“16ನೇ ಹಣಕಾಸು ಆಯೋಗ ರಚಿಸಲು ಕೇಂದ್ರ ಅಧಿಸೂಚನೆ ಹೊರಡಿಸಿದೆ. ಒಂದು ವರ್ಷಕ್ಕೆ 14 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಪಾಲು ಕುಂಠಿತ ಆಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಆಯೋಗದ ಮುಂದೆ ಏನು ವಾದ ಮಂಡಿಸಬೇಕೆಂದು ಚರ್ಚೆಯಾಗಿದೆ. ಹಾಗಾಗಿ, ಸಮರ್ಥ ವಾದ ಮಂಡನೆಗೆ ಸಲಹಾ ಸಮಿತಿ ರಚನೆ ಮಾಡಲಾಗಿದೆ” ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಂಪುಟ ಸಭೆ ನಂತರ ಮಾತನಾಡಿದ ಅವರು, “ರಾಜ್ಯದ ಪರ ಸಮರ್ಥ ವಾದ ಮಂಡನೆಗೆ ಸಲಹಾ ಸಮಿತಿ ರಚನೆಗೆ ತೀರ್ಮಾನಿಸಲಾಗಿದೆ. 4 ಲಕ್ಷ ಕೋಟಿ ರೂಪಾಯಿ ತೆರಿಗೆ ರೂಪದಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಕೆಯಾಗುತ್ತಿದೆ. ಆದರೆ, ಅದರಲ್ಲಿ ರಾಜ್ಯಕ್ಕೆ 60-70 ಸಾವಿರ ಕೋಟಿ ಮಾತ್ರ ಬರುತ್ತಿದೆ. ಒಂದು ವರ್ಷಕ್ಕೆ 14 ಸಾವಿರ ಕೋಟಿ ರಾಜ್ಯಕ್ಕೆ ಬರಬೇಕಾದ ಪಾಲು ಕುಂಠಿತ ಆಗಿದೆ. 5 ವರ್ಷದಲ್ಲಿ 62 ಸಾವಿರ ಕೋಟಿ ನಷ್ಟ ಉಂಟಾಗುತ್ತದೆ” ಎಂದು ತಿಳಿಸಿದರು.
“ಕರ್ನಾಟಕದಿಂದ ಐಟಿ-ಬಿಟಿ ಸರ್ವಿಸ್ನಿಂದಲೇ ಬರೋಬ್ಬರಿ 3.5 ಲಕ್ಷ ಕೋಟಿ ಡಾಲರ್ ವರಮಾನ ರಫ್ತಾಗುತ್ತಿದೆ. ಆದರೆ, ಈ ದೊಡ್ಡ ಪಾಲಿನಲ್ಲಿ ಸರ್ಕಾರಕ್ಕೆ ಸೂಕ್ತ ನ್ಯಾಯ ಸಿಗುತ್ತಿಲ್ಲ ಎಂಬುದು ನಮ್ಮ ವಾದ. 14ನೇ ಹಣಕಾಸು ಆಯೋಗದ ಅವಧಿಯಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಕೊಡುವ ತೆರಿಗೆಯಲ್ಲಿ ಶೇ.4.71ರಷ್ಟು ಕೊಡುತ್ತಿದ್ದರು. ಇದು 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಶೇಕಡಾ 3.4ಕ್ಕೆ ಇಳಿಕೆಯಾಗಿದೆ. ಅಂದರೆ, 100 ರೂ.ನಲ್ಲಿ 12 ರೂ.ನಷ್ಟು ಮಾತ್ರ ನಮ್ಮ ರಾಜ್ಯಕ್ಕೆ ವಾಪಸ್ ಬರುತ್ತಿದೆ” ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.
