“ಇದು ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ (It is time to prioritize mental health in th work place)” ಎಂಬುದು ಈ ವರ್ಷದ ಮಾನಸಿಕ ಆರೋಗ್ಯ ದಿನಾಚರಣೆಯ ಘೋಷವಾಕ್ಯವಾಗಿದೆ.
ಅಕ್ಟೋಬರ್ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಪ್ರಪಂಚದಾದ್ಯಂತ ಮಾನಸಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಮಾನಸಿಕ ಆರೋಗ್ಯವನ್ನು ಬೆಂಬಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡುವುದು ಈ ದಿನದ ಉದ್ದೇಶವಾಗಿದೆ. ಈ ವರ್ಷವು ವಿಶ್ವ ಆರೋಗ್ಯ ಸಂಸ್ಥೆಯು ಇದು ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡುವ ಸಮಯ (It is time to prioritize mental health in th work place)ಎಂಬ ಘೋಷವಾಕ್ಯದೊಂದಿಗೆ ಮಾನಸಿಕ ಆರೋಗ್ಯ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಮೂಲಕ ವೃತ್ತಿಪರ ಪರಿಸರದಲ್ಲಿ ಮಾನಸಿಕ ಆರೋಗ್ಯಕ್ಕೆ ಪ್ರಾಮುಖ್ಯತೆ ನೀಡಿದೆ.
ಔದ್ಯೋಗಿಕ ಪರಿಸರದಲ್ಲಿ ವಿವಿಧ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುವವರು ಅಸುರಕ್ಷಿತ ಮತ್ತು ಅನಾನುಕೂಲಕರ ಕೆಲಸದ ವಾತಾವರಣ, ತಾರತಮ್ಯ, ಅಭದ್ರತೆ, ದೌರ್ಜನ್ಯ, ಕೌಟುಂಬಿಕ ಸಮಸ್ಯೆಗಳು, ಸಹೋದ್ಯೋಗಿಗಳು ಮತ್ತು ಮೇಲಾಧಿಕಾರಿಗಳಿಂದ ಕಿರುಕುಳ ಮತ್ತು ತಾರತಮ್ಯ, ಆರ್ಥಿಕ ಸಮಸ್ಯೆಗಳು ಆರೋಗ್ಯ ಸಮಸ್ಯೆಗಳು ಮತ್ತು ನಿಭಾಯಿಸಲಾಗದ ಒತ್ತಡದಿಂದ ಬಳಲುತ್ತಿರುವವರು ಮಾನಸಿಕ ಸಮಸ್ಯೆಗಳಿಗೆ ಮತ್ತು ಮಾನಸಿಕ ಕಾಯಿಲೆಗಳಿಗೆ ತುತ್ತಾಗುವ ಅಪಾಯವನ್ನು ಎದುರಿಸುತ್ತಿರುತ್ತಾರೆ.
ನಾವು ದೈಹಿಕ ಅನಾರೋಗ್ಯಕ್ಕೆ ಒಳಗಾಗುವ ರೀತಿಯಲ್ಲಿ ಮಾನಸಿಕವಾಗಿಯೂ ಅನಾರೋಗ್ಯಕ್ಕೆ ಒಳಗಾಗಬಹುದು. ಇದನ್ನು ಭಾವನೆ, ಆಲೋಚನೆ, ವರ್ತನೆ ಮತ್ತು ನಡವಳಿಕೆಯಲ್ಲಾಗುವ ಬದಲಾವಣೆಯ ಮೂಲಕ ಗುರುತಿಸಬಹುದಾಗಿರುತ್ತದೆ. ಅಂಕಿ ಅಂಶಗಳ ಪ್ರಕಾರ ಒಟ್ಟು ಜನಸಂಖ್ಯೆಯ ಶೇ.10ರಷ್ಟು ಜನರಲ್ಲಿ ಅಂದರೆ ಪ್ರತೀ 100 ಜನರಲ್ಲಿ 10 ಜನರಿಗೆ ಮಾನಸಿಕ ಸಮಸ್ಯೆಗಳಿರುವುದು ತಿಳಿದು ಬಂದಿದೆ.
