ಮೂತ್ರ ವಿಸರ್ಜನೆ ಪ್ರಕರಣದ ಆರೋಪಿ ಪ್ರವೇಶ್ ಶುಕ್ಲಾ ಅವರ ನಿವಾಸದ ಒಂದು ಭಾಗವನ್ನು ಮಧ್ಯ ಪ್ರದೇಶ ಸರ್ಕಾರದ ಆದೇಶದ ಮೇರೆಗೆ ಧ್ವಂಸಗೊಳಿಸಲಾಗಿದೆ.
ಮಂಗಳವಾರ ಆದಿವಾಸಿ ವ್ಯಕ್ತಿಯೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣ ಸಂಬಂಧ ಆರೋಪಿಯನ್ನು ಬಂಧಿಸಲಾಗಿದೆ. ಬಂಧನದ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಸಾಕೇತ್ ಮಾಳವಿಯಾ ಅವರು ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅನ್ನು ಜಾರಿಗೊಳಿಸಲಾಗಿದೆ.
ಎನ್‌ಎಸ್‌ಎ ಜಾರಿಗೊಳಿಸುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನಿನ್ನೆ ಟ್ವೀಟ್ (ಜುಲೈ 5) ಮೂಲಕ ತಿಳಿಸಿದ್ದರು.
ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ತಮ್ಮ ಆದೇಶದಲ್ಲಿ “ಆರೋಪಿ ಪ್ರವೇಶ್ ಶುಕ್ಲಾನನ್ನು ಎನ್‌ಎಸ್‌ಎ ಅಡಿಯಲ್ಲಿ ಬಂಧಿಸಲಾಗಿದ್ದು, ಆತನನ್ನು ರೇವಾ ಸೆಂಟ್ರಲ್ ಜೈಲಿನಲ್ಲಿ ಇರಿಸಲಾಗಿದೆ. ಅಲ್ಲದೆ ಎನ್‌ಎಸ್‌ಎ ಆದೇಶದ ನಂತರ ಬುಲ್ಡೋಜರ್‌ಗಳು ಶುಕ್ಲಾ ಅವರ ಮನೆಗೆ ಆಗಮಿಸಿದವು. ಅವರ ಕುಟುಂಬದ ಸದಸ್ಯರು ಆಸ್ತಿಯು ಕುಟುಂಬದ ಇತರ ಸದಸ್ಯರಿಗೆ ಸೇರಿದ್ದು ಎಂದು ಪ್ರತಿಭಟಿಸಿದರು. ಆದರೆ 400 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಅತಿಕ್ರಮಣಗಳನ್ನು ಮಾತ್ರ ಕೆಡವಲಾಗಿದೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮಧ್ಯಪ್ರದೇಶ: ಆದಿವಾಸಿ ಯುವಕನ ಮೇಲೆ ಬಿಜೆಪಿ ಶಾಸಕನ ಬೆಂಬಲಿಗನಿಂದ ಮೂತ್ರ ವಿಸರ್ಜನೆ
ಬುಲ್ಡೋಜರ್ ಕ್ರಮದ ಬಗ್ಗೆ ಟ್ವೀಟ್ ಮಾಡಿರುವ ಮಧ್ಯಪ್ರದೇಶ ಮುಖ್ಯಮಂತ್ರಿಗಳ ಕಚೇರಿ, ಎನ್ಎಸ್ಎಯನ್ನು ಆಹ್ವಾನಿಸಿ ಬುಲ್ಡೋಜರ್ ಅನ್ನು ಓಡಿಸಲಾಗಿದೆ. ಅಗತ್ಯವಿದ್ದರೆ, ಅಧಿಕಾರಿಗಳು ಅಪರಾಧಿಗಳಿಗೆ ತಕ್ಕ ದಂಡನೆಯನ್ನು ನೀಡಲು ಸಿದ್ದರಿದ್ದಾರೆ. ಮಧ್ಯಪ್ರದೇಶ ಸರ್ಕಾರದ ಸಂದೇಶ ಸ್ಪಷ್ಟವಾಗಿದೆ. ರಾಜ್ಯದಲ್ಲಿ ತಪ್ಪು ಮಾಡಲು ಉದ್ದೇಶಿಸುವವರು 10 ಸಾರಿ ಯೋಚಿಸಬೇಕು” ಎಂದು ಎಚ್ಚರಿಕೆ ನೀಡಿದೆ.
ಸಿಎಂ ಸೂಚನೆಯ ಮೇರೆಗೆ, ಆರೋಪಿಯ ವಿರುದ್ಧ ಬಹಾರಿ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ಗಳು 294, 504, ಸೆಕ್ಷನ್ 3(1) ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಾಯ್ದೆ ಮತ್ತು ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ಬೆಂಬಲಿಗ ಪ್ರವೇಶ್ ಶುಕ್ಲಾ ಆದಿವಾಸಿ ಬುಡಕಟ್ಟು ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಇದು ದೇಶದಲ್ಲಡೆ ಆಕ್ರೋಶಕ್ಕೆ ಕಾರಣವಾಗಿತ್ತು.
ಕಾನೂನು ರೀತಿ ಪರಿಶಿಷ್ಟ ಪಂಗಡದ ವ್ಯಕ್ತಿಯ ಮೇಲಿನ ದೌರ್ಜನ್ಯ ವೆಂದು ಪರಿಗಣಿಸಿ ಮೊಕದ್ದಮೆ ಹೂಡಿ ನ್ಯಾಯಾಲಯದಲ್ಲಿ ವಾದಿಸಿ , ಕಾಯ್ದೆಯನ್ನು ಎತ್ತಿ ಹಿಡಿಯುವ ಬದಲು ಮನೆ ಕೆಡವುವ ಕೆಲಸಕ್ಕೆ ಕೈ ಹಾಕುವ ಪ್ರಯತ್ನ ಸರಿಯೇ?
ಅಪರಾಧಿಗೆ ಕಠಿಣ ಸಜೆ ಆಗಬೇಕೇ ಹೊರತು ಮನೆ ಕೆಡವುದು ಸರಿಯಲ್ಲ