ಮುಖ್ಯಮಂತ್ರಿಯಾಗಿ 7ನೇ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ ಅವರು ವಸತಿ ಹಾಗೂ ಕಾರ್ಮಿಕ ಇಲಾಖೆಗೆ ಹಲವು ಯೋಜನೆಗಳನ್ನು ಘೋಷಿಸಿದ್ದಾರೆ.
ಮಾರ್ಚ್ 2023ಕ್ಕೆ ಬಾಕಿ ಉಳಿದಿರುವ 12 ಲಕ್ಷ ಮನೆಗಳನ್ನು ನಿರ್ಮಿಸುವ ಗುರಿಯನ್ನು ಪೂರ್ಣಗೊಳಿಸಬೇಕಾದರೆ 17,815 ಕೋಟಿ ರೂ.ಗಳ ಅಗತ್ಯವಿರುತ್ತದೆ. ರಾಜ್ಯದಲ್ಲಿ ನಿರ್ಮಾಣ ಹಂತದಲ್ಲಿ ಮೂರು ಲಕ್ಷ ಮನೆಗಳಿದ್ದು, ಪ್ರಸಕ್ತ ವರ್ಷದಲ್ಲಿ ಪೂರ್ಣಗೊಳಿಸಿ ಫಲಾನುಭವಿಗಳಿಗೆ ಹಸ್ತಾಂತರಿಸಲು ಕ್ರಮವಹಿಸಲಾಗುವುದು. ಇದಕ್ಕಾಗಿ 2,450 ಕೋಟಿ ರೂ.ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಜೆಟ್ 23-24 : ಇಂಧನ, ಆರೋಗ್ಯ ಕ್ಷೇತ್ರಗಳಿಗೆ ನೀಡಿರುವ ಅನುದಾನ ಮತ್ತು ಕೊಡುಗೆಗಳು
ಕಾರ್ಮಿಕ ಇಲಾಖೆಗೆ ಹಲವು ಉತ್ತಮ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಸ್ವಿಗ್ಗಿ, ಜೊಮಾಟೋ, ಅಮೆಜಾನ್ ಮುಂತಾದ ಇ-ಕಾಮರ್ಸ್ ಸಂಸ್ಥೆಗಳಲ್ಲಿ ಪೂರ್ಣಕಾಲಿಕ/ಅರೆಕಾಲಿಕ ನೌಕರರಾಗಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಎರಡು ಲಕ್ಷ ರೂ.ಗಳ ಜೀವವಿಮಾ ಸೌಲಭ್ಯ ಹಾಗೂ ಎರಡು ಲಕ್ಷ ರೂ.ಗಳ ಅಪಘಾತ ವಿಮಾ ಸೌಲಭ್ಯ ಸೇರಿದಂತೆ ಒಟ್ಟು ನಾಲ್ಕು ಲಕ್ಷ ರೂ.ಗಳ ವಿಮಾ ಸೌಲಭ್ಯ ಕಲ್ಪಿಸಲಾಗುವುದು ಎಂದು ಹೇಳಿದ್ದಾರೆ.
ಕಾರ್ಮಿಕ ಇಲಾಖೆಗೆ ಘೋಷಿಸಿರುವ ಇತರ ಯೋಜನೆಗಳು
- ಆರು ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ 13 ಕೋಟಿ ರೂ. ವೆಚ್ಚದಲ್ಲಿ ಒಟ್ಟು 35 ಬೆಡ್‌ಗಳ ಸಾಮರ್ಥ್ಯದ ಐ.ಸಿ.ಯು/ಎಂ.ಐ.ಸಿ.ಯು
- ಐದು ಕೋಟಿ ರೂ. ವೆಚ್ಚದಲ್ಲಿ ಆರು ಆಸ್ಪತ್ರೆಗಳಲ್ಲಿ 25 ಡಯಾಲಿಸಿಸ್ ಘಟಕಗಳು ಮತ್ತು 24 ಕೋಟಿ ರೂ. ವೆಚ್ಚದಲ್ಲಿ ಎರಡು ಆಸ್ಪತ್ರೆಗಳಲ್ಲಿ ಹೊಸ ಲೆವೆಲ್-2 ಟ್ರಾಮಾ ಕೇರ್ ಸೆಂಟರ್‌ಗಳ ನಿರ್ಮಾಣ
- ಎಂಟು ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಆಸ್ಪತ್ರೆಗಳಲ್ಲಿ ಮಾಡ್ಯುಲಾರ್ ಓ.ಟಿ.ಗಳು ಮತ್ತು 35 ಕೋಟಿ ರೂ. ವೆಚ್ಚದಲ್ಲಿ ರೋಗ ಪತ್ತೆ ಹಚ್ಚುವ ಕೇಂದ್ರಗಳ ಉನ್ನತೀಕರಣ ಸೇರಿದಂತೆ ಒಟ್ಟು 85 ಕೋಟಿ ರೂ. ವೆಚ್ಚದಲ್ಲಿ ಸಮಗ್ರ ಅಭಿವೃದ್ಧಿ
- ಮೂರು ಕೋಟಿ ರೂ. ವೆಚ್ಚದಲ್ಲಿ ರಾಜ್ಯದಲ್ಲಿನ ಎಲ್ಲ ಕಾರ್ಮಿಕ ರಾಜ್ಯ ವಿಮಾ ಆಸ್ಪತ್ರೆಗಳಲ್ಲಿ ಆಯುರ್ವೇದ, ಹೋಮಿಯೋಪಥಿ ಮತ್ತು ಯೋಗ ಕೇಂದ್ರಗಳು ಒಳಗೊಂಡ ಆಯುಷ್ ವಿಭಾಗ ಸ್ಥಾಪನೆ