ಅತಿಯಾದ ಬೇಜಾರು, ಒಂಟಿತನ, ಹಸಿವು-ನಿದ್ರೆಯಲ್ಲಿ ಎಲ್ಲಾ ವಿಷಯದಲ್ಲಿ ವ್ಯತ್ಯಾಸ / ನಿರಾಸಕ್ತಿ ನಿರಾಶವಾದ, ನಾನು ಯಾರಿಗೂ ಬೇಡವಾದವರು ಎಂಬ ಭಾವನೆ, ಆತ್ಮಹತ್ಯೆ ಆಲೋಚನೆಗಳು ಮತ್ತು ಪ್ರಯತ್ನ, ಗಾಬರಿ, ಭಯ, ಅಸಂಬದ್ಧವಾದ ಮತ್ತು ವಿಚಿತ್ರವಾದ ಆಲೋಚನೆಗಳು ಮಾಡಿದ ಕೆಲಸವನ್ನೇ ಪದೇ – ಪದೇ ಮಾಡಬೇಕೆನ್ನುವ ಭಾವನೆ ಮತ್ತು ಹಾಗೆ ಮಾಡುವುದು, ಅತಿಯಾದ ಸಂತೋಷ ಅತಿಯಾಗಿ ತಮ್ಮ ಬಗ್ಗೆ ತಾವೇ ಜಂಭ ಕೊಚ್ಚಿಕೊಳ್ಳುವುದು, ಅತಿ ಸಂಶಯ, ಯಾರಿಗೂ ಕಾಣಿಸದ ವಸ್ತು / ವ್ಯಕ್ತಿ /ದೃಶ್ಯಗಳು ಕಾಣಿಸುವುದು ಯಾರಿಗೂ ಕೇಳಿಸದ ಧ್ವನಿ / ಶಬ್ದಗಳು ಕೇಳಿಸವುದು, ಸ್ವಚ್ಛತೆಯ ಬಗ್ಗೆ ನಿರಾಸಕ್ತಿ ಬಾಣಂತಿಯರಲ್ಲಿ ಕಾಣಿಸಿಕೊಳ್ಳುವ ಸನ್ನಿಯ ಲಕ್ಷಣಗಳು, ಹೆಚ್ಚಾದ ಮಾದಕ ಮತ್ತು ಮದ್ಯ ವ್ಯಸನ, ಹದಿಹರೆಯದವರಲ್ಲಿನ ಮಾನಸಿಕ ತೊಳಲಾಟಗಳು, ಮರೆವಿನ ಸಮಸ್ಯೆಯಂತಹ ಹಲವಾರು ಲಕ್ಷಣಗಳು ಮಾನಸಿಕ ಕಾಯಿಲೆಗಳಿಗೆ ಸಂಬಂಧಿಸಿದ್ದಾಗಿರುತ್ತದೆ. ಈ ಲಕ್ಷಣಗಳನ್ನೂಳಗೊಂಡ ವ್ಯಕ್ತಿಯ ಆಲೋಚನೆ, ವರ್ತನೆಗಳ ಬದಲಾವಣೆಯ ಮೂಲಕ ಮಾನಸಿಕ ಅಸ್ಥಿರತೆಯನ್ನು ತೋರ್ಪಡಿಸುತ್ತಾರೆ.
ಆದರೆ, ಸಮುದಾಯದಲ್ಲಿ ಇಂದಿಗೂ ಅಸ್ತಿತ್ವದಲ್ಲಿರುವ ಮೂಢನಂಬಿಕೆಗಳು ದೆವ್ವ- ಭೂತದ ಕಾಟ, ದೇವರ ಶಾಪ ಜಾತಕದಲ್ಲಿನ ದೋಷ, ಯಾರದ್ದೋ ಶಾಪ, ಮಾಟ-ಮಂತ್ರಗಳ ಪ್ರಭಾವ ಎಂಬ ಮೂಢನಂಬಿಕೆಗಳು ಇಂತಹ ವರ್ತನೆಯನ್ನು ಕಾಯಿಲೆಗಳು ಎಂದು ಗುರುತಿಸಲು ಇರುವ ಬಹುಮುಖ್ಯ ಅಡೆತಡೆಗಳಾಗಿವೆ ಈ ಅಡೆತಡೆಗಳೇ ಮಾನಸಿಕ ಕಾಯಿಲೆಗಳಿಗೆ ಮತ್ತು ಸಮಸ್ಯೆಗಳಿಗೆ ಚಿಕಿತ್ಸಾ ವಿಧಾನಗಳ ಮೂಲಕ ಗುಣಪಡಿಸುವುದನ್ನು ಸಹ ತಡೆಯುತ್ತದೆ.
ಮಾನಸಿಕ ಸಮಸ್ಯೆಗಳಿಗೆ ಮನೋರೋಗ ತಜ್ಞರು ಮತ್ತು ಮನೋವೈದ್ಯಕೀಯ ವೃತ್ತಿಪರರಿಂದ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಕೊಡಿಸುವುದು ಅತ್ಯಂತ ಮುಖ್ಯವಾಗಿರುತ್ತದೆ. ಮಾನಸಿಕ ಕಾಯಿಲೆಗಳ ಬಗ್ಗೆ ಇರುವ ಮೂಢನಂಬಿಕೆಯನ್ನು ಹೊರದೂಡಿ ವೈಜ್ಞಾನಿಕವಾಗಿ ಆಪ್ತಸಮಾಲೋಚನೆ, ಚಿಕಿತ್ಸೆ, ಥೆರಪಿಯಂತಹ ಚಿಕಿತ್ಸಾ ವಿಧಾನಗಳ ಮೂಲಕ ಮಾನಸಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರೇರೇಪಿಸಬೇಕಾದುದು ನಮ್ಮೆಲ್ಲರ ಜವಾಬ್ದಾರಿಯಾಗಿರುತ್ತದೆ. ಹಾಗೂ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯು ಮಾನಸಿಕ ವೃತ್ತಿಪರರಿಂದ ಸಲಹೆ ಪಡೆಯಲು ಯಾವುದೇ ರೀತಿಯ ಕೀಳರಿಮೆ, ಹಿಂಜರಿಕೆ ಇಲ್ಲದೇ ಮುಂದಾಗಬೇಕಿದೆ.
