ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡುತ್ತಿರುವ ಈ ಬೆಳವಣಿಗೆಯನ್ನು ಮುಂಬರುವ 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ? ಮೋದಿಯವರ ನಿರಂಕುಶ ಆಡಳಿತದಲ್ಲಿ ಈ ಪ್ರಶ್ನೆಗೆ ಬೆಲೆಯಿಲ್ಲ ಎಂದು ಗೊತ್ತಿದ್ದೂ ನಾವು ಪ್ರಜೆಗಳು ಮತ್ತೆ ಮತ್ತೆ ಕೇಳುತ್ತಿರಬೇಕು.
ಇನ್ನು ಕೆಲವೇ ತಿಂಗಳಲ್ಲಿ 16ನೇ ಹಣಕಾಸು ಆಯೋಗವು ರಚನೆಯಾಗಲಿದೆ. ತುಂಬಾ ನಿರೀಕ್ಷೆಗಳಿವೆ. ಆದರೆ ಫಲಿತಾಂಶದ ಕುರಿತು ಸಿನಿಕತನವಿದೆ.
2014ಕ್ಕೂ ಮುಂಚೆ ಹಣಕಾಸು ಆಯೋಗವು ತನ್ನ ಮೇಲಿನ ಹೊಣೆಗಾರಿಕೆಯನ್ನು ಯೋಜನಾ ಆಯೋಗದ ಜೊತೆಗೆ ಹಂಚಿಕೊಳ್ಳುತ್ತಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಅಧಿಕಾರಕ್ಕೆ ಬಂದ ನಂತರ ತನ್ನ ಪೂರ್ವಗ್ರಹ ಪೀಡಿತ ಮನಸ್ಥಿತಿಯಿಂದಾಗಿ ಯೋಜನಾ ಆಯೋಗವನ್ನು ರದ್ದುಗೊಳಿಸಿತು.
ತನ್ನ ಎಲ್ಲಾ ಮಿತಿಗಳ ನಡುವೆ (ಅತೃಪ್ತ ಮುಖಂಡರ ಪುನರ್ವಸತಿ ಎಂದು ಸಹ ಟೀಕೆಗೆ ಗುರಿಯಾಗಿತ್ತು) ಸಾರ್ವಜನಿಕ ಸಂಸ್ಥೆ, ಉದ್ಯಮ, ಯೋಜನೆಗಳ ಕುರಿತು ಕಾರ್ಯ ನಿರ್ವಹಿಸುತ್ತಿದ್ದ ಯೋಜನಾ ಆಯೋಗ ರದ್ದಾಗಿ ಖಾಸಗಿ ಬಂಡವಾಳಶಾಹಿಗಳ ಪರವಾದ ನಿತಿ ಆಯೋಗ ಅಡಿಯಿಟ್ಟಿತು. ಇದು ಇಂದಿಗೂ ಮೋದಾನಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿದೆ.
ಕಳೆದ ಒಂಬತ್ತು ವರ್ಷಗಳಿಂದ ಹಣಕಾಸು ಆಯೋಗವು ತನ್ನ ಮೇಲಿನ ಗುರುತರವಾದ ಹೊಣೆಗಾರಿಕೆಯನ್ನು ನಿಭಾಯಿಸಲು ಮತ್ತು ಕೇಂದ್ರದ ಒಕ್ಕೂಟ ವಿರೋಧಿ ಧೋರಣೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ತಿಣುಕುತ್ತಿದೆ. ಮೋದಿ ಸಾಹೇಬರ ಕೃಪೆಯಿಂದಾಗಿ ಇದರ ನೀತಿಗಳಲ್ಲಿ ಸ್ಪಷ್ಟತೆಯಿಲ್ಲ. ಅದನ್ನು ಜಾರಿಗೊಳಿಸುವ ಹತಾರಗಳಿಲ್ಲ ಮತ್ತು ಹಕ್ಕುಗಳಿಲ್ಲ.
14ನೇ ಹಣಕಾಸು ಆಯೋಗವು ತೆರಿಗೆ ಸಂಗ್ರಹದ ಶೇ.42ರಷ್ಟು ಪ್ರಮಾಣವನ್ನು ರಾಜ್ಯಗಳಿಗೆ ಹಂಚಬೇಕೆಂದು ನಿಗದಿಪಡಿಸಿತ್ತು(Vertical distribution). ಆದರೆ 2017ರಲ್ಲಿ ರಚನೆಯಾದ 15ನೇ ಹಣಕಾಸು ಆಯೋಗವು ಅದನ್ನು ಶೇ.41ಕ್ಕೆ ಇಳಿಸಿತು (ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವುದರಿಂದ 1% ಕಡಿತ). ಆದರೆ ರಂಗೋಲಿ ಕೆಳಗೆ ತೂರುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರಕಾರವು ಆದಾಯ ಹೆಚ್ಚಿಸಿಕೊಳ್ಳಲು ರಾಜ್ಯಗಳಿಗೂ ಪಾಲು ದೊರಕುವ ತೆರಿಗೆಯನ್ನು ಹೆಚ್ಚಿಸದೆ ತನ್ನ ಬೊಕ್ಕಸಕ್ಕೆ ನೇರವಾಗಿ ಬರುವ ಸರ್ ಚಾರ್ಜ್ ಮತ್ತು ಸೆಸ್ ನ್ನು ಮಾತ್ರ ಹೆಚ್ಚಿಸಿಕೊಳ್ಳುತ್ತಿದೆ.
2011-12ರಲ್ಲಿ ಶೇ.10.4ರಷ್ಟಿರುವ ಸೆಸ್ ಮತ್ತು ಸರ್ ಚಾರ್ಜ್ ಹತ್ತು ವರ್ಷಗಳ ನಂತರ 2019-20ರ ವೇಳೆಗೆ ಶೇ.20.2ರಷ್ಟು ಹೆಚ್ಚಾಗಿದೆ (ದುಪ್ಪಟ್ಟು). ಇದರಿಂದಾಗಿ ರಾಜ್ಯಗಳು ತೆರಿಗೆ ವರಮಾನದ ನಷ್ಟ ಅನುಭವಿಸುತ್ತಿವೆ.
ಒಕ್ಕೂಟ ವ್ಯವಸ್ಥೆಯನ್ನೇ ನಾಶ ಮಾಡುತ್ತಿರುವ ಈ ಬೆಳವಣಿಗೆಯನ್ನು ಮುಂಬರುವ 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ? ಮೋದಿಯವರ ನಿರಂಕುಶ ಆಡಳಿತದಲ್ಲಿ ಈ ಪ್ರಶ್ನೆಗೆ ಬೆಲೆಯಿಲ್ಲ ಎಂದು ಗೊತ್ತಿದ್ದೂ ನಾವು ಪ್ರಜೆಗಳು ಕೇಳುತ್ತಿರಬೇಕು.
ಎರಡನೆಯದಾಗಿ ರಾಜ್ಯಗಳಿಗೆ ಜನಸಂಖ್ಯೆ ಆಧಾರಿತ ತೆರಿಗೆ ಸಂಗ್ರಹನ್ನು ಹಂಚಿಕೆ ಮಾಡುವುದರಿಂದಾಗಿ (horizontal distribution) ಅತಿ ಹೆಚ್ಚು ತೆರಿಗೆ ಸಂಗ್ರಹ ಮಾಡಿ ಕೇಂದ್ರಕ್ಕೆ ಒಪ್ಪಿಸುತ್ತಿರುವ ಕರ್ನಾಟಕ ರಾಜ್ಯಕ್ಕೆ ಕೇವಲ ಶೇ.3.64, ತಮಿಳು ನಾಡಿಗೆ ಶೇ.4.07, ತೆಲಂಗಾಣಕ್ಕೆ ಶೇ.2.1, ಮಹಾರಾಷ್ಟ್ರಗೆ ಶೇ.6.3ರಷ್ಟು ಮಾತ್ರ ಹಂಚಿಕೆಯಾಗುತ್ತಿದೆ.
ಅತಿ ಕಡಿಮೆ ತೆರಿಗೆ ಸಂಗ್ರಹ ಮಾಡುತ್ತಿರುವ ಉತ್ತರ ಪ್ರದೇಶ ರಾಜ್ಯಕ್ಕೆ ಶೇ.17.93, ರಾಜಸ್ಥಾನಕ್ಕೆ ಶೇ.6.03, ಮಧ್ಯಪ್ರದೇಶಕ್ಕೆ ಶೇ.7.85, ಬಿಹಾರ್ ಗೆ ಶೇ10ರಷ್ಟು ಹಂಚಿಕೆಯಾಗುತ್ತಿದೆ. ಉತ್ತರ ಮತ್ತು ದಕ್ಷಿಣ ರಾಜ್ಯಗಳ ನಡುವಿನ ಇಂತಹ ಅಸಮಾನತೆ ಮತ್ತು ತಾರತಮ್ಯವನ್ನು 16ನೇ ಹಣಕಾಸು ಆಯೋಗ ಹೇಗೆ ನಿಭಾಯಿಸುತ್ತದೆ?
