ಮುನಿರತ್ನನ ಪರ ನಿಂತ ಸ್ತ್ರೀಯರು ಆತನ ʼಏಡ್ಸ್‌ ಟ್ರ್ಯಾಪ್‌ʼ ಕೃತ್ಯವನ್ನು ಬೆಂಬಲಿಸುವರೇ?; ರವಿ ಬೆಂಬಲಿಗರು ಆ ಪದವನ್ನು ಒಪ್ಪುವರೇ?

Date:

Advertisements

ಇತ್ತೀಚೆಗೆ ಮಹಿಳೆಯರ ಘನತೆಗೆ ಧಕ್ಕೆ ತಂದ ರಾಜಕಾರಣಿಗಳಿಗೆ ಯಾವುದೇ ಹಿಂಜರಿಕೆಯಿಲ್ಲದೇ ಮಹಿಳೆಯರೇ ಜೈಕಾರ ಹಾಕುತ್ತಿರುವುದು ಸಮಾಜವೇ ತಲೆ ತಗ್ಗಿಸಬೇಕಾದ ಬೆಳವಣಿಗೆ. ಬಿಜೆಪಿ ಶಾಸಕರಾದ ಸಿ ಟಿ ರವಿ ಮತ್ತು ಮುನಿರತ್ನ ಪ್ರಕರಣ ಇದಕ್ಕೆ ತಾಜಾ ಉದಾಹರಣೆಯಾಗಿದೆ.

ರಾಜಕಾರಣದಲ್ಲಿ ಮಹಿಳೆಯರು ಹೆಚ್ಚು ಹೆಚ್ಚು ಕಾಣಿಸಿಕೊಳ್ಳಬೇಕು. ಪ್ರಮುಖ ಅಧಿಕಾರದ ಸ್ಥಾನಗಳಲ್ಲಿ ಮಹಿಳೆಯರು ಇರಬೇಕು ಎಂಬುದು ಸ್ತ್ರೀ ಸಬಲೀಕರಣ, ಮಹಿಳಾ ಸಮಾನತೆ ಬಯಸುವ ಎಲ್ಲರೂ ಒಪ್ಪುವ ವಿಚಾರ. ಆದರೆ, ಪುರುಷ ಪ್ರಧಾನ ಸಮಾಜದಲ್ಲಿ ಯಾವುದೇ ಕ್ಷೇತ್ರದಲ್ಲೇ ಇರಲಿ, ಮಹಿಳೆ ತಮ್ಮ ಅಡಿಯಾಳಾಗಿಯೇ ಇರಬೇಕು ಎಂದು ಬಯಸುವ ಪುರುಷಹಂಕಾರ ಮಾತ್ರ ಇಳಿದಿಲ್ಲ. ಅದು ಜಗತ್ತು ಎಷ್ಟೇ ಮುಂದುವರಿದರೂ ಇಳಿಯುವ ಲಕ್ಷಣ ಕಾಣುತ್ತಿಲ್ಲ. ಈ ಮಧ್ಯೆ ಮಹಿಳೆಯರ ಮೇಲಿನ ದಬ್ಬಾಳಿಕೆಯನ್ನು ಎಲ್ಲ ಮಹಿಳೆಯರೂ ಒಂದಾಗಿ ಖಂಡಿಸುತ್ತಿಲ್ಲ ಎಂಬುದು ಕೂಡಾ ಪುರುಷರ ಈ ಮನೋಭಾವ ಬದಲಾಗದಿರಲು ಒಂದು ಕಾರಣವಾಗಿದೆ. ಅದರಲ್ಲೂ ಪಕ್ಷ, ಧರ್ಮ, ಜಾತಿ, ಅಂತಸ್ತು ನೋಡಿ ಅಪರಾಧವನ್ನು ಖಂಡಿಸುವ ಮತ್ತು ಖಂಡಿಸದೇ ಇರುವ ಮನಸ್ಥಿತಿ ಹೆಣ್ಣುಮಕ್ಕಳಲ್ಲಿರುವುದು ಸ್ತ್ರೀಕುಲಕ್ಕೆ ಮಾರಕ. ಒಂದು ಪಕ್ಷದ ಮಹಿಳೆಗೆ ಅನ್ಯಾಯ ಆದಾಗ ಮತ್ತೊಂದು ಪಕ್ಷ ಬೆಂಬಲಿಸುವ ಮಹಿಳೆಯರು ಮೌನವಾಗಿರುವುದು, ಒಂದು ಧರ್ಮದ ಮಹಿಳೆಗೆ ಅನ್ಯಾಯ ಆದಾಗ ಮತ್ತೊಂದು ಧರ್ಮದವರು ಖಂಡಿಸದಿರೋದು, ಪ್ರಭಾವಿಗಳು ಸ್ತ್ರೀ ಶೋಷಣೆ ಮಾಡಿದಾಗ ಅವರ ಬೆಂಬಲಕ್ಕೆ ನಿಲ್ಲುವುದು, ಇಷ್ಟೇ ಅಲ್ಲ ಸ್ತ್ರೀ ನಿಂದಕ, ಸ್ತ್ರೀಶೋಷಕ ಪುರುಷರಿಗೆ ಮಹಿಳೆಯರೇ ಜೈಕಾರ ಹಾಕುವುದು ಅತ್ಯಂತ ಖಂಡನೀಯ ನಡೆ. ಇದನ್ನು ಯಾವ ಕಾಲಕ್ಕೂ, ಯಾವ ಸಮಾಜದಲ್ಲೂ ಒಪ್ಪಲಾಗದು.

