- ಕಾಂಗ್ರೆಸ್ ಅಧಿಕಾರಕ್ಕೆ ಬರುವ ಬಗ್ಗೆ ರಕ್ತದಲ್ಲಿ ಪತ್ರ ಬರೆಯುವುದಾಗಿ ಹೇಳಿಕೆ
- ರಣದೀಪ್ ಸುರ್ಜೇವಾಲ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ 40 ಪರ್ಸೆಂಟ್ ಬಿಜೆಪಿ ಸರ್ಕಾರವು ಮುಂಬರುವ ಚುನಾವಣೆಯಲ್ಲಿ ಕೇವಲ 40 ಸೀಟ್‌ಗಳನ್ನು ಪಡೆಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿ, `ಬಿಜೆಪಿ ಅಧಿಕಾರಕ್ಕೆ ಬರುತ್ತೆ ಅದನ್ನು ನಾನು ರಕ್ತದಲ್ಲಿ ಬರೆದುಕೊಡ್ತೀನಿ’ ಎಂದು ಹೇಳಿದ್ದ ಬಿ.ಎಸ್ ಯಡಿಯೂರಪ್ಪ ಅವರ ಮಾತಿಗೆ ಪ್ರತಿಕ್ರಿಯಿಸಿ, ನಾನು ನಿಮಗೆ ರಕ್ತದಲ್ಲಿ ಬರೆದುಕೊಡ್ತೀನಿ. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರ ಮಾಡುತ್ತೆ. ಬಿಜೆಪಿ 40 ಸೀಟಿಗೆ ನಿಲ್ಲುತ್ತದೆ. ನಾವು 150 ಸೀಟು ಗೆದ್ದೇ ಗೆಲ್ಲುತ್ತೇವೆ” ಎಂದು ಶಪಥ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? : ಹಳೇ ಮೈಸೂರು ಭಾಗದಲ್ಲಿ “ನಾಥ ಪರಂಪರೆ”ಯ ಅಸ್ತ್ರ ಬಿಟ್ಟ ಬಿಜೆಪಿ; ಮಂಡ್ಯದಲ್ಲಿ ಯೋಗಿ ಮತ ಭೇಟೆ
“ಡಬಲ್ ಎಂಜಿನ್ ಬಿಜೆಪಿ ಸರ್ಕಾರದ ಮೀಸಲಾತಿಯ ಮೋಸದಾಟ ಬಯಲಾಗಿದ್ದು, ವಿಶ್ವಾಸ ದ್ರೋಹಿ ಪಾರ್ಟಿ ಅನ್ನೋದು ಸುಪ್ರೀಂ ಕೋರ್ಟಿನಲ್ಲಿ ತಿಳಿದಿದೆ. ಚುನಾವಣಾ ಸಮಯದಲ್ಲಿ ಜೇನುಗೂಡಿಗೆ ಕೈ ಹಾಕಿ ಮೋಸ ಮಾಡಿದ್ದಾರೆ. ಮೃತ್ಯುಂಜಯ ಸ್ವಾಮೀಜಿಗಳು ಹೇಳಿದಂತೆ ತಲೆ ಮೇಲೆ ತುಪ್ಪ ಇಟ್ಟಿದ್ದಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಅಮಿತ್ ಶಾ ಅವರೇ ನಿಮಗೆ ಬದ್ಧತೆ ಇದೆಯೇ? ಮೋಸ ಮಾಡಿಕೊಂಡು ಸುಳ್ಳು ಹೇಳಿಕೊಂಡು ಕಾಲ ಕಳೆಯುತ್ತಿದ್ದೀರಾ? ಲಿಂಗಾಯತರು, ಒಕ್ಕಲಿಗರು ಭಿಕ್ಷುಕರಾ? ನೀವು ಲಿಂಗಾಯತರು, ಒಕ್ಕಲಿಗರಿಗೆ ಕೊಟ್ಟಿರೋ 2 ಪರ್ಸೆಂಟ್ ವಿತ್ ಡ್ರಾ ಆಗಿದೆ. ಮೇ 13 ತಾರೀಖು ಬಿಜೆಪಿಯ ಶವ ಆಚರಣೆ ಆಗಲಿದೆ. ನಾವು ಸರ್ವರಿಗೂ ಸಮಪಾಲು ಸಮಬಾಳು ಅನ್ನೋದನ್ನ ಹೇಳಿದ್ದೇವೆ. ಹಾಗೆಯೇ ನಡೆದುಕೊಳುತ್ತೇವೆ” ಎಂದು ಹೇಳಿದರು.