ಯಾರಿಗೂ ಖಾತರಿಯಿಲ್ಲ ಮತ್ತು ನಂಬಿಕೆಯಿಲ್ಲ.
ಏಕೆಂದರೆ ಮೋದಿ ಸರಕಾರವು ಕಳೆದ ಒಂಬತ್ತು ವರ್ಷಗಳಲ್ಲಿ ಎಲ್ಲಾ ಸಾರ್ವಜನಿಕ ಸಂಸ್ಥೆ, ಆಯೋಗಗಳ ವಿಶ್ವಾಸಾರ್ಹತೆಯನ್ನು ನಾಶಪಡಿಸಿದೆ. ಇದಕ್ಕೆ ಹಣಕಾಸು ಆಯೋಗವು ಸಹ ಬಲಿಪಶು.
ಹಣಕಾಸು ಆಯೋಗದ ಕುರಿತು ನಿವೃತ್ತ ಆರ್ಬಿಐ ಗವರ್ನರ್ ಸುಬ್ಬಾರೆಡ್ಡಿ ಒಂದು ಲೇಖನ ಬರೆದಿದ್ದಾರೆ. ಎಂದಿನಂತೆಯೇ ಅದು apolitical ಆಗಿದೆ ಮತ್ತು ಕೆಲವು ನಿಲುವುಗಳನ್ನು ಒಪ್ಪಲು ಸಾಧ್ಯವಿಲ್ಲ. ಆದರೂ ಇದು ಅಧಿಕೃತ ಮಾಹಿತಿಯಾಗಿರುವುದರಿಂದ ಓದಬಹುದು. (https://www.thehindu.com/opinion/lead/the-next-finance-commission-will-have-a-tough-task/article66969322.ece)
ಕಡೆಗೂ ಮಿಕ್ಕ ವಿರೋಧ ಪಕ್ಷಗಳಿಗೂ ನವ ಉದಾರೀಕರಣದ ಕುರಿತು ಅಂತಹ ತಕರಾರು ಇಲ್ಲದ ಕಾರಣಕ್ಕೆ ಮತ್ತು ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವ ಕಾಳಜಿಯೂ ಇಲ್ಲದ ಕಾರಣಕ್ಕೆ ಮುಂದಿನ ದಿನಗಳಲ್ಲಿ ನಿರಾಶೆ ಮಾತ್ರ ನಿರೀಕ್ಷಿಸಬಹುದು. ಇಲ್ಲಿ ಡಿಎಂಕೆ ಹೊರತುಪಡಿಸಿ ಮಿಕ್ಕ ಪ್ರಾದೇಶಿಕ ಪಕ್ಷಗಳ ಒಕ್ಕೂಟ ಪರವಾದ ನಿಲುವುಗಳ ಬದ್ಧತೆ ಸದಾ ಸಂಶಯಾಸ್ಪದವಾಗಿರುತ್ತದೆ. ಅವು ವಿಶ್ವಾಸಾರ್ಹತೆ ಕಳೆದುಕೊಂಡಿವೆ. ಈ ವಿಷಯದಲ್ಲಿ ಕಾಂಗ್ರೆಸ್ ಬಗ್ಗೆ ಮಾತನಾಡುವುದೇನಿಲ್ಲ.

ಬಿ. ಶ್ರೀಪಾದ ಭಟ್
ಶಿಕ್ಷಣ ತಜ್ಞರಾದ ಶ್ರೀಪಾದ ಭಟ್ ಅವರು, ಮೂಲತಃ ವಿಜಯನಗರ ಜಿಲ್ಲೆಯವರು. ದಲಿತ ಮತ್ತು ಪ್ರಗತಿಪರ ಚಳವಳಿಗಳಲ್ಲಿ ಸಕ್ರಿಯರಾಗಿರುವ ಇವರು, 'ಹಿಂದುತ್ವ ರಾಜಕಾರಣ - ಅಂದು ಇಂದು ಮುಂದು', 'ಬಿಸಿಲು, ಬಯಲು, ನೆಳಲು - ಹೊಸ ಅಲೆ ಸಿನಿಮಾ ಕುರಿತಾದ ಕಥನ', 'ಕಣ್ಕಟ್ಟು', 'ಸಾವಿತ್ರಿಬಾಯಿ ಫುಲೆ ಬದುಕು ಬರಹ' ಮೊದಲಾದ ಕೃತಿಗಳನ್ನು ಬರೆದಿದ್ದಾರೆ