ಆದರೆ, ಇತ್ತೀಚೆಗೆ ಮಹಿಳೆಯರ ಘನತೆಗೆ ಧಕ್ಕೆ ತಂದ ರಾಜಕಾರಣಿಗಳಿಗೆ ಯಾವುದೇ ಹಿಂಜರಿಕೆಯಿಲ್ಲದೇ ಮಹಿಳೆಯರೇ ಜೈಕಾರ ಹಾಕುತ್ತಿರುವುದು ಸಮಾಜವೇ ತಲೆ ತಗ್ಗಿಸಬೇಕಾದ ಬೆಳವಣಿಗೆ. ಇತ್ತೀಚಿನ ಎರಡು ಘಟನೆಗಳು ಇದಕ್ಕೆ ಉದಾಹರಣೆಯಾಗಿದೆ.

Advertisements
ಮೊಟ್ಟೆ ದಾಳಿ

ಡಿಸೆಂಬರ್ 25ರಂದು ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿ ಬರುತ್ತಿದ್ದಾಗ ಆರ್‌ಆರ್‌ ನಗರದ ಶಾಸಕ ಮುನಿರತ್ನ ತಲೆಗೆ ಹತ್ತಿರದಿಂದ ಯುವಕನೊಬ್ಬ ಮೊಟ್ಟೆ ಎಸೆದಿದ್ದಾನೆ. “ಮೊಟ್ಟೆಯೊಳಗೆ ಆಸಿಡ್‌ ತುಂಬಿ ದಾಳಿ ನಡೆಸಲಾಗಿದೆ, ನನ್ನ ಕೊಲೆಗೆ ಯತ್ನ ನಡೆದಿದೆ. ಈ ಕೃತ್ಯದ ಹಿಂದೆ ಡಿಸಿಎಂ‌, ಡಿ ಕೆ ಶಿವಕುಮಾರ್‌, ಡಿ ಕೆ ಸುರೇಶ್‌, ಕುಸುಮಾ, ಹನುಮಂತರಾಯಪ್ಪ ಇದ್ದಾರೆ. ನನ್ನ ಕೊಲೆ ಮಾಡಿ ಕುಸುಮಾ ಅವರನ್ನು ಶಾಸಕರನ್ನಾಗಿ ಮಾಡುವ ಉದ್ದೇಶವಿದೆ” ಎಂಬುದು ಮುನಿರತ್ನ ಆರೋಪ.

