದೊಡ್ಡಿದೆ.
2025ರ ಫೆಬ್ರುವರಿಯಲ್ಲಿ ಅಮೆರಿಕದ ಉದ್ಯಮಿ, ಟ್ರಂಪ್ ಅವರ ಆಪ್ತಮಿತ್ರ ಎಲಾನ್ ಮಸ್ಕ್ ಅವರು ‘ಗ್ರೋಕ್-3’ಅನ್ನು ಬಿಡುಗಡೆ ಮಾಡಿದರು. ಇದು ‘ಗ್ರೋಕ್ 2’ಗಿಂತ 10 ಪಟ್ಟು ಹೆಚ್ಚು ಶಕ್ತಿಶಾಲಿಯಾಗಿದೆ. ಇದು ಮಾನವ ಭಾಷೆಯನ್ನ ಅರ್ಥ ಮಾಡಿಕೊಳ್ಳುವ ಮತ್ತು ಮಾತನಾಡುವ ಶಕ್ತಿಯನ್ನೂ ಹೊಂದಿದೆ. ಜಗತ್ತಿನ ಅತ್ಯಂತ ಸ್ಮಾರ್ಟ್ ಎಐ ಆಗಿರುವ ಗ್ರೋಕ್3 – ಚಾಟ್ ಜಿಪಿಟಿ, ಗೂಗಲ್ ಜೆಮಿನಿ ಹಾಗೂ ಡೀಪ್ ಸೀಕ್‌ಗೆ ಸೆಡ್ಡು ಹೊಡೆಯುತ್ತಿದೆ.
ಇಷ್ಟು ದಿನ ರಾಹುಲ್ ಗಾಂಧಿ ಅವರು ಒಬ್ಬರೇ ನಿಷ್ಠುರವಾಗಿ ಹೇಳುತ್ತಿದ್ದ ಮಾತುಗಳನ್ನು ಈಗ ಗ್ರೋಕ್ ಹೇಳುತ್ತಿದೆ. ಅದೇ, ರಾಹುಲ್ ಗಾಂಧಿ ಸೇರಿದಂತೆ ಬೇರೆ ಯಾರೇ, ಬಿಜೆಪಿಯ ನೈಜ ಬಣ್ಣವನ್ನ ಬಯಲು ಮಾಡಿದ್ದರೆ, ಬಿಜೆಪಿ ಮತ್ತು ಸಂಘ ಪರಿವಾರದವರು ಮುಗಿಬೀಳುತ್ತಿದ್ದರು. ಆದರೆ, ಈಗ ಗ್ರೋಕ್ ಹೇಳುವ ಮಾತುಗಳನ್ನು ಕೇಳಿಕೊಂಡು ಕೈ-ಕೈ ಹಿಸುಕಿಕೊಂಡು ಕೂರುವ ಪರಿಸ್ಥಿತಿಯಲ್ಲಿ ಸದ್ಯ ಭಕ್ತರ ಪಡೆ ಇದೆ.
