‘ಒಂದು ರಾಷ್ಟ್ರ, ಒಂದು ಚುನಾವಣೆ’ ಘೋಷಣೆ ಅಡಿಯಲ್ಲಿ ದೇಶದಲ್ಲಿ ಏಕಕಾಲದಲ್ಲಿ ಲೋಕಸಭೆ, ವಿಧಾನಸಭೆ, ಪಂಚಾಯತ್ ಚುನಾವಣೆಗಳನ್ನು ನಡೆಸುವ ಪ್ರಸ್ತಾಪದ ವರದಿಯನ್ನು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ನೇತೃತ್ವದ ಸಮಿತಿಯು ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮುರಿಗೆ ಸಲ್ಲಿಸಿದೆ.
ಮೂಲಗಳ ಪ್ರಕಾರ, ವರದಿಯು ಎಂಟು ಪರಿಚ್ಚೇದಗಳೊಂದಿಗೆ 18 ಸಾವಿರ ಪುಟಗಳನ್ನು ಒಳಗೊಂಡಿದೆ. ಸಂವಿಧಾನದ ಐದು ತಿದ್ದುಪಡಿಗಳೊಂದಿಗೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವ ಬಗ್ಗೆ ಸಮಿತಿ ವಿವರಿಸಿದೆ. ಆದರೆ, ಒಂದು ರಾಷ್ಟ್ರ, ಒಂದು ಚುನಾವಣೆಗೆ ನಾಲ್ಕು ರಾಷ್ಟ್ರೀಯ ಪಕ್ಷಗಳು ಸೇರಿದಂತೆ 15 ಪಕ್ಷಗಳು ವಿರೋಧ ವ್ಯಕ್ತಪಡಿಸಿದೆ.
47 ರಾಜಕೀಯ ಪಕ್ಷಗಳ ಪೈಕಿ 32 ಪಕ್ಷಗಳು ಈ ಏಕಕಾಲದಲ್ಲಿ ಚುನಾವಣೆ ಪ್ರಸ್ತಾಪವನ್ನು ಬೆಂಬಲಿಸಿದರೆ, 15 ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಒಂದು ರಾಷ್ಟ್ರ, ಒಂದು ಚುನಾವಣೆಗೆ 32 ಪಕ್ಷಗಳು ಬೆಂಬಲಿಸಿದ್ದರೂ ಕೂಡಾ ಈ ಪೈಕಿ ಎರಡು ಮಾತ್ರ ರಾಷ್ಟ್ರೀಯ ಪಕ್ಷಗಳಾಗಿದೆ. ಒಂದು ಬಿಜೆಪಿಯಾದರೆ, ಇನ್ನೊಂದು ಎನ್‌ಡಿಎ ಕೂಟದಲ್ಲಿರುವ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್‌ಪಿಪಿ ಆಗಿದೆ.
ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿರುವ 15 ಪಕ್ಷಗಳಲ್ಲಿ ನಾಲ್ಕು ಚುನಾವಣಾ ಆಯೋಗ ಗುರುತಿಸಿರುವ ರಾಷ್ಟ್ರೀಯ ಪಕ್ಷಗಳಾಗಿವೆ. ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಬಹುಜನ ಸಮಾನ ಪಕ್ಷ (ಬಿಎಸ್‌ಪಿ) ಮತ್ತು ಸಿಪಿಐ(ಎಂ) ಏಕಕಾಲದಲ್ಲಿ ಚುನಾವಣೆ ವಿರೋಧಿಸಿರುವ ರಾಷ್ಟ್ರೀಯ ಪಕ್ಷಗಳಾಗಿದೆ.
ಈ ಸಮಿತಿಯು ಒಟ್ಟಾಗಿ 62 ರಾಜಕೀಯ ಪಕ್ಷಗಳಲ್ಲಿ ಒಂದು ದೇಶ ಒಂದು ಚುನಾವಣೆಯ ಬಗ್ಗೆ ಅಭಿಪ್ರಾಯವನ್ನು ಕೇಳಿದೆ. ಈ ಪೈಕಿ 18 ಪಕ್ಷಗಳ ನಾಯಕರುಗಳನ್ನು ಮುಖತಃ ಭೇಟಿಯಾಗಿ ಅಭಿಪ್ರಾಯ ಕೇಳಲಾಗಿದೆ.
