ಜನವರಿ 1 ರಿಂದ ವೇತನ ಪಾವತಿಗೆ ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯನ್ನು (ಎಬಿಪಿಎಸ್) ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಇದರಿಂದಾಗಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗಾ) ಅಡಿಯಲ್ಲಿ 14.32 ಕೋಟಿ ಸಕ್ರಿಯ ಕಾರ್ಮಿಕರ ಪೈಕಿ 1.78 ಕೋಟಿಗೂ ಹೆಚ್ಚು ಕಾರ್ಮಿಕರು ಉದ್ಯೋಗಗಳನ್ನು ಪಡೆಯಲು ಅನರ್ಹರಾಗಿದ್ದಾರೆ.
ಗ್ರಾಮೀಣ ಮನೆಗಳಿಗೆ 100 ದಿನಗಳ ಕೆಲಸವನ್ನು ಖಾತರಿಪಡಿಸುವ ಮನೆರೇಗಾ ಅಡಿಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಒಂದು ದಿನವಾದರೂ ಕೆಲಸ ಮಾಡಿದ್ದರೆ, ಆ ಕಾರ್ಮಿಕರನ್ನು ಸಕ್ರಿಯ ಎಂದು ಪರಿಗಣಿಸಲಾಗುತ್ತದೆ. ಉತ್ತರ ಕರ್ನಾಟಕದಂತಹ ಪ್ರದೇಶಗಳಲ್ಲಿ ಮನರೇಗಾ ಯೋಜನೆಯನ್ನು ಹೆಚ್ಚಿನ ಜನರು ಅವಲಂಬಿಸಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯವು ಜನವರಿ 1ರಂದು ಮನರೇಗಾ ಪೋರ್ಟಲ್‌ನಲ್ಲಿ ಹಂಚಿಕೊಂಡಿರುವ ಮಾಹಿತಿ ಪ್ರಕಾರ, 1.78 ಕೋಟಿ ಸಕ್ರಿಯ ಕಾರ್ಮಿಕರು ಎಬಿಪಿಎಸ್ ಸಂಪರ್ಕ ಪ್ರಕ್ರಿಯೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ ಎಂದು ತಿಳಿದುಬಂದಿದೆ.
ಎಬಿಪಿಎಸ್ ಅಡಿಯಲ್ಲಿ, ಕೆಲಸಗಾರರ ಆಧಾರ್ ಸಂಖ್ಯೆಯನ್ನು ಅವರ ಮನರೇಗಾ ಜಾಬ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಮಾಡಬೇಕು. ಇದನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲಿರುವ ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ನಿರ್ವಹಿಸುತ್ತಿದೆ.
ಕಾರ್ಮಿಕರಿಗೆ ಸಮಯೋಚಿತ ಪಾವತಿಯನ್ನು ಖಾತ್ರಿ ಪಡಿಸುವ ಮತ್ತು ವ್ಯವಸ್ಥೆಯನ್ನು ಪಾರದರ್ಶಕ ಮಾಡುತ್ತೇವೆಂದು 2017ರಲ್ಲಿ ಕೇಂದ್ರ ಸರ್ಕಾರ ಎಬಿಪಿಎಸ್ಅನ್ನು ಜಾರಿಗೆ ತಂದಿತು. ಅದನ್ನು ಕಳೆದ ವರ್ಷ ಫೆಬ್ರವರಿ 1ರಿಂದ ಕೇಂದ್ರದಿಂದ ಕಡ್ಡಾಯಗೊಳಿಸಿತ್ತು. ಆದರೆ, ಈ ವ್ಯವಸ್ಥೆಯನ್ನು ವಿರೋಧಿಸಿ ಕಾರ್ಮಿಕರು ಪ್ರತಿಭಟನೆ ನಡೆಸಿದರು. ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಹೆಚ್ಚಿನ ಸಮಯ ಬೇಕೆಂದು ಕೆಲವು ರಾಜ್ಯಗಳು ಒತ್ತಡ ತಂದವು. ಪರಿಣಾಮ ಈ ಗಡುವನ್ನು ನಾಲ್ಕು ಬಾರಿ – ಮೊದಲು ಏಪ್ರಿಲ್ 1 ರವರೆಗೆ, ನಂತರ ಜುಲೈ 1 ಮತ್ತು ಸೆಪ್ಟೆಂಬರ್ 1 ರವರೆಗೆ ಹಾಗೂ ಅಂತಿಮವಾಗಿ 2023ರ ಡಿಸೆಂಬರ್ 31 ರವರೆಗೆ – ವಿಸ್ತರಿಸಲಾಗಿತ್ತು.