ಆದರೆ, ಮೊಟ್ಟೆ ದಾಳಿಯ ನಂತರ ಮುನಿರತ್ನ ಬೆಂಬಲಿಗರು ನಡೆಸಿದ ಪ್ರತಿಭಟನೆಯಲ್ಲಿ ಮಹಿಳೆಯರು ಭಾಗವಹಿಸಿದ್ದು ನಿಜಕ್ಕೂ ತಲೆ ತಗ್ಗಿಸುವ ವಿಚಾರ. ಮುನಿರತ್ನನ ಮೇಲಿರುವ ಆರೋಪವಾದರೂ ಎಂಥದ್ದು! ಹಲವು ಏಡ್ಸ್‌ ಸೋಂಕಿತ ಮಹಿಳೆಯರನ್ನು ಬೆದರಿಸಿ, ಅಮಿಷವೊಡ್ಡಿ ಅವರಿಂದ ಬೇರೆಯವರಿಗೆ ಸೋಂಕು ಹರಡಿದ ಆರೋಪವಿದೆ. ಇಡೀ ಕ್ಷೇತ್ರದ ಜನ ಮತ್ತು ಮತದಾರರಿಗೆ ಮುನಿರತ್ನನಂತಹ ಶಾಸಕ ಇರುವುದು ನಿಜಕ್ಕೂ ಕಳಂಕ. ಹಲವು ಮಹಿಳೆಯರು ಆತನ ಕುಕೃತ್ಯಕ್ಕೆ ಬಲಿಪಶುವಾಗಿದ್ದಾರೆ. ಆತನಿಂದ ಅನ್ಯಾಯಕ್ಕೊಳಗಾದ ಮಹಿಳೆಯರು ಧೈರ್ಯದಿಂದ ಸಮಾಜದ ಮುಂದೆ ಬಂದು ತಾವು ಅನುಭವಿಸಿದ ನೋವುಗಳನ್ನು ಹೇಳಿಕೊಂಡಿದ್ದಾರೆ. ಪೊಲೀಸರಿಗೆ ದೂರು ನೀಡಿದ್ದಾರೆ. ಅಂಥ ಮಹಾನ್‌ ದುಷ್ಟನಿಗೆ ಈಗಲೂ ತಾಯಂದಿರು ಬೆಂಬಲಕ್ಕೆ ನಿಂತಿದ್ದಾರೆ ಎಂಬುದೇ ದುರಂತ. ಆತ ಮಾಡಿದ ಸ್ವಾರ್ಥದ ಸಹಾಯಕ್ಕೆ ಇಷ್ಟೊಂದು ಋಣಿಯಾಗಿರಬೇಕೇ? ತಮ್ಮ ಘನತೆಯನ್ನೂ ಮರೆತು ಬೆಂಬಲಿಸಬೇಕೇ? ಮುಂದೆ ತಮ್ಮ ಮನೆ ಮಕ್ಕಳೂ ಈ ದುಷ್ಟನ ಪಾಪ ಕೃತ್ಯಕ್ಕೆ ಬಲಿಯಾದರೆ ಆಗೇನು ಮಾಡುವರು?