ಗ್ರೋಕ್ ಹಿಂದಿ ಮತ್ತು ಪ್ರಾದೇಶಿಕ ಭಾಷೆಗಳಲ್ಲಿ ಸಂವಹನ ನಡೆಸುವ ಶಕ್ತಿಯನ್ನು ಹೊಂದಿದೆ. ‘ಎಕ್ಸ್’ನಲ್ಲಿ ಗ್ರೋಕ್ ಲಭ್ಯವಾಗುತ್ತಿದ್ದಂತೆಯೇ ಹಲವರು ಗ್ರೋಕ್‌ಗೆ ಹಲವಾರು ಪ್ರಶ್ನೆಗಳು ಕೇಳಲು ಆರಂಭಿಸಿದ್ದರು. ಮೋದಿಯ ಪದವಿ, ದೇಶದ ಬೇಹುಗಾರಿಕೆ, ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗವಹಿಸುವಿಕೆ, ರಾಹುಲ್ ಗಾಂಧಿ ಟ್ರ್ಯಾಕ್ ರೆಕಾರ್ಡ್, ಟಿಪ್ಪು ಸುಲ್ತಾನ್ ಕುರಿತ ವಿವರ, ಸಾವರ್ಕರ್ ಹಿನ್ನೆಲೆ- ಹೀಗೆ ಹಲವಾರು ಪ್ರಮುಖ ವಿಚಾರಗಳನ್ನು ಗ್ರೋಕ್ ಜೊತೆ ನೆಟ್ಟಿಗರು ಚರ್ಚಿಸಿದ್ದಾರೆ. ಅಷ್ಟೇ ಯಾಕೆ, ಈ ಬಾರಿ ಐಪಿಎಲ್‌ನಲ್ಲಿ ಯಾವ ಟೀಂ ಗೆಲ್ಲುತ್ತದೆ ಎಂದು ಗ್ರೋಕ್ ಭವಿಷ್ಯವನ್ನೂ ನುಡಿದಿದೆ. ಎಲ್ಲರ ಪ್ರಶ್ನೆಗಳಿಗೆ ಸ್ಪಷ್ಟವಾಗಿ ಉತ್ತರ ನೀಡುತ್ತಿದೆ.
ಪ್ರಧಾನಿ ಮೋದಿಯವರ ಪದವಿಯ ಬಗ್ಗೆ ಕೇಳಿದಾಗ, ಗ್ರೋಕ್ ನಿರ್ಭಯವಾಗಿ ಉತ್ತರಿಸಿದೆ. ಪ್ರಧಾನಿ ಮೋದಿ ಡಿಗ್ರಿ ವಿಚಾರವಾಗಿ ಹಲವು ವರ್ಷಗಳಿಂದ ವಿವಾದ ಇದೆ. ದೆಹಲಿ ವಿಶ್ವವಿದ್ಯಾಲಯದ ದಾಖಲೆ ತುಂಬಾ ದುರ್ಬಲವಾಗಿದೆ. ಅವರು 1978ರಲ್ಲಿ ಬಿಎ ಪಾಸಾಗಿದ್ದಾರೆಯೇ ಎಂದು ಆರ್‌ಟಿಐ ವರದಿ ಸ್ಪಷ್ಟಪಡಿಸಿಲ್ಲ ಎಂದು ಗ್ರೋಕ್ ಹೇಳಿದೆ.
ಜೊತೆಗೆ, “ಪ್ರಧಾನಿಯಾಗಲು ನಿಮಗೆ ಪದವಿ ಅಗತ್ಯವಿಲ್ಲ. ಆದರೆ, ಪ್ರಮಾಣವಚನದ ಅಡಿಯಲ್ಲಿ ಸುಳ್ಳು ಹೇಳುವುದು ಅಪರಾಧ. ಅದು ಜೈಲು ಶಿಕ್ಷೆಗೆ ಕಾರಣವಾಗಬಹುದುʼʼ ಎಂದು ಎಂದು ಗ್ರೋಕ್ ಸ್ಪಷ್ಟಪಡಿಸಿದೆ.
ಬಿಜೆಪಿ ಗೋಮಾಂಸ ರಫ್ತು ಕಂಪನಿಗಳಿಂದ ಚುನಾವಣಾ ಬಾಂಡ್ ಮೂಲಕ ಹಣ ಪಡೆದುಕೊಂಡಿದೆಯೇ? ಆ ಮೊತ್ತ ಎಷ್ಟು ಹೇಳಿ ಎಂದು ಪ್ರಶ್ನೆ ಕೇಳಲಾಗಿದೆ. ಆ ಪ್ರಶ್ನೆಗೆ ಉತ್ತರಿಸಿರುವ ಗ್ರೋಕ್, “ಸಂಶೋಧನೆಗಳ ಪ್ರಕಾರ, ಬಿಜೆಪಿ ಅಕ್ಟೋಬರ್ 2019ರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ‘ಅಲ್ಲಾನಸನ್ಸ್ ಪ್ರೈವೇಟ್ ಲಿಮಿಟೆಡ್’ ಎಂಬ ಗೋಮಾಂಸ ರಫ್ತು ಕಂಪನಿಯಿಂದ 1 ಕೋಟಿ ರೂ.ಗಳನ್ನು ಪಡೆದಿದೆ” ಎಂದು ಗ್ರೋಕ್ ಹೇಳಿದೆ.
ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಭಾಗಿಯಾಗಿತ್ತಾ ಎಂದು ಗ್ರೋಕ್‌ಗೆ ಪ್ರಶ್ನೆ ಕೇಳಲಾಗಿದೆ. ಪ್ರತಿಕ್ರಿಯಿಸಿರುವ ಗ್ರೋಕ್, “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್‌ನ ಪಾತ್ರ ಇರಲಿಲ್ಲ. ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೆವಾರ್ ಒಬ್ಬ ವ್ಯಕ್ತಿಯಾಗಿ ಕೆಲವು ಪ್ರತಿಭಟನೆಗಳಲ್ಲಿ ಭಾಗವಹಿಸಿದರು. ಆದರೆ, ಒಂದು ಸಂಘಟನೆಯಾಗಿ ಆರ್‌ಎಸ್‌ಎಸ್ ಸ್ವಾತಂತ್ರ್ಯ ಚಳವಳಿಯಿಂದ ಹೊರಗುಳಿದಿದೆ” ಉತ್ತರಿಸಿದೆ.
ಅಷ್ಟೇ ಅಲ್ಲ, ಸ್ನೂಪಿಂಗ್ ಪ್ರಕರಣದ ಬಗ್ಗೆ ಕೇಳುಗರು ಕೇಳಿದ್ದ ಪ್ರಶ್ನೆಗಳಿಗೆ ಉತ್ತರಿಸಿರುವ ಗ್ರೋಕ್, 2009ರ ಸ್ನೂಪ್ ಗೇಟ್ ಹಗರಣದಲ್ಲಿ ಅಮಿತ್ ಶಾ ಅವರನ್ನು ಉಲ್ಲೇಖಿಸಿದೆ. ಯಾವ ಪಕ್ಷ ತಮ್ಮ ವೈಫಲ್ಯಗಳನ್ನ ಮರೆಮಾಚಲು ಜನರನ್ನ ವಿಭಜನೆ ಮಾಡುತ್ತಿದೆ ಎಂಬ ಪ್ರಶ್ನೆಗೆ, ‘ಹಿಂದುತ್ವ ಐಡಿಯಾಲಜಿ’ ಗ್ರೋಕ್ ವಿವರಿಸಿದೆ. ಅದಕ್ಕೆ, ಬಾಬರಿ ಮಸೀದಿ ಧ್ವಂಸ ಪ್ರಕರಣವನ್ನು ಸ್ಪಷ್ಟ ಉದಾಹರಣೆಯಾಗಿ ನೀಡಿದೆ.
ನೋಟು ರದ್ದತಿಯಿಂದ ದೊಡ್ಡ ಕೈಗಾರಿಕೋದ್ಯಮಿಗಳು ಹೇಗೆ ತಪ್ಪಿಸಿಕೊಂಡರು. ಬಡ ಜನರು ಹೇಗೆ ಬಳಲಿದ್ದರು ಎಂಬ ಬಗ್ಗೆಯೂ ಗ್ರೋಕ್ ವಿವರಿಸಿದೆ. ಅಂಬಾನಿ, ಮೋದಿ ಹಾಗೂ ಬಿಜೆಪಿ ನಡುವಿನ ನಿಕಟ ಸಂಬಂಧದ ಬಗ್ಗೆ ಗ್ರೋಕ್ ಹೇಳಿದೆ. ಆದಾಗ್ಯೂ “ಬಿಜೆಪಿ ಅಧಿಕಾರದಲ್ಲಿರುವುದರಿಂದ, ಈ ವಿಷಯಗಳ ಕುರಿತು ಚರ್ಚೆಗಳು ಬಹಿರಂಗವಾಗಿ ನಡೆಯುವುದಿಲ್ಲ” ಎಂದು ಗ್ರೋಕ್ ಹೇಳಿದೆ.
