- ಅ.2ರಂದು ಸಿಎಂ ಸಿದ್ದರಾಮಯ್ಯ ಅವರಿಂದ ಪ್ರಶಸ್ತಿ ಪ್ರದಾನ
- 4 ಗ್ರಾಮ ಪಂಚಾಯಿತಿಗಳಿಗೆ ವಿಶೇಷ ‘ಗಾಂಧಿ ಗ್ರಾಮ ಪುರಸ್ಕಾರ’
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರತಿ ವರ್ಷ ಗಾಂಧಿ ಜಯಂತಿಯಂದು ಗ್ರಾಮ ಪಂಚಾಯತಿಗಳಿಗೆ ನೀಡುತ್ತಿರುವ ʼಗಾಂಧಿ ಗ್ರಾಮ ಪುರಸ್ಕಾರʼಗಳನ್ನು ಈ ಬಾರಿ 233 ಗ್ರಾಮ ಪಂಚಾಯಿತಿಗಳಿಗೆ ಪ್ರಕಟಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 2ರಂದು ವಿಧಾನಸೌಧದ ಬ್ಯಾಂಕ್ವೆಟ್‌ಹಾಲ್ ಸಭಾಂಗಣದಲ್ಲಿ ವಿತರಣೆ ಮಾಡಲಿದ್ದು, ಜೊತೆಗೆ 4 ಗ್ರಾಮ ಪಂಚಾಯಿತಿಗಳಿಗೆ ವಿಶೇಷ ‘ಗಾಂಧಿ ಗ್ರಾಮ ಪುರಸ್ಕಾರ’ ಪ್ರದಾನ ಮಾಡುವರು ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
“ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲು ಕೆಲವಾರು ಮಾನದಂಡಗಳನ್ನು ಅನುಸರಿಸಲಾಗಿದೆ. ಜನರ ಗುಣಮಟ್ಟ ಸುಧಾರಣೆ; ಸಂಪನ್ಮೂಲ ಕ್ರೋಡೀಕರಣ; ಕುಡಿಯುವ ನೀರು, ಶೌಚಾಲಯ, ನೈರ್ಮಲ್ಯ, ರಸ್ತೆ, ಬೀದಿ ದೀಪಗಳ ನಿರ್ವಹಣೆ; ಮಹಿಳಾ ಸ್ವ ಸಹಾಯ ಸಂಘಗಳ ಮೂಲಕ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟ ಹಾಗೂ ಮನೆ ಮನೆಗಳಿಂದ ಘನ ತ್ಯಾಜ್ಯ ಸಂಗ್ರಹಿಸಲು ಉಪಯೋಗಿಸುವ ವಾಹನಕ್ಕೆ ಮಹಿಳಾ ಚಾಲಕರನ್ನು ನೇಮಕ ಮಾಡುವಲ್ಲಿ ಕೈಗೊಂಡಿರುವ ಕ್ರಮಗಳನ್ನು ಆಧರಿಸಿ ಪುರಸ್ಕಾರಕ್ಕೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ” ಎಂದು ಹೇಳಿದ್ದಾರೆ.
