ಮತೀಯವಾದಿ ವೋಟ್ ಬ್ಯಾಂಕ್ ರಾಜಕಾರಣದ ಒಳಸಂಚನ್ನು ಅರ್ಥ ಮಾಡಿಕೊಳ್ಳದ ಮಣಿಪುರದ ಮಹಿಳೆಯರು ತಮ್ಮ ಸ್ತ್ರೀ ಕುಲಕ್ಕೆ ತಾವೇ ದ್ರೋಹವೆಸಗಿಕೊಳ್ಳುತ್ತಿರುವುದು ಆತ್ಮಹತ್ಯಾಕಾರಿ ಬೆಳವಣಿಗೆಯಾಗಿದೆ. ಇದರ ಮುಂದುವರಿಕೆಯಂತೆ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅದನ್ನು ಗಲಭೆಯ ಅಸ್ತ್ರವಾಗಿ ಬಳಸಲಾಗುತ್ತಿರುವುದು ಈ ಆಧುನಿಕ ಕಾಲಘಟ್ಟದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಕೋಮುವಾದಿ ಶಕ್ತಿಗಳು ಗಟ್ಟಿಯಾಗಿ ಬೇರೂರಲು ಯತ್ನಿಸುತ್ತಿರುವ ಕರ್ನಾಟಕಕ್ಕೆ ಇದು ಎಚ್ಚರಿಕೆಯ ಘಂಟೆಯಾಗಿದೆ.
ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ ಸಾಮೂಹಿಕ ಅತ್ಯಾಚಾರವೆಸಗಿದ ಅಮಾನುಷ ಕೃತ್ಯ ಮೈ ನಡುಗಿಸುವಂತಿದೆ. ಇಂತಹ ಹಲವು ದಾರುಣ ಕೃತ್ಯಗಳು ಇದೀಗ ಬೆಳಕಿಗೆ ಬರುತ್ತಿವೆ. ಮಹಿಳೆಯರ ಮೇಲೆ ಹಲ್ಲೆ, ಅತ್ಯಾಚಾರ ನಡೆಸುವುದನ್ನು ಯುದ್ಧದ ಕಾರ್ಯತಂತ್ರವಾಗಿ ಬಳಸಲಾಗುತ್ತಿತ್ತು. ರಷ್ಯಾ-ಉಕ್ರೇನ್ ಯುದ್ದದ ಸಂದರ್ಭದಲ್ಲಿಯೂ ಇದು ನಡೆದ ಬಗ್ಗೆ ವರದಿಗಳು ಬಂದಿವೆ. ಇದರ ಮುಂದುವರಿಕೆಯಂತೆ ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಅದನ್ನು ಗಲಭೆಯ ಅಸ್ತ್ರವಾಗಿ ಬಳಸಲಾಗುತ್ತಿರುವುದು ಈ ಆಧುನಿಕ ಕಾಲಘಟ್ಟದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ. ಇನ್ನೂ ಆತಂಕಕಾರಿಯಾದ ಬೆಳವಣಿಗೆಗಳು ಮಣಿಪುರದ ಗಲಭೆಗಳಲ್ಲಿ ಗೋಚರಿಸುತ್ತಿವೆ.
ಪ್ರಸ್ತುತ ನಡೆಯುತ್ತಿರುವ ಮಣಿಪುರದ ಘಟನೆಗಳಿಗೆ ಬುಡಕಟ್ಟು ಸಮುದಾಯ ಕುಕಿ ಮತ್ತು ಮೀತೀ ಸಮುದಾಯಗಳ ನಡುವಿನ ಸಂಘರ್ಷ ಕಾರಣವಾಗಿದೆ. ಈಗ ನಡೆಯುತ್ತಿರುವ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಸ್ಸಾಂ ರೈಫಲ್ಸ್ ನ ಅಧಿಕಾರಿಗಳು ನೀಡುತ್ತಿರುವ ಮಾಹಿತಿ ನಮ್ಮನ್ನು ದಿಕ್ಕೆಡಿಸುವಂತಿವೆ. ಈ ಅಧಿಕಾರಿಗಳು ಆರೋಪಿಸುತ್ತಿರುವಂತೆ ʻಕುಕಿ ಸಮುದಾಯದ ಮೇಲೆ ನಡೆಯುತ್ತಿರುವ ಅಪರಾಧ ಕೃತ್ಯಗಳಿಗೆ ಮೀತೀ ಮಹಿಳಾ ಹೋರಾಟಗಾರರ ಗುಂಪು ನೆರವು ನೀಡುತ್ತಿದೆ, ಈ ಮಹಿಳೆಯರು ಎಲ್ಲೆಡೆಯು ಸೇನೆ ಮತ್ತು ಅರೆಸೇನಾ ಪಡೆಯ ಓಡಾಟಕ್ಕೆ ತಡೆ ಒಡ್ಡುತ್ತಿದ್ದಾರೆ, ತಡೆ ಒಡ್ಡಬೇಡಿ ಎಂದು ಭದ್ರತಾ ಸಿಬ್ಬಂದಿ ಹೇಳಿದರೆ ‘ಬೆತ್ತಲಾಗುತ್ತೇವೆʼ ಎಂದು ಬೆದರಿಕೆ ಒಡ್ಡುತ್ತಿದ್ದಾರೆ.’
ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಮಹಿಳೆಯರೇ ಪರೋಕ್ಷವಾಗಿ ಬೆಂಬಲಿಸುತ್ತಿದ್ದಾರೆ ಎಂಬ ಸೇನಾ ಅಧಿಕಾರಿಗಳ ಆರೋಪವನ್ನು ಪುಷ್ಟೀಕರಿಸುವಂತೆ 18 ವರ್ಷದ ಯುವತಿಯೋರ್ವರಿಂದ ಪೋಲಿಸ್ ಠಾಣೆಯಲ್ಲಿ ಮೇ 22ರಂದು ದೂರೊಂದು ದಾಖಲಾಗಿದೆ. ‘ದಿ ಹಿಂದೂʼ ಪತ್ರಿಕೆಯಲ್ಲಿ ವರದಿಯಾದಂತೆ ಪ್ರಥಮ ಮಾಹಿತಿ ವರದಿ (ಎಫ್.ಐ.ಆರ್) ಪ್ರಕಾರ, ʻಮೇ 15ರಂದು ಸಂಜೆ 5ರ ಸುಮಾರಿಗೆ ಒಬ್ಬಳು ಯುವತಿಯ ಮೇಲೆ ನಾಲ್ಕು ಜನ ಪುರುಷರು ದಾಳಿ ಮಾಡಿ ಹಲ್ಲೆ ನಡೆಸಿದರು. ಆ ಸಂದರ್ಭದಲ್ಲಿ ಯುವತಿಗೆ ಒಬ್ಬಳು ಮಹಿಳೆಯ ಧ್ವನಿ ಕೇಳಿ ಬಂದು ಆಕೆಯನ್ನು ಶಸ್ತ್ರಸಜ್ಜಿತ ಗುಂಪಿನ ಸುಪರ್ದಿಗೆ ಕೊಡಲು ಆದೇಶಿಸಿದಳು. ಆ ಶಸ್ತ್ರಸಜ್ಜಿತ ಗುಂಪು ಈಕೆಯನ್ನು ವಶಕ್ಕೆ ಪಡೆದ ನಂತರ ಗುಂಪೊಂದು ಎದುರಾಯಿತು. ಆ ಗುಂಪಿನಲ್ಲಿದ್ದ ಮಹಿಳೆಯೊಬ್ಬಳು ಈ ಯುವತಿಯನ್ನು ಕೊಂದು ಹಾಕಲು ಸೂಚಿಸಿದಳು. ಶಸ್ತ್ರಸಜ್ಜಿತ ಗುಂಪು ಆಕೆಯನ್ನು ಅತ್ಯಾಚಾರಗೈದಿತು. ಆಕೆಯನ್ನು ಕಾರು ಅಪಘಾತದ ಮೂಲಕ ಸಾಯಿಸಲು ಯತ್ನಿಸುವ ವೇಳೆ ಕಾರು ಆಕೆಗೆ ಗುದ್ದಿ ಗುಡ್ಡವೊಂದರಿಂದ ಜಾರಿ ಅವಳು ಕೆಳಗೆ ಬಂದು ಬಿದ್ದಳು. ಈ ಸಂದರ್ಭ ಆಟೋರಿಕ್ಷಾ ಚಾಲಕನೊಬ್ಬ ಆಕೆಯನ್ನು ಸಮೀಪದ ಪೋಲಿಸ್ ಠಾಣೆಗೆ ಕರೆದೊಯ್ದು ತಂದುಬಿಟ್ಟ.ʼ
ಇದನ್ನು ಓದಿದ್ದೀರಾ?: ಮಣಿಪುರ | ಬೀದಿ ಬೀದಿಯಲ್ಲಿ ಭಾರತ ಮಾತೆಯನ್ನು ಬೆತ್ತಲಾಗಿಸುವುದು ಸರಿಯೇ… ಪ್ರಧಾನಿಗಳೇ?