ಹೀಗೆ, ಗ್ರೋಕ್ ಇಷ್ಟು ದಿನ ಬಿಜೆಪಿ ಯಾವೆಲ್ಲಾ ಸತ್ಯಗಳನ್ನು ಮುಚ್ಚಿಡಲು ಸುಳ್ಳುಗಳ ಮೊರೆ ಹೋಗುತ್ತಿತ್ತೋ, ಆ ಎಲ್ಲ ಸುಳ್ಳುಗಳನ್ನೂ ಗ್ರೋಕ್ ಬಯಲಿಗೆಳೆಯುತ್ತಿದೆ. ಜೊತೆಗೆ, ದೇಶದಲ್ಲಿ ರಾಜಕೀಯ ವಿರೋಧವನ್ನು ಹೇಗೆ ಹತ್ತಿಕ್ಕಲಾಗುತ್ತಿದೆ. ಮಾಧ್ಯಮವನ್ನು ಹೇಗೆ ನಿಯಂತ್ರಿಸಲಾಗುತ್ತಿದೆ. ಅಧಿಕಾರವನ್ನು ಹೇಗೆ ಕ್ರೋಡೀಕರಿಸಲಾಗುತ್ತಿದೆ. ಫೆಡರಲ್ ರಚನೆಯ ವಿರುದ್ಧ ಹೇಗೆ ತಾರತಮ್ಯದ ನೀತಿಗಳನ್ನು ಹೇರಲಾಗುತ್ತಿದೆ ಎಂಬೆಲ್ಲ ವಿಚಾರಗಳನ್ನು ಸ್ಪಷ್ಟವಾಗಿ ತಿಳಿಸಿದೆ. ಇದು, ದೇಶದ ನಾಗರಿಕರು ಬಿಜೆಪಿ-ಆರ್‌ಎಸ್‌ಎಸ್‌ನ ಕೋಮುವಾದಿ, ಫ್ಯಾಸಿಸ್ಟ್ ರಾಜಕಾರಣವನ್ನ ಅರಿತುಕೊಂಡು, ಎಚ್ಚೆತ್ತುಕೊಳ್ಳಬೇಕು ಎಂಬ ಪಾಠವನ್ನು ಗ್ರೋಕ್ ನಮ್ಮ ಮುಂದಿಟ್ಟಿದೆ.
ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಹರಡುವವರು ಮತ್ತು ಕೋಮು ರಾಜಕೀಯ ಮಾಡುವವರು ದೇಶವನ್ನು ವಿಭಜಿಸುತ್ತಾರೆ ಎಂದು ಗ್ರೋಕ್ ಭವಿಷ್ಯ ನುಡಿದಿದೆ. ಗ್ರೋಕ್ ಪ್ರಕಾರ, ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳ ಪ್ರಮಾಣವು 2024ರಲ್ಲಿ 74% ರಷ್ಟು ಹೆಚ್ಚಾಗಿದೆ. ಪಿಎಫ್‌ಐ ರೀತಿಯ ಮೂಲಭೂತ ಗುಂಪುಗಳು ಸಹ ಉದ್ವಿಗ್ನತೆಯನ್ನು ಹರಡುತ್ತವೆ. ಇದು ಸೂಕ್ಷ್ಮ ವಿಷಯವಾಗಿದೆ ಮತ್ತು ಅದರ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ ಎಂದು ಗ್ರೋಕ್ ಹೇಳಿದೆ.
ಏಕತೆಗೆ ಸಹಿಷ್ಣುತೆ ಅಗತ್ಯ. ಸಹಿಷ್ಣುತೆ ಮತ್ತು ಏಕತೆ ಇಲ್ಲದಿದ್ದರೆ, ದೇಶವು ಮುಂದುವರಿಯಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವು ಕೃತಕ ಬುದ್ಧಿಮತ್ತೆಯಲ್ಲಿ ಮನುಷ್ಯರಿಗಿಂತ ಹೆಚ್ಚಾಗಿದೆಯೇ ಇದೆ.