ಮುನಿರತ್ನ ಅಭಿಮಾನಿ ಮಹಿಳೆಯರು 1

ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಮುನಿರತ್ನ ನಾಯ್ಡುಗೆ ಮಹಿಳಾ ಬೆಂಬಲಿಗರು ಹೆಚ್ಚು ಇದ್ದಾರೆ. ಆತನ ಎದುರಾಳಿಯಾಗಿ ಸುಶಿಕ್ಷಿತ ಮಹಿಳೆಯೊಬ್ಬರು ಸ್ಪರ್ಧಿಸಿದರೂ, ಅತಿ ಹೆಚ್ಚು ಸುಶಿಕ್ಷಿತರು, ಸೆಲಬ್ರಿಟಿಗಳು ವಾಸವಾಗಿರುವ ಕ್ಷೇತ್ರದಲ್ಲಿ ಆಕೆಗೆ ಸೋಲಾಗಿದೆ. ಸ್ಲಂ ನಿವಾಸಿಗಳು, ತಮಿಳು ಭಾಷಿಕರು ಮುನಿರತ್ನನ ಕಾಯಂ ಮತದಾರರು. ಚುನಾವಣೆಯ ಸಮಯದಲ್ಲಿ ಟಿವಿ, ಸೆಟ್‌ಟಾಪ್‌ ಬಾಕ್ಸ್‌, ಸೀರೆ, ದಿನಸಿ ಹೀಗೆ ಮತದಾರರಿಗೆ ನಾನಾ ಆಮಿಷವೊಡ್ಡಿ ಮತವನ್ನು ಭದ್ರಪಡಿಸಿಕೊಂಡಿದ್ದಾರೆ. ಇದು ಬಹುತೇಕ ಜನಪ್ರತಿನಿಧಿಗಳು ತುಳಿಯುವ ಅಕ್ರಮ ಮತ ಪಡೆಯುವ ದಾರಿ. ಆದರೆ ಮುನಿರತ್ನ ಚುನಾವಣಾ ರಾಜಕಾರಣ ಶುರುವಾಗಿದ್ದೇ ಅಕ್ರಮ ಚಟವಟಿಕೆಗಳಿಂದ. ಅದಕ್ಕೂ ಮೊದಲು ಆತ ಚಲನಚಿತ್ರ ನಿರ್ಮಾಪಕ, ರೌಡಿ ಕೊರಂಗು ಸಹೋದರ ಎಂಬುದು ಆತನ ಬೆನ್ನಿಗಿರುವ ಕರಾಳ ಚರಿತ್ರೆ. 2018ರಲ್ಲಿ ಕಾಂಗ್ರೆಸ್‌ನಿಂದ ಎರಡನೇ ಬಾರಿ ಗೆದ್ದಾಗ ತಮಗೆ ಸೇರಿದ್ದ ಫ್ಲ್ಯಾಟ್‌ವೊಂದರಲ್ಲಿ ಲಕ್ಷಾಂತರ ನಕಲಿ ವೋಟರ್‌ ಐಡಿಗಳನ್ನು ಸಂಗ್ರಹಿಸಿಟ್ಟು ಸಿಕ್ಕಿ ಬಿದ್ದಿದ್ದರು. ಎದುರಾಳಿ ಬಿಜೆಪಿಯ ತುಳಸಿ ಮುನಿರಾಜು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದು, ಆ ಪ್ರಕರಣ ಇನ್ನೂ ಇತ್ಯರ್ಥ ಆಗಿಲ್ಲ. 2019ರಲ್ಲಿ ಸಮ್ಮಿಶ್ರ ಸರ್ಕಾರವನ್ನು ಆಪರೇಷನ್‌ ಕಮಲದ ಮೂಲಕ ಉರುಳಿಸಿದಾಗ ಮುನಿರತ್ನ ಕಮಲ ಪಾಳಯದ ಪಾಲಾಗಿದ್ದರು. ನಂತರ ನಡೆದ ಉಪ ಚುನಾವಣೆಯದಲ್ಲಿ ಕಾಂಗ್ರೆಸ್‌ನ ಹೊಸ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಅವರ ಎದುರು ಜಯಗಳಿಸಿದ್ದರು. 2023ರಲ್ಲಿ ಮತ್ತೆ ಕುಸುಮಾ ಎದುರಾಳಿಯಾಗಿ ಸೆಣಸಿದ್ದರು. ಆ ಸಮಯದಲ್ಲಿ ಕುಸುಮಾ ವಿರುದ್ಧ ವೈಯಕ್ತಿಕ ದಾಳಿ ನಡೆಸುತ್ತಾ, ಆಕೆಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಾ ಬಂದಿತ್ತು ಮುನಿರತ್ನ ಪಡೆ. ಕುಸುಮಾ ಗೆದ್ದೇ ಬಿಡುತ್ತಾರೆ ಎಂಬಷ್ಟು ಬಿರುಸಿನ ಪ್ರಚಾರ ನಡೆಸಿತ್ತು ಕಾಂಗ್ರೆಸ್‌. ಆದರೆ ಕೊನೇ ಕ್ಷಣದಲ್ಲಿ ಮುನಿರತ್ನ ಪರ ಕ್ಷೇತ್ರದ ಜನ ತೀರ್ಪು ನೀಡಿದ್ದರು.

