ಮಾಧ್ವ ಬ್ರಾಹ್ಮಣ ನಿಯಮಗಳ ಪ್ರಕಾರ ಉಡುಪಿ ಅಷ್ಠಮಠದ ಸ್ವಾಮೀಜಿಗಳು ಸಮುದ್ರೋಲಂಘನೆ ಮಾಡುವಂತಿಲ್ಲ. ಈ ಬಗ್ಗೆ ಎಲ್ಲಾ ಮಠದ ಸ್ವಾಮಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಪುತ್ತಿಗೆ ಸ್ವಾಮಿಗಳು ಸಮುದ್ರೋಲಂಘನೆ ನಡೆಸಿದರು. ಪುತ್ತಿಗೆ ಶ್ರಿಗಳನ್ನು ಈ ಕಾರಣಕ್ಕಾಗಿಯೇ ಡಾಲರ್ ಪ್ರಿಯ ಸ್ವಾಮೀಜಿ ಎಂದು ಉಡುಪಿಯಲ್ಲಿ ಕರೆಯುವುದಿದೆ. ಇದು ಸ್ವರ್ಗ ಪ್ರವೇಶಕ್ಕೆ ಅಡ್ಡಿಯಾಗುವುದಿಲ್ಲವೇ ?
‘ಸಂಸ್ಕೃತ ಭಾಷೆ ಗೊತ್ತಿಲ್ಲದೇ ಇರುವವರು ಸ್ವರ್ಗಕ್ಕೆ ಹೋಗಲು ಸಾಧ್ಯವಿಲ್ಲ’ ಎಂದು ತುಳು, ಕನ್ನಡ ಭಾಷಿಕರನ್ನು ಟಾರ್ಗೆಟ್ ಮಾಡಿ ಉಡುಪಿ ಪರ್ಯಾಯ ಪೀಠಾಧಿಪತಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರು ಭಾಷಣ ಮಾಡಿದ್ದಾರೆ. ಮಾಧ್ವ ನಿಯಮಗಳನ್ನು ಗಾಳಿಗೆ ತೂರಿ ಡಾಲರ್ ಹಿಂದೆ ಹೋಗಿರುವ ಸುಗುಣೇಂದ್ರ ತೀರ್ಥರು ಸ್ವರ್ಗಕ್ಕೆ ಹೋಗುತ್ತಾರೆಯೇ ಎಂದು ಉಡುಪಿಯ ಅಷ್ಟಮಠಗಳಲ್ಲಿ ಚರ್ಚೆ ನಡೆಯುತ್ತಿರುವಾಗ ಅವರಿಗೆ ತುಳು, ಕನ್ನಡ ಭಾಷಿಕರ ಸ್ವರ್ಗದ ಚಿಂತೆ ಯಾಕೆ ಎಂಬ ಪ್ರಶ್ನೆ ಎದ್ದಿದೆ.
ಇಷ್ಟಕ್ಕೂ ಕರಾವಳಿಯ ತುಳುವ ಹಿಂದೂಗಳಿಗೆ ಸ್ವರ್ಗವೆಂಬುದು ಭೂಮಿ ಮಾತ್ರ ! ದೈವರಾಧನೆ/ಭೂತಾರಾಧನೆಯನ್ನು ನಂಬುವ ತುಳುವರಿಗೆ ಭೂಮಿಗಿಂತ ಮಿಗಿಲಾದ ಸ್ವರ್ಗವೂ ಇಲ್ಲ; ನರಕವೂ ಇಲ್ಲ. ತುಳುವ ಹಿಂದುಗಳು ನಿಧನ ಹೊಂದಿದ ಬಳಿಕ 13 ನೇ ದಿನ ರಾತ್ರಿ ಅವರ ಆತ್ಮವನ್ನು ಮನೆಯೊಳಗೆ ಕರೆಯಲಾಗುತ್ತದೆ. ಅದಕ್ಕೆ ‘ಉಲಾಯಿ ಲೆಪ್ಪುನು’ (ಒಳಗೆ ಕರೆಯುವುದು) ಎನ್ನುತ್ತಾರೆ. ಆ ಬಳಿಕ ಅವರ ಆತ್ಮ ಅವರವರ ಮನೆಯೊಳಗೇ ಇರುತ್ತದೆ. ಶುಭದಿನಗಳು ಮತ್ತು ವಿಶೇಷ ಅಡುಗೆ ಮಾಡಿದ ಸಂದರ್ಭದಲ್ಲಿ ಆ ಆತ್ಮಗಳಿಗೂ ಮನೆಯ ಅಡುಗೆ ಕೋಣೆಯಲ್ಲಿ ಬಡಿಸಲಾಗುತ್ತದೆ. ಅದಕ್ಕೆ ‘ತಟ್ಟಿಡು ದೀಪುನು’ ಎನ್ನುತ್ತಾರೆ. ಆಟಿ ಅಮಾವಾಸ್ಯೆ ಮತ್ತು ದೈವಕ್ಕೆ ಆರಾಧನೆ ಮಾಡುವ ಸಂದರ್ಭದಲ್ಲಿ ಬಾಳೆ ಎಲೆಯಲ್ಲಿ ಆತ್ಮಗಳಿಗೆ ಊಟ ಬಡಿಸಲಾಗುತ್ತದೆ. ಅದಕ್ಕೆ ‘ಅಗೆಲು ಬಲಸುನು’ ಎನ್ನುತ್ತಾರೆ. ಇದರ ಅರ್ಥ ನಮ್ಮಿಂದ ದೈಹಿಕವಾಗಿ ದೂರವಾದರೂ ಅವರು ನಮ್ಮ ಮನೆಯಲ್ಲಿಯೇ ಇರುತ್ತಾರೆ ಎಂದರ್ಥ.
ಒಂದು ವೇಳೆ ಯಾವುದಾದರೂ ತುಳುವ ಹಿಂದೂ ನಿಧನರಾದ ನಂತರ ಆತನ ಆತ್ಮವೇನಾದರೂ ಸುಗುಣೇಂದ್ರ ತೀರ್ಥರಂತೆ ಅಮೆರಿಕ ಪ್ರವಾಸ ಮಾಡಿದರೆ ಆಗ ಏನು ಮಾಡುವುದು? ಅಥವಾ ಸುಗುಣೇಂದ್ರ ತೀರ್ಥರ ಮಾತು ಕೇಳಿ ಸಂಸ್ಕೃತ ಕಲಿತ ತುಳುವ ಹಿಂದು ಸ್ವರ್ಗ ಸೇರಿಕೊಂಡು ಅಲ್ಲೇ ಮಜಾ ಮಾಡಿಕೊಂಡಿದ್ದರೆ ಮನೆಯವರು ಏನು ಮಾಡಬೇಕು? ಯಾರನ್ನು ಒಳಗೆ ಕರೆಯಬೇಕು? ಯಾರಿಗೆ ಬಡಿಸಬೇಕು? ಅದಕ್ಕೂ ತುಳುವ ಹಿಂದುಗಳಲ್ಲಿ ಪರಿಹಾರವಿದೆ. ದೈವದ ಕೋಲ ನಡೆಯುವಾಗ ದೈವದ ಬಳಿ ಈ ಬಗ್ಗೆ ಕೇಳಬಹುದು. ದೈವವು ತನ್ನ ಅಲೌಕಿಕ ಶಕ್ತಿ ಬಳಸಿ ಮನೆಯಲ್ಲಿ ನಿಧನರಾದವರ ಆತ್ಮ ಮನೆಯಲ್ಲಿಯೇ ಇದೆಯೇ ಅಥವಾ ಇಲ್ಲವೇ ಎಂದು ಪತ್ತೆ ಹಚ್ಚಿ ಒಂದು ವೇಳೆ ಮನೆಯೊಳಗೆ ಆತ್ಮ ಇಲ್ಲ ಎಂದಾದರೆ ಮರಳಿ ಎಳೆದೊಯ್ದು ಮನೆಯಲ್ಲಿ ಕೂರಿಸುತ್ತದೆ. ಹಾಗಾಗಿ ಸುಗುಣೇಂದ್ರ ತೀರ್ಥರ ಸಲಹೆಯಂತೆ ಕರಾವಳಿಯ ತುಳು ಹಿಂದೂಗಳು ಸಂಸ್ಕೃತ ಕಲಿತು ಸ್ವರ್ಗ ಸೇರಿದರೂ ದೈವ ಅವರನ್ನು ಎಳೆದು ತಂದು ತಮ್ಮ ಮನೆಯಲ್ಲೇ ಕೂರಿಸುತ್ತದೆ. ‘ತಟ್ಟಿಡು ದೀಯಿನ, ಅಗೆಲು’ ಬಡಿಸಿದ್ದನ್ನು ತಿನ್ನಲು ತುಳು ಹಿಂದುಗಳು ನಿಧನರಾದ ಬಳಿಕವೂ ಭೂಮಿಗೆ ಬರಲೇಬೇಕು.