“ಪ್ರತಿ ವರ್ಷ 30% ಪ್ರತಿಶತ ರಾಜ್ಯಕ್ಕೆ ಬರಬೇಕಾದ ಪಾಲು ಕಡಿತವಾಗುತ್ತಿದೆ. ತೆರಿಗೆ ಎನ್ನುವ ಬದಲು ಸೆಸ್, ಕರ ಎಂದು ಹೆಸರು ಬದಲಾಯಿಸಿ ಸಂಗ್ರಹ ಮಾಡಲಾಗುತ್ತಿದೆ. ಹಾಲಿ ಬಿಜೆಪಿ ಸರ್ಕಾರ ಬರುವ ಮೊದಲು ಸೆಸ್ ಚಾರ್ಜ್ 8 ರಿಂದ 9 ಪ್ರತಿಶತ ಇರುತ್ತಿತ್ತು. ಬಿಜೆಪಿ ಸರ್ಕಾರ ಬಂದ ಮೇಲೆ 23% ಸೆಸ್ ಚಾರ್ಜ್ ಆಗಿದೆ. 5 ರಿಂದ 6 ಲಕ್ಷ ಕೋಟಿ ಸೆಸ್ ಚಾರ್ಜ್ ಮೂಲಕ ಕೇಂದ್ರ ಆದಾಯ ಮಾಡುತ್ತಿದೆ. ಇದರಿಂದ ರಾಜ್ಯಕ್ಕೆ ನಮಗೆ ಸಿಗುವ ಪ್ರಮಾಣ ಕಡಿಮೆ ಆಗುತ್ತಿದೆ” ಎಂದು ಕಂದಾಯ ಸಚಿವರು ತಿಳಿಸಿದರು.
ಇದನ್ನು ಓದಿದ್ದೀರಾ? ಸಾರಿಗೆ ನಿಗಮಗಳ ₹581 ಕೋಟಿ ಮೋಟಾರು ವಾಹನ ತೆರಿಗೆ ಬಾಕಿ: ವಿನಾಯಿತಿ ನೀಡಿದ ಸಚಿವ ಸಂಪುಟ ಸಭೆ
“ಜನರಿಗೆ ಇದರಿಂದೇನೂ ಹೊರೆ ಕಡಿಮೆಯಾಗುತ್ತಿಲ್ಲ. ಕರ್ನಾಟಕ ಒಂದು ರಾಜ್ಯಕ್ಕೆ 8,200 ಕೋಟಿ ರೂ. ಸೆಸ್‌ನಿಂದಲೇ ನಷ್ಟ ಆಗುತ್ತಿದ್ದು, ತೆರಿಗೆಯನ್ನು ಕರವಾಗಿ ಪರಿವರ್ತನೆ ಮಾಡಿ ರಾಜ್ಯದ ಆದಾಯ ಖೋತಾ ಮಾಡಲಾಗಿದೆ” ಎಂದು ಕೇಂದ್ರ ಸರ್ಕಾರದ ನಡೆಯ ವಿರುದ್ದ ಸಚಿವ ಕೃಷ್ಣಬೈರೇಗೌಡ ವಾಗ್ದಾಳಿ ನಡೆಸಿದರು.
“ಸರ್ಕಾರ ರಚನೆ ಮಾಡುವ ಸಲಹಾ ಸಮಿತಿಯಲ್ಲಿ ಹಣಕಾಸು ತಜ್ಞರಾದ ಗೋವಿಂದರಾವ್, ಶ್ರೀನಿವಾಸ್ ಮೂರ್ತಿ ಮತ್ತು ನರೇಂದ್ರ ಪಾಣಿ ಸೇರಿದಂತೆ ತಜ್ಞರು ಇರಲಿದ್ದಾರೆ. 16ನೇ ಹಣಕಾಸು ಆಯೋಗದ ಮುಂದೆ ಏನು ವಾದ ಮಾಡಬೇಕು ಎಂಬ ಬಗ್ಗೆ ಸಲಹಾ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡುತ್ತದೆ” ಎಂದು ಇದೇ ವೇಳೆ ಮಾಹಿತಿ ನೀಡಿದರು.