- ಹಲವು ಬಂಧೀಖಾನೆಗಳಿಂದ ಸನ್ನಡತೆಯ 67 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ
- ತಹಶೀಲ್ದಾರ್ ಹುದ್ದೆಗೆ ಕಾನೂನು ಹೋರಾಟ ನಡೆಸಿದ್ದ ಡಾ. ಮೈತ್ರಿ ಕೆ ಎಎಸ್ ಹುದ್ದೆಗೆ ಪರಿಗಣನೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಮಹತ್ವದ ಸಚಿವ ಸಂಪುಟ ಸಭೆಯಲ್ಲಿ ಹಾಲಿನ ದರ ಏರಿಕೆ ಸಹಿತ 13 ಪ್ರಸ್ತಾವಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆಯ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಿರ್ಣಯಗಳಿಗೆ ಸಂಬಂಧಿಸಿದಂತೆ ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, “ಒಟ್ಟು ಹದಿನೈದು ವಿಚಾರಗಳ ಬಗ್ಗೆ ಇಂದಿನ ಕ್ಯಾಬಿನೆಟ್ ಚರ್ಚೆ ನಡೆಸಿದೆ. ಹಾಲಿನ ದರ ಏರಿಕೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಅದರಂತೆ ಪ್ರತಿ ಲೀಟರ್‌ಗೆ ₹3 ರೂಪಾಯಿ ಹೆಚ್ಚಳ ಆಗಲಿದೆ. ಆಗಸ್ಟ್ 1 ರಿಂದ ಪರಿಷ್ಕೃತ ದರ ಜಾರಿಗೆ ಬರಲಿದೆ” ಎಂದು ತಿಳಿಸಿದರು.
ಸಹಕಾರ ಇಲಾಖೆಯಲ್ಲಿ ಆರ್‌ಐಡಿಎಫ್-28 ಯೋಜನೆಯಡಿ ಎಪಿಎಂಸಿಗಳಿಗೆ ರಸ್ತೆ ಮಾಡಲು, ಇತರೆ ಮೂಲಭೂತ ಸೌಲಭ್ಯ ಕಲ್ಪಿಸಲು 130. 40 ಕೋಟಿ ಮಂಜೂರು ಮಾಡಲು ಒಪ್ಪಿಗೆ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಮೊಟ್ಟೆ ವಿತರಣೆಯನ್ನು ವಿಭಾಗವಾರು ಖರೀದಿಸಿ, ವಿತರಿಸಲು ಒಪ್ಪಿಗೆ ನೀಡಲಾಗಿದೆ. ಇದನ್ನು KTTP ACT ಮಾದರಿಯಲ್ಲಿ ಜಾರಿ ಮಾಡಲಾಗುವುದು. ಈ ಹಿಂದೆ ತಾಲೂಕು ಹಾಗೂ ಸೆಂಟ್ರಲ್ ಮಟ್ಟದಲ್ಲಿ ಮೊಟ್ಟೆ ಖರೀದಿ ಮಾಡಲಾಗುತ್ತಿತ್ತು” ಎಂದು ತಿಳಿಸಿದರು.
ಕಿರಿಯ ಶ್ರೇಣಿ ತಹಶೀಲ್ದಾರ್ ಹುದ್ದೆಗೆ ಕಾನೂನು ಹೋರಾಟ ನಡೆಸಿದ್ದ ಡಾ. ಮೈತ್ರಿ ಅವರ ಮನವಿಯನ್ನು ಸರ್ಕಾರ ಪುರಸ್ಕಾರ ಮಾಡಿದೆ. 2011ರಿಂದ ಕಾನೂನು ಹೋರಾಟ ನಡೆಸಿದ್ದ ಮೈತ್ರಿಯವರನ್ನು ಕೆ ಎ ಎಸ್ ಹುದ್ದೆಗೆ ಪರಿಗಣನೆ ಮಾಡಲಾಗಿದೆ ಎಂದು ಕಾನೂನು ಸಚಿವರು ತಿಳಿಸಿದರು.
ಕೊಡಗರು ಎಂದಿದ್ದ ಕೊಡವ ಸಮುದಾಯದ ಹೆಸರನ್ನು ಕೊಡವರು ಎಂದು ಮಾಡಲು ಸಂಪುಟ ಒಪ್ಪಿಗೆ ನೀಡಿದೆ. ದ್ವಾರಕಾನಾಥ್ ಸಮಿತಿ ನೀಡಿದ್ದ ವರದಿಯಂತೆ, ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸಿನಂತೆ ಈ ತಿದ್ದುಪಡಿ ಆದೇಶ ಮಾಡಲಾಗಿದೆ. ಇಂದಿನಿಂದ ಕೊಡಗರು ಎನ್ನುತ್ತಿದ್ದ ಕೊಡವ ಸಮುದಾಯ ಕೊಡವರೆಂದೇ ಕರೆಸಿಕೊಳ್ಳುತ್ತದೆ ಎಂದು ಎಚ್ ಕೆ ಪಾಟೀಲ್ ತಿಳಿಸಿದರು.