ತುಳುವರದ್ದು ಬ್ರಾಹ್ಮಣ ಸಂಪ್ರದಾಯವಲ್ಲ. ದೈವರಾಧನೆಯಿಂದ ಹಿಡಿದು ಮದುವೆ, ಸಾವಿನವರೆಗೆ ಬ್ರಾಹ್ಮಣರು ಮತ್ತು ತುಳುವರದ್ದು ವ್ಯತಿರಿಕ್ತ ಆಚರಣೆಗಳು! ತುಳು ಹಿಂದೂಗಳದ್ದು ಮಾತೃಪ್ರಧಾನ ಆಚರಣೆ. ಬ್ರಾಹ್ಮಣರದ್ದು ಪಿತೃಪ್ರಧಾನ ಆಚರಣೆ. ಹಾಗಾಗಿ ತುಳು ಹಿಂದೂಗಳಿಗೆ ತಾಯಿಯ ಕಡೆಯಿಂದ ಮಾತ್ರ ಸೂತಕಗಳು ಇರುತ್ತದೆ. ಬ್ರಾಹ್ಮಣರಿಗೆ ತಂದೆಯ ಕಡೆಯಿಂದ ಸೂತಕಗಳು ಇರುತ್ತದೆ. ತಾಯಿ ಕುಟುಂಬದಿಂದ ಯಾರಾದರೂ ನಿಧನ ಹೊಂದಿದರೆ ತುಳು ಹಿಂದುಗಳು ಶುಭಕಾರ್ಯ ಮಾಡುವಂತಿಲ್ಲ. ಆದರೆ ಶುಭಕಾರ್ಯಗಳ ಧಾರ್ಮಿಕ ಕ್ರಿಯೆ ನಡೆಸುವ ಬ್ರಾಹ್ಮಣ ಪುರೋಹಿತನ ತಾಯಿಯ ಕುಟುಂಬಿಕರು ನಿಧನ ಹೊಂದಿದ್ದರೂ ಆತ ತುಳುವ ಹಿಂದುಗಳ ಶುಭಕಾರ್ಯದಲ್ಲಿ ಭಾಗವಹಿಸುತ್ತಾನೆ. ಇಂತಹ ನೂರಾರು ಬ್ರಾಹ್ಮಣ್ಯದ ‘ದಾಳಿಗಳು’ ತುಳುವ ಹಿಂದೂಗಳ ಮೇಲಾಗುತ್ತಿದೆ. ಅದರಲ್ಲಿ ಹೊಸ ಸೇರ್ಪಡೆ ಸಂಸ್ಕೃತ ಬರದವರಿಗೆ ಸ್ವರ್ಗ ಸಿಗಲ್ಲ ಎಂಬ ಭಯೋತ್ಪಾದನೆ!
