ಅಯೋಧ್ಯೆಯಲ್ಲಿ ರಾಮಮಂದಿರ ಪ್ರಾಣ ಪ್ರತಿಷ್ಠ ಸಮಾರಂಭವನ್ನು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ 13 ನಿವೃತ್ತ ನ್ಯಾಯಾಧೀಶರು ಭಾಗಿಯಾಗಿದ್ದರು ಎಂದು ಬಾರ್ ಅಂಡ್ ಬೆಂಚ್ ವರದಿ ಹೇಳಿದೆ.
ಭಾರತದ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ (ಸಿಜೆಐ) ವಿ.ಎನ್ ಖರೆ, ಜೆ.ಎಸ್ ಖೇಹರ್, ಎನ್.ವಿ ರಮಣ ಮತ್ತು ಯು.ಯು ಲಲಿತ್ ಹಾಗೂ ನಿವೃತ್ತ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್, ಆದರ್ಶ್ ಗೋಯೆಲ್, ವಿ ರಾಮಸುಬ್ರಹ್ಮಣ್ಯಂ, ಅನಿಲ್ ದವೆ, ವಿನೀತ್ ಸರನ್, ಕೃಷ್ಣ ಮುರಾರಿ, ಜ್ಞಾನ್ ಸುಧಾ ಮಿಶ್ರಾ, ಅರುಣ್ ಮಿಶ್ರಾ ಮತ್ತು ಮುಕುಂದಕಂ ಶರ್ಮಾ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು ಎಂದು ವರದಿ ವಿವರಿಸಿದೆ.
ಎರಡು ದಶಕಗಳ ವಿಚಾರಣೆ ಬಳಿಕ 2019ರಲ್ಲಿ ಜನರ ಭಾವನೆ ಆಧರಿಸಿ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿತ್ತು. ಬಾಬರಿ ಮಸೀದಿ ಧ್ವಂಸವು ‘ಕಾನೂನಿನ ಉಲ್ಲಂಘನೆ’ ಎಂದೂ ಹೇಳಿತ್ತು.
ರಾಮಮಂದಿರ ನಿರ್ಮಾಣಕ್ಕೆ ಅಂತಿಮ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್ ಪೀಠದಲ್ಲಿದ್ದ ಐವರು ನ್ಯಾಯಾಧೀಶರನ್ನು ಆಹ್ವಾನಿಸಲಾಗಿತ್ತು. ಆದರೆ, ಅವರ ಪೈಕಿ ನಾಲ್ವರು ಪೂರ್ವ ಅಧಿಕೃತ ಬದ್ಧತೆಗಳನ್ನು ಉಲ್ಲೇಖಿಸಿ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ವರದಿ ಹೇಳಿದೆ.
ಈ ಐವರು ನ್ಯಾಯಾಧೀಶರಲ್ಲಿ ನಿವೃತ್ತ ಸಿಜೆಐ ರಂಜನ್ ಗೊಗೊಯ್ (ಹಾಲಿ ರಾಜ್ಯಸಭಾ ಸದಸ್ಯ), ಅಬ್ದುಲ್ ನಜೀರ್ (ಹಾಲಿ ಆಂಧ್ರಪ್ರದೇಶ ರಾಜ್ಯಪಾಲರು) ಹಾಗೂ ಡಿ.ವೈ ಚಂದ್ರಚೂಡ್ ಅವರು ಹಾಲಿ ಸಿಜೆಐ ಆಗಿದ್ದಾರೆ. ಅವರು ನ್ಯಾಯಾಲಯದಲ್ಲಿದ್ದರು. ಉಳಿದಂತೆ, ಎಸ್.ಎ ಬೋಬ್ಡೆ ಅವರು ಭಾಗವಹಿಸುವಿಕೆ ಸಂಬಂಧ ಯಾವುದೇ ಹೇಳಿಕೆ ನೀಡಿಲ್ಲ ಎಂದು ವರದಿ ತಿಳಿಸಿದೆ.
“ಇನ್ನು, ನಿವೃತ್ತ ನ್ಯಾಯಮೂರ್ತಿ ಅಶೋಕ್ ಭೂಷಣ್ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಅಶೋಕ್ ಭೂಷಣ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಾಬರಿ ಮಸೀದಿ ತೀರ್ಪಿನ ಪೀಠದ ಭಾಗವಾಗಿದ್ದ ಏಕೈಕ ನ್ಯಾಯಮೂರ್ತಿ” ಎಂದು ವರದಿ ವಿವರಿಸಿದೆ.
“ನ್ಯಾಯಾಲಯದ ಬದ್ಧತೆಯ ಕಾರಣ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರು ಸಹ ಹಾಜರಾಗಲಿಲ್ಲ,” ಎಂದು ವರದಿ ಹೇಳಿದೆ.