ಇನ್ನು, ಎಬಿಪಿಎಸ್ ಅನುಷ್ಠಾನಕ್ಕೆ ಗಡುವನ್ನು ವಿಸ್ತರಿಸುವುದಿಲ್ಲ ಎಂದಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯ, “ರಾಜ್ಯಗಳ ಯಾವುದೇ ಗ್ರಾಮ ಪಂಚಾಯತಿ ತಾಂತ್ರಿಕ ಸಮಸ್ಯೆ ಅಥವಾ ಆಧಾರ್-ಸಂಬಂಧಿತ ಸಮಸ್ಯೆಯನ್ನು ಹೊಂದಿದ್ದರೆ, ಆ ಸಮಸ್ಯೆಯ ಪರಿಹಾರವಾಗುವವರೆಗೆ ನಿರ್ದಿಷ್ಟ ಪ್ರಕರಣದ ಆಧಾರದ ಮೇಲೆ ಎಪಿಬಿಎಸ್‌ನಿಂದ ವಿನಾಯತಿ ನೀಡಲು ಪರಿಗಣಿಸಬಹುದು” ಎಂದು ಹೇಳಿದೆ.
25.25 ಕೋಟಿ ಕಾರ್ಮಿಕರು ಮನರೇಗಾ ಅಡಿಯಲ್ಲಿ ನೋಂದಣಿ ಮಾಡಿಕೊಂಡಿದ್ದಾರೆ. ಅವರಲ್ಲಿ, 14.32 ಕೋಟಿ (56.83%) ‘ಸಕ್ರಿಯರಾಗಿದ್ದಾರೆ’. ಈ ಸಕ್ರಿಯ ಕಾರ್ಮಿಕರ ಪೈಕಿ 12.54 ಕೋಟಿ (87.5%) ಕಾರ್ಮಿಕರು ಎಬಿಪಿಎಸ್ ಪಾವತಿಗೆ ಅರ್ಹರಾಗಿದ್ದಾರೆ ಮತ್ತು ಕೆಲಸ ಪಡೆಯುತ್ತಾರೆ ಉಳಿದ 1.78 ಕೋಟಿ ಕಾರ್ಮಿಕರು ಪಾವತಿ ಮತ್ತು ಕೆಲಸ ಪಡೆಯಲು ಅರ್ಹರಾಗಿಲ್ಲ ಎಂದು ಸಚಿವಾಲಯ ಹೇಳಿದೆ.
ಎಬಿಪಿಎಸ್ ಅನ್ನು ಜಾರಿಗೊಳಿಸುವ ಕೇಂದ್ರದ ನಿರ್ಧಾರವು ಕಾರ್ಮಿಕರು ಮತ್ತು ಸಾರ್ವನಿಕರ ಟೀಕೆಗೆ ಗುರಿಯಾಗಿದೆ. ರಾಜಕೀಯ ಗದ್ದಲವನ್ನೂ ಹುಟ್ಟುಹಾಕಿದೆ. ಕೇಂದ್ರದ ನಿರ್ಧಾರವನ್ನು ಟೀಕಿಸಿರುವ ಕಾಂಗ್ರೆಸ್, ‘ಕ್ರೂರ ಹೊಸ ವರ್ಷದ ಉಡುಗೊರೆ’ಯಾಗಿದೆ. ಇದು ‘ಬರವರ ವಿರೋಧಿ ನಿರ್ಧಾರ’ ಎಂದು ಹೇಳಿದೆ. ಅಲ್ಲದೆ, ‘ಅತ್ಯಂತ ದುರ್ಬಲರನ್ನು ಅವರ ಕಲ್ಯಾಣ ಪ್ರಯೋಜನಗಳಿಂದ ನಿರಾಕರಿಸುವ ಶಸ್ತ್ರಾಸ್ತ್ರ ತಂತ್ರಜ್ಞಾನ ವ್ಯವಸ್ಥೆಯನ್ನು ನಿಲ್ಲಿಸಬೇಕು’ ಎಂಬ ತನ್ನ ಬೇಡಿಕೆಯನ್ನು ಪುನರುಚ್ಚರಿಸಿದೆ.
ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ಬರವರ ವಿರೋಧಿ ನಿರ್ಧಾರಗಳ ಮೂಲಕ ಸರ್ಕಾರ ಕಾರ್ಮಿಕರನ್ನು ವಂಚಿಸುತ್ತಿದೆ. 2022ರ ಏಪ್ರಿಲ್‌ನಿಂದ ಈವರೆಗೆ ಮನರೇಗಾ ಪಟ್ಟಿಯಲ್ಲಿ ಸುಮಾರು 7.6 ಕೋಟಿ ಕಾರ್ಮಿಕರ ಹೆಸರನ್ನು ಅಳಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದ ಒಂಬತ್ತು ತಿಂಗಳೊಳಗೆ 1.9 ಕೋಟಿ ನೋಂದಾಯಿತ ಕಾರ್ಮಿಕರ ಹೆಸರನ್ನು ಅಳಿಸಲಾಗಿದೆ” ಎಂದು ಆರೋಪಿಸಿದ್ದಾರೆ.
ಆರೋಪವನ್ನು ನಿರಾಕರಿಸಿರುವ ಗ್ರಾಮೀಣಾಭಿವೃದ್ಧಿ ಸಚಿವಾಲಯ “2022ರಏಪ್ರಿಲ್‌ನಿಂದ ಇಲ್ಲಿಯವರೆಗೆ, ರಾಜ್ಯಗಳ ವರದಿಗಳ ಆಧಾರದ ಮೇಲೆ ಸರಿಯಾದ ಪ್ರಕ್ರಿಯೆಯನ್ನು ಅನುಸರಿಸಿ ಸುಮಾರು 2.85 ಕೋಟಿ ಜಾಬ್ ಕಾರ್ಡ್‌ಗಳನ್ನು ಅಳಿಸಲಾಗಿದೆ” ಎಂದು ಹೇಳಿದೆ.
“ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಮಾತ್ರ ಮನೆಯ ಜಾಬ್ ಕಾರ್ಡ್ ಅನ್ನು ಅಳಿಸಬಹುದು. ಆದರೆ ಎಬಿಪಿಎಸ್ ಲಿಂಕ್ ಸಮಸ್ಯೆಗಳಿಂದ ಅಳಿಸಲಾಗಿಲ್ಲ” ಎಂದು ಹೇಳಿಕೊಂಡಿದೆ.
ಈ ಸುದ್ದಿ ಓದಿದ್ದೀರಾ?: ಲೋಕಸಭಾ ಚುನಾವಣೆ | ಮಂಡ್ಯದಲ್ಲಿ ಸುಮಲತಾ ಸ್ವತಂತ್ರವೋ – ಅತಂತ್ರವೋ?
“ಜಾಬ್ ಕಾರ್ಡ್‌ಗಳ ನವೀಕರಣ/ಅಳಿಸುವಿಕೆಯು ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳು ನಡೆಸುವ ನಿಯಮಿತ ಕಾರ್ಯವಾಗಿದೆ. ಜಾಬ್ ಕಾರ್ಟ್‌ಗಳು ನಕಲಿ ಅಥವಾ ತಪ್ಪಾದ ಜಾಬ್ ಕಾರ್ಡ್ ಆಗಿದ್ದರೆ, ಮನೆಯವರು ಕೆಲಸ ಮಾಡಲು ಇಚ್ಛಿಸದಿದ್ದರೆ, ಗ್ರಾಮ ಪಂಚಾಯತಿ ವ್ಯಾಪ್ತಿಯಿಂದ ಕುಟುಂಬವು ಶಾಶ್ವತವಾಗಿ ಬದಲಾಗಿದ್ದರೆ, ಜಾಬ್ ಕಾರ್ಡ್‌ನಲ್ಲಿರುವ ವ್ಯಕ್ತಿಯ ಅವಧಿ ಮುಗಿದಿದ್ದರೆ ಅಂತಹ ಜಾಬ್ ಕಾರ್ಡ್ ಅನ್ನು ಅಳಿಸಬಹುದು” ಎಂದು ಸಚಿವಾಲಯ ಹೇಳಿದೆ.
ಆದರೆ, ಈಗ ಎಬಿಪಿಎಸ್ ಕಡ್ಡಾಯವಾಗಿರುವ ಕಾರಣ ಅನೇಕ ರಾಜ್ಯಗಳಲ್ಲಿ ಮನರೇಗಾ ಅಡಿಯಲ್ಲಿ ಹೆಚ್ಚಿನ ಸಂಖ್ಯೆಯ ಸಕ್ರಿಯ ಕಾರ್ಮಿಕರು ಯೋಜನೆಯಡಿ ಕೆಲಸ ಪಡೆಯಲು ಅನರ್ಹರಾಗಿದ್ದಾರೆ.
ಮನರೇಗಾ ಪೋರ್ಟಲ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ನಾಗಾಲ್ಯಾಂಡ್ (20.6%), ಮೇಘಾಲಯ (21.5%) ಮತ್ತು ಅಸ್ಸಾಂ (48.1%) ಎಬಿಪಿಎಸ್ ಪಾವತಿಗೆ ಅರ್ಹರಾಗಿರುವ ಕಾರ್ಮಿಕರನ್ನು ಹೊಂದಿದೆ. ಅಂದರೆ, ಒಟ್ಟು ಸಕ್ರಿಯ ಕಾರ್ಮಿಕರಲ್ಲಿ 50%ಗಿಂತ ಕಡಿಮೆ ಕಾರ್ಮಿಕರು ಈಗ ಉದ್ಯೋಗ ಪಡೆಯಲು ಅರ್ಹರಾಗಿದ್ದಾರೆ. ಹೆಚ್ಚಿನ ಕಾರ್ಮಿಕರು ಹೊರಗುಳಿದಿದ್ದಾರೆ.
ಎಬಿಪಿಎಸ್ ಪಾವತಿಗೆ 100% ಅರ್ಹರಾಗಿರುವ ಏಕೈಕ ರಾಜ್ಯ ಕೇರಳವಾಗಿದೆ. ಆಂಧ್ರಪ್ರದೇಶ (99.1%), ತಮಿಳುನಾಡು (97.9%), ಹಿಮಾಚಲ ಪ್ರದೇಶ (96.5%), ತ್ರಿಪುರ (94.5%) ಮತ್ತು ಕರ್ನಾಟಕ (94.5%) ಅರ್ಹ ಕಾರ್ಮಿಕರನ್ನು ಹೊಂದಿರುವ ರಾಜ್ಯಗಳಾಗಿವೆ.