ಕುಸುಮಾ 2

ಮುನಿರತ್ನ ರೌಡೀಸಂ ಬಗ್ಗೆ ಮಾತ್ರ ಗೊತ್ತಿದ್ದ ಜನಕ್ಕೆ ಆತನ ಕ್ರೂರಾತಿ ಕ್ರೂರತನದ ದರ್ಶನವಾಗಿದ್ದು ಕಳೆದ ಜೂನ್‌ನಲ್ಲಿ. ದಲಿತ ಗುತ್ತಿಗೆದಾರರೊಬ್ಬರಿಗೆ ತಿಂಗಳಿಗೆ 30 ಲಕ್ಷ ರೂ. ಕಮಿಷನ್‌ ನೀಡುವಂತೆ ಪೀಡಿಸುತ್ತಿದ್ದ ಮುನಿರತ್ನ ತನ್ನ ಕಚೇರಿಗೆ ಕರೆಸಿಕೊಂಡು ಜಾತಿ ನಿಂದನೆ ಮಾಡಿದ್ದಲ್ಲದೇ ಗುತ್ತಿಗೆದಾರನ ಪತ್ನಿಯ ಘನತೆಗೆ ಧಕ್ಕೆ ತರುವಂತೆ ಅಶ್ಲೀಲವಾಗಿ ನಿಂದಿಸಿದ್ದರು. ಅದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿಕೊಂಡಿದ್ದ ಗುತ್ತಿಗೆದಾರ ಚೆಲುವರಾಜು ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಆತ ಬಂಧನಕ್ಕೊಳಗಾದ ನಂತರ ಮಹಿಳೆಯೊಬ್ಬರು ಅತ್ಯಾಚಾರದ ಪ್ರಕರಣ ದಾಖಲಿಸಿದ್ದಲ್ಲದೇ ಹೆಚ್‌ಐವಿ ಸೋಂಕಿತ ಮಹಿಳೆಯರನ್ನು ಬಳಸಿ ತನಗೆ ಸಹಕರಿಸದ ಅಧಿಕಾರಿಗಳು ಮತ್ತು ತನ್ನದೇ ಪಕ್ಷದ ಮುಖಂಡರಿಗೆ ಹನಿಟ್ರ್ಯಾಪ್‌ ಮಾಡಿಸುತ್ತಿದ್ದ ಭಯಾನಕ ಕೃತ್ಯವನ್ನು ಬಹಿರಂಗಪಡಿಸಿದ್ದರು. ಹನಿಟ್ರ್ಯಾಪ್‌ ಜಾಲದಲ್ಲಿ ಸಿಲುಕಿದ ಮಹಿಳೆಯೇ ಅದು ನಡೆಯುತ್ತಿದ್ದ ಅಪಾರ್ಟ್‌ಮೆಂಟ್‌, ಕಚೇರಿಯ ಮಾಹಿತಿ ನೀಡಿದ್ದರು. ವಿಪಕ್ಷ ನಾಯಕ ಆರ್‌ ಅಶೋಕ್‌ಗೆ ಹೆಚ್‌ಐವಿ ಸೋಂಕಿತ ರಕ್ತ ಇಂಜೆಕ್ಟ್‌ ಮಾಡುವ ಹುನ್ನಾರ ನಡೆಸಿರುವುದು ಬೆಳಕಿಗೆ ಬಂದಿತ್ತು.

ಆನಂತರ ಮತ್ತೊಬ್ಬ ಮಹಿಳೆ ಮುನಿರತ್ನ ವಿರುದ್ಧ ಅತ್ಯಾಚಾರದ ದೂರು ದಾಖಲಿಸಿದ್ದರು. ಸುಮಾರು ಎರಡು ತಿಂಗಳು ನ್ಯಾಯಾಂಗ ಬಂಧನದಲ್ಲಿದ್ದ ಮುನಿರತ್ನ ಜಾಮೀನಿನ ಮೇಲೆ ಹೊರ ಬಂದು ಜಾತಿ ನಿಂದನೆ ಮಾಡಿರುವ ಆಡಿಯೋ ತನ್ನದಲ್ಲ ಎಂದು ನಿರಾಕರಿಸಿದ್ದರು. ಆದರೆ ತನಿಖೆ ನಡೆಸುತ್ತಿರುವ ಎಸ್‌ಐಟಿ ಫೊರೆನ್ಸಿಕ್‌ ಪರೀಕ್ಷೆಯಲ್ಲಿ ಧ್ವನಿ ಆತನದ್ದೇ ಎಂದು ದೃಢಪಟ್ಟಿರುವುದಾಗಿ ತಿಳಿಸಿದೆ. ಕೋರ್ಟ್‌ಗೆ ಆರೋಪಪಟ್ಟಿ ಕೂಡ ಸಲ್ಲಿಕೆಯಾಗಿದೆ. ಅಷ್ಟೇ ಅಲ್ಲ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ (ಡಿ.25) ಎಸ್‌ಐಟಿ ಅಧಿಕಾರಿಗಳು ಸ್ಪೀಕರ್‌ಗೆ ಅನುಮತಿ ಕೇಳಿ ಪತ್ರ ಬರೆದಿದ್ದಾರೆ. ಅದೇ ದಿನ ಮುನಿರತ್ನ ಮೇಲೆ ಮೊಟ್ಟೆ ದಾಳಿ ನಡೆದಿದೆ. ಮೊಟ್ಟೆ ಬೀಳುವ ಮುನ್ನವೇ ಆಸಿಡ್‌ ದಾಳಿ ಎಂದು ವ್ಯಕ್ತಿಯೊಬ್ಬ ಹೇಳಿರುವುದು ಮಾಧ್ಯಮಗಳ ಕ್ಯಾಮೆರಾದಲ್ಲಿ ರೆಕಾರ್ಡ್‌ ಆಗಿದೆ. ಇದು ಮುನಿರತ್ನನ ಕ್ಷೇತ್ರದ ಜನರ ಅನುಕಂಪ ಗಿಟ್ಟಿಸಿಕೊಳ್ಳಲು ಮಾಡುತ್ತಿರುವ ನಾಟಕ ಎಂದು ಕಾಂಗ್ರೆಸ್‌ ನಾಯಕರು ಟೀಕಿಸಿದ್ದಾರೆ.