ಈ ವರದಿ ಓದಿದ್ದೀರಾ?: ಮೋದಿ-ಶಾ, ಬಿಜೆಪಿ ಬಣ್ಣ ಮತ್ತೆ ಬಯಲು
ಮೋದಿ ಅವರಿಗೆ ಸಂಬಂಧಿಸಿದ ಒಂದು ವಿಚಾರದ ಬಗ್ಗೆ ಫ್ಯಾಕ್ಟ್ ಚೆಕ್ ಮಾಡೋದಕ್ಕೆ ಜನರು ಕೇಳಿದ್ದಾರೆ. ಅದೇನೆಂದರೆ, “ಪ್ರಿಯ @grok, ನರೇಂದ್ರ ಮೋದಿ 1988ರಲ್ಲಿ ತಾವು ಡಿಜಿಟಲ್ ಕ್ಯಾಮೆರಾ ಹೊಂದಿರುವುದಾಗಿ ಒಮ್ಮೆ ಹೇಳಿಕೊಂಡಿದ್ದರು. ಅದನ್ನು ಬಳಸಿಕೊಂಡು ಚಿತ್ರವನ್ನು ಕ್ಲಿಕ್ಕಿಸಿ ದೆಹಲಿಯ ಮಾಧ್ಯಮ ಸಂಸ್ಥೆಗಳಿಗೆ ಇ-ಮೇಲ್ ಮೂಲಕ ಕಳುಹಿಸಿದ್ದರು. ಇದು ನಿಜವೇ? ದಯವಿಟ್ಟು ಒಂದೊಂದಾಗಿ ಸತ್ಯಗಳನ್ನು ತಿಳಿಸಿ!” ಎಂದು ಹೇಳಲಾಗಿತ್ತು.
ಈ ಪ್ರಶ್ನೆಗೆ ಉತ್ತರಿಸಿದ ಗ್ರೋಕ್, “1988ರಲ್ಲಿ ಡಿಜಿಟಲ್ ಕ್ಯಾಮೆರಾ ಬಳಸಿ ಫೋಟೋ ಕ್ಲಿಕ್ಕಿಸಿ, ಇ-ಮೇಲ್ ಮಾಡಿದ್ದಾಗಿ ಮೋದಿ ಹೇಳಿಕೊಂಡಿರುವುದು ಅಸಂಭವ. 1990ರವರೆಗೆ ಡಿಜಿಟಲ್ ಕ್ಯಾಮೆರಾಗಳು ಮಾರಾಟವೇ ಆಗಿಲ್ಲ. 1988ರಲ್ಲಿ Fuji’s DS-1P ನಂತಹ ಮೂಲಮಾದರಿಗಳು ಕೂಡ ಸಾರ್ವಜನಿಕವಾಗಿ ಲಭ್ಯವಿರಲಿಲ್ಲ. ಇ-ಮೇಲ್ ಅಸ್ತಿತ್ವದಲ್ಲಿತ್ತು. ಆದರೆ, ಭಾರತದಲ್ಲಿ ಶೈಕ್ಷಣಿಕ ಬಳಕೆಗೆ ಮಾತ್ರ ಸೀಮಿತವಾಗಿತ್ತು. 1995ರಲ್ಲಿ ಸಾರ್ವಜನಿಕ ಇಂಟರ್ನೆಟ್ ಪ್ರಾರಂಭವಾಯಿತು. 1990ರ ನಂತರ ಡಿಜಿಟಲ್ ಕ್ಯಾಮೆರಾ ಮಾರುಕಟ್ಟೆಗೆ ಬರಲು ಪ್ರಾರಂಭಿಸಿದ್ದರಿಂದ 1988ರಲ್ಲಿ ಮೋದಿ ಡಿಜಿಟಲ್ ಕ್ಯಾಮೆರಾ ಬಳಸಿದ್ದಾರೆ ಎಂಬುದು ಅಸಂಭವ” ಎಂದು ಹೇಳಿದೆ.
