ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯ ಗುತ್ತಿಗೆದಾರ ಸಂಘ ಮಾಡಿದ್ದ 40% ಕಮಿಷನ್ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆಗೆ ಎಸ್ಐಟಿ ರಚಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.
ವಿಧಾನಸೌಧದಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಹೆಚ್. ಕೆ. ಪಾಟೀಲ್ ಈ ಬಗ್ಗೆ ಸುದ್ದಿಗಾರರಿಗೆ ಮಾಹಿತಿ ನೀಡಿದರು.
“ಗುತ್ತಿಗೆದಾರರ ಸಂಘದ ಆರೋಪ ಬಗ್ಗೆ ನಾಗಮೋಹನ್ ದಾಸ್ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿತ್ತು. ನಾಗಮೋಹನ್ ದಾಸ್ ಅವರು ವಿಚಾರಣಾ ವರದಿ ಸಲ್ಲಿಸಿದ ಬಳಿಕ ಸಂಪುಟದಲ್ಲಿ ಮಂಡಿಸಲಾಗಿದೆ. ಕೆಲವು ವಿವರಗಳನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗಿದೆ. ಇನ್ನಷ್ಟು ವಿವರವಾಗಿ ಚರ್ಚೆಯ ಅಗತ್ಯವಿದೆ” ಎಂದು ತಿಳಿಸಿದರು.
“3 ಲಕ್ಷ ಕಾಮಗಾರಿಗಳ ಪೈಕಿ 1,729 ಕಾಮಗಾರಿಗಳ ಬಗ್ಗೆ ಆಪಾದನೆಗಳು ಕೇಳಿಬಂದಿವೆ. ದೂರುಗಳ ಮಾಹಿತಿ ಕಲೆ ಹಾಕಿ ವರದಿಯನ್ನು ನೀಡಲಾಗಿದೆ. ಯೋಜನೆ, ಹಣ ಬಿಡುಗಡೆ, ಎಲ್ಒಸಿ ಬಿಡುಗಡೆ ಸರಿಯಾದ ರೀತಿಯಲ್ಲಿ ಇಲ್ಲ. ಯಾವ ಪ್ರಮಾಣದಲ್ಲಿ ವ್ಯತ್ಯಾಸಗಳಾಗಿವೆ ಎಂಬುದನ್ನು ಚರ್ಚೆ ನಡೆಸಿದ್ದೇವೆ. ಅನುದಾನಕ್ಕಿಂತ ಹೆಚ್ಚು ಬಿಲ್ ಆಗಿದೆ, ಕಾಮಗಾರಿಗಳ ಬಗ್ಗೆ ಸಂಶಯಗಳಿವೆ. ಕೆಲವು ಕಡೆ ಟೆಂಡರ್ ಹಂಚಿಕೆ ವೇಳೆಯೇ ಮಧ್ಯವರ್ತಿಗಳ ಕೆಲಸ ಆಗಿದೆ. ಗಂಭೀರವಾದ ವರದಿಯಾದ ಹಿನ್ನೆಲೆಯಲ್ಲಿ ಎಸ್ಐಟಿ ರಚನೆ ಮಾಡಲು ತೀರ್ಮಾನಿಸಿದ್ದೇವೆ. ಎರಡು ತಿಂಗಳಲ್ಲಿ ಕ್ರಮ ಕೈಗೊಳ್ಳಲು ಎಸ್ಐಟಿಗೆ ಸೂಚಿಸಲಾಗಿದೆ” ಎಂದರು.
ನೈಸ್ ರಸ್ತೆ ಯೋಜನೆ ಬಗ್ಗೆ ಪ್ರಸ್ತಾಪ
ನೈಸ್ ರಸ್ತೆ ಯೋಜನೆ ಬಗ್ಗೆಯೂ ಪ್ರಸ್ತಾಪವಾಗಿದೆ. ನೈಸ್ ರಸ್ತೆ ವಿಚಾರಕ್ಕೆ ಸುಪ್ರೀಂ ಮತ್ತು ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಿದೆ. ನೈಸ್ ರಸ್ತೆ ನಿರ್ಮಾಣವಾಗಬೇಕಾ? ಬೇಡವೇ ಎಂಬುದು ಒಂದೇ ಸಭೆಯಲ್ಲಿ ಚರ್ಚಿಸಲು ಸಾಧ್ಯವಿಲ್ಲ. ಕಾನೂನಾತ್ಮಕ ಅಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ” ಎಂದು ಹೇಳಿದರು.
“ನೈಸ್ ರಸ್ತೆ ಬಗ್ಗೆ ಸಂಪುಟ ಉಪ ಸಮಿತಿ ನೇಮಕ ಮಾಡಿ ಮುಂದಿನ ತೀರ್ಮಾನ ಮಾಡುತ್ತೇವೆ. 1699 ಎಕರೆಯನ್ನು ನೈಸ್ ಸಂಸ್ಥೆಯವರು ಬೇರೆಯವರಿಗೆ ಶುದ್ಧ ಕ್ರಯ ಮಾಡಿಕೊಡಲು ಮುಂದಾಗಿದ್ದಾರೆ. ಈ ಬಗ್ಗೆಯೂ ಕ್ಯಾಬಿನೆಟ್ ಸಬ್ ಕಮಿಟಿ ತೀರ್ಮಾನ ಕೈಗೊಳ್ಳುತ್ತೆ. ಕ್ಯಾಬಿನೆಟ್ ಸಬ್ ಕಮಿಟಿ ರಚನೆಯನ್ನು ಸಿಎಂ ಸಿದ್ದರಾಮಯ್ಯ ಮಾಡಲಿದ್ದಾರೆ” ಎಂದು ತಿಳಿಸಿದರು.