ಆಧುನಿಕ ಶಿಕ್ಷಣ, ತಂತ್ರಜ್ಞಾನಗಳು, ಉದ್ಯೋಗವಕಾಶಗಳು ಶತಮಾನಗಳಿಂದ ಮನೆಯೊಳಗೆ ನಲುಗುತ್ತಿದ್ದ, ಸಂಸ್ಕೃತಿಯ ಹೆಸರಿನಲ್ಲಿ ಬಂಧಿಯಾಗಿದ್ದ ಮಹಿಳೆಯು ತುಸು ಉಸಿರಾಡುವಂತೆ ಮಾಡಿದೆ. ಆಕೆ ಈಗ ಪುರುಷರಿಗೆ ಸರಿಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲಿ ನಿಧಾನವಾಗಿ ಹೆಜ್ಜೆಯಿಡುತ್ತಿದ್ದಾಳೆ. ಆದರೆ ಅವಳನ್ನು ಮತ್ತೆ ಚರಿತ್ರೆಗೆ ಸರಿಸುವ ಪ್ರಯತ್ನಗಳು ಸದ್ದಿಲ್ಲದೆ ನಡೆಯುತ್ತಿವೆ. ಇಂತಹ ಪ್ರಯತ್ನಗಳು ಜಾತಿ, ಧರ್ಮ, ಸಂಸ್ಕೃತಿ ರಕ್ಷಣೆಯ ಮುಸುಕನ್ನು ಹೊಂದಿರುತ್ತವೆ. ಈ ಹುನ್ನಾರಗಳನ್ನು ಅರಿಯದ ಮಣಿಪುರದ ಒಂದು ಸಮುದಾಯದ ಮಹಿಳೆಯರು ಇನ್ನೊಂದು ಸಮುದಾಯದ ಮಹಿಳೆಯರ ಮೇಲೆ ನಡೆಯುತ್ತಿರುವ ಪೈಶಾಚಿಕ ಅತ್ಯಾಚಾರ, ನಗ್ನ ಮೆರವಣಿಗೆ, ಭೀಕರ ಹಲ್ಲೆ, ಕೊಲೆಗಳನ್ನು ಪರಸ್ಪರ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಬೆಂಬಲಿಸುತ್ತಿರುವುದು ವರ್ತಮಾನದ ದೊಡ್ಡ ವಿಪರ್ಯಾಸಕರ ವಿದ್ಯಮಾನವಾಗಿದೆ.
ಮಣಿಪುರದ ಇಂತಹ ಮಹಿಳೆಯರ ವಿವೇಚನಾರಹಿತ ಮನಸ್ಥಿತಿ ರೂಪುಗೊಳ್ಳುವಲ್ಲಿ ಇದುವರೆಗೆ ಅಧಿಕಾರ ನಡೆಸಿದ ರಾಜ್ಯ ಸರ್ಕಾರಗಳೂ ಮತ್ತು ಕೇಂದ್ರ ಸರ್ಕಾರಗಳೂ ಕಾರಣವಾಗಿರುವಂತಿದೆ. ಇಲ್ಲಿ ಸಂಘರ್ಷ ಕೊನೆಗಾಣಿಸಿ ಶಾಂತಿ ಸ್ಥಾಪಿಸಲು ಇದುವರೆಗೆ 17 ಶಾಂತಿ ಸಭೆಗಳನ್ನು ನಡೆಸಿವೆ. ಆದರೆ ಈ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡ 50ರಷ್ಟಿರುವ ಮಹಿಳೆಯರಲ್ಲಿ ಒಬ್ಬರೇ ಒಬ್ಬರು ಮಹಿಳೆಯನ್ನೂ ಈ ಸರ್ಕಾರಗಳು ಪ್ರತಿನಿಧಿಯಾಗಿ ಸೇರಿಸಿಕೊಂಡಿಲ್ಲ. ಇದು ಸಂಘರ್ಷದ ಮೂಲ ಕಾರಣವನ್ನು ಅರ್ಥ ಮಾಡಿಕೊಳ್ಳುವಲ್ಲಿ ಮಹಿಳೆಯರಿಗೆ ತೊಡಕು ಉಂಟುಮಾಡಿರಬಹುದು. ಅದೇನೆ ಇದ್ದರೂ, ಮತೀಯವಾದಿ ವೋಟ್ ಬ್ಯಾಂಕ್ ರಾಜಕಾರಣದ ಒಳಸಂಚನ್ನು ಅರ್ಥಮಾಡಿಕೊಳ್ಳದೆ ಮಹಿಳೆಯರೂ ತಮ್ಮ ಸ್ತ್ರೀ ಕುಲಕ್ಕೆ ತಾವೇ ದ್ರೋಹವೆಸಗಿಕೊಳ್ಳುತ್ತಿರುವುದು ಆತ್ಮಹತ್ಯಾಕಾರಿ ಬೆಳವಣಿಗೆಯಾಗಿದೆ. ಕೋಮುವಾದಿ ಶಕ್ತಿಗಳು ಗಟ್ಟಿಯಾಗಿ ಬೇರೂರಲು ಯತ್ನಿಸುತ್ತಿರುವ ಕರ್ನಾಟಕಕ್ಕೆ ಇದು ಎಚ್ಚರಿಕೆಯ ಘಂಟೆಯಾಗಿದೆ.

ಡಾ. ಸರ್ಜಾಶಂಕರ್ ಹರಳಿಮಠ
ಲೇಖಕರು