ಕೇರಳದಲ್ಲಿ ವಿಧಾನಭಾ ಅಧಿಕವೇಶ ನಡೆಯುತ್ತಿದ್ದು, ಬೆಲೆ ಏರಿಕೆ ತಡೆಯುವಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಪಕ್ಷಗಳು ಸಭಾತ್ಯಾಗ ಮಾಡಿವೆ. ಹಣದುಬ್ಬರವು ರಾಷ್ಟ್ರೀಯ ಸಮಸ್ಯೆಯಾಗಿದ್ದು, ಮಾರುಕಟ್ಟೆಯ ಮಧ್ಯಪ್ರವೇಶದಿಂದಾಗಿ ಹಣದುಬ್ಬರವನ್ನು ಕಡಿಮೆ ಮಾಡಬಹುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಿ.ಆರ್ ಅನಿಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಆಹಾರ ಉತ್ಪನ್ನಗಳ ಬೆಲೆಯೇರಿಕೆ ತನ್ನ ಗಮನಕ್ಕೆ ಬಂದಿಲ್ಲ ಎಂದು ಸಚಿವ ಅನಿಲ್ ವಿಧಾನಸಭೆಯಲ್ಲಿ ಹೇಳಿದ್ದು ಪ್ರತಿಪಕ್ಷಗಳನ್ನು ಕೆರಳಿಸಿತು. ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ವಿ.ಡಿ ಸತೀಶನ್ ಅವರು ಎಲ್‌ಡಿಎಫ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಎಲ್‌ಡಿಎಫ್ ಸರ್ಕಾರವು ಬೆಲೆ ಏರಿಕೆ ಸಮಸ್ಯೆಯ ಗಂಭೀರತೆಯನ್ನು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.
“ಇತ್ತೀಚಿನ ದಿನಗಳಲ್ಲಿ ತರಕಾರಿಗಳ ಬೆಲೆ ಗಗನಕ್ಕೇರಿರುವುದರಿಂದ ಮಲಯಾಳಿಗಳು ಬೆಂಡೆಕಾಯಿ, ನುಗ್ಗೆ ಕಾಯಿ ಮತ್ತು ಟೊಮೇಟೊ ಖರೀದಿಸುವುದು ಕಷ್ಟವಾಗಿದೆ” ಎಂದು ಕಾಂಗ್ರೆಸ್ ಶಾಸಕ ರೋಜಿ ಎಂ ಜಾನ್ ಆರೋಪಿಸಿದ್ದಾರೆ.
”ತರಕಾರಿ, ಮೀನು, ಮಾಂಸ, ಮೊಟ್ಟೆ ಬೆಲೆ ದುಪ್ಪಟ್ಟಾಗಿದೆ. ಜನ ಮಾರುಕಟ್ಟೆಗೆ ಹೋಗುವುದೇ ಕಷ್ಟವಾಗಿದೆ. ಎಲ್‌ಡಿಎಫ್ ಸರ್ಕಾರ ಕೋಳಿ ಮಾಂಸವನ್ನು ಪ್ರತಿ ಕಿ.ಲೋ.ಗೆ 85 ರೂ.ನಂತೆ ನೀಡುವುದಾಗಿ ಭರವಸೆ ನೀಡಿತ್ತು. ಆದರೆ, ಆ ಭರವಸೆಯನ್ನು ಸರ್ಕಾರ ಪೂರೈಸಿಲ್ಲ. ವಾಸ್ತವವಾಗಿ, ಜನರು ಈ ಬೆಲೆಯಲ್ಲಿ ಕೋಳಿ ಕಾಲನ್ನೂ ಪಡೆಯಲು ಸಾಧ್ಯವಾಗುತ್ತಿಲ್ಲ. ಬೆಲೆ ಏರಿಕೆ ನಿಯಂತ್ರಿಸಲು ಮಾರುಕಟ್ಟೆ ಮಧ್ಯಸ್ಥಿಕೆಗಾಗಿ ರಾಜ್ಯ ಸರ್ಕಾರವು ಯಾವುದಾರರೂ ರೀತಿಯಲ್ಲಿ ಹಣಕಾಸಿನ ಪ್ರಯೋಜನಗಳನ್ನು ಒದಗಿಸುತ್ತಿದೆಯೇ ಎಂದು ತಿಳಿದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ” ಎಂದು ಕಿಡಿಕಾರಿದ್ದಾರೆ.
“ಎಲ್‌ಡಿಎಫ್ ಆಡಳಿತದಲ್ಲಿ ಹಣದುಬ್ಬರವು 50% ರಿಂದ 200%ವರೆಗೆ ಏರಿಕೆಯಾಗಿದೆ. ಹಣದುಬ್ಬರ ಕುರಿತು ಪ್ರತಿಪಕ್ಷಗಳ ಪ್ರಸ್ತಾಪವಾದಾಗ ಆಹಾರ ಮತ್ತು ನಾಗರಿಕ ಸರಬರಾಜು ಸಚಿವರು ಪಡಿತರ ಅಂಗಡಿಗಳಿಂದ ಅಕ್ಕಿ ವಿತರಿಸುವ ಬಗ್ಗೆ ಉತ್ತರ ನೀಡಿರುವುದು ದುರದೃಷ್ಟಕರ. ನಾವು ತರಕಾರಿಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆಗಳ ಏರುತ್ತಿರುವ ಬಗ್ಗೆ ವಿವಿಧ ಮಾರುಕಟ್ಟೆಗಳಿಂದ ಮಾಹಿತಿ ಸಂಗ್ರಹಿಸಿದ್ದೇವೆ,” ಎಂದು ವಿಪಕ್ಷ ನಾಯಕ ಸತೀಶನ್ ಹೇಳಿದ್ದಾರೆ.