ಸಂಪುಟದಲ್ಲಿ ಚರ್ಚೆಯಾದ ಸಂಗತಿಗಳು
ಬೆಂಗಳೂರು ಮೈಸೂರು ಮೂಲಸೌಕರ್ಯ ಕಾರಿಡಾರ್ ಯೋಜನೆ (BMICP)ಯ ಅನುಷ್ಠಾನದ ಬಗ್ಗೆ ಕ್ಯಾಬಿನೆಟ್ ಸಬ್ ಕಮಿಟಿ ರಚಸಲು ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಮತ್ತು ಸದಸ್ಯರಿಗೆ 7ನೇ ಕೇಂದ್ರ ವೇತನ ಆಯೋಗದ ಶಿಫಾರಸ್ಸುಗಳನ್ನು 2019ರ ಸೆಪ್ಟೆಂಬರ್ 9ರ ಬದಲಾಗಿ 2016ರ ಜನವರಿ 1 ರಿಂದ ಅನ್ವಯಿಸಲು ಕರ್ನಾಟಕ ಲೋಕಸೇವಾ ಆಯೋಗ (ಸೇವಾ ಷರತ್ತುಗಳು) ವಿನಿಯಮಗಳು, 19576 ತಿದ್ದುಪಡಿ ಮಾಡುವ ಬಗ್ಗೆ ಅನುಮೋದನೆ ದೊರೆತಿದೆ.
ಬೆಂಗಳೂರು ನಗರ ಜಿಲ್ಲೆ, ಉತ್ತರ (ಅಪರ) ತಾಲ್ಲೂಕು, ಹೊಸಹಳ್ಳಿ ಗ್ರಾಮದ ಸರ್ವೆ ನಂಬರ್ 21ರಲ್ಲಿ ಕೊಡವ ಸಮಾಜ, ಬೆಂಗಳೂರು ಇವರಿಗೆ ಮಂಜೂರು ಮಾಡಿರುವ 7 ಎಕರೆ ಜಮೀನಿಗೆ ವಿಧಿಸಿರುವ ಮೌಲ್ಯವನ್ನು ಪರಿಷ್ಕರಿಸಿ ಅನುಮೋದಿಸಲಾಗಿದೆ .
ಸರ್ಕಾರದ ವಿವಿಧ ಇಲಾಖೆಗಳಲ್ಲಿ/ ಸಕ್ಷಮ ಪ್ರಾಧಿಕಾರಗಳಲ್ಲಿ ಬಾಕಿ ಇರುವ ಲೋಕಾಯುಕ್ತ ಅಭಿಯೋಜನಾ ಮಂಜೂರಾತಿ ಪ್ರಕರಣಗಳ ಬಗ್ಗೆ ಅನುಮೋದನೆ ನೀಡಲಾಗಿದೆ.
ಲೋಕೋಪಯೋಗಿ ಇಲಾಖೆಯ ಚಿಕ್ಕಬಳ್ಳಾಪುರ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಎಂ. ಮುರಳೀಧರ್. ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಪಿ.ವಿ. ಶ್ರೀನಿವಾಸುಲು, ಗ್ರೂಪ್-ಡಿ ಇವರ ವಿರುದ್ಧ ಉಪ ಲೋಕಾಯುಕ್ತರು ಮಾಡಿರುವ ದಂಡನಾ ಶಿಫಾರಸನ್ನು ತಿರಸ್ಕರಿಸಿ ಕ್ಯಾಬಿನೆಟ್ ಅನುಮೋದನೆ ನೀಡಿದೆ.
ಗಿಗ್ ಕಾರ್ಮಿಕರ ವಿಧೇಯಕ ಮಂಡನೆಗೆ ಕ್ಯಾಬಿನೆಟ್ ತೀರ್ಮಾನ ಕೈಗೊಂಡಿದ್ದು, ಸುಗ್ರೀವಾಜ್ಞೆ ಮೂಲಕ ಬಿಲ್ ಜಾರಿಗೆ ತರಲಿದೆ.
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದ ಸರ್ವೆ ನಂಬರ್512/1ರಲ್ಲಿ 0.26 ಎಕರೆ (26 ಸೆಂಟ್) ಜಮೀನನ್ನು ಬಿಲ್ಲವ ಸಮಾಜ ಸೇವಾ ಸಂಘಕ್ಕೆ ಮಂಜೂರು ಮಾಡಲು ಕ್ಯಾಬಿನೆಟ್ ತೀರ್ಮಾನಿಸಿದೆ.