ಈ ನಿಟ್ಟಿನಲ್ಲಿ ರಾಮನಗರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾನಸಿಕ ಆರೋಗ್ಯ ಕಾರ್ಯಕ್ರಮ ವಿಭಾಗವು ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯಪ್ರವೃತ್ತವಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಮನೋರೋಗ ವಿಭಾಗದಲ್ಲಿಯೂ ಮನೋವೆೃದ್ಯಕೀಯ ಸೇವೆಗಳು ಲಭ್ಯವಿದೆ ಅಲ್ಲದೇ ತಾಲ್ಲೂಕು ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಸಹ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮೂಲಕ ಆರೋಗ್ಯ ಸೇವೆಗಳು ಲಭ್ಯವಿರುತ್ತದೆ.
ಈ ಸೇವೆಗಳು ಮಾನಸಿಕ ಆರೋಗ್ಯ ಸಮಸ್ಯೆಯಲ್ಲಿರುವವರಿಗೆ ತಲುಪಬೇಕಾದರೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವನ್ನು ಸಮುದಾಯದಲ್ಲಿ ಮೂಡಿಸುವುದು ಚರ್ಚೆ, ಸಂವಾದ, ಸಂಶೋಧನೆ & ಕಾರ್ಯ ಯೋಜನೆಗಳನ್ನು ಹೆಚ್ಚು ಕೈಗೊಳ್ಳುವುದು ಮುಖ್ಯವಾಗಿರುತ್ತದೆ.
ಕೆಲಸದ ಸ್ಥಳದಲ್ಲಿ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕಾದರೆ ಪೂರಕವಾದ ಔದ್ಯೋಗಿಕ ವಾತಾವರಣವನ್ನು ಕಲ್ಪಿಸುವುದು, ಸಹೋದ್ಯೋಗಿಗಳ ನಡುವೆ ಉತ್ತಮ ಬಾಂಧವ್ಯ ಹೊಂದುವುದು ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವುದು, ತಮ್ಮ ಜವಾಬ್ದಾರಿಗಳ ನಿರ್ವಹಣೆ, ಸಮಸ್ಯೆಗಳಾದರೆ ಅದನ್ನು ಸಣ್ಣದಿರುವಾಗಲೇ ಬಗೆಹರಿಸಿಕೊಳ್ಳುವುದು ಮತ್ತು ಸಹೋದ್ಯೋಗಿಗಳ ಮತ್ತು ಮೇಲಾಧಿಕಾರಿಗಳ ಸಲಹೆ – ಸಹಕಾರ ಪಡೆಯುವುದು, ವಿಧೇಯತೆ ತಾಳ್ಮೆ – ಸಂಯಮ, ಸಮಯ ಪಾಲನೆ- ಶಿಸ್ತನ್ನು ಪಾಲಿಸುವುದು, ದೈಹಿಕ ವ್ಯಾಯಾಮ, ಯೋಗ, ಧ್ಯಾನದಂತಹ ಒತ್ತಡ ನಿವಾರಣಾ ತಂತ್ರಗಳನ್ನು ಮತ್ತು ಉತ್ತಮ ಜೀವನ ಶೈಲಿಯ ಅನುಸರಣೆಯಂಥ ಅಂಶಗಳ ಮೂಲಕ ವೃತ್ತಿಪರರು ತಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ತಮ್ಮ ಕಾರ್ಯಕ್ಷಮತೆ ಹೆಚ್ಚಿಸಿಕೊಂಡು ವೃತ್ತಿಗೆ ಹೆಚ್ಚಿನ ಕೊಡುಗೆ ನೀಡಬಹುದಾಗಿರುತ್ತದೆ.
ಸದೃಢ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಸದೃಢ ದೈಹಿಕ ಆರೋಗ್ಯ ಕಾಪಾಡಿಕೊಂಡು ಉತ್ತಮ ಸಮಾಜ ನಿರ್ಮಿಸುವಂತೆ ವೃತ್ತಿಪರರ ಚಿತ್ತವಿದ್ದರೆ, ವಿಶ್ವ ಮಾನಸಿಕ ಆರೋಗ್ಯ ದಿನದ ಆಚರಣೆಯೂ ಸಾರ್ಥಕವಾಗುತ್ತದೆ. ಉಚಿತ ಸಲಹೆಗಾಗಿ ಮಾನಸಿಕ ಆರೋಗ್ಯ ಸಹಾಯವಾಣಿ – ಟೆಲಿಮನಸ್ ಸಂಖ್ಯೆ 14416ನ್ನು ಸಂಪರ್ಕಿಸಿ.
ಪದ್ಮರೇಖಾ ಎಸ್
ಮನೋವೈದ್ಯಕೀಯ ಕಾರ್ಯಕರ್ತೆ. ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆ, ರಾಮನಗರ