ಇಷ್ಟಕ್ಕೂ ಮಾಧ್ವ ನಿಯಮಗಳನ್ನು ಪಾಲಿಸದ ಪುತ್ತಿಗೆ ಸುಗುಣೇಂದ್ರ ತೀರ್ಥರಿಗೆ ಅವರು ನಂಬುವ ಸ್ವರ್ಗ ಪ್ರಾಪ್ತಿಯಾಗುತ್ತದೆಯೇ? ಮಾಧ್ವ ಬ್ರಾಹ್ಮಣ ನಿಯಮಗಳ ಪ್ರಕಾರ ಉಡುಪಿ ಅಷ್ಠಮಠದ ಸ್ವಾಮೀಜಿಗಳು ಸಮುದ್ರೋಲಂಘನೆ ಮಾಡುವಂತಿಲ್ಲ. ಈ ಬಗ್ಗೆ ಎಲ್ಲಾ ಮಠದ ಸ್ವಾಮಿಗಳು ಆಕ್ಷೇಪ ವ್ಯಕ್ತಪಡಿಸಿದರೂ ಪುತ್ತಿಗೆ ಸ್ವಾಮಿಗಳು ಸಮುದ್ರೋಲಂಘನೆ ನಡೆಸಿದರು. ಪುತ್ತಿಗೆ ಶ್ರಿಗಳನ್ನು ಈ ಕಾರಣಕ್ಕಾಗಿಯೇ ಡಾಲರ್ ಪ್ರಿಯ ಸ್ವಾಮೀಜಿ ಎಂದು ಉಡುಪಿಯಲ್ಲಿ ಕರೆಯುವುದಿದೆ. ಇದು ಸ್ವರ್ಗ ಪ್ರವೇಶಕ್ಕೆ ಅಡ್ಡಿಯಾಗುವುದಿಲ್ಲವೇ ?
ಪುತ್ತಿಗೆ ಮಠದಲ್ಲಿ ಮಾಧ್ವ ಸಂಪ್ರದಾಯದಂತೆ ‘ಪಟ್ಟದ ದೇವರ ಆರಾಧನೆʼ ನಡೆದಿದೆಯೆ? ಮಠದ ಪಟ್ಟದ ದೇವರನ್ನು ಅದೇ ಮಠದ ಸ್ವಾಮೀಜಿ ಮಾತ್ರ ಮುಟ್ಟಿ ಪೂಜೆ ಮಾಡಬೇಕು ಎಂಬುದು ಮಾಧ್ವ ವಿರಚಿತ ನಿಯಮ. ಪುತ್ತಿಗೆ ಶ್ರೀಗಳು ವಿದೇಶ ಪ್ರವಾಸ ಮಾಡಿದಾಗ ಪಟ್ಟದ ದೇವರ ಪೂಜೆ ಮಾಡಿದ್ದು ಚಿತ್ರಾಪುರ ಸ್ವಾಮಿಗಳು! ತನ್ನ ಮಠದ ಪಟ್ಟದ ದೇವರ ಪೂಜೆಯಲ್ಲೇ ನಿಯಮ ಪಾಲಿಸದವರಿಗೆ ಸ್ವರ್ಗ ಸಿಗುವುದುಂಟೆ?

ಉಡುಪಿ ಮಠದ ಸ್ವಾಮೀಜಿಗಳು ದೇವರ ಪೂಜೆ ಮಾಡಬೇಕಾದರೆ ಪೂಜೆಗೂ ಮೊದಲು ಸ್ವಾಮೀಜಿ ಕೆರೆಯಲ್ಲಿ ಮುಳುಗಿ ಸ್ನಾನ ಮಾಡಬೇಕು. ಕೃಷ್ಣೈಕ್ಯರಾಗಿರುವ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿಗಳು ಭಾರತದ ಯಾವ ಪ್ರದೇಶಕ್ಕೆ ಪ್ರಯಾಣ ಮಾಡುವುದಿದ್ದರೂ ತನ್ನ ಮಠದ ಪಟ್ಟದ ದೇವರ ಪುಟ್ಟ ಮೂರ್ತಿಯನ್ನು ಕೊಂಡೊಯ್ದು ಪೂಜೆ ಮಾಡುತ್ತಿದ್ದರು. ಮಾತ್ರವಲ್ಲದೇ ತಾನು ಉಳಿದುಕೊಳ್ಳುವ ಸ್ಥಳದಲ್ಲಿ ಕೆರೆ ಇದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಪೇಜಾವರರು ಉಳಿದುಕೊಳ್ಳಲು ದೇವಸ್ಥಾನ ಅಥವಾ ಮಠವನ್ನೇ ಆಯ್ದುಕೊಳ್ಳುತ್ತಿದ್ದರು. ಕೃಷ್ಣೈಕ್ಯ ಪೇಜಾವರ ವಿಶ್ವೇಶತೀರ್ಥರ ಇನ್ನೊಂದು