ಲೋಕಾಯುಕ್ತ ವಿಚಾರಣಾ ನಿಬಂಧಕರಾಗಿ ನಿವೃತ್ತ ನ್ಯಾಯಾಧೀಶ ಸಿ. ರಾಜಶೇಖರ್ ಅವರನ್ನು ನೇಮಕ ಮಾಡಲು ಸಂಪುಟ ಒಪ್ಪಿಗೆ ನೀಡಿದೆ.
ಉಳಿದಂತೆ ಅರಣ್ಯ ಮತ್ತು ಜೀವ ಪರಿಸರ ಇಲಾಖೆಯ ರಾಷ್ಟ್ರೀಯ ಹಾಗೂ ವನ್ಯಜೀವಿ ತಾಣವನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಿಸಲು ನಿರ್ಧಾರ ತೆಗೆದುಕೊಳ್ಳಲು ಅಗತ್ಯ ಇರುವ ಉಪ ಸಮಿತಿ ರಚಿಸಲು ಮುಖ್ಯಮಂತ್ರಿಯವರಿಗೆ ಸಂಪುಟ ಅಧಿಕಾರ ನೀಡಿದೆ ಎಂದರು.
ಸನ್ನಡತೆಯ ಆಧಾರದ ಮೇಲೆ ರಾಜ್ಯದ ಹಲವು ಬಂಧಿಖಾನೆಗಳಿಂದ 67 ಕೈದಿಗಳ ಬಿಡುಗಡೆಗೆ ಸಂಪುಟ ಒಪ್ಪಿಗೆ ಸೂಚಿಸಿದೆ. ಆಗಸ್ಟ್ 15ಕ್ಕೆ ಬಿಡುಗಡೆ ಭಾಗ್ಯ ಸಿಗಲಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ 24, ಮೈಸೂರಿನಿಂದ 8, ಬೆಳಗಾವಿಯಿಂದ 2, ಕಲಬುರಗಿಯಿಂದ 5, ಶಿವಮೊಗ್ಗದಿಂದ 12, ಬಳ್ಳಾರಿಯಿಂದ 8, ಧಾರವಾಡ ಸೆಂಟ್ರಲ್ ಜೈಲಿನಿಂದ 2 ಕೈದಿಗಳು ಬಿಡುಗಡೆಗೊಳ್ಳಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿನ ಒತ್ತುವರಿ ಪ್ರದೇಶಗಳ ಆಡಿಟ್ ಗೆ ನಿರ್ದೇಶನ ನೀಡಲಾಗಿದೆ ಎಂದ ಸಚಿವರು, ಒತ್ತುವರಿಯಲ್ಲಿ ಖನಿಜ ತೆಗೆದು ಬಳಕೆ ಮಾಡಿದ್ದಿದ್ದರೆ ಅಂತಹವರಿಗೆ ದಂಡ ಹಾಕಲಾಗುತ್ತದೆ. ಈ ಬಾರಿ ಅಂತಹ ದಂಡಕ್ಕೆ ಒನ್ ಟೈಂ ಸೆಟ್ಲಮೆಂಟ್ ಗೆ ಅವಕಾಶ ನೀಡಲಾಗಿದೆ. ಇದರಲ್ಲಿ 6105 ಕೋಟಿ ದಂಡ ವಸೂಲಿ ಆಗಬೇಕಿದೆ. ಇದನ್ನು ಹೇಗೆ ಮಾಡಬೇಕು ಅನ್ನುವುದಕ್ಕೆ ಕ್ಯಾಬಿನೆಟ್ ಸಬ್ ಕಮಿಟಿ ಮಾಡಿ ತೀರ್ಮಾನ ಮಾಡಿಕೊಳ್ಳಲಾಗುತ್ತದೆ. ಸರಿ ಸುಮಾರು ಎಂಟು ವರ್ಷಗಳಿಗೂ ಅಧಿಕ ಕಾಲದ ಬಾಕಿ ಇದಾಗಿದೆ ಎಂದು ಮಾಹಿತಿ ನೀಡಿದರು.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನೆಫ್ರೋಲಜಿ ಕಟ್ಟಡ ಕಟ್ಟಲು ಹೆಚ್ಚುವರಿ ಪರಿಷ್ಕೃತ ಮೊತ್ತ ಬಿಡುಗಡೆಗೆ ಸಂಪುಟ ಒಪ್ಪಿಗೆ ನೀಡಿದೆ. ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಬೆಂಗಳೂರಿನ ವಾಜಪೇಯಿ ಆರೋಗ್ಯ ಕೇಂದ್ರದಲ್ಲಿ ತೆರೆಯಲು ಹಾಗೂ ಸಾರ್ವಜನಿಕ ಖಾಸಗಿ ಸಹಭಾಗಿತ್ವದ (PPP) ಲೋಕೋಪಯೋಗಿ ಯೋಜನೆಗಳ ಅನುಷ್ಠಾನ ಹಾಗೂ ಪರಿವೀಕ್ಷಣೆಗೆ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು.