- ‘ಶಾಸಕರಾದ ಕೃಷ್ಣಪ್ಪ, ರಾಯರೆಡ್ಡಿ ಅವರಿಂದ ಪತ್ರ’
- ‘ಜನಸಾಮಾನ್ಯರು ಎಷ್ಟು ಬೇಸರಗೊಂಡಿರಬಹುದು?’
ಸರ್ಕಾರ ಬಂದು ಎರಡು ತಿಂಗಳಾಗುವಷ್ಟರಲ್ಲೇ ಶಾಸಕರು, ಸಚಿವರ ವಿರುದ್ಧ ದೂರು ಕೊಟ್ಟಿದ್ದಾರೆ. ನಮ್ಮ ಪರಿಸ್ಥಿತಿ ಹೀಗಾದರೆ ಜನರ ಸ್ಥಿತಿ ಹೇಗೆ? ಹಿರಿಯ ಶಾಸಕರಾದ ಕೃಷ್ಣಪ್ಪ, ರಾಯರೆಡ್ಡಿ ಅಂತಹವರೇ ಪತ್ರ ಬರೆದಿದ್ದಾರೆ ಎಂದು ಬಿಜೆಪಿ ಎಂಎಲ್ಸಿ ಎನ್. ರವಿಕುಮಾರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಸಚಿವರ ಭೇಟಿಗೆ ಸಾಧ್ಯವಾಗುತ್ತಿಲ್ಲ ಎಂದು 20ಕ್ಕೂ ಹೆಚ್ಚು ಶಾಸಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ. ಇದರ ಅರ್ಥ ಸಚಿವರು ಶಾಸಕರಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಶಾಸಕರೇ ಬೇಸರ ಮಾಡಿಕೊಂಡರೆ, ಜನಸಾಮಾನ್ಯರು ಎಷ್ಟು ಬೇಸರಗೊಂಡಿರಬಹುದು” ಎಂದು ಪ್ರಶ್ನಿಸಿದರು.
“ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯೊಳಗೆ ಮುಳುಗಿ ಹೋಗಿದೆ. ನಿಮ್ಮ ಗ್ಯಾರಂಟಿ ಯೋಜನೆ ಹೊರತುಪಡಿಸಿ ರೈತ ಸಮಸ್ಯೆ, ಅಂಗನವಾಡಿ ಕಾರ್ಯಕರ್ತರ ಸಮಸ್ಯೆ ಬಗೆಹರಿಸುವುದು ಯಾವಾಗ? ಎಂದು ಹರಿಹಾಯ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಯಿಸ್ಟ್ ಬೊಮ್ಮಾಯಿ, ಬೊಂಬೆ ಬೊಮ್ಮಾಯಿ ಮತ್ತು ಬಿಜೆಪಿ
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸಿಂಗಾಪುರದಲ್ಲಿದ್ದುಕೊಂಡು ಸರ್ಕಾರದ ವಿರುದ್ಧ ತಂತ್ರ ಹೆಣೆಯುತ್ತಿದ್ದಾರೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, “ಬಿಜೆಪಿ ಇದರ ಯಾವುದೇ ಗೋಜಿಗೆ ಹೋಗುತ್ತಿಲ್ಲ. ರಾಜ್ಯದಲ್ಲಿ ಮಳೆ ಇದೆ, ಅನೇಕ ಸಮಸ್ಯೆ ಇದೆ. ಇದರ ಬಗ್ಗೆ ನಮ್ಮ ಗಮನ ಹರಿಸಲಿದೆ” ಎಂದರು.
ತನಿಖೆ ಆಗಲಿ
“ಉಡುಪಿಯಲ್ಲಿ ವಿದ್ಯಾರ್ಥಿನಿಯರ ಶೌಚಾಲಯದೊಳಗೆ ಮೊಬೈಲ್ ಇರಿಸಿದ್ದ ಪ್ರಕರಣದಲ್ಲಿ ಕೂಲಂಕಷ ತನಿಖೆ ಆಗಬೇಕು. ವೈದ್ಯಕೀಯ ಶಿಕ್ಷಣ ಸಚಿವರು ಈ ಬಗ್ಗೆ ತನಿಖೆ ಮಾಡಿಸಲಿ. ಯಾರು ವಿಡಿಯೋ ಮಾಡಿದರು, ಅದನ್ನು ಯಾತಕ್ಕೆ ಬಳಸಿಕೊಳ್ಳಬಹುದು ಗೊತ್ತಿಲ್ಲ. ಆದರೆ ವೀಡಿಯೋ ಮಾಡಿದ ಆರೋಪಿಗಳ ವಿರುದ್ಧ ಕ್ರಮ ಆಗಬೇಕು” ಎಂದು ಆಗ್ರಹಿಸಿದರು.