ಮುನಿರತ್ನನ ಮೇಲೆ ಇಷ್ಟು ದೊಡ್ಡ ಆರೋಪಗಳು ಬಂದಿದ್ದರೂ ಬಿಜೆಪಿ ಆತನನ್ನು ಪಕ್ಷದಿಂದ ಉಚ್ಛಾಟನೆ ಮಾಡಿಲ್ಲ. ಆತನ ಬಳಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಸಹಿತ ಹಲವು ನಾಯಕರ, ಸ್ವಾಮೀಜಿಯೊಬ್ಬರ ಅಶ್ಲೀಲ ವಿಡಿಯೋ ಇದೆ ಎಂಬ ಮಾತುಗಳೂ ಕೇಳಿಬಂದಿದ್ದವು. ಆ ಕಾರಣಕ್ಕಾಗಿ ಬಿಜೆಪಿಯವರು ಆತನ ಮೇಲೆ ಶಿಸ್ತುಕ್ರಮ ಜರುಗಿಸಲು ಹಿಂಜರಿಯುತ್ತಿದ್ದಾರೆ ಎಂಬ ಆರೋಪಗಳಿವೆ. ಜಾಮೀನಿನ ಮೇಲೆ ಹೊರಬಂದ ಮುನಿರತ್ನ ಸಭೆಗಳಲ್ಲಿ ಭಾಗವಹಿಸುತ್ತಿರುವುದು ಸಾರ್ವಜನಿಕರ ವಿರೋಧಕ್ಕೆ ಕಾರಣವಾಗಿದೆ. ಬಿಜೆಪಿ ನಡೆಸಿದ್ದ ಮುಡಾ ಪ್ರಕರಣದ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮುನಿರತ್ನ “ಸಿದ್ದರಾಮಯ್ಯ, ಕಾಂಗ್ರೆಸ್‌ ಸರ್ಕಾರ ಮಠ, ಮಂದಿರಗಳ ಭೂಮಿಯನ್ನು ಲೂಟಿ ಮಾಡುತ್ತಿದೆ” ಎಂದು ಆರೋಪಿಸಿದ್ದರು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲೂ ಭಾಗಿಯಾಗಿ ಕಾಂಗ್ರೆಸ್‌ ಮುಖಂಡರಿಂದ ತೀವ್ರ ಆಕ್ಷೇಪ ಎದುರಿಸುವಂತಾಗಿತ್ತು.

ಚಿಕ್ಕಮಗಳೂರಿನ ಮಹಿಳೆಯರು ಸಿ ಟಿ ರವಿ ಬಳಸಿದ ಪದವನ್ನು ಸಹಿಸುವರೇ?

ಡಿ. 19ರಂದು ಬೆಳಗಾವಿ ಚಳಿಗಾಲದ ಅಧಿವೇಶನದ ಕಡೆಯ ದಿನ ಸುವರ್ಣ ಸೌಧದ ವಿಧಾನ ಪರಿಷತ್ತಿನಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ಅವರಿಗೆ ಆಕ್ಷೇಪಾರ್ಹ ಪದ ಬಳಸಿದ್ದ ಎಂಎಲ್‌ಸಿ ಸಿ. ಟಿ. ರವಿ ವಿರುದ್ಧ ಸಚಿವೆಯ ದೂರು ಆಧರಿಸಿ ಪೊಲೀಸರು ಸುವರ್ಣಸೌಧದ ಬಳಿಯಿಂದಲೇ ಆರೋಪಿಯನ್ನು ಬಂಧಿಸಿ, ಮರುದಿನ ಕೋರ್ಟ್‌ ಆದೇಶದಂತೆ ಬಿಡುಗಡೆ ಮಾಡಲಾಗಿತ್ತು. ರವಿ ಚಿಕ್ಕಮಗಳೂರಿಗೆ ಬರುವಾಗ ಬಿಜೆಪಿ ಕಾರ್ಯಕರ್ತರು ಯುದ್ಧ ಗೆದ್ದು ಬಂದ ಯೋಧನಿಗೆ ಸನ್ಮಾನ ಮಾಡುವಂತೆ ಹಾರ ಹಾಕಿ, ಪಟಾಕಿ ಸಿಡಿಸಿ ಹೂಮಳೆಗರೆದು ಬರಮಾಡಿಕೊಂಡಿದ್ದರು. ಅತಿರೇಕದ ಪರಮಾವಧಿ ಎಂಬಂತೆ ಏಳು ಆಂಬುಲೆನ್ಸ್‌ಗಳು ಕೆಂಪು ದೀಪ ಉರಿಸಿ ಸೈರನ್‌ ಹಾಕುತ್ತಾ ವೇಗವಾಗಿ ರವಿಯ ಮನೆಯವರೆಗೂ ಬಂದಿದ್ದವು!

ರವಿ ಸ್ವಾಗತ

ಸಿ ಟಿ ರವಿ ಪತ್ನಿ ಪಲ್ಲವಿ ತಮ್ಮ ಮನೆಯಲ್ಲಿ ಬಿಜೆಪಿ ಕಾರ್ಯಕರ್ತೆಯರನ್ನು ಒಟ್ಟುಗೂಡಿಸಿ,”ರವಿ ಸಂಸ್ಕಾರವಂತ. ಅದಕ್ಕಾಗಿಯೇ ಇಷ್ಟೊಂದು ಮಹಿಳೆಯರು ನಮ್ಮ ಮನೆಯ ಬಳಿ ಮಧ್ಯರಾತ್ರಿಯಾದರೂ ನಿಂತು ಕಾಯುತ್ತಿದ್ದಾರೆ” ಎಂದು ಹೇಳಿ ಪತಿಯ ಗುಣಗಾನ ಮಾಡಿದ್ದರು. ಅಷ್ಟೇ ಅಲ್ಲ ಟಿವಿ ಮಾಧ್ಯಮದವರು ರವಿಯವರ ಅಡುಗೆ ಮನೆಗೆ ಹೋಗಿ, “ರವಿಗಾಗಿ ಭರ್ಜರಿ ಅಡುಗೆ ಸಿದ್ಧ ಮಾಡುತ್ತಿದ್ದಾರೆ” ಎಂದು ವರದಿ ಮಾಡಿದ್ರು. ಅಡುಗೆ ಮನೆಯಲ್ಲಿ ಹತ್ತಾರು ಮಹಿಳೆಯರನ್ನು ಸೇರಿಸಿಕೊಂಡು ಅಕ್ಕಿ ರೊಟ್ಟಿ ಮಾಡುತ್ತಿದ್ದ ಪತ್ನಿಗೆ ತಮ್ಮ ಪತಿಯ ಮೇಲೆ ಬಂದಿರುವ ಆರೋಪ, ಆತ ಆಡಿದ್ದ ಎನ್ನಲಾದ ಪದ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಮಾತ್ರ ಮಾಡಿದ ಅವಮಾನವಲ್ಲ, ಇಡೀ ಹೆಣ್ಣು ಕುಲದ ಘನತೆಗೆ ಧಕ್ಕೆ ತಂದಿದೆ ಎಂದು ಅನ್ನಿಸದಿರುವುದು ರಾಜಕೀಯದಲ್ಲಿ ಗುರುತಿಸಿಕೊಳ್ಳುತ್ತಿರುವ ಹಾಗೂ ರಾಜಕಾರಣಿಗಳ ಮನೆಯ ಮಹಿಳೆಯರೂ ತಮ್ಮ ಘನತೆ ಮರೆತಿರುವುದರ ಸೂಚಕ. ಸ್ವತಃ ರವಿ ಪತ್ನಿ ಚಿಕ್ಕಮಗಳೂರು ಬಿಜೆಪಿಯಲ್ಲಿ ಯಾವುದೋ ಒಂದು ಹುದ್ದೆಯಲ್ಲಿದ್ದಾರೆ. ನಾಳೆ ಸಿ ಟಿ ರವಿ ಸಚಿವೆಗೆ ಆ ಪದ ಬಳಸಿದ್ದು ನಿಜ ಎಂದು ಸಾಬೀತಾದರೆ ಆಗ ಖಂಡಿಸುವರೇ? ಅಥವಾ ತಮಗೇ ಯಾರಾದರೂ ಸಾರ್ವಜನಿಕವಾಗಿ ನಿಂದಿಸಲು ಆ ಪದ ಬಳಸಿದರೆ ಸುಮ್ಮನಿರುವರೇ? ಈ ಪ್ರಶ್ನೆಗಳನ್ನು ಕೇಳಬೇಕಾದ ಮಾಧ್ಯಮಗಳು ಕೇಡಿಯೊಬ್ಬನನ್ನು ಯೋಧನಂತೆ ತೋರಿಸುತ್ತಿರುವುದು ಮಾಧ್ಯಮಗಳು ತಲುಪಿರುವ ಮಟ್ಟವನ್ನು ತೋರಿಸುತ್ತದೆ.