ಬೆಂಬಲ ನೀಡಿದ ಪಕ್ಷಗಳು
ಬಿಜೆಪಿ, ಎನ್‌ಪಿಪಿ ಸೇರಿದಂತೆ ಎಐಎಡಿಎಂಕೆ, ಬಿಜೆಪಿ ಮೈತ್ರಿ ಪಕ್ಷಗಳಾದ ಆಲ್ ಜಾರ್ಖಾಂಡ್ ಸ್ಟೂಡೆಂಟ್ಸ್ ಯೂನಿಯನ್ (ಎಜೆಎಸ್‌ಯು), ಅಪ್ನಾ ದಳ್ (ಸೋನಿಲಾಲ್), ಅಸಾಮ್ ಗನಾ ಪರಿಷದ್, ಲೋಕ ಜನಶಕ್ತಿ ಪಕ್ಷ (ಆರ್), ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ (ನಾಗಾಲ್ಯಾಂಡ್), ಸಿಕ್ಕಿಂ ಕ್ರಾಂತಿಕಾರಿ ಮೋರ್ಚಾ, ಮಿಜೋ ನ್ಯಾಷನಲ್ ಫ್ರಂಟ್, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ ಆಫ್ ಅಸ್ಸಾಂ, ಜೆಡಿ (ಯು), ಬಿಜು ಜನತಾ ದಳ, ಶಿವಸೇನೆ, ಅಕಾಲಿದಳ
ವಿರೋಧಿಸಿದ ಪಕ್ಷಗಳು
ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ (ಎಎಪಿ), ಬಹುಜನ ಸಮಾನ ಪಕ್ಷ (ಬಿಎಸ್‌ಪಿ), ಸಿಪಿಐ (ಎಂ) ಮಾತ್ರವಲ್ಲದೆ ಎಐಯುಡಿಎಫ್, ತೃಣಮೂಲ ಕಾಂಗ್ರೆಸ್ (ಟಿಎಂಸಿ), ಎಐಎಂಐಎಂ, ಸಿಪಿಐ, ಡಿಎಂಕೆ, ನಾಗ ಪೀಪಲ್ಸ್ ಫ್ರಂಟ್ (ಎನ್‌ಪಿಎಫ್) ಮತ್ತು ಸಮಾಜವಾದಿ ಪಕ್ಷ (ಎಸ್‌ಪಿ).
ಪ್ರತಿಕ್ರಿಯೆ ನೀಡಿದ ಪ್ರಮುಖ ಪಕ್ಷಗಳು
ಭಾರತ ರಾಷ್ಟ್ರ ಸಮಿತಿ, ಐಯುಎಮ್‌ಎಲ್, ಜೆ&ಕೆ ನ್ಯಾಷನಲ್ ಕಾನ್ಫೆರೆನ್ಸ್, ಜೆಡಿ (ಎಸ್), ಜಾರ್ಖಂಡ್ ಮುಕ್ತಿ ಮೋರ್ಚಾ, ಕೇರಳ ಕಾಂಗ್ರೆಸ್ (ಎಂ), ಎನ್‌ಸಿಪಿ, ಆರ್‌ಜೆಡಿ, ಆರ್‌ಎಸ್‌ಪಿ, ಟಿಡಿಪಿ, ಆರ್‌ಎಲ್‌ಡಿ, ವೈಎಸ್‌ಆರ್‌ಸಿಪಿ
ದೆಹಲಿ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಅಜಿತ್ ಪ್ರಕಾಶ್ ಶಾ, ಕೋಲ್ಕತ್ತಾ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಗಿರೀಶ್ ಚಂದ್ರ ಗುಪ್ತಾ, ಮದ್ರಾಸ್ ಹೈಕೋರ್ಟ್ ಮಾಜಿ ಮುಖ್ಯ ನ್ಯಾಯಾಧೀಶ ಸಂಜೀವ್ ಬ್ಯಾನರ್ಜಿ ಒಂದು ದೇಶ ಒಂದು ಚುನಾವಣೆಯನ್ನು ವಿರೋಧಿಸಿದ್ದಾರೆ.