2002ರ ಗುಜರಾತ್ ಕೋಮುಗಲಭೆಗೆ ಸಂಬಂಧಿಸಿದ ‘ಬೆಸ್ಟ್ ಬೇಕರಿ ಪ್ರಕರಣ’ದಲ್ಲಿ ಬಂಧಿತರಾಗಿದ್ದ ಹರ್ಷದ್ ಸೋಲಂಕಿ ಮತ್ತು ಮಫತ್ ಗೋಹಿಲ್ ಎಂಬಿಬ್ಬರನ್ನು ಮುಂಬೈನ ವಿಶೇಷ ನ್ಯಾಯಾಲಯ ಮಂಗಳವಾರ ಖುಲಾಸೆಗೊಳಿಸಿದೆ.
ವಿಶೇಷ ಕೇಂದ್ರ ತನಿಖಾ ದಳದ (ಸಿಬಿಐ) ನ್ಯಾಯಾಧೀಶ ಎಂ.ಜಿ ದೇಶಪಾಂಡೆ ಅವರು ಇಬ್ಬರು ಆರೋಪಿಗಳು ತಪ್ಪಿತಸ್ಥರಲ್ಲ ಎಂದು ಘೋಷಿಸಿದ್ದಾರೆ. ಅವರಿಬ್ಬರನ್ನು ತಕ್ಷಣ ಬಿಡುಗಡೆ ಮಾಡುವಂತೆ ಆದೇಶಿಸಿದ್ದಾರೆ.
2002ರ ಗುಜರಾತ್ ಗಲಭೆಯ ಸಂದರ್ಭದಲ್ಲಿ ವಡೋದರಾದಲ್ಲಿ ಬೇಕರಿಯೊಂದನ್ನು ಗುಂಪೊಂದು ಸುಟ್ಟುಹಾಕಿತ್ತು. ಬೇಕರಿ ಮತ್ತು ಅದರ ಬಳಿಯಿದ್ದ 14 ಮಂದಿ ಸಾವವನ್ನಪ್ಪಿದ್ದರು. ಘಟನೆ ಸಂಬಂಧ 21 ಮಂದಿ ವಿರುದ್ಧ ಬೇಕರಿ ಮಾಲೀಕನ ಪುತ್ರಿ ಜಹೀರಾ ಶೇಖ್ ದೂರು ದಾಖಲಿಸಿದ್ದಾರೆ.
ಸ್ಥಳೀಯ ಪೊಲೀಸರು ಎಲ್ಲ ಆರೋಪಿಗಳನ್ನು ಬಂಧಿಸಿದದ್ದರು. ಪ್ರಕರಣವನ್ನು ವಡೋದರದ ತ್ವರಿತ ನ್ಯಾಯಾಲಯವು ವಿಚಾರಣೆ ನಡೆಸಿತ್ತು. ಜೂನ್ 2003ರಲ್ಲಿ, ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಪ್ರಕರಣದ 19 ಆರೋಪಿಗಳನ್ನು ಖುಲಾಸೆಗೊಳಿಸಲಾಗಿತ್ತು. ಇಬ್ಬರು ಆರೋಪಿಗಳಾದ ಸೋಲಂಕಿ ಮತ್ತು ಗೋಹಿಲ್ ಅವರನ್ನು ಬಿಡುಗಡೆ ಮಾಡಲಾಗಿತ್ತು.
ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮಾನವ ಹಕ್ಕುಗಳ ಹೋರಾಟಗಾರ್ತಿ ತೀಸ್ತಾ ಸೆಟಲ್ವಾಡ್ ಮತ್ತು ಜಹೀರಾ ಶೇಖ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. 2004ರಲ್ಲಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಪ್ರಕರಣವದ ಮರು ವಿಚಾರನೆಗೆ ನಿರ್ದೇಶನ ನೀಡಿತ್ತು. ಅಲ್ಲದೆ, ನ್ಯಾಯವನ್ನು ಖಾತ್ರಿಪಡಿಸುವ ಉದ್ದೇಶದಿಂದ ಪ್ರಕರಣದ ವಿಚಾರಣೆಯನ್ನು ಮುಂಬೈಗೆ ವರ್ಗಾಯಿಸಿತ್ತು.
ಇತರ ಆರೋಪಿಗಳ ವಿಚಾರಣೆ ನಡೆಯುತ್ತಿರುವಾಗಲೇ, ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಸೋಲಂಕಿ ಮತ್ತು ಗೋಹಿಲ್ ಅವರನ್ನು ಬಂಧಿಸಲಾಗಿತ್ತು. ಆ ಇಬ್ಬರನ್ನೂ ಬೆಸ್ಟ್ ಬೇಕರಿ ಪ್ರಕರಣದ ಅಡಿಯಲ್ಲಿ 2013ರ ಡಿಸೆಂಬರ್ 13ರಂದು ಮುಂಬೈ ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದರು. ಕಳೆದ 10 ವರ್ಷಗಳಿಂದ ಇಬ್ಬರೂ ಮುಂಬೈ ಜೈಲಿನಲ್ಲಿದ್ದರು.
ಈ ಸುದ್ದಿ ಓದಿದ್ದೀರಾ?: ನನ್ನಂತಹ ಬಿಜೆಪಿ ಮುಖಂಡನಿಗೇ ರಕ್ಷಣೆ ಇಲ್ಲ, ಮತ್ತಾರು ಸುರಕ್ಷಿತರು: ಬಿಜೆಪಿಯ ಮುಸ್ಲಿಂ ನಾಯಕ
ಈ ಮೊದಲು ಖುಲಾಸೆಗೊಂಡಿದ್ದ 19 ಆರೋಪಿಗಳ ವಿರುದ್ಧ ಮುಂಬೈನಲ್ಲಿ ನಡೆದ ವಿಚಾರಣೆಯಲ್ಲಿ 9 ಆರೋಪಿಗಳಿಗೆ ಶಿಕ್ಷೆಯಾಗಿದೆ. ಆದರೆ, ಸೋಲಂಕಿ ಮತ್ತು ಗೋಹಿಲ್ ಅವರ ಅಪರಾಧವನ್ನು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಕೇವಲ 10 ಸಾಕ್ಷಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಿದ್ದರು. ಅದರಲ್ಲೂ, ಪ್ರಕರಣದ ತನಿಖೆ ನಡೆಸುತ್ತಿದ್ದ ಕೆಲ ಅಧಿಕಾರಿಗಳೂ ಸಾವನ್ನಪ್ಪಿದ್ದರು.
ಸಾಕ್ಷಿ ನುಡಿದ 10 ಮಂದಿಯಲ್ಲಿ ಹೆಚ್ಚಿನ ಪ್ರತ್ಯಕ್ಷದರ್ಶಿಗಳು ಸೋಲಂಕಿಯನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಒಬ್ಬರು ಮಾತ್ರ ಗೋಹಿಲ್ ಅನ್ನು ಗುರುತಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಈ ಇಬ್ಬರನ್ನೂ ಅಪರಾಧಿಗಳು ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ. ಪರಿಣಾಮ, ಸಾಕ್ಷಾಧಾರಗಳ ಕೊರತೆಯಿಂದ ಈ ಇಬ್ಬರನ್ನೂ ಪ್ರಕರಣದಿಂದ ಖುಲಾಸೆಗೊಳಿಸಿ ಕೋರ್ಟ್ ತೀರ್ಪು ನೀಡಿದೆ.