ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸಂಪುಟದಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಪಕ್ಷವು ಎರಡು ಖಾತೆಗಳನ್ನು ಪಡೆಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪಕ್ಷದ ಇಬ್ಬರು ಹಿರಿಯ ನಾಯಕರಾದ ಲಾಲನ್ ಸಿಂಗ್ ಮತ್ತು ರಾಮ್ ನಾಥ್ ಠಾಕೂರ್ ಅವರನ್ನು ಜೆಡಿಯುನಿಂದ ಸಂಪುಟಕ್ಕೆ ಸೇರಿಸಬೇಕೆಂದು ಪಕ್ಷವು ಪ್ರಸ್ತಾಪಿಸಿದೆ.
ಲಾಲನ್ ಸಿಂಗ್ ಬಿಹಾರದ ಮುಂಗೇರ್ ಕ್ಷೇತ್ರದಿಂದ ಲೋಕಸಭೆಗೆ ಚುನಾಯಿತರಾಗಿದ್ದರೆ, ರಾಮ್ ನಾಥ್ ಠಾಕೂರ್ ರಾಜ್ಯಸಭಾ ಸದಸ್ಯರಾಗಿದ್ದಾರೆ. ಠಾಕೂರ್ ಅವರು ಭಾರತ ರತ್ನ ಪುರಸ್ಕೃತ ಕರ್ಪೂರಿ ಠಾಕೂರ್ ಅವರ ಮಗ.
ಭಾನುವಾರ ಮೋದಿ ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಕ್ಯಾಬಿನೆಟ್ ಸ್ಥಾನಗಳನ್ನು ನಿರ್ಧರಿಸಲು ಎನ್‌ಡಿಎ ಸಭೆ ನಡೆಯಲಿದೆ. ಸಭೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನಗಳು ಮತ್ತು ಯಾರು ಮಂತ್ರಿಯಾಗಲಿದ್ದಾರೆ ಎಂಬುದು ಖಚಿತವಾಗಲಿದೆ.
ಮೂಲಗಳ ಪ್ರಕಾರ, ಲೋಕಸಭಾ ಚುನಾವಣೆಯಲ್ಲಿ 12 ಸ್ಥಾನಗಳನ್ನು ಗೆದ್ದ ನಂತರ ನಿತೀಶ್ ಕುಮಾರ್ ಅವರ ಜೆಡಿಯು ಎರಡು ಕ್ಯಾಬಿನೆಟ್ ಸ್ಥಾನಗಳಿಗೆ ಬೇಡಿಕೆ ಇಟ್ಟಿದೆ. ಮತ್ತೊಂದು ಪ್ರಮುಖ ಮಿತ್ರ ಪಕ್ಷವಾದ ಚಂದ್ರಬಾಬು ನಾಯ್ಡು ಅವರ ಟಿಡಿಪಿ ನಾಲ್ಕು ಸಚಿವ ಸ್ಥಾನಗಳು ಮತ್ತು ಲೋಕಸಭಾ ಸ್ಪೀಕರ್ ಹುದ್ದೆಗೆ ಬೇಡಿಕೆ ಇಟ್ಟಿದೆ.
ಬಿಜೆಪಿಯು ಕೇವಲ 240 ಸ್ಥಾನಗಳನ್ನು ಗಳಿಸಿದ್ದು, ಸರ್ಕಾರ ರಚಿಸಲು ಬೇಕಾದ 272 ಸ್ಥಾನಗಳಿಗಿಂತ ಕಡಿಮೆಯಾಗಿದೆ. ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದ ನಂತರ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಎನ್‌ಡಿಎಯಲ್ಲಿ ಕಿಂಗ್‌ಮೇಕರ್‌ಗಳಾಗಿದ್ದಾರೆ. ಎನ್‌ಡಿಎ 294 ಸ್ಥಾನಗಳನ್ನು ಹೊಂದಿದ್ದು, ಮೋದಿ 3ನೇ ಅವಧಿಯ ಪ್ರಧಾನಿಯಾಗಿ ಭಾನುವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.