- ಕೋಮು ಗಲಭೆಯಲ್ಲಿ ಮೃತಪಟ್ಟಿದ್ದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರು ಯುವಕರು
- ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಪರಿಹಾರದ ಹಣ ಘೋಷಿಸಿದ ರಾಜ್ಯ ಸರ್ಕಾರ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ ನಾಲ್ಕು ಮಂದಿ ಯುವಕರ ಕುಟುಂಬಕ್ಕೆ ರಾಜ್ಯ ಸರ್ಕಾರ ಪರಿಹಾರ ಘೋಷಣೆ ಮಾಡಿದೆ.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿರುವ ರಾಜ್ಯ ಸರಕಾರ ಈ ಸಂಬಂಧ ಶುಕ್ರವಾರ ಆದೇಶ ಹೊರಡಿಸಿದೆ.
2018ರ ಜನವರಿ 3ರಂದು ಕಾಟಿಪಾಳ್ಳದ ದೀಪಕ್ ರಾವ್, 2022ರ ಜುಲೈ 19ರಂದು ಬೆಳ್ಳಾರೆಯ ಮಸೂದ್, 28ರಂದು ಮಂಗಳಪೇಟೆಯ ಮುಹಮ್ಮದ್ ಫಾಝಿಲ್, ಡಿಸೆಂಬರ್ 24ರಂದು ಕಾಟಿಪಾಳ್ಳದ ಅಬ್ದುಲ್ ಜಲೀಲ್ ಅವರನ್ನು ದುಷ್ಕರ್ಮಿಗಳು ಕೊಲೆಗೈದಿದ್ದರು. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ವಿಚಾರ ರಾಜ್ಯದ ಕರಾವಳಿ ಭಾಗದಲ್ಲಿ ದ್ವೇಷದ ಕೊಲೆ ಪ್ರಕರಣಗಳೆಂದೇ ಗುರುತಿಸಿಕೊಂಡಿತ್ತು. ಹಾಗೆಯೇ ಈ ಭಾಗದಲ್ಲಿ ಕೆಲಕಾಲ ಅಶಾಂತಿ ನೆಲೆಸಲು ಕಾರಣವಾಗಿತ್ತು. ಇದೇ ವಿಚಾರದ ಹಿನ್ನೆಲೆಯಲ್ಲಿ ಅಂದಿನ ಆಡಳಿತ ಪಕ್ಷ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಸೈದ್ದಾಂತಿಕ ಸಮರಕ್ಕೆ ಕಾರಣವಾಗಿತ್ತು.
ಈ ಸುದ್ದಿ ಓದಿದ್ದೀರಾ?:ಅಕ್ಕಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ಅಡುಗೆ ಮಾಡಿ ಪ್ರತಿಭಟಿಸಿದ ಕಾಂಗ್ರೆಸ್
ಈ ಬೆಳವಣಿಗೆಗಳ ನಡುವೆಯೇ ರಾಜ್ಯ ಪೊಲೀಸ್ ಇಲಾಖೆಯ ಮಹಾನಿರ್ದೇಶಕರು ಸರಕಾರದ ವತಿಯಿಂದ ಪರಿಹಾರ ಧನ ಮಂಜೂರು ಮಾಡುವಂತೆ ಒಳಾಡಳಿತ ಇಲಾಖೆಯನ್ನು ಕೋರಿಕೊಂಡಿದ್ದರು. ಇದನ್ನು ಮಾನ್ಯ ಮಾಡಿದ್ದ ಸರ್ಕಾರ ಪರಿಹಾರ ಘೋಷಿಸಿದ್ದು, ಜೂ.19ರಂದು ಪರಿಹಾರದ ಧನದ ಚೆಕ್ ಪಡೆಯುವಂತೆ ಸೂಚಿಸಿದೆ.