ವಿಧಾನಸಭೆಯ ಅಧಿವೇಶನದ ಕಾರ್ಯಕಲಾಪಕ್ಕೆ ಅಡ್ಡಿಪಡಿಸಿದ ವಿಪಕ್ಷ ಬಿಜೆಪಿಯ 18 ಸದಸ್ಯರನ್ನು ಆರು ತಿಂಗಳ ಕಾಲ ಅಮಾನತುಗೊಳಿಸಿ ಸಭಾಧ್ಯಕ್ಷ ಯು.ಟಿ ಖಾದರ್ ರೂಲಿಂಗ್ ಹೊರಡಿಸಿದ್ದಾರೆ.
ವಿಧಾನಸಭೆಯಲ್ಲಿ ಸಭಾಧ್ಯಕ್ಷರ ಪೀಠಕ್ಕೆ ಮುತ್ತಿಗೆ ಹಾಕಿ, ಕಲಾಪಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ 18 ಶಾಸಕರನ್ನು ಅಮಾನತು ಮಾಡಲಾಗಿದ್ದು, ಈ ಶಾಸಕರು ಅರು ತಿಂಗಳೊಳಗೆ ನಡೆಯುವ ಯಾವುದೇ ಅಧಿವೇಶನದಲ್ಲಿ ಭಾಗಿಯಾಗುವಂತಿಲ್ಲ.
“ಸ್ಪೀಕರ್ ಸ್ಥಾನದಲ್ಲಿ ಕುಳಿತ ಖಾದರ್ ನಿಮ್ಮನ್ನು ಕ್ಷಮಿಸಬಹುದು. ಆದರೆ ಸ್ಪೀಕರ್ ಪೀಠಕ್ಕೆ ಅಗೌರವ ತೋರಿದವರನ್ನು ಕ್ಷಮಿಸಲಾಗದು. ಪೀಠಕ್ಕೆ ಅಗೌರವ ತೋರಿದ್ದೀರಿ. ನಿಮ್ಮನ್ನು ಅಮಾನತುಗೊಳಿಸಿ ಆದೇಶಿಸಲಾಗಿದೆ” ಎಂದು ಸ್ಪೀಕರ್ ಯುಟಿ ಖಾದರ್ ಅವರು ಒಬ್ಬೊಬ್ಬರ ಹೆಸರು ಹೇಳುತ್ತಿದ್ದಂತೆಯೇ ಮಾರ್ಷಲ್ಸ್ ಅವರು ಅವರನ್ನು ಎತ್ತಿಕೊಂಡು ಹೊರಹಾಕಿದರು.
ಶುಕ್ರವಾರ ಬೆಳಿಗ್ಗೆ ಕಲಾಪ ಆರಂಭವಾಗುತ್ತಿದ್ದಂತೆಯೇ ಹನಿಟ್ರ್ಯಾಪ್ ಆರೋಪ ಮತ್ತೆ ಸದನದಲ್ಲಿ ಪ್ರತಿಧ್ವನಿಸಿತು. ಪ್ರತಿಪಕ್ಷದವರು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು. ಕಲಾಪ ನಡೆಸಲು ಅವಕಾಶ ಕೊಡಿ ಎಂದು ಖಾದರ್ ಅವರು ಮನವಿ ಮಾಡಿಕೊಂಡರೂ ಪಟ್ಟು ಬಿಡಲಿಲ್ಲ. ಗದ್ದಲ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಕಲಾಪ ಮುಂದೂಡಲಾಗಿತ್ತು. ಮತ್ತೆ ಸಂಜೆ 4.10ಕ್ಕೆ ಕಲಾಪ ಆರಂಭವಾಯಿತು.
ಸಭಾಧ್ಯಕ್ಷರ ಪೀಠದ ಗೌರವಕ್ಕೆ 18 ಶಾಸಕರನ್ನು ಆರು ತಿಂಗಳ ಅವಧಿಗೆ ಸದನದಿಂದ ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಅವರು ಪ್ರಸ್ತಾವ ಮಂಡಿಸಿದರು. ಅದನ್ನು ಸ್ಪೀಕರ್ ಧ್ವನಿಮತಕ್ಕೆ ಹಾಕಿದರು. ಗದ್ದಲದ ಮಧ್ಯೆಯೇ ಧ್ವನಿಮತದ ಮೂಲಕ ನಿರ್ಣಯ ಅಂಗೀರಿಸಲಾಯಿತು.
ಅಮಾನತುಗೊಂಡ ಸದಸ್ಯರು
- ಡಾ. ಸಿ.ಎನ್. ಅಶ್ವಥನಾರಾಯಣ
- ಎಸ್.ಆರ್. ವಿಶ್ವನಾಥ್
- ದೊಡ್ಡನಗೌಡ ಪಾಟೀಲ
- ಶರಣು ಸರಲಗರ
- ಡಾ. ಚಂದ್ರು ಲಮಾಣಿ
- ಮುನಿರತ್ನ
- ಧೀರಜ್ ಮುನಿರಾಜು
- ಬಿ.ಎ. ಬಸವರಾಜ್
- ಎಂ. ಆರ್. ಪಾಟೀಲ್
- ಚನ್ನಬಸಪ್ಪ
- ಬಿ. ಸುರೇಶಗೌಡ
- ಉಮಾನಾಥ ಎ. ಕೋಟ್ಯಾನ್
- ಸಿ.ಕೆ. ರಾಮಮೂರ್ತಿ
- ಬಿ.ಬಿ ಹರೀಶ್
- ಡಾ. ವೈ. ಭರತ್ ಶೆಟ್ಟಿ
- ಬಸವರಾಜ ಮತ್ತಿಮೂಡ್
- ಡಾ. ಶೈಲೇಂದ್ರ ಬೆಲ್ದಾಳೆ
- ಯಶಪಾಲ್ ಎ. ಸುವರ್ಣ