ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGS)ಯಲ್ಲಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ಸುಮಾರು ₹468 ಕೋಟಿ ವೇತನ ಬಾಕಿ ಇರಿಸಿರುವುದಾಗಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ಬಗ್ಗೆ ಮಂಗಳವಾರ(ಡಿ.12)ದಂದು ಟ್ವೀಟ್ ಮಾಡಿರುವ ಅವರು, “ರಾಜ್ಯದ ಬಿಜೆಪಿ ಮುಖಂಡರು ಹಾಗೂ ಕೇಂದ್ರ ಹಣಕಾಸು ಸಚಿವರು ಕರ್ನಾಟಕಕ್ಕೆ ಯಾವುದೇ ಪಾವತಿ ಹಣ ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ ₹468 ಕೋಟಿ ವೇತನ ನೀಡಲು ಬಾಕಿ ಇರಿಸಿದೆ” ಎಂದು ತಿಳಿಸಿದ್ದಾರೆ.
“ಡಿಸೆಂಬರ್ 11, 2023ರಂತೆ ಕೇಂದ್ರ ಸರ್ಕಾರ ಮನರೇಗಾ ಅಡಿಯಲ್ಲಿ ನಮಗೆ ₹468 ಕೋಟಿ ವೇತನ ಬಾಕಿ ನೀಡಬೇಕಿದೆ. ಮಾಡಿರುವ ಕೆಲಸಕ್ಕೆ ನಮ್ಮ ಜನರಿಗೆ ಈವರೆಗೂ ಕೂಲಿ ಸಿಕ್ಕಿಲ್ಲ” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯಿದೆ (MGNREGA) ಬೇಡಿಕೆ ಆಧಾರಿತ ಕೂಲಿ ಉದ್ಯೋಗದ ಕಾರ್ಯಕ್ರಮವಾಗಿದೆ. ರಾಜ್ಯಗಳಿಗೆ ನಿಧಿ ಬಿಡುಗಡೆ ಕೂಡ ಮಾಡುತ್ತದೆ. ಕೇಂದ್ರ ಸರ್ಕಾರವು ಕೆಲಸದ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಹಣವನ್ನು ಬಿಡುಗಡೆ ಮಾಡುತ್ತದೆ. ಕಾರ್ಮಿಕ ಬಜೆಟ್, ಆರಂಭಿಕ ಬಾಕಿ, ಹಿಂದಿನ ವರ್ಷದ ಬಾಕಿ ಇರುವ ಹೊಣೆಗಾರಿಕೆಗಳು ಮತ್ತು ಒಟ್ಟಾರೆ ಕಾರ್ಯಕ್ಷಮತೆಯ ಆಧಾರದ ಮೇಲೆ ಗ್ರಾಮೀಣಾಭಿವೃದ್ಧಿ ಸಚಿವಾಲಯವು ರಾಜ್ಯಗಳು ಮತ್ತು ಕೇಂದ್ರಾಡಳಿತ ರಾಜ್ಯಗಳಿಗೆ ಹಣವನ್ನು ಬಿಡುಗಡೆ ಮಾಡುತ್ತದೆ.
ರಾಜ್ಯದಲ್ಲಿ ತೀವ್ರ ಬರ ಎದುರಾಗಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಬಾಕಿ ಹಣ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ , ಕೇಂದ್ರ ಸರ್ಕಾರ ಕರ್ನಾಟಕದ ಯಾವುದೇ ಹಣ ಬಾಕಿ ಉಳಿಸಿಕೊಂಡಿಲ್ಲ ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿ, ಕರ್ನಾಟಕಕ್ಕೆ ಕೇಂದ್ರ ಸರ್ಕಾರವು ₹468 ಕೋಟಿ ವೇತನ ನೀಡಲು ಬಾಕಿ ಇರಿಸಿದೆ ಎಂದು ತಿಳಿಸಿದ್ದಾರೆ.