“ಗ್ರಾಮ ಪಂಚಾಯಿತಿಗಳು ತಮ್ಮ ವ್ಯಾಪ್ತಿಯ ಜನರಿಗೆ ಒದಗಿಸಿರುವ ಮೂಲ ಸೌಕರ್ಯಗಳು ಹಾಗೂ ಸೇವೆಗಳ ಜೊತೆಗೆ ಉತ್ತಮ ಆಡಳಿತ ನೀಡುವುದನ್ನು ಸಹ ಆಯ್ಕೆಗೆ ಪರಿಗಣಿಸಲಾಗಿದ್ದು, ಬಾಪೂಜಿ ಸೇವಾ ಕೇಂದ್ರಗಳ ಮೂಲಕ ನೀಡಲಾಗುತ್ತಿರುವ ಸೇವೆಗಳ ಬಳಕೆ ಮಾಡಿಕೊಳ್ಳಲು ನೀಡುತ್ತಿರವ ಮಾರ್ಗದರ್ಶನ, ಗ್ರಾಮ ಪಂಚಾಯತಿ ಅರಿವು ಕೇಂದ್ರಗಳ ಡಿಜಿಟಲೀಕರಣ, ‘ಓದುವ ಬೆಳಕು’ ಕಾರ್ಯಕ್ರಮದ ಮೂಲಕ ಮಕ್ಕಳನ್ನು ಅರಿವು ಕೇಂದ್ರಗಳತ್ತ ಆಕರ್ಷಿಸಲು ಕೈಗೊಂಡಿರುವ ಕ್ರಮಗಳು ಸಹ ಗ್ರಾಮ ಪಂಚಾಯತಿಗಳನ್ನು ಪುರಸ್ಕಾರಕ್ಕೆ ಪರಿಗಣಿಸುವಲ್ಲಿ ಮಾರ್ಗಸೂಚಿಗಳಾಗಿವೆ” ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ? ‘ಈ ದಿನ’ ಸಂಪಾದಕೀಯ | ಬಗರ್ ಹುಕುಂ ಸಮಸ್ಯೆ ಬಗೆಹರಿಸಿದರಷ್ಟೇ ಅರಣ್ಯ ಒತ್ತುವರಿ ತೆರವು ಸಲೀಸು
ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲು ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಂದ ಅರ್ಜಿಗಳನ್ನು ಆಹ್ವಾನಿಸಿ, ತಂತ್ರಾಂಶದ ಮೂಲಕ ಉತ್ತರಿಸಿದ ವಿವರಗಳಿಗನುಗುಣವಾಗಿ ಪ್ರತಿ ತಾಲ್ಲೂಕಿನಲ್ಲಿ ಹೆಚ್ಚು ಅಂಕ ಗಳಿಸಿರುವ ಐದು ಗ್ರಾಮ ಪಂಚಾಯತಿಗಳನ್ನು ಆರಿಸಿ, ಸ್ಥಳ ಪರಿಶೀಲನೆ ಹಾಗೂ ದಾಖಲಾತಿ ಪರಿಶೀಲನೆ ಮಾಡಿ, ಆಯಾ ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳ ಅಧ್ಯಕ್ಷತೆಯಲ್ಲಿನ ಜಿಲ್ಲಾ ಮಟ್ಟದ ಆಯ್ಕೆ ಸಮಿತಿಯ ಮೂಲಕ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಯಿತು” ಎಂದು ವಿವರಿಸಿದ್ದಾರೆ.
5 ಲಕ್ಷ ಪ್ರೋತ್ಸಾಹ ಧನ
ʼಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಆಯ್ಕೆ ಮಾಡಲಾಗಿದೆ ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ ಪ್ರಶಸ್ತಿ ಪ್ರಮಾಣ ಪತ್ರ, ಸ್ಮರಣಿಕೆ ಹಾಗೂ 5 ರೂ. ಲಕ್ಷ ಪ್ರೋತ್ಸಾಹ ಧನವನ್ನು ನೀಡಿ ಗೌರವಿಸಲಾಗುತ್ತಿದೆ. 2020-2021 ಮತ್ತು 2021-22ನೆ ಸಾಲುಗಳಲ್ಲಿ ಸತತವಾಗಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಗ್ರಾಮ ಪಂಚಾಯಿತಿಗಳು 2022-23 ನೇ ಸಾಲಿನ ಪರಿಶೀಲನೆಯಲ್ಲಿ ಪುನಃ ಮೊದಲನೆಯ ಸ್ಥಾನ ಪಡೆದ ಗ್ರಾಮ ಪಂಚಾಯಿತಿಗಳನ್ನು ವಿಶೇಷ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಗ್ರಾಮ ಪಂಚಾಯಿತಿಗಳಲ್ಲಿ ಆರೋಗ್ಯಕರ ಸ್ಪರ್ಧೆಯನ್ನು ಏರ್ಪಡಿಸುವ ಉದ್ದೇಶದಿಂದ 2019ರಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಪ್ರತಿ ವರ್ಷ 19ನೇ ನವೆಂಬರ್ ರಿಂದ 2ನೇ ಅಕ್ಟೋಬರ್ ವರೆಗೆ ಹಮ್ಮಿಕೊಳ್ಳಲಾಗಿದೆ” ಎಂದೂ ಸಚಿವರು ಹೇಳಿದ್ದಾರೆ.