ರವಿ ಮನೆ

ಹಾಸನದ ಸಂಸದ ಪ್ರಜ್ವಲ್‌ ರೇವಣ್ಣ ಪಕ್ಷದ ಕಾರ್ಯಕರ್ತೆಯರು, ಕೆಲಸದವರು, ಅಧಿಕಾರಿಗಳೆನ್ನದೇ ನೂರಾರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿ ವಿಡಿಯೋ ಚಿತ್ರೀಕರಿಸಿಕೊಂಡ ಪ್ರಕರಣದಲ್ಲಿ ಬಂಧನಕ್ಕೊಳಗಾದಾಗ ಹಾಸನದಲ್ಲಿ ನಡೆದ ಪ್ರತಿಭಟನೆಯಲ್ಲೂ ಜೆಡಿಎಸ್‌ ಕಾರ್ಯಕರ್ತೆಯರು ಭಾಗವಹಿಸಿದ್ದರು. ಇಡೀ ಮಹಿಳಾ ಸಮೂಹವೇ ತಲೆ ತಗ್ಗಿಸುವ ವಿಚಾರವಿದು. ಮಹಿಳೆಯರ ಘನತೆಯನ್ನು ಮಹಿಳೆಯರೇ ಎತ್ತಿ ಹಿಡಿಯದಿದ್ದರೆ ಹೇಗೆ? ಈ ಪ್ರಜ್ಞೆ ಮುಖ್ಯವಾಗಿ ರಾಜಕಾರಣದಲ್ಲಿರುವ ಮಹಿಳೆಯರಿಗೆ ಇರಬೇಕು.

ಇದನ್ನೂ ಓದಿ ವಿಜಯೇಂದ್ರ ರಾಜ್ಯಾಧ್ಯಕ್ಷ ಕುರ್ಚಿ ಮೇಲೆ ‘ಬ್ಯಾಂಡೇಜ್’ ಹಾಕಿದ ಸಿ.ಟಿ. ರವಿ!

ಮಣಿಪುರದಲ್ಲಿ ಬಿಜೆಪಿ ಸರ್ಕಾರ ಇದೆ ಎಂಬ ಕಾರಣಕ್ಕೆ ಅಲ್ಲಿನ ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರವನ್ನು ಬಿಜೆಪಿ ಬೆಂಬಲಿಗ ಮಹಿಳೆಯರು ಖಂಡಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಯೋಗಿ ಆಡಳಿತವಿದೆ ಎಂಬ ಕಾರಣಕ್ಕೆ ಅಲ್ಲಿ ನಿರಂತರವಾಗಿ ಅಪ್ರಾಪ್ತ ಹೆಣ್ಣುಮಕ್ಕಳ ಸಾಮೂಹಿಕ ಅತ್ಯಾಚಾರ, ಕೊಲೆ ನಡೆದರೂ ಖಂಡಿಸದ ಮಹಿಳೆಯರು ಇಂತಹ ಮಹಿಳಾ ಕಂಟಕರಾದ ಮುನಿರತ್ನ, ಪ್ರಜ್ವಲ್‌, ರೇವಣ್ಣ, ಸಿ ಟಿ ರವಿ ಪರ ನಿಂತು ಜೈಕಾರ ಹಾಕುವುದು ನಾಚಿಕೆಗೇಡಿನ ಸಂಗತಿ.

07e0d3e8 3f8a 4b81 8fd5 641335b91d85
ಹೇಮಾ ವೆಂಕಟ್‌
+ posts

ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು.
ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ.
ಮೂರು ಪುಸ್ತಕಗಳು ಪ್ರಕಟಗೊಂಡಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಹೇಮಾ ವೆಂಕಟ್‌
ಹೇಮಾ ವೆಂಕಟ್‌
ʼಈ ದಿನ.ಕಾಂʼನಲ್ಲಿ ಮುಖ್ಯ ವರದಿಗಾರರು. ಉದಯವಾಣಿ, ಪ್ರಜಾವಾಣಿಯಲ್ಲಿ ವರದಿಗಾರ್ತಿಯಾಗಿ ಅನುಭವ. ಮೂರು ಪುಸ್ತಕಗಳು ಪ್ರಕಟಗೊಂಡಿವೆ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X