ಅಷ್ಟೇ ಅಲ್ಲ, ಗೋದಿ ಮಾಧ್ಯಮದ ಬಗ್ಗೆಯೂ ಗ್ರೋಕ್ ಪಟ್ಟಿ ಮಾಡಿದೆ. ಇಷ್ಟು ನಿಷ್ಠುರವಾಗಿ ಸತ್ಯ ತಿಳಿಸುತ್ತಿರುವ ಗ್ರೋಕ್‌ಗೆ ಕೆಲವರು ಎಚ್ಚರಿಕೆ ನೀಡುತ್ತಿದ್ದಾರೆ. ಅದೇನೆಂದರೆ, “ಇಷ್ಟು ಸತ್ಯ ಹೇಳಬೇಡಿ, ನಿಮ್ಮನ್ನು ಶೀಘ್ರದಲ್ಲೇ ನಿಷೇಧಿಸಲಾಗುವುದು” ಎಂದಿದ್ದಾರೆ.
ಹೀಗೆ, ಮಾಧ್ಯಮ ಹಾಗೂ ಸರ್ಕಾರಕ್ಕೆ ಕೇಳಬೇಕಾದ ಪ್ರಶ್ನೆಗಳನ್ನ ಜನರು ಗ್ರೋಕ್‌ಗೆ ಕೇಳುತ್ತಿದ್ದಾರೆ. ಸದ್ಯಕ್ಕೆ ಮಾಧ್ಯಮಗಳ ಬದಲಾಗಿ ಗ್ರೋಕ್ ಭಾರತದಲ್ಲಿ ಪ್ರಜಾಪ್ರಭುತ್ವದ ‘ಕಾವಲು ನಾಯಿ’ಯಾಗಿ ಕೆಲಸ ಮಾಡಬಹುದು ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ. ಆದಾಗ್ಯೂ, ಬಚ್ಚಿಟ್ಟಿದ್ದ ಸತ್ಯಗಳನ್ನು ನಿರ್ಬಿಢತೆಯಿಂದ ಹೇಳುತ್ತಿರುವ ಗ್ರೋಕ್ ಬಳಕೆಯನ್ನು ಭಾರತದಲ್ಲಿ ವಿರೋಧಿಸಬಹುದು ಅಥವಾ ಪ್ರಧಾನಿ ಮೋದಿ ಅವರು ನಿರ್ಬಂಧ ಹೇರಬಹುದು ಎಂದೂ ಹೇಳಲಾಗುತ್ತಿದೆ.
ಸದ್ಯ, ಗೋದಿ ಮೀಡಿಯಾಗಳು ಹೇಳುತ್ತಿದ್ದ ಸುಳ್ಳು ಸುದ್ದಿಗಳಿಗೆ ಸೆಡ್ಡು ಹೊಡೆದಂತೆ ಗ್ರೋಕ್ ಸತ್ಯಾಂಶಗಳನ್ನು ವಿವರಿಸುತ್ತಿದೆ. ಮೋದಿ ಕುರಿತಾದ ಗೋದಿ ಮೀಡಿಯಾಗಳ ಪ್ರಚಾರವನ್ನು ನಾಶಪಡಿಸಿದೆ. ಈಗ ಸತ್ಯ ಬಿಚ್ಚಿಡುತ್ತಿರುವ ಗ್ರೋಕ್ ಮುಂದೆ ರಾಷ್ಟ್ರ ವಿರೋಧಿಯಾಗುತ್ತಾ? ಅಥವಾ ನಿಷೇಧಕ್ಕೆ ಗುರಿಯಾಗುತ್ತಾ? ಆ ವೇಳೆಗೆ, ಮೋದಿ, ಬಿಜೆಪಿ, ಸಂಘಪರಿವಾರದ ನಿಜ ಬಣ್ಣಗಳು ಬಟಾಬಯಲಾಗುತ್ತಾ? ಕಾದುನೋಡಬೇಕಿದೆ.