- ಕಾವಾಡಿಗರ ಹಟ್ಟಿಯ ಸಂತ್ರಸ್ತ ಕುಟುಂಬಗಳನ್ನು ಭೇಟಿಯಾದ ಸಿಎಂ
- ಸಂತ್ರಸ್ಥ ಕುಟುಂಬಗಳ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಲಿದೆ: ಸಿಎಂ
ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಚಿತ್ರದುರ್ಗದ ಕಾವಾಡಿಗರ ಹಟ್ಟಿಯ ಅಭಿವೃದ್ದಿಗೆ 3 ಎಕರೆ ಜಾಗ ಮತ್ತು 4 ಕೋಟಿ ರೂ. ಅನುದಾನ ನೀಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಕಲುಷಿತ ನೀರು ಕುಡಿದು ಆರು ಮಂದಿ ಮೃತಪಟ್ಟಿದ್ದ ಕಾವಾಡಿಗರ ಹಟ್ಟಿಯಲ್ಲಿ ಸಂತ್ರಸ್ತ ಕುಟುಂಬಗಳ ಬಂಧುಗಳನ್ನು ಶುಕ್ರವಾರ ಮಾತಾಡಿಸಿದ ಬಳಿಕ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿ ಈ ಭರವಸೆ ನೀಡಿದರು.
“ಸಂತ್ರಸ್ತ ಕುಟುಂಬಗಳ ಜವಾಬ್ದಾರಿ ಸರ್ಕಾರ ವಹಿಸಿಕೊಳ್ಳಲಿದೆ. ಈ ಕುಟುಂಬಗಳ ಸದಸ್ಯರಿಗೆ ಉದ್ಯೋಗವನ್ನೂ ಕೊಡುತ್ತೇವೆ. ಮನೆಯನ್ನೂ ಕಟ್ಟಿಸಿಕೊಡುತ್ತೇವೆ. ಶುದ್ದ ಕುಡಿಯುವ ನೀರು ಕೊಡುವುದು ನಮ್ಮ ಕರ್ತವ್ಯ. ಘಟನೆ ಘಟಿಸಿದ ತಕ್ಷಣ ಸ್ಥಳೀಯ ಶಾಸಕರು, ಜಿಲ್ಲಾ ಮಂತ್ರಿಗಳು ಮತ್ತು ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದೆ. ತಕ್ಷಣಕ್ಕೆ 10 ಲಕ್ಷ ಪರಿಹಾರ ನೀಡಿದ್ದೇವೆ” ಎಂದು ವಿವರಿಸಿದರು.
“ಮೊದಲೇ ಶುದ್ದ ನೀರಿನ ವ್ಯವಸ್ಥೆ ಇದ್ದಿದ್ದರೆ ಈ ಅನಾಹುತ ನಡೆಯುತ್ತಿರಲಿಲ್ಲ. ಘಟನೆ ಬಳಿಕ ಶುದ್ದ ಕುಡಿಯುವ ನೀರಿಗೆ ತೊಂದರೆ ಆಗದಂತೆ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುಂದೆ ಇಂತಹ ಅನಾಹುತ ನಡೆದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಖಚಿತ” ಎಂದು ಎಚ್ಚರಿಸಿದರು.
ಈ ಸುದ್ದಿ ಓದಿದ್ದೀರಾ? 4,860 ಕೋಟಿ ರೂ. ಬೆಳೆ ಪರಿಹಾರಕ್ಕಾಗಿ ಕೇಂದ್ರಕ್ಕೆ ಒತ್ತಾಯ: ಸಿಎಂ ಸಿದ್ದರಾಮಯ್ಯ
“123 ವರ್ಷಗಳಲ್ಲೇ ಅತ್ಯಂತ ಕಡಿಮೆ ಮಳೆ ಆಗಿದೆ. ಬರ ಪೀಡಿತ ಜಿಲ್ಲೆಗಳ ಸಂಖ್ಯೆ ಹೆಚ್ಚುತ್ತಿದೆ. 42 ಲಕ್ಷ ಹೆಕ್ಟೇರ್ ಪ್ರದೇಶದ ಬೆಳೆ ಹಾನಿಯಾಗಿದೆ. 30 ಸಾವಿರ ಕೋಟಿಯಷ್ಟು ನಷ್ಟ ಆಗಿದೆ. ನಾವು NDRF ಅಡಿಯಲ್ಲಿ ಕೇಂದ್ರಕ್ಕೆ ಪರಿಹಾರ ಕೇಳಿದ್ದೇವೆ. ಸದ್ಯ ಕೇಂದ್ರ ಅಧ್ಯಯನ ತಂಡ ರಾಜ್ಯಕ್ಕೆ ಬಂದಿದ್ದು ನಾಳೆ ಚಿತ್ರದುರ್ಗಕ್ಕೂ ಬರಲಿದೆ” ಎಂದು ಹೇಳಿದರು.
“ಇಂದು ಇಡೀ ದೇಶದಲ್ಲಿ ಬರಗಾಲದ ಸ್ಥಿತಿ ಇದೆ. ರಾಜ್ಯದಲ್ಲೂ ಬರ ಇದ್ದು ಕುಡಿಯುವ ನೀರು, ರಾಸುಗಳಿಗೆ ಮೇವು-ನೀರು ತೊಂದರೆ ಆಗದಂತೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಉದ್ಯೋಗ ಸೃಷ್ಟಿ ಮಾಡಬೇಕು. ಕೆಲಸಕ್ಕಾಗಿ ವಲಸೆ ಹೋಗುವ ಸ್ಥಿತಿ ಬರದಂತೆ ನೋಡಿಕೊಳ್ಳಲು ಎಚ್ಚರಿಸಿದ್ದೇನೆ” ಎಂದರು.
ಕೃಷಿ ಸಚಿವ ಚಲುವರಾಯಸ್ವಾಮಿ, ಜಿಲ್ಲಾ ಸವಿವ ಡಿ.ಸುಧಾಕರ್, ಶಾಸಕ ವೀರೇಂದ್ರ ಪಪ್ಪಿ, ಮಾಜಿ ಸಚಿವ ಎಚ್.ಆಂಜನೇಯ ಸೇರಿ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.