ಸರ್ಕಾರಿ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 4% ಮೀಸಲಾತಿ ನೀಡುವ ಮಸೂದೆಯು ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ. ಮಸೂದೆಯ ವಿರುದ್ಧ ವಿರೋಧ ಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿದ್ದು, ಮಸೂದೆಯ ಪ್ರತಿಯನ್ನು ಹರಿದು ಸ್ಪೀಕರ್ ಯು.ಟಿ ಖಾದರ್ ಅವರ ಪೀಠದೆಡೆಗೆ ಎಸೆದಿದೆ.
ಹನಿಟ್ರ್ಯಾಪ್ ಹಗರಣದ ಕುರಿತು ವಿಧಾನಸಭೆಯಲ್ಲಿ ಬಿಜೆಪಿ ಗದ್ದಲ ಸೃಷ್ಟಿಸಿತ್ತು. ಗದ್ದಲದ ನಡುವೆಯೂ ಮಸೂದೆಯನ್ನು ಮಂಡಿಸಲಾಗಿದ್ದು, ಆಡಳಿತ ಪಕ್ಷದ ಶಾಸಕರು ಮಸೂದೆಗೆ ಸಮ್ಮತಿ ಸೂಚಿಸಿದ್ದಾರೆ. ಮಸೂದೆ ಅಂಗೀಕಾರಗೊಂಡಿದೆ. ಮಸೂದೆಯನ್ನು ‘ಅಸಂವಿಧಾನಿಕ’ ಎಂದು ಕರೆದಿರುವ ಬಿಜೆಪಿ, ಅದನ್ನು ಕಾನೂನಾತ್ಮಕವಾಗಿ ಪ್ರಶ್ನಿಸುವುದಾಗಿ ಸವಾಲು ಹಾಕಿದೆ.
ಬಿಜೆಪಿ ನಾಯಕರು ಸದನದ ಬಾವಿಗೆ ನುಗ್ಗಿ ಆಡಳಿತಾರೂಢ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಬಿಜೆಪಿಗರು ಸ್ಪೀಕರ್ ಆಸನದ ಮೇಲೆ ಹತ್ತಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಮಸೂದೆಯ ಪ್ರತಿಯನ್ನು ಹರಿದು ಸ್ಪೀಕರ್ ಮೇಲೆ ಎಸೆದಿರುವ ಘಟನೆ ನಡೆದಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಬಿಜೆಪಿ ಶಾಸಕ ಭರತ್ ಶೆಟ್ಟಿ ಮಾತನಾಡಿ, “ಹನಿ ಟ್ರ್ಯಾಪ್ ಹಗರಣದ ಬಗ್ಗೆ ಚರ್ಚಿಸುವ ಬದಲು, ಮುಖ್ಯಮಂತ್ರಿ ನಾಲ್ಕು ಶೇಕಡಾ ಮುಸ್ಲಿಂ ಮಸೂದೆಯನ್ನು ಮಂಡಿಸುವಲ್ಲಿ ನಿರತರಾಗಿದ್ದಾರೆ. ಆದ್ದರಿಂದ ನಾವು ಪ್ರತಿಭಟಿಸಿದೆವು. ಆಡಳಿತರೂಢ ಶಾಸಕರು ಕೂಡಾ ಪುಸ್ತಕಗಳನ್ನು ಮತ್ತು ಹರಿದ ಕಾಗದಗಳನ್ನು ಎಸೆದಿದ್ದಾರೆ; ನಾವು ಯಾರಿಗೂ ಹಾನಿ ಮಾಡಲಿಲ್ಲ.” ಎಂದು ಹೇಳಿದ್ದಾರೆ.
ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಮತ್ತು ಆರ್ಥಿಕ ಅವಕಾಶಗಳನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವು ಮೀಸಲಾತಿಯನ್ನು ಸಮರ್ಥಿಸಿಕೊಂಡರೆ, ವಿರೋಧ ಪಕ್ಷ ಬಿಜೆಪಿಯು ಕಾಂಗ್ರೆಸ್ ಪಕ್ಷ ತುಷ್ಟೀಕರಣ ರಾಜಕೀಯದಲ್ಲಿ ತೊಡಗಿದೆ ಎಂದು ಆರೋಪಿಸಿದೆ.
ಮಸೂದೆಯ ನಿಬಂಧನೆಗಳ ಪ್ರಕಾರ, ಮುಸ್ಲಿಂ ಗುತ್ತಿಗೆದಾರರು ಸರ್ಕಾರಿ ಟೆಂಡರ್‌ಗಳಲ್ಲಿ ಶೇಕಡಾ ನಾಲ್ಕು ಕೋಟಾವನ್ನು ಪಡೆಯುತ್ತಾರೆ. ಈ ಮಸೂದೆಯು ಮುಸ್ಲಿಂ ಸಮುದಾಯ ಕೂಡಾ ಸಾರ್ವಜನಿಕ ಗುತ್ತಿಗೆಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ಸ್ಪರ್ಧಿಸಲು ಅನುವು ಮಾಡಿಕೊಡುತ್ತದೆ. ಈ ಕ್ರಮವು ಸಮಗ್ರ ಅಭಿವೃದ್ಧಿ ಮತ್ತು ಸಕಾರಾತ್ಮಕ ಕ್ರಮದ ಸರ್ಕಾರದ ಬದ್ಧತೆಗೆ ಹೊಂದಿಕೆಯಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಿ ಹೇಳಿದ್ದಾರೆ.
ಸಹಕಾರಿ ಸಚಿವ ಕೆ.ಎನ್. ರಾಜಣ್ಣ ಅವರು ಹನಿ ಟ್ರ್ಯಾಪಿಂಗ್ ಬಗ್ಗೆ ಬಹಿರಂಗಪಡಿಸಿದ ನಂತರ ಶುಕ್ರವಾರ ಕರ್ನಾಟಕ ವಿಧಾನಸಭಾ ಕಲಾಪದಲ್ಲಿ ತೀವ್ರ ಗೊಂದಲ ಏರ್ಪಟ್ಟಿತ್ತು. ಹಗರಣವು ಇದೀಗ ಪ್ರಮುಖ ರಾಜಕೀಯ ಚರ್ಚೆಯಾಗಿ ಪರಿಣಮಿಸಿದ್ದು, ಬಿಜೆಪಿ ನಾಯಕರು ಸಿಡಿಗಳನ್ನು ಹಿಡಿದುಕೊಂಡು ಅವುಗಳನ್ನು ಬ್ಲ್ಯಾಕ್‌ಮೇಲ್ ಮತ್ತು ಬಲೆಗೆ ಬೀಳಿಸುವ ಸಾಧನಗಳೆಂದು ಸೂಚಿಸಿದ್ದಾರೆ.