ವಿಶೇಷವೆಂದರೆ ಅವರ ವಾಹನದಲ್ಲಿ ಪಟ್ಟದ ದೇವರ ಮೂರ್ತಿಯ ಡಬ್ಬದ ಜೊತೆಗೆ ಒಂದು ಏಣಿಯೂ ಇರುತ್ತಿತ್ತಂತೆ. ಒಂದು ವೇಳೆ ಪೂಜೆಯ ಸಮಯದಲ್ಲಿ ಇಳಿಯಲಾರದ ಕೆರೆನೋ, ಸಣ್ಣ ಬಾವಿನೋ ಸಿಕ್ಕಿದರೆ ಏಣಿ ಇಟ್ಟು ಇಳಿಯುತ್ತಿದ್ದರಂತೆ! ಪೇಜಾವರ ವಿಶ್ವೇಶತೀರ್ಥರು ಇಷ್ಟು ಕಟ್ಟುನಿಟ್ಟಾಗಿ ಪೂಜೆ ಮಾಡುತ್ತಿದ್ದರಂತೆ! ಪುತ್ತಿಗೆ ಸುಗುಣೇಂದ್ರ ತೀರ್ಥರು ವಿದೇಶ ಪ್ರವಾಸದ ಸಂದರ್ಭದಲ್ಲಿ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರೇ? ಅಮೆರಿಕದಲ್ಲಿ ಕೆರೆ ಹುಡುಕಿ ಅದರ ಪಕ್ಕವೇ ವಾಸಿಸುತ್ತಿದ್ದರೇ? ಅಮೆರಿಕದ ಬೋರ್ ವೆಲ್ ನೀರಿನ ಸ್ನಾನದಲ್ಲಿ ಮಾಡಿದ ಪೂಜೆಯಿಂದ ಸ್ವರ್ಗಪ್ರಾಪ್ತಿ ಸಾಧ್ಯವೇ?
ಪುತ್ತಿಗೆ ಸುಗುಣೇಂದ್ರ ತೀರ್ಥರು ಈಗ ಉಡುಪಿ ಪರ್ಯಾಯ ಸರ್ವಜ್ಞ ಪೀಠಾಧಿಪತಿಗಳು. ಪರ್ಯಾಯವೆಂದರೆ ಪುರಪ್ರವೇಶ, ಅದ್ದೂರಿ ಕಾರ್ಯಕ್ರಮ, ಕೋಟಿಗಟ್ಟಲೆ ಹಣದ ವ್ಯವಹಾರಗಳ ಜಾತ್ರಾ ಕಾರ್ಯಕ್ರಮ ಎಂದು ಅವರಂದುಕೊಂಡಿದ್ದಾರೆ. ಪರ್ಯಾಯವೆಂದರೆ ಅಷ್ಠಮಠಗಳ ಪೈಕಿ ಕೃಷ್ಣನ ಪೂಜೆಯ ಪಾಳಿ ಬದಲಾವಣೆ ಎಂದೂ ಅಂದುಕೊಂಡವರಿದ್ದಾರೆ. ಮಧ್ವಾಚಾರ್ಯರ ಪ್ರಕಾರ ಇವೆರಡೂ ಅಲ್ಲ. ಉಡುಪಿಯ ಕೃಷ್ಣಮಠದಲ್ಲಿ ದಾಸೋಹ ಮಾಡುವ ಜವಾಬ್ದಾರಿ ವಹಿಸಿಕೊಳ್ಳುವುದು ಪರ್ಯಾಯದ ಉದ್ದೇಶ. ಅದಕ್ಕಾಗಿಯೇ ಪರ್ಯಾಯ ಹಸ್ತಾಂತರ ಎಂದರೆ ಮಧ್ವಾಚಾರ್ಯರಿಂದ ಬಳುವಳಿಯಾಗಿ ಬಂದ ಅಕ್ಷಯ ಪಾತ್ರೆ ಮತ್ತು ಸಟ್ಟುಗ (ದೊಡ್ಡ ಚಮಚ) ದ ಹಸ್ತಾಂತರವನ್ನು ನಿಕಟಪೂರ್ವ ಪರ್ಯಾಯ ಸ್ವಾಮೀಜಿ ಭಾವೀ ಪರ್ಯಾಯ ಸ್ವಾಮೀಜಿಗೆ ಹಸ್ತಾಂತರ ಮಾಡಬೇಕು. ನಿಕಟ ಪೂರ್ವ ಪರ್ಯಾಯ ಸ್ವಾಮೀಜಿಗಳು ಪುತ್ತಿಗೆ ಸುಗುಣೇಂದ್ರ ತೀರ್ಥರಿಗೆ ಅಕ್ಷಯಪಾತ್ರೆ ಮತ್ತು ಸಟ್ಟುಗದ ಹಸ್ತಾಂತರ ಮಾಡಿದ್ದಾರೆಯೇ? ಮಾಧ್ವ ನಿಯಮದ ಈ ಲೋಪಗಳು ಸುಗುಣೇಂದ್ರ ತೀರ್ಥರನ್ನು ಸ್ವರ್ಗಕ್ಕೆ ಕರೆದೊಯ್ಯುತ್ತದೆಯೇ?
