ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಶಕ್ತಿ ಯೊಜನೆ’ ಜಾರಿಯಾಗಿ ಎರಡು ವರ್ಷಗಳನ್ನು ಪೂರೈಸಿದೆ. ರಾಜ್ಯದ ಗಡಿಯೊಳಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಒದಗಿಸುವ ಈ ಯೋಜನೆಯಡಿ ಈವರೆಗೆ 474.82 ಕೋಟಿ ಮಹಿಳೆಯರು ಪ್ರಯಾಣಿಸಿದ್ದಾರೆ ಎಂದು ವರದಿಯಾಗಿದೆ.
ಯೋಜನೆಯು ಮಹಿಳಾ ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಮಾತ್ರವಲ್ಲದೆ, ಪುರುಷ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳಕ್ಕೂ ಸಹಾಯ ಮಾಡಿದೆ. ಯೋಜನೆಯಡಿ ಮಹಿಳೆಯರಿಗೆ ಕಳೆದ 2 ವರ್ಷಗಳಲ್ಲಿ 11,994 ಕೋಟಿ ರೂ. ಮೌಲ್ಯದ ಟಿಕೆಟ್‌ಗಳನ್ನು ವಿವರಿಸಲಾಗಿದೆ ಎಂದು ತಿಳಿದುಬಂದಿದೆ.
ಯೋಜನೆ ಜಾರಿಯಾದ 2023ರ ಜೂನ್ 11ರಿಂದ 2025 ಜೂನ್ 10ರವರೆಗೆ ರಾಜ್ಯದ ನಾಲ್ಕು ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಒಟ್ಟು 4,74,82,49,843 ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ದಿನಕ್ಕೆ ಸರಾಸರಿ 65 ಲಕ್ಷ ಮಹಿಳೆಯರು ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಇದೇ ಅವಧಿಯಲ್ಲಿ ಒಟ್ಟು 11994,37,89,779 ರೂ. ಮೌಲ್ಯದ ಟಿಕೆಟ್‌ಗಳನ್ನು ಮಹಿಳೆಯರ ಪ್ರಯಾಣಕ್ಕಾಗಿ ವಿತರಿಸಲಾಗಿದೆ. ಇದು ದಿನಕ್ಕೆ 16.5 ಕೋಟಿ ರೂಪಾಯಿ ಮೌಲ್ಯದ ಉಚಿತ ಪ್ರಯಾಣ ಒದಗಿಸಿದೆ
ಯೋಜನೆಯು ನಾನಾ ರಾಜ್ಯಗಳಿಗೆ ಮಾದರಿಯಾಗಿದ್ದು, ಹಲವು ರಾಜ್ಯಗಳು ಶಕ್ತಿ ಯೋಜನೆ ರೀತಿಯನ್ನು ಯೋಜನೆಗಳನ್ನು ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಸಿವೆ. ಆಂಧ್ರಪ್ರದೇಶದ ಸಾರಿಗೆ ನಿಗಮದ ಅಧಿಕಾರಿಗಳು ಕರ್ನಾಟಕಕ್ಕೆ ಭೇಟಿ ನೀಡಿದ್ದು, ಯೋಜನೆಯ ಕುರಿತಾಗಿ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ.