32 ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು ತನ್ನ ಸಂಪರ್ಕದಲ್ಲಿದ್ದಾರೆ. ಪಕ್ಷ ಬದಲಾಯಿಸಲು ಸಿದ್ಧರಾಗಿದ್ದಾರೆ ಎಂದು ಪಂಜಾಬ್ ಕಾಂಗ್ರೆಸ್ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಸೋಮವಾರ ಹೇಳಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಆಡಳಿತಾರೂಢ ಎಎಪಿಯ ರಾಜ್ಯ ಘಟಕದ ಅಧ್ಯಕ್ಷ ಅಮನ್ ಅರೋರಾ, “ಬಿಜೆಪಿ ಸೇರಲು ‘ಮುಂಗಡ ಬುಕಿಂಗ್’ ಮಾರಿಕೊಂಡಿರುವುದು ಬಾಜ್ವಾ” ಎಂದು ಹೇಳಿದ್ದಾರೆ.
ಪಂಜಾಬ್ ವಿಧಾನಸಭೆಯ ಹೊರಗೆ ಸುದ್ದಿಗಾರರೊಂದಿಗೆ ಮಾತನಾಡಿದ ಬಾಜ್ವಾ, “ಮುಖ್ಯಮಂತ್ರಿ ಭಗವಂತ್ ಮಾನ್ ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ. ಅರವಿಂದ್ ಕೇಜ್ರಿವಾಲ್ ಅವರನ್ನು ತೆಗೆದುಹಾಕಲು ನಿರ್ಧರಿಸಿದಾಗ, ಮಾನ್ ತಮ್ಮ ಬ್ಯಾಗ್ ಪ್ಯಾಕ್ ಮಾಡಿ ಬಿಜೆಪಿ ಸೇರುತ್ತಾರೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್‌ನಲ್ಲಿ ಕುರುಬೂರು ಶಾಂತಕುಮಾರ್‌ಗೆ ಅಪಘಾತ; ಏರ್ ಆ್ಯಂಬುಲೆನ್ಸ್‌ನಲ್ಲಿ ಬೆಂಗಳೂರಿಗೆ ಕರೆತಂದ ಸರ್ಕಾರ
ಹಾಗೆಯೇ ರಾಜ್ಯ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತಮ್ಮ 45 ವರ್ಷಗಳ ರಾಜಕೀಯ ಅನುಭವದಲ್ಲಿ, ಎಂದಿಗೂ ಯಾವುದೇ ತಪ್ಪು ಹೇಳಿಕೆ ನೀಡಿಲ್ಲ ಎಂದು ಪ್ರತಿಪಾದಿಸಿದರು. “ಎಎಪಿ ಸರ್ಕಾರವನ್ನು ಉರುಳಿಸುವ ಉದ್ದೇಶ ಕಾಂಗ್ರೆಸ್‌ಗೆ ಇಲ್ಲ ಎಂದು ನಾವು ಮೊದಲೇ ಹೇಳಿದ್ದೆವು” ಎಂದು ಹೇಳಿದ್ದರು.
“ನಾನು ಮತ್ತೊಮ್ಮೆ ಹೇಳುತ್ತಿದ್ದೇನೆ. 32 ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ. ಶಾಸಕರು ಮಾತ್ರವಲ್ಲ, ಸಚಿವರು ಸಹ ನನ್ನ ಸಂಪರ್ಕದಲ್ಲಿದ್ದಾರೆ. ಅಮನ್ ಅರೋರಾ ಅವರಿಗೂ ಈ ವಿಷಯ ತಿಳಿದಿದೆ” ಎಂದು ಬಾಜ್ವಾ ಹೇಳಿದ್ದಾರೆ.
“ಎಎಪಿ ಶಾಸಕರು ಇದು ಅವರ ಕೊನೆಯ ಅವಧಿ ಎಂದು ತಿಳಿದಿದ್ದಾರೆ. ಅವರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಇತರೆ ಪಕ್ಷಗಳ ಸಂಪರ್ಕದಲ್ಲಿದ್ದಾರೆ. ನಾನು ಅವರೊಂದಿಗೆ (32 ಶಾಸಕರು) ಸಂಪರ್ಕದಲ್ಲಿದ್ದೇನೆ. ಯಾರನ್ನು ತರಬೇಕು, ಯಾರು ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇದೆ ಮತ್ತು ಯಾರು ಗೆಲ್ಲುವುದಿಲ್ಲ ಎಂದು ನಾವು ನೋಡುತ್ತೇವೆ. ಅದು ಸೂಕ್ತ ಸಮಯದಲ್ಲಿ ಸಂಭವಿಸುತ್ತದೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಪಂಜಾಬ್ | ಎಎಪಿ ನಾಯಕ ಅನೋಕ್ ಮಿತ್ತಲ್ ಮೇಲೆ ದಾಳಿ; ಕಣ್ಣೆದುರೇ ಪತ್ನಿಯ ಕೊಲೆ
ಇನ್ನು ಭಗವಂತ್ ಮಾನ್ ಅವರನ್ನು ತರಾಟೆಗೆ ತೆಗೆದುಕೊಂಡ ಖಾಡಿಯನ್ ಶಾಸಕರು, ಸೋಮವಾರ ಇಲ್ಲಿ ಪ್ರಾರಂಭವಾದ ಪಂಜಾಬ್ ವಿಧಾನಸಭೆಯ ಎರಡು ದಿನಗಳ ಅಧಿವೇಶನದ ಮೊದಲ ದಿನದಂದು ಮುಖ್ಯಮಂತ್ರಿ ಸದನಕ್ಕೆ ಗೈರುಹಾಜರಾಗಿದ್ದರು ಎಂದು ಹೇಳಿದ್ದಾರೆ.
ಸಚಿವ ಅರೋರಾ ಅವರು ಬಾಜ್ವಾ ಹೇಳಿಕೆಗಳನ್ನು ಟೀಕಿಸಿದ್ದು ವಿರೋಧ ಪಕ್ಷದ ನಾಯಕರೇ ಬಿಜೆಪಿಗೆ ಸೇರುತ್ತಾರೆ ಎಂದು ಆರೋಪಿಸಿದರು. “ಬಾಜ್ವಾ ಬಿಜೆಪಿ ಸೇರುವುದು ಬಹುತೇಕ ಖಚಿತ. ಈಗಾಗಲೇ ಬಿಜೆಪಿ ಜೊತೆ ಮುಂಗಡ ಬುಕಿಂಗ್ ಮಾಡಿಕೊಂಡಿದ್ದಾರೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಹಾಗೆಯೇ, “ಬಾಜ್ವಾ ಕೆಲವು ದಿನಗಳ ಹಿಂದೆ ಬೆಂಗಳೂರಿನಲ್ಲಿ ಏನು ಮಾಡುತ್ತಿದ್ದರು? ಯಾವ ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗಿದ್ದರು? ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪ್ರಶ್ನಿಸಬೇಕು” ಎಂದು ಅರೋರಾ ತಿಳಿಸಿದರು.