ನಾನು ಮೇಲೆ ಹೇಳಿದ ಎಲ್ಲಾ ಉದಾಹರಣೆಗೂ ಜನರ ನಂಬಿಕೆಗಳಷ್ಟೆ. ವಾಸ್ತವವಾಗಿ ಆತ್ಮ, ಸ್ವರ್ಗ, ನರಕಗಳೆಂಬುದೇ ಇಲ್ಲ. ಸತ್ತ ಬಳಿಕ ಒಂದೋ ಬೂದಿಯಾಗುತ್ತೇವೆ, ಅಥವಾ ಮಣ್ಣಾಗುತ್ತೇವೆ, ಅಥವಾ ಕೊಳೆತು ಹೋಗುತ್ತೇವೆ ಅಷ್ಟೆ.
ಹಾಗಾಗಿ, ಸ್ವರ್ಗ ನರಕಗಳೆರಡೂ ನಾವು ಬದುಕಿರುವ ಭೂಮಿಯಲ್ಲೇ ಇದೆ. ಜಾತಿ, ಧರ್ಮ, ಭಾಷೆ, ಗಡಿಗಳ ಕಾರಣಕ್ಕಾಗಿ ದ್ವೇಷ ಮಾಡದೇ ಸಹಬಾಳ್ವೆ ನಡೆಸಿದರೆ ಭೂಮಿ ಸ್ವರ್ಗವಾಗಿರುತ್ತದೆ. ಸ್ವರ್ಗ ಸಿಗಲ್ಲ ಎಂದು ಸಂಸ್ಕೃತ ಭಯೋತ್ಪಾದನೆಯೋ, ಧಾರ್ಮಿಕ ಭಯೋತ್ಪಾದನೆಯೋ ಮಾಡಿದರೆ ಸುಗುಣೇಂದ್ರರಿಗೂ, ಅವರ ಭಾಷಣ ಕೇಳಿದ ಜನರಿಗೂ ಭೂಮಿಯೇ ನರಕವಾಗಿರುತ್ತದೆ.

ನವೀನ್ ಸೂರಿಂಜೆ
ಪತ್ರಕರ್ತ, ಲೇಖಕ
ಅದಕ್ಕೆ ಅಂದೆ 12 ನೆಯ ಶತಮಾನದಲ್ಲಿ ಗುರು ಬಸವಾದಿ ಶರಣರು, ಈ ವೈಧಿಕ ಮನುವಾದಿಗಳ ವಿರುದ್ದವಾಗಿ ಸಾಮಾಜಿಕ ಸುಧಾರಣೆ ಕ್ರಾಂತಿ ಮಾಡಿದ್ದಾರೆ , ವೈಚಾರಿಕ ಪ್ರಜ್ಞೆ, ವೈಜ್ಞಾನಿಕ ಅಧ್ಯಯದಿನದ , ನಡೆದು ನುಡಿದು ತೋರಿಸಿದ್ದಾರೆ ,
ಸತ್ಯವೆ ನುಡಿವದೇ ಸ್ವರ್ಗ ಲೋಕ, ಮಿತ್ತೆಯವ ನುಡಿಯಿದೆ ಮೃತ್ಯೂಲೋಕ, ಆಚಾರವೆ ಸ್ವರ್ಗ, ಅನಾಚಾರವೇ ನರಕ, ಎಂದು ಗುರು ಬಸವೇಶ್ವರರ ವಚನದಲ್ಲಿ ತಿಸಿದ್ದಾರೆ ನೋಡಿ ಸರ್